ಆಹಹಾ... ಆರಾಮಗಾಳಿ, ಮರದ ತಂಪು, ದಣಿದ ದೇಹ, ಕುಸಿದ ಕಸುವು.. ಸಾಕಿಷ್ಟು ಕಣ್ರೆಪ್ಪೆಗಳು ಪರಸ್ಪರ ಅಪ್ಪಿ, ನಿಮ್ಮನ್ನ ನಿದ್ರಾಲೋಕಕ್ಕೆ ಕರೆದೊಯ್ದು ಕಂಗಳ ಬಾಗಿಲು ಹಾಕುತ್ತವೆ. ಒಮ್ಮೆ ಕಣ್ಮುಚ್ಚಿಕೊಂಡರೆ ಸಾಕು, ನಮ್ಮೊಳಗಿನ ಲೋಕ ಕಣ್ಬಿಡುತ್ತದೆ. ಮನಸು ಸಂಚಾರಿ, ಕನಸು ಸುವಿಹಾರಿ. ದೇಹ ನಿದ್ದೆಗೆ ಜಾರಿದಾಗಲೆಲ್ಲ ಇದೇ ಆಗುವುದು.
ಮನೆಯೆಲ್ಲ ಕತ್ತಲಾಗಿಸಿ, ಹಾಸಿ, ಹೊದ್ದು ಮಲಗುವುದಲ್ಲ, ಭೂಮ್ತಾಯಿ ಮಡಿಲಲ್ಲಿ ಆಕಾಶವನ್ನೇ ಹೊದ್ದು, ತೂಗಾಡುವ ಮರಗಳು ಸೆರಗಿನಂತೆ ಗಾಳಿಹಾಕಲು ತುಯ್ದಾಗಲೆಲ್ಲ.. ಕಣ್ತೂಕಡಿಸುತ್ತವೆ. ಅಲ್ಲಲ್ಲೇ ಪವಡಿಸು ಪರಮಾತ್ಮ ಹಾಡು ಕಿವಿಗೆ ಕೇಳಲಾರಂಭಿಸುತ್ತದೆ. ಬಾಲ್ಯದಿಂದಾಚೆ ಬರದವರು ಕಿವಿತುಂಬ ಲಾಲಿ ಲಾಲಿ ಸುಕುಮಾರ ಕೇಳುತ್ತ, ಬೆಂಚಿಗೆ ತಬ್ಬಿ, ಕಾಲ್ಹಾಗಿ ಮಲಗುತ್ತಾರೆ. ನಿದ್ದೆಯಲ್ಲಿಯೂ ಎಚ್ಚರದಿಂದಿರಬೇಕು ಅಥವಾ ಎಚ್ಚರದಲ್ಲಿಯೇ ಮೈಮರೆತು ಮಲಗಬೇಕೆನ್ನುವವರು ಬ್ಯಾಗನ್ನೇ ಕೈಗೆ ಸುತ್ತಿಕೊಂಡು, ದಿಂಬಾಗಿಸಿ ಮಲಗುತ್ತಾರೆ. ಪಾರ್ಕಿಗೆ ಕರೆತಂದ ಮಗುವ ಆಡಲು ಕೈಬಿಟ್ಟು, ನೆಲಕ್ಕೆ ಬೆನ್ನಾನಿಸಿ, ಕಿಂಡಲ್‌ನಲ್ಲಿಯೇ ಕಲ್ಪನಾಲೋಕಕ್ಕೆ ಹೋಗುವ ಅಮ್ಮ, ಅಮ್ಮನೇ ಜೊತೆಗಿರುವಳೆಂಬ ನಂಬಿಕೆಯಲ್ಲಿ ಮೈಮರೆತು ಕಲ್ಲುಹಾಸಿನ ಮೇಲೆ ಮಲಗುವ ಕೆಲಸ ಹುಡುಕಲು ಬಂದ ಯುವಕರು.. ನಿದ್ದೆ ಬಂದರೆ ಸಾಕೆ? ಮೈಮನಸುಗಳಿಗೆ ಹಿತವೆನಿಸಬೇಕಲ್ಲ.. ಕುಳಿತಲ್ಲಿಯೇ ಕಣ್ಮುಚ್ಚಿದವರೂ ಸಾಕಷ್ಟು ಜನಸಿಗುತ್ತಾರೆ. ಬೆಂಗಳೂರೆಂಬೋ ಊರಿನಲಿ ದೇಹ ಬಸವಳಿದಾಗ ಇಂಥ ಸಣ್ಣ ಸಣ್ಣ ನಿದ್ರೆಗಳು ಚೇತೋಹಾರಿಯಾಗಿರುತ್ತವೆ. ಸಂತೆಯಲ್ಲಿ ಸಂತನಂತೆ ನಿದ್ದೆ ಹೋದವರ ಈ ಕ್ಷಣಗಳನ್ನು ಸೆರೆ ಹಿಡಿದವರು ಪ್ರಜಾವಾಣಿಯ ಫೋಟೊ ಜರ್ನಲಿಸ್ಟ್ ಎಂ.ಎಸ್. ಮಂಜುನಾಥ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.