ನಗರದಲ್ಲಿ ಕೋಟಿಗೂ ಹೆಚ್ಚು ಜನರಿದ್ದಾರೆ. ಇವರಿಗೆಲ್ಲ ದಿನಬಳಕೆಯ ಜೀವನಾವಶ್ಯಕ ವಸ್ತುಗಳನ್ನು ಪೂರೈಸುವ ಜಾಗ ಕೆ.ಆರ್.ಮಾರ್ಕೆಟ್ (ಕೃಷ್ಣ ರಾಜೇಂದ್ರ ಮಾರುಕಟ್ಟೆ). ರಾಜ್ಯದ ಅತಿ ದೊಡ್ಡ ವ್ಯಾಪಾರ ವಹಿವಾಟಿನ ಜಾಗ. ತುಂಬಿ ತುಳುಕುವ ಕಸ ಕೊಳೆತು ಕೆಟ್ಟ ವಾಸನೆ ಬೀರುವ ಸ್ಥಳ ಎನ್ನುವ ಕೀರ್ತಿಯೂ ಇದಕ್ಕಿದೆ.
ಇದು ಮಾರುಕಟ್ಟೆಯ ಹಗಲಿನ ಚಿತ್ರಣ. ರಾತ್ರಿಯಲ್ಲಿ ಇಲ್ಲಿನ ಬದುಕು ವೈವಿಧ್ಯಮಯ. ಇಡೀ ಬೆಂಗಳೂರು ಮಲಗಿದರೂ ಮಾರ್ಕೆಟ್ ಮಾತ್ರ ಸದಾ ಎಚ್ಚರ. ಬೆಳಿಗ್ಗೆ ಇಡೀ ನಗರಕ್ಕೆ ಬೇಕಾಗುವ ವಸ್ತುಗಳ ತಯಾರಿ/ವಿಲೇವಾರಿಯಲ್ಲಿ ಉತ್ಸುಕತೆಯಿಂದ ಕೆಲಸ ಮಾಡುವ ರೈತಾಪಿ, ಕೂಲಿ ಕಾರ್ಮಿಕರು ಮತ್ತು ವ್ಯಾಪಾರಿ ಜನರೆಷ್ಟೊ. ಹಲವಾರು ಊರುಗಳಿಂದ ಬರುವ ಸೊಪ್ಪು, ತರಕಾರಿಗಳು, ಹೂವು, ಪೂಜಾ ಸಾಮಾಗ್ರಿಗಳ ಸಗಟು ವಹಿವಾಟದ್ದೇ ಜೋರು. ಬಣ್ಣ ಬಣ್ಣದ ಹೂಗಳ ರಾಶಿ ನೋಡಲು ಎರಡು ಕಣ್ಣು ಸಾಲುವುದಿಲ್ಲ.
ರೈತರಿಂದ ಖರೀದಿಸಿ ಆಟೊ, ಟೆಂಪೊ, ಲಾರಿಗಳಲ್ಲಿ ಬರುವ ಸೊಪ್ಪು, ತರಕಾರಿಗಳು ಸಗಟು ದರದಲ್ಲಿವ್ಯಾಪಾರಿಗಳ ಸುಪರ್ದಿಗೆ. ಅಲ್ಲಿಂದ ಬೆಂಗಳೂರಿನ ವಿವಿಧ ಭಾಗದ ಅಂಗಡಿ ಮಾಲೀಕರು ಹೊತ್ತೊಯ್ದು ತಮ್ಮ ಅಂಗಡಿಗಳಲ್ಲಿ ರೀಟೈಲ್ ದರದಲ್ಲಿ ಮಾರುತ್ತಾರೆ. ಎಲ್ಲೊ ಬೆಳೆದ ಹೂ, ಹಣ್ಣು, ತರಕಾರಿ ಹತ್ತಾರು ಕೈಬದಲಾಗಿ ಕೊನೆಗೆ ನಮ್ಮ ಹೊಟ್ಟೆ ಸೇರುವುದು.
ಬದುಕು
ಮುಂಜಾನೆ 3 ಗಂಟೆಯಿಂದಲೇ ದಿನದ ಬದುಕು ಆರಂಭ. ವ್ಯಾಪಾರಕ್ಕಾಗಿ ಸಂಜೆಯೇ ಬಂದು ಸರಕು ಸಿದ್ಧಪಡಿಸಿಕೊಳ್ಳುವ ಜನರು ರಾತ್ರಿ ಮಾರುಕಟ್ಟೆಯಲ್ಲಿಯೇ ಉಳಿದುಕೊಳ್ಳುತ್ತಾರೆ. ದೂರದೂರಿನಿಂದ ಬರುವ ಜನ ತಡರಾತ್ರಿ ಮನೆ ಸೇರಲಾಗುವುದಿಲ್ಲ. ಶ್ರಮಜೀವಿಗಳು, ದಿನವಿಡೀ ದುಡಿದು ದಣಿವ ಜೀವಗಳು, ದೂರದ ಊರಿಗೆ ಹೋಗಲಾರದೆ ರಸ್ತೆ ಬದಿಗಳಲ್ಲಿ, ಗಬ್ಬು ನಾರುವ ಸ್ಥಳಗಳಲ್ಲಿ, ರಸ್ತೆಯ ಡಿವೈಡರ್ ನಡುವೆಯೇ ಮಲಗುತ್ತಾರೆ!
ಕೋಲಾರ, ಚಿಕ್ಕಬಳ್ಳಾಪುರ, ಶ್ರೀನಿವಾಸಪುರ, ದೇವನಹಳ್ಳಿ, ಚನ್ನಪಟ್ಟಣ, ನೆಲಮಂಗಲ, ಮಾಗಡಿ ಹೀಗೆ ನಗರದ ಸುತ್ತಲಿನ ಪ್ರಮುಖ ಪಟ್ಟಣಗಳಿಂದ ಈ ಮಾರಾಟದ ಪ್ರಕ್ರಿಯೆಯಲ್ಲಿ ತೊಡಗುವ ಜನರಿಗೆ ರಾತ್ರಿ ನಿದ್ರೆಯೆಂಬುದೇ ಇಲ್ಲ. ಕೆಲಸ ಮುಗಿದ ಮೇಲೆ ರಾತ್ರಿ ಉಳಿಯಲು ಸುರಕ್ಷಿತ ಸ್ಥಳವಿಲ್ಲ.
ಮಹಿಳೆಯರ ಪಾಡು ಕೇಳುವವರ‍್ಯಾರು?
ದೂರದ ಊರುಗಳಿಂದ ಬಂದು ತರಕಾರಿ, ಸೊಪ್ಪು ಮಾರುವ ಮಹಿಳೆಯರ ಸಂಖ್ಯೆಯೂ ಕಡಿಮೆಯೇನಿಲ್ಲ. ಬೆಳಿಗ್ಗೆ 3 ಗಂಟೆಯಿಂದ ವಹಿವಾಟು ಆರಂಭವಾಗುವುದರಿಂದ ರಾತ್ರಿಯೇ ಬಂದು ಮಾರುಕಟ್ಟೆಯಲ್ಲಿ ಉಳಿಯುವುದು ವಾಡಿಕೆ. ಈ ಮಹಿಳೆಯರಿಗೆ ಸುರಕ್ಷಿತ ಶೌಚಾಲಯಗಳಿಲ್ಲ. ವಿಶಾಂತ್ರಿಗೆ ಕೊಠಡಿಯ ವ್ಯವಸ್ಥೆಯೂ ಇಲ್ಲ. ಈ ಬಗ್ಗೆ ಇಲ್ಲಿಯವರೆಗೆ ಯಾರೂ ಗಮನವಹಿಸಲೇ ಇಲ್ಲ. ಕೆಲಸ ಮುಗಿದು ಸಿಕ್ಕ ಜಾಗದಲ್ಲಿಯೇ ಮಲಗುವ ಇವರ ರಕ್ಷಣೆ ಹೇಗೆ?
ಮೂಲ ಸೌಕರ್ಯಗಳ ಅಗತ್ಯ
ಮಳೆ, ಚಳಿ, ಗಾಳಿ ಎನ್ನದೇ ಕೆಲಸ ಮಾಡುವ ಇಲ್ಲಿನ ಶ್ರಮಜೀವಿಗಳಿಗೆ ಕುಡಿಯುವ ನೀರು, ಮತ್ತು ಸ್ವಚ್ಛ ಸ್ಥಳವೇ ಇಲ್ಲ. ಕಸದ ನಡುವೆ ಬದುಕು ಸಾಗಿಸುವುದರಿಂದ ಆರೋಗ್ಯ ಬಿಗಡಾಯಿಸುವುದೂ ಉಂಟು. ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವವರು, ಕೂಲಿ, ಕಾರ್ಮಿಕರಿಗೆ ಕುಡಿಯುವ ನೀರು, ವಿಶ್ರಾಂತಿ ಕೊಠಡಿ ಹಾಗೂ ಇತರೆ ಮೂಲ ಸೌಕರ್ಯಗಳ ಅಗತ್ಯವಿದೆ. ಈ ಬಗ್ಗೆ ಬಿಬಿಎಂಪಿ ಗಮನ ವಹಿಸುವುದು ಯಾವಾಗ?
**
ಬದುಕೋಕೆ ಏನಾದ್ರು ಮಾಡ್ಲೇಬೇಕಲ್ವಾ?
ನಮ್ಮ ಬದುಕು ನಡೆಯೋದು ಹಿಂಗೇಯಾ. ಸಂಜೆ ಹೊತ್ತಿಗೆ ಇಲ್ಲಿಗೆ ಬರ್ತಿವಿ. ಬೇರೆ ಬೇರೆ ಹಳ್ಳಿಗಳಿಂದ ಬರೋ ಸೊಪ್ಪ ತರಕಾರಿಯನ್ನ ವ್ಯಾಪಾರ ಮಾಡಿ ತಗೊಂಡು ಬೆಳಿಗ್ಗೆ ಮಾರ್ತೀವಿ. ಒಂದು ದಿನ ಲಾಭ ಆದ್ರೆ ಮತ್ತೊಂದು ದಿನ ನಷ್ಟ ಆಗತ್ತೆ. ಅದು ದಿನದ ಮೇಲೆ ನಿರ್ಧಾರ ಆಗತ್ತೆ. ಲಾಭಾನೋ, ನಷ್ಟಾನೋ ಬದುಕೋಕೆ ಏನಾದ್ರು ಮಾಡ್ಲೇಬೇಕಲ್ವಾ? ಎಂದು ಪ್ರಶ್ನಿಸುತ್ತಾರೆ ಮಾಲೂರಿನ ಬಾಬು.
**
20 ವರ್ಷಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಿದ್ದೇನೆ. ದಿನಾ ಸಂಜೆ ಊರಿನ ಸುತ್ತ ಮುತ್ತಲ ತೋಟಗಳಿಂದ ಸೊಪ್ಪು ತರಕಾರಿ ಕೊಂಡುಕೊಂಡು ಬರುತ್ತೇನೆ. ಮುಂಜಾನೆ 3 ಗಂಟೆಯಿಂದ ವ್ಯಾಪಾರ ಶುರುವಾಗುತ್ತದೆ. ಬೆಳಿಗ್ಗೆ 11 ಗಂಟೆ ಹೊತ್ತಿಗೆ ಊರಿಗೆ ಹೋಗುತ್ತೇನೆ.ಮನೆಯಲ್ಲಿ ನಾವು ನಾಲ್ಕು ಮಂದಿ ಇದ್ದೇವೆ. ಗಂಡ ಏನೂ ಕೆಲಸ ಮಾಡುವುದಿಲ್ಲ. ಮಗ ₹ 16 ಲಕ್ಷ ಸಾಲ ಮಾಡಿದ್ದಾನೆ. ಅದನ್ನ ತೀರಿಸಲು ದುಡಿತಿದಿನಿ.
- ದೇವನಹಳ್ಳಿಯ ಚೆನ್ನಮ್ಮ, ವ್ಯಾಪಾರಿ
**
ನಮ್ಮೂರು ಮಾಲೂರು. ಮೊದಲು ಕೂಲಿ ಕೆಲಸಕ್ಕೆ ಹೋಗುತ್ತಿದ್ದೆ. 5 ವರ್ಷಗಳಿಂದ ಇಲ್ಲಿ ವ್ಯಾಪಾರ ಮಾಡುವುದೇ ಜೀವನದ ಕಸುಬಾಗಿದೆ. ಸೊಪ್ಪಿನ ಲೋಡು ರಾತ್ರಿ ಹೊತ್ತು ಬರುತ್ತದೆ. ಹಾಗಾಗಿ ಬೇಗ ಬಂದು ಸೊಪ್ಪು ತಗೊಂಡು ಜೋಡಿಸ್ಕೊತೀನಿ ದಿನಾ ಬೆಳಿಗ್ಗೆ 10–11 ಗಂಟೆವರೆಗೂ ಕೆಲಸ ಇರುತ್ತೆ. ಆಮೇಲೆ ಊರಿಗೋಗಿ ಮನೆ ಕೆಲಸ ಮುಗಿಸಿ ಬರ್ತಿನಿ.
- ಶ್ರೀನಿವಾಸಪುರದ ನಾರಾಯಣಮ್ಮ, ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.