ADVERTISEMENT

ಸಂತಸ ತಂದಿದೆ; ನಿರೀಕ್ಷೆ ಉಳಿದಿದೆ

ಅಂಗವಿಕಲರ ಹಕ್ಕುಗಳು

ಜಿ.ಎನ್.ನಾಗರಾಜ್
Published 23 ಡಿಸೆಂಬರ್ 2016, 20:24 IST
Last Updated 23 ಡಿಸೆಂಬರ್ 2016, 20:24 IST
ಸಂತಸ ತಂದಿದೆ; ನಿರೀಕ್ಷೆ ಉಳಿದಿದೆ
ಸಂತಸ ತಂದಿದೆ; ನಿರೀಕ್ಷೆ ಉಳಿದಿದೆ   

ಉನ್ಮಾತ್ತಾಧಶ್ಚ ವರ್ಜ್ಯಸ್ಯು (ಮಾನಸಿಕ ರೋಗಿಗಳು, ದೃಷ್ಟಿದೋಷವುಳ್ಳವರನ್ನು ದೂರವಿಡಿ), ಅನಂಶೌ ಕ್ಷೀಬ ಪತಿತೌ, ಜಾತ್ಯಂಧ ಬಧಿರೌ ತಥಾ ಉನ್ಮತ್ತ ಜಡ ಮೂಕಾಶ್ಚ ಯೇಕೇಚಿನ್ನಿರಿಂದ್ರಿಯಾ (ದೃಷ್ಟಿದೋಷ ವುಳ್ಳವರು, ಶ್ರವಣ ದೋಷ ವುಳ್ಳವರು, ಮಾನಸಿಕ ರೋಗಿಗಳು, ಬುದ್ಧಿಮಾಂದ್ಯರು, ಮಾತು ಬಾರದವರು, ಊನಾಂಗರಿಗೆ ಆಸ್ತಿಯಲ್ಲಿ ಪಾಲಿಲ್ಲ).

ಅಂಗವಿಕಲರ ಬಗ್ಗೆ ಮನುಸ್ಮೃತಿಯಲ್ಲಿರುವ ಈ ಮನಸ್ಥಿತಿಯಿಂದ ಹೊರಬರಲು ನಮ್ಮ ಸಮಾಜ ಇನ್ನೂ ಬಹಳಷ್ಟು ಶ್ರಮಪಡುತ್ತಿದೆ. ಅಂಗವಿಕಲರಿಗೆ ಪ್ರಜಾಪ್ರಭುತ್ವದ ಮಾನವ ಹಕ್ಕುಗಳಿನ್ನೂ ದಕ್ಕಬೇಕಾಗಿದೆ. ಈ ದಿಸೆಯಲ್ಲಿ ಮತ್ತೊಂದು ಹೆಜ್ಜೆ ಸಂಸತ್ತು ಇತ್ತೀಚೆಗೆ ಅನುಮೋದಿಸಿದ ಹೊಸ ಮಸೂದೆ. ಹತ್ತು ವರ್ಷಗಳ ಸುದೀರ್ಘ ಹೋರಾಟದ ನಂತರ ಅಂಗೀಕಾರವಾದ ಈ ಮಸೂದೆ ಆ ಕಾರಣಕ್ಕಾಗಿಯೇ ಸಂತಸ ತಂದಿದೆ. ಹಾಗೆಯೇ ಅಂಗವಿಕಲರ ಆಶಯಗಳು ಮತ್ತು ವಿಶ್ವಸಂಸ್ಥೆಯ ನಿರ್ದೇಶನಗಳನ್ನು ಪೂರೈಸಿಲ್ಲವೆಂಬ ಟೀಕೆಗಳಿಗೂ ಒಳಗಾಗಿದೆ.

ಈ ಮಸೂದೆಯಲ್ಲಿ 1995ರ ಕಾಯ್ದೆಯಲ್ಲಿದ್ದ ಕೇವಲ ಏಳು ರೀತಿಯ ಅಂಗವೈಕಲ್ಯಗಳನ್ನು ವಿಸ್ತರಿಸಿ 21 ಬಗೆಯ ವೈಕಲ್ಯಗಳನ್ನು ಗುರುತಿಸಲಾಗಿದೆ. ಹೊಸ ಅಂಗವೈಕಲ್ಯಗಳಲ್ಲಿ ಆ್ಯಸಿಡ್ ದಾಳಿಗೆ ಒಳಗಾದವರು, ಆಟಿಸಂ, ‘ತಾರೆ ಜಮೀನ್ ಪರ್’ ಸಿನಿಮಾದ ಬಾಲ ನಾಯಕನಂತೆ ಕಲಿಕೆಯ ಸಮಸ್ಯೆಗಳಿಗೆ ಒಳಗಾದವರು, ಕುಬ್ಜರು, ಸೆರೆಬ್ರಲ್ ಪಾಲ್ಸಿ, ಪಾರ್ಕಿನ್ಸನ್, ಹಿಮೋಫೀಲಿಯಾ, ತಲಸ್ಸೇಮಿಯಾ, ಸಿಲ್ ಸೆಲ್ ಅನೀಮಿಯಾ, ಮಲ್ಟಿಪಲ್ ಸ್ಕ್ಲೀರೋಸಿಸ್ ರೋಗ ಬಾಧಿತರು, ಬಹು ವಿಧ ಅಂಗವೈಕಲ್ಯ ಉಳ್ಳವರು, ದೃಷ್ಟಿದೋಷ ಮತ್ತು ಶ್ರವಣ ದೋಷ ಉಳ್ಳವರಲ್ಲಿ ಒಂದಕ್ಕಿಂತ ಹೆಚ್ಚು ವಿಧಗಳು, ಇವುಗಳ ಜೊತೆಗೆ ದೈಹಿಕ ಅಂಗವೈಕಲ್ಯ ಇರುವವರು,  ಕುಷ್ಠರೋಗದಿಂದ ಅಂಗವೈಕಲ್ಯಕ್ಕೆ ಒಳಗಾದವರು, ಮಾನಸಿಕ ರೋಗಿಗಳು ಸೇರಿದ್ದಾರೆ. ಅಂಗವೈಕಲ್ಯದ ಬಗ್ಗೆ ಅರಿವುಳ್ಳ ಹಾಗೂ ಸಂವೇದನೆಯುಳ್ಳ ಪರಿಸರವನ್ನು ನಿರ್ಮಾಣ ಮಾಡುವುದು ಈ ಮಸೂದೆಯ ಮುಖ್ಯ ಅಂಶಗಳಲ್ಲೊಂದು. ವೈದ್ಯಕೀಯ, ನರ್ಸಿಂಗ್, ಎಂಜಿನಿಯರಿಂಗ್, ಆರ್ಕಿಟೆಕ್ಚರ್‌ಗಳ ಪಠ್ಯಗಳಲ್ಲಿ ಅಂಗವೈಕಲ್ಯಕ್ಕೆ ಸಂಬಂಧಿಸಿದ ವಿಷಯಗಳು; ವಿಶ್ವವಿದ್ಯಾಲಯಗಳಲ್ಲಿ ಅಂಗವೈಕಲ್ಯ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸುವುದು; ಶಾಸಕರು, ಪಂಚಾಯತ್ ಸದಸ್ಯರು, ಆಡಳಿತಗಾರರು, ಪೊಲೀಸರು, ನ್ಯಾಯಾಧೀಶರು ಮೊದಲಾದವರಿಗೆ ತರಬೇತಿ ನೀಡುವುದು ಸೇರಿವೆ.

ADVERTISEMENT

ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೆಚ್ಚು ಗಮನ ನೀಡುವ ಪ್ರಸ್ತಾವಗಳು ಮಸೂದೆಯಲ್ಲಿವೆ.  ಹಿಂದಿನ ಕಾಯ್ದೆಯಂತೆ ಕೇವಲ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲದೆ ಮಾನ್ಯತೆ ಪಡೆದ ಎಲ್ಲಾ ಶಿಕ್ಷಣ ಸಂಸ್ಥೆಗಳೂ ಅಂಗವಿಕಲರಿಗೆ ಪ್ರವೇಶಾವಕಾಶ ನೀಡಬೇಕು ಎಂದು ಹೇಳಲಾಗಿದೆ. ಅಂಗವಿಕಲರ ಆರೋಗ್ಯ ರಕ್ಷಣೆಗೆ ಕೂಡ ಹಿಂದಿಗಿಂತ ಹೆಚ್ಚು ಗಮನ ನೀಡಲಾಗಿದೆ. ಆದಾಯ ಮಿತಿಗೊಳಪಟ್ಟು ವೈದ್ಯಕೀಯ ಪರೀಕ್ಷೆ, ಶಸ್ತ್ರಚಿಕಿತ್ಸೆ ಮೊದಲಾದ ಸೌಲಭ್ಯಗಳು ಉಚಿತ.

ಅಂಗವಿಕಲ ಮಹಿಳೆಯರಿಗೆ ಪ್ರತ್ಯೇಕ ಗಮನ ನೀಡಲಾಗಿದೆ. ಅವರ ಮೇಲೆ ಎಸಗುವ ದೌರ್ಜನ್ಯಗಳ ವಿರುದ್ಧ ಕಠಿಣ ಶಿಕ್ಷೆ ವಿಧಿಸಲು, ವಿವಿಧ ಸೌಲಭ್ಯಗಳಲ್ಲಿ ಮಹಿಳೆಯರಿಗೆ ಪಾಲು ದಕ್ಕುವಂತಹ ಕ್ರಮಗಳಿಗೆ ಒತ್ತು ನೀಡಲಾಗಿದೆ. ಹೆಚ್ಚು ಸಹಾಯದ ಅಗತ್ಯವುಳ್ಳ ತೀವ್ರ ಅಂಗವಿಕಲರಿಗೆ ಅವರ ಕೋರಿಕೆಯ ಮೇರೆಗೆ ವಿಶೇಷ ಸಹಾಯ ನೀಡಿಕೆ ಯೋಜನೆಗಳು, ಅವರ ಪಾಲಕರಿಗೆ ಭತ್ಯೆಗಳನ್ನು ನೀಡುವ ಬಗ್ಗೆ ಸೂಚನೆಯಿದೆ. ಅಂಗವಿಕಲರು ಸ್ವತಃ ನ್ಯಾಯಾಲಯಗಳಲ್ಲಿ ನ್ಯಾಯ ಪಡೆಯುವ ಹಕ್ಕನ್ನು ಮಸೂದೆ ಖಾತರಿಗೊಳಿಸುತ್ತದೆ. ಅವರು ತಮ್ಮ ಪಾಲಿನ ಆಸ್ತಿಯನ್ನು ಪಡೆಯುವ, ಅದನ್ನು ನಿರ್ವಹಿಸುವ ಮತ್ತು ಅದಕ್ಕಾಗಿ ಸಾಲ ಪಡೆಯುವ ಹಕ್ಕುಗಳನ್ನು ಉಲ್ಲೇಖಿಸಿದೆ.

ಈ ಮಸೂದೆಯಲ್ಲಿರುವ ಬಹು ಮುಖ್ಯವಾದ ಹೊಸ ಅಂಶವೆಂದರೆ, ಅಂಗವಿಕಲರನ್ನು ಸಾರ್ವಜನಿಕವಾಗಿ ದೂಷಿಸಿದರೆ, ಬೆದರಿಸಿದರೆ, ಅವರ ಉಸ್ತುವಾರಿ ವಹಿಸಿಕೊಂಡವರು ಆಹಾರ, ನೀರು ಮೊದಲಾದ ಅಗತ್ಯಗಳನ್ನು ಪೂರೈಸದಿದ್ದರೆ ಮತ್ತು ಹಿಂಸೆಗೆ ಒಳಪಡಿಸಿದರೆ ಆರು ತಿಂಗಳಿನಿಂದ ಐದು ವರ್ಷಗಳವರೆಗೆ ಶಿಕ್ಷೆ ವಿಧಿಸುವುದಕ್ಕೆ ಮಸೂದೆ ಅವಕಾಶ ನೀಡಿದೆ. ಇಂತಹ ಸಂದರ್ಭಗಳಲ್ಲಿ ಬಾಧಿತ ಅಂಗವಿಕಲರಲ್ಲದೆ ಬೇರೆ ವ್ಯಕ್ತಿ ಅಥವಾ ಸಂಸ್ಥೆಗಳೂ ದೂರು ನೀಡಬಹುದಾಗಿದೆ. ಕಾಯ್ದೆಯ ವಿರುದ್ಧ ನಡೆದುಕೊಳ್ಳುವ ಸರ್ಕಾರಿ ಅಧಿಕಾರಿಗಳು ಮತ್ತು ಖಾಸಗಿ ಕಂಪೆನಿಗಳಿಗೆ ಕೂಡ ₹ 10 ಸಾವಿರದಿಂದ  ₹ 5  ಲಕ್ಷದವರೆಗೆ ದಂಡ ವಿಧಿಸಲು ಮಸೂದೆ ಅವಕಾಶ ನೀಡಿದೆ. ಈ ಎರಡೂ ಅಂಶಗಳು, ಅಂಗವಿಕಲರಿಗೆ ಆಗುತ್ತಿರುವ ಅನ್ಯಾಯವನ್ನು ಕೆಲ ಮಟ್ಟಿಗೆ ತಡೆಯುವ ಸಾಧನಗಳಾಗಬಹುದಾಗಿದೆ.
ಇದೇ ಸಮಯದಲ್ಲಿ, ಅಂಗವಿಕಲರ ಆಶಯಗಳನ್ನು ಪೂರೈಸುವಲ್ಲಿ ಹಾಗೂ ವಿಶ್ವಸಂಸ್ಥೆಯ ಒಡಂಬಡಿಕೆಯನ್ನು ಜಾರಿ ಮಾಡುವಲ್ಲಿ ಈ ಮಸೂದೆಯಲ್ಲಿ ಗಂಭೀರ ಕೊರತೆಗಳಿವೆ. ಅಂಗವಿಕಲರು ಘನತೆಯಿಂದ ಜೀವನ ನಡೆಸಲು ಅಗತ್ಯವಾದ ಉದ್ಯೋಗ ಮೀಸಲಾತಿಯಲ್ಲಿ ಹೆಚ್ಚೇನೂ ಬದಲಾವಣೆಯಿಲ್ಲ. ವಿದೇಶಗಳಲ್ಲಿನಂತೆ ಸಾರ್ವಜನಿಕ ಮತ್ತು ಖಾಸಗಿ ಕಾರ್ಖಾನೆಗಳಲ್ಲಿ ಅಂಗವಿಕಲರಿಗೇ ಪ್ರತ್ಯೇಕ ಶೆಡ್‌ಗಳಲ್ಲಿ ಕೆಲಸ, ಮತ್ತಿತರ ಮಾರ್ಗಗಳ ಮೂಲಕ ಉದ್ಯೋಗಾವಕಾಶಗಳನ್ನು ಬೃಹತ್ತಾಗಿ ವಿಸ್ತರಿಸುವ ಬಗ್ಗೆ ಯೋಚನೆಯೇ ಇಲ್ಲವಾಗಿದೆ.

ಇಡೀ ಕಾನೂನಿನಲ್ಲಿ ಅಧಿಕಾರಶಾಹಿಯದೇ ದರ್ಬಾರು. ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಕಾನೂನು ಜಾರಿಗೊಳಿಸುವ ಅಧಿಕಾರವಿರುವ ಸ್ವಾಯತ್ತ ಅಂಗವಿಕಲರ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತರುವ ಬದಲಾಗಿ, ಸರ್ಕಾರದ ಬಾಲಂಗೋಚಿಯಾದ  ಅಧಿಕಾರಿಗಳು ಹಾಗೂ ನೇಮಕಾತಿಗಳಿಂದ ತುಂಬಿತುಳುಕುವ ಸಲಹಾ ಮಂಡಳಿಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಅಂಗವಿಕಲರ ಸಾಮಾಜಿಕ ಭದ್ರತೆ ಮತ್ತಿತರ ಯೋಜನೆಗಳಿಗೆ ನೀಡುವ ಹಣ ಸಂಪನ್ಮೂಲದ ಬಗ್ಗೆ 1995ರ ಕಾನೂನಿನಂತೆಯೇ ಆಯಾ ಹಂತದ ಸರ್ಕಾರಗಳ ಆರ್ಥಿಕ ಸಾಮರ್ಥ್ಯವನ್ನು ನೆಪವಾಗಿಸಿ, ಕೇವಲ ತೋರಿಕೆಯ ಕ್ರಮಗಳಿಗೆ ಸೀಮಿತವಾಗುವ ಹೇರಳ ಅವಕಾಶವನ್ನು ಈ ಮಸೂದೆ ನೀಡುತ್ತದೆ. ಅಂಗವಿಕಲರ ಸ್ವಸಹಾಯ ಗುಂಪುಗಳು, ಸಹಕಾರ ಸಂಘಗಳು, ಶಾಲಾಭಿವೃದ್ಧಿ ಸಂಸ್ಥೆಗಳು ಮತ್ತು ಪಂಚಾಯತ್ ಸಂಸ್ಥೆಗಳು ಅಂಗವಿಕಲರ ಬದುಕಿಗೆ ಆಧಾರವಾಗಬಹುದಾದ ಸಾಧ್ಯತೆಗಳ ಬಗ್ಗೆ ಗಮನವೇ ಇಲ್ಲ.

ಈ ಮಸೂದೆ ಒದಗಿಸುವ ಅವಕಾಶಗಳ ಪೂರ್ಣ ಪ್ರಯೋಜನ ಪಡೆಯಲು, ಅಂಗವಿಕಲರ ಘನತೆಯ ಬದುಕಿಗೆ ಅತ್ಯಗತ್ಯವಾದ ನೆರವು ನೀಡಬಹುದಾದ ಕಾನೂನು ರೂಪಿಸಿಕೊಳ್ಳಲು ಅಂಗವಿಕಲರ ಚಳವಳಿ ಇನ್ನಷ್ಟು ಬಲಿಷ್ಠವಾಗಬೇಕಾಗಿದೆ.

ಹೆಜ್ಜೆ ಹೆಜ್ಜೆಗೂ ಹೋರಾಟ

ಸಂಸತ್ತಿನ ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲಿ ನೋಟು ನಿಷೇಧದ ಬಗೆಗಿನ ಗದ್ದಲ, ಗೊಂದಲಗಳ ನಡುವೆ ಅಂಗವಿಕಲರ ಮಸೂದೆ ಅಂಗೀಕಾರವಾದ ಅಚ್ಚರಿಯ ಹಿಂದೆ ಹತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ನಡೆದ ದೇಶದ ಅಂಗವಿಕಲರ  ನಿರಂತರ ಹೋರಾಟ ಮತ್ತು ಪರಿಶ್ರಮ ಅಡಗಿದೆ. ‘ನೋ ಡಿಲೆ, ನೋ ಡೈಲ್ಯೂಷನ್’– ಕಳೆದ ವರ್ಷ ಡಿಸೆಂಬರ್‌ 3ರ ವಿಶ್ವ ಅಂಗವಿಕಲರ ದಿನಾಚರಣೆಯಂದು ಕರ್ನಾಟಕ ಸೇರಿದಂತೆ ಹತ್ತಾರು ರಾಜ್ಯಗಳ ಹತ್ತು ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯ ಅಂಗವಿಕಲರಿಂದ ದೆಹಲಿಯ ಸಂಸತ್ ಮಾರ್ಗದಲ್ಲಿ ಈ ಧ್ವನಿ ಮೊಳಗಿತು. ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ (ಎನ್.ಪಿ.ಆರ್.ಡಿ.) ಸಂಘಟಿಸಿದ್ದ ಈ ಪ್ರತಿಭಟನೆಯ ನಂತರ ರಾಷ್ಟ್ರಪತಿ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಅಲ್ಲಿಂದ ಆರಂಭವಾಗಿ, ಅಂಗವಿಕಲರು ಹೊಸ ಕಾಯ್ದೆಗಾಗಿ ಒಂದು ವರ್ಷ ಸ್ಥಳೀಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನಿರಂತರವಾದ ಹೋರಾಟಗಳನ್ನು ನಡೆಸಿದರು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ದೇಶದಾದ್ಯಂತ ಲಕ್ಷಾಂತರ ಜನರ ಸಹಿ ಸಂಗ್ರಹ ಆಂದೋಲನ ನಡೆಸಲಾಯಿತು. ಅಂಗವಿಕಲರ ಸಂಘ ಸಂಸ್ಥೆಗಳ ಜಂಟಿ ಕ್ರಿಯಾ ಸಮಿತಿಯಿಂದ ರಾಜ್ಯಗಳ ರಾಜಧಾನಿಗಳಲ್ಲಿ ಪ್ರತಿಭಟನೆಗಳು ನಡೆದವು. ಎಲ್ಲಾ ರಾಜಕೀಯ ಪಕ್ಷಗಳಿಗೂ ಮನವಿ ಸಲ್ಲಿಸಲಾಯಿತು. ಈ ವರ್ಷದ ಅಂಗವಿಕಲರ ದಿನಾಚರಣೆಯಂದು ಮತ್ತೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಇದು ಮಸೂದೆಯ ಅಂಗೀಕಾರಕ್ಕೆ ಒತ್ತಡ ಹಾಕಿದ ಸದ್ಯದ ಹೋರಾಟಗಳು. ಆದರೆ ಈ ಮಸೂದೆಯ ಹಿಂದೆ, ಭಾರತದ ಅಂಗವಿಕಲರ ಚಳವಳಿ ಸಾಕಷ್ಟು ವರ್ಷಗಳಿಂದ ಹೆಜ್ಜೆ ಹೆಜ್ಜೆಗೂ ನಡೆಸಿದ ಹೋರಾಟದ ಇತಿಹಾಸವಿದೆ.

ವಿಶ್ವ ಅಂಗವಿಕಲರ ಚಳವಳಿ ವಿಶ್ವಸಂಸ್ಥೆಯ ಮೇಲೆ ಒತ್ತಡ ಹೇರಿದ್ದರ ಫಲವಾಗಿ 2000ದಲ್ಲಿ ವಿಶ್ವ ಅಂಗವಿಕಲರ ಹಕ್ಕುಗಳ ಹೊಸ ಒಡಂಬಡಿಕೆಯನ್ನು ದೇಶದಲ್ಲಿ ಅಂಗೀಕರಿಸಲಾಯಿತು. ಅದಕ್ಕನುಗುಣವಾದ ಹೊಸ ಕಾಯ್ದೆ ತರುವ ಬದಲಾಗಿ ಅಂದಿನ ಸರ್ಕಾರ 2009ರಲ್ಲಿ ಹಳೆ ಕಾಯ್ದೆಗೇ ತೇಪೆ ಹಚ್ಚುವ ಕೆಲ ತಿದ್ದುಪಡಿಗಳನ್ನು ತರಲು ಯತ್ನಿಸಿತು. ಆದರೆ ಭಾರತದ ಅಂಗವಿಕಲರ ಚಳವಳಿ ಈ ಪ್ರಯತ್ನವನ್ನು ನಿರಾಕರಿಸಿ ಹೊಸದೊಂದು ಕಾಯ್ದೆಯನ್ನೇ ತರಬೇಕೆಂದು ಒತ್ತಾಯಿಸಿತು. ‘ನಥಿಂಗ್ ಅಬೌಟ್ ಅಸ್ ವಿತೌಟ್ ಅಸ್’ ಎಂಬ ಘೋಷವಾಕ್ಯದಡಿ ಹೊಸ ಕಾಯ್ದೆಯ  ರೂಪುರೇಷೆಗಳನ್ನು ಅಂಗವಿಕಲರೊಂದಿಗೆ ಚರ್ಚಿಸಿಯೇ ಸಿದ್ಧಪಡಿಸಬೇಕೆಂದು ಆಗ್ರಹಿಸಲಾಯಿತು. ಕರಡು ಮಸೂದೆಯನ್ನು ದೇಶದ ಅನೇಕ ಭಾಷೆಗಳಿಗೆ ಭಾಷಾಂತರ ಮಾಡಲಾಯಿತು. 28 ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚರ್ಚೆಗಳು ನಡೆದವು. ಪ್ರತಿ ಅಧ್ಯಾಯ, ಕಲಂ, ಪ್ರತಿ ವಾಕ್ಯವನ್ನೂ ಕೂಲಂಕಷವಾಗಿ ಪರಿಶೀಲಿಸಲಾಯಿತು. ಬಿಸಿಬಿಸಿ ಚರ್ಚೆಗಳು ನಡೆದವು. ಕರ್ನಾಟಕದ ಜಿಲ್ಲಾ ಕೇಂದ್ರಗಳಲ್ಲೂ ಮಸೂದೆ ಬಗ್ಗೆ ಚರ್ಚಿಸಲಾಯಿತು. ವಿವಿಧ ಅಂಗವೈಕಲ್ಯಗಳನ್ನು ಪ್ರತಿನಿಧಿಸುವ ಸಾವಿರಾರು ಅಂಗವಿಕಲರು, ಅವರ ಪಾಲಕರು, ವಿವಿಧ ಕ್ಷೇತ್ರಗಳ ಪರಿಣತರು ಪಾಲ್ಗೊಂಡರು. ಸಾವಿರಾರು ತಿದ್ದುಪಡಿಗಳು ಸೂಚನೆಗೊಂಡವು.

ಕರ್ನಾಟಕದ ಸಮಾಲೋಚನೆಗಳು– 2011 ಕಾರ್ಯಕ್ರಮ ಮೂರು ಹಂತಗಳಲ್ಲಿ ನಡೆದು, ನೂರಾರು ತಿದ್ದುಪಡಿಗಳನ್ನು ಸೂಚಿಸಲಾಗಿದ್ದು ಇವುಗಳಲ್ಲಿ  ಹಲವು ಈ ಮಸೂದೆಯಲ್ಲಿ ಸ್ಥಾನ ಪಡೆದಿವೆ. ಆದರೆ ಅದೇ ಸಂದರ್ಭದಲ್ಲಿ ಅನೇಕ ಮುಖ್ಯ ವಿಷಯಗಳಿಗೆ ಸಂಬಂಧಿಸಿದ ತಿದ್ದುಪಡಿ ಸೂಚನೆಗಳನ್ನು ಅಂಗೀಕರಿಸದಿರುವುದು ಈ ಮಸೂದೆಯ ಪರಿಣಾಮವನ್ನು ಸೀಮಿತಗೊಳಿಸಿದೆ. ಆದರೂ, ಮಹಿಳಾ ದೌರ್ಜನ್ಯ ವಿರೋಧಿ ಕಾಯ್ದೆಗೆ ಸಂಬಂಧಿಸಿದಂತೆ ಮಹಿಳಾ ಚಳವಳಿ ನಡೆಸಿದ ಹೋರಾಟ, ಸೀಮಿತ ಚರ್ಚೆ ಹೊರತುಪಡಿಸಿದರೆ, ಪ್ರತಿ ಕಲಂ ಬಗ್ಗೆಯೂ ಚರ್ಚಿಸಿ, ಸಂಬಂಧಿಸಿದ ಜನರು ಖುದ್ದು ಪಾಲ್ಗೊಳ್ಳಲು ಪ್ರಯತ್ನಿಸಿದ ಮಸೂದೆಯಾಗಿ ಅಂಗವಿಕಲರ ಹಕ್ಕುಗಳ ಮಸೂದೆ ಒಂದು ಇತಿಹಾಸವನ್ನೇ ನಿರ್ಮಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.