ADVERTISEMENT

ಕನಕದಾಸ ಜಯಂತಿ | ಕನಕ: ಬಾಳ ಬೆಳೆಯ ಬಂಗಾರ

ಎಸ್.ಸೂರ್ಯಪ್ರಕಾಶ ಪಂಡಿತ್
Published 29 ನವೆಂಬರ್ 2023, 21:00 IST
Last Updated 29 ನವೆಂಬರ್ 2023, 21:00 IST
ಕನಕದಾಸ
ಕನಕದಾಸ   

ಬೆಳೆಯನ್ನು ಬೆಳೆಯಬೇಕಾದರೆ ತೋಟದಲ್ಲಿ ವ್ಯವಸಾಯ ನಿರಂತರವಾಗಿ ನಡೆಯುತ್ತಿರಬೇಕು. ಸತ್ವಪೂರ್ಣ ಬೀಜವನ್ನು ಭೂಮಿಯಲ್ಲಿ ಬಿತ್ತಬೇಕು. ಸಮಯಕ್ಕೆ ಸರಿಯಾಗಿ ಅದಕ್ಕೆ ನೀರನ್ನು ಹಾಯಿಸಬೇಕು. ಪೈರಿಗೆ ರಕ್ಷಣೆಯನ್ನು ಒದಗಿಸಬೇಕು. ನೆಲದಲ್ಲಿ ಹುಟ್ಟುತ್ತಲೇ ಇರುವ ಕಳೆಯನ್ನು ಕಿತ್ತೊಗೆಯಬೇಕು. ಆಗ ಬೆಳೆ ನಮ್ಮ ಕೈ ಹಿಡಿದೀತು; ಫಲ ಕೊಟ್ಟೀತು.

ಸಮಾಜದ ಪ್ರಗತಿಗೂ ಮನುಜನ ಏಳಿಗೆಗೂ ಕಾರಣವಾಗಿರುವುದೇ ‘ಕೃಷಿ’. ನೆಲದಲ್ಲಿ ಭತ್ತ–ರಾಗಿಗಳನ್ನು ಬೆಳೆಯುವುದಷ್ಟೆ ಕೃಷಿಯಲ್ಲ; ಮನದಲ್ಲಿ ಭಕ್ತಿ–ವಿರಾಗಗಳನ್ನು ಬೆಳೆಸಿಕೊಳ್ಳುವುದೂ ಕೃಷಿಯೇ. ಒಂದು ಹೊರಗಿನ ಕೃಷಿ, ಇನ್ನೊಂದು ಒಳಗಿನ ಕೃಷಿ. ಈ ಎರಡರಲ್ಲೂ ಸಮನ್ವಯವನ್ನು ಸಾಧಿಸಿದವನೇ ಋಷಿ. ಇಂಥ ಜ್ಞಾನಿಗಳಷ್ಟೆ ಅಂತರಂಗ–ಬಹಿರಂಗದ ಬಾಳ್ವೆಗೆ ಬೆಳಕಾಗಬಲ್ಲರು. ಕನಕದಾಸರು ಅಂಥ ಜ್ಞಾನಿಗಳು; ಮಾತ್ರವಲ್ಲ, ಸಮಾಜ ಸುಧಾರಕರು.

ಜ್ಞಾನಿಗಳು ಕೈಗೆತ್ತಿಕೊಳ್ಳುವ ಸಮಾಜ ಸುಧಾರಣೆಗೆ ಮೂಲವೇ ಅವರ ಅಂತರಂಗದ ಬೆಳಕು. ಅದೇ ಅವರ ಶಕ್ತಿ. ಆಧ್ಯಾತ್ಮಿಕತೆಯೇ ಈ ಶಕ್ತಿಯ ಮೂಲಸತ್ತ್ವ. ಅಧ್ಯಾತ್ಮಕ್ಕೂ ಜಗತ್ತಿಗೂ ನಮ್ಮ ನೋಟಕ್ಕೂ ನೇರ ನಂಟು. ದೃಷ್ಟಿಗೆ ಕರಣವೇ ಕಣ್ಣು. ಆದರೆ ಈ ನಮ್ಮ ಕಣ್ಣಿಗೆ ಹೊರಗೆ ಮಾತ್ರ ನೋಡಿ ಅಭ್ಯಾಸ. ಅದರ ನೋಟ ನಮ್ಮ ಒಳಗೂ ಹೊಕ್ಕರೆ ಅದುವೇ ಅಧ್ಯಾತ್ಮ; ಮೂಲದ ಅರಿವು. ಆದರೆ ಒಳಗಣ್ಣಿನ ಈ ನೋಟಕ್ಕೆ ಸಾಧನೆ ಬೇಕೆನ್ನಿ! ಇದನ್ನೇ ಕನಕದಾಸರು ಹೀಗೆಂದರು:

ADVERTISEMENT

‘ಕಣ್ಣೆ ಕಾಮನ ಬೀಜ – ಈ

ಕಣ್ಣಿಂದಲೆ ನೋಡೊ ಮೋಕ್ಷಸಾಮ್ರಾಜ್ಯ

ಕಣ್ಣಿನ ಮೂರುತಿ ಬಿಗಿದು – ಒಳ

ಗಣ್ಣಿನಿಂದಲೆ ದೇವರ ನೋಡಣ್ಣ!’

ಒಳಗಣ್ಣು ತೆರೆದಾಗ ನಮಗೆ ಜೀವಾತ್ಮ–ಪರಮಾತ್ಮಗಳ ಅದ್ವೈತಾನುಭವ ಒದಗುತ್ತದೆ. ‘ತನು ನಿನ್ನದು ಜೀವನ ನಿನ್ನದೋ’ ಎಂಬ ಈ ಅರಿವು ಮೂಡಿದಾಗ ನಮ್ಮ ರಾಗ–ದ್ವೇಷಗಳು ಮರೆಯಾಗುತ್ತವೆ. ಸಮಾನತೆಗೂ ಸಾಮರಸ್ಯಕ್ಕೂ ಈ ಸತ್ವಗುಣವೇ ಗಾಳಿ, ಬೆಳಕು ಮತ್ತು ನೀರು. ಇದು ಸಿದ್ಧವಾದ ಮೇಲೆಯಷ್ಟೆ ಬಾಳಿನ ಕೃಷಿಗೆ ತೊಡಗಬೇಕು. ’ನಾರಾಯಣ ಎಂಬ ನಾಮದ ಬೀಜವನು ನಾಲಿಗೆಯಾ ಕೂರಿಗೆಯ ಮಾಡಿ ಬಿತ್ತಿರಯ್ಯ’ ಎಂದು ವ್ಯವಸಾಯದ ದಾರಿಯನ್ನು ತೋರಿದ್ದಾರೆ, ಕನಕದಾಸರು. ಹೃದಯವನ್ನೇ ಹೊಲವನ್ನಾಗಿ ಮಾಡಿಕೊಂಡು, ದೇಹವನ್ನೇ ನೇಗಿಲಾಗಿಸಿಕೊಂಡು, ಮನಸ್ಸನ್ನೇ ಧಾನ್ಯವನ್ನಾಗಿ ನೋಡಬೇಕೆಂದು ವಿವರಿಸುತ್ತ, ಬಾಳೆಂಬ ಕೃಷಿಯ ಮರ್ಮಗಳನ್ನೆಲ್ಲ ಅವರು ತಮ್ಮ ಕೃತಿಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. 

ಕನಕದಾಸರ ಜೀವನದಲ್ಲಿ ನಡೆದಿರುವ ‘ಕೋಣಮಂತ್ರ’ದ ಸಾಕ್ಷಾತ್ಕಾರ, ಕೃಷ್ಣನ ವಿಗ್ರಹ ಅವರ ಕಡೆಗೆ ತಿರುಗಿದ್ದು – ಇಂಥ ‘ಪವಾಡ’ಗಳಿಗೂ ಅಧ್ಯಾತ್ಮಸಾಧನೆಗೂ ಪ್ರತ್ಯಕ್ಷ ಸಂಬಂಧವುಂಟು. ದೇವರಿಲ್ಲದ ಸ್ಥಳವೇ ಸಿಗದೆ ಅವರು ಹಣ್ಣನ್ನು ತಿನ್ನದೆ ಹಿಂದಿರುಗಿದ್ದು, ಸ್ವರ್ಗಕ್ಕೆ ‘ನಾನು ಹೋದರೆ ಹೋಗಬಹುದು’ ಎಂದು ಘೋಷಿಸಿದ್ದು – ಇವು ಅವರ ಜ್ಞಾನಸಿದ್ಧಿಯನ್ನು ಸೂಚಿಸುತ್ತವೆ. ಹೀಗೆ ಅವರ ಜೀವನದುದ್ದಕ್ಕೂ ಕಾಣುವುದು ಜ್ಞಾನ–ಭಕ್ತಿಗಳ ಸಂಗಮವನ್ನೇ. ಹೀಗಾಗಿಯೇ ಅವರ ಜೀವನ–ದರ್ಶನ ಇಂದಿಗೂ ನಮಗೆ ಬೆಳಕು ಮತ್ತು ತಂಪು. ಆದರೆ ನಮ್ಮ ಇಂದಿನ ಸಮಾಜ ಸುಧಾರಣೆಯ ಪೈರುಗಳು ನಾಟಿಕೊಳ್ಳುವ ಮೊದಲೇ ಒಣಗಿಹೋಗುತ್ತಿರುತ್ತವೆ. ಇದಕ್ಕೆ ಕಾರಣವೇ, ನಾವು ಬಿತ್ತಿರುವ ಬೀಜದಲ್ಲಿ ಮರೆಯಾಗಿರುವ ಅಧ್ಯಾತ್ಮದ ಸತ್ವ. ಕಾಮ, ಕ್ರೋಧ, ಮದ, ಮತ್ಸರಗಳೆಂಬ ಕಳೆಗಳ ದಾಳಿಯಲ್ಲಿ ನಮ್ಮ ಬಾಳ ಬೆಳೆಯು ಬಾಡುತ್ತಿರುವುದನ್ನೇ ನಾವು ಗಮನಿಸುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.