ADVERTISEMENT

ಮುಗಿಯದ ಸಂವಾದಕ್ಕೊಂದು ಅಲ್ಪ ವಿರಾಮ

​ಪ್ರಜಾವಾಣಿ ವಾರ್ತೆ
Published 26 ಮೇ 2013, 19:38 IST
Last Updated 26 ಮೇ 2013, 19:38 IST
ಮುಗಿಯದ ಸಂವಾದಕ್ಕೊಂದು ಅಲ್ಪ ವಿರಾಮ
ಮುಗಿಯದ ಸಂವಾದಕ್ಕೊಂದು ಅಲ್ಪ ವಿರಾಮ   

ಜಾತಿಯ ಕುರಿತಾಗಿ ಆರು ತಿಂಗಳುಗಳ ಕಾಲ ನಡೆದ ಚರ್ಚೆಯ ಕೊನೆಗೆ ಬಂದು ನಿಂತಿದ್ದೇವೆ. ಈ ಚರ್ಚೆಯನ್ನು ಪ್ರಾರಂಭಿಸುವಾಗ ನಮಗೆ ಹಲವು ಅನುಮಾನಗಳಿದ್ದವು. ಜನರು ಜಾತಿಯ ಬಗ್ಗೆ ಬರೆಯುತ್ತಾರೋ ಇಲ್ಲವೋ, ಕೇವಲ ಅಭಿಪ್ರಾಯಗಳನ್ನು ಮಂಡಿಸುವುದರ ಬದಲಿಗೆ ವಾದವನ್ನು ಹೂಡುವುದು ಮತ್ತು ಆ ಮೂಲಕ ನಡೆಯುವ ಚರ್ಚೆಯನ್ನು ಗಮನಿಸುವುದರಲ್ಲಿ ಆಸಕ್ತರಾಗಿರುತ್ತಾರೋ ಇಲ್ಲವೋ, ಅವರು ತಮ್ಮ ಅನುಭವಗಳನ್ನು ನಮ್ಮಡನೆ ಹಂಚಿಕೊಳ್ಳ ಬಹುದೇ ಎಂಬೆಲ್ಲಾ ಪ್ರಶ್ನೆಗಳು ನಮ್ಮಲ್ಲಿದ್ದವು.

ಅದೇ ಹೊತ್ತಿಗೆ ಜಾತಿಯ ಬಗೆಗೆ ಮುಕ್ತವಾಗಿ ಆಡುವ ಮಾತುಗಳು ದಿನದಿನಕ್ಕೂ ಹೆಚ್ಚು ವಿವಾದಗಳನ್ನು ಸೃಷ್ಟಿಸುತ್ತಿರುವ ಈ ಸಂದರ್ಭದಲ್ಲಿ ಸಾರ್ವಜನಿಕ ಚರ್ಚೆಯೊಂದನ್ನು ಪ್ರಾರಂಭಿಸುವುದು ಮುಖ್ಯವೆಂಬುದನ್ನೂ ನಾವು ಮನಗಂಡೆವು. ಹೀಗೆ ವಿವಾದಕ್ಕೆ ಒಳಗಾಗುತ್ತಿದ್ದ ಹೆಚ್ಚಿನ ಮಾತುಗಳು ವಾಸ್ತವದಿಂದ ದೂರವಿದ್ದವು. ಉದಾಹರಣೆಗೆ, ಪಟ್ಟಣಗಳಲ್ಲಿ ಜಾತಿ ಇಲ್ಲ, ಮೀಸಲಾತಿ ಎನ್ನುವುದು ಮೆರಿಟ್‌ಗೆ ವಿರೋಧಿಯಾದದ್ದು ಮುಂತಾದ ಹಲವು ಮಾತುಗಳು ಸಾರ್ವಜನಿಕ ವೇದಿಕೆಗಳಲ್ಲಿ, ಮಾಧ್ಯಮಗಳಲ್ಲಿ ಪದೇ ಪದೇ ಕೇಳಿಬರುತ್ತಿದ್ದವು.

ಇದರ ಜೊತೆಜೊತೆಗೆ ಜಾತಿಯ ಆಚರಣೆಯಲ್ಲಿ ಕಂಡುಬರದಿದ್ದರೂ ಅದರ ಹೆಸರಿನಲ್ಲಿ ಹಲವರು ಕೆಲಸ ಮಾಡಿಕೊಂಡು ಲಾಭ ಪಡೆದು ಕೊಳ್ಳುತ್ತಿದ್ದರು. ಜನರು ಜಾತಿಯ ರೂಢಿ ಆಚರಣೆಗಳಿಗಿಂತ ಹೆಚ್ಚಾಗಿ ಅದು ಅವರಿಗೆ ನೀಡುವ ಸವಲತ್ತುಗಳಿಗಾಗಿ ಆ ಜಾತಿಯ ಜೊತೆ ಗುರುತಿಸಿಕೊಳ್ಳುತ್ತಿದ್ದರು. ಇದು ಮೇಲ್ಜಾತಿ ಅಥವಾ ದಲಿತರೆನ್ನದೆ ಎಲ್ಲಾ ಜಾತಿಗಳಲ್ಲೂ ಕಂಡುಬಂತು.

ಇವತ್ತು ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಜಾತಿಯನ್ನು ನಾವು ಅರ್ಥ ಮಾಡಿಕೊಳ್ಳುವುದಾದರೂ ಹೇಗೆ? ಸಾಮಾಜಿಕ ರೂಢಿಗಳಲ್ಲಿ ಇಂದು ಆಮೂಲಾಗ್ರ ಹರಡಿರುವ ಜಾತಿಯ ಬಗ್ಗೆ ಗಂಭೀರ ಚಿಂತನೆ ನಡೆಸಲು ಇರುವ ಅವಕಾಶ ಯಾವುದು? ಗೆಳೆಯರೊಂದಿಗಿನ ಮಾತುಕತೆಯಲ್ಲಿ, ಸಾಮಾಜಿಕ ಸಮಾರಂಭಗಳಲ್ಲಿ ಜಾತಿಯ ಬಗೆಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದರೂ ಈ ಚರ್ಚೆಯನ್ನು ಮುಕ್ತವಾಗಿ ನಡೆಸುವ ಸಾರ್ವಜನಿಕ ವೇದಿಕೆಯನ್ನು ಹುಡುಕುವುದು ಸುಲಭವಾಗಿರಲಿಲ್ಲ. ನಾವು ನಮ್ಮ ಸಂವಾದದ ಸ್ವರೂಪವನ್ನು ನಿರ್ವಚಿಸಿದ್ದು ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳುವುದರ ಮೂಲಕ.

ADVERTISEMENT

ಸಾರ್ವಜನಿಕ ಸ್ಥಳದಲ್ಲಿ ಇಂದು ಜಾತಿಯ ಬಗೆಗೆ ಅರ್ಥಪೂರ್ಣವಾದ ಚರ್ಚೆಯನ್ನು ನಡೆಸುವುದು ಸಾಧ್ಯವೇ? ಅಥವ ಜಾತಿಯ ಬಗೆಗೆ ಕೆಲವು ತಪ್ಪು ಕಲ್ಪನೆಗಳನ್ನು ರೂಪಿಸಿಕೊಂಡು, ಅವುಗಳ ಹಿಂದೆ ಅಡಗಿಕೊಳ್ಳುವುದರಲ್ಲಿಯೆ ಲಾಭವಿದೆ ಎಂಬ ಕಾರಣಕ್ಕೆ, ಅವುಗಳನ್ನು ನಂಬಿಕೊಳ್ಳಬೇಕೇ? ಸಾವಿರಾರು ಜನರ ಅನುಭವಗಳು ನಮ್ಮ ಪರಿಕಲ್ಪನೆಗೆ ವಿರುದ್ಧವಾಗಿದ್ದಾಗ ಜಾತಿಯನ್ನು ನೋಡುವ ದೃಷ್ಟಿಯನ್ನು ನಾವು ಬದಲಾಯಿಸಿಕೊಳ್ಳುತ್ತೇವೆಯೇ? ಈ ಎಲ್ಲ ಪ್ರಶ್ನೆಗಳೊಂದಿಗೆ ನಾವು ಓದುಗರಲ್ಲಿ ಅವರ ಅನುಭವಗಳನ್ನು ಹಂಚಿಕೊಳ್ಳಲು ಕೇಳಿಕೊಂಡೆವು.

ಈ ಅನುಭವಗಳ ಮೊತ್ತವು ದಾಖಲಾದಲ್ಲಿ ಇಂದು ನಮ್ಮ ಸಮಾಜದಲ್ಲಿ ಜಾತಿಯು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಬಳಸಬಹುದು ಎಂಬುದು ಇದರ ಹಿಂದೆ ಇದ್ದ ಉದ್ದೇಶ.

ಈ ಸಂವಾದದ ಸಂದರ್ಭದಲ್ಲಿ ನಾವು ಸಾವಿರಾರು ಪ್ರತಿಕ್ರಿಯೆಗಳನ್ನು ಪಡೆದಿದ್ದೇವೆ. ಈವರೆಗೆ ಸಂವಾದದಲ್ಲಿ ಪ್ರಕಟವಾದ ಲೇಖನಗಳನ್ನೂ ಸೇರಿದಂತೆ ಈ ಪ್ರತಿಕ್ರಿಯೆಗಳನ್ನು ಪ್ರಜಾವಾಣಿ ಇದಕ್ಕಾಗಿ ರೂಪಿಸಿದ ಜಾಲತಾಣ (http://jathisamvada.prajavani.net) ನೋಡಬಹುದು. ನಾವು ಪ್ರಾರಂಭಿಸಿದ ಸಾರ್ವಜನಿಕ ಚರ್ಚೆಯು ಮುಂದುವರೆಯಬೇಕು ಎಂಬ ಉದ್ದೇಶದಿಂದ ಇದನ್ನು ಮಾಡುತ್ತಿದ್ದೇವೆ.

ಸಮಾಜಶಾಸ್ತ್ರಜ್ಞರು ಮತ್ತು ಇವತ್ತಿನ ಜಾತಿ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಬಯಸುವ ಇತರರು ಈ ಪ್ರತಿಕ್ರಿಯೆಗಳನ್ನು ಉಪಯೋಗಿಸಿಕೊಳ್ಳುತ್ತಾರೆ ಎಂಬುದು ನಮ್ಮ ನಿರೀಕ್ಷೆ. ಹಾಗಾಗಿ, ಸಂವಾದವು ದೊಡ್ಡ ಸಂಖ್ಯೆಯ ಪ್ರತಿಕ್ರಿಯೆಗಳನ್ನು ಪಡೆಯಿತು ಎಂಬುದು ಈ ಚರ್ಚೆಯ ಯಶಸ್ಸು. ಈ ಸಂವಾದವು ರಾಜ್ಯದಾದ್ಯಂತ ಹಲವು ಗುಂಪುಗಳಲ್ಲಿ ಚರ್ಚೆಯನ್ನು ಉದ್ದೀಪಿಸಿತು.

ಆದರೆ ನಮ್ಮ ಮನಸ್ಸಿನ ಒಳಕಿಟಕಿಗಳನ್ನು ತೆರೆಯುವಲ್ಲಿ ಈ ಚರ್ಚೆಯು ಯಶಸ್ಸು ಕಾಣಲಿಲ್ಲ. ಇಲ್ಲಿ ಜನರು ತಮ್ಮ ನಿಲುವಿಗೆ ಬದ್ಧರಾಗಿ ತಮ್ಮ ನಂಬಿಕೆಗಳನ್ನು ನಮ್ಮ ಮುಂದಿಟ್ಟರು ಆದರೆ ಅವರು ಚರ್ಚೆಯಲ್ಲಿ ಭಾಗವಹಿಸಲಿಲ್ಲ, ವಾದದಲ್ಲಿ ಪಾಲ್ಗೊಳ್ಳಲಿಲ್ಲ; ಈ ಇಡೀ ಸಂವಾದವು ಊಹಿಸಿದ ದಾರಿಯಲ್ಲಿಯೇ ಸಾಗಿತು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಜನರು ಲೇಖನಗಳನ್ನು ಹೇಗೆ ಓದುತ್ತಾರೆ ಎಂಬುದನ್ನು ಕೂಡಾ ಈ ಸಂವಾದದಿಂದ ನಾವು ತಿಳಿಯಬಹುದು.

ನಾವು ಏನನ್ನು ಓದಬೇಕು ಎಂದುಕೊಂಡಿರುತ್ತೇವೋ ಅದನ್ನು ಮಾತ್ರ ಓದುತ್ತೇವೆ ಎಂಬುದನ್ನು ಹಲವು ಪ್ರತಿಕ್ರಿಯೆಗಳು ತೋರಿಸಿದವು. ಓದುವಾಗ ನಾವು ಖಂಡಿತವಾಗಿ ಒಪ್ಪುವ ಅಥವಾ ತೀವ್ರವಾಗಿ ವಿರೋಧಿಸುವ ವಿಚಾರಗಳನ್ನು ಮಾತ್ರ ಗಮನಿಸುತ್ತೇವೆ. ಸಾರ್ವಜನಿಕ ಚರ್ಚೆಯೆಂದರೆ ನಮ್ಮ ನಂಬಿಕೆ, ನಿಲುವುಗಳನ್ನು ಮಂಡಿಸುವುದು ಮಾತ್ರವಲ್ಲ ಬದಲಿಗೆ ಅದು ಇತರರ ಬರವಣಿಗೆಯನ್ನು ಓದುವ ಮತ್ತು ಪರಸ್ಪರ ಪ್ರತಿಸ್ಪಂದಿಸುವ ಕ್ರಮವೂ ಹೌದು. ಒಂದು ನಿಲುವನ್ನು ತಳ್ಳಿಹಾಕುವ ಮೊದಲು ಅದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಪ್ರತಿಕ್ರಿಯೆಗಳ ಬಗ್ಗೆ ಒಟ್ಟಾರೆ ನಮಗೆ ಸಂತಸವಿದ್ದರೂ ಇತರರ ನಿಲುವುಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಇದ್ದ ಕೊರತೆಯು ಅವುಗಳಲ್ಲಿ ಕಾಣುತ್ತಿತ್ತು.

ಪ್ರಸ್ತುತ ಭಾರತದಲ್ಲಿನ ಜಾತಿಯ ಬಗ್ಗೆ ನಮಗೆ ಸಮೃದ್ಧವಾದ ಅನುಭವ ದೊರೆತಿದೆ. ಈ ಪ್ರತಿಕ್ರಿಯೆಗಳು ನಮಗೆ ಪಟ್ಟಣ, ಹಳ್ಳಿ, ರಾಜಕೀಯ, ಕಲೆ ಮತ್ತು ಮನೋರಂಜನೆ, ಹೀಗೆ ಹಲವು ಪ್ರದೇಶ ಮತ್ತು ಸಂಸ್ಥೆಗಳಲ್ಲಿ ಇರುವ ಜಾತಿ ರೂಢಿಗಳ ಚಿತ್ರಣವನ್ನು ಒದಗಿಸಿವೆ. ಜಾತಿಯ ದಿನನಿತ್ಯದ ಅನುಭವಗಳ ದಾಖಲೆಗಳು ಹೆಚ್ಚಾಗಿ ದೊರೆಯದಿರುವ ಕಾರಣ ನಮ್ಮ ಗಮನವು ಅನುಭವಗಳ ಮೇಲೆಯೇ ಕೇಂದ್ರೀಕೃತವಾಗಿತ್ತು. ಜಾತಿಯ ಬಗ್ಗೆ ಸೈದ್ಧಾಂತಿಕ ನಿಲುವನ್ನು ತೆಗೆದುಕೊಳ್ಳುವ ಮೊದಲು ಈ ರೀತಿಯ ದಾಖಲೆಯ ಅನಿವಾರ್ಯತೆಯಿದೆ ಎಂದು ನಾವು ಅಂದುಕೊಂಡೆವು.

ಈ ಅನುಭವಗಳನ್ನು ವಿಶ್ಲೇಷಿಸುವ ಕೆಲಸ ನಮ್ಮದಷ್ಟೇ ಅಲ್ಲ. ಈ ದಾಖಲೆ ನಿಮ್ಮೆಲ್ಲರಿಗೂ ಸಿಗುವಂಥದ್ದು. ಜಾತಿಯ ಬಗೆಗಿನ ನಿಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುವಲ್ಲಿ ಈ ಅನುಭವಗಳು ಸಹಕಾರಿಯಾಗುತ್ತವೆ ಎಂಬ ನಿರೀಕ್ಷೆ ನಮ್ಮದು. ಅನುಭವಗಳನ್ನು ಅವು ಅನುಭವಗಳೆನ್ನುವ ಕಾರಣಕ್ಕೇ ಒಪ್ಪಿಕೊಳ್ಳ ಬೇಕಾಗುತ್ತದೆ. ಅವು ಸತ್ಯವಲ್ಲವೆಂದೋ, ಹಾಗೆ ನಡೆಯುವುದೇ ಇಲ್ಲವೆಂದೋ ಅನುಭವಗಳನ್ನು  ತಳ್ಳಿ ಹಾಕುವಂತಿಲ್ಲ.

ಈ ದಾಖಲೆಗಳು ಕರ್ನಾಟಕದಲ್ಲಿ ಇರುವ ಜಾತಿ ರೂಢಿಗಳ ಬಗೆಗಿನ ನಮ್ಮ ನಂಬಿಕೆಗಳನ್ನು ಹೇಗೆ ಪ್ರಭಾವಿಸುತ್ತವೆ? ಈ ಅನುಭವಗಳು ಮತ್ತು ಅವುಗಳ ಸುತ್ತ ನಡೆದ ಚರ್ಚೆಗಳ ಆಧಾರದಲ್ಲಿ ಜಾತಿಯ ಬಗೆಗೆ ನಾವು ಹೊಂದಿರುವಂತಹ ನಂಬಿಕೆಗಳನ್ನು ಹೇಗೆ ಮರು ಚಿಂತಿಸಬಹುದು? ಈ ಕೆಲಸವನ್ನು ನೀವು ಮಾತ್ರ ಮಾಡಲು ಸಾಧ್ಯ. ಅದು ಸಾಧ್ಯವಾಗಲು ಅನುವು ಮಾಡಿಕೊಡುವುದು ಮಾತ್ರ ಈ ಚರ್ಚೆಯ ಉದ್ದೇಶ.

ಸಾರ್ವಜನಿಕ ಚರ್ಚೆಗಳು ಇದ್ದಕಿದ್ದಂತೆ ನಡೆಯುವುದಿಲ್ಲ. ಅವುಗಳನ್ನು ಪೋಷಿಸ ಬೇಕಾಗುತ್ತದೆ. ಭಾರತದಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಒಂದು ನಿಲುವಿನ ವಿರುದ್ಧ ಮಾಡಿದ ವಿಮರ್ಶೆಯನ್ನು ವ್ಯಕ್ತಿಯ ಮೇಲೆ ಮಾಡಿದ ಟೀಕೆ ಎಂದು ಪರಿಗಣಿಸಲಾಗುತ್ತದೆ. ಒಂದು ದೃಷ್ಟಿಕೋನವನ್ನು ಅಲ್ಲಗಳೆದು ಮತ್ತೊಂದನ್ನು ಪುಷ್ಠೀಕರಿಸಲು ಈ ಸಾರ್ವಜನಿಕ ಚರ್ಚೆಯನ್ನು ನಡೆಸಿದ್ದಲ್ಲ.

ಬದಲಿಗೆ ಇದು ನಡೆದದ್ದು ಜಾತಿಯ ಬಗೆಗೆ ಅರ್ಥಪೂರ್ಣವಾದ ಮತ್ತು ಸಮರ್ಪಕವಾದ ಚರ್ಚೆಯಾಗಲಿ ಎಂದು. ನಾವು ಈ ಸಂವಾದದ ಕೊನೆ ತಲುಪಿದ್ದರೂ ಸಾರ್ವಜನಿಕ ಕ್ಷೇತ್ರದಲ್ಲಿ ಇದು ಸದಾ ನಡೆಯುತ್ತಿರುತ್ತದೆ. ಈ ವಿಚಾರವಾಗಿ ನಾವು ನಡೆಸಿದ ಚರ್ಚೆಯ ಹೊಳಹುಗಳು ಹಲವು ವಿಧದಲ್ಲಿ ಸಾರ್ವಜನಿಕ ವಲಯವನ್ನು ಪ್ರಭಾವಿಸುತ್ತವೆ ಎಂದು ನಾವು ಆಶಿಸುತ್ತೇವೆ.

ಈ ಚರ್ಚೆ ಸಮಾಜವು ಜಾತಿಯ ಪ್ರಶ್ನೆಗಳನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತದೆ, ಅವುಗಳೊಂದಿಗೆ ಹೇಗೆ ಅನುಸಂಧಾನವನ್ನು ನಡೆಸುತ್ತದೆ ಎಂದು ತಿಳಿಯುವ ಸಾರ್ವಜನಿಕ ಸಂಶೋಧನಾ ಕಾರ್ಯಕ್ರಮದ ಭಾಗವಾಗಬೇಕು ಎಂದು ನಾವು ಬಯಸಿದ್ದೆವು. ಅದಕ್ಕಾಗಿ ಸಂಶೋಧನೆಯ ಹೊಸ ವಿಧಾನವನ್ನು ಬಯಸಿದೆವು. ಅದು ಸದಾ ಸಿದ್ಧಾಂತಗಳನ್ನು ಮಂಡಿಸುವ ಅಕಾಡೆಮಿಕ್ ಮಂದಿಯನ್ನೂ ಮೀರಿ ಹಲವು ಜನರ ಭಾಗವಹಿಸುವಿಕೆ ಸಾಧ್ಯವಾಗಬೇಕಾದಲ್ಲಿ ಅದಕ್ಕೆ ದಿನಪತ್ರಿಕೆಯೇ ಸೂಕ್ತ ಮಾಧ್ಯಮವೆಂದು ನಿರ್ಧರಿಸಿದೆವು.

ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು `ಪ್ರಜಾವಾಣಿ' ಒಪ್ಪಿದ್ದು ನಮಗೆ ಅತ್ಯಂತ ಸಂತೋಷದ ಸಂಗತಿ. ಈ ರೀತಿಯ ಸಾರ್ವಜನಿಕ ಚರ್ಚೆಯನ್ನು ಬೆಂಬಲಿಸುವಂತಹ ಪ್ರಬುದ್ಧ ಮನಃಸ್ಥಿತಿಯು `ಪ್ರಜಾವಾಣಿ' ತಂಡಕ್ಕೆ ಇಲ್ಲದಿದ್ದರೆ ಸುಲಭದಲ್ಲಿ ವಿವಾದಕ್ಕೆ ಈಡಾಗಬಹುದಾದ ಜಾತಿಯ ಬಗೆಗಿನ ಈ ಕೆಲಸವು ಸಾಧ್ಯವೇ ಆಗುತ್ತಿರಲಿಲ್ಲ.

ಚರ್ಚೆಯ ವಿಚಾರಗಳಿಗೆ ಸ್ಪಂದಿಸಲು ನಾವು ಹಲವು ಲೇಖಕರನ್ನು ಕೇಳಿಕೊಂಡಿದ್ದೆವು. ಹಾಗೆ ನಮಗೆ ಬರೆದ ಲೇಖಕರಿಗೆ, ಪ್ರಾಮಾಣಿಕವಾಗಿ ತಮ್ಮ ನಿಲುವುಗಳನ್ನು ಮಂಡಿಸಿದ್ದಕ್ಕಾಗಿ ಧನ್ಯವಾದಗಳು. ನಮ್ಮ ಓದುಗರಿಂದ ಈ ರೀತಿಯ ಅದ್ಭುತವಾದ ಪ್ರತಿಕ್ರಿಯೆ ಬರದಿದ್ದರೆ ಈ ಸಂವಾದವನ್ನು ಆರು ತಿಂಗಳುಗಳ ಕಾಲ ನಡೆಸಲು ಖಂಡಿತಾ ಸಾಧ್ಯವಾಗುತ್ತಿರಲಿಲ್ಲ. ಅದನ್ನು ಸಾಧ್ಯವಾಗಿಸಿದ ಎಲ್ಲ ಓದುಗರಿಗೂ ನಾವು ಋಣಿ. ಈ ರೀತಿಯ ಚರ್ಚೆಯು ಮುಂದೂ ನಡೆಯಲಿ ಎಂದು ನಾವು ಆಶಿಸುತ್ತೇವೆ.
ಕನ್ನಡಕ್ಕೆ: ಮಾಧವ ಚಿಪ್ಪಳಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.