ADVERTISEMENT

ಶೈಕ್ಷಣಿಕ ಸಿದ್ಧಾಂತಗಳ ಮರುಪರಿಶೀಲನೆ ಅಗತ್ಯವೆ?

ಆರ್.ಇಂದಿರಾ
Published 10 ಮೇ 2013, 19:59 IST
Last Updated 10 ಮೇ 2013, 19:59 IST

ಶೈಕ್ಷಣಿಕ ಸಾಧನೆಗೂ ವ್ಯಕ್ತಿಯ ಸಾಮಾಜಿಕ, ಆರ್ಥಿಕ ಹಿನ್ನೆಲೆಗೂ ನಡುವೆ ನಿಕಟ ಸಂಬಂಧವಿದೆ ಎನ್ನುವುದು ಶೈಕ್ಷಣಿಕ ಸಮಾಜಶಾಸ್ತ್ರದ ಜನಪ್ರಿಯ ಸಿದ್ಧಾಂತಗಳಲ್ಲಿ ಒಂದು. ಮಕ್ಕಳು ಶಾಲೆಗೆ ದಾಖಲಾದ ತಕ್ಷಣವೇ ಸಾಮಾಜಿಕ ಅಸಮಾನತೆಗಳು ಅವರ ಮೇಲೆ ತಮ್ಮ ಪ್ರಭಾವವನ್ನು ಬೀರಲಾರಂಭಿಸುತ್ತವೆ. ಏಕೆಂದರೆ ಅವರ ಸಾಧನೆಯನ್ನು ನಿರ್ಧರಿಸುವುದು ಕೌಟುಂಬಿಕ ಸ್ಥಿತಿಗತಿಗಳೇ ಹೊರತು ಶಾಲಾ ಪರಿಸರವಲ್ಲ ಎಂಬ ಭಾವನೆ ಅನೇಕ ಶಿಕ್ಷಣ ಸಿದ್ಧಾಂತಗಳಲ್ಲಿ ಮೂಡಿ ಬರುತ್ತದೆ.

ವಿವಿಧ ಸಾಮಾಜಿಕ ಗುಂಪುಗಳಿಂದ ಬಂದ ಮಕ್ಕಳಲ್ಲಿ ಯಾರು ಯಾವ ಬಗೆಯ ಶಿಕ್ಷಣಾವಕಾಶಗಳನ್ನು ಬಳಸಿಕೊಳ್ಳುತ್ತಾರೆ ಹಾಗೂ ಯಾರಿಗೆ ಯಾವ ಮಟ್ಟದ ಸಾಧನೆಗಳನ್ನು ಮಾಡಲು ಸಾಧ್ಯ ಅಥವಾ ಅಸಾಧ್ಯ ಎಂಬ ಅಂಶಗಳನ್ನು ಕುರಿತಂತೆ ಶೈಕ್ಷಣಿಕ ಸಮಾಜಶಾಸ್ತ್ರ ಕ್ಷೇತ್ರದಲ್ಲಿ ವಿಶ್ವದಾದ್ಯಂತ ನೂರಾರು ಸಂಶೋಧನೆಗಳು ನಡೆದಿವೆ, ಇಂದಿಗೂ ನಡೆಯುತ್ತಲೇ ಇವೆ.

ಇವುಗಳಲ್ಲಿ ಬಹುತೇಕ ಅಧ್ಯಯನಗಳು ಶೈಕ್ಷಣಿಕ ಆಕಾಂಕ್ಷೆಗಳು ಮತ್ತು ಸಾಧನೆಗಳಿಗೂ ವಿದ್ಯಾರ್ಥಿಗಳ ಸಾಮಾಜಿಕ,ಆರ್ಥಿಕ ಸ್ಥಾನಕ್ಕೂ ನಡುವೆ ಅಂತರ್‌ಸಂಬಂಧವಿದ್ದು, ಸ್ತರೀಕೃತವಾಗಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಉನ್ನತ ಅಥವಾ ಮಧ್ಯಮ ವರ್ಗಗಳಲ್ಲಿರುವವರೇ ಹೆಚ್ಚಾಗಿ ಶಿಕ್ಷಣ ವ್ಯವಸ್ಥೆಯಲ್ಲಿಯೂ ಮೇಲುಮೇಲಿನ ಸ್ತರಗಳಿಗೆ ಚಲಿಸುವ ಅರ್ಹತೆಗಳನ್ನು ಗಳಿಸಿಕೊಳ್ಳುವವರು ಎಂಬ ಸಂದೇಶವನ್ನು ನೀಡುತ್ತವೆ.


ಭಾರತೀಯ ಶಿಕ್ಷಣ ವ್ಯವಸ್ಥೆಗೆ ಈ ಸಿದ್ಧಾಂತಗಳನ್ನು ಅಳವಡಿಸಿದಾಗ ಶೈಕ್ಷಣಿಕ ಸಾಧನೆಗೂ ವಿದ್ಯಾರ್ಥಿಗಳ ಸಾಮಾಜಿಕ ಸಂದರ್ಭಗಳಿಗೂ ನಡುವೆ ಹತ್ತಿರದ ಸಂಬಂಧವಿದೆ ಎಂಬ ಭಾವನೆ ಸಹಜವಾಗಿಯೇ ಮೂಡುತ್ತದೆ. ಗ್ರಾಮೀಣ ವಾಸ್ತವ್ಯ, ಸರ್ಕಾರಿ ಶಾಲೆ, ಕಡಿಮೆ ಆದಾಯವನ್ನು ತರುವ ಉದ್ಯೋಗದಲ್ಲಿರುವ ಪೋಷಕರು, ಮಕ್ಕಳ ಶೈಕ್ಷಣಿಕ ಆಕಾಂಕ್ಷೆ ಮತ್ತು ಸಾಧನೆಗಳ ಮೇಲೆ ನಕಾರಾತ್ಮಕ ಪ್ರಭಾವವನ್ನು ಬೀರುವಂಥ ಅಂಶಗಳು ಎಂಬ ಅಭಿಪ್ರಾಯ  ಚಾಲ್ತಿಯಲ್ಲಿದೆ. ವಿದ್ಯಾರ್ಥಿಗಳು ತಳಹಂತಗಳಿಂದ ಮೇಲುಮೇಲಿನ ಹಂತಗಳಿಗೆ ಏರುವ ವಿಚಾರ ಬಂದಾಗ ಅವರ ಲಿಂಗವೂ `ತಳ್ಳುವ' ಅಥವಾ `ಹಿಂದಕ್ಕೆ ಸೆಳೆಯುವ' ಒಂದು ಪ್ರಮುಖ ಅಂಶವಾಗಿ ಹೊರಹೊಮ್ಮುತ್ತದೆ.

ಶಿಕ್ಷಣ ವ್ಯವಸ್ಥೆಗೂ ಈ ಮೇಲೆ ಉಲ್ಲೇಖಿತವಾಗಿರುವ ಅಂಶಗಳಿಗೂ ನಡುವೆ ಸಂಬಂಧವಿದೆ ಎನ್ನುವುದು ನಿಜ. ಆದರೆ ಶಿಕ್ಷಣಾವಕಾಶಗಳ ಲಭ್ಯತೆ, ಹಂಚಿಕೆ, ಬಳಕೆ, ಶೈಕ್ಷಣಿಕ ಆಶೋತ್ತರಗಳು ಮತ್ತು ಸಾಧನೆಗಳ ಸ್ವರೂಪದಲ್ಲಿ ಕಳೆದ ಎರಡು ಮೂರು ದಶಕಗಳಲ್ಲಿ ಗಮನಾರ್ಹವಾದ ಬದಲಾವಣೆಗಳು ಸಂಭವಿಸಿವೆ. ಇತ್ತೀಚಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷಾ ಫಲಿತಾಂಶಗಳು ಕೆಲ ಸ್ಥಾಪಿತ ಶೈಕ್ಷಣಿಕ ಸಿದ್ಧಾಂತಗಳನ್ನು ಪುನರ್‌ವಿಮರ್ಶೆಗೆ ಒಳಪಡಿಸಿ ಶಿಕ್ಷಣ ಮತ್ತು ಸಾಮಾಜಿಕ ಸ್ತರವಿನ್ಯಾಸ ವ್ಯವಸ್ಥೆಗಳ ನಡುವಣ ಸಂಬಂಧವನ್ನು ಕುರಿತಂತೆ ಹೊಸ ಪ್ರಶ್ನೆಗಳನ್ನು ಎತ್ತುವ ಅಗತ್ಯವನ್ನು ನಮ್ಮ ಮುಂದೆ ತೆರೆದಿಟ್ಟಿವೆ.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳೆರಡರಲ್ಲೂ  ನಗರದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಮುಂದಿದ್ದಾರೆ ಎನ್ನುವುದು ಈ ಬಾರಿಯ ಫಲಿತಾಂಶಗಳಲ್ಲಿ ಕಂಡು ಬರುತ್ತಿರುವ ಒಂದು ಪ್ರವೃತ್ತಿ. ಈ ಅಂತರ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ  ಶೇ4.42ರಷ್ಟಿದ್ದರೆ, ಪಿಯುಸಿ ಫಲಿತಾಂಶದಲ್ಲಿ ಶೇ 2.42ರಷ್ಟಿದೆ. ಈ ವ್ಯತ್ಯಾಸ ಹೆಚ್ಚೇನೂ ಇಲ್ಲ ಎನಿಸಿದರೂ ನಮ್ಮಲ್ಲಿ ಕಂಡು ಬರುವ ನಗರ ಕೇಂದ್ರಿತ ಶೈಕ್ಷಣಿಕ ಅಭಿವೃದ್ಧಿ ಪ್ರಯತ್ನಗಳು ಏಕೆ ನಗರ ಕೇಂದ್ರಿತ ಫಲಿತಾಂಶಗಳನ್ನು ತರುತ್ತಿಲ್ಲ ಎಂಬ ಪ್ರಶ್ನೆಯನ್ನು ಮುಂದಿಡುತ್ತದೆ.

ಗ್ರಾಮೀಣ ಪ್ರದೇಶದ ಶೈಕ್ಷಣಿಕ ಹಿಂದುಳಿದಿರುವಿಕೆಯ ಬಗ್ಗೆ ಅನೇಕ ಸಿದ್ಧಾಂತಗಳು ಬಹುಕಾಲದಿಂದ ಜಾರಿಯಲ್ಲಿವೆ. ಗ್ರಾಮೀಣ ಶಾಲೆಗಳ ಶಿಕ್ಷಣದ ಗುಣಮಟ್ಟ ನಗರದ  ಶಾಲೆಗಳ ಗುಣಮಟ್ಟಕ್ಕೆ ಹೋಲಿಸಿದರೆ, ಕೆಳ ಮಟ್ಟದಲ್ಲಿದೆ ಎಂಬ ವಾದ ಭಾರತಕ್ಕಷ್ಟೇ ಸೀಮಿತವಾಗಿರದೆ, ಜಾಗತಿಕ ವೇದಿಕೆಗಳಲ್ಲೂ ಚರ್ಚೆಗೆ ಗ್ರಾಸವಾಗಿದೆ.

ನಗರಗಳ  ಶಾಲೆಗಳಲ್ಲಿ ಶೈಕ್ಷಣಿಕ ಸಂಪನ್ಮೂಲಗಳು ಹೇರಳವಾಗಿರುತ್ತವೆ. ಹೊಸಹೊಸ ಪ್ರಯೋಗಗಳಿಗೆ ಇಲ್ಲಿ ಅವಕಾಶವಿದೆ. ಸ್ಪರ್ಧಾತ್ಮಕ ಮನೋಭಾವ ಇಲ್ಲಿ ಅಧಿಕವಾಗಿರುವುದರಿಂದ ವಿದ್ಯಾರ್ಥಿಗಳು ಸಾಧನೆಯತ್ತ ಒಲವನ್ನು ತೋರಿಸುತ್ತಾರೆ, ಜೊತೆಗೆ ಶೈಕ್ಷಣಿಕ ಸಾಧನೆಗೆ ಪೂರಕವಾಗಿರುವ ಪರಿಕರಗಳೆಲ್ಲಾ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತವೆ ಎಂಬುದು ಜನಮಾನಸದಲ್ಲಿ  ಬೇರೂರಿರುವ ಭಾವನೆ.

ಆದರೆ ಇಂಥ ಸಾಮಾನ್ಯೀಕರಣಗಳಲ್ಲಿ ತೊಡಗುವ ಮುನ್ನ ನಗರದಲ್ಲೇ ಇರುವ ವಿವಿಧ ಬಗೆಯ ಶಾಲೆಗಳ ಫಲಿತಾಂಶಗಳ ತುಲನಾತ್ಮಕ ಅಧ್ಯಯನದ ಅಗತ್ಯವಿದೆ. ಜೊತೆಗೆ ನಗರದ ಶಾಲೆಗಳಲ್ಲೇ ಅಧ್ಯಯನ ಮಾಡುತ್ತಿರುವ ವಿವಿಧ ಸಾಮಾಜಿಕ, ಆರ್ಥಿಕ ಗುಂಪುಗಳ ವಿದ್ಯಾರ್ಥಿಗಳ ಫಲಿತಾಂಶಗಳನ್ನು ಕುರಿತ ಮಾಹಿತಿಯನ್ನೂ ಈ ಅಧ್ಯಯನಕ್ಕೆ ಒಳಪಡಿಸಬೇಕು. ಆಗಲೇ ನಮಗೆ  ನೈಜ ಸ್ಥಿತಿ ತಿಳಿಯುವುದು.

ನಗರ ಶಾಲೆಗಳಲ್ಲಿ ಅಧ್ಯಯನ ಮಾಡಿದವರು ಹೆಚ್ಚಿನ ಸಾಮರ್ಥ್ಯ ಪಡೆದಿರುತ್ತಾರೆ ಮತ್ತು ಉನ್ನತ ಉದ್ಯೋಗಗಳನ್ನು ಗಳಿಸಲು ಅವಶ್ಯಅರ್ಹತೆಯನ್ನು ಸಾಧಿಸಿಕೊಳ್ಳುತ್ತಾರೆ ಎಂಬುದು ಮತ್ತೊಂದು ಜನಪ್ರಿಯ ಶೈಕ್ಷಣಿಕ ಸಿದ್ಧಾಂತ. ಆದರೆ ಅನೇಕ ದೇಶಗಳಲ್ಲಿ ನಗರ ಶಾಲೆಗಳನ್ನು ನಾಚಿಸುವಂಥ ರೀತಿಯಲ್ಲಿ ಗ್ರಾಮೀಣ ಶಾಲೆಗಳು ಉತ್ಕೃಷ್ಟ ಫಲಿತಾಂಶಗಳನ್ನು ಪಡೆಯುತ್ತಿರುವುದು ಸಮಕಾಲೀನ ಸಂದರ್ಭಗಳಲ್ಲಿ ಬೆಳಕಿಗೆ ಬರುತ್ತಿದೆ.

ಆಫ್ರಿಕಾದ ನಮೀಬಿಯಾ ದೇಶದಲ್ಲಿ ಇತ್ತೀಚೆಗಷ್ಟೇ ಕೈಗೊಂಡ ಸಮೀಕ್ಷೆಯ ಪ್ರಕಾರ, ಅನೇಕ ನಗರ ಶಾಲೆಗಳ ಶೈಕ್ಷಣಿಕ ಸಾಧನೆ ಇಳಿಮುಖವಾಗುತ್ತಿದ್ದರೆ, ಗ್ರಾಮೀಣ ಶಾಲೆಗಳ ಫಲಿತಾಂಶಗಳಲ್ಲಿ ಹೆಚ್ಚಳ ಕಂಡು ಬರುತ್ತಿದೆ. ನಗರಗಳಲ್ಲಿರುವ ಸೌಕರ್ಯಗಳು ಗ್ರಾಮಗಳಲ್ಲಿ ಇಲ್ಲದಿದ್ದರೂ ಗ್ರಾಮೀಣ ಜೀವನದ ಕುರುಹುಗಳಾದ ನಿಕಟ ಕೌಟುಂಬಿಕ ಸಂಬಂಧಗಳು, ಶಿಕ್ಷಕರು -ವಿದ್ಯಾರ್ಥಿಗಳ ನಡುವಿನ ಬಾಂಧವ್ಯ, ಶಿಸ್ತಿಗೆ ನೀಡುವ ಪ್ರಾಶಸ್ತ್ಯ, ಅಧ್ಯಾಪಕರು- ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಹಾಗೂ ನಗರಗಳಲ್ಲಿರುವಂಥ ಅನೇಕ ಆಕರ್ಷಣೆಗಳು ಗ್ರಾಮಗಳಲ್ಲಿ ಇಲ್ಲದಿರುವುದು ಗ್ರಾಮ ಶಾಲೆಗಳ ಶಿಕ್ಷಣಮಟ್ಟವನ್ನು ಹೆಚ್ಚಿಸುತ್ತಿವೆ ಎಂದು ಈ ಸಮೀಕ್ಷೆ ತಿಳಿಸಿದೆ.

ಅನೇಕ ಗ್ರಾಮೀಣ ಶಾಲೆಗಳಲ್ಲಿ ಕಂಡು ಬರುವ ಅಧ್ಯಾಪಕರ ಜೀವನೋತ್ಸಾಹ, ಗ್ರಾಮೀಣ ಬದುಕಿನ ಸಾಂಸ್ಕೃತಿಕ ಸಮೃದ್ಧಿ ಮತ್ತು ತಮ್ಮ ಪೋಷಕರು ಪಡೆಯಲಾಗದ ಸಾಮಾಜಿಕ ಸ್ಥಾನವನ್ನು ತಾವು ಗಳಿಸಲೇಬೇಕೆಂದು ಅದನ್ನು ಸಾಧಿಸಲು ಶ್ರಮಿಸುತ್ತಿರುವ ಮಕ್ಕಳು ಗ್ರಾಮೀಣ ಶಾಲೆಗಳಲ್ಲಿ ಫಲಿತಾಂಶದ ಗುಣಮಟ್ಟ ಹೆಚ್ಚಲು ಕಾರಣ ಎಂದು ಹೇಳಲಾಗುತ್ತಿದೆ. ಈ ಬಗ್ಗೆ  ಶಿಕ್ಷಣ ತಜ್ಞರು ಹೊಸ ಆಲೋಚನೆಗಳಲ್ಲಿ ತೊಡಗಬೇಕು ಎಂದು ಸಮೀಕ್ಷೆ ತಿಳಿಸಿದೆ. ಗ್ರಾಮೀಣ ಶಾಲಾ ಸನ್ನಿವೇಶದಲ್ಲಿ ಕಂಡು ಬರುವ ಶೈಕ್ಷಣಿಕ ಸಾಧನೆಗಳ ಪ್ರೇರಕಾಂಶಗಳು ಯಾವುವು ಎಂಬುದನ್ನು ಗುರುತಿಸುವಂಥ ಅಧ್ಯಯನಗಳ ಅಗತ್ಯ ಇಂದು ಹೆಚ್ಚಾಗಿದೆ.

ಈ ಬಾರಿಯ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶಗಳಲ್ಲಿ ಚರ್ಚಿಸಬೇಕಾದ ಮತ್ತೊಂದು ವಿಷಯ ಶೂನ್ಯ ಫಲಿತಾಂಶ ಪಡೆದ ಸಂಸ್ಥೆಗಳು. ರಾಜ್ಯದ 35 ಶಾಲೆಗಳು ಮತ್ತು 44 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ. ಎಸ್ಸೆಸ್ಸೆಲ್ಸಿಯಲ್ಲಿ ಶೂನ್ಯ ಫಲಿತಾಂಶ ಪಡೆದ ಶಾಲೆಗಳಲ್ಲಿ 5 ಸರ್ಕಾರಿ ಅನುದಾನಿತ ಸಂಸ್ಥೆಗಳು ಮತ್ತು ಉಳಿದ 30 ಶಾಲೆಗಳು ಅನುದಾನರಹಿತ. ಎಂದರೆ ಖಾಸಗಿ ವಲಯದಲ್ಲಿರುವಂಥವು. ಪಿಯುಸಿ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶ ಪಡೆದಿರುವ ಕಾಲೇಜುಗಳೂ ಅನುದಾನ ರಹಿತ ಸಂಸ್ಥೆಗಳೇ. ಶೂನ್ಯ ಫಲಿತಾಂಶ ಪಡೆದ ಶಾಲಾ, ಕಾಲೇಜುಗಳ ಪಟ್ಟಿಯಲ್ಲಿ ಯಾವುದೇ ಸರ್ಕಾರಿಸಂಸ್ಥೆ ಸೇರ್ಪಡೆಯಾಗಿಲ್ಲ ಎನ್ನುವುದರ ಬಗ್ಗೆ ಕೆಲ ವರದಿಗಳು ಆಶ್ಚರ್ಯ ವ್ಯಕ್ತಪಡಿಸಿವೆ.

ಹಾಗಾದರೆ, ಸರ್ಕಾರಿ ಶಾಲೆಗಳ ಫಲಿತಾಂಶ ಯಾವಾಗಲೂ ಖಾಸಗಿ ಶಾಲೆಗಳ ಫಲಿತಾಂಶಕ್ಕಿಂತ ಕೆಳಮಟ್ಟದ್ದಾಗಿರುತ್ತದೆ ಎಂಬ ತೀರ್ಮಾನಕ್ಕೆ ನಾವು ಬಂದಿದ್ದೇವೆಯೇ? ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನೀಡುವ ಶಿಕ್ಷಣದ ಗುಣಮಟ್ಟ ಸರ್ಕಾರಿ ಅಥವಾ ಅನುದಾನಿತ ಶಾಲೆಗಳಲ್ಲಿ ನೀಡುವ ಶಿಕ್ಷಣದ ಗುಣಮಟ್ಟಕ್ಕಿಂತ ಕಳಪೆಯಾಗಿರುತ್ತದೆಯೇ? ಸರ್ಕಾರಿ ಎಂದ ಮಾತ್ರಕ್ಕೆ ಇಡೀ ವ್ಯವಸ್ಥೆಯೇ ದೋಷಪೂರ್ಣವೇ? ಈ ಪ್ರಶ್ನೆಗಳನ್ನೆತ್ತಿ ಫಲಿತಾಂಶಗಳ ವಿಮರ್ಶೆಯನ್ನು ಕೈಗೊಂಡಾಗ ನಮ್ಮ ಮುಂದೆ ಹೊರಹೊಮ್ಮುವ ಚಿತ್ರ ಶೈಕ್ಷಣಿಕ ಮಿಥ್ಯೆಗಳಿಗೆ ಸವಾಲುಗಳನ್ನೊಡುತ್ತದೆ.

ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶಗಳನ್ನು ಜಿಲ್ಲಾವಾರು ತುಲನೆ ಮಾಡಿದಾಗ ಮೊದಲನೆ ಐದು ಸ್ಥಾನಗಳಲ್ಲಿರುವ ಚಿಕ್ಕೋಡಿ, ಮಂಡ್ಯ, ಉಡುಪಿ, ಕೋಲಾರ ಮತ್ತು ಹಾಸನ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಕಂಡು ಬರುತ್ತದೆ. ಇದೇ ಪಟ್ಟಿಯಲ್ಲಿ ಕೆಳಗಿರುವ ಐದು (ಕೆಳಗಿನಿಂದ ಕ್ರಮವಾಗಿ) ಬೀದರ್, ಗುಲ್ಬರ್ಗಾ, ಬಳ್ಳಾರಿ, ಬೆಂಗಳೂರು (ಗ್ರಾಮಾಂತರ) ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳಿಗಿಂತ ಅನುದಾನರಹಿತ ಶಾಲೆಗಳ ಸಂಖ್ಯೆಯೇ ಹೆಚ್ಚಿದೆ.

ಪಿಯುಸಿ ಫಲಿತಾಂಶಗಳ ವಿಚಾರಕ್ಕೆ ಬಂದಾಗ ಮೇಲಿನ ಸ್ಥಾನದಲ್ಲಿರುವ ಐದು ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ (2ನೇ ಸ್ಥಾನ) ಮತ್ತು ಕೊಡಗು (4ನೇ ಸ್ಥಾನ) ಜಿಲ್ಲೆಗಳಲ್ಲಿ ಅನುದಾನರಹಿತ ಕಾಲೇಜುಗಳ ಸಂಖ್ಯೆ ಹೆಚ್ಚಿದ್ದರೆ, ಮೊದಲನೆಯ ಸ್ಥಾನದಲ್ಲಿರುವ ಉಡುಪಿ, ಮೂರನೇ ಸ್ಥಾನದಲ್ಲಿರುವ ಉತ್ತರ ಕನ್ನಡ ಮತ್ತು ಐದನೇ ಸ್ಥಾನದಲ್ಲಿರುವ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸರ್ಕಾರಿ ಕಾಲೇಜುಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಇದೇ ಪಟ್ಟಿಯಲ್ಲಿ ಕೆಳಗಿರುವ ಐದು ಜಿಲ್ಲೆಗಳಲ್ಲಿ ಕೊನೆಯಲ್ಲಿರುವ ಯಾದಗಿರಿ ಜಿಲ್ಲೆಯನ್ನು ಹೊರತುಪಡಿಸಿ, ಬಿಜಾಪುರ, ಗುಲ್ಬರ್ಗ, ರಾಯಚೂರು ಮತ್ತು ಬೀದರ್‌ಗಳಲ್ಲಿ ಸರ್ಕಾರಿ ಶಾಲೆಗಳಿಗಿಂತ ಅನುದಾನರಹಿತ ಶಾಲೆಗಳೇ ಹೆಚ್ಚು.

ಶೂನ್ಯ ಫಲಿತಾಂಶ ಬಂದಿರುವ ಶಾಲೆಗಳೆಲ್ಲ ಹೆಚ್ಚುಕಡಿಮೆ ಅನುದಾನರಹಿತ ಶಾಲೆಗಳಾಗಿದ್ದು, ಖಾಸಗಿ ವಲಯದಲ್ಲೇ ಇರುವುದರಿಂದ ಶಿಕ್ಷಣದ ಖಾಸಗೀಕರಣವನ್ನು ಅತಿಯಾಗಿ ಪ್ರೋತ್ಸಾಹಿಸುತ್ತಿರುವ ಸರ್ಕಾರಿ ಮತ್ತು ಇತರ ಸಂಸ್ಥೆಗಳು ಗಂಭೀರವಾದ ಆಲೋಚನೆಯಲ್ಲಿ ತೊಡಗಬೇಕಾಗಿದೆ.

ಶಿಕ್ಷಣ ಹಕ್ಕು ಕಾಯಿದೆಯನ್ನು ತಮ್ಮ ಹಕ್ಕುಗಳ ಉಲ್ಲಂಘನೆಯೇನೋ ಎಂಬಂತೆ ನ್ಯಾಯಾಲಯದಲ್ಲಿ ಪ್ರಶ್ನಿಸುವ ಖಾಸಗಿ ಶಾಲೆಗಳು ತಮ್ಮ ಬಾಧ್ಯತೆಗಳ ಬಗ್ಗೆಯೂ ಚಿಂತಿಸುವ ಕಾಲ ಬಂದಿದೆಯಲ್ಲವೇ? ಖಾಸಗಿ ವಲಯಕ್ಕೆ ಮಾತ್ರ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂಬ ಭ್ರಮಾಲೋಕದಿಂದ ಹೊರ ಬಂದು ಸರ್ಕಾರಿ ಶಾಲೆಗಳ ಶಕ್ತಿಗಳು ಹಾಗೂ ಖಾಸಗಿವಲಯದ ಕಾರ್ಯವೈಖರಿಯ ಬಗ್ಗೆ ಕ್ಷೇತ್ರಾಧ್ಯಯನ ಆಧರಿತ ಸಂಶೋಧನೆಯನ್ನು ಈಗ  ಕೈಗೊಳ್ಳಬೇಕಾಗಿದೆ.

ಹಾಗೆಯೇ  ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಹೆಣ್ಣುಮಕ್ಕಳು ಶೆ 9.04ರಷ್ಟು ಮತ್ತು ಪಿಯುಸಿಯಲ್ಲಿ 13.79ರಷ್ಟು ಮುಂದಿದ್ದಾರೆ. ಆದರೆ ಬಹುತೇಕ ಹೆಣ್ಣುಮಕ್ಕಳು ಏಕೆ ಕಾಲ ಕಳೆದ ಹಾಗೆ ನೇಪಥ್ಯಕ್ಕೆ ಸರಿಯುತ್ತಾರೆ? ಅವರನ್ನು ಹಿಂದಕ್ಕೆ ತಳ್ಳುವ ಸಾಂಸ್ಕೃತಿಕ, ಆರ್ಥಿಕ ಅಡಚಣೆಗಳನ್ನು ತೊಡೆದು ಹಾಕಿ, ತಮ್ಮ ಶೈಕ್ಷಣಿಕ ಕನಸುಗಳನ್ನು ಸಾಕಾರ ಮಾಡಿಕೊಳ್ಳಲು ಹೆಣ್ಣುಮಕ್ಕಳಿಗೆ ಅನುವು ಮಾಡಿಕೊಡಬೇಕಾದ ಜವಾಬ್ದಾರಿ ನಾಗರಿಕ ಸಮಾಜ ಮತ್ತು ಸರ್ಕಾರಿ ವ್ಯವಸ್ಥೆಗಳೆರಡಕ್ಕೂ ಇದೆ.

ದಿನಗಳು ಕಳೆದ ಹಾಗೆ ನಿರ್ಣಾಯಕ ಘಟ್ಟಗಳೆಂದೇ ಗುರುತಿಸಲ್ಪಟ್ಟಿರುವ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶಗಳು ಸಾರ್ವಜನಿಕ ಮನಸ್ಸಿನಿಂದ ಹಿಂದೆ ಸರಿದು, ಮತ್ತ್ಯಾವುದೋ ವಿಷಯ ಕೇಂದ್ರಸ್ಥಾನಕ್ಕೆ ಬರುತ್ತದೆ. ಅನುಕೂಲವಿರುವವರು ತಮ್ಮ ಕನಸುಗಳ ಬೆನ್ನಟ್ಟಿ ಹೊರಟರೆ, ಈ ಅನುಕೂಲಗಳಿಂದ ವಂಚಿತರಾದವರು ಶೈಕ್ಷಣಿಕ ಪಥದಲ್ಲಿ ಹಿಂದೆ ಸರಿಯುತ್ತಾರೆ. ಮತ್ತದೇ ಸಿದ್ಧಾಂತಗಳು, ಸರ್ಕಾರಿ-ಖಾಸಗಿ, ಗ್ರಾಮ-ನಗರ, ಗಂಡು-ಹೆಣ್ಣು, ಬಡವರು-ಶ್ರಿಮಂತರು ಎಂಬ ಚೌಕಟ್ಟುಗಳಲ್ಲಿ ಶೈಕ್ಷಣಿಕ ಸಾಧನೆಯನ್ನು ಅಳೆಯಲಾರಂಭಿಸುತ್ತವೆ.

ಹಾಗಾಗದೆ ಈ ಫಲಿತಾಂಶಗಳಿಂದ ಹೊರ ಹೊಮ್ಮಿರುವ ಸ್ಪಷ್ಟ ಜಾಡುಗಳನ್ನು ಹಿಡಿದು, ಸಾಮಾಜಿಕ, ಆರ್ಥಿಕ ಅಸಮಾನತೆ ಸಾಧನೆಗೆ ನಿಜವಾದ ಅಡ್ಡಿಯಲ್ಲ ಎನ್ನುವುದನ್ನು ಸ್ಥಾಪಿಸುವ ಕಾಲ ಬರಲಿ. ಇನ್ನೇನು ಅಧಿಕಾರಕ್ಕೆ ಬರಲಿರುವ ಹೊಸ ಸರ್ಕಾರ ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.