ನಾವು ಈ ಸಂವಾದವನ್ನು ಪ್ರಾರಂಭಿಸಿದಾಗ ಜಾತಿಯ ಬಗ್ಗೆ ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಭಾರತದಲ್ಲಿ ಜಾತಿಯು ಎಲ್ಲ ಕ್ಷೇತ್ರಗಳಲ್ಲೂ ತಳವೂರಿರವದು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಖರವಾಗಿ ಕಂಡುಬರುತ್ತಿದೆ. ಹೆಚ್ಚು ಹೆಚ್ಚು ಜನರನ್ನು ಅದು ಬಾಧಿಸುತ್ತಿದೆ. ಆದರೆ ಅದೇ ಹೊತ್ತಿಗೆ ಜಾತಿಯ ಬಗ್ಗೆ ಮಾತನಾಡುವುದು, ಸಿದ್ಧಾಂತಗಳನ್ನು ಮಂಡಿಸುವುದು, ಸಮಾಜವು ಅದರ ಬಗ್ಗೆ ಯಾವ ರೀತಿ ಮಾತನಾಡಬೇಕು ಎಂಬುದನ್ನು ನಿರ್ಧರಿಸುವುದು ಕೆಲವೇ ಜನರ, ಕೆಲವೇ ಗುಂಪುಗಳ ಕೈಗಳಲ್ಲಿವೆ.
ಜಾತಿ ರೂಢಿಗಳ ಬಗ್ಗೆ ಹಲವು ವಿಶಿಷ್ಟ ಕತೆಗಳು ಮತ್ತು ಮೌಲಿಕ ಒಳನೋಟಗಳು ನಮಗೆ ಕಂಡು ಬಂದದ್ದು ಖಾಸಗಿ ಮಾತುಕತೆಗಳಲ್ಲಿ. ಎಲ್ಲರೂ ಆ ರೀತಿಯ ಒಳನೋಟಗಳನ್ನು ಸಾರ್ವಜನಿಕವಾಗಿ ಯಾವುದೇ ಪ್ರತಿಬಂಧನೆಯಿಲ್ಲದೆ ಹಂಚಿಕೊಳ್ಳಲು ಸಾಧ್ಯವಾಗಬೇಕೆಂಬುದೇ ಈ ಮಾಲಿಕೆಯ ಮೂಲ ಉದ್ದೇಶ. ಈವರೆಗೆ ನೀವು ಸತತವಾಗಿ ಪ್ರತಿಕ್ರಿಯಿಸುತ್ತ ಬಂದಿರುವುದು ಸಂತೋಷ. ನಿಮ್ಮ ಪಾಲ್ಗೊಳ್ಳುವಿಕೆಯು ಮುಂದಿನ ವಿಚಾರಗಳ ಚರ್ಚೆಯಲ್ಲಿಯೂ ಹೀಗೇ ಮುಂದುವರೆಯಲಿ.
ಈ ವಾರದಿಂದ ನಾವು ಜಾತಿಗೆ ಸಂಬಂಧಿಸಿದ ಸೈದ್ಧಾಂತಿಕ ವಿಚಾರಗಳನ್ನು ಚರ್ಚಿಸಬಯಸುತ್ತೇವೆ. ಜಾತಿಯನ್ನು ಹಲವು ಚಿಂತಕರು ಯಾವ ಯಾವ ರೀತಿ ಅರ್ಥೈಸಿದ್ದಾರೆ? ಜಾತಿ ಎನ್ನುವುದು ನಮ್ಮ ಸಮಾಜದಲ್ಲಿ ವಾಸ್ತವವಾಗಿಯೂ ಇರುವಂತಹದ್ದೇ? ಅದರ ಕಾರ್ಯೋದ್ದೇಶಗಳೇನು? ಜಾತಿಯು ಎಲ್ಲಾ ಧರ್ಮಗಳಲ್ಲೂ ಇದೆಯೇ? ಈ ರೀತಿಯ ವಿಚಾರಗಳು ಮುಂದಿನ ವಾರಗಳಲ್ಲಿ ಚರ್ಚೆಯಾಗುತ್ತವೆ. ಅದನ್ನು ಪ್ರಾರಂಭಿಸಲು, ಜಾತಿಯು ಸಾಮಾಜಿಕ ವಾಸ್ತವವೇ ಎಂಬ ಒಂದು ವಿಚಾರವನ್ನು ನಾವು ಈ ಲೇಖನದಲ್ಲಿ ಚರ್ಚಿಸುತ್ತೇವೆ.
ಜಾತಿ ಎಂಬುದು ಸಮಾಜದಲ್ಲಿನ ಸಂಗತಿ ಎಂದು ನಾವು ಅಂದುಕೊಳ್ಳುತ್ತೇವೆ. ಈ ಸಂಗತಿಯನ್ನು ಹಲವು ಸಮಾಜಶಾಸ್ತ್ರಜ್ಞರು ವಿಸ್ತಾರವಾಗಿ ಅಧ್ಯಯನ ಮಾಡಿದ್ದಾರೆ. ಸಾಮಾಜಿಕ ರೂಢಿಗಳು ಹೆಚ್ಚಾಗಿ ಜಾತಿ ರೂಢಿಗಳೇ ಆಗಿವೆ ಎಂದು ಅವರಲ್ಲಿ ಹೆಚ್ಚಿನವರು ಒಪ್ಪುತ್ತಾರೆ. ಹಾಗೆಂದ ಮಾತ್ರಕ್ಕೆ ಸಾಮಾಜಿಕ ರೂಢಿಗಳು ಮತ್ತು ಜಾತಿಯ ನಡುವೆ ಸ್ಪಷ್ಟವಾದ ಗೆರೆಯೇನೂ ಇಲ್ಲ.
ಹಾಗಿದ್ದೂ ಸಮಾಜದ ಇತರ ಸಂಗತಿಗಳಾದ ವರ್ಗ ಮುಂತಾದವುಗಳಿಂದ ಜಾತಿಯನ್ನು ಬೇರ್ಪಡಿಸಿ ನೋಡಲು ಅನುವಾಗುವಂತೆ ಸಮಾಜಶಾಸ್ತ್ರಜ್ಞರು ಕೆಲವು ವೈಶಿಷ್ಟ್ಯಗಳನ್ನು ಪಟ್ಟಿ ಮಾಡಿದ್ದಾರೆ. ಆ ರೀತಿಯ ಒಂದು ವೈಶಿಷ್ಟ್ಯವೆಂದರೆ ಅಸಮಾನತೆ ಮತ್ತು ಶ್ರೇಣೀಕರಣ.
ಲೂಯಿ ದುಮೋ ಎಂಬ ಫ್ರೆಂಚ್ ಚಿಂತಕನ ಹೋಮೋ ಹೈರಾರ್ಕಿಕಸ್ ಈ ವಿಚಾರವನ್ನು ಚರ್ಚಿಸುವ ಮಹತ್ವದ ಪುಸ್ತಕಗಳಲ್ಲಿ ಒಂದು. (ನಾವು ಕೆಲವು ವಾರಗಳಹಿಂದೆ ಈ ಪುಸ್ತಕದ ಒಂದು ಸಣ್ಣ ಭಾಗವನ್ನು ಇದೇ ಮಾಲಿಕೆಯಲ್ಲಿ ಪ್ರಕಟಿಸಿದ್ದು ನಿಮಗೆ ನೆನಪಿರಬಹುದು.) ಆದರೆ ಜಾತಿಯು ಹಲವು ಸಮುದಾಯಗಳ ನಡುವೆ ಇರುವ ಶ್ರೇಣೀಕರಣವನ್ನು ಪ್ರತಿನಿಧಿಸುತ್ತದೆ ಅಥವಾ ಶ್ರೇಣೀಕರಣಕ್ಕೆ ಜಾತಿಯೇ ಕಾರಣವೆನ್ನುವುದನ್ನು ಒಪ್ಪದ ಚಿಂತಕರೂ ಹಲವರಿದ್ದಾರೆ.
ಜಾತಿಯ ಬಗೆಗಿನ ಸಾಮಾನ್ಯ ತಿಳಿವಳಿಕೆಯು ಅದನ್ನು ಹುಟ್ಟು ಮತ್ತು ವೃತ್ತಿಯ ಜೊತೆಗೆ ತಳುಕುಹಾಕುತ್ತದೆ.
ಆ ರೀತಿಯ ತಿಳಿವಳಿಕೆಯು ನಗರಗಳಲ್ಲಿ ಸಡಿಲಗೊಂಡಂತೆ ಕಂಡರೂ ಅದು ಬೇರೆಯ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿದೆಯೇ? ಅದರ ಪರಿಣಾಮ ಗ್ರಾಮ ಭಾರತದ ಮೇಲೆಯೂ ಆಗುತ್ತಿದೆಯೇ ಎಂಬುದನ್ನು ಒರೆ ಹಚ್ಚಿ ನೋಡಬೇಕಿದೆ. ಜಾತಿಯು ಭಾರತದಲ್ಲಿ ಬ್ರಿಟಿಷ್ ಆಡಳಿತದ ಫಲ, ಬ್ರಾಹ್ಮಣರನ್ನು ಉಚ್ಚರೆಂದು ಪರಿಗಣಿಸುವ ಶ್ರೇಣೀಕರಣವೂ ಬ್ರಿಟಿಷರ ಕೊಡುಗೆಯೇ ಎಂದು ಕೆಲವು ಬರಹಗಾರರು ವಾದಿಸುತ್ತಾರೆ. ಜಾತಿಯ ಬಗೆಗಿನ ಸಮಕಾಲೀನ ಸಿದ್ಧಾಂತಗಳಲ್ಲಿ ಮೂರು ವಿಚಾರಗಳು ಪದೇ ಪದೇ ಚರ್ಚೆಗೆ ಬರುತ್ತವೆ.
ಮೊದಲನೆಯದಾಗಿ, ಜಾತಿ ಪದ್ಧತಿಯು, ಬ್ರಾಹ್ಮಣರನ್ನು ಉಚ್ಚರೆಂದು ಪರಿಗಣಿಸುವ ಮತ್ತು ಕೆಳ ಜಾತಿಯವರು ಅದನ್ನು ಒಪ್ಪಿಕೊಳ್ಳುವ ಈ ಶ್ರೇಣೀಕೃತ ಪದ್ಧತಿಯು ನಮ್ಮ ಸಮಾಜದಲ್ಲಿ ನಿಜವಾಗಿಯೂ ಅಸ್ತಿತ್ವದಲ್ಲಿದೆಯೇ ಎಂಬ ಪ್ರಶ್ನೆ.
ಎರಡನೆಯದಾಗಿ, ಹಿಂದೆ ಯಾವ ಜಾತಿಯವರನ್ನು ಕಡೆಗಣಿಸಲಾಗಿತ್ತೋ ಅವರಲ್ಲಿ ಹಲವರು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಬಲಗೊಂಡಿರುವಾಗ ಇಂದಿನ ಭಾರತದಲ್ಲಿ ಜಾತಿಯು ಪ್ರಸ್ತುತವೇ ಎಂಬುದು.
ಮೂರನೆಯದಾಗಿ, ಜಾತಿಯು ಸಮಾಜದಲ್ಲಿ ನಿಜವಾಗಿಯೂ ಇದೆಯೇ ಅಥವಾ ಇಲ್ಲದ ಅದನ್ನು ಯಾರೋ ಕಟ್ಟಿ ನಿಲ್ಲಿಸಿದ್ದೇ ಎಂಬುದು; ಇದರ ಅರ್ಥ ನಾವು ಜಾತಿಯ ರೂಢಿಗಳನ್ನು ಗಮನಿಸದಿದ್ದರೆ ನಮ್ಮ ಸಮಾಜದಲ್ಲಿ ಜಾತಿ ಇಲ್ಲವಾಗುತ್ತದೆ ಎಂದು.
ಈ ಮೂರನ್ನೂ ಒಳಗೊಂಡು ಜಾತಿಯ ಬಗೆಗೆ ಹಲವು ದೃಷ್ಟಿಕೋನಗಳನ್ನು ಸಮಾಜಶಾಸ್ತ್ರಜ್ಞರು, ರಾಜ್ಯಶಾಸ್ತ್ರಜ್ಞರು, ಹೋರಾಟಗಾರರು ಮತ್ತಿತರರು ಬಹಳ ವಿಸ್ತಾರವಾಗಿ ಚರ್ಚಿಸಿದ್ದಾರೆ.
ನಾವು ಪಡೆದ ಹೆಚ್ಚಿನ ಪ್ರತಿಕ್ರಿಯೆಗಳು ಈ ಸಮಾಜದಲ್ಲಿ ಜಾತಿಯು ಇವತ್ತಿಗೂ ಹಲವು ರೀತಿಗಳಲ್ಲಿ ಜೀವಂತವಾಗಿದೆ ಎಂದು ನೀವು ತಿಳಿದಿರುವುದನ್ನು ತೋರಿಸುತ್ತದೆ. ನಮ್ಮ ಓದುಗರ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಜಾತಿ ಎಂಬ ಶಕ್ತಿಯು ನಮ್ಮ ಸಮಾಜದಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಲು ಹಲವು ಸೂಕ್ತ ಕಾರಣಗಳಿವೆ-ಜಾತಿ ಎಂಬುದು ಹಲವು ಕ್ಷೇತ್ರಗಳನ್ನು ಪ್ರಭಾವಿಸುತ್ತಿದೆ, ನಾವು ಸಮಾಜವನ್ನು ನೋಡುವ ರೀತಿಯನ್ನು ಅದು ಪ್ರಭಾವಿಸುತ್ತದೆ ಮತ್ತು ನಿರ್ಧರಿಸುತ್ತದೆ, ಇತರ ಜನರು ಮತ್ತು ಸಂಸ್ಥೆಗಳೊಂದಿಗಿನ ನಮ್ಮ ಸಂಬಂಧವನ್ನು ಅದು ನಿರೂಪಿಸುತ್ತದೆ, ಹೀಗೆ ನಮ್ಮ ಬದುಕಿನ ಹಲವು ಮಗ್ಗಲುಗಳನ್ನು ಅದು ಹಾಸು ಹೊಕ್ಕಾಗಿ ಸೇರಿಕೊಂಡಿದೆ.
ಹೀಗೆ ಹೇಳುವುದರ ಅರ್ಥವೇನು? ನಾವು ಜಾತಿಯನ್ನು ಪ್ರೋತ್ಸಾಹಿಸುತ್ತಾ, ಜಾತಿ ನಿರ್ಮೂಲನವು ಆಗಬಾರದು ಎನ್ನುತ್ತಿದ್ದೇವೆಯೇ? ಖಂಡಿತಾ ಇಲ್ಲ. ಬದಲಿಗೆ ಜಾತಿಯ ಸಂಕೀರ್ಣತೆಯೇನು, ಅದು ಅಸಂಖ್ಯಾತ ಜನರ ದಿನನಿತ್ಯದ ಬದುಕಿನ ಒಳ ಹೊರಗನ್ನು ವ್ಯಕ್ತವಾಗಿ ಅಥವಾ ಅವ್ಯಕ್ತವಾಗಿ ಹೇಗೆ ಪ್ರಭಾವಿಸುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಈ ಮಾಲಿಕೆಯದು.
ಜಾತಿಯ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳದೇ ನಡೆಸಿದ ಜಾತಿ ನಿರ್ಮೂಲನದ ಅರೆಬೆಂದ ಪ್ರಯತ್ನಗಳು ಹಲವು ರೀತಿಗಳಲ್ಲಿ ಜಾತಿಯನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಮಾತ್ರ ಸಫಲವಾಗಿವೆ. ಹಾಗಾಗಿ ಈ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳದೆ ಅದರ ನಿರ್ಮೂಲನದ ಬಗ್ಗೆ ಮಾತನಾಡಲೂ ಸಾಧ್ಯವಿಲ್ಲ.
ಯಾಕೆಂದರೆ ಯಾವುದನ್ನಾದರೂ ವಿರೋಧಿಸಬೇಕು, ನಿರ್ಮೂಲನ ಮಾಡಬೇಕು ಅಂದರೆ ಅದರ ಒಳ ಹೊರಗನ್ನು ಸಾಧ್ಯವಾದ ಮಟ್ಟಿಗೆ ಆಳವಾಗಿ ಅರಿತುಕೊಳ್ಳುವ ಅವಶ್ಯಕತೆ ಇದೆ. ಉದಾಹರಣೆಗೆ, ಜಾತಿ ಮತ್ತು ವರ್ಗದ ನಡುವಿನ ಸಂಬಂಧವನ್ನು ಅರ್ಥ ಮಾಡಿಕೊಳ್ಳುವುದು ಜಾತಿಯನ್ನು ಅರಿಯುವ ಒಂದು ಮಾರ್ಗ.
ಜಾತಿ-ವರ್ಗದ ಸಂಬಂಧ
ಜಾತಿ ಮೂಲದ ಬಗ್ಗೆ ಹಲವಾರು ಕತೆಗಳಿವೆ, ಸಿದ್ಧಾಂತಗಳಿವೆ. ಶ್ರೀಧರ ವೆಂಕಟೇಶ ಕೇತ್ಕರ್ ಅವರು ಮಂಡಿಸಿ ಬಾಬಾಸಾಹೇಬ್ ಅಂಬೇಡ್ಕರ್‌ರವರು ಪ್ರತಿಪಾದಿಸಿದ ಸಿದ್ಧಾಂತವು ಅವುಗಳಲ್ಲಿ ಅತ್ಯಂತ ಮಹತ್ವದ್ದು. ಅವರ ಪ್ರಕಾರ ಜಾತಿ ಎಂಬುದು ತಲೆ ಮರೆಸಿಕೊಂಡ ವರ್ಗ. ಜಾತಿಯನ್ನು ಬ್ರಹ್ಮ ರೂಪಿಸಿದ್ದು ಎನ್ನುವ ದೈವೀ ಸಿದ್ಧಾಂತವನ್ನು ಅವರು ಸಾರಾಸಗಟಾಗಿ ತಳ್ಳಿಹಾಕುತ್ತಾರೆ.
ಅವರ ಮಾತಿನ ಅರ್ಥ ಜಾತಿಯು ಪ್ರಶ್ನಾತೀತವಲ್ಲ, ದೋಷಾತೀತವಲ್ಲ ಎಂದು. ಜಾತಿಯು ತನ್ನ ಒಡಲಿನಲ್ಲಿ ವರ್ಗವನ್ನು ಬೆಚ್ಚಗೆ ಕಾಪಿಟ್ಟುಕೊಳ್ಳುತ್ತದೆ ಎಂಬುದರ ಮೂಲಕವೇ ಈ ಇಬ್ಬರು ಚಿಂತಕರೂ ಜಾತಿಯನ್ನು ಅರ್ಥೈಸುತ್ತಾರೆ. ತನ್ನ ದುಡಿಮೆಯ ಫಲವಾಗಿ ಮನುಷ್ಯನು ಒಂದು ವರ್ಗದಿಂದ ಮತ್ತೊಂದು ವರ್ಗಕ್ಕೆ ಏರುವ ಅಥವಾ ಇಳಿಯುವ ಸಾಧ್ಯತೆಯಿದೆಯೋ ಆ ಸಾಧ್ಯತೆಯನ್ನೇ ಊನಗೊಳಿಸಿಬಿಡುವುದು ಜಾತಿಯ ಉದ್ದೇಶ ಎಂದು ಕೇತ್ಕರ್ ಮತ್ತು ಅಂಬೇಡ್ಕರ್ ಅಭಿಪ್ರಾಯಪಡುತ್ತಾರೆ.
ಇವತ್ತು ಹಲವರು ಹೇಳುವಂತೆ ಜಾತಿಯೆಂಬುದು ಬ್ರಿಟಿಷರ ಕುಟಿಲ ತಂತ್ರದ ಪರಿಣಾಮವೆನ್ನುವ ವಾದವನ್ನು ಈ ಸಿದ್ಧಾಂತವು ಅಲ್ಲಗಳೆಯುತ್ತದೆ. ಭಾರತದ ಸಾಮಾಜಿಕ ಇತಿಹಾಸದಲ್ಲಿ ಜಾತಿಯು ಯಾವತ್ತಿನಿಂದಲೂ ಇರುವಂಥದ್ದು.
ಹಾಗೆಯೇ, ಜಾತಿಯ ಶ್ರೇಣೀಕರಣವನ್ನು ಜಾತಿಯ ಮೂಲಕವೇ ತಿಳಿಯಬೇಕೇ ಹೊರತು ಪಾಶ್ಚಿಮಾತ್ಯ ಸಮಾಜಗಳನ್ನೂ ಸೇರಿ ಇತರ ಸಮಾಜಗಳಲ್ಲಿ ಇರುವ ಶ್ರೇಣೀಕರಣವನ್ನು ಆಧರಿಸಿ ಅರ್ಥೈಸಲು ಸಾಧ್ಯವಿಲ್ಲ. ಈ ಚಿಂತಕರು ಇನ್ನೊಂದು ಕುತೂಹಲಕಾರಿ ಗ್ರಹಿಕೆಯನ್ನು ನಮ್ಮ ಮುಂದಿಡುತ್ತಾರೆ. ಅದೇನೆಂದರೆ, ಹಿಂದೂ ಧರ್ಮವೇ ಭಾರತದ ಇತರ ಧರ್ಮಗಳಿಗೆ ಮತ್ತು ಸುತ್ತ ಮುತ್ತಲ ರಾಷ್ಟ್ರಗಳಿಗೆ ಜಾತಿಯನ್ನು ಔಟ್‌ಸೋರ್ಸ್ ಮಾಡಿದೆ ಎಂಬುದು.
ಜಾತಿಯು ಕಾಲ ಮತ್ತು ಪ್ರದೇಶದ ಎಲ್ಲೆಗಳನ್ನು ಮೀರಿ, ಉಚ್ಚ ನೀಚ ಎಂಬ ಸಾಮಾಜಿಕ ಶ್ರೇಣೀಕರಣವನ್ನು ವ್ಯಕ್ತಿ ಪ್ರಜ್ಞೆಯ ಒಂದು ಭಾಗವನ್ನಾಗಿಸಿ ಜೀವಂತವಾಗಿ ಉಳಿದುಕೊಂಡು ಬಂದಿದೆ ಎಂದು ಲೂಯಿ ದುಮೋ ಹೇಳುತ್ತಾರೆ. ಅಂದರೆ ಉಪಜಾತಿಗಳು ಇತರ ಉಪಜಾತಿಗಳ ಶ್ರೇಣೀಕೃತ ಸಂಬಂಧದಲ್ಲಿ ತಾವು ಮೇಲಿದ್ದೇವೆಂದು ತೋರಿಸಿಕೊಳ್ಳಲು ಮಡಿ, ಮೈಲಿಗೆ ಮತ್ತು ಅಸ್ಪೃಶ್ಯತೆಗಳನ್ನು ಬಳಸಿಕೊಳ್ಳುತ್ತವೆ.
ಆ ಮೂಲಕ ಪ್ರತಿಯೊಂದು ಜಾತಿಯೂ ಸಾಮಾಜಿಕ ಶ್ರೇಣೀಕರಣದ ಒಳಕ್ಕೆ ಬರುತ್ತದೆ ಮತ್ತು ಉಪಜಾತಿಗಳೂ ಅದೇ ರೀತಿಯಲ್ಲಿ ಶ್ರೇಣೀಕೃತವಾಗುತ್ತವೆ. ಆದರೆ ಶ್ರೇಣಿಯಲ್ಲಿನ ಸ್ಥಾನ ಸ್ಥಿರವಲ್ಲ. ಅದು ಬದಲಾಗಬಹುದು. ಅದು ಹಲವು ರೀತಿಗಳಲ್ಲಿ, ಹಲವು ಪರಿಭಾಷೆಗಳಲ್ಲಿ ವ್ಯಕ್ತವಾಗುತ್ತದೆ. ಉದಾಹರಣೆಗೆ ಭಾರತದಲ್ಲಿ ಬ್ರಾಹ್ಮಣ ಜಾತಿಯ ಎಂಟು ನೂರಕ್ಕೂ ಹೆಚ್ಚಿನ ಉಪಜಾತಿಗಳು ಕಂಡುಬರುತ್ತವೆ. ಅಥವ ಒಡಿಶಾದ ಹಲವು ಪ್ರಾಂತ್ಯಗಳಲ್ಲಿ ಹೆಚ್ಚು ಕಡಿಮೆ ಒಂದೇ ಮಟ್ಟದ ಅಸ್ಪೃಶ್ಯರನ್ನು ದೋಮ್, ಪನಾ, ಗುಂಡ್ ಮುಂತಾದ ಬೇರೆ ಬೇರೆ ಹೆಸರುಗಳಿಂದ ಕರೆಯುವ ರೂಢಿಯಿದೆ.
ಜಾತಿ ಪದ್ಧತಿಯ ಮೂಲ ಸಾರವು ಸಾಮಾಜಿಕ ಶ್ರೇಣೀಕರಣ. ಅದು ಪ್ರಕಟಗೊಳ್ಳುವುದು ಅಸ್ಪೃಶ್ಯತೆಯ ಮುಖಾಂತರ. ಈ ಕಾರಣದಿಂದಾಗಿ ಜಾತಿ ಪದ್ಧತಿಯು ಸಮಾಜದ ಉದ್ದಗಲಗಳಲ್ಲಿಯೂ ಹುಟ್ಟಿಕೊಳ್ಳುತ್ತದೆ ಮತ್ತು ಅದು ಸಮಾಜದ ಬಲಿಷ್ಠ ಗುಂಪುಗಳ ಆಸಕ್ತಿಗಳಿಗೆ ಅನುಗುಣವಾಗಿ ವರ್ತಿಸುತ್ತದೆ. ಕೆಲವೇ ಜನರು ಹೆಚ್ಚಿನ ಹಣವನ್ನು ಇಟ್ಟುಕೊಂಡು ಇಡೀ ಸಮಾಜವನ್ನು ಆಳುವ ಬಂಡವಾಳಶಾಹಿಯಂತೆಯೇ ಈ ವ್ಯವಸ್ಥೆ ಕೂಡಾ. ಜಾತಿ ಶ್ರೇಣಿಯಲ್ಲಿ ಮೇಲಿನ ಸ್ಥಾನವನ್ನು ಪಡೆದ ಬ್ರಾಹ್ಮಣರು ಜಾತಿ ಪದ್ಧತಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದರಿಂದ ಸಮಾಜವನ್ನು ಅವರು ಆಳುತ್ತಾರೆ.
ಹಾಗಾಗಿ, ಈ ಅಧಿಕಾರದ ಸ್ಥಾನಕ್ಕಾಗಿ ಇತರ ಜಾತಿಗಳೂ ಹಂಬಲಿಸತೊಡಗುತ್ತವೆ. ಇದನ್ನೇ ಸಂಸ್ಕೃತೀಕರಣ ಎನ್ನುವುದು. ಶ್ರೇಣಿಯ ಕೆಳಮಟ್ಟದಲ್ಲಿರುವ ಜಾತಿಗಳು ಮೇಲ್ಮಟ್ಟದಲ್ಲಿರುವ ಜಾತಿಗಳ ಆಚಾರಗಳನ್ನು, ರೂಢಿಗಳನ್ನು ಅನುಸರಿಸುವುದರ ಮೂಲಕ ತಮ್ಮನ್ನು ಶ್ರೇಣಿಯಲ್ಲಿ ಎತ್ತರಕ್ಕೆ ಏರಿಸಿಕೊಳ್ಳುವ ಪ್ರಕ್ರಿಯೆಗೆ ಚಿಂತಕ ಎಂ.ಎನ್. ಶ್ರೀನಿವಾಸ್ ಸಂಸ್ಕೃತೀಕರಣ ಎಂದು ಕರೆಯುತ್ತಾರೆ. ಈ ಪ್ರಕ್ರಿಯೆಯ ಫಲವಾಗಿ ಸಮಾಜದ ಎಲ್ಲ ಪಂಗಡಗಳೂ ಜಾತಿ ಪದ್ಧತಿಯ ಒಳಕ್ಕೆ ಸೇರಿಕೊಳ್ಳುತ್ತವೆ.
ಹಾಗೆಯೇ, ಯಾವ ಜಾತಿಯವರ ಜನಸಂಖ್ಯೆ ಹೆಚ್ಚಾಗಿದೆ ಎಂಬುದು ಇಲ್ಲಿ ಮುಖ್ಯವಾಗುವುದಿಲ್ಲ. ಉದಾಹರಣೆಗೆ, ದಕ್ಷಿಣದಲ್ಲಿ ಬ್ರಾಹ್ಮಣರ ಸಂಖ್ಯೆ ಕಡಿಮೆಯಿದ್ದರೂ ಜಾತಿ ರೂಢಿಗಳನ್ನು ಅವರು ತೀರಾ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆದರೆ ಉತ್ತರದ ಮೇಲ್ಜಾತಿಯವರಲ್ಲಿ ಜಾತಿ ರೂಢಿಗಳು ಅಷ್ಟು ಕಟ್ಟುನಿಟ್ಟಾಗಿಲ್ಲ.
ಭಾರತದಲ್ಲಿ ಜಾತಿಯು ಇಷ್ಟು ಬಲವಾಗಿ ಬೆಳೆದುಬರಲು ಒಂದು ಕಾರಣ ಸಂಸ್ಕತೀಕರಣವಾದರೆ ಮತ್ತೊಂದು ಕಾರಣ ಇಲ್ಲಿನ ಕುಟುಂಬ ವ್ಯವಸ್ಥೆ. ಇಲ್ಲಿ ವ್ಯಕ್ತಿಗಳು ಪ್ರೌಢ ವಯಸ್ಸಿಗೆ ಬಂದ ನಂತರವೂ ಅವರಿಗೆ ತಮ್ಮ ಬಾಳ ಸಂಗಾತಿಗಳನ್ನು ಆರಿಸಿಕೊಳ್ಳುವ ಆಯ್ಕೆಯನ್ನು ಕೊಡುವುದಿಲ್ಲ. ಭಾರತದಲ್ಲಿನ ಜಾತಿ ರೂಢಿಗಳಿಗೆ ಕುಟುಂಬಗಳೇ ಪ್ರಮುಖ ಕಾರಣ. ಅದರ ಜೊತೆಗೆ ಸಾಮಾಜಿಕ ಅಸಮಾನತೆ ಕೂಡಾ ಜಾತಿಯನ್ನು ಉಳಿಸಿ ಬೆಳೆಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.