ಪುಟ್ಟನೊಂದು ಹೂವ ಕಿತ್ತ
ಮುಟ್ಟಿ ನೋಡಿ ಖುಷಿಯ ಪಟ್ಟ
ದಳಗಳೆಣಿಸಿ ಕೂಡಿ ಕಳೆದು
ಗಣಿತ ಬರುವುದೆಂದು ಬೀಗಿ
ಮನೆಯ ಬದಿಯ ಹಾದಿಯಲ್ಲಿ
ಮುಷ್ಟಿಯಲ್ಲಿ ಮಡಚಿ ಹಿಡಿದು
ಚಿಟ್ಟೆ ಹಾರಿಬಿಟ್ಟೆ ಎನುತ
ಹಾಡೋಡಿ ಮನೆಯ ಸೇರಿದ
ಪುಟ್ಟಿಗದನು ತೋರಿದ
ಹೂವಿನಾಸೆ ಇರದ ಪುಟ್ಟಿ
ಬೇಡವೆನಲು ಬಾಬುಕಟ್ಟಿ
‘ಅಮ್ಮನಿಗೊ ಬೊಮ್ಮನಿಗೊ
ಹೇಳ್ವ ಪ್ರೀತಿಯಿಂದ ತಗೋ’
ಎನುವ ಬಿಟ್ಟಿ ಸಲಹೆ ದೂಡಿದ;
ಸದಾ ಓದು ಎನುವಅಮ್ಮ
ಗುಮ್ಮಭಯ ಕಳೆಯದಾ ಬೊಮ್ಮ
ಚಿಟ್ಟೆ ಹೂವ ಪಡೆಯರು
ಎನುತ ದುಗುಡ ತೋಡಿದ
ಪುಟ್ಟಿದೊಂದು ಕ್ಲಿಪ್ಪು ಕದ್ದು
ಮಿರರ್‍ರಿನ ಮುಂದೆ ನಿಂತು
ನೀಲಿಪೋರ ಹೂವ ಮುಡಿದು
ಮುಗುಳ್ನಕ್ಕು ಮಿನುಗಿದ
ಮಾಯದಲ್ಲಿ ಆಯಿ ನೋಡಿ
ಬೈದ ತಾಯ್ಗೆ ತಿರುಗಿ ಬೈದು
ಬ್ಯಾಗಿನೊಳಗೆ ಫೆವಿಕಾಲು ಹಿಡಿದು
ಪುಟ್ಟ ತೊಡರುಗಾಲು ಹಾಕಿ
ಕಿತ್ತ ಹೂವಗಿಡವ ಸೇರಿದ
ಅಂಟದೆ ಉರುಳಿ ನೆಲಕೆ ಬಿದ್ದ
ಹೂವ ಜೋಡಿ ಉಮ್ಮಳಿಸಿ ದುಃಖ
ಕಣ್ಣು ನೀರು ತುಂಬಿ ಬಿತ್ತು
ಭುವಿಗೆ ಪುಟ್ಟ ಕಂಬನಿ
ಅಂಗಳದಿ ಮಳೆಯ ಇಬ್ಬನಿ
ಕೊನೆಗೆ ಮರುಗಿ ಹೂವು ಹಾರಿ
ರೆಕ್ಕೆಯೇರಿ ಚಿಟ್ಟೆಯಾಗಿ
ದೂರ ದೂರ ತೇಲಿತು
ತರಲೆ ಪುಟ್ಟಕಣ್ಣನರಳಿ
ಬೆರಗಿನಿಂದ ಹೇಳಿದ
‘ಹೂವು ಹೂವು’ ಕೂಗಿದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.