ಸಜನ್ ಪೂವಯ್ಯ
ನಿಸರ್ಗದ ನಿಯಮಕ್ಕೆ ವಿರುದ್ಧವಾಗಿ ಪುರುಷ, ಮಹಿಳೆ ಅಥವಾ ಪ್ರಾಣಿಯ ಜೊತೆ ಲೈಂಗಿಕ ಸಂಪರ್ಕ, ಭಾರತೀಯ ದಂಡ ಸಂಹಿತೆಯ (ಐಪಿಸಿ) 377ನೇ ಸೆಕ್ಷನ್ ಪ್ರಕಾರ ಅಪರಾಧ. ಇದಕ್ಕೆ 10 ವರ್ಷಗಳವರೆಗೆ ಸಜೆ ವಿಧಿಸಬಹುದು.
ಐಪಿಸಿಯ ಸೆಕ್ಷನ್ 377ರ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ 2001ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಸಂವಿಧಾನ ನೀಡಿರುವ ಸಮಾನತೆ, ಬದುಕುವ ಹಕ್ಕುಗಳಿಗೆ ಈ ಸೆಕ್ಷನ್ ವಿರುದ್ಧವಾಗಿದೆ ಎಂದು ನಾಜ್ ಪ್ರತಿಷ್ಠಾನ ಸಲ್ಲಿಸಿದ್ದ ಅರ್ಜಿಯಲ್ಲಿ ವಾದಿಸ ಲಾಗಿತ್ತು. ಇಂಥ ಅರ್ಜಿ ಸಲ್ಲಿಸುವಂಥ ಸಂದರ್ಭ ನಾಜ್ ಪ್ರತಿಷ್ಠಾನಕ್ಕೆ ಎದುರಾಗಿಲ್ಲ. ಅಕಾಡೆಮಿಕ್ ವಿಚಾರವಾಗಿರುವ ಇದನ್ನು ನ್ಯಾಯಾಲಯ ಪರಿಶೀಲನೆಗೆ ಒಳಪಡಿಸುವುದಿಲ್ಲ ಎಂದು ಹೇಳಿ ದೆಹಲಿ ಹೈಕೋರ್ಟ್ ಆರಂಭದಲ್ಲಿ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ ಪುನರ್ ಪರಿಶೀಲನಾ ಅರ್ಜಿಯೂ ತಿರಸ್ಕೃತಗೊಂಡಿತು.
ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಲಾಯಿತು. ‘ಈ ವಿಚಾರದ ಬಗ್ಗೆ ನ್ಯಾಯಾಂಗದ ಪರಿಶೀಲನೆ ಅಗತ್ಯ’ ಎಂಬ ಅನಿಸಿಕೆ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಅರ್ಜಿಯ ಕುರಿತು ಹೊಸದಾಗಿ ವಿಚಾರಣೆ ನಡೆಸುವಂತೆ ಸೂಚಿಸಿ ದೆಹಲಿ ಹೈಕೋರ್ಟ್‌ಗೆ ಪ್ರಕರಣವನ್ನು 2006ರಲ್ಲಿ ವರ್ಗಾಯಿಸಿತು.
ಅರ್ಜಿಯನ್ನು ಮತ್ತೆ ವಿಚಾರಣೆಗೆ ಕೈಗೆತ್ತಿಕೊಂಡ ದೆಹಲಿ ಹೈಕೋರ್ಟ್, ವಯಸ್ಕರು ಪರಸ್ಪರ ಒಪ್ಪಿಗೆಯಿಂದ ನಡೆಸುವ ಸಲಿಂಗ ಕಾಮ ಅಪರಾಧವಲ್ಲ ಎಂದು 2009ರ ಜುಲೈ 2ರಂದು ಆದೇಶಿಸಿತು. ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಯಿತು. ಇದೇ 11ರಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಐಪಿಸಿಯ ಸೆಕ್ಷನ್ 377, ಸಂವಿಧಾನಕ್ಕೆ ವಿರುದ್ಧವಾಗಿಲ್ಲ ಎಂದು ಹೇಳಿದೆ.
ಸೆಕ್ಷನ್ 377ರ ಬಗ್ಗೆ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶ ಎಷ್ಟು ಸರಿ ಎಂಬುದರ ಬಗ್ಗೆ ಮಾತ್ರ ತಾನು ತೀರ್ಪು ನೀಡಿದ್ದೇನೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಈ ವಿಚಾರದಲ್ಲಿ ತಾನು ಪರಿಶೀಲನೆಗೆ ಒಳಪಡಿಸಿದ್ದು ನಿರ್ದಿಷ್ಟ ಅಂಶವೊಂದನ್ನು ಮಾತ್ರ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿರುವ ಕಾರಣ, ವಯಸ್ಕ ವ್ಯಕ್ತಿಗಳು ಒಪ್ಪಿಗೆಯಿಂದ ನಡೆಸುವ ಸಲಿಂಗ ಕಾಮದ ಬಗ್ಗೆ ನೀಡಿರುವ ಈ ತೀರ್ಪೇ ಅಂತಿಮ ಎಂದು ಭಾವಿಸಬೇಕಿಲ್ಲ. ಈ ಹಿನ್ನೆಲೆಯಲ್ಲಿ ನೋಡಿದಾಗ, ವಯಸ್ಕ ವ್ಯಕ್ತಿಗಳು ಸಮ್ಮತಿಯಿಂದ ನಡೆಸುವ ಸಲಿಂಗ ಕಾಮ, ಸೆಕ್ಷನ್ 377ರ ಪರಿಧಿಯೊಳಕ್ಕೆ ಬರುತ್ತದೆಯೇ ಎಂಬ ಪ್ರಶ್ನೆ ಹಾಗೇ ಉಳಿದುಕೊಳ್ಳುತ್ತದೆ. ಈ ಪ್ರಶ್ನೆಗೆ ಸುಪ್ರೀಂ ಕೋರ್ಟ್‌ನ ತೀರ್ಪು ಸ್ಪಷ್ಟ ಉತ್ತರ ನೀಡಿಲ್ಲ. ‘ಲೈಂಗಿಕ ಸಂಪರ್ಕವೊಂದು ನಿಸರ್ಗದ ನಿಯಮಗಳಿಗೆ ವಿರುದ್ಧ ಎಂದು ವರ್ಗೀಕರಿಸಲು ಏಕರೂಪದ ಪರೀಕ್ಷೆ ಇಲ್ಲ. ಯಾವ ಬಗೆಯ ಲೈಂಗಿಕ ಸಂಪರ್ಕ ಸೆಕ್ಷನ್ 377ರ ಅಡಿ ಬರುತ್ತದೆ ಎಂಬುದನ್ನು ನಿರ್ಧರಿಸುವಾಗ, ಲೈಂಗಿಕ ಸಂಪರ್ಕ ಯಾವ ಸಂದರ್ಭದಲ್ಲಿ ನಡೆದಿದೆ ಎಂಬುದನ್ನು ಪರಿಗಣಿಸಬೇಕು’ ಎಂದು ಹೇಳಿದೆ.
ಈ ಹಿನ್ನೆಲೆಯಲ್ಲಿ, ‘ನಿಸರ್ಗದ ನಿಯಮಕ್ಕೆ ವಿರುದ್ಧವಾದ ಸಲಿಂಗ ಕಾಮ’ ಕುರಿತು ಸುಪ್ರೀಂ ಕೋರ್ಟ್ ತನ್ನ ಅಂತಿಮ ಅಭಿಪ್ರಾಯ ತಿಳಿ-ಸಿಲ್ಲ. ಸೆಕ್ಷನ್ 377, ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಸುಪ್ರೀಂಕೋರ್ಟ್ ಎಲ್ಲಿಯೂ ಹೇಳಿಲ್ಲ. ಆದರೆ ಅಗತ್ಯ ಕಂಡುಬಂದರೆ ಈ ಸೆಕ್ಷನ್‌ಗೆ ತಿದ್ದುಪಡಿ ತರಲು ಶಾಸಕಾಂಗ ಸ್ವತಂತ್ರವಾಗಿದೆ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ. ಸೀಮಿತ ವಿಚಾರವೊಂದರ ಬಗ್ಗೆ ಮಾತ್ರ ಸುಪ್ರೀಂ ಕೋರ್ಟ್ ಗಮನಹರಿಸಿ, ಈ ಆದೇಶ ನೀಡಿದೆ.
ಸೆಕ್ಷನ್ 377ರ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿದ ನಾಜ್ ಪ್ರತಿಷ್ಠಾನದ ನಿಲುವು ಸರಿಯಾಗಿತ್ತೇ ಎಂಬುದನ್ನು ಚರ್ಚಿಸಿರುವ ಸುಪ್ರೀಂ ಕೋರ್ಟ್, ಪ್ರತಿಷ್ಠಾನದ ಕೋರಿಕೆಗಳು ಚುಟುಕಾಗಿದ್ದವು ಎಂದು ಹೇಳಿದೆ. ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಪ್ರಭುತ್ವವು ಯಾವ ಸಂದರ್ಭದಲ್ಲಿ ತಾರತಮ್ಯ ತೋರಿದೆ ಎಂಬುದನ್ನು ಪ್ರತಿಷ್ಠಾನ ವಿಷದಪಡಿಸಿಲ್ಲ, ಯಾವ ಸಂದರ್ಭದಲ್ಲಿ ಅವರ ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆ ಎಂಬುದನ್ನು ಹೇಳಿಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ಪುರುಷ ಸಲಿಂಗ ಕಾಮಿಗಳು ಎಚ್ಐವಿ ವೈರಸ್‌ಗೆ ಬಲಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸಲ್ಲಿಸಿದ ಪ್ರಮಾಣಪತ್ರವೊಂದರಿಂದಲೇ, ಸಲಿಂಗ ಕಾಮಿಗಳು ಪ್ರಭುತ್ವದಿಂದ ತಾರತಮ್ಯಕ್ಕೆ ಗುರಿಯಾಗುತ್ತಿದ್ದಾರೆ ಎನ್ನಲು ಸಾಧ್ಯವಿಲ್ಲ. ದೇಶದ ಒಟ್ಟು ಜನಸಂಖ್ಯೆಯಲ್ಲಿ ತೀರಾ ಸಣ್ಣ ಪ್ರಮಾಣದ ಸಂಖ್ಯೆ ಸಲಿಂಗ ಕಾಮಿಗಳದ್ದು. ಸೆಕ್ಷನ್ 377ನ್ನು ಹೈಕೋರ್ಟ್ ಅರ್ಥೈಸಿಕೊಂಡ ಬಗೆ ಸರಿಯಾಗಿಲ್ಲ. ಕಳೆದ 150ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸದಲ್ಲಿ, 200ಕ್ಕಿಂತ ಕಡಿಮೆ ಜನ ಈ ಸೆಕ್ಷನ್ ಅಡಿ ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ, ಸೆಕ್ಷನ್ 377, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎನ್ನಲಾಗದು.
ಹೈಕೋರ್ಟ್ ಆದೇಶ ತಪ್ಪಾಗಿದ್ದೇಕೆ?: ಯಾವುದೇ ಕಾಯ್ದೆ ಅಥವಾ ಸೆಕ್ಷನ್‌ನ ಸಾಂವಿಧಾನಿಕ ಮಾನ್ಯತೆ ಕುರಿತು ನಿರ್ಧಾರ ಕೈಗೊಳ್ಳುವಾಗ, ಅದನ್ನು ರೂಪಿಸಿದ ಶಾಸನಸಭೆಯ ಬಗ್ಗೆ ಗೌರವ ಹೊಂದಿರಬೇಕು. ಐಪಿಸಿಗೆ ಅಂದಾಜು 30 ತಿದ್ದುಪಡಿಗಳನ್ನು ತರಲಾಗಿದೆ. ಲೈಂಗಿಕ ಹಲ್ಲೆ ಕುರಿತ ಅಧ್ಯಾಯವನ್ನು ವಿಸ್ತೃತವಾಗಿ ತಿದ್ದುಪಡಿಗೆ ಒಳಪಡಿಸಲಾಗಿದೆ. ಆದರೆ ಕಾನೂನು ಆಯೋಗದ ವರದಿಯಲ್ಲಿ ನಿರ್ದಿಷ್ಟ ಶಿಫಾರಸುಗಳು ಇದ್ದಾಗ್ಯೂ, ಸೆಕ್ಷನ್ 377ನ್ನು ತಿದ್ದುಪಡಿಗೆ ಒಳಪಡಿಸಲು ಸಂಸತ್ತು ಮುಂದಾಗಲಿಲ್ಲ. ಈ ಸೆಕ್ಷನ್, ಕಾನೂನಾಗಿ ಮುಂದುವರಿಯಬೇಕು ಎಂಬುದು ಶಾಸನಸಭೆಯ ಇಚ್ಛೆ ಎಂಬುದನ್ನು ಇದು ತೋರಿಸುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಲಾಗಿದೆ.
‘ನಿಸರ್ಗದ ನಿಯಮಕ್ಕೆ ಪೂರಕವಾಗಿ ಲೈಂಗಿಕ ಸಂಪರ್ಕ ಹೊಂದುವವರು’ ಮತ್ತು ‘ನಿಸರ್ಗದ ನಿಯಮಕ್ಕೆ ವಿರುದ್ಧವಾಗಿ ಲೈಂಗಿಕ ಸಂಪರ್ಕ ಹೊಂದುವವರು’ ಬೇರೆ ಬೇರೆ. ಸೆಕ್ಷನ್ 377, ಒಂದು ನಿರ್ದಿಷ್ಟ ಅಪರಾಧವನ್ನು ಗುರುತಿಸಿ, ಅದಕ್ಕೆ ಏನು ಶಿಕ್ಷೆ ಎಂಬುದನ್ನು ನಿರ್ಧರಿಸಿದೆ. ಇಷ್ಟು ಹೇಳಿದ ಮಾತ್ರ ಅದು ಸಂವಿಧಾನಕ್ಕೆ ವಿರುದ್ಧವಾಗಿದೆ ಎನ್ನಲಾಗದು ಎಂಬುದು ಸುಪ್ರೀಂ ಕೋರ್ಟ್ ಅಭಿಮತ.
ಶಿಕ್ಷೆ ನಿರ್ಧರಿಸುವ ಕಾನೂನು, ಅಪರಾಧವನ್ನು ಖಚಿತವಾಗಿ ವ್ಯಾಖ್ಯಾನಿಸಬೇಕು. ಇದನ್ನು ಮನನ ಮಾಡಿಕೊಂಡರೆ, ಸೆಕ್ಷನ್ 377 ವ್ಯಾಖ್ಯೆ ಜಾಳುಜಾಳಾಗಿದೆ, ಯಾರ ವಿರುದ್ಧ ಇದನ್ನು ಪ್ರಯೋಗಿಸಬೇಕು ಎಂಬ ಬಗ್ಗೆ ಖಚಿತತೆ ಇಲ್ಲ ಎನ್ನುವ ವಾದ ಬಿದ್ದುಹೋಗುತ್ತದೆ. ಎ.ಕೆ. ರಾಯ್ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣ ಹಾಗೂ ಕೆ.ಎ. ಅಬ್ಬಾಸ್ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ನೀಡಿದ್ದ ಆದೇಶಗಳನ್ನು ಇಲ್ಲೂ ಉಲ್ಲೇಖಿಸಲಾಗಿದೆ.
ಸಂವಿಧಾನ ನಮಗೆ ನೀಡಿರುವ ರಕ್ಷಣೆಗಳಲ್ಲಿ ಖಾಸಗಿತನದ ಹಕ್ಕು ಸಹ ಒಂದು. ಎಲ್ಲ ರೀತಿಯ ಚರ್ಚೆಗಳಿಗೆ ಒಳಗಾದ ನಂತರವೇ, ಸಂವಿಧಾನದ 21ನೇ (ಜೀವಿಸುವ ಹಕ್ಕು) ಕಲಂ ಮೂಡಿಬಂದಿದೆ. ಆದರೆ ಖರಕ್ ಸಿಂಗ್ ಮತ್ತು ಉತ್ತರ ಪ್ರದೇಶ ಸರ್ಕಾರದ ನಡುವಿನ ಪ್ರಕರಣ ಹಾಗೂ ಗೋವಿಂದ ಮತ್ತು ಮಧ್ಯಪ್ರದೇಶ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ‘ಖಾಸಗಿತನದ ಹಕ್ಕು ಪ್ರಶ್ನಾತೀತವಲ್ಲ, ನಿರಂಕುಶವಾಗಿದ್ದೂ ಅಲ್ಲ’ ಎಂಬುದನ್ನು ವಿಷದೀಕರಿಸುತ್ತದೆ. ಸಂವಿಧಾನದ 21ನೇ ಕಲಂ ಅನ್ನು ಆಯಾ ಪ್ರಕರಣಗಳ ಸಂದರ್ಭವನ್ನು ಗಮನದಲ್ಲಿರಿಸಿಕೊಂಡೇ ನಿರ್ವಚಿಸಬೇಕು ಎನ್ನುವುದು ಸುಪ್ರೀಂ ಕೋರ್ಟ್ ಹೇಳಿಕೆ. ಇದನ್ನು ಗಮನಿಸಿದಾಗ, ವಯಸ್ಕರು ಖಾಸಗಿಯಾಗಿ ಸಮ್ಮತಿಯೊಂದಿಗೆ ನಡೆಸುವ ಸಲಿಂಗ ಕಾಮವನ್ನು ಅಪರಾಧ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎನ್ನಲಾಗದು. ಯಾವುದೇ ನಿರ್ದಿಷ್ಟ ಪ್ರಕರಣದಲ್ಲಿ ಅಪರಾಧವನ್ನು ಐಪಿಸಿಯ ಸೆಕ್ಷನ್ 377 ಮೂಲಕ ನಿರ್ಧರಿಸಬೇಕೇ ಎಂಬುದನ್ನು ಕ್ರಿಮಿನಲ್ ನ್ಯಾಯಾಲಯದ ನಿರ್ಧಾರಕ್ಕೆ ಬಿಟ್ಟಿದೆ ಸುಪ್ರೀಂ ನ್ಯಾಯಪೀಠ.
ಸಲಿಂಗ ಕಾಮಿಗಳು ಶೋಷಣೆಗೆ ಸದಾ ಒಳಗಾಗುತ್ತಿರಲು ಈ ಸೆಕ್ಷನ್ ಅನುವು ಮಾಡಿಕೊಡುತ್ತದೆ ಎಂಬ ವಾದವನ್ನೂ ಸುಪ್ರೀಂ ಪೀಠ ಒಪ್ಪಿಲ್ಲ. ಯಾವುದೇ ಸೆಕ್ಷನ್ ಅನ್ನು ದುರ್ಬಳಕೆ ಮಾಡಿಕೊಳ್ಳಬಹುದು, ಅದನ್ನು ಬಳಸಿ ಇನ್ನೊಬ್ಬರನ್ನು ಶೋಷಿಸಬಹುದು ಎಂಬ ಸಾಧ್ಯತೆಯನ್ನು ಮುಂದಿಟ್ಟ ಮಾತ್ರಕ್ಕೆ ಆ ಸೆಕ್ಷನ್ ಸಂವಿಧಾನ ವಿರೋಧಿ ಎನ್ನಲಾಗದು ಎಂದು ಪೀಠ ತೀರ್ಪಿನಲ್ಲಿ ಹೇಳಿದೆ. ಈ ತೀರ್ಪನ್ನು ಸೂಕ್ಷ್ಮವಾಗಿ ಅವಲೋಕಿಸದಿದ್ದರೆ ಇದು ಖಾಸಗಿತನದ ಹಕ್ಕು ಮತ್ತು ದೈಹಿಕ ಸಾರ್ವಭೌಮತ್ವಕ್ಕೆ ವಿರುದ್ಧವಾಗಿದೆ ಎನ್ನಬಹುದು. ಈ ತೀರ್ಪು ಎಷ್ಟು ಸರಿ, ಎಷ್ಟು ತಪ್ಪು ಎಂಬ ಪ್ರಶ್ನೆಗಳನ್ನು ಪಕ್ಕಕ್ಕಿಟ್ಟು, ಸಲಿಂಗ ಕಾಮಿಗಳಿಗೆ ಸಂವಿಧಾನವೇ ನೀಡಿರುವ ಹಕ್ಕುಗಳನ್ನು ಕಾಯ್ದೆಯ ಮೂಲಕ ಗೌರವಿಸಲು ಇದೊಂದು ಸುವರ್ಣ ಅವಕಾಶ ಎಂದು ನಮ್ಮ ಶಾಸನಸಭೆಗಳು ಮುಂದಡಿ ಇಡಬೇಕು. ನಮ್ಮ ಸಂವಿಧಾನ ಮಾನವ ಹಕ್ಕುಗಳನ್ನು ಸಲಿಂಗಕಾಮಿಗಳಿಗೂ ನೀಡಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಎದುರು ಇಟ್ಟಿದ್ದ ಪ್ರಶ್ನೆಗಳಿಗೆ ಶಾಸನಗಳ ಮೂಲಕ ಉತ್ತರ ಹೇಳಿ, ಸಲಿಂಗ ಕಾಮಿಗಳಿಗೂ ಘನತೆಯ ಬದುಕು ರೂಪಿಸಿಕೊಳ್ಳುವ ಅವಕಾಶ ಕಲ್ಪಿಸಲು ಇದು ಸಕಾಲ.
(ಲೇಖಕರು : ರಾಜ್ಯ ಸರ್ಕಾರದ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)
ಅರವಿಂದ್ ನಾರಾಯಣ್
ದೆಹಲಿ ಹೈಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪನ್ನು ತಲೆಕೆಳಗು ಮಾಡುವಂತೆ ಸಲಿಂಗ ಕಾಮವನ್ನು ಅಪರಾಧ ಎಂದು ಘೋಷಿಸಿ ಸುಪ್ರೀಂ ಕೋರ್ಟ್ ನೀಡಿದ ಆದೇಶ ತಪ್ಪಾದ ಕಾರಣಗಳಿಗಾಗಿ ಹಲವು ವರ್ಷಗಳ ಕಾಲ ನೆನಪಿನಲ್ಲಿ ಇರುವಂಥದ್ದು.
ನಾಜ್ ಪ್ರತಿಷ್ಠಾನ ವಿರುದ್ಧ ದೆಹಲಿ ಸರ್ಕಾರ (ಎನ್‌ಸಿಆರ್) ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್, ಮಹಿಳಾ ಮತ್ತು ಪುರುಷ ಸಲಿಂಗಿಗಳು, ದ್ವಿಲಿಂಗಿಗಳು ಹಾಗೂ ಲಿಂಗ ಪರಿವರ್ತನೆಗೆ ಒಳಗಾದವರು (ಎಲ್‌ಜಿಬಿಟಿ) ದೇಶದ ಪೂರ್ಣ ನಾಗರಿಕರು ಹಾಗೂ ಸಾರ್ವಜನಿಕ ಅಭಿಪ್ರಾಯದ ಮೇರೆಗೆ ಅವರ ವಿರುದ್ಧ ತಾರತಮ್ಯ ಎಸಗಲಾಗದು ಎಂದು ಹೇಳಿತ್ತು.
ಈ ತೀರ್ಪು ನೀಡುವಾಗ ದೆಹಲಿ ಹೈಕೋರ್ಟ್, ‘ಸಾಂವಿಧಾನಿಕ ನೈತಿಕತೆ’ ಕುರಿತು ಡಾ. ಅಂಬೇಡ್ಕರ್ ಅವರು ಹೊಂದಿದ್ದ ಪರಿಕಲ್ಪನೆಯನ್ನು ಉಲ್ಲೇಖಿಸಿತ್ತು. ಬಹುಸಂಖ್ಯಾತರ ನೈತಿಕತೆ ಏನೇ ಆಗಿರಲಿ, ಅಲ್ಪಸಂಖ್ಯಾತರು ಭಾರತದ ಪೂರ್ಣ ಪೌರರಾಗಿರುತ್ತಾರೆ ಎಂದು ಕೋರ್ಟ್ ಹೇಳಿತ್ತು. ಎಲ್ಲರನ್ನೂ ಒಳಗೊಳ್ಳುವುದು ಭಾರತದ ಸಂವಿಧಾನದ ತಿರುಳಾಗಿದೆ. ಯಾವುದೇ ಗುಂಪಿನ ವಿರುದ್ಧದ ತಾರತಮ್ಯವನ್ನು ಸಂವಿಧಾನ ಸಹಿಸದು ಎಂಬ ಜವಾಹರಲಾಲ್ ನೆಹರೂ ಅವರ ಹೇಳಿಕೆಯನ್ನೂ ಕೋರ್ಟ್ ಆ ಸಂದರ್ಭದಲ್ಲಿ ನೆನಪಿಸಿಕೊಂಡಿತ್ತು.
ಇದಕ್ಕೆ ಸಂಪೂರ್ಣ ವಿರುದ್ಧವಾಗಿ ಸುಪ್ರೀಂ ಕೋರ್ಟ್, ಸುರೇಶ್‌ಕುಮಾರ್ ವರ್ಸಸ್ ನಾಜ್ ಪ್ರತಿಷ್ಠಾನದ ನಡುವಿನ ಪ್ರಕರಣದಲ್ಲಿ ‘ಎಲ್‌ಜಿಬಿಟಿ’ಗಳು ಸಮಾಜದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಇದ್ದಾರೆ. ಹಾಗಾಗಿ ಅವರು ತಮ್ಮ ಹಕ್ಕಿನ ಉಲ್ಲಂಘನೆಯ ಕುರಿತು ಮಾತನಾಡುವಂತಿಲ್ಲ. 377ನೇ ಸೆಕ್ಷನ್ ಬಳಕೆ ಕುರಿತಂತೆ ಕೇವಲ 200 ಪ್ರಕರಣಗಳು ವರದಿಯಾಗಿವೆ. ಹಾಗಾಗಿ ಸೆಕ್ಷನ್ 377ನ್ನು ಯಾರ ವಿರುದ್ಧವಾದರೂ ಅನ್ವಯಿಸಿದಲ್ಲಿ ಅದು ಖಾಸಗಿತನ, ಘನತೆ ಮತ್ತು ಸಮಾನತೆಯ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಸುಪ್ರೀಂ ಕೋರ್ಟ್‌ನ ಈ ತರ್ಕ ಕಿರಿಕಿರಿ ಹುಟ್ಟಿಸುವಂತಹದ್ದು. ನೀವು ಅತ್ಯಲ್ಪ ಸಂಖ್ಯೆಯಲ್ಲಿ ಇದ್ದರೆ ನಿಮ್ಮ ಹಕ್ಕಿನ ಉಲ್ಲಂಘನೆಯ ಕುರಿತು ದೂರು ಸಲ್ಲಿಸುವಂತಿಲ್ಲ ಎಂಬುದು ಸುಪ್ರೀಂ ಕೋರ್ಟ್ ತೀರ್ಪಿನ ತಾತ್ಪರ್ಯ. ನಮ್ಮ ಸಾಂವಿಧಾನಿಕ ಪರಂಪರೆಗೆ ವಿರುದ್ಧವಾದ ಅಭಿಪ್ರಾಯ ಇದು. ಬಹುಸಂಖ್ಯಾತರೇ ಇರಲಿ, ಅಲ್ಪಸಂಖ್ಯಾತರೇ ಇರಲಿ ಎಲ್ಲ ನಾಗರಿಕರಿಗೂ ಮೂಲಭೂತ ಹಕ್ಕು ಸಮಾನವಾಗಿ ಅನ್ವಯವಾಗುವುದು ಭಾರತದ ಸಂವಿ-ಧಾನದ ಪ್ರಮುಖ ಲಕ್ಷಣ. ಅಲ್ಪಸಂಖ್ಯಾತರು ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ ಹಾಗೂ ಅವರಿಗೆ ಧ್ವನಿ ಎತ್ತಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಬಹುಸಂಖ್ಯಾತರು ತಮ್ಮ ಮೂಗಿನ ನೇರಕ್ಕೆ ನಡೆದುಕೊಳ್ಳಬಹುದು ಎಂದಾದಲ್ಲಿ ನಾವಿನ್ನೂ ಯಾವುದೋ ಕರಾಳ ಯುಗದಲ್ಲಿ ಇದ್ದೇವೆ ಎಂದರ್ಥ.
ಈ ತೀರ್ಪಿನಲ್ಲಿ ಮತ್ತೊಂದು ಆಘಾತಕಾರಿಯಾದ ವಿಚಾರವಿದೆ. ಸ್ವಾತಂತ್ರ್ಯಪೂರ್ವದಲ್ಲಿ ರೂಪಿಸಲಾದ ಕಾಯ್ದೆಗಳನ್ನು ಸಹ ಸಂಸತ್ತು ಪರಿಶೀಲಿಸಬೇಕು ಎಂದು ನ್ಯಾಯಪೀಠ ಹೇಳಿದೆ. ಸಂಸತ್ತು ಕಳೆದ ಆರು ದಶಕಗಳ ಅವಧಿಯಲ್ಲಿ ಒಂದು ಬಾರಿಯೂ ಈ ಕಾಯ್ದೆಗೆ ತಿದ್ದುಪಡಿ ತಂದಿರದ ಕಾರಣ, ಬ್ರಿಟಿಷರು ರೂಪಿಸಿದ್ದ ಕಾಯ್ದೆಯ ಸಿಂಧುತ್ವದ ಕುರಿತು ನಿರ್ಣಯ ನೀಡಲು ತಾನು ಸಿದ್ಧವಿಲ್ಲ ಎಂದೂ ಕೋರ್ಟ್ ತಿಳಿಸಿದೆ. ಸಂಸತ್ತಿನ ಸಾರ್ವಭೌಮತ್ವವನ್ನು ಎತ್ತಿಹಿಡಿಯುವ ಭರದಲ್ಲಿ, ಸಂಸತ್ತು ವ್ಯಕ್ತಪಡಿಸುವ ಜನಪ್ರಿಯ ಅಭಿಪ್ರಾಯ ಏನೇ ಇರಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವುದು ಕೋರ್ಟ್‌ನ ಕರ್ತವ್ಯ ಎಂಬ ಮಹತ್ವದ ಅಂಶವನ್ನು ನ್ಯಾಯಪೀಠ ಮರೆತುಬಿಟ್ಟಿದೆ.
ಈ ಎಲ್ಲ ಕಾನೂನಿನ ಅಂಶಗಳ ಹೊರತಾಗಿ ಈ ತೀರ್ಪಿನಲ್ಲಿ ಪ್ರಸ್ತಾಪಿಸಲಾದ ಅಸಹಜ ಲೈಂಗಿಕತೆಯ ವಿಚಾರ ಕಿರಿಕಿರಿ ಹುಟ್ಟಿಸುವಂತಹದ್ದು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ‘ಎಲ್‌ಜಿಬಿಟಿ’ ಸಮುದಾಯದ ಅಸ್ತಿತ್ವವೇ ಈ ನ್ಯಾಯಮೂರ್ತಿಗಳಿಗೆ ಮುಜುಗರ ತಂದಂತಿದೆ. ಅಷ್ಟೇ ಅಲ್ಲ, ಒಟ್ಟಾರೆ ಲೈಂಗಿಕತೆಯ ಕುರಿತಾಗಿಯೇ ನ್ಯಾಯಮೂರ್ತಿಗಳಿಗೆ ಮುಜುಗರ ಇರುವಂತಿದೆ. ತೀರ್ಪಿನ ಒಂದು ಭಾಗದಲ್ಲಿ ‘ಬಾಯಿ ಇರುವುದು ಲೈಂಗಿಕ ಕ್ರಿಯೆ ನಡೆಸುವುದಕ್ಕಲ್ಲ’ ಎಂದೂ ಕೋರ್ಟ್ ಹೇಳಿದೆ. ವ್ಯಕ್ತಿಗಳ ಲೈಂಗಿಕ ಜೀವನ ಹೇಗಿರಬೇಕು ಎಂದು ನಿಯಮ ರೂಪಿಸುವುದು ಖಂಡಿತವಾಗಿಯೂ ಕೋರ್ಟ್‌ನ ಕೆಲಸವಲ್ಲ. ಲೈಂಗಿಕ ನಡವಳಿಕೆ ಹೇಗಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಸುಪ್ರೀಂ ಕೋರ್ಟ್, ಎಲ್ಲ ಬಗೆಯ ಲೈಂಗಿಕ ನಡವಳಿಕೆ ಹೊಂದಿದ ವ್ಯಕ್ತಿಗಳ ಖಾಸಗಿ ಜೀವನದಲ್ಲಿ ಮೂಗು ತೂರಿಸಿದೆ.
ಸೆಕ್ಷನ್ 377, ವ್ಯಕ್ತಿಗಳ ಖಾಸಗಿತನ, ಘನತೆ ಹಾಗೂ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂಬ ವಿಚಾರವನ್ನು ಚರ್ಚಿಸಲು ಇಷ್ಟಪಡದ ಕೋರ್ಟ್‌ಗೆ, ಸೂಕ್ತ ಲೈಂಗಿಕ ನಡವಳಿಕೆ ಹೇಗಿರಬೇಕು ಎಂಬ ಬಗ್ಗೆ ತೀರ್ಮಾನ ನೀಡುವಾಗ ಕೊಂಚವೂ ಅಪರಾಧಿಪ್ರಜ್ಞೆ ಕಾಡಿದಂತಿಲ್ಲ. ‘ಎಲ್‌ಜಿಬಿಟಿ’ಗಳು ಘನತೆಯಿಂದ ಬದುಕುವ ಹಕ್ಕಿನ ಕುರಿತು ನ್ಯಾಯಪೀಠ, ಅಸಡ್ಡೆ ವ್ಯಕ್ತಪಡಿಸಿರುವುದರಿಂದ ಸುಪ್ರೀಂ ಕೋರ್ಟ್‌ನ ಶ್ರೇಷ್ಠ ಇತಿಹಾಸಕ್ಕೆ ಅಪಚಾರ ಮಾಡಿದಂತಾಗಿದೆ.
ಭವಿಷ್ಯದಲ್ಲಿ ಜನ ಸುಪ್ರೀಂ ಕೋರ್ಟ್ ಬಗ್ಗೆ ಹಗುರವಾಗಿ ಮಾತನಾಡಬೇಕಾದರೆ ಮೂರು ತೀರ್ಪುಗಳು ನೆನಪಾಗುತ್ತವೆ. 1975ರಲ್ಲಿ ಸುಪ್ರೀಂ ಕೋರ್ಟ್, ಇಂದಿರಾ ಗಾಂಧಿ ಸರ್ಕಾರ ಘೋಷಿಸಿದ್ದ ತುರ್ತು ಪರಿಸ್ಥಿತಿ ಎತ್ತಿಹಿಡಿದಿತ್ತು. 1979ರ ಮಥುರಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಅತ್ಯಾಚಾರಕ್ಕೊಳಗಾದ ಮಹಿಳೆಯರನ್ನು ಅಪನಂಬಿಕೆಯಿಂದ ನೋಡಬೇಕು ಎಂಬ ಧಾಟಿಯಲ್ಲಿ ತೀರ್ಪು ನೀಡಿತ್ತು. ಈಗ 2013ರಲ್ಲಿ ಬ್ರಿಟಿಷ್ ಕಾಲದ ಕಾನೂನಿನಿಂದ ಘನತೆ, ಬದುಕುವ ಹಕ್ಕನ್ನು ಕಳೆದುಕೊಂಡ ‘ಎಲ್‌ಜಿಬಿಟಿ‘ ಸಮುದಾಯದವರು ಮನುಷ್ಯರೇ ಅಲ್ಲ ಎಂಬಂತೆ ಕೋರ್ಟ್ ಮಾತನಾಡಿದೆ.
(ಲೇಖಕರು: ಆಲ್ಟರ್‌ನೇಟಿವ್ ಲಾ ಫೋರಂ ಸ್ಥಾಪಕ ಸದಸ್ಯ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗೆ ಹೋರಾಡುತ್ತಿರುವ ವಕೀಲ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.