ಸಾಮಾನ್ಯವಾಗಿ ಕೆಂಪು ಮೂತಿಯ ಮಂಗಗಳ ಬಗ್ಗೆ ಕೇಳಿರುತ್ತೀರಿ. ಆದರೆ, ಇಲ್ಲೊಂದು ವಿಶಿಷ್ಟ ಬಗೆಯ ಕೆಂಪು ಎದೆಯ ಮಂಗವೊಂದು ಇದೆ. ಇದನ್ನು ಗೆಲಾಡ್ಸ್ ಎನ್ನುತ್ತಾರೆ. ಇದರ ವೈಜ್ಞಾನಿಕ ಹೆಸರು ಥಿಯರೊಪಿಥಿಕಸ್ ಗೆಲಾಡ (Theropithecus gelada). ಇದು ಸರ್ಕೊಪಿಥಿಸಿಡಾ (Cercopithecidae) ಗುಂಪಿಗೆ ಸೇರಿದೆ. ಇದರ ಬಗ್ಗೆ ಇಂದಿನ ಪ್ರಾಣಿ ಪ್ರಪಂಚದಲ್ಲಿ ತಿಳಿದುಕೊಳ್ಳೋಣ.
ಹೇಗಿರುತ್ತೆ
ಉದ್ದ ಕೂದಲಿನ, ಮಧ್ಯಮ ಗಾತ್ರದ ಈ ಮಂಗವು ಚೂಪು ಉಗುರುಗಳನ್ನು ಹೊಂದಿರುತ್ತದೆ. ಮೈತುಂಬ ಕಂದುಬಣ್ಣದ ನೀಳ ಕೂದಲುಗಳಿದ್ದರೆ, ಅದರ ಅಂಚಿನಲ್ಲಿ ಬಂಗಾರ ಬಣ್ಣದ ಕೂದಲುಗಳಿರುತ್ತವೆ. ತಲೆಯ ಮೇಲೆಯೂ ದಟ್ಟವಾದ ಬಂಗಾರ ಬಣ್ಣದ ಕೂದಲುಗಳಿದ್ದು, ಟೋಪಿಯಂತೆ ಕಾಣುತ್ತದೆ. ಈ ಪ್ರಾಣಿಯ ವಿಶಿಷ್ಟತೆಯೆಂದರೆ ಎದೆಯ ಭಾಗದಲ್ಲಿ ಮರಳು ಗಡಿಯಾರ ಆಕಾರದ ಕೆಂಪು ಬಣ್ಣದ ಚರ್ಮವಿರುತ್ತದೆ. ಈ ಭಾಗದಲ್ಲಿ ಕೂದಲು ಇರುವುದಿಲ್ಲ. ಇದು ಕೆಂಪು ಬಣ್ಣದ ಆಭರಣದಂತೆ ಕಂಡುಬರುತ್ತದೆ. ಕಂದು ಬಣ್ಣದ ಕಂಗಳಿದ್ದು, ಮೂತಿ ಕಪ್ಪು ಬಣ್ಣದಲ್ಲಿರುತ್ತದೆ. ಕಣ್ಣಿನ ಮೇಲ್ಭಾಗದಲ್ಲಿ ಕೆಂಪು ಬಣ್ಣದ ಚರ್ಮವಿರುತ್ತದೆ.
ಎಲ್ಲಿರುತ್ತೆ
ಹೆಚ್ಚಾಗಿ ಈ ಮಂಗಗಳು ಎತ್ತರದ ಇಥೋಪಿಯನ್ ಶಿಖರಗಳಲ್ಲಿ ಕಾಣಸಿಗುತ್ತವೆ. ಸಮುದ್ರ ಮಟ್ಟದಿಂದ ಐದು ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ವಾಸಿಸುತ್ತದೆ. ಗೆಲಾಡಗಳಿಗೆ ಶಿಖರಗಳೆಂದರೆ ಬಹಳ ಇಷ್ಟ.
ಆಹಾರ ಪದ್ಧತಿ
ಮಂಗಗಳು ಹುಲ್ಲನ್ನು ಹೆಚ್ಚಾಗಿ ತಿನ್ನುತ್ತದೆ. ಇದು ಬಿಟ್ಟರೆ ಗಡ್ಡೆಗಳು, ವಿವಿಧ ಬಗೆಯ ಹೂವುಗಳು, ಸಸ್ಯಗಳನ್ನು ತಿನ್ನುತ್ತವೆ. ಬೇಸಿಗೆಯಲ್ಲಿ ಮೇವಿನ ಕೊರತೆ ಉಂಟಾದರೆ ಹಣ್ಣುಗಳು, ಬೀಜಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ.
ಸಂತಾನೋತ್ಪತ್ತಿ
ಗಂಡು ಗೆಲಾಡ್ಸ್ ಮಂಗಗಳಿಗಿಂತ ಮೂರನೇ ಒಂದು ಭಾಗದಷ್ಟು ಹೆಣ್ಣು ಗೆಲಾಡ್ಸ್ ಮಂಗಗಳಿವೆ. ಹಾಗಾಗಿ ಇದು ಬಹುಸಂಗಾತಿಗಳನ್ನು ಹೊಂದಬಲ್ಲ ಪ್ರಾಣಿ. ಮೂರು ವರ್ಷಕ್ಕೆ ಪ್ರಾಯಕ್ಕೆ ಬರುತ್ತದೆ. ಇದಾಗಿ ಒಂದು ವರ್ಷಕ್ಕೆ ಮರಿಗಳನ್ನು ಹಾಕುತ್ತದೆ. ಕೆಂಪುಮೂತಿಯ, ಕಪ್ಪು ಕೂದಲಿನ, ಮುಚ್ಚಿದ ಕಣ್ಣುಗಳ ಮರಿಗಳನ್ನು ತಾಯಿ ಮಂಗವೂ ಜೋಪಾನ ಮಾಡುತ್ತದೆ. ಐದು ವಾರಗಳ ಕಾಲ ಮರಿಯು ತಾಯಿ ಮಂಗದ ಹೊಟ್ಟೆಯ ಭಾಗದಲ್ಲಿ ಅಡಗಿಕೊಂಡೇ ಕುಳಿತಿರುತ್ತದೆ. ನಂತರ ಬೆನ್ನೇರುತ್ತದೆ.
ವರ್ತನೆ
ಇದು ಗುಂಪಿನಲ್ಲಿ ವಾಸಿಸಲು ಇಷ್ಟಪಡುವ ಮಂಗ. ಹಗಲಿನಲ್ಲಿ ಹೆಚ್ಚು ಚುರುಕಾಗಿರುತ್ತದೆ. ಸುಮಾರು 30 ಬಗೆಯ ಧ್ವನಿಗಳನ್ನು ಹೊರಡಿಸುವ ಸಾಮರ್ಥ್ಯ ಇದಕ್ಕಿದೆ. ಕೋಪ ತಾಪ, ಸಂತಾನೋತ್ಪತ್ತಿ ಸಂದರ್ಭ, ಅಪಾಯಕಾರಿ ಸ್ಥಿತಿ, ಸಂವಹನಕ್ಕಾಗಿ ಹೀಗೆ ಹಲವು ಸಂದರ್ಭಗಳಲ್ಲಿ ವಿಶಿಷ್ಟ ಧ್ವನಿಗಳನ್ನು ಹೊರಡಿಸುತ್ತದೆ. ದಿನವಿಡೀ ಆಹಾರವನ್ನು ಅರಸುವುದು ಮತ್ತು ಇತರೆ ಪ್ರಾಣಿಗಳೊಂದಿಗೆ ಆಟವಾಡುವುದರಲ್ಲಿಯೇ ಕಳೆಯುತ್ತದೆ.
ಸ್ವಾರಸ್ಯಕರ ಸಂಗತಿಗಳು
* ಹುಲ್ಲು ಮೇಯುವ ಮಂಗಗಳೆಂದರೆ ಗೆಲಾಡ್ಸ್ ಮಾತ್ರ. ಇದನ್ನು ರಕ್ತಸ್ರಾವ ಹೃದಯದ ಮಂಗವೆಂದೂ ಕರೆಯಲಾಗುತ್ತದೆ.
*ಹುಲ್ಲನ್ನು ಕೊಯ್ಯಲು ತನ್ನ ತೋರುಬೆರಳನ್ನು ಬಳಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.