ಹಬ್ಬದ ಫ್ಯಾಷನ್ ಎಂದರೆ ಸಹಜವಾಗಿ ಮಹಿಳೆಯರಿಗೆ ಸೀರೆ, ಲಂಗ, ದಾವಣಿಗಳು ಕಾಣಿಸುತ್ತವೆ. ಪುರುಷರಿಗೆ ಪಂಚೆ, ಧೋತಿ, ಶರ್ಟ್, ಕುರ್ತಾಗಳು ಹಬ್ಬದ ಉಡುಗೆಗಳಾಗಿವೆ. ಭಾರತದಲ್ಲಿ ಒಂದೊಂದು ರಾಜ್ಯಗಳಲ್ಲಿ ಒಂದೊಂದು ರೀತಿಯ ಪಂಚೆಗಳು ಕಾಣಸಿಗುತ್ತವೆ. ಕರ್ನಾಟಕವನ್ನೇ ತೆಗೆದುಕೊಂಡರೂ ಇಲ್ಲಿನ ಪಂಚೆಗಳಲ್ಲಿಯೂ ಭಿನ್ನತೆಯಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಳಸುವ ಪಂಚೆಗಳು ಮತ್ತು ಉಡುವ ಶೈಲಿ ಎರಡೂ ವಿಭಿನ್ನವಾಗಿದೆ. ಕಚ್ಚೆಪಂಚೆ ಉತ್ತರ ಕರ್ನಾಟಕದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ. ನಾಲ್ಕು ಮಳ, ಎಂಟು ಮಳ ಗಾತ್ರದ ಪಂಚೆಯನ್ನು ಇಲ್ಲಿನ ಗಂಡಸರು ಕಚ್ಚೆಯ ರೀತಿಯಲ್ಲಿ ಉಡುತ್ತಾರೆ.
ರಾಜಾಸ್ಥಾನ, ಗುಜರಾತ್, ಬಿಹಾರ, ಪಂಜಾಬ್, ಪಶ್ಚಿಮ ಬಂಗಾಳ, ಉತ್ತರಪ್ರದೇಶ ಮುಂತಾದೆಡೆಗಳಲ್ಲಿಯೂ ದಿನನಿತ್ಯ ಇದೇ ಮಾದರಿಯಲ್ಲಿ ಪಂಚೆ ಉಡುವವರು ಕಾಣಸಿಗುತ್ತಾರೆ. ತಮಿಳುನಾಡಿನಲ್ಲಿ ಅಡ್ಡಪಂಚೆ ಸಾಮಾನ್ಯ. ಇಲ್ಲಿ ರಾಜಕಾರಣಿಗಳು ಅಡ್ಡಪಂಚೆ ಉಡುತ್ತಾರೆ. ಮಲೆನಾಡು, ಮೈಸೂರು ಭಾಗದಲ್ಲಿಯೂ ಅಡ್ಡಪಂಚೆ ಬಳಕೆ ಸಾಮಾನ್ಯ. ‘ಕಚ್ಚೆಗೆ ಬಳಸುವ ಪಂಚೆಯ ಬಟ್ಟೆ ಶೈಲಿ, ಮಾದರಿಗೂ ಅಡ್ಡಪಂಚೆಯ ಬಟ್ಟೆಯ ವಿನ್ಯಾಸಕ್ಕೂ ಬಹಳ ವ್ಯತ್ಯಾಸವಿದೆ. ಅಡ್ಡಪಂಚೆಯಲ್ಲಿ ಅಂಚಿಗೆ ಪ್ರಾಮುಖ್ಯವರುತ್ತದೆ. ಬೇರೆ ಬೇರೆ ರೀತಿಯ ಅಂಚುಗಳೊಂದಿಗೆ ಅಡ್ಡಪಂಚೆ ಬರುತ್ತದೆ. ಆದರೆ ಸಾಟಿ ಪಂಚೆ ಅಥವಾ ಕಚ್ಚೆ ಪಂಚೆ ಉದ್ದವಿದ್ದು, ನೇರಿಗೆ ಅಥವಾ ಮಡಿಕೆ ಮಾಡಲು ಸೂಕ್ತವಾಗಿರುತ್ತದೆ’ ಎನ್ನುತ್ತಾರೆ ರಾಮರಾಜ್ ಕಾಟನ್‌ನ ಸ್ಥಾಪಕ ಮತ್ತು ಅಧ್ಯಕ್ಷರಾದ ಕೆ.ಆರ್.ನಾಗರಾಜ್.
ಕರ್ನಾಟಕದಲ್ಲಿಯೂ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಜೆಎಚ್ ಪಟೇಲ್ ಪಂಚೆಯಲ್ಲಿಯೇ ಕಾಣಿಸಿಕೊಂಡವರು. ತಮಿಳುನಾಡು, ಆಂಧ್ರಪ್ರದೇಶ, ಕೇರಳದ ಹೆಚ್ಚುಕಮ್ಮಿ ಎಲ್ಲಾ ಮುಖ್ಯಮಂತ್ರಿಗಳು ಪಂಚೆಯಲ್ಲಿಯೇ ಕಾಣಿಸಿಕೊಂಡಿದ್ದು ಹೆಚ್ಚು.
ಯಶ್, ರಿಷಭ್ ಶೆಟ್ಟಿಯಂತಹ ಪ್ರಮುಖ ನಟರು ಪಂಚೆಯಲ್ಲಿ ಕಾಣಿಸಿಕೊಂಡ ಬಳಿಕ ಈ ಪಂಚೆ ಟ್ರೆಂಡ್ ಯುವ ಸಮೂಹವನ್ನು ವ್ಯಾಪಿಸಿದೆ. ನವರಾತ್ರಿ ಸಮಯದಲ್ಲಿ ಪಂಚೆ ಅತ್ಯವಶ್ಯ ಧಿರಿಸು. ಹೀಗಾಗಿ ಮಾರಾಟವೂ ಹೆಚ್ಚು ಎನ್ನುತ್ತಾರೆ ನಾಗರಾಜ್.
ಕನ್ನಡದಲ್ಲಿ ಪಂಚೆ, ಧೋತಿ ಎಂದರೆ, ತೆಲುಗಿನಲ್ಲಿ ಪಂಚ, ತಮಿಳಿನಲ್ಲಿ ವೇಷ್ಟಿ, ಪಂಜಾಬ್‌ನಲ್ಲಿ ಲಾಚಾ, ಬಿಹಾರದಲ್ಲಿ ಮರ್ದಾನಿ, ಮರಾಠಿಯಲ್ಲಿ ಧೋತರ್, ಮಲಯಾಳಂನಲಿ ಮುಂಡು, ಕೊಂಕಣಿಯಲ್ಲಿ ಅಂಗೋಸ್ತರ್, ಬಂಗಾಳಿಯಲ್ಲಿ ಧುತಿ, ಆಸ್ಸಾಮಿಯಲ್ಲಿ ಸುರಿಯಾ, ಗುಜರಾತಿಯಲ್ಲಿ ಧೋತಿಯು, ಓರಿಯಾದಲ್ಲಿ ಧೋತಿ ಎನ್ನುತ್ತಾರೆ. ಕೇರಳದಲ್ಲಿ ಓಣಂಗೆ ಪಂಚೆ ಬೇಕೇ ಬೇಕು. ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಗೆ ಪಂಚೆ ಕಡ್ಡಾಯ ದಿರಿಸು. ತಮಿಳುನಾಡಿನಲ್ಲಿ ಪೊಂಗಲ್‌ಗೆ ಪಂಚೆ, ಶಾಲು ಯೂನಿಫಾರಂ!
‘ಸಾಂಪ್ರದಾಯಿಕ ಉಡುಪುಗಳನ್ನು ಧರಿಸುವುದರಿಂದ ಹಿಡಿದು ಆಚರಣೆಗಳವರೆಗೆ, ಅವರ ಪಾಲ್ಗೊಳ್ಳುವಿಕೆಯು ನಮ್ಮ ಸಾಂಸ್ಕೃತಿಕ ಪರಂಪರೆಯ ನಿರಂತರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇಂದಿನ ಆಧುನಿಕ ಜಗತ್ತಿನಲ್ಲಿ ಈ ಶತಮಾನಗಳಷ್ಟು ಹಳೆಯದಾದ ಅಭ್ಯಾಸಗಳು ಹೇಗೆ ಅಭಿವೃದ್ಧಿ ಹೊಂದುತ್ತವೆ ಎಂಬುದನ್ನು ನೋಡುವುದು ಸ್ಫೂರ್ತಿದಾಯಕವಾಗಿದೆ. ರಾಮರಾಜ್‌ನಲ್ಲಿ ನಾವು ಯಾವಾಗಲೂ ಧೋತಿಯನ್ನು ಭಾರತೀಯ ಸಂಪ್ರದಾಯದ ಪ್ರಮುಖ ಭಾಗವಾಗಿ ಜನಪ್ರಿಯಗೊಳಿಸಲು ಶ್ರಮಿಸಿದ್ದೇವೆ. ಪ್ರಸಿದ್ಧ ನಟರನ್ನು ರಾಯಭಾರಿಯಾಗಿಸುವ ಮೂಲಕ ಯುವಕರಲ್ಲಿ ಪಂಚೆ ಕುರಿತು ಆಸಕ್ತಿ ಮೂಡಿಸುವ ಯತ್ನ ಮಾಡಿದ್ದೇವೆ. 50, 000ಕ್ಕೂ ಹೆಚ್ಚು ನೇಕಾರರು ಮತ್ತು ಅವರ ಕುಟುಂಬಗಳ ಬೆಂಬಲದೊಂದಿಗೆ, ನಮ್ಮ ಪ್ರಯಾಣವು ಗುಣಮಟ್ಟದ ಸಾಂಪ್ರದಾಯಿಕ ಉಡುಗೆಗಳನ್ನು ನೀಡುವುದಷ್ಟೇ ಅಲ್ಲ, ಕುಶಲಕರ್ಮಿಗಳ ಸಬಲೀಕರಣ ಮತ್ತು ಭಾರತದ ಶ್ರೀಮಂತ ಕರಕುಶಲತೆಯನ್ನು ಸಂರಕ್ಷಿಸುವ ಕೆಲಸವೂ ಹೌದು’ ಎನ್ನುತ್ತಾರೆ ನಾಗರಾಜ್.
ಮೈಸೂರು ಸಿಲ್ಕ್ ಧೋತಿ: ಸಂಕೀರ್ಣವಾದ ಝರಿ ಬಾರ್ಡರ್ ಅನ್ನು ಹೊಂದಿರುವ ಪ್ರೀಮಿಯಂ ರೇಷ್ಮೆ ಪಂಚೆ, ಸಾಮಾನ್ಯವಾಗಿ ಮದುವೆಗಳು ಮತ್ತು ಹಬ್ಬಗಳ ಸಮಯದಲ್ಲಿ ಧರಿಸಲಾಗುತ್ತದೆ.
ಪಂಚ ಧೋತಿ/ಕಾಟನ್ ಪಂಚೆ: ಸಾದಾ ಬಿಳಿ ಹತ್ತಿಯ ಧೋತಿ, ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪುರುಷರು ವಿಶೇಷವಾಗಿ ದೈನಂದಿನ ಅಥವಾ ಧಾರ್ಮಿಕ ಉಡುಗೆಗಾಗಿ ಧರಿಸುತ್ತಾರೆ.
ಶಲ್ಯ ಧೋತಿ: ಸಾಂಪ್ರದಾಯಿಕ ಸಮಾರಂಭಗಳಲ್ಲಿ ಧರಿಸುವ ಭುಜದ ಮೇಲೆ (ಶಲ್ಯ) ಹೊಂದುವ ಬಟ್ಟೆಯೊಂದಿಗೆ ಬರುತ್ತದೆ.
ಕಾವಿ ಧೋತಿ: ಕೇಸರಿ ಬಣ್ಣದ ಧೋತಿಯನ್ನು ಪುರೋಹಿತರು ಮತ್ತು ಧಾರ್ಮಿಕ ವ್ಯಕ್ತಿಗಳು ವಿಶೇಷವಾಗಿ ದೇವಾಲಯಗಳಲ್ಲಿ ಧರಿಸುತ್ತಾರೆ.
ಝರಿ ಬಾರ್ಡರ್‌ನೊಂದಿಗೆ ಹತ್ತಿ ಧೋತಿ: ಅಲಂಕಾರಿಕ ಚಿನ್ನ ಅಥವಾ ಬೆಳ್ಳಿಯ ಬಾರ್ಡರ್‌ನೊಂದಿಗೆ ಸರಳವಾದ ಹತ್ತಿ ಧೋತಿ, ಹಬ್ಬಗಳು ಮತ್ತು ಕಾರ್ಯಕ್ರಮಗಳಿಗೆ ಜನಪ್ರಿಯವಾಗಿದೆ.
ಡಬಲ್ ವೇಷ್ಟಿ ಧೋತಿ: ದಪ್ಪವಾದ, ಎರಡು-ಪದರದ ಧೋತಿ, ಮದುವೆಯಂತಹ ವಿಶೇಷ ಸಮಾರಂಭಗಳಲ್ಲಿ ಸಾಮಾನ್ಯವಾಗಿ ಧರಿಸಲಾಗುತ್ತದೆ.
ಕಸೂತಿ ಬಾರ್ಡರ್ ಧೋತಿ: ಬಾರ್ಡರ್‌ನಲ್ಲಿ ಕಸೂತಿ ಹೊಂದಿದೆ, ಹಬ್ಬದ ಉಡುಗೆಗೆ ಸಾಂಪ್ರದಾಯಿಕ ಸ್ಪರ್ಶವನ್ನು ನೀಡುತ್ತದೆ.
ರೆಡಿಮೇಡ್ ಮಡಿಕೆ ಧೋತಿ: ರೆಡಿಮೇಡ್ ಮಡಿಕೆಗಳೊಂದಿಗೆ ಮೊದಲೇ ಹೊಲಿದ ಧೋತಿ, ಸಮಾರಂಭಗಳು ಮತ್ತು ಪಾರ್ಟಿ, ರಿಸೆಪ್ಷನ್‌ಗಳಲ್ಲಿ ಧರಿಸಲು ಸುಲಭ.
ಪಾಕೆಟ್‌ಗಳೊಂದಿಗೆ ಪಂಚೆ: ಕ್ರಿಯಾತ್ಮಕ ಪಾಕೆಟ್‌ಗಳೊಂದಿಗೆ ಆಧುನಿಕ ರೂಪದ, ದೈನಂದಿನ ಬಳಕೆ ಅಥವಾ ಸಾಂದರ್ಭಿಕ ಬಳಕೆಗೆ ಸೂಕ್ತವಾಗಿದೆ.
ನವರಾತ್ರಿ ವಿಶೇಷ ಧೋತಿ: ಕಸೂತಿ ಅಥವಾ ಮುದ್ರಿತ ವಿನ್ಯಾಸಗಳಿಂದ ಅಲಂಕರಿಸಲ್ಪಟ್ಟ ವರ್ಣರಂಜಿತ ಧೋತಿಗಳು, ಕರ್ನಾಟಕದಲ್ಲಿ ನವರಾತ್ರಿ ಹಬ್ಬದ ಸಮಯದಲ್ಲಿ ಧರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.