ADVERTISEMENT

ಗುಹೆಯಲ್ಲಿ ಅಡಗಿರುವ ಮನುಷ್ಯನ ಚರಿತ್ರೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 19:30 IST
Last Updated 5 ಅಕ್ಟೋಬರ್ 2019, 19:30 IST
ಗುಹೆ
ಗುಹೆ   

ಸಂಶೋಧಕರ ಪಾಲಿಗೆ ವಿಸ್ಮಯಗಳ ಗಣಿಯಂತೆ ಕಾಣುವ ಗುಹೆಗಳು ಆದಿಮಾನವನ ಪಾಲಿಗೆ ಆಸರೆಯ ತಾಣಗಳಾಗಿದ್ದವು. ಆದಿಮಾನವನು ಗುಹೆಗಳನ್ನು ಶವ ಹೂಳಲು ಬಳಸಿದ್ದಿದೆ, ಧಾರ್ಮಿಕ ಕಾರ್ಯಗಳನ್ನು ನಡೆಸಲು ಕೂಡ ಬಳಸಿದ್ದಿದೆ. ಮನುಷ್ಯ ತನಗಾಗಿ ಮನೆ ಕಟ್ಟಿಕೊಳ್ಳುವುದನ್ನು ಕಲಿತುಕೊಳ್ಳುವುದಕ್ಕಿಂತ ಮೊದಲು, ಗುಹೆಗಳಲ್ಲಿ ವಾಸಿಸುತ್ತಿದ್ದ.

ಗುಹೆಗಳು ಬಿಸಿಲು, ಗಾಳಿ, ಮಳೆಯಿಂದ, ಕ್ರೂರ ಪ್ರಾಣಿಗಳಿಂದ ರಕ್ಷಣೆ ಒದಗಿಸುತ್ತವೆ. ಅಲ್ಲಿರುವ ವಸ್ತುಗಳು ಪುರಾತತ್ವ ಸಂಶೋಧಕರ ಪಾಲಿಗೆ ಮಹತ್ವದ ಸುಳಿವುಗಳನ್ನು ನೀಡುತ್ತವೆ. ಪುರಾತನ ಕಾಲದಲ್ಲಿ ಮನುಷ್ಯನ ಜೀವನ ಹೇಗಿತ್ತು ಎಂಬುದರ ಬಗ್ಗೆಯೂ ಒಂದಿಷ್ಟು ಮಾಹಿತಿ ನೀಡುತ್ತವೆ.

ಭಾರತದಲ್ಲಿ ಹತ್ತು ಹಲವು ಸುಂದರ ಗುಹೆಗಳು ಇವೆ. ವಿಂಧ್ಯ ಪರ್ವತ ಶ್ರೇಣಿಯಲ್ಲಿ ಇರುವ ಭೀಮಬೆಟ್ಕಾ ಶಿಲಾಶ್ರಯವು ಭೋಪಾಲ್‌ನಿಂದ 45 ಕಿ.ಮೀ. ದೂರದಲ್ಲಿ ಇದೆ. ಇಲ್ಲಿ ಮಾನವನಿಗೆ ಆಶ್ರಯ ನೀಡಿದ್ದ, ಸುಣ್ಣದಕಲ್ಲಿನ 500ಕ್ಕೂ ಹೆಚ್ಚಿನ ಜಾಗಗಳು ಇವೆ. ಇವನ್ನು ನಿರ್ಮಿಸಿದ್ದು ನಿಯೋಲಿಥಿಕ್ (ನವ ಶಿಲಾಯುಗದ) ಮಾನವ. ಈ ರಚನೆಗಳು ಏಳು ಪರ್ವತಗಳ ವ್ಯಾಪ್ತಿಯಲ್ಲಿ ಹರಡಿಕೊಂಡಿದ್ದು, ಅವುಗಳಲ್ಲಿನ ನೂರಕ್ಕೂ ಹೆಚ್ಚಿನ ಗುಹೆಗಳಲ್ಲಿ ಕಲ್ಲಿನ ಮೇಲೆ ಬಿಡಿಸಿದ ಚಿತ್ರಗಳು ಇವೆ.

ADVERTISEMENT

ಭೀಮ ಬೆಟ್ಕಾ ಗುಹೆಗಳನ್ನು 2003ರಲ್ಲಿ ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಯಿತು. ಅಲ್ಲಿ ಇರುವ ಚಿತ್ರಗಳು, ಗಣನೀಯವಾಗಿ ಸುಧಾರಿಸಿದ್ದ ಜೀವನಶೈಲಿಯನ್ನು ಬಿಂಬಿಸುತ್ತವೆ. ಸೈನಿಕರು ಕಾದಾಟ ನಡೆಸುತ್ತಿರುವುದು, ಮುಖಮುಚ್ಚಿಕೊಂಡಿದ್ದ ಬೇಟೆಗಾರರು ಬಾಣಗಳಿಂದ ಕೊಲ್ಲುತ್ತಿದ್ದುದು ಚಿತ್ರಗಳಲ್ಲಿ ಬಿಂಬಿತವಾಗಿವೆ. ಮನುಷ್ಯ ಬೇಟೆಯಾಡಿ ಆಹಾರ ಸಂಪಾದಿಸುವ ವಿಧಾನವನ್ನು ಬಿಟ್ಟು, ಕೃಷಿಯ ಮೂಲಕ ಆಹಾರ ಬೆಳೆದುಕೊಳ್ಳುವ ವಿಧಾನಕ್ಕೆ ಒಗ್ಗಿಕೊಂಡ ನಂತರ ಪ್ರಾಣಿಗಳನ್ನು ಸಾಕುವ ಪದ್ಧತಿ ಹೇಗೆ ಆರಂಭವಾಯಿತು ಎಂಬುದರ ಬಗ್ಗೆಯೂ ಅವು ಒಂದಿಷ್ಟು ವಿವರ ನೀಡುತ್ತವೆ.

ಕೇರಳದ ವಯನಾಡ್ ಜಿಲ್ಲೆಯಲ್ಲಿ ಇರುವ ಎಡಕ್ಕಲ್ ಗುಹೆಗಳು 10 ಸಾವಿರ ವರ್ಷಗಳಷ್ಟು ಹಳೆಯವು. ಅವು ವಿಶ್ವದ ಅತ್ಯಂತ ಹಳೆಯ ಪುರಾತತ್ವ ಸ್ಥಳಗಳು. ಅವು ಅಂಬುಕುತ್ತಿಮಲ ಎಂಬ ಬೆಟ್ಟದ ಮೇಲೆ ಇವೆ. ಶಿಲಾಯುಗದ ಮನುಷ್ಯ ಈ ಗುಹೆಗಳಲ್ಲಿ ವಾಸ ಮಾಡಿದ್ದ ಎಂಬ ನಂಬಿಕೆ ಇದೆ. ಅಲ್ಲಿ ಅವರು ಮನುಷ್ಯರ, ಬಂಡಿಗಳ, ಪ್ರಾಣಿಗಳ, ಸಸ್ಯಗಳ, ಹೂವುಗಳು, ತಾವು ಬಳಕೆ ಮಾಡುತ್ತಿದ್ದ ಸಲಕರಣೆಗಳ ಚಿತ್ರಗಳನ್ನು ಬಿಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.