ADVERTISEMENT

ಬನ್ನೇರುಘಟ್ಟ ಪಾರ್ಕ್‌ನ ಹೊಸ ಇನಿಂಗ್ಸ್‌ ಚಿರತೆ ಸಫಾರಿ 

ಗುರು ಪಿ.ಎಸ್‌
Published 12 ಜುಲೈ 2024, 23:30 IST
Last Updated 12 ಜುಲೈ 2024, 23:30 IST
<div class="paragraphs"><p>ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹುಲಿ, ಸಿಂಹ ಮತ್ತು ಕರಡಿ ಸಫಾರಿ ಜತೆಗೆ ಚಿರತೆ ಸಫಾರಿ ಹೊಸ ಸೇರ್ಪಡೆಯಾಗಿದ್ದು ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಿದೆ</p></div>

ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹುಲಿ, ಸಿಂಹ ಮತ್ತು ಕರಡಿ ಸಫಾರಿ ಜತೆಗೆ ಚಿರತೆ ಸಫಾರಿ ಹೊಸ ಸೇರ್ಪಡೆಯಾಗಿದ್ದು ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಿದೆ

   

– ಪ್ರಜಾವಾಣಿ ಚಿತ್ರ/ ರಂಜು ಪಿ.

ಬೆಂಗಳೂರಿನಂಥ ಮಹಾನಗರದ ಮಧ್ಯದಲ್ಲಿ, ತೀರಾ ಹತ್ತಿರದಿಂದ ಚಿರತೆಗಳನ್ನು ನೋಡುವ ಅವಕಾಶ ಕಲ್ಪಿಸಿದೆ ಬನ್ನೇರುಘಟ್ಟ ಜೈವಿಕ ಉದ್ಯಾನದ ಆಡಳಿತ. ಪಂಜರದ ಬದಲಿಗೆ ಕಾಡಿನಂತಹ ಆವರಣದೊಳಗೆ ಓಡಾಡಿಕೊಂಡಿರುವ ಚಿರತೆಗಳನ್ನು, ಅವುಗಳ ಚಿನ್ನಾಟವನ್ನು ಕಣ್ತುಂಬಿಕೊಳ್ಳುವುದೇ ವಿಶೇಷ ಅನುಭವ. ಅರಣ್ಯದೊಳಗೆ ಹೋದಾಗ ‘ನಾ ಬರಲ್ಲ’ ಎಂದು ಹಟ ಹಿಡಿದು ಮರ ಏರಿ ಕುಳಿತುಕೊಳ್ಳುವ ಚಿರತೆಗಳು, ಇಲ್ಲಿ ಬಸ್ಸು, ಜೀಪಿನೊಳಗೆ ಹೋಗುವ ನಿಮ್ಮನ್ನು ಕಂಡು ‘ಹಾಯ್‌’ ಎನ್ನುತ್ತವೆ!

ADVERTISEMENT

ಕಾಡಿನೊಳಗೆ ಸಫಾರಿಗೆ ಹೋದಾಗಲೂ ಕಣ್ಣಿಗೆ ಸುಲಭವಾಗಿ ಕಾಣಸಿಗದ, ಮನುಷ್ಯರನ್ನ ಕಂಡರೆ ಅಡಗಿಕೊಳ್ಳುವ ಗುಣ ಹೊಂದಿರುವ ಚಿರತೆಗಳು, ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನಿಮಗೆ ತೀರಾ ಹತ್ತಿರದಲ್ಲಿಯೇ ಪ್ರತ್ಯಕ್ಷವಾಗುತ್ತವೆ. ಅದೂ, ಪಂಜರದೊಳಗಲ್ಲ. ಮಿನಿ ಕಾಡಿನಂತಿರುವ ಆವರಣದೊಳಗೆ! 

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ, ದಕ್ಷಿಣ ಭಾರತದ ಮೊದಲ ಮತ್ತು ದೇಶದ ಅತಿ ದೊಡ್ಡ ಚಿರತೆ ಸಫಾರಿಯು ಜೂನ್‌ 26ರಿಂದ ಆರಂಭವಾಗಿದೆ. ಸಿಂಹ, ಹುಲಿ, ಕರಡಿ ಮತ್ತು ಸಸ್ಯಾಹಾರಿ ಪ್ರಾಣಿಗಳ ಸಫಾರಿಯ ನಂತರ, ಚಿರತೆ ಸಫಾರಿಯಂತಹ ಸವಾಲಿನ ಕೆಲಸವನ್ನು ಪ್ರೀತಿಯಿಂದ ಆರಂಭಿಸಿದ್ದಾರೆ ಉದ್ಯಾನದ ಸಿಬ್ಬಂದಿ. 

12 ವರ್ಷಗಳ ತಯಾರಿ!

ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ ಶುರು ಮಾಡಬೇಕು ಎಂಬುದು 12 ವರ್ಷಗಳಿಂದ ಇದ್ದ ಕನಸು. 20ಹೆಕ್ಟೇರ್‌ (50 ಎಕರೆ) ಪ್ರದೇಶದಲ್ಲಿ ಸಫಾರಿ ಮಾಡಬೇಕು ಎಂಬುದು ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ನಿಯಮ. ಅದರಂತೆ, 50 ಎಕರೆ ಪ್ರದೇಶವನ್ನು ಚಿರತೆ ಸಫಾರಿಗೆ ಸೂಕ್ತವಾಗುವ ರೀತಿಯಲ್ಲಿ ಸಜ್ಜುಗೊಳಿಸಲಾಗಿದೆ. ಈ 12 ವರ್ಷಗಳ ಅವಧಿಯಲ್ಲಿ, ಯೋಜನೆಯ ಬಜೆಟ್‌ ಅಂದಾಜು ಸೇರಿದಂತೆ, ಚಿರತೆಗಳ ವಾಸಕ್ಕೆ ಅನುಗುಣವಾದ ಸ್ಥಳದ ಆಯ್ಕೆ, ಕಾಡಾನೆಗಳು ಈ ಆವರಣದೊಳಗೆ ಬಾರದಂತೆ ತಡೆಯಲು ಅವುಗಳಿಗೆ ತರಬೇತಿ ಮತ್ತು ಮುನ್ನೆಚ್ಚರಿಕೆ ಕ್ರಮ, ತಡೆಗೋಡೆಗಳ ನಿರ್ಮಾಣ, 4.5 ಮೀಟರ್‌ ಎತ್ತರದ ಸೌರವಿದ್ಯುತ್‌ ತಂತಿ ಬೇಲಿ, ಸಿಬ್ಬಂದಿ ಮತ್ತು ಚಿರತೆಗಳಿಗೂ ತರಬೇತಿ ನೀಡುವಂತಹ ಕೆಲಸ ನಡೆದಿದೆ. ಒಟ್ಟು ₹5 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ ಬನ್ನೇರುಘಟ್ಟ ಉದ್ಯಾನದ ಆಡಳಿತ.

ಸುಮ್ಮನಿರಬೇಕು, ಧೈರ್ಯವೂ ಬೇಕು!

ಸದ್ಯ, ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ 82 ಚಿರತೆಗಳಿವೆ. ಆದರೆ, ಸಫಾರಿಗೆ ಆಯ್ಕೆಯಾಗಿರುವ ಚಿರತೆಗಳ ಸಂಖ್ಯೆ 20 ಮಾತ್ರ. ಇವುಗಳಲ್ಲಿ ದಿನಕ್ಕೆ 9 ಅಥವಾ 10 ಚಿರತೆಗಳನ್ನು ಸಫಾರಿಗೆ ಬಿಡಲಾಗುತ್ತದೆ. ಅಂದರೆ, ನೀವು ಸಫಾರಿಗೆ ಹೋದಾಗ, ಗರಿಷ್ಠ 10 ಚಿರತೆಗಳನ್ನು ನೋಡಬಹುದು.  

ಸಫಾರಿಗೆ ಚಿರತೆಗಳನ್ನು ಆಯ್ಕೆ ಮಾಡುವ ಸವಾಲಿನ ಕೆಲಸವನ್ನೂ ಇಲ್ಲಿನ ಪಶುವೈದ್ಯರು ಅಚ್ಚುಕಟ್ಟಾಗಿ ಪೂರ್ಣಗೊಳಿಸಿದ್ದಾರೆ. ಇಲ್ಲಿನ ಪ್ರಮುಖ ಸವಾಲು ಏನೆಂದರೆ, ಚಿರತೆಗಳು ಹುಲಿ, ಸಿಂಹದಂತೆ ಅಲ್ಲ. ಹುಲಿ–ಸಿಂಹಗಳಲ್ಲಾದರೆ ‘Dominance establishment’ ಗುಣ ಇರುತ್ತದೆ. ಅಂದರೆ, ದೊಡ್ಡ ಹುಲಿಯನ್ನು ಸಣ್ಣ ಹುಲಿ ಮುಟ್ಟುವುದಕ್ಕೇ ಹೋಗುವುದಿಲ್ಲ. ಆದರೆ, ಚಿರತೆಗಳಲ್ಲಿ ಹಾಗಲ್ಲ. ಸಣ್ಣ ಮರಿಯೂ ದೊಡ್ಡ ಮರಿಯನ್ನು ಕೆಣಕಲು ಹೋಗುತ್ತದೆ. ಹೀಗಾಗಿ, ಹೆಚ್ಚಿನ ಚಿರತೆಗಳನ್ನು ಒಟ್ಟಿಗೇ ಸಫಾರಿಗೆ ಬಿಡಬೇಕೆಂದರೆ, ಬೇರೆ ಚಿರತೆಗಳ ಮೇಲೆ ದಾಳಿ ಮಾಡದಂತೆ ತರಬೇತಿ ನೀಡಬೇಕಾಗುತ್ತದೆ.

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಕಂಡ ಚಿರತೆ

ಇನ್ನು, ಸಫಾರಿಗೆ ಹೋಗಬೇಕಾದ ಚಿರತೆಗಳ ಆಯ್ಕೆ.  ಮೊದಲೇ ಹೇಳಿದಂತೆ, ಚಿರತೆಗಳದ್ದು ಅಡಗಿಕೊಳ್ಳುವ ಸ್ವಭಾವ. ಅಂತಹ ಸ್ವಭಾವವನ್ನು ಹೆಚ್ಚು ಹೊಂದಿರುವ ಚಿರತೆಗಳನ್ನು ಸಫಾರಿಗೆ ಬಿಡುವುದೇ ಇಲ್ಲ. ಮನುಷ್ಯರನ್ನು ಕಂಡರೆ ಹೆದರದ, ವಾಹನಗಳಿಗೆ ಅಂಜದ ಮತ್ತು ರಸ್ತೆಯಲ್ಲಿ ನಡೆಯಲು ಭಯಪಡದ, ಆದರೆ, ಹೆಚ್ಚು ಆಕ್ರಮಣಕಾರಿಯಲ್ಲದ ಚಿರತೆಗಳು ಮಾತ್ರ ಸಫಾರಿಗೆ ಹೋಗುವ ‘ಅರ್ಹತೆ’ ಪಡೆದಿವೆ.  

ಜೀವನದ ಎರಡನೇ ಅಧ್ಯಾಯ !

ಬನ್ನೇರುಘಟ್ಟದಲ್ಲಿರುವ ಬಹುತೇಕ ಚಿರತೆಗಳು ರಕ್ಷಿಸಲ್ಪಟ್ಟಿರುವಂಥವು. ಅಂದರೆ, ಅರಣ್ಯದಲ್ಲಿ ಗಾಯಗೊಂಡು ಬಿದ್ದಿದ್ದ, ಹೊಲ–ಊರಿನೊಳಗೆ ನುಗ್ಗಿದಾಗ ಸೆರೆ ಹಿಡಿದ, ತಾಯಿಯಿಂದ ದೂರವಾದ ಮರಿಗಳು ಇಲ್ಲಿ ಹೆಚ್ಚಿವೆ. ಇವು, ಬನ್ನೇರುಘಟ್ಟದಲ್ಲಿ ಆರೈಕೆ ಪಡೆದು, ಚೇತರಿಸಿಕೊಳ್ಳುವ ಮೂಲಕ ತಮ್ಮ ಜೀವನದ ಎರಡನೇ ಅಧ್ಯಾಯವನ್ನು ಆರಂಭಿಸುತ್ತಿವೆ. 

ಇನ್ನು, ಸಫಾರಿಗೆ ಹೋಗುವ ಚಿರತೆಗಳು ತಮ್ಮದೇ ಆದ ದಿನಚರಿ ಹೊಂದಿವೆ. ಬೆಳಿಗ್ಗೆ 10.30ಕ್ಕೆ ಸುಮಾರು 10 ಚಿರತೆಗಳನ್ನು ಸಫಾರಿಗೆ ಬಿಡಲಾಗುತ್ತದೆ. 50 ಎಕರೆ ಪ್ರದೇಶದಲ್ಲಿ ಓಡಾಡಿಕೊಂಡಿರುವ ಇವು, ಆವರಣದೊಳಗೆ ಬೇರೆ ಪ್ರಾಣಿಗಳಿಲ್ಲದೆ ಇರುವುದರಿಂದ ಆಹಾರ ಹುಡುಕಿಕೊಂಡು, ಸಂಜೆ 5ರ ವೇಳೆಗೆ ತಮ್ಮ ವಾಸಸ್ಥಾನ ಅಥವಾ ಪಂಜರಕ್ಕೆ ಮರಳುತ್ತವೆ. ಸಂಜೆ 5.30ರ ನಂತರ ಆಹಾರ ನೀಡಲಾಗುತ್ತದೆ. 

ಏನೇ ತರಬೇತಿ ನೀಡಿದರೂ, ಗುಂಪಾಗಿ ಹೋಗುವುದರಿಂದ ಪರಸ್ಪರ ಕಚ್ಚಾಡಿಕೊಳ್ಳುವುದು, ಕಂದಕಗಳನ್ನು ಹಾರುವಾಗ ತರಚುಗಾಯ ಮಾಡಿಕೊಳ್ಳುವುದು ಹೆಚ್ಚು. ಹೀಗಾಗಿ, ಇವು ಸಫಾರಿ ಮುಗಿಸಿಕೊಂಡು ಬಂದ ತಕ್ಷಣ, ಮೂಗಿನಿಂದ ಬಾಲದವರೆಗೆ ಇವುಗಳ ಪರೀಕ್ಷೆ ನಡೆಯುತ್ತದೆ. ಅಗತ್ಯವಿದ್ದರೆ ಚಿಕಿತ್ಸೆ ಕೊಡಲಾಗುತ್ತದೆ. 

ಸಾಮಾನ್ಯವಾಗಿ, ಚಿರತೆಗಳು ಬೇಟೆಯಾಡುವಾಗ ಮತ್ತು ಮಿಲನದ ಸಂದರ್ಭದಲ್ಲಿ ಹೊಡೆದಾಡಿಕೊಳ್ಳುವುದು ಹೆಚ್ಚು. ಸಂಜೆಗೆ ಹೇಗೂ ಆಹಾರ ಸಿಗುವುದರಿಂದ ಬೇಟೆ ಆಡುವುದಿಲ್ಲ. ಇನ್ನು, ಎಲ್ಲ ಗಂಡು ಚಿರತೆಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಆಗಿರುವುದರಿಂದ, ಮಿಲನದ ಸಂದರ್ಭದಲ್ಲಿ ರಕ್ತಸ್ರಾವವಾಗುವಂತಹ ಸಮಸ್ಯೆಗಳೂ ಇವುಗಳಿಗೆ ಇಲ್ಲ. 

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಕಂಡ ಚಿರತೆ

ಹೊಸ ಅನುಭವ, ಕಲಿಕೆಗೆ ಅವಕಾಶ 

ರಾಜ್ಯದ ಬಂಡೀಪುರ, ಕಬಿನಿ ಮಾತ್ರಲ್ಲದೆ, ಮಧ್ಯಪ್ರದೇಶ, ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಅರಣ್ಯದಲ್ಲಿ ಸಫಾರಿ ಹೋದರೂ ಚಿರತೆಗಳು ತಕ್ಷಣಕ್ಕೆ ಕಾಣಸಿಗುವುದು ವಿರಳ. ಅಲ್ಲದೆ, ಅಲ್ಲಿ ಹೋಗಿ ಬರಲು ಖರ್ಚೂ ಹೆಚ್ಚು. ಆದರೆ ಇಲ್ಲಿ, ಯೋಗ್ಯ ದರದಲ್ಲಿ ಚಿರತೆ ಸಫಾರಿ ತೆರಳಬಹುದಾಗಿದೆ.

ಇನ್ನು, ಇತ್ತೀಚೆಗೆ  ಮಾನವ–ಚಿರತೆ ಸಂಘರ್ಷ ಹೆಚ್ಚುತ್ತಿದೆ.  ಮುಖ್ಯವಾಗಿ, ಹೊಲದಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರು, ರೈತರು ಚಿರತೆ ದಾಳಿಗೆ ಬಲಿಯಾಗುತ್ತಿದ್ದಾರೆ. ಇವರೆಲ್ಲ ಈ  ಸಫಾರಿಗೆ ಭೇಟಿ ನೀಡಿ,  ಚಿರತೆಗಳ  ಸ್ವಭಾವ, ಅವುಗಳ ವರ್ತನೆ ಬಗ್ಗೆಯೂ ತಿಳಿದುಕೊಳ್ಳಬಹುದಾಗಿರುವುದರಿಂದ ದಾಳಿ ವೇಳೆ ಹೆಚ್ಚು ವಿವೇಚನೆಯಿಂದ ನಡೆದುಕೊಳ್ಳಲು ಸಾಧ್ಯವಾಗಬಹುದು. ಎಲ್ಲಕ್ಕಿಂತ ಹೆಚ್ಚಾಗಿ, ಶಾಲಾ ಮಕ್ಕಳು ಬನ್ನೇರುಘಟ್ಟಕ್ಕೆ ಭೇಟಿ ನೀಡಿದರೆ, ಅದು ಕಲಿಕಾ ಪ್ರವಾಸವಾಗಿಯೂ ಬದಲಾಗಬಹುದು.

ಟಿಕೆಟ್ ದರ ಎಷ್ಟು? ಸಮಯ ಏನು?

ಎಸಿ ರಹಿತ ಬಸ್‌ನಲ್ಲಿ ಮೃಗಾಲಯ ವೀಕ್ಷಣೆ ಮತ್ತು ಸಫಾರಿಗೆ– ಸೋಮವಾರದಿಂದ ಶುಕ್ರವಾರದವರೆಗೆ ವಯಸ್ಕರಿಗೆ ₹350, ಮಕ್ಕಳಿಗೆ ₹200, ಹಿರಿಯ ನಾಗರಿಕರಿಗೆ ₹250 ದರ ನಿಗದಿ ಮಾಡಲಾಗಿದೆ. ವಾರಾಂತ್ಯದಲ್ಲಿ ಈ ಎಲ್ಲ ವಿಭಾಗದಲ್ಲಿ ₹50 ಹೆಚ್ಚುವರಿ ಶುಲ್ಕ ಇರುತ್ತದೆ. ಎಸಿ ಬಸ್‌ಗಳಲ್ಲಾದರೆ, ಎಲ್ಲ ವಿಭಾಗದಲ್ಲಿ (ಮೃಗಾಲಯ + ಸಫಾರಿ+ ಚಿಟ್ಟೆಉದ್ಯಾನ +ಕ್ಯಾಮೆರಾ) ವಯಸ್ಕರಿಗೆ ₹670, ಮಕ್ಕಳಿಗೆ ₹470 ಟಿಕೆಟ್‌ ದರವಿದೆ. ವಾರಾಂತ್ಯ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ಈ ದರದ ಮೇಲೆ ಹೆಚ್ಚುವರಿಯಾಗಿ ₹50 ನೀಡ ಬೇಕಾಗುತ್ತದೆ. ವಾರಾಂತ್ಯದಲ್ಲಿ  6 ಆಸನಗಳ ಎಸಿ ರಹಿತ ಜೀಪಿಗೆ ₹3,900, ಎಸಿ ಜೀಪಿಗೆ ₹4,500 ನಿಗದಿ ಮಾಡಲಾಗಿದೆ. ಹೆಚ್ಚುಆಸನಗಳಿರುವ ವಾಹನಗಳಲ್ಲಿ ಟಿಕೆಟ್‌ ದರವೂ ಹೆಚ್ಚುತ್ತದೆ. ಶಾಲಾ ವಿದ್ಯಾರ್ಥಿಗಳ ಗುಂಪು ಭೇಟಿಗೆ ರಿಯಾಯಿತಿ ದರ ನಿಗದಿ ಮಾಡಲಾಗಿದೆ. ಪ್ರತಿದಿನ ಬೆಳಿಗ್ಗೆ 9.30ರಿಂದ ಸಂಜೆ 5ರವರೆಗೆ ಭೇಟಿ ನೀಡಬಹುದು. ಸಫಾರಿ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3.30ರವರೆಗೆ ಮಾತ್ರ ಇರಲಿದೆ. ಪ್ರತಿ ಮಂಗಳವಾರ ರಜೆ ಇರುತ್ತದೆ.

ಆನ್‌ಲೈನ್‌ನಲ್ಲಿ ಟಿಕೆಟ್‌ ಕಾಯ್ದಿರಿಸಲು https://bannerughattabiopark.org/ಗೆ ಭೇಟಿ ನೀಡಬಹುದು. https://bannerughattabiopark.org/

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.