ADVERTISEMENT

ಗುರು ರಾಯರು: ಭಕ್ತರ ಕಾಮಧೇನು 

ಪ್ರಜಾವಾಣಿ ವಿಶೇಷ
Published 1 ಸೆಪ್ಟೆಂಬರ್ 2023, 0:17 IST
Last Updated 1 ಸೆಪ್ಟೆಂಬರ್ 2023, 0:17 IST
ಶ್ರೀ ರಾಘವೇಂದ್ರ ರಾಯರು
ಶ್ರೀ ರಾಘವೇಂದ್ರ ರಾಯರು   

ಎಸ್‌. ಜಯಸಿಂಹ

ಶ್ರಾವಣಮಾಸದ ಕೃಷ್ಣಪಕ್ಷದ ಬಿದಿಗೆ ಶ್ರೀ ರಾಘವೇಂದ್ರಸ್ವಾಮಿಗಳ ಆರಾಧನೆಯ ಪುಣ್ಯ ದಿವಸ. ಇದು ಅವರ 352ನೇ ವರ್ಷದ ಆರಾಧನಾ ಮಹೋತ್ಸವ.

ರಾಘವೇಂದ್ರಸ್ವಾಮಿಗಳನ್ನು ‘ರಾಯರು, ಗುರುರಾಯರು, ಗುರುರಾಜರು, ಗುರುಸಾರ್ವಭೌಮರು’ ಎಂಬೆಲ್ಲಾ ಹೆಸರುಗಳಿಂದ ಅವರ ಭಕ್ತರು ಸಂಬೋಧಿಸುತ್ತಾರೆ. ‘ರಾಯರು’ ಎಂಬುದಂತೂ ಅವರನ್ನು ಗುರುತಿಸುವ ಮನೆ, ಮನೆಯ ಸರ್ವಮಾನ್ಯ ಹೆಸರಾಗಿದೆ. ದೈನಂದಿನ ಜೀವನದಲ್ಲಿ ಯಾವುದೇ ತರಹವಾದ ಕಷ್ಟ, ಸಂಕಟ, ತೊಂದರೆ, ತೊಡಕುಗಳು ಎದುರಾದಾಗ ಭಾವುಕರಿಗೆ ತಟ್ಟನೆ ನೆನಪಾಗುವ ಹೆಸರೇ - ‘ರಾಯರು’. ಅವರ ಅಸಂಖ್ಯಾತ ಭಕ್ತವೃಂದದ ಪಾಲಿಗಂತೂ ರಾಯರು ಕಲಿಯುಗದ ಕಾಮಧೇನು, ಕಲ್ಪತರು. ಮಾನವತೆಯೇ ಮೈತಳೆದಂತಿರುವ ಮಾತೃಹೃದಯದ ವ್ಯಕ್ತಿತ್ವ ರಾಯರದು.

ADVERTISEMENT

ದ್ವೈತ ಸಿದ್ಧಾಂತದ ಬೆಳಕಿನಲ್ಲಿ ಶಾಸ್ತ್ರವಾಙ್ಮಯಕ್ಕೆ ರಾಯರು ಕೊಟ್ಟ ಕೊಡುಗೆ ಅಮೂಲ್ಯವಾದುದು. ಎಂತಹ ಕ್ಲಿಷ್ಟಕರ ಪ್ರಮೇಯಭರಿತ ಶಾಸ್ತ್ರಕೃತಿಗಳಿಗೂ ಸರಳ ರೀತಿಯಲ್ಲಿ ಮನಮುಟ್ಟುವಂತೆ ವ್ಯಾಖ್ಯಾನಿಸುವ ಅವರ ಶೈಲಿ ವಿಶಿಷ್ಟವಾದುದು. ಹಾಗಾಗಿಯೇ ಅವರಿಗೆ ‘ಟಿಪ್ಪಣ್ಣ್ಯಾಚಾರ್ಯಚಕ್ರವರ್ತಿ’ ಎಂಬ ಬಿರುದು ಸಂದಿದೆ. ರಾಯರದು ಅಸಾಧಾರಣ ವಿದ್ವತ್ಪೂರ್ಣ ಗ್ರಂಥರಚನಾ ಶೈಲಿ. ಅವರು ರಚಿಸಿದ ಗ್ರಂಥಗಳು ವೈವಿಧ್ಯಮಯವಾದವು. ಶ್ರುತಿ ಪ್ರಸ್ಥಾನ, ಉಪನಿಷತ್ ಪ್ರಸ್ಥಾನ, ಗೀತಾ ಪ್ರಸ್ಥಾನ ಮತ್ತು ಸೂತ್ರ ಪ್ರಸ್ಥಾನಗಳೆಂಬ ನಾಲ್ಕು ಪ್ರಸ್ಥಾನಗಳ ವ್ಯಾಪ್ತಿಯಲ್ಲಿ ಬರುವ ಮಂತ್ರಾರ್ಥಮಂಜರೀ, ಭಾವದೀಪ, ತತ್ತ್ವಮಂಜರೀ, ಪರಿಮಳ, ಚಂದ್ರಿಕಾಪ್ರಕಾಶ, ನ್ಯಾಯದೀಪ, ಪ್ರಾತಃಸಂಕಲ್ಪಗದ್ಯ, ರಾಮಚಾರಿತ್ರ್ಯ ಮಂಜರೀ, ಕೃಷ್ಣಚಾರಿತ್ರ್ಯ ಮಂಜರೀ, ಭಾಟ್ಟಸಂಗ್ರಹ, ಪ್ರಮೇಯ ಸಂಗ್ರಹಗಳಲ್ಲದೇ ನದಿತಾರತಮ್ಯಸ್ತೋತ್ರ, ದಶಾವತಾರಸ್ತುತಿ, ರಾಜಗೋಪಾಲಸ್ತುತಿ ಮುಂತಾದ ಸ್ತೊತ್ರಗಳೂ ಸೇರಿದಂತೆ ಸುಮಾರು ನಲವತ್ತೆಂಟು ಅಮೂಲ್ಯ ಕೃತಿಗಳನ್ನು ರಾಯರು ರಚಿಸಿದ್ದಾರೆ. ರಾಯರು ರಚಿಸಿರುವ ಈ ಎಲ್ಲ ಕೃತಿಗಳಲ್ಲಿ ಅವರ ಸರ್ವತೋಮುಖವಾದ ಪಾಂಡಿತ್ಯ, ಪ್ರತಿಭೆ ಮತ್ತು ಅಸೀಮ ಭಗವದ್ಭಕ್ತಿಗಳ ಪ್ರತಿಫಲನವಿದೆ.

ರಾಘವೇಂದ್ರಸ್ವಾಮಿಗಳಿಂದ ಕನ್ನಡ ಹರಿದಾಸ ಸಾಹಿತ್ಯದ ವಿಕಸನವೂ ವಿಶಿಷ್ಟ ರೀತಿಯಲ್ಲಿ ನಡೆಯಿತು. ನೂರಾರು ಹರಿದಾಸರಿಗೆ ಪ್ರೇರಕಶಕ್ತಿಯಾಗಿ, ಆಶ್ರಯದಾತರಾಗಿ ವಿಪುಲ ಸಾಹಿತ್ಯಸೃಷ್ಟಿಗೆ ರಾಘವೇಂದ್ರರು ಕಾರಣರಾದರಲ್ಲದೇ ತಮ್ಮ ಜೀವಿತಕಾಲದಲ್ಲಿ ‘ಧೀರ ವೇಣುಗೋಪಾಲ’ ಎಂಬ ಮುದ್ರಿಕೆಯಲ್ಲಿ ತಾವೇ ಸ್ವತಃ ಕನ್ನಡ ಕೃತಿಗಳನ್ನು ರಚಿಸಿದರು. ರಾಯರು ರಚಿಸಿರುವ ‘ಇಂದು ಎನಗೆ ಗೋವಿಂದ’ ಎಂಬ ಸುಂದರ ಕೀರ್ತನೆ ಅಪಾರ ಜನಮನ್ನಣೆಯನ್ನು ಗಳಿಸಿದೆ.

ರಾಘವೇಂದ್ರಸ್ವಾಮಿಗಳು ಪ್ರಮೇಯಭರಿತವಾದ ಶಾಸ್ತ್ರವಾಙ್ಮಯವನ್ನು ಪದ, ಪದ್ಯ, ಸುಳಾದಿಗಳ ಮೂಲಕ ಕನ್ನಡ ಭಾಷೆಗೆ ರೂಪಾಂತರಗೊಳಿಸಲು ಕಾರಣರಾದರು. ಜಾತಿ, ಮತ, ಪಂಥಗಳ ಭೇದವೆಣಿಸದೆ ಸಮಸ್ತಜೀವಿಗಳಲ್ಲಿಯೂ ದೇವಸದೃಶ ಕರುಣೆಯನ್ನು ತೋರಿದ ಗುರು ರಾಘವೇಂದ್ರರು ಆಸಿಕ್ಯಭಾವಗಳನ್ನು ಉದ್ದೀಪನಗೊಳಿಸಲು, ನೊಂದವರ ನೋವು, ಸಂಕಟಗಳನ್ನು ನಿವಾರಿಸಲು, ಹತಾಶೆಗೊಂಡವರಲ್ಲಿ ಸ್ಫೂರ್ತಿಯ ಜೀವಸೆಲೆಯನ್ನು ತುಂಬಲು ಅಸಂಖ್ಯಾತ ಅತಿಮಾನುಷವೆನ್ನಿಸುವ ಮಹಿಮೆಗಳನ್ನು ತೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.