ನಾನು ನಿತ್ಯ ಕೆಲಸಕ್ಕೆ ಹೋಗಿ ಬರುತ್ತಿದ್ದು ಬೈಕಿನಲ್ಲೆ. ಜೊತೆಯಲ್ಲಿ ಮಿತ್ರನೊಬ್ಬ ಇರುತ್ತಿದ್ದ. ವೇಗದ ರೈಡಿಂಗ್ ಅಪಾಯ ತರುತ್ತದೆಯಾದರೂ ನಿಧಾನಕ್ಕೆ ತಮ್ಮ ಪಾಡಿಗೆ ತಾವು ಹೋಗುವವರಿಗೂ ಕಂಟಕಗಳು ತಪ್ಪಿದಲ್ಲ. ನಿಧಾನಕ್ಕೆ ನಮ್ಮಷ್ಟಕ್ಕೆ ನಾವು ಹೋಗುವಾಗ ವೇಗವಾಗಿ ಬಂದವನು ಗುದ್ದಿದರೆ ಏನು ಮಾಡಲಾದೀತು? ಅವತ್ತು ಆಗಿದ್ದು ಅದೇ.
ನಾವಿಬ್ಬರೂ ಹೀಗೆ ಮಾತಾಡುತ್ತಾ ಸಾಗುತ್ತಿದ್ದೆವು. ಮಾತಿನಲ್ಲಿ ಮುಳುಗಿ ಹೋಗಿದ್ದೆವು. ಆದರೆ ಮೈಮರೆತಿರಲಿಲ್ಲ. ಅದೇನಾಯ್ತೊ? ಹೇಗಾಯ್ತೊ? ಗೊತ್ತಿಲ್ಲ. ನಮ್ಮ ಬೈಕಿಗೆ ಹಿಂದಿನಿಂದ ಯಾರೋ ಬಲವಾಗಿ ಗುದ್ದಿದ ಸದ್ದು. ನಮ್ಮ ಬೈಕ್ ಅಷ್ಟು ದೂರ ಚಿಮ್ಮಿ ಬಿತ್ತು. ಇಬ್ಬರೂ ದಿಕ್ಕಪಾಲಾಗಿ ಬಿದ್ದೆವು. ನನಗೆ ಹೆಲ್ಮೆಟ್ ಇದ್ದ ಕಾರಣ ತಲೆಗೆ ಏಟು ಬೀಳಲಿಲ್ಲ. ಬಲಗಾಲಿನ ಮೂಳೆ ತುಂಡಾಗಿದೆ ಅನಿಸುತ್ತಿತ್ತು. ಸಾಯುವಷ್ಟು ನೋವು. ಕೈ ಚರ್ಮ ಸಂಪೂರ್ಣ ಕಿತ್ತು ಹೋಗಿತ್ತು. ನಾನು ರಕ್ತದ ಮಡುವಿನಲ್ಲಿ ಅಬ್ಬರಿಸುತ್ತಿದ್ದೆ. ನನಗಿಂತ ಒಂದಿಷ್ಟು ದೂರದಲ್ಲಿ ಬಿದ್ದಿದ್ದ ಗೆಳೆಯ ನಿಷ್ಕ್ರಿಯನಾಗಿದ್ದ. ಪೂರ್ಣ ರಕ್ತಮಯ. ತಲೆಯಿಂದ ರಕ್ತ ವಸರುತ್ತಿತ್ತು. ನಾನು ಒದ್ದಾಡುತ್ತಿದ್ದರೆ ಅವನು ಸುಮ್ಮನೆ ಮಲಗಿದಂತಿತ್ತು.
ನೋವು, ಚೀರುವಿಕೆಯ ಮಧ್ಯೆಯೂ ನನಗೆ ಜನರು ಸುತ್ತ ನೆರೆಯುವುದು ಗೊತ್ತಾಗುತ್ತಿತ್ತು. ‘ಅಯ್ಯೊ ಅಮ್ಮಾ.. ಅಮ್ಮಾ...’ ಎನ್ನುವ ನನ್ನ ಧನಿ ಗಾಳಿಯಲ್ಲಿ ಕರಗಿ ಹೋಗುತ್ತಿತ್ತು. ನೂರಾರು ಜನ ಸೇರಿದ್ದರು ಯಾರೂ ನಮ್ಮ ಸಹಾಯಕ್ಕೆ ಬರಲಿಲ್ಲ. ನಮ್ಮ ಸ್ಥಿತಿಯನ್ನು ಬಹುತೇಕರು ಪೋಟೊ ತಗೆದುಕೊಳ್ಳುತ್ತಿದ್ದರು, ವೀಡಿಯೋ ಮಾಡಿಕೊಳ್ಳುತ್ತಿದ್ದರು. ನನ್ನ ಕೂಗು ಅವರಿಗೆ ಕೇಳಿಸುತ್ತಲೇ ಇಲ್ವ? ಅನಿಸುತ್ತಿತ್ತು. ಅಲ್ಲೆಲ್ಲಾ ಕಾರಿನವರು, ಸೂಟಿನವರು, ಮೇಕಪ್‍ನವರು ಎಲ್ಲರೂ ಇದ್ದರು.
ನನ್ನ ಅರಚುವಿಕೆ ಸಾಗಿಯೇ ಇತ್ತು. ಯಾರೂ ಸಹಾಯಕ್ಕೆ ಬರುವ ಆಸೆಯೂ ನನಗಿರಲಿಲ್ಲ. ಹೀಗೆ ಸತ್ತು ಹೋಗುತ್ತೀನಾ ಅಂದುಕೊಂಡೆ. ಅಷ್ಟರಲ್ಲಿ ಮಧ್ಯ ವಯಸ್ಸು ದಾಟಿದ, ಮಾಸಲು ಬಟ್ಟೆ ತೊಟ್ಟ ವ್ಯಕ್ತಿಯೊಬ್ಬರು ಆ ಗುಂಪಿನಿಂದ ಬಂದರು. ಅವರು ರೈತನೇ ಇರಬೇಕು. ನನಗೆ ನೀರು ಕುಡಿಸಲು ಪ್ರಯತ್ನಿಸಿದರು. ‘ಬರ‍್ರಪ್ಪಾ ಯಾರಾದರೂ ಆಸ್ಪತ್ರೆಗೆ ಸೇರಿಸೋಣ’ ಅಂತ ಗುಂಪಿನ ಕಡೆ ಕರೆದರು. ಅವರೆಲ್ಲ ಕಿವಿ ಕೇಳದವರ ಹಾಗೆ ನಿಂತಿದ್ದರು. ಅವನ ಕರೆ ಮುಂದುವರೆದಿತ್ತು. ಒಬ್ಬನೇ ಏನು ಮಾಡಿಯಾನು!? ನಿಜಕ್ಕೂ ಆಶ್ಚರ್ಯವಾಗಿದ್ದು ತದನಂತರದ್ದು.
ಅವರ ಜೊತೆ ಬಂದು ನಿಂತಿದ್ದ ಒಬ್ಬ ಸ್ಕೂಲ್ ಹುಡುಗ. ಏಳೆಂಟು ವರ್ಷದವನಿರಬೇಕು. ಶಾಲೆಯ ಸಮವಸ್ತ್ರದಲ್ಲಿದ್ದ. ‘ಅಂಕಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ಲೀಸ್’ ಅಂತಿದ್ದ. ‘ಬನ್ನಿ ಬನ್ನಿ ಯಾರಾದರೂ...’ ಅಂತ ಆ ಹಳ್ಳಿಯವ ಕರೆಯುತ್ತಲೇ ಇದ್ದರು. ‘ಅಂಕಲ್ ಇರಿ. ಅಂಬ್ಯುಲೆನ್ಸ್ ಕರೆಸುತ್ತೀನಿ’ ಅಂತ ಅಂದವನೆ ಜೇಬಿನಲ್ಲಿ ಕೈ ಹಾಕಿಕೊಳ್ಳುತ್ತಾ ಎಲ್ಲೊ ಓಡಿ ಹೋದ. ನರಳಾಟ ಸಾಗಿಯೇ ಇತ್ತು. ಸ್ವಲ್ಪ ಹೊತ್ತಿನಲ್ಲಿ ನನಗೆ ಅಂಬ್ಯುಲೆನ್ಸ್ ಸದ್ದು ಕೇಳಿಸತೊಡಗಿತು. ಮನಸ್ಸಿನಲ್ಲಿ ಭರವಸೆ ಮೂಡಿತು. ರೈತ, ಆ ಮಗು, ಅಂಬ್ಯುಲೆನ್ಸ್ ಸಿಬ್ಬಂದಿ ನಮ್ಮಿಬ್ಬರನ್ನು ವಾಹನಕ್ಕೆ ಹಾಕಿದರು.
ನನಗೆ ಮತ್ತೆ ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದೆ. ನನ್ನ ಪಕ್ಕದಲ್ಲಿ ಬೆಡ್‌ನಲ್ಲಿ ತಲೆ ಹೊಡೆದುಕೊಂಡಿದ್ದ ಗೆಳೆಯನಿದ್ದ. ಕಣ್ಣು ತೆರೆದಾಗ ನಮಗೆ ಬದುಕಿದ್ದೇವೆ ಎಂಬುದು ಸ್ಪಷ್ಟವಾಯಿತು. ಕಣ್ಣು ಬಿಟ್ಟ ತಕ್ಷಣ ನೆನಪಾಗಿದ್ದು ಆ ಮಾಸಲು ಬಣ್ಣದ ಬಟ್ಟೆಯ ರೈತ. ಶಾಲೆಯ ಧಿರಿಸಿನ ಆ ಮಗು. ಆಸ್ಪತ್ರೆಯಲ್ಲಿ ಅವರ ಬಗ್ಗೆ ಕೇಳಿದೆ. ನನ್ನ ಮಾತಿನ ಬಗ್ಗೆ ಅವರಿಗೆ ಗಮನವಿರಲಿಲ್ಲ. ಈಗ ಸಂಬಂಧಿಗಳು ಸ್ನೇಹಿತರು ಬಂದಿದ್ದರು. ಏನುಪಯೋಗ? ಅಪ್ಪ ಅಮ್ಮನ ಹೊರತು ಅಲ್ಲಿ ಯಾರೂ ಕೂಡ ಇರದಂತೆ ಹೋಗಲು ಹೇಳಿದೆ. ಆ ರೈತ ಮತ್ತು ಹುಡುಗ ಮನಸ್ಸಿನಲ್ಲಿ ತುಂಬಿ ಹೋದರು. ತಿಂಗಳುಗಳ ಕಾಲ ಆಸ್ಪತ್ರೆವಾಸ ಮುಗಿಸಿ ಮನೆಗೆ ಬಂದೆ. ನನ್ನ ಗೆಳೆಯನೂ ಬದುಕಿದ. ಆ ರೈತ ಮತ್ತು ಮಗು ನಮ್ಮ ಪಾಲಿನ ದೇವರಾಗಿದ್ದರು.
ಅಂದಿನಿಂದ ಇಂದಿನವರೆಗೂ ಆ ದೇವರುಗಳಿಗೆ ಹುಡುಕುತ್ತಿದ್ದೇನೆ. ವಿಚಾರಿಸುತ್ತಿದ್ದೇನೆ. ಒಂದು ಥ್ಯಾಂಕ್ಸ್ ಹೇಳಲು ಕಾದಿದ್ದೇನೆ. ಋಣ ಭಾರ ಕಡಿಮೆ ಮಾಡಿಕೊಳ್ಳಲು ಒಂದು ಅವಕಾಶ ಕೇಳಬೇಕೆಂದುಕೊಂಡಿದ್ದೇನೆ. ಇಲ್ಲ, ಅವರು ಸಿಗುತ್ತಿಲ್ಲ. ಅವರ ವಿಳಾಸವೂ ಇಲ್ಲ, ಸುಳಿವೂ ಇಲ್ಲ. ಅಂಥವರು ಹಾಗೆ, ಏನನ್ನು ಬಯಸದೆ ಕೈಲಾದದ್ದನ್ನು ಮಾಡಿ ಮರೆಯಲ್ಲಿ ನಿಲ್ಲುತ್ತಾರೆ. ದೇವರಂತೆ! ಎಷ್ಟು ಹಂಬಲಿಸಿದರೂ ಅವರ ವಿಳಾಸ ಸಿಕ್ಕಿಲ್ಲ. ಬಹುಶಃ ದೇವರ ವಿಳಾಸ ಸಿಗುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.