ಇದು ಕಾಡು ಜನರ ನಾಡು. ಕಾಡೇ ಅವರಮ್ಮ, ಮಾದಪ್ಪ ಮನೆ ದ್ಯಾವ್ರು. ಹಾಗಂತ ಇವರೇನು ನಾಗರಿಕತೆ ಯಿಂದ ಹೊರಗುಳಿದಿಲ್ಲ. ವಿದ್ಯುತ್ ಇಲ್ಲದೆಯೂ ಬೆಳಕು ಕಂಡಿದ್ದಾರೆ. ಆ ಬೆಳಕಿಂದ ಸಂಕಷ್ಟದ ಬದುಕು ಒಂದಷ್ಟು ಸಹ್ಯವಾಗಿದೆ. ಕೆಲವರ ಬಾಳಿಗೆ ಹೊಸ ದಾರಿಗಳೂ ತೆರೆದುಕೊಂಡಿವೆ. ಕೆಲವರು ತಲೆತಲಾಂತರಗಳಿಂದ ಬಂದ ಕುಲ ಕಸುಬಿಗೆ ಹೊಸ ದಿಸೆ ಕಂಡುಕೊಂಡಿದ್ದಾರೆ. ಸಿಗದೇ ಇದ್ದುದರ ಬಗ್ಗೆ ಚಿಂತಿಸುವುದ ಬಿಟ್ಟು, ಬಂದಿದ್ದರ ಬಗ್ಗೆ ಸಂತೃಪ್ತಿಯ ನಗೆ ಬೀರುತ್ತಾರೆ ಈ ಕಾಡಂಚಿನ ಜನರು.
ಚಾಮರಾಜನಗರದ ಮಹದೇಶ್ವರ ಬೆಟ್ಟದ ಕಾಡಂಚಿನಲ್ಲಿ ಬರುವ ಸುಮಾರು 18 ಹಳ್ಳಿಗಳ, ಸಾವಿರಾರು ಕುಟುಂಬಗಳ ಕತೆಯಿದು. ಏನಿಲ್ಲ ಎನ್ನುವ ಗೊಣಗಾಟ ಬದಿಗಿಟ್ಟು ಏನೇನಿದೆ ಎನ್ನುವುದನ್ನೇ ಸಂಭ್ರಮಿಸುತ್ತಾರೆ ಈ ಜನ. ಮೆಂದರೆ, ಪಡುಸಲನತ್ತ, ತೇಕಣೆ, ಕೊಕ್ಕಬರೆ, ಇಂಡಿಗನತ್ತ, ಕೊಂಗನೂರು, ಹಳೆಯೂರು, ಮೆದಗಣೆ, ತೊಳಸಿಕೆರೆ, ದೊಡ್ಡಣೆ, ತೋಕರೆ ಗ್ರಾಮಗಳ ಜನರು ತಮ್ಮ ಪಾಲಿಗೆ ಬಂದ ಪರ್ಯಾಯ ಶಕ್ತಿಯನ್ನು ಬಳಸಿಕೊಂಡು ಬದಲಾದ ಬಗೆ ವಿಸ್ಮಯ ಮೂಡಿಸುವಂತಿದೆ.
ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳ ಜನ ಪರ್ಯಾಯ ಬೆಳಕಿನ ಸೆಲೆ ಕಂಡುಕೊಂಡು ದಶಕವೇ ಸರಿದಿದೆ. 2009ರಲ್ಲಿ ಈ ಕತ್ತಲೂರಿಗೆ ಕಾಲಿಟ್ಟ ಮೈರಾಡ ಸ್ವಯಂ ಸೇವಾ ಸಂಸ್ಥೆ ‘ಸೂರ್ಯನ ಬೆಳಕೊಂದೇ ಇವರ ಬಾಳನ್ನು ಬದಲಿಸಬಹುದು’ ಎಂದು ಗುರುತಿಸಿದ್ದು. ಮನೆಮನೆಗೆ ಸೋಲಾರ್ ಲೈಟುಗಳನ್ನು ಹಾಕಿಸಿ ಕೊಡಲು ಆ ಸಂಸ್ಥೆ ‘ಸೆಲ್ಕೊ ಪ್ರತಿಷ್ಠಾನ’ದ ಬೆಂಬಲ ಕೋರಿತ್ತು. ಮುಂದೆ ಈ ಎರಡೂ ಸಂಸ್ಥೆಗಳು ಪಾಳ್ಯದ ಜನರಿಗೆ ಸೋಲಾರ್ ಶಕ್ತಿ ಆಧಾರಿತವಾಗಿ ನಡೆಯುವ ಝೆರಾಕ್ಸ್ ಮಷೀನ್, ಕುಲುಮೆ ಯಂತ್ರವನ್ನು ಸಹ ಪರಿಚಯಿಸಿದರು. ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘ ಈ ಯೋಜನೆಯ ಆರ್ಥಿಕ ನೆರವಿನ ದೀವಿಗೆ ಹಿಡಿಯಿತು.
ಮೊದಲು ಮನೆಗಳಲ್ಲಿ ಬೆಳಕು ಮೂಡಿತು. ಆ ಬೆಳಕು ಬಾಳಿಗೂ ಹರಡಲು ತುಸು ಸಮಯ ಹಿಡಿಯಿತಷ್ಟೆ. ಅದರಿಂದ ಯಾವ ಯಾವ ಪ್ರಯೋಜನ ಪಡೆಯಬಹುದೊ ಅದೆಲ್ಲದರತ್ತ ಈ ಜನ ಒಲವು ತೋರುತ್ತ ಸಾಗಿದರು. ಪರಿಣಾಮ ಇಂದು ಊರಿನ ಅಡಿಗಡಿಯಲ್ಲೂ ಆ ಬೆಳಕೇ ಪ್ರಜ್ವಲಿಸುತ್ತಿದೆ. ಸೌರಶಕ್ತಿಯಿಂದ ಫ್ರಿಡ್ಜ್, ಗ್ರೈಂಡರ್, ಫ್ಲೋರ್ ಮಿಲ್, ಹೊಲಿಗೆ ಯಂತ್ರಗಳು ನಡೆಯುತ್ತಿವೆ. ಇದರಿಂದ ಅಲ್ಲಿನ ಜನರ ಜೀವನಮಟ್ಟ ತಕ್ಕ ಮಟ್ಟಿಗೆ ಸುಧಾರಿಸಿದೆ.
ಹಗ್ಗ ಹೊಸೆಯುತ್ತ...
ತೆಂಕಲಮೊಳೆ ಎನ್ನುವುದು ಚಾಮರಾಜನಗರ ಜಿಲ್ಲೆಯ ಪುಟ್ಟದೊಂದು ಗ್ರಾಮ. ಇಲ್ಲಿ ಸುಮಾರು 200 ಕುಟುಂಬಗಳಿವೆ. ಗ್ರಾಮದ ಅಷ್ಟೂ ಮನೆಗಳ ಕುಲಕಸುಬು ಹಗ್ಗ ಹೊಸೆಯುವುದು. ವರ್ಷಗಳಿಂದ ಇದೇ ಕಸುಬಿನಲ್ಲಿ ಬದುಕು ಕಟ್ಟಿಕೊಂಡವರು. ಗೃಹಿಣಿಯರು, ಮಕ್ಕಳು ಸೇರಿದಂತೆ ಮನೆ ಮಂದಿಯೆಲ್ಲಾ ದುಡಿದಾಗಲಷ್ಟೇ ಕುಟುಂಬ ನಡೆಯುವಷ್ಟು ಹಣ ಬರುತ್ತದೆ. ವಾರದ ಮೊದಲ ಎರಡು ದಿನ ಪಟ್ಟಣಕ್ಕೆ ಹೋಗಿ ಕಚ್ಛಾ ಸಾಮಗ್ರಿಗಳನ್ನು ತರುವುದಕ್ಕೇ ಮೀಸಲು; ನಡುವಿನ ಎರಡು ದಿನ ಹಗ್ಗ ತಯಾರಿಕೆಗೆ; ವಾರದ ಕೊನೆಯ ಎರಡು ದಿನ ಉತ್ಪಾದಿಸಿದ ಹಗ್ಗಗಳನ್ನು ಪಟ್ಟಣಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು. ಹೀಗೆ ಮನೆಮಂದಿ ವಾರವಿಡೀ ದುಡಿದಾಗ ಹೆಚ್ಚೂ–ಕಡಿಮೆ ₹ 10 ಸಾವಿರ ದುಡಿಮೆಯಾಗುತ್ತದೆ.
‘ಸೋಲಾರ್ ಯಂತ್ರ ಬಳಕೆಯಿಂದ ಶ್ರಮ ಕಡಿಮೆ, ಲಾಭ ಹೆಚ್ಚು. ಕರ್ನಾಟಕದಲ್ಲಿಯೇ ಇದು ಮೊದಲ ಸೋಲಾರ್ ಯಂತ್ರ. ಗ್ರಾಮದಲ್ಲಿ ಇನ್ನೂ ನೂರಾರು ಜನ ಸೋಲಾರ್ ಯಂತ್ರದ ಸೌಲಭ್ಯ ಪಡೆಯಲು ಉತ್ಸುಕರಾಗಿದ್ದಾರೆ. ಆದರೆ ಆರ್ಥಿಕ ನೆರವು ನೀಡುವ ಸಂಸ್ಥೆಗಳು ಮುಂದೆ ಬರಬೇಕು’ ಎನ್ನುತ್ತಾರೆ ಮೈರಾಡ ಸಂಸ್ಥೆಯ ವ್ಯವಸ್ಥಾಪಕ ಎ. ಮಂಜುನಾಥ್.
‘ರೂಪಾಯಿಗೊಂದು ಚೀಲದಂತೆ ಸಿಮೆಂಟ್ ಚೀಲಗಳನ್ನು ತರುತ್ತೇವೆ. ಒಂದು ಹಗ್ಗಕ್ಕೆ ನಾಲ್ಕು ಚೀಲಗಳು ಬೇಕಾಗುತ್ತವೆ. ಹತ್ತು ಹಗ್ಗಗಳ ಒಂದು ಕಟ್ಟು ₹30ರಿಂದ ₹ 40 ಮಾರಾಟವಾಗುತ್ತದೆ. ಒಂದು ಕಟ್ಟು ಮಾರಾಟ ಮಾಡಿದರೆ ₹15 ಉಳಿತಾಯವಾಗುತ್ತದೆ’ ಎಂದು ಲೆಕ್ಕ ಒಪ್ಪಿಸುತ್ತಾರೆ ತೆಂಕಲಮೊಳೆ ಗ್ರಾಮದ ವೆಂಕಟೇಶ್. ಸಾಂಪ್ರದಾಯಿಕ ಹಗ್ಗ ನೇಯುವ ಈ ಗ್ರಾಮ ಈಗ ‘ಸೋಲಾರ್ ಹಗ್ಗ ನೇಯುವ ಮೊದಲ ಗ್ರಾಮ’ ಎನ್ನುವ ವಿಶೇಷತೆಯನ್ನು ಹೊಂದಿದೆ.
‘ಎಂಟು ತಿಂಗಳಲ್ಲಿ ಈ ಮಷೀನ್‌ಗಾಗಿ ಮಾಡಿದ ಸಾಲ ತೀರಿ ಹೋಗಿದೆ. ಈಗ ನಾಲ್ವರು ಮಾಡುವ ಕೆಲಸವನ್ನು ಇಬ್ಬರೇ ಮಾಡಬಹುದಲ್ಲದೇ, ಶ್ರಮವೂ ಕಡಿಮೆ. ಇದರಿಂದ ಹೆಣ್ಮಕ್ಕಳು ಮನೆಗೆಲಸಕ್ಕಷ್ಟೇ ಉಳಿದರೆ, ಮಕ್ಕಳು ತಪ್ಪದೆ ಶಾಲೆಗೆ ಹಾಜರಿ ಹಾಕುತ್ತಿದ್ದಾರೆ. ಕೆಲಸದ ವೇಗವೂ ಹೆಚ್ಚಿದ್ದರಿಂದ ಲಾಭವೂ ಅಧಿಕವಾಗುತ್ತಿದೆ.ಮೊದಲಿಗಿಂತ ಈಗ 4–5 ಸಾವಿರ ರೂಪಾಯಿಯಷ್ಟು ಹೆಚ್ಚು ದುಡಿಮೆಯಾಗುತ್ತಿದೆ’ ಎನ್ನುತ್ತಾರೆ ಅವರು.
ಕುಲುಮೆಗೂ ಸೋಲಾರ್ ಬಲ
ಕೊಳ್ಳೆಗಾಲ ತಾಲ್ಲೂಕಿನ ಪಾಳ್ಯ ಗ್ರಾಮದಲ್ಲಿ ಕುಲುಮೆ ಕೆಲಸದಿಂದಲೇ ಜೀವನ ನಿರ್ವಹಣೆ ಮಾಡುವ ಎರಡು ಕುಟುಂಬಗಳಿವೆ. ಸುತ್ತಮುತ್ತಲಿನ ಎಲ್ಲಾ ಹಳ್ಳಿಗಳಿಗೆ ಕೃಷಿ ಉಪಕರಣಗಳನ್ನು ಪೂರೈಕೆ ಮಾಡುತ್ತವೆ. ‘ಸಾಂಪ್ರದಾಯಿಕ ಮಾದರಿಯ ಕುಲುಮೆಯಲ್ಲಿ ಹೆಚ್ಚು ಶ್ರಮ, ಹೆಚ್ಚು ಮಾನವ ಸಂಪನ್ಮೂಲ ಬೇಕಾಗುತ್ತಿತ್ತು. ಹಗಲು ಮಾತ್ರ ಕೆಲಸ ಮಾಡಲು ಸಾಧ್ಯವಾಗುತ್ತಿತ್ತು. ಆದರೆ ಸೋಲಾರ್ ವ್ಯವಸ್ಥೆ ಬಂದ ಮೇಲೆ ಒಬ್ಬರೇ ಕುಳಿತು ಕೆಲಸ ಮಾಡಬಹುದು. ದೂಳು–ಮಣ್ಣು–ಮಸಿಯ ಗೊಡವೆಯೂ ಇಲ್ಲ’ ಎಂದು ಸಂತಸದ ನಗೆ ಬೀರುತ್ತಾರೆ ಪಾಳ್ಯದ ಶ್ರೀನಿವಾಸಮೂರ್ತಿ. ‘ನಮ್ಮಪ್ಪ ಪಡುವ ಪಾಡು ನೋಡಿ ನಾನು ಈ ಕೆಲಸವನ್ನು ಮುಂದುವರಿಸಬಾರದು ಅಂದುಕೊಂಡಿದ್ದೆ. ಈಗ ಸೋಲಾರ್ ಬ್ಲೋಯಿಂಗ್ ಮಷೀನ್‌ನಿಂದ ಕೆಲಸ ಸುಲಭವಾಗಿದೆ. ನಾನೂ ಇದೇ ಕಸುಬು ಮಾಡುತ್ತಿದ್ದೇನೆ’ ಎನ್ನುತ್ತಾನೆ ಅದೇ ಗ್ರಾಮದ ಯುವಕ ಅಕ್ಷಯ್.
ರೆಫ್ರಿಜರೇಟರ್‌ಗೆ ಸೌರಶಕ್ತಿ
ಸೌರಶಕ್ತಿಯಿಂದ ನಡೆಯುವ ರೆಫ್ರಿಜರೇಟರ್(ಫ್ರಿಡ್ಜ್)ನಿಂದ ಬದುಕಿಗೆ ಹೊಸ ದಾರಿ ಕಂಡುಕೊಂಡವರು ಇಂಡಿಗನಾಥದ ವೀರಣ್ಣ–ಮಹದೇವಮ್ಮ ದಂಪತಿ. ಎರಡು ವರ್ಷಗಳ ಹಿಂದೆ ಅವರಿಗೆ ಸೌರಚಾಲಿತ ಫ್ರಿಡ್ಜ್ ಬಗ್ಗೆ ತಿಳಿಯಿತು. ತಮ್ಮ ಸ್ವಸಹಾಯ ಸಂಘದಿಂದ ಸಾಲವೂ ಸಿಕ್ಕಿತು. ದುಡಿದಿದ್ದೆಲ್ಲ ತಮಗೇ ಎನ್ನುವ ನೆಮ್ಮದಿ ಈಗಿದೆ. ಬೆಟ್ಟಕ್ಕೆ ಬರುವ ಭಕ್ತಾದಿಗಳು ನಾಗಮಲೆ ದೇವಸ್ಥಾನಕ್ಕೆ ಕಾಲು ನಡಿಗೆಯಲ್ಲಿಯೇ ಹೋಗುತ್ತಾರೆ. ಅವರೆಲ್ಲ ಇವರ ಬಳಿ ಕೂಲ್ ಡ್ರಿಂಕ್ಸ್, ಮಜ್ಜಿಗೆ ವ್ಯಾಪಾರ ಮಾಡುತ್ತಾರೆ.
ಹತ್ತು ವರ್ಷಗಳ ಹಿಂದೆ ಹೀಗಿರಲಿಲ್ಲ ಈ ಊರು. ಬೆಳಕೆಂದರೆ ಸೂರ್ಯನ ಬೆಳಕು. ಅದಷ್ಟೇ ಅವರಿಗೆ ಗೊತ್ತಿದ್ದಿದ್ದು. ಸೂರ್ಯ ಮುಳುಗಿದ ಮೇಲೆ ಊರೆಲ್ಲ ಅಂಧಕಾರ. ಮನೆಗಳಲ್ಲಿ ಬುಡ್ಡಿ ದೀಪವೊಂದೇ ಮಿಣುಕು ಬೆಳಕಿನ ಸೆಲೆ. ಸೂರ್ಯನ ಒಂದೇ ಮುಖ ಗೊತ್ತಿದ್ದ ಜನ ಸೌರಶಕ್ತಿಯ ಒಲುಮೆಯಿಂದ ಬದಲಾಗಿದ್ದಾರೆ. ಬೆಳಕಿನ ಇನ್ನಷ್ಟು ರೂಪಗಳಿಗೆ ಒಡ್ಡಿಕೊಳ್ಳುವ ಉತ್ಸಾಹ ಅವರಲ್ಲೀಗ ಮನೆ ಮಾಡಿದೆ.
ಚಿತ್ರಗಳು: ಉಷಾ ಕಟ್ಟೆಮನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.