ADVERTISEMENT

ಮಳೆಗಾಲದ ಆ ದಿನ...

ಲಹರಿ

ಪವಿತ್ರಾ ಭಟ್
Published 22 ಜೂನ್ 2024, 4:43 IST
Last Updated 22 ಜೂನ್ 2024, 4:43 IST
<div class="paragraphs"><p>ಸಂಗ್ರಹ ಚಿತ್ರ&nbsp;</p></div>

ಸಂಗ್ರಹ ಚಿತ್ರ 

   

ಮಧ್ಯಾಹ್ನ ಹನ್ನೆರಡಾದರೂ ಆದರೂ ಮುಸ್ಸಂಜೆಯಂತಹ ಕತ್ತಲು. ಧೋ ಎಂದು ಸುರಿಯೋ ಮಳೆ.. ಚಿಟ್ ಪಿಟ್‌ ಎಂದು ಸುಡುವ ಕಟ್ಟಿಗೆಯ ಬೆಂಕಿಗೆ ಬಿಸಿಯಾದ ಹಂಡೆಯಲ್ಲಿನ ನೀರ ಜಳಕದ ಪುಳಕ, ಮನೆ ಮಾಡಿಗೆ ಬಿದ್ದು ಮಸಿ ಹಿಡಿದ ವೈಯರ್‌ಗಳು, ಅವುಗಳಿಗೆ ಬೆಸೆದ ಜೇಡ. ದೊಡ್ಡ ಅಂಗಳದಲ್ಲಿ ಹರಡಿಬಿದ್ದ ಹೆಜ್ಜೆ ಗುರುತು, ಅರಳಿ ನಿಂತ ದಾಸವಾಳದ ಹಾಡು, ಅಂಗಳದಂಚಿನ ತುಳಸಿಯೆದುರು ಹರಿಯುವ ಕೆಂಬಣ್ಣದ ನೀರು, ಹೆಜ್ಜೆ ಇಟ್ಟರೆ ಜಾರುವ ಕಾಲು, ಬಿದ್ದರೆ ಅಪ್ಪಿಕೊಳ್ಳುವ ನೀರು, ಕೆಸರು–ನಗುವ ಮೋಡ.

ಚಳಿಯ ನಡುಕಕ್ಕೆ ಬೆಚ್ಚಗಿನ ಆಹ್ಲಾದ ನೀಡುವ ಕಂಬಳಿ ಕೊಪ್ಪೆ, ಮನೆಯ ಮೂಲೆಯಲ್ಲಿ ದಿನದ 24 ಗಂಟೆಯೂ ಉರಿಯುವ ಹೊಡಸಲು. ಅದರೆದುರು ಸುಡುವ ಮೊಣಕಾಲ ಮುಚ್ಚಿ ಉರಿಯ ಸುಖಿಸುವ ಕ್ಷಣ. ಕೂಡಿಟ್ಟ ಹಲಸಿನ ಬೀಜ, ಗೇರು ಬೀಜಗಳ ಸುಟ್ಟು ಕೈಯೆಲ್ಲ ಮಸಿಯಾದರೂ ಕಲ್ಲುಗುಂಡಿನಲ್ಲಿ ಜಜ್ಜಿ ಬೆಚ್ಚಗಿನ ಗೇರುಬೀಜವ ಬಾಯಿಗಿಟ್ಟರೆ ಚಪಲಕ್ಕೆ ಕಾದ ನಾಲಿಗೆಗೆ ಪ್ರೀತಿಯ ಮುತ್ತಿನ ಅನುಭವ. ಬಿಸಿ ಕಷಾಯ, ಚಾದೊಂದಿಗೆ ಸುಟ್ಟ ಹಪ್ಪಳ ತಿನ್ನುವ ಕುರುಂ ಕುರುಂ ಸದ್ದಿನ ತಾಳಕ್ಕೆ ಜುಂಯ್‌ ಗುಡುವ ಮಳೆಯ ಝೇಂಕಾರ.

ADVERTISEMENT

ಮನೆಯಂಗಳದಲ್ಲಿ ಹರಿಯುವ ನೀರಿಗೆ ಅಡ್ಡಲಾಗಿ ಕಟ್ಟುವ ಮಣ್ಣಿನ ಕಟ್ಟು.. ಅದರಲ್ಲಿ ನಿಂತ ನೀರಿಗೊಂದು ಕಾಗದದ ದೋಣಿ. ಬಣ್ಣದ ಛತ್ರಿ ಹಿಡಿದು ಕಾಲುದಾರಿಯಗುಂಟ ಹರಿವ ನೀರಿನಲ್ಲಿ ಕೆಸರಿನ ಹಂಗಿಲ್ಲದೆ ನಡೆದರೆ ಮೈ ಒದ್ದೆಯಾಗುತ್ತದೆಂಬ ಚಿಂತೆಯಿಲ್ಲ. ಈ ಖುಷಿಯ ಸಡಗರದ ದಾರಿಯಲ್ಲಿ ತಲೆಯೆತ್ತಿ ನಿಂತ ಇಂಬಳ ಕಾಲಿಗೆ ಕಚ್ಚಿದ ಪರಿವೆಯೇ ಇಲ್ಲ. ವಾಪಸು ಮನೆಗೆ ಬರುವಷ್ಟರಲ್ಲಿ ಕಾಲಿನಲ್ಲಿ ಇರಿಸುಮುರಿಸಿನ ಅನುಭವ. ಕಣ್ಣಾಡಿಸಿ ನೋಡಿದರೆ ಪಟ್ಟು ಬಿಡದೆ ಕಚ್ಚಿ ಹಿಡಿದ ಇಂಬಳ. ರಕ್ತ ಹೀರಿ ದಪ್ಪಗಾದ ಇಂಬಳವನ್ನು ಎಳೆದು ಉಂಡೆ ಮಾಡಿ ಹೊಡಸಲಿಗೆ ಹಾಕಿ ಡಬ್‌ ಎನ್ನುವ ಸದ್ದು ಕೇಳುವ ಖುಷಿ.

ರಾತ್ರಿಯಾದರೆ ಕರೆಂಟ್‌ ಬೆಳಕಿಲ್ಲದೆ ಚಿಮಣಿ ಬುರುಡೆಯ ಕೆಳಗೆ ಪುಸ್ತಕವಿಟ್ಟರೆ ಓದಿಗೆ ಜತೆಯಾಗುವ ಮಳೆ ಹುಳಗಳು. ಮುಖ, ಕೈ ನೋಡದೆ ಪಟ್ಟನೆ ಕಚ್ಚಿ ಕಾಟಕೊಡುವ ನೊರಜು. ‘ಊಟಕ್ಕೆ ಆಯ್ತು ಬಾ’ ಎನ್ನುವ ಅಮ್ಮನ ಕರೆಯ ಮೊರೆತ. ಬಿಸಿ ಬಿಸಿ ಮಜ್ಜಿಗೆ ಪೊಳಜ ಉಂಡು ಕೈತೊಳೆದರೆ ಅತ್ತ ಕೈಬೀಸಿ ಕರೆವ ದಪ್ಪ ದುಪ್ಪಟ್ಟಿಯ ಹಾಸಿಗೆ, ಮಳೆಯ ಸದ್ದಲ್ಲೇ ನಿದ್ದೆ.

ಆಫೀಸಿನ ಕಿಟಿಕಿಯಲ್ಲಿ ಕಂಡ ಮಳೆಯ ಝೇಂಕಾರಕ್ಕೆ ಭಾವ ಭಿತ್ತಿಯಲ್ಲಿ ತೆರೆದ ಹುಟ್ಟೂರಿನ ಮಳೆಗಾಲದ ನೆನಪಿನ ಪುಟ, ಕೆಲಸದ ಜಂಜಡದಲ್ಲಿ ತೊಯ್ದು ತೊಪ್ಪೆಯಾಗಿದ್ದ ಮನಸ್ಸಿಗೆ ಬೆಚ್ಚನೆಯ ಮುದ ನೀಡಿತ್ತು.

ಮಳೆ ಬಂದಾಗ ಹರಿವ ನೀರು ಎಲ್ಲಿ ಹೋಗಲಿ ಎಂದು ಮನೆ ಬಾಗಿಲಿಗೆ ಬಂದು ಕೇಳುವ ಸ್ಥಿತಿ ಈ ಕಾಂಕ್ರೀಟ್‌ ಕಾಡಿನದ್ದು. ಬಿಡುವಿಲ್ಲದ ಟ್ರಾಫಿಕ್‌ ಸದ್ದು, ರಸ್ತೆ ಮೇಲೆ ಕೊಚ್ಚೆ ನೀರಿನ ಅಬ್ಬರ, ಹೆಜ್ಜೆ ಎಲ್ಲಿಡಬೇಕೆಂಬ ಗೊಂದಲ. ಊರಿನ ಮಳೆಗಾಲದ ಹಿತಾನುಭವ ಇಲ್ಲೆಲ್ಲಿ ಸಿಕ್ಕೀತು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.