ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು 2018ಫೆಬ್ರವರಿ 04ರಂದು ಪ್ರಜಾವಾಣಿಗೆ ನೀಡಿದ ಸಂದರ್ಶನದಲ್ಲಿ ಪ್ರೀತಿ, ತ್ಯಾಗ, ಶಾಂತಿಯಿಂದ ಜಗತ್ತು ಗೆಲ್ಲಬಹುದು ಎಂದು ಪ್ರತಿಪಾದಿಸಿದ್ದಾರೆ.ಈ ಸಂದರ್ಶನವನ್ನು ಮರು ಓದಿಗೆ ನೀಡಲಾಗಿದೆ...
***
ಈಗ ಎಲ್ಲರ ಚಿತ್ತ ಶ್ರವಣಬೆಳಗೊಳದತ್ತ ನೆಟ್ಟಿದೆ. ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಬಾಹುಬಲಿ ಮೂರ್ತಿಗೆ ಸಹಸ್ರಮಾನದ ಎರಡನೇ ಮಹಾಮಸ್ತಕಾಭಿಷೇಕ ನಡೆಸಲು ಕ್ಷಣಗಣನೆ ಆರಂಭವಾಗಿದೆ. 58.8 ಅಡಿ ಎತ್ತರದ ಶಾಂತಿದೂತನಿಗೆ ಫೆಬ್ರುವರಿ 17ರಿಂದ 26ರವರೆಗೆ ಈ ಕಾರ್ಯ ನೆರವೇರಲಿದೆ.
ಶ್ರವಣಬೆಳಗೊಳ ದಿಗಂಬರ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕಳೆದ ಮೂರು ಮಹಾಮಸ್ತಕಾಭಿಷೇಕಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಈಗ ನಾಲ್ಕನೇ ಮಸ್ತಕಾಭಿಷೇಕಕ್ಕೆ ಸರ್ವ ಸಿದ್ಧತೆ ಮಾಡುತ್ತಿದ್ದಾರೆ. ಈ ಸಿದ್ಧತೆಗಳು, ವಿಶೇಷಗಳು ಮತ್ತು ಅನುಭವಗಳನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡಿದ್ದಾರೆ.
* ಮಹಾಮಸ್ತಕಾಭಿಷೇಕ ಸಿದ್ಧತೆ ಹೇಗಿದೆ?
ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿವೆ. ಬರುವ ಭಕ್ತರು, ಪ್ರವಾಸಿಗರಿಗೆ ವಸತಿ, ಊಟ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಸವಾಲಿನ ಕೆಲಸ. ವಸತಿಗೆ ಆದ್ಯತೆ ನೀಡಲಾಗಿದೆ. ಜಿಲ್ಲಾಡಳಿತ ನವನಗರಗಳನ್ನು ನಿರ್ಮಿಸಿ ವಸತಿ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದೆ. ಉಳಿದಂತೆ ಎಲ್ಲವೂ ಸುಸೂತ್ರವಾಗಿ ನಡೆದಿವೆ.
ಎಲ್ಲಾ ಸಿದ್ಧತೆಗಳನ್ನು ಮಾಡುವುದು ಸುಲಭವಲ್ಲ. ಹೆಚ್ಚಿನ ಜವಾಬ್ದಾರಿ ಹೊರಬೇಕಾಗುತ್ತದೆ. ಮೂರು ವರ್ಷದ ಮೊದಲೇ ಕೆಲಸ ಆರಂಭಿಸಬೇಕಾಗುತ್ತದೆ. ಒಂದೂವರೆ ವರ್ಷ ಮುಂಚಿತವಾಗಿ ಸಮಿತಿಗಳನ್ನು ರಚಿಸಲಾಗುತ್ತದೆ. ಮಹಾಮಸ್ತಕಾಭಿಷೇಕ ಮುಗಿದ ನಂತರವೂ ಒಂದು ವರ್ಷ ಕೆಲಸ ಇರುತ್ತದೆ.
* ಇದು ನಿಮ್ಮ ಅವಧಿಯಲ್ಲಿ ನಡೆಯುತ್ತಿರುವ ನಾಲ್ಕನೇ ಮಹಾಮಸ್ತಕಾಭಿಷೇಕ; ಯಶಸ್ಸಿನ ಗುಟ್ಟೇನು?
19 ಏಪ್ರಿಲ್, 1970ರಂದು ಪೀಠಾರೋಹಣ ನಡೆಯಿತು. ಮೂರು ಮಹಾಮಸ್ತಕಾಭಿಷೇಕಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈ ಬಾರಿಯೂ ಸಾಕಷ್ಟು ಎಚ್ಚರ ವಹಿಸಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರ ನೀಡುತ್ತಲೇ ಬಂದಿವೆ. ಹಿಂದೆ ರಾಜಮನೆತನದವರ ಸಹಕಾರ ಇತ್ತು. ಈಗ ಸರ್ಕಾರಗಳು ಆ ಕೆಲಸ ಮಾಡುತ್ತಿವೆ. ಸಾಕಷ್ಟು ಸಂಖ್ಯೆಯ ಜನ, ಭಕ್ತರು ಮನೆ–ಮಠ ಬಿಟ್ಟು ಹಗಲು–ರಾತ್ರಿ ದುಡಿಯುತ್ತಿದ್ದಾರೆ. ಭಕ್ತರ ಭಕ್ತಿಯೇ ಯಶಸ್ಸಿಗೆ ದಾರಿ ತೋರಿಸಿದೆ.
* ಭದ್ರತೆಗೆ ಏನೆಲ್ಲ ಆಗಿದೆ?
ರಾಜ್ಯ ಸರ್ಕಾರ ವ್ಯಾಪಕ ಭದ್ರತಾ ವ್ಯವಸ್ಥೆ ಮಾಡಿಕೊಂಡಿದೆ. ದೊಡ್ಡ ಯೋಜನೆ ರೂಪಿಸಿದೆ. ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದೆ. ಗಣ್ಯರ ಭದ್ರತೆಗೆ ಪೊಲೀಸರು ಸಜ್ಜಾಗಿದ್ದಾರೆ. ಬರುವ ಲಕ್ಷಾಂತರ ಭಕ್ತರ ರಕ್ಷಣೆ, ಸುಗಮ ಸಂಚಾರಕ್ಕೆ ಕಾರ್ಯಯೋಜನೆ ಸಿದ್ಧಗೊಂಡಿದೆ. ಸ್ವಯಂ ಸೇವಕರು ಉತ್ಸಾಹದಲ್ಲಿ ಇದ್ದಾರೆ.
* ಹಿಂದಿನ ಹಾಗೂ ಈಗಿನ ಸಿದ್ಧತೆಗಳಲ್ಲಿ ಯಾವ ಬದಲಾವಣೆ ಕಂಡಿದ್ದೀರಿ?
ತಂತ್ರಜ್ಞಾನ, ಜನರ ಮನೋಭಾವಗಳಲ್ಲಿ ವ್ಯತ್ಯಾಸಗಳಾಗಿವೆ. ಹಿಂದೆಲ್ಲ ಮೂರೂವರೆ ವರ್ಷಗಳ ಹಿಂದೆಯೇ ಸಿದ್ಧತೆ ಆರಂಭಿಸಬೇಕಿತ್ತು. ಈಗ ಅಷ್ಟೊಂದು ಸಮಯ ತೆಗೆದುಕೊಳ್ಳುತ್ತಿಲ್ಲ. ತಂತ್ರಜ್ಞಾನದಿಂದಾಗಿ ಕಡಿಮೆ ಅವಧಿಯಲ್ಲಿ ಅಟ್ಟಣಿಗೆ ನಿರ್ಮಾಣ ಮಾಡಲಾಗಿದೆ, ಮೂಲ ಸೌಕರ್ಯಗಳನ್ನು ತಕ್ಷಣಕ್ಕೆ ಕಲ್ಪಿಸಬಹುದಾಗಿದೆ, ತಾತ್ಕಾಲಿಕ ಮನೆಗಳ ನಿರ್ಮಾಣ ಸುಲಭವಾಗಿದೆ. ರೈಲ್ವೆ ಸೇರಿದಂತೆ ಸಾಕಷ್ಟು ಅನುಕೂಲ ಇರುವುದರಿಂದ ಭಕ್ತರ ಸಂಖ್ಯೆಯೂ ಹೆಚ್ಚಲಿದೆ. ಈ ಬಾರಿ 50 ಲಕ್ಷಕ್ಕೂ ಹೆಚ್ಚು ಜನ ಬರುವ ನಿರೀಕ್ಷೆ ಇದೆ.
* ಈ ಬಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರ ಹೇಗಿದೆ?
ನಾವು ಸರ್ಕಾರದಿಂದ ನೇರವಾಗಿ ಹಣ ಪಡೆಯುವುದಿಲ್ಲ. ಮಹಾಮಸ್ತಕಾಭಿಷೇಕ ಸಮಯದಲ್ಲಿ ಬರುವ ಜನರಿಗೆ ಸರ್ಕಾರವು ಜಿಲ್ಲಾ ಆಡಳಿತದ ಮೂಲಕ ಮೂಲಸೌಕರ್ಯ ಕಲ್ಪಿಸಿಕೊಡುತ್ತದೆ. ಮಠದ ವತಿಯಿಂದ ಮಹಾಮಸ್ತಕಾಭಿಷೇಕ, ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಗುತ್ತದೆ.
ಈ ಬಾರಿ ರಾಜ್ಯ ಸರ್ಕಾರ ₹ 175 ಕೋಟಿ ಅನುದಾನ ನೀಡಿದೆ. ಇದರಲ್ಲಿ ರಸ್ತೆ, ವಿದ್ಯುತ್, ವಸತಿ ಸೇರಿದಂತೆ ಮೂಲ ಸೌಕರ್ಯಗಳನ್ನು ಜಿಲ್ಲಾ ಆಡಳಿತವೇ ಕಲ್ಪಿಸಿದೆ. ಕೇಂದ್ರ ಸರ್ಕಾರ ಸಹ ಸಕಾರಾತ್ಮಕವಾಗಿ ಸ್ಪಂದಿಸಿದೆ. ಅದು ಪುರಾತತ್ವ ಇಲಾಖೆ ಮೂಲಕ ಬೆಟ್ಟಕ್ಕೆ ಮತ್ತೊಂದು ಕಡೆ ಮೆಟ್ಟಿಲು ನಿರ್ಮಿಸಿಕೊಟ್ಟಿದೆ. ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಯೋಜನೆಯಲ್ಲಿ ಶ್ರವಣಬೆಳಗೊಳ ಆಯ್ಕೆ ಆಗಿದೆ. ಇದಕ್ಕಾಗಿ ₹ 50 ಕೋಟಿ ಅನುದಾನ ಬರಲಿದೆ. ಕ್ಷೇತ್ರಕ್ಕೆ ಭೇಟಿ ನೀಡಿದ್ದ ಕೇಂದ್ರ ಸಚಿವ ಅನಂತಕುಮಾರ್ ಅವರು ಕೇಂದ್ರದಿಂದ ನೆರವು ಕೊಡಿಸುವ ಭರವಸೆ ನೀಡಿದ್ದಾರೆ. ಅದೇ ನಿರೀಕ್ಷೆಯಲ್ಲಿ ಇದ್ದೇವೆ.
* ಮಹಾಮಸ್ತಕಾಭಿಷೇಕ ಏಕೆ ಮಾಡಬೇಕು?
ಬಾಹುಬಲಿ ಮೂರ್ತಿ ನಿರ್ಮಾಣ ಮಾಡಿದ ನಂತರ ಇದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ಅದೇ ಪರಂಪರೆ ಈಗಲೂ ಮುಂದುವರಿದಿದೆ. ಇದೊಂದು ದೇಶದ ಬಹುದೊಡ್ಡ ಧಾರ್ಮಿಕ, ಸಾಂಸ್ಕೃತಿಕ ಮಹೋತ್ಸವ. ನಮ್ಮದು ಧರ್ಮ ಪ್ರಧಾನ ರಾಷ್ಟ್ರ. ಭವ್ಯವಾದ ಇತಿಹಾಸ, ಧಾರ್ಮಿಕ ಹಿನ್ನೆಲೆ ಇದೆ. ಜಗತ್ತಿನಲ್ಲೇ ವಿಶಿಷ್ಟ, ಪವಿತ್ರ ಸಂಸ್ಕೃತಿಯನ್ನು ಇಲ್ಲಿ ಕಾಣಬಹುದು. ಪೂಜೆಗಷ್ಟೇ ಸೀಮಿತಗೊಳಿಸದೆ ಧರ್ಮ ಪರಂಪರೆಯನ್ನು ಪ್ರಚುರಪಡಿಸಿ, ಅದನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ತಪಸ್ವಿಗಳು ಸಂದೇಶ ಕೊಟ್ಟಿದ್ದಾರೆ. ಅದರ ಪಾಲನೆಯಷ್ಟೇ ನಮ್ಮ ಕೆಲಸ.
24 ತೀರ್ಥಂಕರರು ಇದ್ದರೂ ದೀರ್ಘ ಸಮಯ ತಪಸ್ಸು ಮಾಡಿ ಎಲ್ಲರ ಮನ ಗೆದ್ದವನು ಬಾಹುಬಲಿ. ತ್ಯಾಗ, ತಪಸ್ಸು, ಧ್ಯಾನದ ಮೂಲಕ ಇಡೀ ಜಗತ್ತು ಗೆದ್ದಿದ್ದಾನೆ. ಪ್ರಪಂಚಕ್ಕೆ ಆದರ್ಶ ಪುರುಷ. ಬಾಹುಬಲಿಗೆ ಹೋಲಿಸಲು ಮತ್ತೊಬ್ಬ ಸಿಗಲಾರರು.
* ಜನ ಕಲ್ಯಾಣದ ಜತೆ ಮಹಾಮಸ್ತಕಾಭಿಷೇಕವನ್ನು ಹೇಗೆ ಬೆಸೆಯುತ್ತೀರಿ?
ಧಾರ್ಮಿಕ ಕಾರ್ಯಗಳ ಜತೆಗೆ ಶಾಶ್ವತ ಕೆಲಸಗಳೂ ಆಗುತ್ತವೆ. ಮಠದ ವತಿಯಿಂದ ಅಭಿಷೇಕದ ಕಳಸಗಳನ್ನು ಮಾರಾಟ ಮಾಡಲಾಗುತ್ತದೆ. ಇದರಿಂದ ಬರುವ ಹಣವನ್ನು ಜನ ಕಲ್ಯಾಣಕ್ಕೆ ಬಳಸಲಾಗುತ್ತದೆ. 2006ರ ಮಹಾಮಸ್ತಕಾಭಿಷೇಕದಲ್ಲಿ ಬಂದ ಹಣ ವಿನಿಯೋಗಿಸಿ ಮಕ್ಕಳ ಆಸ್ಪತ್ರೆ ನಿರ್ಮಿಸಲಾಯಿತು. ಆ ಮೂಲಕ ಮಕ್ಕಳ ಆರೋಗ್ಯ ಸೇವೆಗೆ ಸಹಕಾರಿಯಾಗಿದೆ. ಈವರೆಗೆ ಒಂದೂವರೆ ಲಕ್ಷ ಮಕ್ಕಳಿಗೆ ಚಿಕಿತ್ಸೆ ಸಿಕ್ಕಿದೆ. ಇದರಿಂದ ಜನರಿಗೆ, ಕ್ಷೇತ್ರಕ್ಕೆ ಒಳ್ಳೆಯದಾಗಿದೆ.
* ಮಹಾಮಸ್ತಕಾಭಿಷೇಕದಿಂದ ಆಹಾರ ಪದಾರ್ಥಗಳು ವ್ಯರ್ಥವಾಗುತ್ತವೆ ಎಂಬ ಭಾವನೆ ಇದೆ?
ಇದು 12 ವರ್ಷಗಳಿಗೆ ಒಮ್ಮೆ ನಡೆಯುತ್ತದೆ. ಪರಂಪರೆಯಂತೆ ಮುಂದುವರಿಸಲಾಗುತ್ತಿದೆ. ಆಹಾರ ಪದಾರ್ಥ ನಷ್ಟವಾಗುವುದನ್ನು ಯಾರೂ ಅಷ್ಟಾಗಿ ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಅಭಿಷೇಕ ಮಾಡಲು ಎಲ್ಲರ ಸಹಮತ ಇದೆ. ಒಂದು ವೇಳೆ ಈ ವಿಚಾರ ಚರ್ಚೆಯಲ್ಲಿ ಇದ್ದರೂ ಅದು ಗೌಣ ಎನಿಸುತ್ತದೆ. ಎಲ್ಲಾ ವಿಚಾರ ಬಿಟ್ಟು ಆಚರಣೆ, ಪರಂಪರೆ ಗೌರವಿಸುತ್ತಾರೆ. ಇಲ್ಲಿ ಆಹಾರ ನಷ್ಟ ಎನ್ನುವುದಕ್ಕಿಂತ ತ್ಯಾಗಿಯ ನೆನಪು, ಸ್ಮರಣೆ ಮುಖ್ಯವಾಗುತ್ತದೆ.
ದೇವಸ್ಥಾನಗಳಲ್ಲಿ ನಿತ್ಯವೂ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಇಲ್ಲಿ 12 ವರ್ಷಕ್ಕೆ ಒಮ್ಮೆ ಇರುತ್ತದೆ. ಸಹೃದಯತೆಯಿಂದ ಧರ್ಮ, ಪರಂಪರೆ, ಗೌರವವನ್ನು ಎತ್ತಿಹಿಡಿಯಬೇಕಿದೆ. ಅದರ ಅಗತ್ಯವೂ ಇದೆ.
* ನವ ಪೀಳಿಗೆಯಲ್ಲಿ ಭಕ್ತಿ ಕಡಿಮೆಯಾಗುತ್ತಿದೆ ಎಂಬ ಭಾವನೆ ಇದೆ?
ಹಿಂದಿಗಿಂತ ಈಗ ಯುವ ಸಮೂಹದಲ್ಲಿ ಧರ್ಮ ಜಾಗೃತಿ ಆಗುತ್ತಿರುವುದನ್ನು ಗುರುತಿಸಿದ್ದೇವೆ. ಧಾರ್ಮಿಕ ಕೇಂದ್ರಗಳಾದ ದೇವಸ್ಥಾನ, ಚರ್ಚ್, ಮಸೀದಿ, ಮಠ, ಮಂದಿರಗಳಿಗೆ ಹೋಗುವವರ ಸಂಖ್ಯೆ ಹೆಚ್ಚಳವಾಗಿದೆ. ದೇವಸ್ಥಾನಕ್ಕೆ ಹೋದಾಕ್ಷಣ ದೈವಭಕ್ತರು ಎನ್ನಲಾಗದು. ಭಕ್ತಿ ಒಳಗಿನಿಂದ ಹುಟ್ಟಬೇಕು. ಶಿಕ್ಷಣದ ಜತೆಗೆ ವೈಜ್ಞಾನಿಕ ಚಿಂತನೆ ಬೆಳೆಸಬೇಕು. ಮೌಢ್ಯ ಬಿಟ್ಟು ನಿಜವಾದ ಧರ್ಮ ತಿಳಿಸಿಕೊಡಬೇಕು. ಧರ್ಮದ ಬಗ್ಗೆ ಅರಿಯುವ ಕುತೂಹಲ ಯುವಕರಲ್ಲಿ ಮೂಡಿದೆ. ಯುವ ಜನಾಂಗದ ಜತೆ ಸಂವಾದ ಮಾಡಿ ಧರ್ಮದ ಬಗೆಗಿನ ಸಂದೇಹ ದೂರ ಮಾಡಬೇಕಿದೆ. ಆಗ ಧರ್ಮ ಮತ್ತಷ್ಟು ಎತ್ತರಕ್ಕೆ ಏರುತ್ತದೆ.
* ಜೈನ ಧರ್ಮದ ಪ್ರಸ್ತುತತೆ ಬಗ್ಗೆ ಸ್ವಲ್ಪ ಹೇಳಿ?
ಜೈನ ಧರ್ಮದಲ್ಲಿ ತೀರ್ಥಂಕರರು ಪ್ರಮುಖರು. ಮಹಾವೀರರು ಶ್ರೇಷ್ಠರು. ಅಹಿಂಸೆಯೇ ಪರಮ ಧರ್ಮ ಎಂದು ಹೇಳುತ್ತಾರೆ. ಈ ಧರ್ಮದಲ್ಲಿ ತ್ಯಾಗ, ತಪಸ್ಸಿಗೆ ಹೆಚ್ಚು ಮಹತ್ವ ಇದೆ. ರಾಜನಿರಲಿ, ಮಂತ್ರಿಯಾಗಿರಲಿ ತ್ಯಾಗಕ್ಕೆ ನಮಸ್ಕಾರ ಹೇಳಬೇಕಾಗುತ್ತದೆ. ಅಹಿಂಸೆಯಿಂದ ಜೈನ ಧರ್ಮ ಉಳಿದಿದೆ. ಕಾಲ ಬದಲಾದರೂ ಧರ್ಮ ಪಾಲನೆಯಲ್ಲಿ ಬದಲಾವಣೆಯಾಗಿಲ್ಲ. ಧರ್ಮ– ಆಚರಣೆ ಬಗ್ಗೆ ವಿದೇಶದ ಜನರೂ ಆಶ್ಚರ್ಯದಿಂದ ನೋಡುತ್ತಾರೆ. ಮಹಾಮಸ್ತಕಾಭಿಷೇಕಕ್ಕೆ ಈಗಾಗಲೇ ವಿವಿಧೆಡೆಯಿಂದ 300ಕ್ಕೂ ಹೆಚ್ಚು ತ್ಯಾಗಿಗಳು, ಮುನಿಗಳು ಬಂದಿದ್ದಾರೆ. ವಿದೇಶಿಗರೂ ಬರುತ್ತಿದ್ದಾರೆ. ಕೋಟಿ–ಕೋಟಿ ವರ್ಷಗಳು ಉರುಳಿದರೂ ಜೈನ ಧರ್ಮ ಅಳಿಯದು.
* ಬಾಹುಬಲಿಯ ಬೃಹತ್ ಮೂರ್ತಿಗಳನ್ನು ರಾಜ್ಯದಲ್ಲಿ ಮಾತ್ರ ಕಾಣುತ್ತೇವೆ?
ಶತಮಾನಗಳ ಹಿಂದಿನಿಂದಲೂ ಬಾಹುಬಲಿ ಹೆಸರು ಉಲ್ಲೇಖಿಸಲಾಗುತ್ತಿದೆ. ಪ್ರಾಕೃತ ಭಾಷೆಯ ಕೃತಿಗಳಲ್ಲೂ ಕಾಣಬಹುದು. ಸಂಸ್ಕೃತ, ಹಳಗನ್ನಡದಲ್ಲೂ ಬಾಹುಬಲಿ ಮಾಹಿತಿ ಸಿಗುತ್ತದೆ. ಹೊರ ರಾಜ್ಯಗಳಲ್ಲಿ ಬೃಹತ್ ಬಾಹುಬಲಿ ಮೂರ್ತಿಗಳು ಸಿಗದಿದ್ದರೂ ಚಿಕ್ಕ ಮೂರ್ತಿಗಳು ಸಿಕ್ಕಿವೆ. ರಾಜ್ಯದಲ್ಲಿ ದೊಡ್ಡ ಮೂರ್ತಿಗಳು ಸಿಗಲು ತ್ಯಾಗ, ತಪಸ್ಸಿನ ಫಲವೂ ಇರಬಹುದು.
* ಪ್ರತಿ ಬಾರಿಯೂ ಒಂದು ಸಂದೇಶ ಇರುತ್ತದೆ. ಈ ಬಾರಿಯ ಸಂದೇಶ ಏನು?
ಜಗತ್ತಿನಲ್ಲಿ ಅಭಿವೃದ್ಧಿಗಿಂತ ಸಮರಕ್ಕೆ ಹೆಚ್ಚು ವೆಚ್ಚ ಮಾಡಲಾಗುತ್ತಿದೆ. ಈಗ ನಿಶ್ಶಸ್ತ್ರೀಕರಣದ ಬಗ್ಗೆ ವಿಶ್ವಸಂಸ್ಥೆಯಲ್ಲಿ ಚರ್ಚೆ, ಸಂವಾದಗಳು ನಡೆಯುತ್ತಿವೆ. ಯುದ್ಧ ಬಿಟ್ಟು ಶಾಂತಿಯ ಮಾತುಗಳು ಕೇಳಿಬರುತ್ತಿವೆ. ಶತಮಾನಗಳ ಹಿಂದೆಯೇ ಈ ವಿಚಾರಗಳನ್ನು ಬಾಹುಬಲಿ ಅನುಷ್ಠಾನಕ್ಕೆ ತಂದಿದ್ದಾನೆ. ಜಲಯುದ್ಧ, ಮಲ್ಲಯುದ್ಧ, ದೃಷ್ಟಿಯುದ್ಧದ ಮೂಲಕ ಜಗತ್ತಿಗೆ ಶಾಂತಿಯ ಮಂತ್ರ ಸಾರಿದ್ದಾನೆ. ಅನ್ನ, ಆಹಾರ ಬಿಟ್ಟು ಮಾಡಿರುವ ತಪಸ್ಸು ಇಡೀ ಜಗತ್ತಿಗೆ ಆದರ್ಶವಾಗಿದೆ. ಶಾಂತಿ ಸಂದೇಶವೇ ಪ್ರತಿ ಬಾರಿಯ ಸಂದೇಶವೂ ಆಗಿರುತ್ತದೆ.
ಈ ಬಾರಿ ‘ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ, ಮೈತ್ರಿಯಿಂದ ಪ್ರಗತಿ, ಧ್ಯಾನದಿಂದ ಸಿದ್ಧಿ’ ಎಂಬ ಧ್ಯೇಯ ಇಟ್ಟುಕೊಳ್ಳಲಾಗಿದೆ. ಇದುವೇ ಬಾಹುಬಲಿ ಸಂದೇಶ.
* ಕೊನೆಗೆ ನೆನಪಿನಲ್ಲಿ ಏನು ಉಳಿಯುತ್ತದೆ?
ಪ್ರೀತಿ, ತ್ಯಾಗ, ಶಾಂತಿ. ಈ ಮೂರರಿಂದ ಇಡೀ ಜಗತ್ತು ಗೆಲ್ಲಬಹುದು. ಇದಕ್ಕಿಂತ ಬೇರೇನೂ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.