ADVERTISEMENT

ದೀವಳಿಗೆಯೂ.. ಫಳಾರ ಸವಿಯೂ..

ಬದುಕು ಸವಿಯಲು ಫಳಾರ ಬೇಕು

ಎಸ್.ರಶ್ಮಿ
Published 27 ಅಕ್ಟೋಬರ್ 2024, 2:54 IST
Last Updated 27 ಅಕ್ಟೋಬರ್ 2024, 2:54 IST
<div class="paragraphs"><p>ಫಳಾರ</p></div>

ಫಳಾರ

   

ದೀಪಾವಳಿ ಅಂದ್ರೆ ಸಾಕು, ನಮಗೆಲ್ಲ ಫಳಾರದ ಹಬ್ಬ. ಫಲಾಹಾರದ ಅಪಭ್ರಂಶ ಫಳಾರ. ಆದರೆ ಇಲ್ಲಿ ಪದಗಳಷ್ಟೇ ಅಲ್ಲ, ಆಹಾರವೂ ಪಲ್ಲಟವಾಗಿರುತ್ತದೆ. ಫಲಾಹಾರದಲ್ಲಿ ಫಲಗಳೇ ಹೆಚ್ಚು ಇದ್ದರೆ, ಫಳಾರದಲ್ಲಿ ಎಲ್ಲ ಕುರುಕಲುಗಳದ್ದೇ ಮೇಲುಗೈ.

ಫಳಾರ ಮಾಡಾಕತ್ತೀವಿ. ಕರದೊಡಿ, ಹುರಕ್ಕಿಹೋಳಗಿ, ಗುಳ್ಳಡಕಿ ಉಂಡಿ, ಹಚ್ಚಿದವಲಕ್ಕಿ, ಕರದವಲಕ್ಕಿಗೆ ಅವಲಕ್ಕಿ ಬಿಸಿಲಿಗೆ ಇಟ್ಟೀವಿ.. ಎನ್ನುವುದರೊಂದಿಗೆ ಫಳಾರದ ತಯಾರಿ ಆರಂಭವಾಗುತ್ತದೆ.

ADVERTISEMENT

ಫಳಾರೆಂದರೆ ಒಂದು ತಟ್ಟೆಯಲ್ಲಿ ಒಂದೆಡೆ ತಿಳಿ ಹಳದಿ ಅಥವಾ ನಿಂಬೆ ಹಸಿರಿನ ಬಣ್ಣದ ಅವಲಕ್ಕಿ, ಅದರೊಳಗೆ ಕೆಂಬಣ್ಣದ ಕಡಲೆಬೀಜ, ಹೊಟ್ಟೆಯುಬ್ಬಿಸಿಕೊಂಡ ಬಿಳಿಎಳ್ಳು, ಕರುಕುರು ಎನ್ನುವ ಹವೇಜು (ಧನಿಯಾ ಕಾಳು), ತೆಳುಸಿಪ್ಪೆಯಂತೆ ಸೇಳಿದ ಒಣಕೊಬ್ಬರಿ, ಕಂದು ಬಣ್ಣಕ್ಕೆ ತಿರುಗಿರುತ್ತದೆ. ಮೆಂತ್ಯ ಮೆಣಸಿನಕಾಯಿ ಘಮ್‌ ಅನ್ನುವಂತೆ ಎಣ್ಣೆಯಲ್ಲಿ ಕರಿದು ಹಾಕಿದ್ದರೆ, ಕರಿಬೇವು ಸಹ ಗರಿಗರಿ. ಬಾಯಿಗೆ ಹಾಕಿಕೊಂಡಾಗ ಆಗಾಗ ಸಿಗುವ ಸಕ್ಕರೆ ಕಣ. ಆಹಹಾ.. ಅದಕ್ಕೆ ಶ್ರೀಕೃಷ್ಣ ಸುಧಾಮನಿಗೆ ಅವಲಕ್ಕಿ ತಿಂದಮೇಲೆ ಏನೆಲ್ಲ ಸಂಪತ್ತು ಕೊಟ್ಟ ಅಂತನಿಸದೇ ಇರದು. 

ಅವಲಕ್ಕಿ ತಿಂದ ಕೂಡಲೇ ಕೊಟ್ಟವ ಲಕ್ಕಿ ಆಗುತ್ತಾನೆ ಅನ್ನವುದೊಂದು ನಂಬಿಕೆಯೂ ಇದೆ. ಇಂಥ ಅವಲಕ್ಕಿ ಅರ್ಧ ತಟ್ಟೆಯಲ್ಲಿ ಬೀಚಿನಲ್ಲಿ ಮರಳು ಬಿದ್ದಂತೆ ಗೆರೆ ಕೊರೆದಿಟ್ಟುಕೊಳ್ಳುತ್ತದೆ. ಬದಿಯಲ್ಲಿ ಹಚ್ಚಹಸಿರಿನ ಹೆಸರುಂಡೆ, ಪಕ್ಕದಲ್ಲಿ ನಸು ಹಳದಿಯ ಗೋಧಿ ಉಂಡೆ. ಪಕ್ಕಕ್ಕೆ ಖಡ್ಗವಿರಿಸಿದಂತೆ ಎರಡು ಕರಜಿಕಾಯಿಗಳು. ಒಂದೆಡೆ ಬೆಲ್ಲ ಕೊಬ್ಬರಿ, ಹುರಿಗಡಲೆ ಪುಡಿಯ ಮಿಶ್ರಣವಿದ್ದರೆ, ಇನ್ನೊಂದರಲ್ಲಿ ಸಕ್ಕರೆ, ಒಣಕೊಬ್ಬರಿಯ ಮಿಶ್ರಣ ತುಂಬಿ ಮಾಡಿರುತ್ತಾರೆ.  

ಈ ಫಳಾರ ತಟ್ಟೆಯಲ್ಲಿ ಚಕ್ರವ್ಯೂಹದಂತಹ ಚಕ್ಕುಲಿಯೂ, ಕೋಡುಬಳೆಯೆಂದು ಕರೆಯಲಾಗುವ ಕೂಡುಬಳೆಗಳೂ ಜಾಗ ಪಡೆದಿರುತ್ತವೆ. ಈಗಲೂ ಪಾರಂಪರಿಕವಾಗಿ ಫಳಾರದ ತಟ್ಟೆ ಕೊಡಬೇಕೆಂದರೆ ಇವುಗಳ ಮೇಲೆ ಹುರಕ್ಕಿ ಹೋಳಗಿ ಜೊತೆಗೆ ಕರದೊಡಿ ಇರಲೇಬೇಕು.

ಏನಿದು ಕರದೊಡಿ.. ಹೆಂಗಿದು ಹುರಕ್ಕಿ ಹೋಳಗಿ ಅಂತ ಹುಬ್ಬು ಗಂಟಿಕ್ಕಿ ಯೋಚಿಸುತ್ತಿರಬಹುದು. ಕರದೊಡಿ ಅಂದ್ರ ಬಾ ನನ್ನ ತಿನ್ನಬಾ ಅಂತ ಕರಿಯುವ ವಡಿ. ಖಾಕ್ರಾದ್ಹಂಗೇ ಕನ್ನಡದ ಜಾಯಮಾನಕ್ಕೆ ಒಗ್ಗಿಕೊಂಡಿರುವ ತಿಂಡಿ ಇದು. ಈರುಳ್ಳಿ ಹೆಚ್ಚಿ, ಕೊತ್ತಂಬರಿ ಕೊಚ್ಚಿ, ಕಣಕಣದಂತೆ ಕಾಣುವಾಗ, ಹಸಿಮೆಣಸು ಹುರಿದು, ಮೆಂತ್ಯ ಸೊಪ್ಪು ಅಥವಾ ಈಗೀಗ ಸಿಗುವ ಕಸೂರಿ ಮೇಥಿ, ಉಪ್ಪು, ಜೀರಿಗೆ ಮಿಕ್ಸಿಯಲ್ಲಿ ಜುಂಯ್‌ ಎನಿಸಿ, ಕಡಲೆಹಿಟ್ಟಿಗೆ ಕಲಿಸಬೇಕು. ನಾದಬೇಕು. ಬಿಸಿಎಣ್ಣೆ ಹಾಕಿ ಮಿದ್ದಬೇಕು. ನಸುಹಳದಿಯಲ್ಲಿ ಈ ಹಚ್ಚಹಸಿರ ಮಿಶ್ರಣ ಅದೆಂಥ ಚಂದದ ಕಲಾಕೃತಿ ಇದು, ಅಂತನಿಸುವಾಗ ಅವನ್ನು ಮೈದಾ ಹಿಟ್ಟಿನ ಉಂಡೆ ಮಾಡಿಕೊಳ್ಳಬೇಕು. ಪೂರಿಯಂತೆ ಲಟ್ಟಿಸಿ, ಈ ಕಡಲೆಹಿಟ್ಟಿನ ಮಿಶ್ರಣದ ಸಣ್ಣ ಉಂಡೆ ತುಂಬಿ ಮತ್ತೆ ಹೋಳಿಗೆಯಂತೆ ಲಟ್ಟಿಸಬೇಕು. ಹೀಗೆ ಲಟ್ಟಿಸಿದ ಪೂರಿಯನ್ನು ಬಿಸಿಎಣ್ಣೆಯಲ್ಲಿ ಕರೆಯಬೇಕು. ಹಾಗೆ ಕರೆದಾಗಲೆಲ್ಲ, ಅಕ್ಕಪಕ್ಕದವರಿಗೆ, ಬಂಧು ಬಾಂಧವರಿಗೆ.. ನಾನೀಗ ತಿನ್ನಲು ರೆಡಿ ಎಂದು ಮನೆತುಂಬ ಘಮವೆಬ್ಬಿಸುವ ತಿಂಡಿಯೇ ಕರದೊಡಿ. 

ಬಂಧು ಬಾಂಧವರಿಗೆಲ್ಲ ಕರೆಯುವುದಷ್ಟೇ ಅಲ್ಲ, ಅವರವರ ಮನೆಗೆ ಹೋಗಲು ಸಿದ್ಧವಾಗುವ ಬಹುಮುಖ್ಯ ತಿಂಡಿ. ಎಷ್ಟು ಕರದೊಡಿ ಕೊಟ್ರು ಎನ್ನುವುದರ ಮೇಲೆ ಅವರಿಬ್ಬರು ಅದೆಷ್ಟು ಆಪ್ತರು ಎಂಬ ಲೆಕ್ಕಾಚಾರವೂ ನಡೆಯುತ್ತದೆ. ಒಂದಿಟ್ಟರೆ ಶಾಸ್ತ್ರಕ್ಕೆ, ಎರಡಿಟ್ಟರೆ ಕಾಟಾಚಾರಕ್ಕೆ, ಐದಿಟ್ಟರೆ ಸ್ನೇಹಕ್ಕೆ, ಹತ್ತಿಟ್ಟರೆ ಬಾಂಧವ್ಯಕ್ಕೆ, ಹತ್ತಕ್ಕೂ ಜಾಸ್ತಿ ಇಟ್ಟರೆ ಅದು ಬೀಗರ ಮನೆಗೆ ಎಂಬಂತೆ ಲೆಕ್ಕಾಚಾರವೂ ಇದೆ. ಸಿಹಿಪೂರಿಯಂತೆ ಕಾಣುವ ಹುರಕ್ಕಿ ಹೋಳಿಗೆಗೂ, ದೀಪಾವಳಿಗೂ ಬಿಡದ ನಂಟು. ನವಣಕ್ಕಿಯನ್ನು, ತುಸು ಅಕ್ಕಿಯೊಂದಿಗೆ ಹುರಿದು, ಬೆಲ್ಲದೊಂದಿಗೆ ಮಿಶ್ರಣ ಮಾಡಿ, ಕರದೊಡೆಯಂತೆಯೇ ಕರಿದು ಮಾಡುವ ಹುರಕ್ಕಿ ಹೋಳಿಗೆ ಪೌಷ್ಟಿಕಾಂಶದ ಆಗರ. 

ಇದೀಗ ಇದು ಫಳಾರದ ತಟ್ಟೆಯಿಂದ ಮಾಯವಾಗಿದೆ. ಹುಬ್ಬಳ್ಳಿ–ಧಾರವಾಡದ ರೊಟ್ಟಿಯಂಗಡಿಗಳಲ್ಲಿ ಅಪರೂಪಕ್ಕೆ ಸಿಗುವ ಹುರಕ್ಕಿ ಹೋಳಿಗೆಗೆ ಹೆರ್ತಿದ್ದ ತುಪ್ಪ (ಹರಳು ಹರಳಾಗಿರುವ ತುಪ್ಪ), ಹಾಲಿನೊಂದಿಗೆ ಸವಿದರೆ ಸ್ವರ್ಗವೇ ಪ್ರತಿ ತುತ್ತಿನಲ್ಲಿಯೂ ಎನ್ನುವಂತಿರುತ್ತದೆ.

ಫಳಾರ ಏಕೆ ಕೊಡುತ್ತಾರೆ?

ದೀಪಾವಳಿಯ ದೀಪಗಳೊಂದಿಗೆ, ಚಳಿಗಾಲವೂ ಅಂಗಳದಿಂದ, ಹೊಸಿಲು ದಾಟಿ ಮನೆಯೊಳಗೆ ಕಾಲಿಡುತ್ತದೆ. ಅಂಗಾಲಿನಿಂದ ಆರಂಭವಾಗಿ ಕೆನ್ನೆಯವರೆಗೂ ಚರ್ಮ ಬಿರುಕುಬಿಡುವ ಸಮಯವಿದು. ಇಂಥ ಸಂದರ್ಭದಲ್ಲಿ ದೇಹಕ್ಕೆ ಅಗತ್ಯವಿರುವ ತೈಲಾಂಶದ ಖಾದ್ಯಗಳು ತಿನ್ನಲಿ ಎಂಬ ಕಾರಣಕ್ಕೆ ಈ ಫಳಾರವನ್ನು ಕೊಡು ಕೊಳ್ಳುವ ಸಂಪ್ರದಾಯ ಆರಂಭವಾಗಿರಬೇಕು. 

ಲಕ್ಷ್ಮಿ ಪೂಜೆ ಮಾಡಿದವರು ಈ ದಿನ ಮನೆಯಿಂದಾಚೆ ಏನೂ ನೀಡುವುದಿಲ್ಲ. ಪ್ರಸಾದಕ್ಕೂ ಕೇವಲ ಚುರುಮುರಿ, ಬತ್ತಾಸು ನೀಡುತ್ತಾರೆ. ಯಾವ ಖರ್ಚೂ ಮಾಡುವುದಿಲ್ಲ. ಆ ಕೊರತೆ ನೀಗಿಸಲು ಪಂಚ ಭಕ್ಷ್ಯಗಳನ್ನು ನೀಡಬೇಕು ಎಂಬ ಸಂಪ್ರದಾಯವಿದೆ. ಖಾರದ ತಿಂಡಿಗಳಲ್ಲಿ ಅವಲಕ್ಕಿ, ಕೂಡುಬಳೆ, ಚಕ್ಕುಲಿ, ಖಾರಾಕಡ್ಡಿ, ಕರದೊಡಿ, ಸಿಹಿ ತಿಂಡಿಗಳಲ್ಲಿ ಶಂಕರಪೋಳಿ, ಹೆಸರುಂಡೆ, ಗೋಧಿಯುಂಡೆ, ಲಡಕಿಲಾಡು, ಹುರಕ್ಕಿ ಹೋಳಗಿ ಇರಲೇಬೇಕಾದುದು ಕಾಯಂ. ಈ ದ್ವಿದಳ ಧಾನ್ಯ, ಎಣ್ಣೆಕಾಳು ಕೊಡುವುದರಿಂದ ಆರೋಗ್ಯ, ಆಯಸ್ಸು ಸಮೃದ್ಧವಾಗುವುದು. ಕೊಟ್ಟವರಿಗೂ, ಪಡೆದವರಿಗೂ, ಸೇವಿಸಿದವರಿಗೂ ಒಳಿತಾಗುವುದು ಎಂಬ ನಂಬಿಕೆ ಇದೆ.  

ಫಳಾರ ಹಂಚುವುದಲ್ಲ, ಬೀರುವುದು

ಫಳಾರವನ್ನು ನೀಡಲೂ ಒಂದು ಪದ್ಧತಿ ಇದೆ. ತಟ್ಟೆಯಲ್ಲಿ ಎಲ್ಲವನ್ನೂ ಜೋಡಿಸಿಟ್ಟುಕೊಂಡು, ಮೇಲುವಸ್ತ್ರದಿಂದ ಅದನ್ನು ಮುಚ್ಚುತ್ತಾರೆ. ಈ ಮೇಲುವಸ್ತ್ರವನ್ನು ಬಣ್ಣ ಬಣ್ಣದ ಉಣ್ಣೆಯಿಂದ ನೇಯ್ದಿರುತ್ತಾರೆ. ಚೌಕಾಕಾರ, ವೃತ್ತಾಕಾರ, ಅಂಡಾಕಾರದಲ್ಲಿ. ಅಕ್ಟೋಬರ್‌ ರಜೆಗೆ ಬರುವ ಮಕ್ಕಳಿಗೆಲ್ಲ ಇದನ್ನು ನೇಯುವುದನ್ನೂ ಕಲಿಸಿರುತ್ತಾರೆ. ಚೌಕಾಕಾರದಲ್ಲಿದ್ದರೆ ಚೌಕ ಅಂತಲೇ ಕರೆಯೋದು. ಬಿಳಿ ಬಣ್ಣದ್ದಿದ್ದರಂತೂ ಒಂದ್ಹತ್ತು ಸಲ ಹೇಳ್ತಾರೆ. ಬೀಳಿಸಿಕೊಂಡು ಬರಬೇಡಿ ಅಂತ. ಆ ಮೇಲುವಸ್ತ್ರ ಐದಾರು ಮನೆ ಓಡಾಡುವುದರಲ್ಲಿ ಅದನ್ನು ಮುಟ್ಟಿದರೂ ಅವಲಕ್ಕಿ, ಉಂಡೆಯ ವಾಸನೆ ಬೀರುವಂತಾಗಿರುತ್ತದೆ. ಐದಾರು ಮನೆಗಳಿಗೆ ಈ ಫಳಾರವನ್ನು ಮನೆ ಮಗಳು, ಹೊಸದಾಗಿ ಬಂದಿರುವ ಸೊಸೆಯ ಕೈಲಿ ಬೀರಿಸುತ್ತಾರೆ. ಹಬ್ಬಗಳಿರುವುದೇ ಹಂಚಿ ಉಣ್ಣಲು. ಹೀಗೆ ಹಂಚಿ ತಿನ್ನುವ ಸುಖದಲ್ಲಿ ಕೆಲವು ಖಾದ್ಯಗಳು ಕಣ್ಮರೆಯಾಗಿವೆ. ಹೊಸ ಖಾದ್ಯಗಳು ಸ್ಥಳ ಪಡೆದಿವೆ. ಆದರೆ ಬಾಂಧವ್ಯ ಬೆಸೆಯುವಲ್ಲಿ ಈ ಫಳಾರ ಈಗಲೂ ಬದುಕು ಸವಿಯುವಂತೆ ಮಾಡುತ್ತದೆ.

ರುಚಿ ರುಚಿಯಾದ ಖಾರದವಲಕ್ಕಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.