ADVERTISEMENT

ಮೀಸಲಾತಿಯ ದಿನನಿತ್ಯತನ

ಗೋಪಾಲ ಗುರು
Published 7 ಏಪ್ರಿಲ್ 2013, 19:59 IST
Last Updated 7 ಏಪ್ರಿಲ್ 2013, 19:59 IST

ಯಾರೋ ನಮಗೆ ನೀಡಿದ ಮೀಸಲಾತಿ, ರಕ್ಷಣೆ ಅಥವಾ ಕಾಯ್ದಿರಿಸುವಿಕೆಯು ನಮ್ಮೆಲ್ಲರನ್ನೂ ರೂಪಿಸಿದೆ. ಒಂದಲ್ಲಾ ಒಂದು ರೀತಿಯ ಮೀಸಲಾತಿಯು ನಮಗೆ ದೊರೆತಿದೆ. ಕುಟುಂಬದೊಳಗೆ ಅಥವಾ ಸಮುದಾಯದಲ್ಲಿ ಕಾಣುವ ಮೀಸಲಾತಿಯನ್ನು ನಾವು ಎರಡು ವಾರಗಳ ಹಿಂದೆ ವಿವರವಾಗಿ ಚರ್ಚಿಸಿದ್ದೆವು. ಇವತ್ತಿನ ವಿದ್ಯಾ ವಲಯದಲ್ಲಿ ಇರುವ ಮೀಸಲಾತಿಯ ಚರ್ಚೆಗೆ ಕೈ ಹಾಕುವ ಮುನ್ನ ನಾವು ಈ ಲೇಖನದಲ್ಲಿ ಮೀಸಲಾತಿ ಎಂಬ ಪರಿಕಲ್ಪನೆಯನ್ನು ಮತ್ತಷ್ಟು ಆಳವಾಗಿ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದೇವೆ.

ಕೆಲವು ದಿನಗಳ ಹಿಂದೆ ನಾವು ಟಿಕೇಟೊಂದನ್ನು ಕಾಯ್ದಿರಿಸಲು ರೈಲ್ವೇ ನಿಲ್ದಾಣದಲ್ಲಿ ಕಾಯುತ್ತಿದ್ದೆವು. ಕಾಯ್ದಿರಿಸುವುದು ಎಲ್ಲಿ ಎಂದರೆ  ರಿಸರ್ವೇಶನ್ ಕೌಂಟರ್‌ನಲ್ಲಿ. ಆ ಕೌಂಟರಿನಲ್ಲಿ ನಾವು ಏನು ಮಾಡುತ್ತೇವೆ? ನಮ್ಮ ಟಿಕೇಟುಗಳನ್ನು  ಕಾಯ್ದಿರಿಸುತ್ತೇವೆ. ಇಲ್ಲಿ ರಿಸರ್ವೇಶನ್ ಅಥವಾ ಕಾಯ್ದಿರಿಸುವಿಕೆ ಎಂದರೆ ನಾವು ರೈಲಿನಲ್ಲಿ ನಮಗೆ ಸೀಟು ಅಥವಾ ಜಾಗವಿರುವಂತೆ ಹಕ್ಕನ್ನು ಸ್ಥಾಪಿಸಿಕೊಳ್ಳುವುದು. ಈ ರೀತಿಯ ಕಾಯ್ದಿರಿಸುವಿಕೆ ಯಾಕೆ ಅಗತ್ಯವಾಗುತ್ತದೆ? ರೈಲಿನಲ್ಲಿ ಪ್ರಯಾಣ ಮಾಡಬೇಕೆಂದಿರುವ ಜನರ ಸಂಖ್ಯೆ ಹೆಚ್ಚಿದ್ದು ಸೀಟುಗಳ ಸಂಖ್ಯೆ ಕಡಿಮೆ ಇದ್ದಲ್ಲಿ ಕಾಯ್ದಿರಿಸುವಿಕೆ ಅನಿವಾರ್ಯವಾಗುತ್ತದೆ. ಬೇಕೆಂದವರಿಗೆಲ್ಲರಿಗೂ ಸೀಟು ಸಿಗುವುದಿಲ್ಲ.

ಹಾಗಾದರೆ, ಯಾರು ಬೇಕಾದರೂ ಸೀಟನ್ನು ಕಾಯ್ದಿರಿಸಿಕೊಳ್ಳಬಹುದೇ? ಇಲ್ಲ. ಯಾರಿಗೆ ಸರತಿ ಸಾಲಿನಲ್ಲಿ ನಿಲ್ಲುವಷ್ಟು ಸಮಯವಿರುತ್ತದೆಯೋ ಅಥವಾ ತಮ್ಮ ಪರವಾಗಿ ಬೇರೆಯವರನ್ನು ನಿಲ್ಲಿಸುವ ಸಾಮರ್ಥ್ಯವಿರುತ್ತದೆಯೋ ಅವರಿಗೆ ಮಾತ್ರ ಇದು ಸಾಧ್ಯ. ಅದರ ಜೊತೆಗೆ ಟಿಕೇಟನ್ನು ಮೀಸಲಾಗಿರಿಸಲು ರೈಲ್ವೇ ಇಲಾಖೆಯು ವಿಧಿಸಿರುವ ಹೆಚ್ಚಿನ ಮೊತ್ತದ ಹಣವನ್ನು ಕೊಡಬಲ್ಲ ಜನರು ಇವರು. ರೈಲ್ವೇ ಇಲಾಖೆಯು ಟಿಕೇಟನ್ನು ಕಾಯ್ದಿರಿಸಲು ಹೆಚ್ಚಿನ ಹಣವನ್ನು ಕೇಳುವುದು ಏಕೆಂದರೆ ಕಾಯ್ದಿರಿಸುವಿಕೆ ಅಥವಾ ಮೀಸಲಾತಿ ಎಂಬುದು ಒಂದು ಸೌಲಭ್ಯ. ಪ್ರತಿ ಸಾರಿಯೂ ನೀವು ನಿಮ್ಮ ಟಿಕೇಟನ್ನು ಕಾಯ್ದಿರಿಸಿದಾಗ ನೀವು ಈ ಸೌಲಭ್ಯವನ್ನು ಹೊಂದಬಲ್ಲವರ ಗುಂಪಿಗೆ ಸೇರಿಕೊಳ್ಳುತ್ತೀರಿ.

ಕಾಯ್ದಿರಿಸುವಿಕೆಯಿಲ್ಲದೆ ಪ್ರಯಾಣಿಸುವವರ ಕತೆ ಏನು? ಯಾರು ಅವರು? ಅವರಲ್ಲಿ ಹೆಚ್ಚಿನವರು ಬಡವರು. ಇವರು ಒಂದೋ ಪ್ರಯಾಣಕ್ಕೆ ಮೊದಲು ಸೀಟು ಕಾಯ್ದಿರಿಸುವ ಸುಖ ದಕ್ಕದವರು. ಅಥವಾ  ಕಾಯ್ದಿರಿಸಲು ವಿಧಿಸುವ ಹೆಚ್ಚಿನ ಹಣವನ್ನು ಭರಿಸಲಾಗದವರು.  ಜೊತೆಗೆ ದೂರ ಪ್ರಯಾಣ ಮಾಡಲು ಇದನ್ನು ಹೊರತುಪಡಿಸಿ ಬೇರೆ ವ್ಯವಸ್ಥೆಗಳನ್ನು ಹೊಂದಿಲ್ಲದವರು. ಟಿಕೇಟನ್ನು ಮೊದಲೇ ಕಾಯ್ದಿರಿಸಿಕೊಂಡು ಪ್ರಯಾಣ ಮಾಡಿದಾಗಲೆಲ್ಲಾ ನಾವು ಮೀಸಲಾತಿಯ ಲಾಭವನ್ನು ಪಡೆಯುತ್ತಿದ್ದೇವೆ ಎಂಬುದನ್ನು ಮರೆಯಬಾರದು.

ಇವತ್ತು ರೈಲ್ವೇ ಸೀಟು ಕಾಯ್ದಿರಿಸುವಿಕೆಗೆ ಮತ್ತೊಂದು ಮುಖವಿದೆ. ಅದೇ ತತ್ಕಾಲ್ ಯೋಜನೆ. ತತ್ಕಾಲ್ ಟಿಕೇಟಿನೊಂದಿಗೆ ಪ್ರಯಾಣಿಸುವವರು ಸಾಮಾನ್ಯ ಟಿಕೇಟಿನವರಿಗಿಂತ ದೊಡ್ಡ ಮೊತ್ತದ ಹೆಚ್ಚುವರಿ ಹಣವನ್ನು ಕೊಡುತ್ತಾರೆ. ತತ್ಕಾಲ್ ಯೋಜನೆಯು ಗಡಿಬಿಡಿಯಲ್ಲಿ ಟಿಕೇಟು ಬೇಕೆನ್ನುವವರಿಂದ ಹೆಚ್ಚಿನ ಹಣವನ್ನು ವಸೂಲು ಮಾಡುತ್ತದೆ. ಯಾರಿಗೆ ಹೆಚ್ಚು ಹಣ ಕೊಟ್ಟು ಟಿಕೇಟ್ ಖರೀದಿಸುವ ಸಾಧ್ಯತೆಯಿದೆಯೋ ಅವರಿಗಾಗಿ ಇರುವ ವಿಶೇಷ ಸವಲತ್ತು ಇದು. ಗಡಿಬಿಡಿಯಲ್ಲಿ ಟಿಕೇಟು ಖರೀದಿಸುವ ಸಲುವಾಗಿ ನೂರಾರು ರೂಪಾಯಿಗಳನ್ನು ಖರ್ಚು ಮಾಡಲು ಹಿಂದೆ ಮುಂದೆ ನೋಡದ ಶ್ರೀಮಂತರಿಗಾಗಿ ಇರುವ ಮೀಸಲಾತಿ ಇದು. ಒಂದು ಸಂಸ್ಥೆಯಿಂದ, ಅದೂ ಸರಕಾರಿ ಇಲಾಖೆಯಿಂದ ಅವರಿಗೆ ಈ ರೀತಿಯ ಮೀಸಲಾತಿ ಏಕೆ ದೊರೆಯಬೇಕು?

ತತ್ಕಾಲ್ ಕೂಡಾ ಉಳ್ಳವರಿಗೆ ಮೀಸಲಾತಿಯನ್ನೊದಗಿಸುವ ತಾರತಮ್ಯದ ವ್ಯವಸ್ಥೆ. ತತ್ಕಾಲ್ ಟಿಕೇಟುಗಳನ್ನೂ ಒಳಗೊಂಡು ನಾವು ಎಲ್ಲ ರೀತಿಯ ರೈಲ್ವೇ ಟಿಕೇಟುಗಳನ್ನು ಈಗ ಅಂತರ್ಜಾಲದಲ್ಲಿ ಕಾಯ್ದಿರಿಸಬಹುದು. ನಿಮ್ಮ ಮನೆಯಲ್ಲಿ ಅಂತರ್ಜಾಲ ವ್ಯವಸ್ಥೆ ಇದ್ದು, ಅದಕ್ಕೆ ಅಗತ್ಯವಿರುವ ಉಪಕರಣಗಳು ನಿಮ್ಮ ಬಳಿ ಇದ್ದರೆ ಹಲವು ಜನರು ಕೌಂಟರುಗಳೆದುರಿಗೆ ಸರತಿ ಸಾಲಿನಲ್ಲಿ ನಿಂತು ಬಸವಳಿಯುತ್ತಿರುವಾಗಲೇ ನೀವು ಮನೆಯಲ್ಲಿ ಸುಖವಾಗಿ ಕುಳಿತು ಟಿಕೇಟನ್ನು ಕೊಳ್ಳಬಹುದು. ಕಂಪ್ಯೂಟರ್ ಮತ್ತು ಅಂತರ್ಜಾಲ ಸಂಪರ್ಕವನ್ನು ಇಟ್ಟುಕೊಳ್ಳಬಹುದಾದ ಸಣ್ಣ ಸಂಖ್ಯೆಯ ಜನರು ಉಳಿದೆಲ್ಲರಂತೆ ಸರತಿ ಸಾಲಿನಲ್ಲಿ ಯಾಕೆ ನಿಲ್ಲಬೇಕಿಲ್ಲ? ಉಳ್ಳವರ ಸಮುದಾಯಕ್ಕೆ ಈ ಮೀಸಲಾತಿ ಏಕೆ? ಈ ವ್ಯವಸ್ಥೆಯು ಬಳಕೆದಾರರ ತೃಪ್ತಿಗಾಗಿ ಎಂದು ರೈಲ್ವೇ ಇಲಾಖೆಯು ಸಮರ್ಥಿಸಿಕೊಳ್ಳಬಹುದು. ಆದರೆ ಈ ರೀತಿಯಲ್ಲಿ ತೃಪ್ತಗೊಳ್ಳುವ ಬಳಕೆದಾರರು ಯಾರು? ಭಾರತದ ದೊಡ್ಡ ಜನಸಂಖ್ಯೆಯಲ್ಲಿ ಈ ಮೀಸಲಾತಿಯಿಂದ ಲಾಭ ಪಡೆದುಕೊಳ್ಳುವ ಜನರಾದರೂ ಎಷ್ಟು?

ರೈಲ್ವೇ ಸೀಟು ಕಾದಿರಿಸುವಿಕೆಯ ಲಾಭ ನಮಗೆಲ್ಲರಿಗೂ ಬೇರೆ ಬೇರೆ ರೀತಿಯಲ್ಲಿ ದೊರೆಯುತ್ತದೆ. ಆದರೆ ನಾವು ಇದನ್ನು ಮೀಸಲಾತಿ ಎಂದು ಪರಿಗಣಿಸದೆ ಸರತಿಯ ಸಾಲಿನ ಉದ್ದ, ಅಂತರ್ಜಾಲ ಸಂಪರ್ಕದ ನಿಧಾನ ಗತಿ ಮುಂತಾದ ಚಿಲ್ಲರೆ ವಿಚಾರಗಳ ಬಗ್ಗೆ ಕೊರಗುವುದನ್ನು ಬಿಟ್ಟು ಯಾವ ದೂರುಗಳನ್ನೂ ಹೇಳುವಂತೆ ತೋರುವುದಿಲ್ಲ. ಈ ವಿಚಾರದಲ್ಲಿ ಆದ ಎಲ್ಲಾ ಬದಲಾವಣೆಗಳೂ ಹೆಚ್ಚಾಗಿ ಮಧ್ಯಮ ವರ್ಗದವರಿಗೆ ಉಪಯೋಗವಾಗುವಂಥದ್ದು. ರೈಲ್ವೇಯು ಅದ್ಭುತ ಪ್ರಗತಿ ಸಾಧಿಸಿದೆ ಎಂದು ಅವರು ತಿಳಿಯುತ್ತಾರೆ. ಅದೇ ರೀತಿ ಹಿರಿಯ ನಾಗರಿಕರಿಗೆ ರೈಲುಗಳಲ್ಲಿ ದೊರೆಯುವ ಹಲವು ಸೌಲಭ್ಯಗಳೂ ಮೀಸಲಾತಿಯೇ. ವಿದ್ಯಾಭ್ಯಾಸ, ನೌಕರಿ ಹೀಗೆ ನಮ್ಮ ದೇಶದ ಹಲವು ವ್ಯವಸ್ಥೆಗಳಲ್ಲಿ ಇರುವ ಮೀಸಲಾತಿಗಳೂ ರೈಲ್ವೇ ಟಿಕೇಟು ಕಾಯ್ದಿರಿಸುವಿಕೆಯ ರೀತಿಯೇ ಇರುವಂಥದ್ದು.

ಇಲ್ಲಿರುವ ಮತ್ತೊಂದು ವಿಸ್ಮಯಕಾರೀ ಸಂಗತಿಯೆಂದರೆ ರೈಲ್ವೇ ಟಿಕೇಟ್‌ಗಳು ಸಬ್ಸಿಡೈಸ್ ಆಗಿರುವುದು! ಅಂದರೆ, ನಮ್ಮ ಪ್ರಯಾಣಕ್ಕೆ ವಾಸ್ತವದಲ್ಲಿ ಎಷ್ಟು ಖರ್ಚಾಗುತ್ತಿತ್ತೋ ಅದಕ್ಕಿಂತ ತುಂಬಾ ಕಡಿಮೆ ಹಣದಲ್ಲಿ ನಮ್ಮ ಟಿಕೇಟ್ ದೊರೆಯುತ್ತದೆ. ಹಾಗಾಗಿ, ಈ ದಿನನಿತ್ಯದ ಮೀಸಲಾತಿಯಿಂದ ನಾವೆಲ್ಲರೂ ಲಾಭ ಪಡೆದುಕೊಳ್ಳುತ್ತೇವೆ.
               ***
ನಮ್ಮ ಜಾತಿ ಧರ್ಮಗಳನ್ನು ಪರಿಗಣಿಸದೆಯೇ, ಯಾವ ಜಾತಿಗೆ ಸೇರಿದ್ದರೂ ನಮಗೆ ದೊರೆಯುವ ಬೇರೆ ಯಾವುದಾದರೂ ಮೀಸಲಾತಿ ಇದೆಯೇ? ನಾವು ಒಂದು ಸಮಾಜಕ್ಕೆ ಸೇರಿಕೊಂಡಿರುತ್ತೇವೆ. ಆ ಸಮಾಜವನ್ನು ನಮ್ಮ ಹಿಂದಿನವರು ನಮಗೆ ಉಪಯೋಗಿಸಲು ಮತ್ತು ಅದನ್ನು ಅಭಿವದ್ಧಿಪಡಿಸಲು ಅನುವಾಗುವಂತೆ ನಾವು ಹುಟ್ಟುವಾಗಲೇ ಕಟ್ಟಿ ನಿಲ್ಲಿಸಿರುತ್ತಾರೆ.  ನಾವು ಕಲಿತ ಶಾಲೆಗಳನ್ನು ಯಾರೋ ಪ್ರಾರಂಭಿಸಿದ್ದರು. ನಮ್ಮ ಬಡಾವಣೆ, ಊರುಗಳನ್ನು ಯಾರೋ ನಿರ್ಮಿಸಿದ್ದರು, ನಾವು ಹೋಗುವ ಧಾರ್ಮಿಕ ಸಂಸ್ಥೆಗಳನ್ನು ಯಾರೋ ಕಟ್ಟಿದ್ದರು. ಹೀಗೆ ನಾವು ಆಗಲೇ ಅಸ್ತಿತ್ವದಲ್ಲಿರುವ ಸಮಾಜದಲ್ಲಿ ಹುಟ್ಟಿಕೊಳ್ಳುತ್ತೇವೆ. ಇತರರು ನಮಗಾಗಿ ನಿರ್ಮಿಸಿರುವಂಥದ್ದನ್ನು ನಾವು ಮೊದಲು ಪಡೆದುಕೊಳ್ಳುತ್ತೇವೆ. ನಮಗೆ ಭಾಷೆಯು ಬಳುವಳಿಯಾಗಿ ದೊರೆಯುವಂತೆ ಸಮಾಜವೂ ದೊರೆಯುತ್ತದೆ. ಭಾಷೆಯು ನಮ್ಮೆಲ್ಲರಿಗಿಂತ ಎಷ್ಟೋ ಕಾಲದ ಹಿಂದೆ ರೂಪುಗೊಂಡಿದ್ದು. ಭಾಷೆಯ ಕರ್ತೃಗಳು ಅಸಂಖ್ಯ. ಆದರೂ ಅದು ನಮಗೆ ಪುಕ್ಕಟೆಯಾಗಿ ದೊರೆಯುತ್ತದೆ. ಭಾಷೆಯು ಎಲ್ಲರಿಗೂ ಸುಲಭವಾಗಿ, ತಾನೇ ತಾನಾಗಿ ದೊರೆಯುವುದಿಲ್ಲ ಎಂಬುದನ್ನು ಮಾತು, ಓದು, ಬರಹಗಳನ್ನು ಕಲಿತ ಭಾಗ್ಯಶಾಲಿಗಳಾದ ನಾವು ತಿಳಿದುಕೊಳ್ಳಬೇಕು. ಲಕ್ಷ ಲಕ್ಷ ಜನರಿಗೆ ಭಾಷೆ ಕೈಗೆಟುಕುವುದಿಲ್ಲ. ಅವರಿಗೆ ನಾವು ಕಲಿತಂತಹ ಶಾಲೆ ಕಾಲೇಜುಗಳಿಗೆ ಹೋಗಲು ಸಾಧ್ಯವೇ ಆಗುವುದಿಲ್ಲ.

ಸಮಾಜ ನಮಗೆಲ್ಲರಿಗೂ ಸಮಪಾಲಿನಲ್ಲಿ ದೊರೆಯುವುದಿಲ್ಲ. ಸಮಾಜವು ಯಾವ ಮೂಲಭೂತ ಸೌಕರ್ಯವನ್ನು ಶುಲ್ಕಾತೀತವಾಗಿ ಎಲ್ಲರಿಗೂ ನೀಡಬೇಕೋ ಅಂಥಾ ಸೌಕರ್ಯಗಳಿಂದಲೂ ವಂಚಿತರಾದ ಹಲವರು ನಮ್ಮಡನೆ ಇದ್ದಾರೆ. ದೇವಸ್ಥಾನ, ಹೋಟೆಲು, ಶಾಲೆ, ಊರ ಬಾವಿ ಮುಂತಾದ ಯಾವುದಕ್ಕೂ ಪ್ರವೇಶವಿಲ್ಲದವರಿದ್ದರು. ಇವರಿಗೆ ಮೂಲಭೂತ ಶಾಲಾ ಶಿಕ್ಷಣ ದೊರೆಯುವುದಿಲ್ಲ. ಜೀವವನ್ನು ಎತ್ತಿ ಹಿಡಿಯಲು ಅತ್ಯಗತ್ಯ ಆಹಾರವೂ ಸಿಗುವುದಿಲ್ಲ. ಅವರಿಗೆ ಬಾಲ್ಯವೇ ಇಲ್ಲ. ಮೈದಾನ ಪಾರ್ಕುಗಳಲ್ಲಿ ಆಡಿ ಕುಣಿಯುವ ಸ್ವಾತಂತ್ರ್ಯವೂ ಇಲ್ಲ. ಈ ಎಲ್ಲ ಸೌಲಭ್ಯಗಳೂ ಸಮಾಜದ ಕೆಲವರಿಗೆ ಮಾತ್ರ  ಮೀಸಲು. ಅವು ಸಿಗುವುದು ಉಳ್ಳವರಿಗೆ ಮಾತ್ರ.

ನಾವು ಹೇಳಹೊರಟಿರುವ ವಿಚಾರ ಸರಳವಾದದ್ದು. ಸರ್ಕಾರ ಮತ್ತು ನಮ್ಮ ಸುತ್ತಮುತ್ತಲಿನವರ ಸಹಕಾರ ನಮ್ಮ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಇಲ್ಲದಿದ್ದರೆ ನಾವು ಇವತ್ತು ಹೇಗಿದ್ದೇವೋ ಹಾಗೆ ಇರಲು ಸಾಧ್ಯವೇ ಆಗುತ್ತಿರಲಿಲ್ಲ. ಇದು ಮಧ್ಯಮ ಮತ್ತು ಮೇಲ್ವರ್ಗದವರ ವಿಚಾರದಲ್ಲಂತೂ ಖಂಡಿತಾ ಸತ್ಯ. ನಾವು ಇವತ್ತು ಹೀಗೆ ಇರಲು ಕಾರಣ ನಾವು ಮಾತ್ರ ಅಲ್ಲ. ಆದರೆ ನಾವು ಹೀಗಿರಲು ನಮ್ಮ ಸಾಮರ್ಥ್ಯ, ಯೋಗ್ಯತೆ, ಮೆರಿಟ್‌ಗಳೇ ಕಾರಣ ಎಂದು ಎಲ್ಲರೂ ಹೇಳಿಕೊಳ್ಳುತ್ತಾರೆ. ಈ ವಾದ ಹುರುಳಿಲ್ಲದ್ದು. ನಾನು ಮಾಡಿರುವ ಸಾಧನೆ ಸಾಧ್ಯವಾದದ್ದು ಹಿಂದೆ ಆಗಿ ಹೋದ ದಿಗ್ಗಜರ ಹೆಗಲ ಮೇಲೆ ನಾನು ನಿಂತಿದ್ದರಿಂದ ಮಾತ್ರ ಎಂದು ಸ್ವತಃ ಐನ್‌ಸ್ಟಿನ್ ಹೇಳಿಕೊಂಡಿದ್ದಾರೆ. ಅದೇ ರೀತಿ ಇಂದು ನಾವು ಏನಾಗಿದ್ದೇವೋ ಹಾಗೆ ಆಗಲು ಕಾರಣ ನಮ್ಮನ್ನು ಇತರರು ಎತ್ತಿ ಹಿಡಿದದ್ದು. ಉದಾಹರಣೆಗೆ, ಒಬ್ಬ ವಿದ್ಯಾರ್ಥಿನಿ ಚೆನ್ನಾಗಿ ಓದುತ್ತಾಳೆ ಎಂದರೆ ಅದಕ್ಕೆ ಅವಳ  ಬುದ್ಧಿವಂತಿಕೆ  ಮಾತ್ರ ಕಾರಣವಲ್ಲ. ಶಾಲೆಯಲ್ಲಿ ಒಳ್ಳೆಯ ಅಧ್ಯಾಪಕರು, ಮನೆಯಲ್ಲಿ ಸಹಕರಿಸುವ ಪಾಲಕರು, ಆರೋಗ್ಯದಲ್ಲಿ ವ್ಯತ್ಯಾಸವಾಗದಂತೆ ಕಾಪಾಡುವ ಒಳ್ಳೆಯ ಆಹಾರ, ಮನೆಯಲ್ಲಿ ಓದಲು ಅನುಕೂಲವಾಗುವಂತಹ ವಾತಾವರಣ ಮುಂತಾದವು ಅವಳಿಗೆ ದೊರೆತಿದ್ದೇ ಆಕೆ ಹಾಗಿರಲು ಕಾರಣ. ಆ ವಿದ್ಯಾರ್ಥಿನಿಯ ಯಶಸ್ಸು ಈ ಎಲ್ಲವುಗಳ ಮೇಲೂ ಅವಲಂಬಿಸಿದೆ, ಬರಿಯ  ಬುದ್ಧಿವಂತಿಕೆಯ ಮೇಲಲ್ಲ.

ನಾವು ಇವತ್ತು ಇರುವಂತೆ ಇರಲು ಬೇರೆಯವರು ಕಾರಣ ಎಂಬುದನ್ನು ನಿಮ್ಮಲ್ಲಿ ಕೆಲವರು ಒಪ್ಪಿಕೊಳ್ಳಬಹುದು. ಆದರೆ ಈ ರೀತಿ ಸಹಕರಿಸಿದ ಬೇರೆಯವರು ನಮ್ಮನ್ನು ಹೆತ್ತವರು, ನಮ್ಮ ಮನೆಯವರು ಅಥವಾ ನಮ್ಮ ಅಧ್ಯಾಪಕರು ಎಂದು ನೀವು ತಿಳಿದಿರಬಹುದು. ಹೊರಗಿನ ಸಮಾಜಕ್ಕೂ ಇದಕ್ಕೂ ಯಾವ ಸಂಬಂಧವೂ ಇಲ್ಲವೆಂದು ನೀವು ಅಂದುಕೊಂಡಿರಬಹುದು. ನಿಮಗೆ ಓದಲು ಸಹಕರಿಸಿದ್ದು ನಿಮ್ಮನ್ನು ಹೆತ್ತವರೇ ಇರಬಹುದು. ಆದರೆ ಅವರು ನಿಮ್ಮನ್ನು ಶಾಲೆಗೆ ಸೇರಿಸಿ ನಿಮ್ಮೆಲ್ಲ ಅಗತ್ಯಗಳನ್ನೂ ಪೂರೈಸಿ ಸಹಕರಿಸಲು ಸಾಧ್ಯವಾಗುವಂತೆ ಮಾಡಿದ್ದು ಅವರಿಗೆ ಸಹಕರಿಸಿದ ಸಮಾಜವೇ. ನಿಮ್ಮ ಯಶಸ್ಸಿಗೆ ತತ್‌ಕ್ಷಣದ ಸಹಕಾರ ನಿಮ್ಮ ಮನೆಯವರಿಂದಲೇ ದೊರೆತಿದ್ದು ನಿಜವೇ. ಆದರೆ ನಿಮ್ಮ ಯಶಸ್ಸಿಗೆ ದೊಡ್ಡ ಪ್ರಮಾಣದ ಸಹಾಯವನ್ನು ನೀಡಿದ್ದು ಅಷ್ಟೇ ದೊಡ್ಡದಾದ ಸಮಾಜ. ನಮ್ಮ ಯಶಸ್ಸನ್ನು ಸಾಧ್ಯವಾಗಿಸಿದ ಅಸಂಖ್ಯ ಕಾಣದ ಕೈಗಳಿಗೆ ನಾವು ಋಣಿಯಾಗಿದ್ದೇವೆ ಎಂಬುದನ್ನು ನಾವು ಮರೆಯುವಂತಿಲ್ಲ. ಕೆಳಜಾತಿಗೆ ಸೇರದ ಎಲ್ಲರಿಗೂ ತಮ್ಮ ಸಮುದಾಯಗಳಿಗೆ ಸೇರಿರುವುದೇ ಒಂದು ರೀತಿಯ ರಕ್ಷಣೆಯಾಗಿರುತ್ತದೆ.

ಈ ರೀತಿಯ ಮೀಸಲಾತಿಯು ನಮಗೆ ಎರಡು ರೀತಿಯಲ್ಲಿ ದೊರೆಯುತ್ತದೆ. ಮೊದಲನೆಯದು ಧನಾತ್ಮಕವಾಗಿ ಅಂದರೆ ಹಲವು ವ್ಯಕ್ತಿಗಳು, ಸಮಾಜ ಮುಂತಾದವುಗಳಿಂದ ನಮಗೆ ಸಿಗುವ ಸೌಲಭ್ಯಗಳು ಇವು. ಈ ಹಿಂದೆ ಚರ್ಚಿಸಿದ ರೈಲ್ವೇ ಟಿಕೇಟಿನ ಉದಾಹರಣೆ ಈ ವರ್ಗಕ್ಕೆ ಸೇರುವಂತಹದ್ದು. ಎರಡನೆಯದು ಋಣಾತ್ಮಕ. ಅಂದರೆ ನಮಗೆ ಸಿಗದಿರುವ ತೊಡಕುಗಳು. ಶಾಲೆಗೆ ಹೋಗುವುದು, ಕೆಲಸಕ್ಕೆ ಸೇರುವುದು, ಮನೆ ಕಟ್ಟುವುದು ಮುಂತಾದವುಗಳು ನಾವು ಏನು ಮಾಡುತ್ತೇವೆ ಎಂಬುದನ್ನು ಮಾತ್ರ ಅವಲಂಬಿಸಿದ್ದಲ್ಲ. ನಮ್ಮ ಕೆಲಸಗಳಿಗೆ ತೊಡಕುಗಳುಂಟಾಗದಂತೆ ನೋಡಿಕೊಳ್ಳುವ ವ್ಯವಸ್ಥೆ ಇವುಗಳಿಗೆ ಅತ್ಯಗತ್ಯ. ಯುದ್ಧದಲ್ಲಿ ತೊಡಗಿರುವ ಸಮಾಜವೊಂದನ್ನು ಕಲ್ಪಿಸಿಕೊಳ್ಳಿ. ಅಲ್ಲಿ ಶಾಲೆಗೆ ಹೋಗುವುದು ಅಥವಾ ಸಂತೆಗೆ ಹೋಗಿ ತರಕಾರಿ ಕೊಳ್ಳುವಂತಹ ಸರಳ ಕೆಲಸಗಳೂ ಅಸಾಧ್ಯವಾಗಿಬಿಡುತ್ತವೆ. ಹಾಗಾಗಿ ನಾವು ಅಷ್ಟಾಗಿ ಗಮನಿಸದ ನಮ್ಮ ದಿನನಿತ್ಯದ ಆಗುಹೋಗುಗಳು ಕೂಡಾ ಸಾಧ್ಯವಾಗುವುದು ತೊಡಕುಗಳ ಅನುಪಸ್ಥಿತಿಯಿಂದಾಗಿ ಮಾತ್ರ. ಇದೂ ಕೂಡಾ ನಾವೆಲ್ಲರೂ ಅನುಭವಿಸುವ ಮೀಸಲಾತಿಯ ಒಂದು ಬಗೆ.
                ***
ಹೀಗಿದ್ದ ಮೇಲೆ ಸರ್ಕಾರವು ಪ್ರತಿಕೂಲ ಪರಿಸ್ಥಿತಿಯಲ್ಲಿರುವ ಜನರಿಗೆ, ಕಳೆದ ಹಲವು ವರ್ಷಗಳಲ್ಲಿ ಸರ್ಕಾರ ಅಥವಾ ಅದರ ಪ್ರಜೆಗಳ ಸಹಕಾರ ಸಿಗದ ಜನರಿಗೆ ಮೀಸಲಾತಿಯನ್ನು ನೀಡಿದಾಗ ನಾವು ದೂರುವುದು ಏಕೆ? ಸಮಾಜದ ಹಲವರು ನೂರಾರು ವರ್ಷಗಳಿಂದ ಮೀಸಲಾತಿಯ ನೆರಳಿನಲ್ಲಿಯೇ ಬೆಳೆದುಬಂದಿರುವುದು ನಮಗೆ ಗೊತ್ತಿದ್ದಾಗಲೂ ಸೌಲಭ್ಯ ವಂಚಿತರಿಗೆ ನೀಡುವ ಮೀಸಲಾತಿಯ ಬಗ್ಗೆ ನಮಗೇಕೆ ಸಿಟ್ಟು? ಉಳ್ಳವರು ಇವತ್ತಿಗೂ ಹಲವು ರೀತಿಯ ಮೀಸಲಾತಿ, ಸಹಕಾರ, ಸವಲತ್ತುಗಳನ್ನು ಬಳಸಿಕೊಂಡು ಊರ್ಜಿತವಾಗುತ್ತಲೇ ಇರುವ ಹೊತ್ತಿಗೆ ಇಲ್ಲದವರಿಗೆ ಯಾವುದು ಯಾವತ್ತೋ ಸಿಗಬೇಕಿತ್ತೋ ಅದು ಇವತ್ತು ಸ್ವಲ್ಪ ಪ್ರಮಾಣದಲ್ಲಿ ಸಿಗುತ್ತಿರುವ ಮಾತ್ರಕ್ಕೆ ಉಳ್ಳವರು ಇಲ್ಲದವರನ್ನು ಯಾಕೆ ಗುರಿಯಾಗಿಸಿಕೊಳ್ಳಬೇಕು?
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.