ಬೆಂಗಳೂರು ನಮ್ಮೆಲ್ಲರಿಗೂ ಜೀವನ ನಡೆಸಲು ಅನುವು ಮಾಡಿಕೊಡುವ ನಗರ. ಮನಸ್ಸಿನಲ್ಲಿ ಬೆಂಗಳೂರಿಗೆ ಅದೆಷ್ಟೇ ಬೈದುಕೊಂಡಿರಲಿ ಅದರ ಮಧ್ಯೆಯೂ ಬೆಂಗಳೂರು ನಮಗೆ ಆಸರೆಯಾಗಿ ಜೊತೆ ನಿಲ್ಲುತ್ತದೆ. ಟ್ರಾಫಿಕ್, ಜನರು, ಗಡಿಬಿಡಿ ಎಂದೆಲ್ಲಾ ಅಲವತ್ತುಕೊಂಡರೂ ನಮಗೆ ಈ ನಗರ ಬೇಕೇ ಬೇಕು. ನಮ್ಮನ್ನು ಮತ್ತೆ ಕೈ ಬೇಸಿ ಕರೆಯುತ್ತದೆ. ಯಾವುದೇ ಊರಿನಿಂದ ಬಂದಿರಲಿ ಈ ಊರು ಮಮತೆಯಿಂದ ಪೊರೆದು ಉದ್ಯೋಗವನ್ನೂ ನೀಡಿ ಸಾಕುತ್ತದೆ. ಅವರಿವರ ಹಂಗಿಲ್ಲದೇ ನಮ್ಮದೇ ಲೋಕದಲ್ಲಿ ನಾವು ಜೀವನ ನಡೆಸಲು ಬೆಂಗಳೂರಿಗೆ ಪ್ರಮುಖ ಸ್ಥಾನವನ್ನು ನೀಡಬಹುದು.
ಧಾವಂತದ ಈ ನಗರ ಎಲ್ಲವನ್ನೂ ಸಾವಧಾನದಿಂದಲೇ ನಮಗೆ ಕಲಿಸಿಕೊಡುತ್ತದೆ. ಮೆಟ್ರೋದಂತಹ ವೇಗವನ್ನೂ, ಟ್ರಾಫಿಕ್‌ನಲ್ಲಿ ಸಿಲುಕಿದಾಗ ಸಹನೆಯನ್ನೂ ಧಾರೆ ಎರೆಯುತ್ತದೆ. ಒಂದಷ್ಟು ದಿನ ಬೆಂಗಳೂರಿನಲ್ಲಿದ್ದು ಒಂದು ಧೈರ್ಯವಂತೂ ಬಂದಿದೆ ಎಲ್ಲೆ ಹೋದರೂ ಹೇಗೆ ಇದ್ದರೂ ಜೀವನವನ್ನು ನಡೆಸಬಹುದು. ಅಳುಕಿನಿಂದ ನಗರಕ್ಕೆ ಕಾಲಿಟ್ಟ ಅದೇಷ್ಟೋ ಮಂದಿಗೆ ಈ ಬೆಂಗಳೂರು ಹೊಸ ಭರವಸೆ, ವಿಶ್ವಾಸವನ್ನು ತುಂಬಿ ಕಳುಹಿಸುವುದಂತೂ ಸುಳ್ಳಲ್ಲ.
ಬೆಳಗು, ರಾತ್ರಿಯ ವ್ಯತ್ಯಾಸವಿರದೇ ಕಳೆಯುವ ದಿನಗಳು, ನಮಗೆ ನಾವು ಕೊಡಲಾಗುವ, ಕೊಡಲಾಗದ ಸಮಯ, ನಮ್ಮತನದ ಅವಲೋಕನದ ವೇಳೆಯಲ್ಲಿಯೂ ಅಲ್ಲೆಲ್ಲೋ ಸದ್ದಾಗುವ ವಾಹನ, ಹತ್ತು ಹಲವು ಸಂಗತಿಗಳು ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿದೆ. ಬೆಂಗಳೂರಿನಲ್ಲಿದ್ದವರಿಗೆ ಇದು ಸರ್ವೇಸಾಮನ್ಯವಾಗಿ ಹೋಗುತ್ತದೆ.
ಜೀವನ ರೂಪಿಸಲು ಅಂಬೆಗಾಲನ್ನು ಇಟ್ಟಿದ್ದು ಬೆಂಗಳೂರಿಗೆ, ನಮ್ಮದೇ ಆದ ಚೌಕಟ್ಟಿನಿಂದ ಹೊರಬಂದು ಈ ಬೆಂಗಳೂರಿನ ಜೀವನಕ್ಕೆ ಒಗ್ಗಿಕೊಳ್ಳುವ ತನಕ ಎಲ್ಲವೂ ಅಯೋಮಯ. ಒಮ್ಮೆ ಬೆಂಗಳೂರಿಗೆ ಹೊಂದಿಕೊಂಡರೆ ಸಾಕು ಎಲ್ಲಿಯಾದರೂ ಬದುಕನ್ನು ಕಟ್ಟಿಕೊಳ್ಳುವ ಭರವಸೆ ತನ್ನಿಂದ ತಾನೆ ಒಡಮೂಡುವಂತೆ ಮಾಡುವುದು ಇಲ್ಲಿನ ವೈಶಿಷ್ಟ್ಯ. ತಾತ್ಕಾಲಿಕವಾಗಿ ಈ ನಗರಕ್ಕೆ ವಿದಾಯ ಹೇಳುವ ಸಮಯ. ಮತ್ತೆ ಬೆಂಗಳೂರು ಕೈ ಬೀಸಿ ಕರೆದರೆ ಓಡಿಬರುವೆ. ಕರೆಯದೆಯೂ ನಾವು ಬಂದರೆ ಅದೇ ಪ್ರೀತಿಯಿಂದ ಅಪ್ಪಿಕೊಳ್ಳುತ್ತದೆ ಈ ಬೆಂದಕಾಳೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.