ಹೆಸರು: ರವಿಶಂಕರ್
ಉದ್ಯೋಗ: ಉಬರ್, ಓಲಾ ಟ್ಯಾಕ್ಸಿ ಸೇವೆ
ಬೆಂಗಳೂರಿನ ಎಚ್‌ಎಎಲ್ ಓಲ್ಡ್ ಏರ್‌ಪೋರ್ಟ್ ಸಮೀಪದ ಪ್ರದೇಶದಲ್ಲೇ ಹುಟ್ಟಿ ಬೆಳೆದ ರವಿಶಂಕರ್ ಬದುಕಿಗೆ ಡ್ರೈವಿಂಗ್ ಕಾಯಕವೇ ಆಸರೆ. ಟ್ಯಾಕ್ಸಿ ಲೈನ್‌ಗೆ ಬಂದಾಗಿನಿಂದ ಗ್ರಾಹಕರನ್ನು ತುಂಬ ಆದರದಿಂದ ಕಾಣುತ್ತ ಬಂದಿದ್ದಾರಂತೆ. ನೀಟಾದ ಶೇವ್, ಹಣೆಗೆ ಕುಂಕುಮದ ಅಡ್ಡ ಗೆರೆ, ಶುಭ್ರ ಶ್ವೇತ ವಸ್ತ್ರಧಾರಿ. ಬೆಳಿಗ್ಗೆಯಿಂದ ಸ್ಟಿಯರಿಂಗ್ ಹಿಡಿದು ಕೂತರೆ ಅಂದುಕೊಂಡ ಸಂಪಾದನೆ ಸಾಧಿಸುವತನಕ ಸಾಗುತ್ತಲೇ ಇರುತ್ತಾರೆ. ಸಾಮಾನ್ಯವಾಗಿ ಟ್ಯಾಕ್ಸಿಗಳು ಗಬ್ಬು ನಾರುವುದೇ ಹೆಚ್ಚು. ಆದರೆ, ಇವರ ಟ್ಯಾಕ್ಸಿಯೊಳಗೆ ಹೊಕ್ಕರೆ ಅದೆಷ್ಟು ಸ್ವಚ್ಛ, ಪ್ರಶಾಂತ. ಕಾರಿನ ಎರಡೂ ಬದಿಗಳ ಸ್ಪೇಸ್‌ನಲ್ಲಿ ನೀರಿನ ಬಾಟಲ್ ಇಟ್ಟಿದ್ದು ಕಾಣಿಸಿತು. ನೀರು ಕುಡಿಯಬಹುದಾ ಎಂದೆ. ‘ಅದು ಕುಡಿಯಲೆಂದೇ ಇಟ್ಟಿದ್ದು. ಧಾರಾಳವಾಗಿ ಕುಡಿಯಿರಿ‘ ಎಂದರು. ಪರವಾಗಿಲ್ಲ, ಕೆಲವರು ಗಲೀಜು ಗಾಡಿ ಇಟ್ಟುಕೊಳ್ಳುವುದಲ್ಲದೇ ಜೋರು ಬೇರೆ ಮಾಡುವುದನ್ನು ಕಂಡಿದ್ದೇನೆ.ಸೇವಾ ಮನೋಭಾವ ಹಾಗಿರಲಿ ಕನಿಷ್ಠ ಸಜ್ಜನಿಕೆ ಇರಲ್ಲ, ಅಂಥದ್ದರಲ್ಲಿ ನೀವು ಗ್ರೇಟ್ ಅಂದೆ. ‘ಗ್ರಾಹಕರ ಬಗ್ಗೆ ನನಗೆ ಮುಂಚಿನಿಂದಲೂ ಗೌರವ. ಗಾಡಿಯೊಳಕ್ಕೆ ಬಂದವರು ನೀರು ಕೇಳಿದರೆ ಕೊಡಲು ನೀರಿಲ್ಲದಿದ್ದರೆ ಅದೆಂಥ ಸೇವೆ? ಎಲ್ಲೋ ಗಡಿಬಿಡಿ ಇರುತ್ತೆ. ಮಾತ್ರೆ ತೆಗೆದುಕೊಳ್ಳುವುದನ್ನು ಮರೆತಿರುತ್ತಾರೆ. ಗಾಡಿಯೊಳಕ್ಕೆ ಕೂತಾಗ ನೆನಪಾಗುತ್ತದೆ. ಅಂಥ ಸ್ಥಿತಿಯಲ್ಲಿ ಹೀಗೆ ನೆರವಾಗುವುದು ಮಾನವೀಯ ಸಂಸ್ಕೃತಿ ಅಲ್ಲವೇ?‘ ಎನ್ನುತ್ತಾರೆ ರವಿಶಂಕರ್. ನೀರಿನ ಬಾಟಲಿ ಎತ್ತಿಕೊಂಡರೆ ಮಿನರಲ್ ವಾಟರ್! ನೀರು ರವಿಶಂಕರ್ ಮಾತಿನಷ್ಟೇ ರುಚಿಕರವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.