ADVERTISEMENT

‘ಮಾರಿ ಬಲೆ’ಗೆ ಸಿಕ್ಕ ಮೀನುಗಾರ

ಮತ್ಸ್ಯ ಕ್ಷಾಮ ಭೀತಿ

ಬಾಲಕೃಷ್ಣ ಪುತ್ತಿಗೆ
Published 4 ಜುಲೈ 2014, 19:30 IST
Last Updated 4 ಜುಲೈ 2014, 19:30 IST
ಬಾಲಕೃಷ್ಣ ಪುತ್ತಿಗೆ
ಬಾಲಕೃಷ್ಣ ಪುತ್ತಿಗೆ   

ಭೋರ್ಗರೆವ ಸಮುದ್ರಕ್ಕೆ ಧುಮುಕಿ ಸಾಹಸದ ಮೀನುಗಾರಿಕೆ ನಡೆಸುವ ಕಡಲ ಮಕ್ಕಳ ಬದುಕು ಸಮುದ್ರದ ಅಲೆಗಳಂತೆಯೇ ಏರಿಳಿತಗಳಿಂದ ಕೂಡಿದ್ದು. ಇದ್ದಾಗ ದಿಲ್ದಾರ್ ಆಗಿ ಜೀವನ ಸಾಗಿಸುವ ಈ ಮಂದಿ ಇಲ್ಲಿನ ಉರ್ವ ಮಾರಿಯಮ್ಮ ದೇವಿಗೆ ಚಿನ್ನದ ಬೂತಾಯಿ, ಬಂಗುಡೆ, ಸೀಗಡಿ ಸರಗಳನ್ನೇ ಅರ್ಪಿಸುತ್ತಾರೆ. ದುಡಿಮೆ ಇಲ್ಲದೆ ಹೋದಾಗ ಅವರ ಮನೆಯ ಅಡುಗೆ ಮನೆಯಲ್ಲಿ ಹೊಗೆ ಕಾಣುವುದೇ ಅಪರೂಪ.

ಸಾಂಪ್ರದಾಯಿಕ ನಾಡದೋಣಿ ಮೀನುಗಾರರು, ಪರ್ಸೀನ್ ಹಾಗೂ ಇನ್ನೂ ಹೆಚ್ಚಿನ ಸಾಮರ್ಥ್ಯದ ಟ್ರಾಲ್‌ ಬೋಟ್‌ಗಳನ್ನು ಬಳಸಿ ಆಳಸಮುದ್ರ ಮೀನುಗಾರಿಕೆ ನಡೆಸುವ ಮೀನುಗಾರರೇ ಇರಬಹುದು, ಕೆರೆ–ಕಟ್ಟೆ, ನದಿಗಳನ್ನು ಅವಲಂಬಿಸಿದ  ಒಳ­ನಾಡ ಮೀನುಗಾರರೇ ಆಗಬಹುದು ಇವರೆಲ್ಲರದೂ ಸವಾಲಿನ ಬದುಕೇ ಸರಿ. ಈ ಬಾರಿಯಂತೂ ಮಳೆ ಇನ್ನೂ ಬಿರುಸುಗೊಂಡಿಲ್ಲ. ಕೆರೆ–ಕಟ್ಟೆಗಳಲ್ಲಿ ನೀರು ತುಂಬಿಲ್ಲ.

ಕೇರಳದ ಮಂಜೇಶ್ವರದಿಂದ ತೊಡಗಿ ಉಡುಪಿ ಜಲ್ಲೆಯ ಹೆಜಮಾಡಿವರೆಗಿನ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಿಂದ ಹಿಡಿದು ಮಾಜಾಳಿವರೆಗಿನ ಸಾವಿರಾರು ಮೀನುಗಾರ ಕುಟುಂಬಗಳು ಸಂಪಾದನೆ ಇಲ್ಲದೆ ಸೊರಗಿವೆ. ಆಳ ಸಮುದ್ರ ಮೀನು­ಗಾರಿಕೆಗೆ ಈಗ ರಜಾ ಅವಧಿ. ನಾಡದೋಣಿ ಮೀನುಗಾರರು ಸಕ್ರಿಯ­ವಾಗಬೇಕಾದ ಕಾಲ. ಕಳೆದ ವರ್ಷ ಜೂನ್‌ 20ರ ವೇಳೆಗೇ ನಾಡದೋಣಿ ಮೀನುಗಾರಿಕೆ ಆರಂಭ­ವಾಗಿತ್ತು. ಆದರೆ ಈ ಬಾರಿ, ಇನ್ನೂ ಪೂರ್ಣ ಪ್ರಮಾಣದಲ್ಲಿ ತೊಡಗಿಲ್ಲ.

ಮೀನು­ಗಾರಿಕೆ­ಯನ್ನೇ ನಂಬಿರುವ ಮಹಿಳೆಯರು ಹಾಗೂ ಇತರರಿಗೂ ಸಂಪಾದನೆ ಇಲ್ಲ. ಮಳೆಗಾಲ ಆರಂಭವಾಗಿ ತಿಂಗಳಾದರೂ ಮೀನುಗಾರಿಕೆಗೆ ಪೂರಕವಾದ ವಾತಾ­ವರಣ ಸೃಷ್ಟಿ ಆಗಿಲ್ಲ. ಹತ್ತು–ಹದಿನೈದು ದಿನಗಳ ಕಾಲ ಬಿರುಸಾದ ಗಾಳಿ­ಯೊಂದಿಗೆ ಮಳೆ ಬಂದು ಸಮುದ್ರ ಶಾಂತಗೊಂಡರೆ ಹೇರಳವಾಗಿ ಮೀನುಗಳು ಸಿಗು­ತ್ತವೆ. ಈ ಬಾರಿ ಇನ್ನೂ ಸಾಕಷ್ಟು ಮಳೆಯೇ ಬಿದ್ದಿಲ್ಲ. ಸಮುದ್ರವೂ ಬಿರುಸಾಗಿಲ್ಲ. ಗಾಳಿ ಬಂದು ಬಳಿಕ ಶಾಂತವಾಗಿಲ್ಲ. ಹೀಗಾಗಿ ನಾಡದೋಣಿ ಮೀನುಗಾರರಿಗೆ ಅನುಕೂಲಕರ ಸ್ಥಿತಿಯೇ ಇಲ್ಲ.

ನಾಡದೋಣಿ ಮೀನುಗಾರರಿಗಾಗಿ ಮೇ ತಿಂಗಳಲ್ಲಿ ವಿತರಣೆ ಆಗಬೇಕಿದ್ದ ತಲಾ 150 ಲೀಟರ್‌ ಸೀಮೆಎಣ್ಣೆ ಕೂಡ ಸಿಕ್ಕಿಲ್ಲ. ಒಟ್ಟಾರೆ ಮೀನುಗಾರರ ಬದುಕೇ ಅತಂತ್ರ­ವಾಗಿದೆ ಎನ್ನುತ್ತಾರೆ ನವ ಮಂಗಳೂರು ಬಂದರು ಮಂಡಳಿ (ಎನ್‌ಎಂಪಿಟಿ) ವಲಯ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ ಬಿ.ಕೆ.ವಾಸುದೇವ್‌. ಮಳೆಗಾಲಕ್ಕೆ ಒಂದಿಷ್ಟು ಉಳಿತಾಯ ಮಾಡಿಟ್ಟುಕೊಳ್ಳುವ ಪ್ರವೃತ್ತಿ ಮೀನುಗಾರ­ರಲ್ಲಿ ಕಮ್ಮಿಯೇ. ಈ ಅವಧಿಯಲ್ಲಿ ಮೀನುಗಾರರ ನೆರವಿಗೆಂದು ಸರ್ಕಾರ ಹಲ­ವಾರು ಕಾರ್ಯಕ್ರಮಗಳನ್ನು ರೂಪಿಸಿದೆ.

ಮೀನುಗಾರರ ನೀತಿಯೂ ಅವರ ನೆರವಿಗೆ ಬಂದಿದೆ. 57 ದಿನಗಳ ಅವಧಿಯ ಮೀನುಗಾರಿಕೆ ರಜಾ ಕಾಲದಲ್ಲಿ ಅವರ ಬದುಕಿಗೆ ದಾರಿ­ಯಾಗಲೆಂದು ಉಳಿತಾಯ ಯೋಜನೆಗಳನ್ನೂ ಜಾರಿಗೊಳಿಸಲಾಗಿದೆ. ಯಶ­ಸ್ವಿನಿ ಯೋಜನೆಯಡಿ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ, ಉಚಿತವಾಗಿ ಕಿಟ್‌ಗಳ (ಐಸ್‌ ಬಾಕ್ಸ್‌, ಮೀನು ಬಲೆ ಇತ್ಯಾದಿ) ವಿತರಣೆ, ಮಹಿಳೆಯರಿಗೆ ಶೇಕಡ 3ರ ಬಡ್ಡಿ ದರದಲ್ಲಿ ₨50,000 ವರೆಗೆ ಸಾಲ ಸೌಲಭ್ಯ... ಹೀಗೆ ಹಲವಾರು ಯೋಜನೆಗಳಿವೆ. ಇವು ಮೀನುಗಾರರ ಸ್ಥಿತಿ ಸುಧಾರಣೆಗೆ ಸ್ವಲ್ಪಮಟ್ಟಿಗೆ ನೆರವಾಗಿವೆ.

ಮೀನುಗಾರರನ್ನೂ ಕೃಷಿಕರ ವರ್ಗಕ್ಕೆ ಸೇರಿಸಲಾಗಿದೆ. ಕೇಂದ್ರದಲ್ಲಿ ಕೃಷಿ ಇಲಾಖೆ ಜೊತೆಗೇ ಮೀನುಗಾರಿಕೆ ಸಚಿವಾಲಯವೂ ಸೇರಿದೆ. ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಬೇಕೆಂಬ ಬೇಡಿಕೆ ಇಡಲಾಗಿದೆ. ರಾಷ್ಟ್ರೀಯ ಕೃಷಿಕರ ಆಯೋಗವೂ ಇದನ್ನು ಶಿಫಾರಸು ಮಾಡಿದೆ ಎನ್ನುತ್ತಾರೆ ರಾಷ್ಟ್ರೀಯ ಮೀನು ಕೃಷಿ ಕಾರ್ಮಿಕರ ವೇದಿಕೆ ಉಪಾಧ್ಯಕ್ಷರಾಗಿರುವ, ಮೀನುಗಾರ ಮುಖಂಡ ವಾಸುದೇವ ಬೋಳೂರು ಅವರು.

ಮೀನುಗಾರ ಮಹಿಳೆಯರು ಈ ಕ್ಷೇತ್ರದ ನಿಜವಾದ ಬೆನ್ನೆಲುಬು. ರಾತ್ರಿ–ಹಗಲೆ­ನ್ನದೆ ದುಡಿದು ಅವರು ಮನೆ ಪೊರೆಯುತ್ತಾರೆ. ಮಳೆಗಾಲದಲ್ಲಿ ಅವರ ದುಡಿಮೆ­ಯಿಂದಲೇ ಬಹಳಷ್ಟು ಮನೆಗಳಲ್ಲಿ ಅಡುಗೆ ಮನೆಯಲ್ಲಿ ಬೆಂಕಿ ಉರಿಯುತ್ತದೆ ಎಂದರೂ ತಪ್ಪಾಗಲಾರದು. ಮೀನುಗಾರರ ವಲಯದಲ್ಲಿ ಮಹಿಳೆಯರಿಗೆ ಇನ್ನಷ್ಟು ಪ್ರೋತ್ಸಾಹ ಸಿಗಬೇಕು. ಸಮುದ್ರದಲ್ಲಿ ಘರ್ಷಣೆ: ಮೀನುಗಾರರ ವಲಯದಲ್ಲಿ ಕೆಲವೊಮ್ಮೆ ಗಡಿ ತಂಟೆ ಏಳುವುದುಂಟು. ಈಚೆಗೆ ‘ಬುಲ್ ಟ್ರಾಲಿಂಗ್‌’ ನಿಂದಾಗಿ ಮೀನುಗಾರರ ನಡುವೆಯೇ ಸಂಘರ್ಷ ಏರ್ಪಟ್ಟು ಸಮುದ್ರದಲ್ಲೇ ಹೊಡೆದಾಟಗಳೂ ನಡೆದಿತ್ತು.

‘12 ನಾಟಿಕಲ್ ಮೈಲುಗಳವರೆಗೆ ಮಾತ್ರ ನಾಡ ದೋಣಿಗಳು ತೆರಳ­ಬಹುದು. ಅಲ್ಲಿಂದ ಆಚೆಗೆ ಆಳಸಮುದ್ರ ಮೀನುಗಾರಿಕೆ ನಡೆಸುವ ಪರ್ಸೀನ್‌ ಹಾಗೂ ಅತ್ಯಾಧುನಿಕ ಬೋಟ್‌ಗಳು ಮಾತ್ರ ಹೋಗಬೇಕು. ಆಯಾ ರಾಜ್ಯಗಳ  ಗಡಿ­ಗಳನ್ನೂ ಉಲ್ಲಂಘಿಸಬಾರದು. ಇದು ನಿಯಮ. ಕೆಲವೊಮ್ಮೆ ಈ ನೆಪದಲ್ಲಿ ಸಮುದ್ರ­ದಲ್ಲಿ ಮೀನುಗಾರರ ನಡುವೆಯೇ ಸಂಘರ್ಷ ತಲೆದೋರುತ್ತದೆ. ನಂತರ ಮೀನು­ಗಾರರ ಸಂಘಟನೆಗಳ ಮುಖಂಡರೇ ಕುಳಿತು ಪರಸ್ಪರ  ಮಾತುಕತೆ ನಡೆಸಿ ಬಗೆಹರಿಸಿಕೊಳ್ಳುತ್ತಾರೆ’ ಎನ್ನುತ್ತಾರೆ ವಾಸುದೇವ್‌.

ಮಾರುಕಟ್ಟೆ ಸಮಸ್ಯೆ: ಸುಸಜ್ಜಿತವಾದ ಮಾರುಕಟ್ಟೆ ಹಾಗೂ ಶೈತ್ಯಾಗಾರಗಳ ಕೊರತೆ ಮೀನುಗಾರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆ.  ಮಹಿಳೆಯರು ಬಿಸಿಲು, ಮಳೆಗೆ ಮೈಯೊಡ್ಡಿ ವ್ಯಾಪಾರ ಮಾಡಬೇಕು. ಈ ಮಾರುಕಟ್ಟೆಗಳಲ್ಲಿ ಸ್ವಚ್ಛತೆ ಕೊರತೆ ತೀವ್ರ. ಶೌಚಾಲಯ, ಸ್ನಾನದ ಕೊಠಡಿಗಳೂ ಇಲ್ಲ.  ಮಡಗಾವ್‌ಗೆ ಈಚೆಗೆ ಮೀನುಗಾರರ ಮುಖಂಡರು ಹೋಗಿ ಅಲ್ಲಿನ ಮಾರುಕಟ್ಟೆ ವ್ಯವಸ್ಥೆಗಳ ಬಗ್ಗೆ ವರದಿ ಕೊಟ್ಟಿದ್ದಾರೆ. ಆದರೆ ಇಲ್ಲಿನ ಸ್ಥಳೀಯ ಆಡಳಿತ ಇನ್ನೂ ಎಚ್ಚೆತ್ತಿಲ್ಲ. ಇಂತಹ ಮಾರುಕಟ್ಟೆಗಳಿಗೆ ಹಣಕಾಸಿನ ಕೊರತೆ ಇಲ್ಲ. ಕೇಂದ್ರ ಸರ್ಕಾರ ಸಬ್ಸಿಡಿ ಕೊಡುತ್ತದೆ. ಆದರೂ ಇನ್ನೂ ಜಾರಿಗೊಂಡಿಲ್ಲ.

ಏಕರೂಪದ ರಜೆ: ಮೀನುಗಾರಿಕೆ ನಿಷೇಧ ಅವಧಿಯೂ ದೇಶದ ಪಶ್ಚಿಮ ಮತ್ತು ಪೂರ್ವ ಕರಾವಳಿಗಳಲ್ಲಿ ಏಕರೂಪದಲ್ಲಿ ಇರಬೇಕು ಎಂಬ ಬೇಡಿಕೆಯೂ ಇದೆ. ಹಾಗಾ­ದಾಗ ಮೀನುಗಾರಿಕೆ ರಜೆ ಅವಧಿಯೂ ಸಮಾನವಾಗಿರುತ್ತದೆ. ಒಂದು ರಾಜ್ಯದವರು ಇನ್ನೊಂದು ರಾಜ್ಯದ ಸಮುದ್ರ ತೀರಕ್ಕೆ ಬಂದು ಮೀನು ಕಬಳಿಸುವ ಪ್ರಮೇಯವೂ ತಪ್ಪುತ್ತದೆ ಎನ್ನುತ್ತಾರೆ ಮೀನುಗಾರರು. ರಾಜ್ಯದಲ್ಲಿ ಬಂದರು ಮತ್ತು ಮೀನುಗಾರಿಕೆ ಇಲಾಖೆಗಳ ಸಚಿವರೂ ಒಬ್ಬರೇ ಆದರೆ ಒಳಿತು. ಆಗ ಮೀನುಗಾರರ ಬೇಡಿಕೆಗಳಾದ ಬಂದರು, ದಕ್ಕೆ, ಅಳಿವೆ ಬಾಗಿಲು­ಗಳ ಅಭಿವೃದ್ಧಿಯಂತಹ ಕೆಲಸ ಕಾರ್ಯಗಳೂ ಚುರುಕಾಗುತ್ತವೆ ಎನ್ನುತ್ತಾರೆ ಮೀನುಗಾರರ ಮುಖಂಡ ಇಬ್ರಾಹಿಂ ಬೆಂಗರೆ.

ಅಪಾಯದ ಬಾಗಿಲು: ಅಳಿವೆ ಬಾಗಿಲುಗಳು (ನದಿ ಸಮುದ್ರ ಸೇರುವ ಜಾಗ) ಸಾಮಾನ್ಯವಾಗಿ ಮೀನುಗಾರರಿಗೆ ಅಪಾಯದ ಬಾಗಿಲುಗಳಾಗಿವೆ. ಬೋಟುಗಳ ಸಂಖ್ಯೆ ವರ್ಷ ಹೋದಂತೆ ಹೆಚ್ಚುತ್ತಲೇ ಇವೆ. ಆದರೆ ಅವುಗಳಿಗೆ ಲಂಗರು ಹಾಕಲು ಅಗತ್ಯ ಸೌಲಭ್ಯ ಇಲ್ಲ. ಹೂಳು ತುಂಬಿ, ಅಲೆಗಳ ರಭಸಕ್ಕೆ ಸಿಕ್ಕಿ ದೋಣಿಗಳು ಮುಳು­ಗು­ವುದು ಸಾಮಾನ್ಯ. ಸಾವು–ನೋವು ಸಂಭವಿಸುತ್ತಲೇ ಇದೆ. ಹೀಗೆ ಮುಳುಗಿದ ದೋಣಿಗಳ ಅವಶೇಷಗಳನ್ನು ತೆಗೆಯದಿರುವುದು ಇನ್ನಷ್ಟು ದುರಂತಗಳಿಗೆ ಆಸ್ಪದ ಆಗುತ್ತಿದೆ. ಮಂಗಳೂರು ಹಳೆ ಬಂದರಿನಲ್ಲಿ ದೋಣಿಗಳನ್ನು ನಿಲ್ಲಿಸಲು ಮೂರನೇ ಹಂತದ ವಿಸ್ತರಣೆ ಕಾಮಗಾರಿಗೆ ಹಸಿರು ಪೀಠ ಈಚೆಗೆ ತಡೆಯಾಜ್ಞೆ ನೀಡಿದೆ. ಇದು ಮೀನುಗಾರರಲ್ಲಿ ಆತಂಕ ಮೂಡಿಸಿದೆ.

ದೋಣಿಗಳು ಸಮುದ್ರಕ್ಕೆ ಇಳಿಯುವಾಗ ಹವಾಮಾನ ಸರಿ ಇದ್ದರೂ ವಾಪಸ್‌ ಬರುವಾಗ ವೈಪರೀತ್ಯದಿಂದಾಗಿ ಅಪಾಯಕ್ಕೆ ಸಿಲುಕುವುದೂ ಇಲ್ಲಿ ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ನವ ಮಂಗಳೂರು ಬಂದರು ಸಮೀಪದ ವಲಯದಲ್ಲಿ ದೋಣಿ­ಗಳಿಗೆ ದಡ ಸೇರಲು ಅನುಮತಿ ಕೊಡಬೇಕು. ಆದರೆ ಭದ್ರತೆ ಹೆಸರಲ್ಲಿ ­ಎನ್‌ಎಂಪಿಟಿ ಬಳಿ ಅನುಮತಿ ಸಿಗುತ್ತಿಲ್ಲ. ಇದೂ ದೊಡ್ಡ ಸಮಸ್ಯೆಯಾಗಿದೆ. ಎತ್ತರದ ಅಲೆಗಳನ್ನು ತಡೆಯಲು ‘ಬ್ರೇಕ್‌ ವಾಟರ್‌’ (ತಡೆಗೋಡೆ) ಕೊರತೆಯೂ ಕಾಡಿದೆ.

ಈಚಿನ ವರ್ಷಗಳಲ್ಲಿ ಮೀನುಗಾರಿಕೆಯಲ್ಲಿ ಕೇರಳ, ತಮಿಳುನಾಡು ರಾಜ್ಯಗಳ ಕಾರ್ಮಿಕರು ಹೆಚ್ಚಾಗಿ ದುಡಿಯುತ್ತಿದ್ದಾರೆ. ಅವರಿಗೆ ಗುರುತಿನ ಪತ್ರವೇ ಇಲ್ಲ. ಇದೂ ಸಂಘರ್ಷಗಳಿಗೆ ಕಾರಣ ಆಗುತ್ತಿದೆ. ಕಾರ್ಮಿಕರಿಗೆ ವಿಮೆ ಇತ್ಯಾದಿ ಸೌಲಭ್ಯಗಳೂ ಸರಿಯಾಗಿಲ್ಲ.
ಪರ್ಸೀನ್‌ ದೋಣಿಗಳಿಗೆ ಸಬ್ಸಿಡಿ ದರದಲ್ಲಿ ಡೀಸೆಲ್‌ ಸಿಗುತ್ತದೆ. ಆದರೆ ನಾಡದೋಣಿಗಳಿಗೆ ಪಡಿತರ ದರದಲ್ಲಿ ಸಿಗುತ್ತಿದ್ದ ಸೀಮೆ ಎಣ್ಣೆಗೆ ಈಚೆಗೆ ಕತ್ತರಿ ಹಾಕಲಾಗಿದೆ. ಪಡಿತರ ಸೀಮೆ ಎಣ್ಣೆಯನ್ನು ಮೀನುಗಾರಿಕೆಗೆ ಬಳಸಬಾರದೆಂಬ ಸುತ್ತೋಲೆ ಅವರಿಗೆ ಮುಳುವಾಗಿದೆ. ಒಟ್ಟಾರೆ, ಮೀನುಗಾರರ ಸ್ಥಿತಿ ‘ಮಾರಿಬಲೆ’ಗೆ ಸಿಕ್ಕ ಮೀನುಗಳಂತಾಗಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.