ADVERTISEMENT

ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2023, 20:30 IST
Last Updated 6 ಡಿಸೆಂಬರ್ 2023, 20:30 IST
   

* ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಯನ್ನು ಬಹುರಾಷ್ಟ್ರೀಯ ರಫ್ತು ನಿಯಂತ್ರಣ ವ್ಯವಸ್ಥೆ ಎಂದು ಕರೆಯಬಹುದು.

* ಈ ವ್ಯವಸ್ಥೆಯಲ್ಲಿ ಸದಸ್ಯತ್ವ ಇರುವ ಸದಸ್ಯ ರಾಷ್ಟ್ರಗಳು ಅನೌಪಚಾರಿಕ ರಾಜಕೀಯ ಒಪ್ಪಂದಕ್ಕೆ ಬದ್ಧರಾಗಿದ್ದು ಕ್ಷಿಪಣಿ ತಂತ್ರಜ್ಞಾನವನ್ನು ಹಾಗೂ ಕ್ಷಿಪಣಿಗಳ ಪ್ರಸರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.

ಸ್ಥಾಪನೆ

ADVERTISEMENT

* ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಯನ್ನು 1987 ರಲ್ಲಿ ಸ್ಥಾಪಿಸಲಾಯಿತು. ಈ ವ್ಯವಸ್ಥೆಯನ್ನು ಜಿ-7 ಒಕ್ಕೂಟದ ಸದಸ್ಯ ರಾಷ್ಟ್ರಗಳು ಪ್ರಾರಂಭಿಸಿದವು.

* ಜಿ-7 ಸದಸ್ಯ ರಾಷ್ಟ್ರಗಳು ಎಂದರೆ ಅತಿ ಹೆಚ್ಚಿನ ಪ್ರಮಾಣದ ಕೈಗಾರಿಕರಣ ಹೊಂದಿರುವ ರಾಷ್ಟ್ರಗಳು ಎಂದು ಪರಿಗಣಿಸಬಹುದು. ಅವುಗಳೆಂದರೆ ಅಮೇರಿಕ , ಯುನೈಟೆಡ್ ಕಿಂಗ್ಡಮ್, ಕೆನಡಾ, ಫ್ರಾನ್ಸ್, ಜರ್ಮನಿ, ಜಪಾನ್ ಮತ್ತು ಇಟಲಿ ರಾಷ್ಟ್ರಗಳು.

* ಈ ವ್ಯವಸ್ಥೆಯನ್ನು ಅಣು ಶಸ್ತ್ರಾಸ್ತ್ರಗಳ, ಕ್ಷಿಪಣಿಗಳ ಹಾಗೂ ಮಾನವರಹಿತ ಹಾರಾಡುವ ಯಂತ್ರಗಳ ಪ್ರಸರಣವನ್ನು ತಡೆಗಟ್ಟುವ ಉದ್ದೇಶದಿಂದ ಜಾರಿಗೆ ತರಲಾಯಿತು.

ವಿಶೇಷ ಸೂಚನೆ 300 ಕಿಲೋಮೀಟರ್‌ಗಿಂತ ಹೆಚ್ಚು ವ್ಯಾಪ್ತಿಯನ್ನು ಹೊಂದಿರುವ ಕ್ಷಿಪಣಿಗಳು ಹಾಗೂ 500 ಕೆಜಿಗಿಂತ ಹೆಚ್ಚು ತೂಕವನ್ನು ಹೊತ್ತೊಯ್ಯಬಲ್ಲ ಕ್ಷಿಪಣಿಗಳ ಮೇಲೆ ಹಾಗೂ ಕ್ಷಿಪಣಿ ವ್ಯವಸ್ಥೆಗಳ ಮೇಲೆ  ಸ್ವಯಂ ಪ್ರೇರಣೆಯಿಂದ ಸದಸ್ಯ ರಾಷ್ಟ್ರಗಳು ನಿರ್ಬಂಧ ಹೇರಿ ಕೊಳ್ಳುತ್ತವೆ.

* ಪ್ರಸ್ತುತ ಈ ವ್ಯವಸ್ಥೆಯಲ್ಲಿ 35 ರಾಷ್ಟ್ರಗಳು ಸದಸ್ಯತ್ವವನ್ನು ಹೊಂದಿದ್ದು ಭಾರತವು ಕೂಡ ಈ ವ್ಯವಸ್ಥೆಯಲ್ಲಿ ಸದಸ್ಯತ್ವವನ್ನು ಹೊಂದಿದೆ.

ಸದಸ್ಯ ರಾಷ್ಟ್ರಗಳು ಮತ್ತು ಸದಸ್ಯತ್ವ ಪಡೆದ ವರ್ಷ

* ಕೆನಡಾ, ಫ್ರಾನ್ಸ್, ಇಟಲಿ, ಜಪಾನ್, ಜರ್ಮನಿ, ಯುನೈಟೆಡ್ ಕಿಂಗ್ಡಮ್ ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನ ರಾಷ್ಟ್ರಗಳು 1987 ರಲ್ಲಿ ಸದಸ್ಯತ್ವವನ್ನು ಪಡೆದುಕೊಂಡವು. ಈ ರಾಷ್ಟ್ರಗಳನ್ನು ಸಂಸ್ಥಾಪಕ ರಾಷ್ಟ್ರಗಳು ಎಂದು ಪರಿಗಣಿಸಬಹುದು.

* ಆಸ್ಟ್ರೇಲಿಯಾ, ಬೆಲ್ಜಿಯಂ, ಡೆನ್ಮಾರ್ಕ್, ಲಕ್ಸಂಬೋರ್ಗ್, ನೆದರ್ಲೆಂಡ್‌, ನಾರ್ವೆ, ಸ್ಪೇನ್ ರಾಷ್ಟ್ರಗಳು 1990 ರಲ್ಲಿ ಸದಸ್ಯತ್ವ ಪಡೆದುಕೊಂಡವು.

* ಆಸ್ಟ್ರಿಯ, ಫಿನ್ಲೆಂಡ್‌, ನ್ಯೂಜಿಲೆಂಡ್‌, ಸ್ವೀಡನ್ ರಾಷ್ಟ್ರಗಳು ಈ ವ್ಯವಸ್ಥೆಯ ಸದಸ್ಯತ್ವವನ್ನು 1991 ರಲ್ಲಿ ಪಡೆದುಕೊಂಡವು.

* ಗ್ರೀಸ್, ಐರ್ಲೆಂಡ್‌, ಪೋರ್ಚುಗಲ್ ಹಾಗೂ ಸ್ವಿಟ್ಜರ್ಲೆಂಡ್‌ ರಾಷ್ಟ್ರಗಳು 1992 ರಲ್ಲಿ ಈ ವ್ಯವಸ್ಥೆಯ ಸದಸ್ಯತ್ವವನ್ನು ಪಡೆದುಕೊಂಡವು.

* ಅರ್ಜೆಂಟಿನಾ, ಹಂಗರಿ ಮತ್ತು ಐಸ್ಲ್ಯಾಂಡ್ ರಾಷ್ಟ್ರಗಳು 1993 ರಲ್ಲಿ ಸದಸ್ಯತ್ವವನ್ನು ಪಡೆದುಕೊಂಡವು.

* ಬ್ರೆಜಿಲ್, ರಷ್ಯಾ ಒಕ್ಕೂಟ ಹಾಗೂ ದಕ್ಷಿಣ ಆಫ್ರಿಕಾ ಈ ವ್ಯವಸ್ಥೆಯ ಸದಸ್ಯತ್ವವನ್ನು 1995 ರಲ್ಲಿ ಪಡೆದುಕೊಂಡವು.

* 1997 ರಲ್ಲಿ ಟರ್ಕಿ ಸದಸ್ಯತ್ವವನ್ನು ಪಡೆದುಕೊಂಡಿತು.

* ಚೆಕ್ ರಿಪಬ್ಲಿಕ್, ಪೋಲೆಂಡ್ ಹಾಗೂ ಉಕ್ರೇನ್ ರಾಷ್ಟ್ರಗಳು 1998 ರಲ್ಲಿ ಈ ವ್ಯವಸ್ಥೆಯ ಸದಸ್ಯತ್ವವನ್ನು ಪಡೆದುಕೊಂಡವು.

* ದಕ್ಷಿಣ ಕೊರಿಯಾ ಈ ವ್ಯವಸ್ಥೆಯ ಸದಸ್ಯತ್ವವನ್ನು 2001 ರಲ್ಲಿ ಪಡೆದುಕೊಂಡಿತು.

* 2004 ರಲ್ಲಿ ಬಲ್ಗೇರಿಯ ಈ ವ್ಯವಸ್ಥೆಯ ಸದಸ್ಯತ್ವವನ್ನು ಪಡೆದುಕೊಂಡಿತು.

* ಅಂತಿಮವಾಗಿ 2016 ರಲ್ಲಿ ಭಾರತ ಈ ವ್ಯವಸ್ಥೆಯ ಸದಸ್ಯತ್ವವನ್ನು ಪಡೆದುಕೊಂಡಿತು.

ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ ಮತ್ತು ಭಾರತ
ಭಾರತ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಯ ಸದಸ್ಯತ್ವವನ್ನು ಅಪೇಕ್ಷಿಸಿ ಜೂನ್ 2015 ರಲ್ಲಿ ಅರ್ಜಿಯನ್ನು ಸಲ್ಲಿಸಿತು. ಭಾರತ ಸರ್ಕಾರ ಅರ್ಜಿಯನ್ನು ಸಲ್ಲಿಸಿದ ನಂತರ ಭಾರತ ಸರ್ಕಾರದ ಅರ್ಜಿಯನ್ನು ಅಮೆರಿಕ ಮತ್ತು ಫ್ರಾನ್ಸ್ ರಾಷ್ಟ್ರಗಳು ಬೆಂಬಲಿಸಿದವು.

ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಯ ಉದ್ದೇಶಗಳು

* ಈ ವ್ಯವಸ್ಥೆಯು ಅನೌಪಚಾರಿಕ ರಾಜಕೀಯ ಒಪ್ಪಂದವಾಗಿದೆ.  ಈ ಒಪ್ಪಂದದ ಅಂಶಗಳು ಸದಸ್ಯ ರಾಷ್ಟ್ರಗಳ ಮೇಲೆ ಕಾನೂನಾತ್ಮಕ ಬದ್ಧತೆಯನ್ನು ಹೊಂದಿರುವುದಿಲ್ಲ.

* 35 ಸದಸ್ಯ ರಾಷ್ಟ್ರಗಳು ಇದ್ದು ಭಾರತವೂ ಸದಸ್ಯ ರಾಷ್ಟ್ರಗಳಲ್ಲಿ ಒಂದಾಗಿದೆ. ಚೀನಾ ಮತ್ತು ಪಾಕಿಸ್ತಾನ  ಸದಸ್ಯತ್ವ ಹೊಂದಿರುವುದಿಲ್ಲ.

* ಈ ವ್ಯವಸ್ಥೆಗೆ ಸೇರಿದ ನಂತರ ಪ್ರತಿಯೊಂದು ಸದಸ್ಯ ರಾಷ್ಟ್ರ, ರಾಷ್ಟ್ರ ಮಟ್ಟದ ರಫ್ತು ನಿಯಂತ್ರಣ ನೀತಿಯನ್ನು ಜಾರಿಗೆ ತರಬೇಕಾಗುತ್ತದೆ.

* ಬ್ಯಾಲೆಸ್ಟಿಕ್ ಕ್ಷಿಪಣಿಗಳು, ಮಾನವರಹಿತ ಹಾರಾಟ ವಾಹನಗಳು, ಉಪಗ್ರಹ ಉಡಾವಣಾ ವಾಹನಗಳು, ಶಬ್ದಕ್ಕಿಂತ ವೇಗವಾಗಿ ಸಂಚರಿಸುವ ಕ್ಷಿಪಣಿಗಳು, ಡ್ರೋನ್ ಗಳು ಹಾಗೂ ಇನ್ನಿತರೆ ಶಸ್ತ್ರಾಸ್ತ್ರಗಳ ಹಾಗೂ ಸಾಧನೆಗಳ ಬಿಡಿ ಭಾಗಗಳನ್ನು ಅಥವಾ ತಂತ್ರಜ್ಞಾನವನ್ನು ವರ್ಗಾವಣೆ ಮಾಡುವಾಗ ಒಂದು ಕ್ರಮಬದ್ಧ ಕಾರ್ಯನೀತಿಯನ್ನು ಅನುಷ್ಠಾನಕ್ಕೆ ತರಬೇಕಾಗುತ್ತದೆ.

* ಪ್ರತಿ ಸದಸ್ಯ ರಾಷ್ಟ್ರ ಯಾವುದೇ ರಾಷ್ಟ್ರಕ್ಕೆ ಕ್ಷಿಪಣಿಗಳನ್ನು ರಫ್ತು ಮಾಡುವಾಗ ಅಥವಾ ಕ್ಷಿಪಣಿ ವ್ಯವಸ್ಥೆಯ ತಂತ್ರಜ್ಞಾನವನ್ನು ರಫ್ತು ಮಾಡುವಾಗ, ಕೆಳಗಿನ ಐದು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ.

1. ತಂತ್ರಜ್ಞಾನವನ್ನು ಅಥವಾ ಕ್ಷಿಪಣಿಯನ್ನು ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರ ಸಾಮೂಹಿಕ ವಿನಾಶಕ್ಕೆ ಬಳಸುವ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಇದೆಯೇ ಅಥವಾ ಇಚ್ಛೆಯನ್ನು ಹೊಂದಿರುವ ರಾಷ್ಟ್ರವೇ ಎಂದು ತಿಳಿದುಕೊಳ್ಳತಕ್ಕದ್ದು.

2. ಆಮದುಮಾಡಿಕೊಳ್ಳುತ್ತಿರುವ ರಾಷ್ಟ್ರದ ಬಾಹ್ಯಾಕಾಶ ಕಾರ್ಯಕ್ರಮಗಳ ಮತ್ತು ಕ್ಷಿಪಣಿ ಕಾರ್ಯಕ್ರಮಗಳ ಸ್ಪಷ್ಟ ಅರಿವಿರಬೇಕು ಹಾಗೂ ಅವುಗಳ ಉದ್ದೇಶಗಳ ಬಗ್ಗೆ ಸ್ಪಷ್ಟತೆ ಇರಬೇಕು.

3. ವರ್ಗಾವಣೆಯಿಂದ ತಂತ್ರಜ್ಞಾನವನ್ನು ಆಮದು ಮಾಡಿಕೊಂಡ ರಾಷ್ಟ್ರ ಜಾಗತಿಕ ಮಟ್ಟದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ನಿಟ್ಟಿನಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿ ಕೊಳ್ಳಬಹುದು ಎನ್ನುವುದರ ಬಗ್ಗೆ ಸ್ಪಷ್ಟತೆ ಇರಬೇಕು.

4. ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರದ ಉದ್ದೇಶ ಮತ್ತು ಹಿನ್ನೆಲೆಯ ಬಗ್ಗೆ ಸ್ಪಷ್ಟತೆ ಇರಬೇಕು.

5. ವರ್ಗಾವಣೆಯಿಂದ ಯಾವುದಾದರೂ ಬಹುರಾಷ್ಟ್ರೀಯ ಒಪ್ಪಂದಗಳ ಉಲ್ಲಂಘನೆ ಆಗುತ್ತಿದೆಯೇ ಎನ್ನುವುದರ ಬಗ್ಗೆ ಸ್ಪಷ್ಟತೆ ಇರಬೇಕು.

ಪ್ರಯೋಜನಗಳು

* ಬಾಹ್ಯಾಕಾಶ ತಂತ್ರಜ್ಞಾನ ವಲಯದಲ್ಲಿ ಭಾರತ ಕ್ರಯೋಜೆನಿಕ್ ಇಂಜಿನ್ ಅಭಿವೃದ್ಧಿಯಲ್ಲಿ ಹೆಚ್ಚಿನ ಪ್ರಮಾಣದ ಬೆಳವಣಿಗೆಯನ್ನು ಕಂಡಿಲ್ಲ. ಭಾರತ ಈ ವ್ಯವಸ್ಥೆಯ ಭಾಗವಾದ ನಂತರ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಮತ್ತಷ್ಟು ಉತ್ತೇಜನ ದೊರಕುತ್ತದೆ.

* ಭಾರತ ಈ ವ್ಯವಸ್ಥೆಯ ಭಾಗವಾದ ನಂತರ ಭಾರತ ಮತ್ತು ರಷ್ಯಾ ಸರ್ಕಾರಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯನ್ನು ರಫ್ತು ಮಾಡಲು ಸಹಕಾರಿಯಾಗುತ್ತದೆ.

ವಿಶೇಷ ಸೂಚನೆ – ಇದರ ಆಧಾರದ ಮೇಲೆ ಭಾರತ ಬ್ರಹ್ಮೋಸ್ ಕ್ಷಿಪಣಿಗಳನ್ನು ಈಗಾಗಲೇ ವಿಯೆಟ್ನಾಮ್ ಮತ್ತು ಫಿಲಿಪೈನ್ಸ್ ರಾಷ್ಟ್ರಗಳಿಗೆ ರಫ್ತು ಮಾಡಿದೆ.

* ಭಾರತ ಈ ವ್ಯವಸ್ಥೆಯ ಭಾಗವಾದ ನಂತರ ಇಸ್ರೇಲ್ ರಾಷ್ಟ್ರದಲ್ಲಿ ತಯಾರಾಗಿರುವ ‘‘Arrow 11’’ ಕ್ಷಿಪಣಿ ವ್ಯವಸ್ಥೆಯನ್ನು ಕೊಂಡುಕೊಳ್ಳಲು ಅರ್ಹತೆಯನ್ನು ಪಡೆದಿದೆ. ಇದಲ್ಲದೆ ಭಾರತವು ಕೂಡ ಮುಂದಿನ ದಿನಗಳಲ್ಲಿ ಬ್ಯಾಲೆಸ್ಟಿಕ್ ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಉಪಯುಕ್ತವಾಗುತ್ತದೆ.

* ಭಾರತ ಸರ್ಕಾರದ ಮಹೋನ್ನತ ಯೋಜನೆಯಾದ ಭಾರತದಲ್ಲಿ ತಯಾರಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಉತ್ತೇಜನ ದೊರಕಿದಂತಾಗುತ್ತದೆ.

* ಭಾರತ ಅಮೆರಿಕ ಸಂಯುಕ್ತ ಸಂಸ್ಥಾನದಿಂದ ಪರಿವೀಕ್ಷಣೆ ಡ್ರೋನ್ ಗಳನ್ನು ಪಡೆದುಕೊಳ್ಳಲು ಸಹಕಾರಿಯಾಗಿದೆ.

* ಬಹುತೇಕ ಎಲ್ಲ ಜಾಗತಿಕ ಮಟ್ಟದ ವೇದಿಕೆಗಳಲ್ಲಿ ಮತ್ತು ಪ್ರಾದೇಶಿಕ ಮಟ್ಟದ ವೇದಿಕೆಗಳಲ್ಲಿ ಭಾರತ ಸರ್ಕಾರ ಸದಸ್ಯತ್ವವನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದ ವೇದಿಕೆಗಳಲ್ಲಿ ಮತ್ತಷ್ಟು ಸಕ್ರಿಯವಾಗಿ ಕಾರ್ಯ ಪ್ರವೃತ್ತವಾಗುವ ಎಲ್ಲಾ ಗುಣಲಕ್ಷಣಗಳು ಕಂಡುಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.