ಜಾತಿಯು ಹೇಗೆ ಬೇರೆ ಬೇರೆ ಜನರಿಗೆ ಭಿನ್ನ ಉದ್ದೇಶಗಳಿಗಾಗಿ ದೊರೆಯುತ್ತದೆ ಎನ್ನುವುದನ್ನು ನಾವು ಎರಡು ವಾರಗಳ ಹಿಂದೆ ಚರ್ಚಿಸಿದ್ದೆವು. ಜಾತಿಯು ಎಲ್ಲೆಲ್ಲಿ ಉಪಯೋಗವಾಗುತ್ತದೆಯೋ ಅಲ್ಲೆಲ್ಲಾ ಸಮುದಾಯಗಳು ಜಾತಿಯನ್ನು ಒಂದು ಸಂಪನ್ಮೂಲವೆಂಬಂತೆ ಬಳಸಿಕೊಳ್ಳುತ್ತವೆ. ಉದಾಹರಣೆಗೆ, ದೇವಸ್ಥಾನ ಮತ್ತು ಮಠಗಳಲ್ಲಿ ಬ್ರಾಹ್ಮಣರಿಗೆ `ಮಡಿ ಜಾತಿಯವರು' ಎಂಬ ಕಾರಣಕ್ಕೆ ಕೆಲವು ವಿಶೇಷ ಸವಲತ್ತುಗಳಿರುತ್ತವೆ, ಹಲವು ಬ್ರಾಹ್ಮಣರು ಈ ಸವಲತ್ತುಗಳನ್ನು ಪಡೆಯುವುದಕ್ಕಾಗಿ ತಮ್ಮ ಜಾತಿಯನ್ನು ಬಳಸಿಕೊಳ್ಳುತ್ತಾರೆ. ಇದು ಇತರ ಜಾತಿಗಳ ಸಂದರ್ಭದಲ್ಲಿಯೂ ನಿಜ.
">
ಇವು ಶಾಲೆ ಕಾಲೇಜುಗಳಿಗೆ ಸೇರಲು, ಗ್ರಾಮ ಪಂಚಾಯಿತಿಯಿಂದ ಆರಂಭಿಸಿ ಸಂಸತ್ತಿನ ತನಕದ ಜನಪ್ರತಿನಿಧಿ ಸಭೆಗಳನ್ನು ಪ್ರವೇಶಿಸಲು ಜಾತಿಯನ್ನು ಬಳಸಿಕೊಳ್ಳುತ್ತಾರೆ. ಹಾಗೆಯೇ ಉದ್ಯಮಿಗಳೂ ಕೂಡಾ ತಮ್ಮ ಅನುಕೂಲಕ್ಕೆ ಜಾತಿಯನ್ನು ಬಳಸಿಕೊಳ್ಳುವ ಉದಾಹರಣೆಗಳನ್ನೂ ನಾವು ನೋಡಿದ್ದೇವೆ. `ಬಳಕೆಯ ಮೌಲ್ಯ' ವರ್ತಮಾನದಲ್ಲಿ ಜಾತಿಯ ಪ್ರಮುಖ ಲಕ್ಷಣವಾಗಿದೆ. ಹಿಂದಿನ ಕಾಲದಲ್ಲಿ ಜಾತಿಯು ಸಮಾಜದ ಶ್ರೇಣೀಕೃತ ವ್ಯವಸ್ಥೆಗೆ ಕಾರಣವಾಗಿದ್ದರೆ ಈಗ ಅದು ಸಾರ್ವಜನಿಕ ಮತ್ತು ಖಾಸಗಿ ಸವಲತ್ತುಗಳನ್ನು ಹಲವು ಸಮುದಾಯಗಳಿಗೆ ಹಂಚುವ ವಿತರಣಾ ವ್ಯವಸ್ಥೆಯಾಗಿದೆ.
ಭಾರತದಲ್ಲಿಂದು ಜಾತಿಯ ಬಗ್ಗೆ ಮಾತನಾಡಲು ಹೊರಟಾಕ್ಷಣ ಅದು ಮೀಸಲಾತಿಯ ಜೊತೆಗೆ ತಳುಕು ಹಾಕಿಕೊಳ್ಳುತ್ತದೆ. ಈ ಸಂವಾದದಲ್ಲೂ ಮೀಸಲಾತಿಯ ಬಗ್ಗೆ ಹಲವರು ಪತ್ರಗಳನ್ನು ಬರೆದಿದ್ದಾರೆ. ಸಾರ್ವಜನಿಕ ಚರ್ಚೆ ಮತ್ತು ಮಾತುಕತೆಗಳಲ್ಲಿ ಸಾಮಾನ್ಯವಾಗಿ ಮಿಸಲಾತಿಯ ಪ್ರಸ್ತುತತೆಯನ್ನು ಪ್ರಶ್ನಿಸುವ ಮಾತುಗಳು ಸಾಮಾನ್ಯ. ಈ ಪ್ರಶ್ನೆಗಳನ್ನು ಎತ್ತುವವರಲ್ಲಿ ಯುವ ವಿದ್ಯಾರ್ಥಿಗಳೂ ಇದ್ದಾರೆ. ಇವರು ಎತ್ತುವ ಪ್ರಶ್ನೆಗಳ ಸ್ವರೂಪ ಮತ್ತು ಪ್ರಶ್ನೆಗಳನ್ನು ಎತ್ತುವವರು ಯಾರು ಎಂಬುದನ್ನು ಸೂಕ್ಷ್ಮವಾಗಿ ನೋಡಿದರೆ ಒಂದು ನಿರ್ದಿಷ್ಟ ಮಾದರಿ ಕಂಡಬರುತ್ತದೆ. ಅವುಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು.
>ಮೊದಲನೆಯದಾಗಿ ಮೀಸಲಾತಿಯನ್ನು ತೀವ್ರವಾಗಿ ಟೀಕಿಸುವ ಧಾಟಿಯಲ್ಲಿ ಈ ಪ್ರಶ್ನೆಗಳನ್ನು ಎತ್ತುವವರು ಸಾಮಾನ್ಯವಾಗಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳಿಗೆ ಸೇರಿರುವವರಲ್ಲ. ಎರಡನೆಯದಾಗಿ ಇವರು ಕೇಳುವ ಪ್ರಶ್ನೆಯಲ್ಲಿ ಸಾಮಾನ್ಯವಾಗಿ ಎರಡು ಅಂಶಗಳಿರುತ್ತವೆ. ಒಂದು `ಅವರಿಗೆ ಮಾತ್ರ ಏಕೆ ಮೀಸಲಾತಿ?' ಎರಡು `ನಮಗೇಕೆ ಮೀಸಲಾತಿ ಇಲ್ಲ?'. ಮೂರನೆಯದಾಗಿ ಮೀಸಲಾತಿ ಸಮಾಜದಲ್ಲಿ ಜಾತೀಯತೆಯನ್ನು ಹರಡುವುದರಿಂದ ಅದು ಕೆಟ್ಟದ್ದಲ್ಲವೇ? ಎಂಬ ವಾದ ಮಂಡಿಸುತ್ತಾರೆ.
ನಾಲ್ಕನೆಯದಾಗಿ ಜಾತಿ ಆಧಾರಿತ ಮೀಸಲಾತಿ ದೇಶದ ಅಭಿವೃದ್ಧಿಗೆ ಮಾರಕವಲ್ಲವೇ ಎಂಬ ಪ್ರಶ್ನೆ ಇವರದ್ದು. ಐದನೆಯದಾಗಿ ಇವರೆಲ್ಲರೂ ಮೀಸಲಾತಿಯನ್ನು ಸಂಪೂರ್ಣವಾಗಿ ವಿರೋಧಿಸುವುದಿಲ್ಲ. ಅದನ್ನು ಟೀಕಿಸುತ್ತಲೇ `ನಾವು ಬಡವರಿಗೆ ಮೀಸಲಾತಿ ನೀಡುವುದನ್ನು ಒಪ್ಪುತ್ತೇವೆ. ಆದರೆ ಅದು ಎಲ್ಲ ಜಾತಿಯ ಬಡವರಿಗೆ ದೊರೆಯಬೇಕು' ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕೊನೆಯದಾಗಿ ಮೀಸಲಾತಿಯ ಸವಲತ್ತು ಪಡೆದವರ ಯೋಗ್ಯತೆ ಮತ್ತು ಅರ್ಹತೆಯ ಬಗ್ಗೆ ಒಂದು ಕೊಂಕು ಮಾತು ಮೀಸಲಾತಿ ವಿರೋಧಿಗಳ ಬಳಿ ಇದ್ದೇ ಇರುತ್ತದೆ.
ಮೀಸಲಾತಿಯ ವಿಚಾರವು ಏಕಕಾಲದಲ್ಲಿ ಸಂಕೀರ್ಣವೂ, ಬಹುಮುಖ್ಯವೂ ಅಗಿರುವಂಥದ್ದು. ಜಾತಿಯ ಬಗೆಗಿನ ಯಾವುದೇ ಸಾರ್ವಜನಿಕ ಚರ್ಚೆಯು ಮೀಸಲಾತಿಯ ಚರ್ಚೆಯಿಲ್ಲದೆ ಪೂರ್ಣಗೊಳ್ಳುವುದಿಲ್ಲ. ಹಾಗಾದಾಗ ನಾವು ಮೀಸಲಾತಿಯ ಜೊತೆಗೆ ಅಥವಾ ಮೆರಿಟ್ ಅಥವಾ `ಅರ್ಹತೆ'ಯ ಪ್ರಕೃತಿಯ ಬಗ್ಗೆಯೂ ಚರ್ಚಿಸಬೇಕಾಗುತ್ತದೆ. ಮೆರಿಟ್ ಎಂದರೆ ಏನು? ನ್ಯಾಯಯುತ ಸಮಾಜಕ್ಕೆ ಯಾವ ರೀತಿಯ ಮೆರಿಟ್ ಅವಶ್ಯಕ? ಈ ಪ್ರಶ್ನೆಗಳನ್ನು ಚರ್ಚಿಸುವ ಮೊದಲು ನಾವು ಮೀಸಲಾತಿಯ ಪರಿಕಲ್ಪನೆಯನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳೋಣ.
ಮೀಸಲಾತಿ ಎನ್ನುವುದು ನಮ್ಮ ಸಮಾಜದ ಪ್ರತಿಯೊಂದು ಅಂಗದಲ್ಲಿಯೂ, ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಹಾಸುಹೊಕ್ಕಾಗಿರುವಂಥದ್ದು. ಅದರಲ್ಲಿಯೂ ವಿಶೇಷವಾಗಿ ಬಲಿಷ್ಠ ಜಾತಿ, ವರ್ಗಗಳಿಗೆ ಸೇರಿದವರು ಒಂದಲ್ಲಾ ಒಂದು ರೀತಿಯ ಮೀಸಲಾತಿಯನ್ನು ಪಡೆದುಕೊಂಡವರು. ಈ ರೀತಿಯ ಮೀಸಲಾತಿ ಸಹಕಾರವಿಲ್ಲದಿದ್ದರೆ ನಮ್ಮಲ್ಲಿ ಕೆಲವರು ಮೇಲೆ ಬರಲು ಸಾಧ್ಯವೇ ಇರಲಿಲ್ಲ. ಸ್ಥೂಲ ಅರ್ಥದಲ್ಲಿ ನೋಡುವುದಾದರೆ ಮೀಸಲಾತಿ ಎಂದರೆ ಕೆಲವು ರೀತಿಯ ರಕ್ಷಣೆ ಅಥವಾ ಸಕಾರಣ ತಾರತಮ್ಯ. ಮೀಸಲಾತಿಯು ನಮಗೆ ಎಲ್ಲೆಡೆಯೂ ಕಾಣುವಂಥದ್ದು.
ಉದಾಹರಣೆಗೆ, ಪ್ರತಿಯೊಂದು ಮನೆಯಲ್ಲೂ ಹಲವು ರೀತಿಯ ಮೀಸಲಾತಿಯಿರುತ್ತದೆ. ಮನೆಯಲ್ಲಿ ರೋಗ ಬಾಧಿತ ಮಗುವೊಂದಿದ್ದರೆ ಹೆತ್ತವರು ಅದರ ಪಾಲನೆ ಮತ್ತು ರಕ್ಷಣೆಗೆ ಹೆಚ್ಚಿನ ಸಂಪನ್ಮೂಲಗಳನ್ನು ವ್ಯಯಿಸುತ್ತಾರೆ. ಆ ಮಗುವಿಗೆ ಅವರು ಹೆಚ್ಚು ಸತ್ವಭರಿತ ತಿನಿಸುಗಳನ್ನು ಕೊಡಬಹುದು, ಪೂರಕ ಆಹಾರವನ್ನು ವಿಶೇಷವಾಗಿ ಕೊಡಬಹುದು, ಅದರ ಅಗತ್ಯಕ್ಕನುಗುಣವಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಬಹುದು. ಹೀಗೆ ಒಂದು ಮಗುವಿಗಾಗಿ ಅಥವಾ ಒಂದು ವ್ಯಕ್ತಿಗಾಗಿ ಕುಟುಂಬದ ಹಣವನ್ನು ಹೆಚ್ಚು ವ್ಯಯಿಸಿದಾಗ, ಹಣವು ಸಮಾನ ಹಂಚಿಕೆಗೆ ಒಳಗಾಗದಿದ್ದಾಗ ಮನೆಯೊಳಗೆ ಭಿನ್ನಾಭಿಪ್ರಾಯಗಳುಂಟಾಗಬಹುದು.
ಹಣವನ್ನು ಮೀಸಲಿಡುವ ಮತ್ತೊಂದು ಉದಾಹರಣೆಯೆಂದರೆ ಕುಟುಂಬದ ಹೆಣ್ಣು ಮಕ್ಕಳಿಗಾಗಿ ಎತ್ತಿ ಇಡುವ ಸಂಪತ್ತು. ಇದು ಇವತ್ತಿಗೂ ಭಾರತದಾದ್ಯಂತ ನಡೆಯುತ್ತದೆ. ಹೀಗೆ ಎತ್ತಿಟ್ಟ ಹಣವನ್ನು ಅವರು ಮಗಳ ಮದುವೆಗಾಗಿ ವ್ಯಯಿಸುತ್ತಾರೆ.ಕೆಲವೊಮ್ಮೆ ಅದರಲ್ಲಿ ವರದಕ್ಷಿಣೆಯೂ ಸೇರಿಕೊಳ್ಳುತ್ತದೆ. ಹೆತ್ತವರು ಅಥವ ಸಹೋದರರು ಮನೆಯ ಮಗಳ ಮದುವೆಗಾಗಿ ತಮ್ಮ ಉಳಿತಾಯವನ್ನೆಲ್ಲಾ ಖರ್ಚು ಮಾಡುವುದು ಅಥವಾ ಅದಕ್ಕಾಗಿ ಸಾಲ ಮಾಡುವುದು ಅಪರೂಪವೇನಲ್ಲ. ಮನೆಯ ಮಗಳಿಗೆ ಈ ರೀತಿಯ ಆಸರೆಯನ್ನೊದಗಿಸುವುದೂ ಒಂದು ರೀತಿಯ ಮೀಸಲಾತಿಯೇ. ಕೆಲವೊಮ್ಮೆ ಮನೆಯ ಗಂಡು ಮಕ್ಕಳು ಇದನ್ನು ವಿರೋಧಿಸಬಹುದು, ಹಾಗಿದ್ದೂ ಶತಶತಮಾನಗಳಿಂದ ನಡೆದುಕೊಂಡು ಬಂದ ರೂಢಿ ಇದು. ಶ್ರೀಮಂತ ಕುಟುಂಬಗಳಲ್ಲಿ ಮೀಸಲಾತಿಯು ರಕ್ಷಣೆಯ ರೂಪದಲ್ಲಿ ಹಲವು ತಲೆಮಾರಿನಿಂದ ತಲೆಮಾರಿಗೆ ಹರಿದುಕೊಂಡು ಬಂದಿದೆ.
ಕುಟುಂಬದ ಆಸ್ತಿಯ ಉತ್ತರಾಧಿಕಾರದ ವಿಚಾರದಲ್ಲಿಯೂ ಮೀಸಲಾತಿಯಿದೆ. ಹೆತ್ತವರ ಆಸ್ತಿಯು ಅನಿವಾರ್ಯವಾಗಿ ಅವರ ಮಕ್ಕಳಿಗೇ ಸಿಗಬೇಕು ಎಂಬುದನ್ನು ನಾವು `ಸಹಜ' ನಿಯಮವೆಂದೇ ತಿಳಿದುಕೊಂಡಂತಿದೆ. ಆದರೆ ನಾವು ಈ ನಿಯಮವನ್ನು ಯಾಕೆ ಒಪ್ಪಿಕೊಳ್ಳಬೇಕು? ಇದನ್ನು ಯಾಕೆ ಪ್ರಶ್ನಿಸಬಾರದು? ಹೆತ್ತವರ ಆಸ್ತಿಯು ಮಕ್ಕಳಿಗೆ ಸಿಗದೆ ಅವರು ಯಾವ ಸಮುದಾಯದ ಭಾಗವಾಗಿರುತ್ತಾರೋ ಆ ಸಮುದಾಯಕ್ಕೆ ಸಲ್ಲುವಂತಾಗುವ ವ್ಯವಸ್ಥೆಯನ್ನು ನಾವು ಕಲ್ಪಿಸಿಕೊಳ್ಳಲು ಸಾಧ್ಯವೇ? ಮಕ್ಕಳು ಹೇಗೇ ಇರಲಿ, ಅವರು ಆ ಆಸ್ತಿಗೆ ಉತ್ತರಾಧಿಕಾರಿಯಾಗಲು ಅಯೋಗ್ಯರಾಗಿದ್ದರೂ ಕೂಡಾ ಹೆತ್ತವರ ಆಸ್ತಿಗೆ ಅವರೇ ಹಕ್ಕುದಾರರು ಎಂದು ನಂಬಿಕೊಂಡು ಬಂದ ನಮಗೆ ಈ ಪ್ರಶ್ನೆಯು ದಿಗ್ಭ್ರಮೆಯನ್ನು ಉಂಟುಮಾಡಬಹುದು. ಈ ಪರಿಸ್ಥಿತಿ ಎಂಥದ್ದು ಅಂದರೆ, ಮಕ್ಕಳು `ಅರ್ಹತೆ'ಯನ್ನು ಹೊಂದಿಲ್ಲದಿದ್ದರೂ ತಮ್ಮ ಕುಟುಂಬದ ಆಸ್ತಿಗೆ ಹಕ್ಕುದಾರರಾಗುತ್ತಾರೆ.
ಎಲ್ಲರೂ ಎತ್ತಿಹಿಡಿಯುವ `ಮೆರಿಟ್' ಅಥವಾ `ಅರ್ಹತೆ'ಯ ಪರಿಕಲ್ಪನೆ ತಾನೇ ತಾನಾಗಿ ಉದ್ಭವಿಸಿದ್ದಲ್ಲ. ಅದರ ಹಿಂದೆ ರಕ್ಷಣೆ ಇದ್ದೇ ಇದೆ. ಈ ರೀತಿಯ ರಕ್ಷಣೆಯು ಒಂದು ನೈತಿಕ ಸಂಪನ್ಮೂಲವಾಗಿ ಬಡವ ಬಲ್ಲಿದರಿಬ್ಬರಿಗೂ ದೊರೆಯುವಂಥದ್ದು. ಉದಾಹರಣೆಗೆ, ಇತಿಹಾಸದ ಒಂದು ಘಟ್ಟದಲ್ಲಿ ಬಂಡವಾಳಶಾಹಿಗಳಿಗೆ ಕೂಡಾ ವಿದೇಶೀ ಬಂಡವಾಳದ ಬಳಕೆ ಅನಿವಾರ್ಯವಾಯಿತು. ಇದನ್ನೇ ಇನ್ನಷ್ಟು ನಾಟಕೀಯವಾಗಿ ಹೇಳುವುದಾದರೆ, ಮೀಸಲಾತಿ ಎಂಬುದು ದೊಡ್ಡ ಕಾರ್ಖಾನೆಗಳಿಗೆ ದೊರೆಯುವ, ರಾಷ್ಟ್ರದ ಅಭಿವದ್ಧಿಗಾಗಿ ಬಳಸಬೇಕಾಗಿರುವ ದೇಶದ ಸ್ವತ್ತುಗಳು.
ಮತ್ತೊಂದು ಕಡೆ ಏಕಸ್ವಾಮ್ಯ ತಡೆ ಕಾಯ್ದೆ (ಎಂಆರ್‌ಟಿಪಿ)ಯು ಕೂಡಾ ಸಣ್ಣ ಕೈಗಾರಿಕೆಗಳಿಗೆ ಮೀಸಲಾತಿಯನ್ನು ನೀಡಿ ಅವುಗಳನ್ನು ದೊಡ್ಡ ಕಾರ್ಖಾನೆಗಳು ನುಂಗದಂತೆ ನೋಡಿಕೊಂಡಿತು. ಅದೇ ರೀತಿ ಸರಕಾರವು ಕೃಷಿ ಉತ್ಪನ್ನಗಳ ಸಂಸ್ಕರಣಾ ಉದ್ಯಮಗಳನ್ನು ರಕ್ಷಿಸಲು ಮೀಸಲು ವಲಯಗಳ ನೀತಿಯನ್ನು ತಂದಿದೆ. ಮತ್ತೊಂದು ಕಡೆ ರಾಜ್ಯ ಸರಕಾರಗಳು ಕೆಲವು ಸ್ಥಾನಗಳನ್ನು ಸ್ಥಳೀಯರಿಗಾಗಿ ಮೀಸಲಿಡುತ್ತದೆ. ಹೀಗೆ ಅಗತ್ಯವಿದ್ದವರಿಗೆ ರಕ್ಷಣೆಯನ್ನೊದಗಿಸುವುದು ಒಂದು ಐತಿಹಾಸಿಕ ಸತ್ಯ. ಅದನ್ನು ಸರಕಾರವು ಜಾರಿಯಲ್ಲಿಟ್ಟಿದ್ದು ಬಡವ ಶ್ರೀಮಂತರೆಲ್ಲರೂ ಒಪ್ಪಿಕೊಂಡು ಬಂದಿದ್ದಾರೆ.
ಕೊಲ್ಹಾಪುರ ರಾಜಮನೆತನದ ಸಾಹು ಮಹಾರಾಜರು ಕೆಲವು ಸಾಮಾಜಿಕ ಗುಂಪುಗಳಿಗೆ ಸಹಾಯವಾಗುವಂತೆ `ರಕ್ಷಣೆ'ಯನ್ನು ಜಾರಿಗೆ ತಂದರು. ಇಲ್ಲಿ ಕೇಳಬೇಕಾದ ಮುಖ್ಯ ಪ್ರಶ್ನೆಯೊಂದಿದೆ. ಮೀಸಲಾತಿ ಎಂಬುದು ನಿನ್ನೆ ಬಡವರಾಗಿದ್ದು ಇಂದು ಶ್ರೀಮಂತರಾಗಿರುವವರಿಗೆ ರಕ್ಷಣೆಯಾಗಿ, ಸಂಪನ್ಮೂಲವಾಗಿ ದೊರಕಿದ್ದರೆ, ಈಗ ಶ್ರೀಮಂತರಾಗಿರುವವರು ಇಂದಿಗೂ ಬಡವರಾಗಿಯೇ ಉಳಿದಿರುವವರಿಗೆ ಸಿಗುವ ಮೀಸಲಾತಿಯನ್ನು ಯಾಕೆ ವಿರೋಧಿಸಬೇಕು? `ಮೆರಿಟ್' ಎಂಬುದೇ ಐತಿಹಾಸಿಕ ಪ್ರಕ್ರಿಯೆಗಳಲ್ಲಿ ರೂಪುಗೊಂಡು ಬಂದ ಪರಿಕಲ್ಪನೆಯಾಗಿದೆ. ಅದು ಕೆಲವು ಸಾಮಾಜಿಕ ಗುಂಪುಗಳಿಗೆ ಸಹಜವಾಗಿ ದೊರೆಯದಿರುವ ಸಂದರ್ಭದಲ್ಲಿ `ಮೆರಿಟ್' ಅನ್ನು ನೆಪ ಮಾಡಿಕೊಂಡು ಯಾಕೆ ಮೀಸಲಾತಿಯನ್ನು ವಿರೋಧಿಸಬೇಕು?
ಮೀಸಲಾತಿ ಎಂಬುದು ಹಲವು ರೂಪಗಳಲ್ಲಿ, ಹಲವು ನಾಮಗಳಲ್ಲಿ ಪ್ರಸ್ತುತ ಸಮಾಜದಲ್ಲಿ ಇರುವಂಥದ್ದೇ. ಮೀಸಲಾತಿಯು ಮೂಲಭೂತವಾಗಿ ಪೌರತ್ವಕ್ಕೆ ಸಂಬಂಧಿಸಿದ್ದು. ಒಂದು ದೇಶದ ಪೌರನಾಗಿರುವುದು ಎಂದರೆ ಏನು? ಇವತ್ತು ಹೆಚ್ಚಿನ ಜನರಿಗೆ ಭಾರತೀಯ ಪೌರತ್ವವನ್ನು ಹೊಂದಿರುವುದು ಎಂಬುದರ ಪ್ರಮುಖ ಅರ್ಥ ಭಾರತದ ಕ್ರಿಕೆಟ್ ತಂಡವನ್ನು ಬೆಂಬಲಿಸುವುದು! ಪೌರತ್ವ ಎಂಬುದು ನಮಗೆ ದೊರೆತಿರುವ ಒಂದು ಹಕ್ಕು ಎಂಬುದನ್ನು ನಾವು ಸರಿಯಾಗಿ ಅರಿತಿಲ್ಲ. ಭಾರತದ ಸಂವಿಧಾನವು ನಮಗೆ ಹಲವು ಹಕ್ಕುಗಳನ್ನು ಕೊಡುವುದರ ಜೊತೆಜೊತೆಗೇ ಪೌರನು ಒಪ್ಪಿಕೊಳ್ಳಬೇಕಾದ ಬಾಧ್ಯತೆಗಳ ಪಟ್ಟಿಯನ್ನೂ ನಮ್ಮ ಮುಂದಿಟ್ಟಿದೆ.
ಸಾಮಾಜಿಕ ಸಮಾನತೆ ಸಾಕಾರಗೊಳಿಸುವುದಕ್ಕಾಗಿ ದುಡಿಯಬೇಕಾದುದು ಆ ರೀತಿಯ ಕರ್ತವ್ಯಗಳಲ್ಲೊಂದು. ಪೌರನೊಬ್ಬ ಸಮಾನತೆಯ ಕಡೆಗೆ ದುಡಿಯಬೇಕಾದುದು ಯಾವುದೇ ನಾಗರಿಕ ರಾಷ್ಟ್ರದ, ಎಲ್ಲ ಪೌರರ ಆದ್ಯ ಕರ್ತವ್ಯಗಳಲ್ಲೊಂದು. ಈ ಸಮಾನತೆ ಎನ್ನುವುದು ಬರಿಯ ಮತ ಚಲಾವಣೆಯ ಹಕ್ಕು ಮಾತ್ರವಾಗಿರದೆ ರಾಷ್ಟ್ರದ ಸಂಪತ್ತಿಗೆ ಎಲ್ಲರೂ ಸಮಾನ ರೀತಿಯಲ್ಲಿ ಹಕ್ಕುದಾರರಾಗುವಂತೆ ಮಾಡಬೇಕು. ಭಾರತೀಯ ಪೌರನಾಗಿರುವುದು ಎಂದರೆ ಈ ದೇಶದಿಂದ ತನಗೆ ಏನು ಸಿಗಬಹುದು ಅದರ ಬಗ್ಗೆ ಮಾತ್ರ ಯೋಚನೆ ಮಾಡುತ್ತಾ ತಮ್ಮ ಸಂವಿಧಾನಿಕ ಕರ್ತವ್ಯಗಳನ್ನು ದೇಶದ ಜನರು ಮರೆತಾಗ ಅದರ ನೇರ ಪರಿಣಾಮವಾಗಿ ರಾಜಕೀಯ ಮತ್ತು ವಿದ್ಯಾ ಕ್ಷೇತ್ರಗಳಲ್ಲಿ ಮೀಸಲಾತಿಯು ಅಗತ್ಯವಾಗುತ್ತದೆ.
ನಮಗೆ ಯಾವುದೋ ರೀತಿಯ ಮೀಸಲಾತಿ ಅಥವಾ ರಕ್ಷಣೆ ದೊರೆಯದಿದ್ದಿದ್ದರೆ ನಾವು ಇಂದು ಯಾವ ಸ್ಥಾನದಲ್ಲಿದ್ದೇವೆಯೋ ಆ ಸ್ಥಾನದಲ್ಲಿರಲು ಖಂಡಿತಾ ಸಾಧ್ಯವಿರಲಿಲ್ಲ. ಇದು ಬ್ರಾಹ್ಮಣರ ಬಗ್ಗೆ ಎಷ್ಟು ಸತ್ಯವೋ, ಬೇರೆ ಜಾತಿಯವರ ಬಗ್ಗೆಯೂ ಅಷ್ಟೇ ಸತ್ಯ. ಸಂಸ್ಕೃತಿ ಮತ್ತು ಪರಂಪರೆಗಳು ಈ ರೀತಿಯ ಸಾಮಾಜಿಕ ರಕ್ಷಣೆಯ ಬೇರೆ ಬೇರೆ ರೂಪಗಳು ಮಾತ್ರ. ನಾವು ಒಂದು ಪರಂಪರೆಗೆ ಸೇರಿದ್ದೇವೆ ಎಂದ ತಕ್ಷಣ ಆ ಪರಂಪರೆಯು ನಮ್ಮನ್ನು ಹಲವು ರೀತಿಗಳಲ್ಲಿ ರಕ್ಷಿಸುತ್ತಿರುತ್ತದೆ. ನೀವು ಯಾವ ಪರಂಪರೆಯ ಭಾಗವಾಗಿದ್ದೀರೋ ಅದು `ಶ್ರೀಮಂತ' ಪರಂಪರೆಯಾಗಿದ್ದರೆ ನಿಮಗೆ ಆ ಪರಂಪರೆಯ ಸವಲತ್ತುಗಳು ದೊರೆಯಲು ಪ್ರಾರಂಭವಾಗುತ್ತವೆ.
ಇವತ್ತಿನ ಕಂಪನಿಗಳು ಕೂಡಾ ಮೀಸಲಾತಿಯನ್ನೇ ಆಧರಿಸಿರುವಂಥವು. ಹಲವು ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ಅಥವಾ ಐಟಿ ಕಂಪನಿಗಳು ಕೂಡಾ ಹೆಚ್ಚಿನ ಸಂದರ್ಭಗಳಲ್ಲಿ ಸರಕಾರದಿಂದ ಮೀಸಲಾತಿಯ `ಅನುಕೂಲ'ವನ್ನು ಅನುಭವಿಸುತ್ತವೆ. ಬಡ ರೈತರಿಗೆ ಕೊಟ್ಟಾಗ ಯಾವುದನ್ನು ಸಬ್ಸಿಡಿ ಎನ್ನುತ್ತಾರೋ ಅದನ್ನೇ ಶ್ರೀಮಂತ ಕಂಪನಿಗಳಿಗೆ ಕೊಟ್ಟರೆ ಇನ್ಸೆಂಟಿವ್ ಎನ್ನುತ್ತಾರೆ ಎಂದು ಚಿಂತಕರೊಬ್ಬರು ಹೇಳುತ್ತಾರೆ. ಇದರ ಅರ್ಥ ಇಷ್ಟೆ, ನಮಗೆ ಸಿಗುತ್ತಿರುವ ವಿಶೇಷ ಸೌಲಭ್ಯಗಳು ನಮಗೆ ಸಿಗದಿದಿದ್ದರೆ ನಾವು ಈಗ ಹೀಗೆ ಇರುತ್ತಿರಲಿಲ್ಲ.
ಹಾಗಾದರೆ ಸಮಾಜದ ಶ್ರೀಮಂತ ಮತ್ತು ಬಲಿಷ್ಠ ಸಮುದಾಯಗಳ ಭಾಗವಲ್ಲದಿದ್ದವರ ಪಾಡೇನು? ಸಮಾಜದ ಅಂಚಿನಲ್ಲಿದ್ದು ಸಹಜ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದವರ ಕತೆ ಏನು? ಕೆಲವು ಅಂಕಿ ಸಂಖ್ಯೆಗಳನ್ನು ನೋಡಿದರೆ ನಾವೆಲ್ಲರೂ ನಾಚಿಕೊಳ್ಳಬೇಕು. ಅಧಿಕೃತ ಅಭಿಪ್ರಾಯದ ಪ್ರಕಾರವೇ ಇಂದು 250-300 ದಶಲಕ್ಷ ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಇವರಿಗೆ ಕನಿಷ್ಠ ಆಹಾರ ಕೂಡಾ ದೊರೆಯುವುದಿಲ್ಲ. ಬದುಕಿಗೆ ಅತ್ಯಗತ್ಯವಾದ ಕುಡಿಯುವ ನೀರು, ಔಷಧ ಮುಂತಾದ ಸೌಲಭ್ಯಗಳೂ ಇವರಿಗೆ ಸಿಗುವುದಿಲ್ಲ. ನಮ್ಮ ದೇಶದಲ್ಲಿ ಈ ರೀತಿಯ ಕಡು ಬಡತನದಲ್ಲಿ ಇರುವವರು ಯಾರು? ಹಲವು ಅಧ್ಯಯನಗಳ ಅಂದಾಜಿನ ಪ್ರಕಾರ ಈ ಬಡವರಲ್ಲಿ ಹೆಚ್ಚಿನವರು ಪರಿಶಿಷ್ಠ ಜಾತಿ ಅಥವಾ ಪಂಗಡಕ್ಕೆ ಸೇರಿದವರು.
ಬ್ರಾಹ್ಮಣರನ್ನೂ ಸೇರಿದಂತೆ ಇತರ ಸಮುದಾಯಗಳಲ್ಲಿಯೂ ಬಡವರಿದ್ದಾರೆ. ಆದರೆ ಪರಿಶಿಷ್ಠ ಜಾತಿ/ಪಂಗಡಗಳು, ಹಿಂದುಳಿದ ವರ್ಗದವರ ಜೊತೆ ಹೋಲಿಸಿದಾಗ ಮೇಲ್ಜಾತಿಗೆ ಸೇರಿದವರ ಬಡತನದ ಸ್ವರೂಪ ಸಂಪೂರ್ಣ ಭಿನ್ನವಾಗಿವೆ.
ಬಡತನವೆನ್ನುವುದು ಭಾರೀ ದೊಡ್ಡ ಸಾಮಾಜಿಕ ಅಪರಾಧವಾಗಿದೆ. ಇದಕ್ಕೆ ಸರಕಾರ ಮಾತ್ರ ಹೊಣೆಯಲ್ಲ. ಒಂದಲ್ಲ ಒಂದು ರೀತಿಯಲ್ಲಿ ನಾವೆಲ್ಲಾ ಇದಕ್ಕೆ ಜವಾಬ್ದಾರರು. ಬಡತನವೆನ್ನುವುದು ಸಾಮರ್ಥ್ಯಕ್ಕೆ ಸಂಬಂಧಿಸಿದ್ದಲ್ಲ. ಯಾರೂ ತಮಗೆ ಬಡತನವೇ ಯೋಗ್ಯ ಎಂಬ ಕಾರಣಕ್ಕೆ ಅಥವಾ ಅದರಿಂದ ಹೊರಬರಲು ಆಗದಿರುವುದಕ್ಕೆ ಬಡವರಾಗಿ ಇರುವುದಿಲ್ಲ.
ಮೇಲ್ಜಾತಿಗಳಲ್ಲಿಯೂ ಬಡವರಿರುತ್ತಾರೆ ಎಂದು ಹಲವರು ವಾದಿಸುತ್ತಾರೆ ಮತ್ತು ಬಡ ಬ್ರಾಹ್ಮಣ ಕುಟುಂಬಗಳ ಉದಾಹರಣೆ ಕೊಡುತ್ತಾರೆ. ಹಾಗೆ ಇರುವುದು ಸತ್ಯ. ಆದರೆ ಆ ರೀತಿ ಬಡವರಾಗಿದ್ದ ಹಲವು ಕುಟುಂಬಗಳು ನಿರ್ದಿಷ್ಟ ಸಮುದಾಯಕ್ಕೆ ಸೇರಿರುವ ಕಾರಣದಿಂದ ದೊರೆಯುವ ಕಾಣದ ಕೈಗಳ ಸಹಕಾರ ಅವರನ್ನು ಬಡತನದಿಂದ ಹೊರ ತಂದಿವೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.