ಕರ್ನಾಟಕದ ರಾಜಧಾನಿ ‘ಸಿಲಿಕಾನ್ ಸಿಟಿ’ ಖ್ಯಾತಿಯ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳು ಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಈ ಜವಾಬ್ದಾರಿಯನ್ನು ಹೊರುವಲ್ಲಿ ಶಾಲಾ ಆಡಳಿತ ಮಂಡಳಿಗಳ ಪಾತ್ರ ಮತ್ತು ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಪೋಷಕರ ಪಾತ್ರದ ಬಗ್ಗೆ ಸಾಕಷ್ಟು ಚರ್ಚೆಗೆ ಇದು ಕಾರಣವಾಗಿದೆ. ಆದರೆ ಇದೇ ವೇಳೆ, ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಗಟ್ಟಲೆಂದು ಈಗಾಗಲೇ ಶಾಸನ ಇದೆ ಎಂಬುದು ಬಹುತೇಕರಿಗೆ ಅರಿವಿಗೆ ಬಾರದ ಸಂಗತಿಯಾಗಿದೆ.
೨೦೧೨ರಲ್ಲೇ ‘ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ ಕಾಯ್ದೆ-– ೨೦೧೨’ (ಪೊಕ್ಸೊ) ಅನ್ನು ಜಾರಿಗೆ ತರಲಾಗಿದೆ. ಆದರೆ ಈ ಕಾಯ್ದೆಯನ್ನು ಈತನಕ ಬಳಸಿಕೊಂಡ ಉದಾಹರಣೆ ಕಾಣಸಿಗುವುದಿಲ್ಲ. ಇದೊಂದು ತುಂಬಾ ದೂರದೃಷ್ಟಿಯ ಹಾಗೂ ಮಕ್ಕಳ ಸ್ನೇಹಿ ಶಾಸನವಾಗಿದೆ. ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳನ್ನು ಹಾಗೂ ಇದಕ್ಕೆ ಸಂಬಂಧಿಸಿದ ದೂರುಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಇದರಲ್ಲಿ ನಿರ್ದಿಷ್ಟವಾಗಿ ಹೇಳಲಾಗಿದೆ.
ಮಕ್ಕಳ ಮೇಲಿನ ಅತ್ಯಾಚಾರ ಮಾತ್ರವಲ್ಲದೆ ಇನ್ನಿತರ ಐದು ಬಗೆಯ ಅಪರಾಧಗಳನ್ನು ಗಣನೆಗೆ ತೆಗೆದುಕೊಳ್ಳುವ ವಿಶಿಷ್ಟ ಕಾನೂನು ಇದಾಗಿದೆ.- ಲೈಂಗಿಕ ಹಲ್ಲೆ (ಗುಪ್ತಾಂಗ ಸಂಪರ್ಕ ಹೊರತುಪಡಿಸಿ), ಲೈಂಗಿಕ ಹಲ್ಲೆ (ಗುಪ್ತಾಂಗ ಸಂಪರ್ಕ), ತೀವ್ರ ಲೈಂಗಿಕ ಹಲ್ಲೆ, ಲೈಂಗಿಕ ಕಿರುಕುಳ ಹಾಗೂ ನಗ್ನಚಿತ್ರಗಳಿಗಾಗಿ ಮಕ್ಕಳ ಬಳಕೆ ಇವು ಕೂಡ ಈ ಕಾಯ್ದೆಯಡಿ ಬರುತ್ತವೆ.
ಈ ಶಾಸನದಲ್ಲಿ ‘ತೀವ್ರ ಲೈಂಗಿಕ ಹಲ್ಲೆ’ ಎಂಬುದಕ್ಕೆ ಅತ್ಯಂತ ಪ್ರಗತಿಪರವಾದ ಮುನ್ನಾಲೋಚನೆಯಿಂದ ಪ್ರಭಾವಿ ವ್ಯಾಖ್ಯೆ ನೀಡಲಾಗಿದೆ. ಈ ಕಾಯ್ದೆಯಡಿ ಯಾವುದೇ ಲೈಂಗಿಕ ಹಲ್ಲೆಯನ್ನು ‘ತೀವ್ರ’ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಮೂರು ಸನ್ನಿವೇಶಗಳಲ್ಲಿ ಇದು ಅಪರಾಧಿಗಳಿಗೆ ಹೆಚ್ಚಿನ ಶಿಕ್ಷೆ ವಿಧಿಸಲು ಅವಕಾಶ ಒದಗಿಸುತ್ತದೆ.
ಅ) ಅಧಿಕಾರದಲ್ಲಿರುವವರು ಅಥವಾ ಸಮಾಜವು ಯಾರನ್ನು ವಿಶ್ವಾಸ ಪಾತ್ರರೆಂದು ಭಾವಿಸಿದೆಯೋ ಅಂಥವರು ಮಕ್ಕಳ ಮೇಲೆ ಲೈಂಗಿಕ ಹಲ್ಲೆ ಎಸಗಿದ ಸಂದರ್ಭದಲ್ಲಿ ಇದನ್ನು ಬಳಸಿಕೊಳ್ಳಬಹುದು. ಅಂದರೆ, ಪೊಲೀಸ್ ಅಧಿಕಾರಿಗಳು, ಸೇನಾ ಅಧಿಕಾರಿಗಳು, ಸರ್ಕಾರಿ ನೌಕರರು, ಮಕ್ಕಳ ಸುರಕ್ಷತಾ ಪಾಲನಾ ನಿಲಯದ ಆಡಳಿತದಲ್ಲಿರುವವರು ಅಥವಾ ಸಿಬ್ಬಂದಿ, ಮಕ್ಕಳ ಸುಪರ್ದಿ, ನಿಗಾ ಹೊಣೆ ಹೊತ್ತ ಬೇರ್‍ಯಾವುದೇ ಸ್ಥಳ, ಆಸ್ಪತ್ರೆ ಅಥವಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಥವಾ ಸಿಬ್ಬಂದಿ, ಮಕ್ಕಳ ಪೋಷಕರು ಅಥವಾ ಬಂಧುಗಳಿಂದಲೇ ಲೈಂಗಿಕ ಅಪರಾಧ ನಡೆದಾಗ ಈ ಕಾಯ್ದೆಯಡಿ ಕ್ರಮ ಜರುಗಿಸಬಹುದು.
ಆ) ಮಕ್ಕಳ ಮೇಲೆ ‘ಘೋರ ಲೈಂಗಿಕ ಹಲ್ಲೆ’ ನಡೆದ ಸಂದರ್ಭದಲ್ಲೂ ಈ ಶಾಸನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಅಂದರೆ ಸಾಮೂಹಿಕ ಲೈಂಗಿಕ ಹಲ್ಲೆ, ಮಾರಣಾಂತಿಕ ಆಯುಧಗಳನ್ನು ಬಳಸಿ ಭೀಕರ ಗಾಯ ಎಸಗಿದ್ದರೆ, ಮಕ್ಕಳ ಯಾವುದೇ ಅಂಗ ಊನವಾಗುವಂತೆ ಮಾಡಿದ್ದರೆ, ಬಾಲಕಿ ಗರ್ಭ ಧರಿಸಲು ಕಾರಣವಾಗಿದ್ದರೆ ಅಥವಾ ಕೋಮುಗಲಭೆಯ ಸಂದರ್ಭದಲ್ಲಿ ಮಕ್ಕಳನ್ನು ಬಳಸಿಕೊಂಡ್ದಿದರೆ ಅದನ್ನು ‘ಘೋರ’ ಎಂದು ಪರಿಗಣಿಸಲು ಈ ಕಾನೂನು ಅವಕಾಶ ಒದಗಿಸುತ್ತದೆ.
ಇ) ಲೈಂಗಿಕ ಹಲ್ಲೆಗೆ ಒಳಗಾದ ಮಕ್ಕಳು ೧೨ ವರ್ಷದೊಳಗಿನವರಾಗಿದ್ದು ಸೂಕ್ಷ್ಮ ದೇಹಸ್ಥಿತಿಯವರಾಗಿದ್ದಲ್ಲಿ, ಅಂದರೆ ಎಚ್‌ಐವಿ ಸೋಂಕು ಅಥವಾ ಇನ್ನಾವುದೇ ಪ್ರಾಣಾಂತಕ ಕಾಯಿಲೆಯಿಂದ ಬಳಲುತ್ತಿದ್ದರೆ ಅಥವಾ ಅಂಗ ಊನಗೊಂಡಿದ್ದ ಸಂದರ್ಭದಲ್ಲಿಯೂ ಈ ಕಾಯ್ದೆಯಡಿ ದೂರು ದಾಖಲಿಸಲು ಸಾಧ್ಯವಿದೆ. ಈ ಕಾಯ್ದೆಯ ಮೇಲಿನ ಪರಿಚ್ಛೇದಗಳ ಪ್ರಾಮುಖ್ಯವನ್ನು ಕಡೆಗಣಿಸ ಲಾಗದು. ಬೆಂಗಳೂರಿನಲ್ಲಿ ನಡೆದಂತೆ ಶಾಲಾ ನೌಕರನೇ ಅತ್ಯಾಚಾರ ಎಸಗಿದಂತಹ ಸಂದರ್ಭ ದಲ್ಲಿ ಮಗು ಅಸಹಾಯಕ ಸ್ಥಿತಿಗೆ ಸಿಲುಕಿರುತ್ತದೆ.
ಈ ಅಸಹಾಯಕತೆಯನ್ನು ನಂಬಿಕಸ್ಥ ಸ್ಥಾನ ದಲ್ಲಿದ್ದು ಮಕ್ಕಳ ಮೇಲೆ ಹಿಡಿತ ಹೊಂದಿದ ವ್ಯಕ್ತಿಯೊಬ್ಬ ದುರ್ಬಳಕೆ ಮಾಡಿಕೊಳ್ಳುತ್ತಾನೆ. ಇಂತಹ ಸನ್ನಿವೇಶದಲ್ಲಿ ಲೈಂಗಿಕ ಹಲ್ಲೆಯ ದುಷ್ಪರಿಣಾಮವು ಇನ್ನಷ್ಟು ಘೋರವಾಗಿರುತ್ತದೆ. ಹೀಗಾಗಿ ಕಾಯ್ದೆಯು ಇದನ್ನು ‘ತೀವ್ರತರದ ಅಪರಾಧ’ ಎಂದು ಪರಿಗಣಿಸಲು ಅನುವು ಮಾಡಿಕೊಟ್ಟಿರುವುದು ಸರಿಯಾಗಿಯೇ ಇದೆ.
ಈ ಕಾಯ್ದೆಯಡಿ ದೂರು ನೀಡುವ ವಿಧಿವಿಧಾನ ಕೂಡ ಸರಳವಾಗಿಯೇ ಇದೆ. ಲೈಂಗಿಕ ಹಲ್ಲೆ ಎಸಗಿರುವುದು ಅಥವಾ ಎಸಗುವ ಭೀತಿ ಇದೆ ಎಂದು ಬಾಲಕ/ ಬಾಲಕಿ ಅಥವಾ ಕಾಳಜಿ ಇರುವ ಬೇರ್‍ಯಾವುದೇ ವ್ಯಕ್ತಿಗೆ ಶಂಕೆ ಮೂಡಿದರೆ ಅದನ್ನು ಪೊಲೀಸರ ಗಮನಕ್ಕೆ ತರಬೇಕು. ಅಂತಹ ಸಂದರ್ಭದಲ್ಲಿ ಅಗತ್ಯಬಿದ್ದರೆ ‘ವಿಶೇಷ ಬಾಲ ಪೊಲೀಸ್ ಘಟಕ’ವು ತಕ್ಷಣವೇ ನಿಗಾ ವಹಿಸಿ ಮಗುವಿಗೆ ರಕ್ಷಣೆ ಒದಗಿಸಬೇಕು.
ಯಾವುದೇ ಸಂಸ್ಥೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ಅಪರಾಧ ನಡೆದಿದ್ದರೆ ಅಲ್ಲಿನ ಮೇಲ್ವಿಚಾರಣೆ ಹೊಣೆ ಹೊತ್ತವರು ಅಂತಹ ದುಷ್ಕೃತ್ಯ ನಡೆದಿರುವುದನ್ನು ಪೊಲೀಸರ ಗಮನಕ್ಕೆ ತರುವುದು ಕಡ್ಡಾಯ. ಇಲ್ಲದಿದ್ದರೆ ಸಂಸ್ಥೆಯ ಹೊಣೆ ಹೊತ್ತ ವ್ಯಕ್ತಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಇದು ಅವಕಾಶ ನೀಡುತ್ತದೆ. ಒಮ್ಮೆ ಅಪರಾಧ ನಡೆದಿರುವುದನ್ನು ಗಮನಕ್ಕೆ ತರುತ್ತಿದ್ದಂತೆಯೇ ಮಕ್ಕಳ ಸ್ನೇಹಿಯಾದ ವಿಚಾರಣಾ ಪ್ರಕ್ರಿಯೆ ಚಾಲನೆ ಪಡೆಯುತ್ತದೆ.
ಆ ಪ್ರಕಾರ, ಮಗುವಿನ ಹೇಳಿಕೆಯನ್ನು ಮಗುವಿನ ಮನೆಯಲ್ಲಿಯೇ ದಾಖಲಿಸಬೇಕು; ಮಗುವು ಆರೋಪಿಯ ಸಂಪರ್ಕಕ್ಕೆ ಬಾರದಂತೆ ನಿಗಾ ವಹಿಸಬೇಕು; ವಿಚಾರಣೆಯನ್ನು ಮಗುವಿನ ಪೋಷಕರು ಅಥವಾ ಅದು ಯಾರಲ್ಲಿ ವಿಶ್ವಾಸ ಇರಿಸಿರುತ್ತದೆಯೋ ಅವರ ಉಪಸ್ಥಿತಿಯಲ್ಲೇ ನಡೆಸಬೇಕು; ನಂತರ, ಈ ಪ್ರಕರಣವನ್ನು ವಿಶೇಷ ನ್ಯಾಯಾಲಯವು ಒಂದು ವರ್ಷ ಅವಧಿಯೊಳಗೆ ಇತ್ಯರ್ಥಗೊಳಿಸಬೇಕು ಎಂಬ ನಿಬಂಧನೆಗಳೂ ಕಾಯ್ದೆಯಲ್ಲಿವೆ.
ಮಕ್ಕಳ ಮೇಲೆ ನಡೆಯುವ ಹಲ ಬಗೆಯ ಲೈಂಗಿಕ ಅಪರಾಧಗಳಿಗೆ ಈ ಶಾಸನವು ಸೂಕ್ಷ್ಮ ಸಂವೇದಿಯಾಗಿ ಸ್ಪಂದಿಸುತ್ತದೆ. ಈ ಕಾಯ್ದೆಯಡಿ ತನಿಖೆ ಮತ್ತು ವಿಚಾರಣಾ ಪ್ರಕ್ರಿಯೆ ಮಕ್ಕಳ ಸ್ನೇಹಿಯೂ ಆಗಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿರುವ ಪ್ರಕರಣವು ಈ ಶಾಸನವನ್ನು ಹೇಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬಹುದು ಎಂಬುದಕ್ಕೆ ನಿಜವಾದ ಪರೀಕ್ಷೆಯೂ ಆಗಬಹುದು. ಆದರೆ ಇಂತಹ ಪ್ರಕರಣಗಳ ವಿಚಾರಣೆಗಾಗಿ ಇನ್ನೂ ವಿಶೇಷ ನ್ಯಾಯಾಲಯಗಳ ಸವಲತ್ತು ನಮಗೆ ಲಭ್ಯವಿಲ್ಲದಿರುವುದು ದೊಡ್ಡ ಕೊರತೆಯಾಗಿದೆ.
ವಿಷಾದದ ಸಂಗತಿಯೆಂದರೆ ಪೊಲೀಸರು, ಪ್ರಾಸಿಕ್ಯೂಟರ್‌ಗಳು ಮತ್ತು ನ್ಯಾಯಾಧೀಶರು ಸೇರಿದಂತೆ ಬಹುಪಾಲು ಜನರಿಗೆ ಇಂಥದ್ದೊಂದು ಕಾನೂನು ಇದೆ ಎಂಬುದೇ ಗೊತ್ತಿಲ್ಲ. ಈ ಕಾನೂನನ್ನು ಸಮರ್ಥವಾಗಿ ಬಳಸಿಕೊಳ್ಳುವ ಬಗ್ಗೆ ಅರಿವು ಮೂಡಿಸಲು ಇದು ಸೂಕ್ತ ಸಮಯವಾಗಿದೆ.
(ಲೇಖಕರು ರಾಜ್ಯ ಹೈಕೋರ್ಟ್ ವಕೀಲರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.