*ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕನ್ನಡದ ಅನೇಕ ಸಾಹಿತಿಗಳು ಸ್ಪಷ್ಟವಾಗಿ ತಮ್ಮ ರಾಜಕೀಯ ನಿಲುವು ವ್ಯಕ್ತ ಪಡಿಸುತ್ತಿದ್ದಾರೆ. ಸಾಹಿತಿಗೆ ರಾಜಕೀಯ ನಿಲುವು ಇರಬೇಕಾ?
ಸಾಹಿತಿಗಳಿಗೆ ನಿಲುವು ಇದ್ದೇ ಇರುತ್ತೆ.ವಿದ್ಯಾವಂತನಿಗೆ ನಿಲುವುಗಳು ಇರಬೇಕು. ಆದರೆ ರಾಜಕೀಯ ನಿಲುವನ್ನು ಪ್ರಾಕ್ಟಿಕಲ್ ಆಗಿ ಪಾರ್ಟಿ ಜೊತೆ ಸಮೀಕರಿಸಿಕೊಂಡರೆ ವಿಚಾರಕ್ಕೆ ಅಡ್ಡಿ ಬರುತ್ತೆ. ಯಾಕೆ ಅಂದ್ರೆ ಒಂದು ಪಕ್ಷ ಅಂದ ಮೇಲೆ ಅದಕ್ಕೆ ಐಡಿಯಾಲಜಿ ಇರುತ್ತೆ. ಉದಾಹರಣೆಗೆ ಪ್ರಜಾಪ್ರಭುತ್ವದ ಸ್ವರೂಪ, ಆಳುವವರು ಮತ್ತು ಪ್ರಜೆಗಳ ಸಂಬಂಧ, ರಾಜಧರ್ಮಕ್ಕೆ ಸಂಬಂಧ ಪಟ್ಟ ಪ್ರಶ್ನೆ –ಹೀಗೆ ಹಲವು ರೀತಿಯ ಐಡಿಯಾಲಜಿಗೆ ಸಂಬಂಧ ಪಟ್ಟ ಅಂಶಗಳು ಪಕ್ಷಕ್ಕೆ ಇರುತ್ತವೆ. ಇವುಗಳನ್ನು ಗಂಭೀರ ಸಾಹಿತಿಯಾದವನು ಅರ್ಥ ಮಾಡಿಕೊಳ್ಳ ಬೇಕು. ಆದರೆ ನೇರವಾಗಿ ಯಾವುದೇ ಪಕ್ಷದೊಡನೆ ತನ್ನನ್ನು ಗುರುತಿಸಿಕೊಳ್ಳಬಾರದು.
ಪಾರ್ಟಿಗೆ ಸೇರಿ ಬಿಟ್ಟರೆ ಅದರ ಉದ್ದೇಶಗಳನ್ನು ಇವನೂ ಹೇಳೋಕೆ ಶುರುಮಾಡಿ ಬಿಡ್ತಾನೆ. ಆಗ ಅವರ ಪರವಾಗಿ ಮಾತನಾಡಬೇಕಾಗುತ್ತದೆ. ಇದರಿಂದ ಸಾಹಿತಿಯ ಬೌದ್ಧಿಕ ಸ್ವಾತಂತ್ರ್ಯ ಹಾಳಾಗುತ್ತೆ. ರಾಜಕೀಯದ ಥಿಯರೆಟಿಕಲ್ ಅರಿವು ಬೇರೆ , ಆದರೆ ಪಕ್ಷ ರಾಜಕೀಯದ ಜೊತೆಗೆ ಹೋದರೆ ಸಾಹಿತಿಯ ಬೌದ್ಧಿಕ ಸ್ವಾತಂತ್ರ್ಯ ಕಳೆದು ಹೋಗುತ್ತದೆ.
*ಕೆಲವೊಮ್ಮೆ ಸರ್ಕಾರಿ ನೌಕರರು, ಸರ್ಕಾರದ ನೌಕರರಾದ ಸಾಹಿತಿಗಳು ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತಾರಲ್ಲಾ?
ಸರ್ಕಾರಿ ನೌಕರರು ರಾಜಕೀಯದಲ್ಲಿ ಕೆಲಸ ಮಾಡಲು ಹೋಗುವುದು ತಪ್ಪು. ಏಕೆಂದರೆ ಸರ್ಕಾರ ರಚನೆ ಮಾಡುವುದು ರಾಜಕೀಯ ಪಕ್ಷಗಳು. ಅವರ ಪಕ್ಷದ ಸಿದ್ಧಾಂತ ಹೇಳಲು ಸರ್ಕಾರವನ್ನು ಅದು ಬಳಸಿಕೊಳ್ಳಬಹುದು. ನಾಳೆ ವಿರೋಧ ಪಕ್ಷವೇ ಅಧಿಕಾರಕ್ಕೆ ಬಂದರೆ ಅದು ಮೊದಲಿದ್ದ ಪಕ್ಷ, ಅದರ ಸಿದ್ಧಾಂತವನ್ನು ಟೀಕಿಸಿ ಬದಲಾಯಿಸಲು ನೋಡುತ್ತದೆ. ರಾಜಕೀಯ ಇರೋದೆ ಹಾಗೆ. ಆಗ ಸರ್ಕಾರಿ ನೌಕರ ಏನು ಮಾಡಬೇಕು? ಅವನು ನೇರ ರಾಜಕೀಯಕ್ಕೆ ಇಳಿದರೆ ಸರಿ ಆಗಲ್ಲ. ಆತ ಬ್ಯುರಾಕ್ರಸಿಗೆ ಸೇರಿದವನು.
ಬ್ಯುರಾಕ್ರಸಿ ಯಾವುದಕ್ಕೂ ಸೇರದೆ ನ್ಯೂಟ್ರಲ್ ಆಗಿರಬೇಕು. ಏಕೆಂದರೆ ಬೇರೆ ಸರ್ಕಾರ ಬಂದರೆ ಬ್ಯುರಾಕ್ರಸಿ ಏನೂ ಬದಲಾವಣೆ ಆಗೋದಿಲ್ಲ. ನೀತಿ ನಿಯಮಗಳ ರಚನೆ, ಕಾನೂನು ಇದು ಸರ್ಕಾರಕ್ಕೆ ಬಿಟ್ಟ ವಿಷಯ,ಅದನ್ನು ಅನ್ವಯಿಸುವುದು ಬ್ಯುರಾಕ್ರಸಿಗೆ ಬಿಟ್ಟ ವಿಷಯ. ಇದರಲ್ಲಿ ಪರಸ್ಪರರು ತಲೆಹಾಕಬಾರದು.
*ಕೆಲವು ಅಧ್ಯಾಪಕರು, ಸಾಹಿತಿಗಳು ಬೋಧನ ವೃತ್ತಿಯಲ್ಲಿ ಇದ್ದು ಕೊಂಡು ರಾಜಕೀಯದಲ್ಲಿರುವುದೂ ನಮ್ಮಲ್ಲಿ ಇದೆ. ಇದರ ಬಗ್ಗೆ ತಾವು ಏನು ಹೇಳುತ್ತೀರಾ?
ಇವರಿಗೆ ಜೀವನ ಮಾಡಲು ಬೇರೆ ಉಪಾಯ ಇಲ್ಲ. ನೌಕರಿ ಬೇಕು. ವಿಶ್ವವಿದ್ಯಾಲಯಗಳಲ್ಲಿ ನೌಕರಿಯಲ್ಲಿ ಇದ್ದರೆ ಬೇರೆ ಕಡೆ ಇರೋದಕ್ಕಿಂತ ಸಮಯ ಹೆಚ್ಚು ಸಿಗುತ್ತೆ. ಆದರೆ ಅವರು ನೇರವಾಗಿ ರಾಜಕೀಯ ಪಕ್ಷದೊಡನೆ ಗುರುತಿಸಿಕೊಳ್ಳುವುದು ಸರಿಯಲ್ಲ. ಶೈಕ್ಷಣಿಕ ಚೌಕಟ್ಟಿನಲ್ಲಿ ಅವರು ತಮ್ಮ ಕೆಲಸ ಕಾರ್ಯ ಮಾಡಬೇಕು.
*ಮೋದಿ ಪ್ರಧಾನಿ ಆದರೆ ದೇಶ ಅಧೋಗತಿಗೆ ಹೋಗುತ್ತೆ, ಪ್ರಜಾಪ್ರಭುತ್ವ ಸಂಕಷ್ಟಕ್ಕೆ ಸಿಲುಕಿ ಕೊಳ್ಳುತ್ತದೆ ಎಂದು ಅನೇಕ ಸಾಹಿತಿಗಳು ವಾದಿಸುತ್ತಾರಲ್ಲಾ?
ಮೋದಿ ದ್ವೇಷ ಮಾಡೋ ಹೇಳಿಕೆ ಕೊಡೋದು ಮಾಡೋರೆ ನಾಳೆ ಏನಾದ್ರೂ ಮೋದಿ ಕಂಫರ್ಟಬಲ್ ಆದ ಬಹುಮತ ಸಿಕ್ಕಿ ಸರ್ಕಾರ ರಚನೆ ಮಾಡಿ ಪ್ರಧಾನಿ ಆದ್ರೆ ಮೋದಿಗೆ ಸಲಾಂ ಹೊಡೀತಾರೆ. ಬೇಕಾದ್ದನ್ನು ಗಿಟ್ಟಿಸಿಕೊಳ್ಳುತ್ತಾರೆ.ಕೊನೆಗೂ ಇದು ಚಾರಿತ್ರ್ಯದ ಪ್ರಶ್ನೆ.ರಾಜಕೀಯದ ಜೊತೆ ಗುರುತಿಸಿಕೊಂಡು ಏನೂ ದುರುಪಯೋಗ ಮಾಡಿಕೊಳ್ಳದೆ ಇದ್ದರೆ ಅದು ಬೇರೆ.
ರಾಜಕೀಯದಲ್ಲಿ ಅಷ್ಟು ಆಸಕ್ತಿ ಇರೋರು ಕೆಲಸ ಬಿಟ್ಟು ಪೂರ್ಣಾವಧಿ ರಾಜಕೀಯಕ್ಕೆ ಇಳಿಯಬೇಕು. ಎಲ್ಲಾ ಸರ್ಕಾರಿ ನೌಕರರು ರಾಜಕೀಯಕ್ಕೆ ಇಳಿದರೆ ಬ್ಯುರಾಕ್ರಸಿಗೆ ಸಮದೂರದ(ನ್ಯೂಟ್ರಾಲಿಟಿ) ಸ್ವಭಾವ ಎಲ್ಲಿಂದ ಬರುತ್ತೆ?ಮಧ್ಯೆ ಈ ಪಕ್ಷ ಬಿದ್ದು ಹೋಗಿ ಬೇರೆ ಪಕ್ಷ ಅಧಿಕಾರಕ್ಕೆ ಬಂದರೆ ಇವರ ಬದ್ಧತೆ(ಲಾಯಲ್ಟಿ) ಏನಾಗುತ್ತೆ?
*ಇವತ್ತು ಕೆಲವು ಸಾಹಿತಿಗಳು ಬಿಜೆಪಿ ಬಿಟ್ಟು , ಒಂದು ಅಥವಾ ಎರಡು ರಾಜಕೀಯ ಪಕ್ಷಗಳನ್ನು ಬೆಂಬಲಿಸುತ್ತಿದ್ದಾರೆ, ಇದಕ್ಕೆ ನಿಮ್ಮ ಅಭಿಪ್ರಾಯ...
ಇದು ಅನೇಕ ಸಲ ಅನುಕೂಲ ಸಿಂಧು ಆಗಿರುತ್ತೆ ಅಷ್ಟೆ. ಒಬ್ಬ ಮನುಷ್ಯ ಏನು ಹೇಳ್ತಾನೆ ಅನ್ನೋದನ್ನು ಕುರಿತು ಮಾತಾಡೋವಾಗ ಉದ್ದಕ್ಕೂ ಅವನ ಸ್ವಭಾವ ಗಮನಿಸಬೇಕು.ಅವರ ಜಾತಕ ನೋಡಬೇಕು.ಸಾಹಿತಿಯಾದವನಿಗೆ ಸೃಜನಶೀಲತೆ ಅತ್ಯಂತ ಮುಖ್ಯ.ಅವನು ರಾಜಕೀಯ ಪಕ್ಷಕ್ಕೆ ಹೋದರೆ ಇದು ಕಷ್ಟ. ದೂರದಲ್ಲಿ ಇದ್ದುಕೊಂಡು ಚಿಂತನೆ ಮಾಡಬೇಕು. ಅದೆಲ್ಲಾ ಅವನ ಬರವಣಿಗೆಯಲ್ಲಿ ಹಾಳತವಾಗಿ ಬಂದಿರುತ್ತೆ.ಕೊನೆಗೂ ಇದು ಸ್ವಭಾವ ಮತ್ತು ಚಿತ್ತಶುದ್ಧಿಯ ಪ್ರಶ್ನೆ. ಚಿತ್ತಶುದ್ಧಿ ಇಲ್ಲದೇ ಹೋದರೆ ‘ರಾಮಾಯ ಸ್ವಸ್ತಿ ರಾವಣಾಯ ಸ್ವಸ್ತಿ’ಅಂತ ಆಗಿಬಿಡುತ್ತೆ. ಒಂದು ರಾಜಕೀಯ ಪಕ್ಷದಲ್ಲಿದ್ದಾಗ ಚಿತ್ತಶುದ್ಧಿ ಸಾಧ್ಯ ಆಗೋದಿಲ್ಲ. ಇವೆಲ್ಲಾ ಸೂಕ್ಷ್ಮವಾದ ವಿಷಯಗಳು. ಕಪ್ಪು ಬಿಳುಪಿನ ಉತ್ತರ ಹೇಳೋದು ಕಷ್ಟ.
*ನೀವು ಹೇಳುತ್ತಿರುವ ಈ ಚಿತ್ತಶುದ್ಧಿಯ ರಾಜಕೀಯ ಮಾಡಿದವರ ಉದಾಹರಣೆಗಳು ಇವೆಯೆ?
ಯಾಕಿಲ್ಲ? ಬೇಕಾದಷ್ಟು ಇವೆ. ನಮ್ಮಲ್ಲೇ ಡಿ.ವಿ.ಗುಂಡಪ್ಪನವರಿದ್ದರಲ್ಲಾ? ಸರ್ ಎಂ.ವಿ. ಅವರು ದಿವಾನರಾಗಿದ್ದಾಗ ಅನೇಕ ಸಭೆಗಳಿಗೆ ಇವರಿಗೆ ಬಂದು ಸಲಹೆ ಕೊಡಿ ಅಂತ ಆಹ್ವಾನ ಬರುತ್ತಿತ್ತು. ಉಳಿದವರಿಗೆ ಕೊಡೋ ಹಾಗೆ ಡಿ.ವಿ.ಜಿ.ಗೂ ಸಿಟ್ಟಿಂಗ್ ಚಾರ್ಜ್ ನೀಡುತ್ತಿದ್ದರು.ಆದರೆ ಡಿ.ವಿ.ಜಿ. ಸ್ವೀಕರಿಸಲು ಒಪ್ಪುತ್ತಿ ರಲಿಲ್ಲ. ಕೊನೆಗೆ ಮನೆಗೇ ಕಳುಹಿಸಿಕೊಟ್ಟರೂ ಡಿ.ವಿ.ಜಿ. ಅವುಗಳನ್ನು ನಗದು ಮಾಡಿಸಿಕೊಳ್ಳಲಿಲ್ಲ.ನಾನೊಬ್ಬ ಪ್ರಜೆಯಾಗಿ ಸರ್ಕಾರಕ್ಕೆ ಸಹಾಯ ಮಾಡಿದೆ.
ಸರ್ಕಾರ ನಡೆಸೋದು ನಮ್ಮ ಕರ್ತವ್ಯವೂ ಹೌದು ಅಂತ ಸಂಭಾವನೆ ನಿರಾಕರಿಸಿದ್ದರು. ಅದೇ ರೀತಿ ಸರ್ ಎಂ.ವಿ. ದಿವಾನರಾಗಿದ್ದಾಗ ಕನ್ನಂಬಾಡಿಗೆ ಯೋಜನೆ ಹಾಕಿದ್ದರು. ದಿವಾನಗಿರಿ ಬಿಟ್ಟಮೇಲೆಯೂ ಅದಕ್ಕಾಗಿ ದುಡಿದರು, ಆದರೆ ಒಂದು ಬಿಡಿಗಾಸನ್ನೂ ಸರ್ಕಾರದಿಂದ ತೆಗೆದುಕೊಳ್ಳಲಿಲ್ಲ. ‘ನನಗೆ ಪೆನ್ಶನ್ ಬರುತ್ತೆ ಈ ಹಣ ಯಾಕೆ’ ಅಂದಿದ್ದರು.ಈ ನೈತಿಕ ಸ್ವಾತಂತ್ರ್ಯ ಉಳಿಸಿಕೊಳ್ಳುವವರು ರಾಜಕೀಯದಲ್ಲಿ ಇದ್ದರೆ ತೊಂದರೆ ಇಲ್ಲ. ಅದು ಬಿಟ್ಟು ಯಾವುದೇ ಸರ್ಕಾರ ಬಂದರೂ ಲಾಭ ತಿಂದು ಹೇಳಿಕೆಗಳನ್ನು ಕೊಡುವುದರಿಂದ ಏನು ಉಪಯೋಗ?
*ಸಾಹಿತಿಗಳು ಹೀಗೆ ಅತಿಯಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದರಿಂದ ಅವರ ಸೃಜನಶೀಲತೆ ಮೇಲೆ ಪರಿಣಾಮ ಆಗುತ್ತದೆಯೇ?
ಖಂಡಿತ.ಯಾವುದೋ ಒಂದು ಹಂತದಲ್ಲಿ ಸಾಹಿತ್ಯ ಕೃತಿ ಅಂದರೆ statement of values. ಅದು ಕೇವಲ ನೈತಿಕ ಮೌಲ್ಯನೇ ಆಗಬೇಕಾಗಿಲ್ಲ.ಬೇರೆ ಬೇರೆ ವಲಯದ ಮೌಲ್ಯಗಳಿರುತ್ತವೆ. ಕುಮಾರವ್ಯಾಸ ‘ಅರಸುಗಳಿಗಿದು ವೀರ ’ ಅಂತಾನಲ್ಲಾ.. ಹಾಗೆ. ಮೌಲ್ಯಗಳನ್ನು ಜೀವಿಸಬೇಕು, ಇಲ್ಲದಿದ್ದರೆ ಬರೀ ಹೇಳಿಕೆ ಮಟ್ಟದಲ್ಲಿ ಉಳಿದು ಬಿಡುತ್ತೆ. ಮೌಲ್ಯಗಳಿದ್ದಾಗ ಚಿತ್ತಶುದ್ಧಿ ಇದ್ದಾಗ ವಿದ್ಯಾರಣ್ಯರಂತೆ ವಿಜಯನಗರದಲ್ಲಿ ರಾಜರಿಗೆ ಮಾರ್ಗದರ್ಶನ ಮಾಡಲಿ ಅಥವಾ ಸಂನ್ಯಾಸಿಯಾಗಿ ಶೃಂಗೇರಿಯಲ್ಲಿ ಇರಲಿ ಎಲ್ಲಾ ಒಂದೇ.ಸಾಹಿತಿಗೆ ಚಿತ್ತಶುದ್ಧಿ ಮುಖ್ಯ.ಈಗ ಪ್ರಚಾರ ಮಾಡ್ತಿರೋರಿಗೆ ಅಂತಹ ಮನೋಭಾವ ಇದೆಯಾ ಅನ್ನೋದು ಪ್ರಶ್ನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.