ADVERTISEMENT

ಹುತ್ತ ಬಡಿಯುವ ಈ ಕಸರತ್ತು...

ಉತ್ತರ ಕರ್ನಾಟಕ ಅಭಿವೃದ್ಧಿ ಹೇಗೆ?

ವೈ.ಎಸ್‌.ವಿ.ದತ್ತ
Published 26 ಡಿಸೆಂಬರ್ 2014, 19:30 IST
Last Updated 26 ಡಿಸೆಂಬರ್ 2014, 19:30 IST

ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿ­ವೇಶನ­ದಲ್ಲಿ ಮೂರು ದಿನ ಉತ್ತರ ಕರ್ನಾ­ಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾ­ಯಿತು. ಆಗಾಗ್ಗೆ  ಕೇಳಿಬರುವ ಪ್ರತ್ಯೇಕತೆಯ ಕೂಗಿನ ಹಿನ್ನೆಲೆಯಲ್ಲಿ ಈ ಚರ್ಚೆಗೆ ವಿಶೇಷ ಮಹತ್ವ ಲಭ್ಯವಾಗಿತ್ತು. ಆದರೆ ಈ ಸಂದರ್ಭದಲ್ಲಿ ಎದ್ದುಕಂಡ ಅಂಶ­ವೆಂದರೆ, ಸಮಸ್ಯೆಗಳ ಮೂಲಕ್ಕೆ ಕೈ ಹಾಕುವ ಪ್ರಯತ್ನ ಯಾರಿಂದಲೂ ನಡೆಯದೇ ಹೋದದ್ದು. ಬಹುತೇಕರಿಗೆ ಸಮಸ್ಯೆಗಳ ಮೂಲ ಕಾರಣ ಹುಡುಕುವುದು ಅಪಥ್ಯವಾಗಿತ್ತು.

ಏಕೆಂದರೆ ರಾಜಕೀಯ ಲಾಭ-ನಷ್ಟ ಲೆಕ್ಕ ಹಾಕುವ ನಮ್ಮಂತಹ ರಾಜಕಾರಣಿಗಳಿಗೆ ಮತ್ತು ಅದಕ್ಕೆ ತಕ್ಕಂತೆ ನಮಗಾಗದವರನ್ನು

ಖಳನಾಯಕರಂತೆ ಚಿತ್ರಿಸುವುದಕ್ಕೆ ‘ಉತ್ತರ ಕರ್ನಾಟಕದ ಸಮಸ್ಯೆ ಮತ್ತು ಅನಭಿವೃದ್ಧಿ’ ಎಂಬ ವಿಷಯ ನಿರಂತರ ವಿವಾದಾತ್ಮಕ ಹಾಗೂ ಜೀವಂತ ಆಗಿರಬೇಕಷ್ಟೆ. ಹಾಗಾಗಿ ಅಧಿವೇಶನದ ಚರ್ಚೆ ಅಪ್ರಿಯ ಸತ್ಯಗಳನ್ನು ಬಿಚ್ಚಿ, ಹುತ್ತದೊಳಗಿನ ಹಾವನ್ನು ಬಡಿ­ಯುವ ಸಾಹಸಕ್ಕೆ ಕೈಹಾಕದೆ, ಬರೀ ಹುತ್ತ ಬಡಿಯುವ ಕಸರತ್ತಿಗಷ್ಟೇ ಸೀಮಿತವಾಯಿತು.

ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಚಾರಿತ್ರಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕಾರಣಗಳಿವೆ.  ಚಾರಿತ್ರಿಕವಾಗಿ ನೋಡಿ­ದರೆ, ಮೈಸೂರು ಸಂಸ್ಥಾನ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಆಳ್ವಿಕೆ­ಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿತು. ಆದರೆ ಇದೇ ಮಾತನ್ನು ನಾವು ಹೈದರಾ­ಬಾದ್ -ಕರ್ನಾಟಕದ ಮಟ್ಟಿಗೆ ಹೇಳಲಾಗದು. ನಿರಂತರ ನಿಜಾಮರ ಆಳ್ವಿಕೆಯಲ್ಲಿ ಸಿಲುಕಿದ ಹೈದರಾಬಾದ್- ಕರ್ನಾಟಕ  ತೀವ್ರ ತುಳಿತ ಮತ್ತು ಶೋಷಣೆಗೆ ಒಳಗಾಯಿತು. ಹೀಗಾಗಿ ಅಂದು ಸೃಷ್ಟಿ­ಯಾದ ಬಡವ–ಶ್ರೀಮಂತರ ನಡುವಿನ ಕಂದರ ಇಂದಿಗೂ ಉಳಿದಿದೆ.

ಮುಂಬೈ- ಕರ್ನಾಟಕ ಅಂದು ಬಾಂಬೆ ರಾಜ್ಯಕ್ಕೆ ಸೇರಿತ್ತು. ಅಷ್ಟರ ಮಟ್ಟಿಗೆ ಅಲ್ಲಿ ಪ್ರಜಾಸತ್ತೆಯ ಗಾಳಿ ಸುಳಿಯುತ್ತಿತ್ತು. ಹಾಗಾಗಿ ಹೈದರಾ­ಬಾದ್- ಕರ್ನಾಟಕಕ್ಕೆ ಹೋಲಿಸಿದರೆ ಇಲ್ಲಿನ ಪರಿಸ್ಥಿತಿ ಸ್ವಲ್ಪ ವಾಸಿಯಾಗಿತ್ತು ಎನ್ನಬಹುದೇನೋ. ಆದರೆ ಒಟ್ಟಾರೆಯಾಗಿ ಉತ್ತರ ಕರ್ನಾ­ಟಕದ ಅಭಿವೃದ್ಧಿ ಪರಿಸ್ಥಿತಿ ದಕ್ಷಿಣ ಕರ್ನಾಟಕದ ಅಭಿವೃದ್ಧಿ­ಗಿಂತ ಸಾಕಷ್ಟು ಹಿಂದೆ ಇತ್ತು ಎಂಬ ಸತ್ಯವನ್ನು ನಾವು ಒಪ್ಪಿಕೊಳ್ಳಲೇಬೇಕು.

ರಾಜಕೀಯ ಸತ್ಯಗಳು: 1983ರಿಂದ -1991ರವರೆಗೆ ಸುಮಾರು ಏಳೆಂಟು ವರ್ಷಗಳ ಕಾಲ ಈ ರಾಜ್ಯದ ಚುಕ್ಕಾಣಿ ಹಿಡಿದವರು ಉತ್ತರ ಕರ್ನಾಟಕ ಭಾಗದವರೇ ಆದ ರಾಮಕೃಷ್ಣ ಹೆಗಡೆ, ಎಸ್.ಆರ್.­ಬೊಮ್ಮಾಯಿ ಮತ್ತು ವೀರೇಂದ್ರ ಪಾಟೀಲರು. ಆ ಅವಧಿಯ ಸದನದ ಕಲಾಪವನ್ನು ಅಧ್ಯಯನ ಮಾಡಿದರೆ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಆ ಭಾಗ, ಈ ಭಾಗ ಎಂಬ ಭೇದವಿಲ್ಲದೆ ಶಾಸಕರೆಲ್ಲರೂ ರಚನಾತ್ಮಕವಾದ ಸಲಹೆಗಳನ್ನು ನೀಡಿರುವುದು ವೇದ್ಯವಾಗುತ್ತದೆ. 

ಅಂದೇ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳು, ಪ್ರತ್ಯೇಕ ರೈಲ್ವೆ ವಲಯ, ವಿಜಯನಗರದ ಉಕ್ಕು, ಹುಬ್ಬಳ್ಳಿ–-ಅಂಕೋಲ, ಹರಿಹರ-–ಕೊಟ್ಟೂರು ಇತ್ಯಾದಿ ರೈಲು ಮಾರ್ಗಗಳು ಹಾಗೂ ಹತ್ತಾರು ವಿಷಯಗಳ ಬಗ್ಗೆ ಸದನದಲ್ಲಿ ವ್ಯಾಪಕ ಚರ್ಚೆ ನಡೆದಿದೆ. ಜೊತೆಗೆ ಕೃಷ್ಣಾ ಮೇಲ್ದಂಡೆ ಯೋಜನೆಗೆ 70ರ ದಶಕದ ಆರಂಭದಲ್ಲಿ ಅಂದಿನ ಅಂದಾಜು ವೆಚ್ಚ ರೂ. 25 ಕೋಟಿಗೆ ಪ್ರತಿಯಾಗಿ ನಿಜಲಿಂಗಪ್ಪನವರ ಸರ್ಕಾರ ರೂ. 3 ಕೋಟಿ ನಿಗದಿಪಡಿಸಿದ್ದು,  ನಮಗೆ ಬರಬೇಕಾಗಿದ್ದ ಪ್ರತ್ಯೇಕ ರೈಲ್ವೆ ವಲಯ ಆಂಧ್ರದ ಪಾಲಾಗಿದ್ದು, ನೀರಾ­ವರಿ ಯೋಜನೆ­ಗಳಲ್ಲಿ ಆಂಧ್ರ ಸರ್ಕಾರ ನಮ್ಮ ಮೇಲೆ ಸವಾರಿ ಮಾಡಿದ್ದು, ವಿಜಯ­ನಗರದ ಉಕ್ಕಿಗೆ ತುಕ್ಕು ಹಿಡಿದು ಅದು ವಿಶಾಖ­ಪಟ್ಟಣದ ಪಾಲಾದದ್ದು ಎಲ್ಲವೂ ಅಂದು ಬಹುಚರ್ಚಿತ ವಿಷಯಗಳೇ ಆಗಿದ್ದವು. ಹಾಗಾಗಿ  ಅಂದಿನ ಆಡಳಿತಗಾರರು ಉತ್ತರ ಕರ್ನಾಟಕದ ಅಭಿ­ವೃದ್ಧಿಗೆ ಯಾವುದೇ ಕ್ರಾಂತಿಕಾರಕ ಕ್ರಮ ತೆಗೆದು­ಕೊಳ್ಳು­ವುದಕ್ಕೆ ಇಡೀ ಸದನ ಅವರಿಗೆ ಒತ್ತಾಸೆ­ಯಾಗಿ ನಿಂತಿತ್ತು ಎಂಬುದು ಇಲ್ಲಿ ಗಮನಾರ್ಹ.

ಮಧ್ಯದ ದೇವ­ರಾಜ ಅರಸು,  ಗುಂಡೂರಾವ್‌ ಅವರ ಆಳ್ವಿಕೆ­ಯಲ್ಲೂ ಪ್ರಧಾನ ಪಾತ್ರಧಾರಿ­ಗಳಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ಉತ್ತರ ಕರ್ನಾ­ಟಕದ ಅತಿರಥರೇ. ನಂತರದ ಕಾಲಘಟ್ಟದಲ್ಲಿ ಧರ್ಮ-­ಸಿಂಗ್, ಜಗದೀಶ ಶೆಟ್ಟರ್ ಅಲ್ಪಕಾಲ ರಾಜ್ಯದ ಚುಕ್ಕಾಣಿಯನ್ನೂ ಹಿಡಿ­ದಿ­ದ್ದರು. ಹೀಗೆ 58 ವರ್ಷಗಳ ರಾಜ್ಯದ ಆಳ್ವಿಕೆಯಲ್ಲಿ ಉತ್ತರ ಕರ್ನಾಟಕದ ಪ್ರತಿನಿಧಿಗಳೇ ಸುಮಾರು 27– -28 ವರ್ಷ ನ್ಯಾಯ ನೀಡುವ ಸ್ಥಾನದಲ್ಲಿದ್ದರು.

ಆರ್ಥಿಕ ಸಂಗತಿ: 2011– -12 ನೇ ಸಾಲಿನ ರಾಜ್ಯದ ಸರಾಸರಿ ತಲಾದಾಯಕ್ಕೆ ಹೋಲಿಸಿದರೆ ಅತಿ ಕಡಿಮೆ ತಲಾದಾಯ ಹೊಂದಿ­­­ರುವ 7 ಜಿಲ್ಲೆಗಳು ಉತ್ತರ ಕರ್ನಾಟಕದಲ್ಲಿದ್ದರೆ, 5 ಜಿಲ್ಲೆಗಳು  ದಕ್ಷಿಣ ಕರ್ನಾ­ಟಕದಲ್ಲಿವೆ. ಬೆಂಗಳೂರು ನಗರ ಬಿಟ್ಟು, ವಾಣಿಜ್ಯ ಬ್ಯಾಂಕು­ಗಳಲ್ಲಿರುವ ಜಿಲ್ಲಾವಾರು ಠೇವಣಿಯ ಲೆಕ್ಕ ಹಾಕಿ­ದರೆ ಕೌತುಕ­ವಾದ ಅಂಶ ಹೊರ­ಬೀಳುತ್ತದೆ. ಉತ್ತರ ಕರ್ನಾಟಕದ ಜಿಲ್ಲೆಗಳ ಬ್ಯಾಂಕು­ಗಳಲ್ಲಿರುವ ಠೇವಣಿ ಮೊತ್ತ ದಕ್ಷಿಣ ಕರ್ನಾಟಕದ ಜಿಲ್ಲೆಗಳ­ಲ್ಲಿರುವ ಬ್ಯಾಂಕುಗಳ ಠೇವಣಿ ಮೊತ್ತಕ್ಕಿಂತ ಅಧಿಕವಿರುವುದು ಕಂಡು­ಬರುತ್ತದೆ.

ಇಂತಹ ಅಂಕಿ ಅಂಶಗಳಿಂದ ನಮಗೆ ಉತ್ತರ ಕರ್ನಾಟಕದ ಸ್ಥಿತಿ ದಕ್ಷಿಣ ಕರ್ನಾಟಕಕ್ಕಿಂತ ಉತ್ತಮ­ವಾಗಿದೆ ಎಂಬ ಭಾವನೆ ಮೂಡಿ­ಸು­ತ್ತದೆ. ಆದರೂ ಬಡತನದ ಪ್ರಮಾಣದಲ್ಲಿ ವ್ಯತಿ­ರಿಕ್ತ­ವಾದ ಸತ್ಯ ಕಣ್ಣಿಗೆ ರಾಚು­ತ್ತದೆ. ಉತ್ತರ ಕರ್ನಾ­ಟಕದಲ್ಲಿ ಉತ್ತರ ಕನ್ನಡವೊಂದನ್ನು ಬಿಟ್ಟರೆ ಉಳಿ­ದೆಲ್ಲ ಜಿಲ್ಲೆಗಳ ಬಡತನ ರಾಜ್ಯದ ಸರಾಸರಿ ಬಡತನಕ್ಕಿಂತ ಹೆಚ್ಚಾಗಿದೆ. ಆದರೆ ದಕ್ಷಿಣ ಕರ್ನಾಟಕ­ದಲ್ಲಿ ಮೂರು ಜಿಲ್ಲೆಗಳು ಮಾತ್ರ ಹೆಚ್ಚು ಬಡತನ  ಹೊಂದಿವೆ. ಹಾಗಾದರೆ ಈ ವೈಪರೀತ್ಯಕ್ಕೆ ಕಾರಣವೇನು?

ಡಾ. ಡಿ.ಎಂ.ನಂಜುಂಡಪ್ಪ ವರದಿ ಉತ್ತರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಒಂದು ರೀತಿಯ ಬೈಬಲ್ಲೇ ಸರಿ.  2008ರಿಂದ ಈ ವರದಿ ಅನು­ಷ್ಠಾನಕ್ಕೆ  ಕ್ರಮ ಕೈಗೊಳ್ಳಲಾಗಿದೆ. ಇದುವರೆಗೆ ಸುಮಾರು ರೂ. 13,000 ಕೋಟಿಯನ್ನು  ವಿವಿಧ ಅಭಿವೃದ್ಧಿಯ ಉದ್ದೇಶಗಳಿಗಾಗಿ ವೆಚ್ಚ ಮಾಡ­ಲಾಗಿದೆ.  ಇನ್ನೂ ಸಾವಿರಾರು ಕೋಟಿ ರೂಪಾಯಿಗಳ ಬೇಡಿಕೆ ಇದೆ. 

ಈ ಮಧ್ಯೆ ಬಳ್ಳಾರಿ ಸೋನಿಯಾ ಪ್ಯಾಕೇಜ್, ಕಲಬುರ್ಗಿ ಸಚಿವ ಸಂಪುಟದ ಪ್ಯಾಕೇಜ್, ಬೀದರ್ ಸಚಿವ ಸಂಪುಟದ ಪ್ಯಾಕೇಜ್ - ಎಂಬಿತ್ಯಾದಿ ಸಾವಿರಾರು ಕೋಟಿ ರೂಪಾಯಿಗಳ ಪ್ಯಾಕೇಜುಗಳು ಘೋಷಿತವಾಗಿವೆ. ಆದಾಗ್ಯೂ ಉತ್ತರ ಕರ್ನಾಟಕದ ಹಿಂದುಳಿದಿರು­ವಿ­ಕೆಯ ವಿಷಯ ಮತ್ತೆ ಮತ್ತೆ ಪ್ರಸ್ತಾಪ ಆಗುತ್ತಲೇ ಇರುತ್ತದೆ. ಇನ್ನೂ ಸಾವಿ­­ರಾರು ಕೋಟಿ ರೂಪಾಯಿಯನ್ನು ಈ ಭಾಗ­ಕ್ಕಾಗೇ ಖರ್ಚು ಮಾಡಿದರೆ, ಆಗಲಾ­ದರೂ ಇಲ್ಲಿ  ಅಭಿವೃದ್ಧಿ ಕಾಣಬ­ಹುದು ಎಂದು  ಧೈರ್ಯವಾಗಿ ಹೇಳುವ ಸ್ಥಿತಿಯಲ್ಲಿ ನಾವಿಲ್ಲ. ಇದು ಇಲ್ಲಿ  ಸಮಸ್ಯೆಗೆ  ಮತ್ತೇನೋ ಕಾರಣಗಳಿವೆ ಎಂಬುದನ್ನು  ತೋರಿಸುತ್ತದೆ.

ಪಂಚ ಸೂತ್ರ: ನನ್ನ ಪ್ರಕಾರ, ಈ ಸಮಸ್ಯೆಗಳ ಪರಿಹಾರಕ್ಕೆ ಕಾರಣ ಮತ್ತು ಪರಿಹಾರ ಮುಖ್ಯವಾಗಿ ಐದು. ಮೊದಲನೆಯದಾಗಿ, ಪಾಳೇ-­ಗಾರಿಕೆ ಪಳೆಯುಳಿಕೆ ಮತ್ತು ಸಂಪತ್ತಿನ ಅಸಮಾನ ಹಂಚಿಕೆ ಈಗಲೂ ಮುಂದು­ವರಿ­ದಿರುವುದು. ಹಾಗಾಗಿ ಬಡವ, ಶ್ರೀಮಂತರ ನಡುವಿನ  ಅಂತರ ತೊಡೆಯಲು ಜನಜಾಗೃತಿ  ಮೂಡಿಸಬೇಕಾಗಿದೆ. 

ಎರಡನೆಯದಾಗಿ, ಭೌಗೋಳಿಕವಾಗಿ  ವಿಸ್ತಾರವಾಗಿರುವ ಈ ಪ್ರದೇಶ­ದಲ್ಲಿ ಹೋಬಳಿ ಮತ್ತು ಗ್ರಾಮ ಪಂಚಾಯಿತಿಗಳ ವಿಸ್ತೀರ್ಣ ಮತ್ತು ಜನಸಂಖ್ಯೆಯನ್ನು ವೈಜ್ಞಾನಿಕವಾಗಿ  ನಿಗದಿಪಡಿಸಿಲ್ಲ. ಅವು ದಕ್ಷಿಣ ಕರ್ನಾ­ಟಕದ ಹೋಬಳಿ, ಗ್ರಾಮ ಪಂಚಾಯಿತಿಗಳಿಗಿಂತ ಎರಡು, ಮೂರು ಪಟ್ಟು ಹೆಚ್ಚಾಗಿವೆ.  ಒಂದು ಸರ್ಕಾರಿ ಆದೇಶದ ಮೂಲಕ  ಪರಿ­ಹರಿ­ಸ­ಬಹುದಾದ ಈ ಸಮಸ್ಯೆಯನ್ನು  ಐದು ದಶಕಗಳಿಂದ ಪರಿಹರಿಸ­ಲಾಗಿಲ್ಲ.  ಸರ್ಕಾರ ಈ ಬಗ್ಗೆ ತಕ್ಷಣ ಕ್ರಮಕ್ಕೆ ಮುಂದಾಗಬೇಕು.



ಮೂರನೆಯದಾಗಿ, ಸರ್ಕಾರಿ ಸ್ವಾಮ್ಯದ  ಶಾಲೆ, ಕಾಲೇಜು, ಆಸ್ಪತ್ರೆ, ಕಾರ್ಖಾನೆಗಳಿಗಿಂತ ಈ ಭಾಗದಲ್ಲಿ ಖಾಸಗಿ ಸ್ವಾಮ್ಯದ ಸಂಸ್ಥೆಗಳ ಕಾರು­ಬಾರೇ ಹೆಚ್ಚು. ಇದಕ್ಕಾಗಿ ಈ ಭಾಗದಲ್ಲಿ ಆದಷ್ಟೂ  ಹೆಚ್ಚಿನ ಸಂಖ್ಯೆಯ ಸರ್ಕಾರಿ ಸ್ವಾಮ್ಯದ ಸವಲತ್ತು ಒದಗಿಸಲು ಮುಂದಾಗಬೇಕು.


ನಾಲ್ಕನೆಯದಾಗಿ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ. ಮೇಲ್ವರ್ಗ­­ದವರು, ಬಡವರು ಹಾಗೂ ಶೋಷಿತರ ನಡುವೆ ವಿಶ್ವಾಸದ  ಕೊರತೆ ಇದೆ. ಈ ಬಗ್ಗೆ ಈ ಭಾಗದ ಪ್ರಗತಿಪರ ಸಂಘಟನೆಗಳು, ಸಾಹಿತಿ­ಗಳು ಮತ್ತು ವಿಚಾರವಂತರು ಪೂರ್ವಗ್ರಹಪೀಡಿತರಾಗದೇ ಜನಜಾಗೃತಿ ಮತ್ತು ಜನಪರ ಹೋರಾಟಗಳನ್ನು ರೂಪಿಸಬೇಕು. 

ADVERTISEMENT
ಐದನೆಯದಾಗಿ, ರಾಜಕಾರಣಿಗಳ ಕ್ಷಣಿಕ ಲಾಭದ ಟಕ್ಕಾಟಿಕ್ಕಿ ಆಟ.  ಅಧಿ­ಕಾರದಲ್ಲಿದ್ದಾಗ  ಒಂದು ರೀತಿ,  ತಪ್ಪಿದಾಗ ಮತ್ತೊಂದು ರೀತಿ. ಒಮ್ಮೆ ಉತ್ತರ ಕರ್ನಾಟಕದ ವಿಷಯ ಮುಚ್ಚಿಡುವುದು. ಮತ್ತೊಮ್ಮೆ  ಅದನ್ನೇ ಚುನಾವಣಾ ಯುದ್ಧಾಸ್ತ್ರವಾಗಿ ಬಳ­ಸು­ವ ಸ್ವಾರ್ಥ ರಾಜ­ಕಾರಣಿಗಳ ಹುನ್ನಾರಕ್ಕೆ ಇತಿಶ್ರೀ ಹಾಡಲು ಸರ್ಕಾರ  ದಿಟ್ಟ ನಿರ್ಧಾರ ಮಾಡಬೇಕು. ಅದೆಂದರೆ, 1956­ರಿಂದ  ಇಲ್ಲಿ­ಯ­­ವರೆಗೆ ಆಡಳಿತ ನಡೆ­ಸಿದ ಪಕ್ಷಗಳು, ಸರ್ಕಾರಗಳ ಅವಧಿ­ಯಲ್ಲಿ ಉತ್ತರ, ದಕ್ಷಿಣ ಕರ್ನಾ­ಟಕ­ಗಳ ಅಭಿವೃದ್ಧಿಗೆ ವ್ಯಯಿಸಿರುವ ಹಣ, ಆಗಿ­ರುವ ಪ್ರಗತಿ, ಅಭಿ­ವೃದ್ಧಿ­ಯಾಗದೇ ಇದ್ದರೆ  ಕಾರಣಗಳೇನು ಎಂಬು­ದರ  ಅಧ್ಯಯನ ಮತ್ತು ಪರಾ­ಮರ್ಶೆ  ನಡೆಸಿ, ವರದಿ ನೀಡಲು ಒಂದು ಆಯೋಗ ರಚಿಸಬೇಕು.

ನೀರು ಹರಿಯಿತೆಲ್ಲಿಗೆ?
1956ರಲ್ಲಿ ದಕ್ಷಿಣ ಕರ್ನಾಟಕದಲ್ಲಿ ಇದ್ದ ನೀರಾವರಿಯ ಪ್ರಮಾಣ ಶೇಕಡ 19.5. ಈಗಿರುವ ಪ್ರಮಾಣ ಸುಮಾರು ಶೇಕಡ 25. ಅಂದರೆ ಈ 58 ವರ್ಷಗಳಲ್ಲಿ ಈ ಭಾಗದಲ್ಲಿ ನೀರಾವರಿ ಪ್ರಮಾಣ ಸುಮಾರು ಶೇ 5.5ರಷ್ಟು ಹೆಚ್ಚಾಗಿದೆ.

ಅದೇ 1956ರಲ್ಲಿ ಉತ್ತರ ಕರ್ನಾಟಕದಲ್ಲಿ ಇದ್ದ ನೀರಾವರಿ ಪ್ರಮಾಣ ಶೇಕಡ 3.5. ಈಗಿರುವ ಪ್ರಮಾಣ ಸುಮಾರು ಶೇ 26. ಉತ್ತರ ಕರ್ನಾಟಕದಲ್ಲಿ 58 ವರ್ಷಗಳಲ್ಲಿ ಆಗಿರುವ ನೀರಾವರಿ ಪ್ರಮಾಣದ ಹೆಚ್ಚಳ ಸುಮಾರು ಶೇ 22.5. ಹೀಗಾಗಿ, ನೀರಾವರಿ ವಿಷಯದಲ್ಲಿ ಉತ್ತರ ಕರ್ನಾಟಕಕ್ಕೆ ಎಲ್ಲ ಸರ್ಕಾರಗಳೂ ಒತ್ತು ನೀಡಿರುವುದನ್ನು ಎಲ್ಲರೂ ಒಪ್ಪಿಕೊಳ್ಳಲೇ ಬೇಕಾಗುತ್ತದೆ.

(ಲೇಖಕರು ಶಾಸಕರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.