ADVERTISEMENT

ಆತಂಕದೊಳಗೂ ಆಶಾಕಿರಣವಿದೆ

​ಪ್ರಜಾವಾಣಿ ವಾರ್ತೆ
Published 26 ಮೇ 2013, 19:59 IST
Last Updated 26 ಮೇ 2013, 19:59 IST

ಆರಂಭದಿಂದಲೂ ಜಾತಿ ಹೋಗಬೇಕು ಎಂದು ಆಶಿಸಿದವರು ನಾವು. ಜಾತಿಯ ಈಗಿನ ಭಿನ್ನ ಆಕಾರಗಳನ್ನು ನೋಡಿದರೆ ಆತಂಕವಾಗುತ್ತದೆ. ಭವಿಷ್ಯದಲ್ಲಿ ಜಾತಿ ಇದಕ್ಕಿಂತ ಸೂಕ್ಷ್ಮವಾಗಬಹುದು. ಜಾತಿಯತೆ ಯಾವತ್ತೂ ಮುಂದುವರಿಯುತ್ತದೆ ಎಂದು ಯೋಚಿಸಿದಾಗ ಆತಂಕ, ನಿರಾಶೆ ಆಗುತ್ತದೆ.

ಸಣ್ಣ ಭರವಸೆಯಂದರೆ ದಲಿತ ಸಂಘಟನೆಗಳು ಸದೃಢವಾಗುತ್ತಿರುವುದು. ಅವು ಭರವಸೆ ಹುಟ್ಟಿಸುತ್ತಿವೆ. ಇದಲ್ಲದೆ ಚಿತ್ರದುರ್ಗ, ಇಳಕಲ್ ಸೇರಿದಂತೆ ಕೆಲವು ಮಠಗಳು ಶೂದ್ರ ಜಾತಿಗೆ ಸೇರಿದವರನ್ನು ಸ್ವಾಮಿಗಳನ್ನಾಗಿ ನೇಮಕ ಮಾಡುತ್ತಿವೆ. ಇವೆಲ್ಲ ಉತ್ತಮ ಬೆಳವಣಿಗೆಗಳು. ದಲಿತ ಬರಹಗಾರರ ಜಾಗೃತಿ ಬಹಳ ಆಸೆ ಹುಟ್ಟಿಸುವಂತಹುದು.

ಮಹಿಳಾ ಬರಹಗಾರ್ತಿಯರು ಅದರಲ್ಲೂ ಮುಸ್ಲಿಂ ಬರಹಗಾರ್ತಿಯರು ಬಹಳ ಚೆನ್ನಾಗಿ ಬರೆಯುತ್ತಿದ್ದಾರೆ. ಇದೆಲ್ಲ ಹೊಸ ಭರವಸೆ ಹುಟ್ಟಿಸುವ ಅಂಶಗಳು. ಜಾತಿ ಪದ್ಧತಿ ಹೋಗಲಿದೆ ಎಂದು ಆಸೆ ಇಟ್ಟುಕೊಳ್ಳಲು ಅನೇಕ ಸಂಗತಿಗಳು ಇವೆ. ಇದರ ನಡುವೆಯೂ, ಜಾತಿವಾದಿಗಳು ಹೆಚ್ಚು ಹೆಚ್ಚು ಸೂಕ್ಷ್ಮರಾಗುತ್ತಿರುವುದು ಆತಂಕದ ಸಂಗತಿ.

ADVERTISEMENT

ಅವರ ಎದುರು ನಿಲ್ಲಲು ನಮಗೆ ಶಕ್ತಿ ಇಲ್ಲ. ನಾವು ತಾಯಿಯ ಒಡಲಿನ ಬಾಂಧವ್ಯದವರು. ನಮಗೆ ಅಂತಃಕರಣ, ಮಾನವೀಯತೆ, ಕೂಡಿ ಬಾಳುವುದು ಬೇಕು. ಜಾತಿಯತೆ ಹೋಗಲಾಡಿಸಲು ನಿರಂತರ ಪ್ರಯತ್ನ ಮಾಡಬೇಕಿದೆ. ಈ ದಿಸೆಯಲ್ಲಿ ಮುಂದಿನವರಲ್ಲಿ ಹೆಚ್ಚು ಆಸೆ ಹುಟ್ಟಿಸುವ ಕೆಲಸ ಮಾಡಬೇಕಿದೆ.

-ಡಾ.ಚಂದ್ರಶೇಖರ ಕಂಬಾರ, ಹಿರಿಯ ಸಾಹಿತಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.