ನಯವಾದ ಮೇಲ್ಮೈನ 40 ಅಡಿ ಎತ್ತರದ ಕಂಬ ನೆಟ್ಟಿದ್ದಾರೆ. ಅದರ ತುದಿಯಲ್ಲಿ ಬುಟ್ಟಿ ಜೋಡಿಸಿದ್ದು, ಅದರೊಳಗೆ ಒಬ್ಬ ಕುಳಿತಿದ್ದಾನೆ. ಕಂಬದ ಕೆಳಗೆ ಸುತ್ತಲೂ ಕೆಸರಿನ ಹೊಂಡ. ಹಿಂದೆ ಉರುಮೆ ಶಬ್ಧ ಕೇಳುತ್ತಿದೆ. ಶಬ್ಧ ಏರಿದಂತೆ ಹೊಂಡದಲ್ಲಿಳಿದ ಹುಡುಗರು ಕಂಬ ಸುತ್ತುವರಿದು ನಿಂತಿದ್ದಾರೆ. ಅವರ ಹೆಗಲ ಮೇಲೆ ನಿಂತ ಇನ್ನಿಬ್ಬರು ಕಂಬ ಏರಲು ಪ್ರಯತ್ನಿಸುತ್ತಾರೆ. ಆಗ ಮೇಲೆ ಕುಳಿತಿದ್ದವ ಕಂಬದ ಮೇಲೆ ಕೆಸರು ಸುರಿಯುತ್ತಾನೆ. ಕೆಸರು ಮೆತ್ತಿಕೊಂಡ ಕಂಬವನ್ನು ಏರಲಾಗದ ಹುಡುಗರು ಜಾರಿ ಜಾರಿ ಕೆಳಗೆ ಬೀಳುತ್ತಾರೆ. ‘ಮರಳಿ ಯತ್ನವ ಮಾಡು’ ಎನ್ನುವಂತೆ ಪ್ರಕ್ರಿಯೆ ಮುಂದುವರಿಯುತ್ತದೆ...!
ಇದನ್ನು ಓದಿದಾಗ, ‘ಉತ್ತರ ಕರ್ನಾಟಕದ ಮಲ್ಲಕಂಬ ಏರುವ ಸ್ಪರ್ಧೆಯಂತಿದೆಯಲ್ಲ’ ಎನ್ನಿಸುತ್ತಿದೆ ಅಲ್ಲವೇ? ನಿಜ, ಇದು ಆ ಸ್ಪರ್ಧೆಯ ತರಹವೇ. ಆದರೆ ಅದಲ್ಲ. ಇದನ್ನು ‘ಉಟ್ಲಮಾನು’ ಎನ್ನುತ್ತಾರೆ. ಈ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳು ಮಲ್ಲಕಂಬಕ್ಕಿಂತ ಎತ್ತರವಿರುವ ಕಂಬವನ್ನು ಏರುತ್ತಾರೆ. ಅಲ್ಲಿ ಕಂಬಕ್ಕೆ ಎಣ್ಣೆ ಹಚ್ಚಿರುತ್ತಾರೆ. ಇಲ್ಲಿ ಕಂಬಕ್ಕೆ ಮೇಲಿನಿಂದ ಕೆಸರು ಸುರಿಯುತ್ತಾರೆ. ಅಲ್ಲಿ ಒಬ್ಬೊಬ್ಬರೇ ಸ್ಪರ್ಧೆಗಿಳಿದರೆ, ಇಲ್ಲಿ ಸಮಷ್ಠಿ ಪ್ರಯತ್ನದ ಶಕ್ತಿ ಪ್ರದರ್ಶನವಾಗುತ್ತದೆ.
ಗಡಿಭಾಗದ ಆಚರಣೆ
ಉಟ್ಲಮಾನು ತೆಲುಗು ಪದ. ಕನ್ನಡದಲ್ಲಿ ಉಟ್ಲಮರ ಎನ್ನುತ್ತಾರೆ. ಇದು ಜಾನಪದ ಕ್ರೀಡೆಯೂ ಹೌದು. ಜಾತ್ರೆಯಲ್ಲಿ ನಡೆಯುವ ಆಚರಣೆಯೂ ಹೌದು. ಕರ್ನಾಟಕ – ಆಂಧ್ರ ಗಡಿಯಲ್ಲಿನ ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲ ಹಳ್ಳಿಗಳು, ತುಮಕೂರು ಜಿಲ್ಲೆಯ ಪಾವಗಡ, ಆಂಧ್ರದ ಅನಂತಪುರ ಜಿಲ್ಲೆಯ ತೊಗರಕುಂಟ, ಸಿ.ಕೆ.ಪಲ್ಲಿ, ದಾದಲೂರು ಮತ್ತಿತರ ಹಳ್ಳಿಗಳಲ್ಲಿ ಯುಗಾದಿ ಹಬ್ಬದ ಒಂಬತ್ತು ದಿನಗಳ ನಂತರ ಜಾತ್ರೆಗಳು ನಡೆಯುತ್ತವೆ. ಆ ಬಹುತೇಕ ಜಾತ್ರೆಗಳ ಭಾಗವಾಗಿ ಈ ಸ್ಪರ್ಧೆ ನಡೆಯುತ್ತದೆ. ಕೆಲವು ಹಳ್ಳಿಗಳಲ್ಲಿ ಆಚರಣೆಯ ದಿನ, ದೇವರುಗಳು ಬೇರೆಯಾದರೂ ಸಂಪ್ರದಾಯ, ರೀತಿ ರಿವಾಜುಗಳೆಲ್ಲ ಒಂದೇ.
ನಲ್ವತ್ತು ಅಡಿ ಎತ್ತರದ ಕಂಬ
ಉಟ್ಲುಮರದ ಸ್ಪರ್ಧೆ, ಜಾತ್ರೆಯಲ್ಲಿಯೇ ಜನಾಕರ್ಷಣೆಯ ಚಟುವಟಿಕೆ. ಈ ಆಚರಣೆಗೆ ಒಂದು ವಾರ ಮೊದಲೇ ಸಿದ್ಧತೆ ಶುರುವಾಗುತ್ತದೆ. ಸುಮಾರು 40 ಅಡಿಯಿಂದ 45 ಅಡಿಗಳ ಉದ್ದದ ಡೊಂಕುಗಳಿಲ್ಲದ ನೇರ ಮರವೊಂದನ್ನು ತರುತ್ತಾರೆ. ಹುಣಸೆ ಅಥವಾ ಅತ್ತಿಮರ. ಒಟ್ಟಾರೆ ಸ್ಥಳೀಯ ತಳಿಯ ಮರವೇ ಆಗಿರಬೇಕು. ಇದನ್ನೇ ಉಟ್ಲಮಾನು ಅಥವಾ ಉಟ್ಲಮರ ಎನ್ನುವುದು. ಒಂದು ಸಲ ತಂದ ಮರವನ್ನು ಹಲವಾರು ವರ್ಷಗಳ ಕಾಲ ಸಂರಕ್ಷಿಸಿ ಇಡಲಾಗುತ್ತದೆ. (ಇತ್ತೀಚೆಗೆ ಕೆಲವು ಗ್ರಾಮಗಳಲ್ಲಿ ಶಾಶ್ವತವಾಗಿ ಇರುವಂತೆ ಸಿಮೆಂಟಿನಿಂದ ಕಂಬವನ್ನು ನಿರ್ಮಿಸಿದ್ದಾರೆ.)
ಹೀಗೆ ಆರಿಸಿ ತಂದ ಮರವನ್ನು ನಿಗದಿತ ಸ್ಥಳದಲ್ಲಿ ಲಂಬವಾಗಿ ಹೂಳುತ್ತಾರೆ. ಅದು ಬೀಳದಂತೆ ಸುತ್ತ ನಾಲ್ಕೈದು ದಿಕ್ಕುಗಳಿಂದ ಹಗ್ಗಗಳಿಂದ ಎಳೆದು ಬಿಗಿಯಲಾಗುತ್ತದೆ. ಕಂಬದ ತುದಿಗೆ ಬುಟ್ಟಿಯಾಕಾರದ ಅಟ್ಟಣಿಗೆ ಕಟ್ಟುತ್ತಾರೆ. ಇದೇ ಉಟ್ಲಮರ. ಅದರಲ್ಲಿ ಮಣ್ಣಿನ ಮಡಕೆ ಇಟ್ಟು ಕೆಸರನ್ನು ತುಂಬಿಡುತ್ತಾರೆ. ಸ್ಪರ್ಧಿಗಳು ಮರ ಏರುವ ಮುನ್ನವೇ ವ್ಯಕ್ತಿಯೊಬ್ಬ ಹಗ್ಗ ಹಿಡಿದು ಕಂಬ ಏರಿ ಅಟ್ಟಣಿಗೆಯಲ್ಲಿ ಕುಳಿತಿರುತ್ತಾನೆ.
ಅಟ್ಟಣಿಗೆಯ ಸುತ್ತ ನಾಲ್ಕು ತೆಂಗಿನಕಾಯಿಗಳನ್ನು ಗೋಣಿ ದಾರದಿಂದ ಕಟ್ಟುತ್ತಾರೆ. ಮತ್ತೊಂದು ತೆಂಗಿನ ಕಾಯಿಗೆ ಉದ್ದ ದಾರವನ್ನು ಕಟ್ಟಿ ಮೇಲಿನಿಂದ ತೂಗು ಬಿಡುತ್ತಾರೆ. ಇದನ್ನೇ ಉಟ್ಲಕಾಯಿ ಎನ್ನುವುದು. ಉಟ್ಲಕಾಯಿ ಹೊಡೆಯುವುದಕ್ಕಾಗಿ, ಹುಡುಗರು ಮರ ಏರುವಾಗ, ಮೇಲೆ ಕುಳಿತವನು ಕಂಬದ ಮೇಲೆ ಕೆಸರು ಸುರಿಯುತ್ತಾನೆ.
ಕಂಬದ ಬುಡದಲ್ಲಿ ಹತ್ತು ಹದಿನೈದು ಅಡಿಗಳ ವ್ಯಾಸದಲ್ಲಿ ಕೆಸರಿನ ಹೊಂಡ ಮಾಡಿರುತ್ತಾರೆ. ಮರ ಹತ್ತುವವರು ಈ ಕೆಸರಿನ ಹೊಂಡದಲ್ಲಿಳಿದೇ ಮರ ಏರಬೇಕು.
ನಿಗದಿತ ದಿನದಂದು ಮೊದಲೇ ನಿರ್ಧರಿಸಿದ ಪೂಜೆಗಳು, ಬೆಲ್ಲ, ತಂಬಿಟ್ಟಿನ ಆರತಿಗಳ ನಂತರ ಅನ್ನ ಸಂತರ್ಪಣೆ ನಡೆಯುತ್ತದೆ. ಆಮೇಲೆ ಉಟ್ಲಮರವೇರಲು ಹುಡುಗರು ಗುಂಪುಗೂಡಿ ಬರುತ್ತಾರೆ. ಉರುಮೆಯ ಉರೂಂ ರೂಂ ರೂಂ ಸದ್ದು ಕೇಳುತ್ತಿದ್ದಂತೆಯೇ ಊರಿನ ಜನರು ಮರದ ಸುತ್ತ ಜಮಾಯಿಸುತ್ತಾರೆ.
ಎರಡು ಹಂತದ ಆಚರಣೆ
ಈ ಆಚರಣೆಯಲ್ಲಿ ಎರಡು ಘಟ್ಟಗಳಿವೆ; ಮೊದಲಿಗೆ ಹಗ್ಗಕ್ಕೆ ಉಟ್ಲಕಾಯಿ ಕಟ್ಟಿ ಅದನ್ನು ಒಬ್ಬರು ಮೇಲಿನಿಂದ ಹಿಡಿದು ತೂಗಾಡಿಸುತ್ತಾರೆ. ಕೆಳಗೆ ನಿಂತವರು ದೊಡ್ಡ ಕೋಲಿನಿಂದ ಆ ಕಾಯಿ ಹೊಡೆಯಲು ಪ್ರಯತ್ನಿಸುತ್ತಿರುತ್ತಾರೆ. ಹೊಡೆಯುವವರಿಗೆ ಕಾಯಿ ಸಿಗದಂತೆ ಆಟವಾಡಿಸುತ್ತಾರೆ. ಸುಮಾರು ಒಂದು ಗಂಟೆ ನಡೆಯುವ ಈ ಕಾರ್ಯಕ್ರಮ ಜಾತ್ರೆಗೆ ಬಂದವರಿಗೆ ಭರಪೂರ ಮನರಂಜನೆ ನೀಡುತ್ತದೆ. ನಂತರದ ಘಟ್ಟವೇ ಉಟ್ಲಮರ ಹತ್ತುವುದು. ಮರ ಏರುವವರು ಆ ದಿನ ಬೆಳಿಗ್ಗೆಯಿಂದ ಉಪವಾಸವಿರುತ್ತಾರೆ. ಮರ ಏರುವ ಮುನ್ನ ತಣ್ಣೀರಲ್ಲಿ ಮಿಂದು ತೇವದ ಬಟ್ಟೆಯಲ್ಲೇ ಬಂದು ದೇವರ ಕುಂಕುಮ ಪ್ರಸಾದ ಸ್ವೀಕರಿಸಿ ತಯಾರಾಗುತ್ತಾರೆ.
ಉರುಮೆಯ ಸದ್ದು, ಜಯಘೋಷಗಳು ಮೊಳಗುತ್ತಿದ್ದಂತೆಯೇ ಏಳೆಂಟು ಹುಡುಗರು ಮರದ ಬುಡದಲ್ಲಿರುವ ಕೆಸರಿನೊಳಗೆ ಇಳಿದು ಉಟ್ಲಮರ ಸುತ್ತುವರಿದು ಒಬ್ಬರಿಗೊಬ್ಬರು ಹೆಗಲು ಕೊಟ್ಟು ಭದ್ರವಾಗಿ ನಿಲ್ಲುತ್ತಾರೆ. ಇಬ್ಬರು ಹುಡುಗರು ಅವರ ಮೇಲೆ ನಿಂತು ಕಂಬವನ್ನು ಏರುವ ಪ್ರಯತ್ನ ಮಾಡುತ್ತಾರೆ. ಮೇಲೆ ಅಟ್ಟಣಿಗೆಯಲ್ಲಿ ಕುಳಿತಿದ್ದವನು ಮೇಲಿಂದ ಮಡಕೆಯಲ್ಲಿ ಕೆಸರು ಮೊಗೆದು ಸುರಿಯುತ್ತಿರುತ್ತಾನೆ. ಅದಕ್ಕೆ ಪ್ರತಿರೋಧ ಒಡ್ಡುತ್ತಲೇ ಹುಡುಗರು ಮರವೇರಲು ಪ್ರಯತ್ನಿಸುತ್ತಿರುತ್ತಾರೆ. ಮರಕ್ಕೆ ಕೆಸರು ಅಂಟಿಕೊಳ್ಳುವುದರಿಂದ ಜಾರುವಿಕೆ ಹೆಚ್ಚು. ಏರುತ್ತಿರುವವರಲ್ಲಿ ಒಬ್ಬ ಜಾರಿದರೂ ಉಳಿದವರು ತೊಪತೊಪನೆ ಕೆಸರಿನ ಹೊಂಡಕ್ಕೆ ಬೀಳುತ್ತಾರೆ. ಮತ್ತೆ ಇನ್ನೊಂದು ಬಾರಿ ತಣ್ಣೀರ ಸ್ನಾನ ಮಾಡಿ ಮತ್ತೊಂದು ಬಾರಿ ಪ್ರಯತ್ನಕ್ಕೆ ಸಿದ್ಧರಾಗುತ್ತಾರೆ. ಈ ಉಟ್ಲಮರವೇರುವ ಸ್ವಾರಸ್ಯವಿರುವುದೇ ಈ ಪ್ರಯತ್ನಗಳಲ್ಲಿ. ಇದರ ಮೂಲಕ ಹಳ್ಳಿ ಹುಡುಗರ ತಾಕತ್ತು ಅನಾವರಣಗೊಳ್ಳುತ್ತದೆ.
ಮರಳಿ ಯತ್ನವ ಮಾಡು
ಮರ ಏರುವ ಪ್ರಯತ್ನಗಳು ಹೆಚ್ಚಿದಂತೆ ಉರುಮೆಯ ಸದ್ದೂ ಏರುತ್ತದೆ. ನೋಡುಗರ ಎದೆ ಬಡಿತವೂ ಹೆಚ್ಚಾಗುತ್ತದೆ. ಇಲ್ಲಿ ಇನ್ನೇನು ಗೆಲ್ಲುತ್ತಾನೆ ಎಂಬುವವನು ಕೆಳಗೆ ಜಾರುತ್ತಾನೆ. ಮುಂದೆ ಮತ್ತಷ್ಟು ಹುಡುಗರ ಗುಂಪು ತಣ್ಣೀರು ಸ್ನಾನದೊಂದಿಗೆ ಪುನಃ ಮರವೇರಲು ಮತ್ತೆ ತಯಾರಾಗುತ್ತಾರೆ. ಏರುವ ಹುಡುಗರಿಗೆ ಹುರುಪು ತುಂಬಲು ಉರುಮೆಯ ಬಡಿತ ಜೋರಾಗುತ್ತದೆ.
ಈ ಸ್ಪರ್ಧೆಯಲ್ಲಿ ಅರ್ಧಕ್ಕಿಂತ ಹೆಚ್ಚು ಎತ್ತರಕ್ಕೆ ಮರ ಏರಿದವರು ಗೆದ್ದಂತೆಯೇ ಲೆಕ್ಕ. ಜಾರುವ ಉಟ್ಲಮರದ ಮೇಲೆ ಆಯ ತಪ್ಪಿ ಬೀಳದಂತೆ ನಿಯಂತ್ರಿಸಿಕೊಂಡು ಪೂರ್ಣ ಕಂಬ ಏರಿದವನು ಮೊದಲು ಸಿಕ್ಕ ತೆಂಗಿನಕಾಯಿಯನ್ನು ಕಿತ್ತು ಎಸೆಯುತ್ತಾನೆ. ಈ ದೃಶ್ಯವನ್ನು ನೋಡುತ್ತಾ ನಿಂತವರಿಗೆ ತಾವೇ ಮರ ಏರಿದಂತಹ ಸಂತಸದ ಧನ್ಯಭಾವ. ಅಲ್ಲಿಗೆ ಉಟ್ಲಮರದ ಆಚರಣೆ ಮುಗಿಯುತ್ತದೆ.
ಜನಪದ ಕ್ರೀಡೆಯ ರಕ್ಷಣೆ
ಬಹಳಷ್ಟು ದೈಹಿಕ ಸಾಮರ್ಥ್ಯ ಬೇಡುವ ಈ ಸ್ಪರ್ಧೆ ಕೇವಲ ಕ್ರೀಡೆಯಾಗಿದ್ದಿದ್ದರೆ ಉಳಿಯುವುದು ಕಷ್ಟವಾಗುತ್ತಿತ್ತು. ಆದರೆ ಜನಪದರು ಇದಕ್ಕೆ ಕ್ರೀಡೆಯೊಂದಿಗೆ ಸಂಪ್ರದಾಯದ ಚೌಕಟ್ಟು ಹಾಕಿ ದೈವದ ನೆರಳಿನಲ್ಲಿ ಉರುಮೆಯ ಸದ್ದಿನೊಂದಿಗೆ ಉಳಿಸಿಕೊಂಡು ಬಂದಿದ್ದಾರೆ. ಇದರ ಪ್ರಾಮುಖ್ಯವನ್ನು ಅರಿತ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಪ್ರತಿವರ್ಷದ ಪರಿಸರ ದಿನಾಚರಣೆಯೊಂದಿಗೆ ಉಟ್ಲಮರದ ಸಂಪ್ರದಾಯವನ್ನು ಮುಂದುವರಿಸಿವೆ. ಈ ಮೂಲಕ ಮರೆತು ಹೋಗಬಹುದಿದ್ದ ಒಂದು ಜಾನಪದ ಕೊಂಡಿಯನ್ನು ಜನರೊಂದಿಗೆ ಮತ್ತೆ ಬೆಸೆಯುವ ಕೆಲಸ ಮಾಡುತ್ತಿವೆ. ಇದರಿಂದ ಆಚರಣೆಯೂ ಉಳಿಯಿತು. ಆಟವೂ ಉಳಿಯಿತು. ಜನರಿಗೆ ಮನಸ್ಸಿನ ಜಡ್ಡು ಕಳೆಯುವ ಚಟುವಟಿಕೆಯೂ ಸಿಕ್ಕಂತಾಯಿತು. ಇದೇ ನೋಡಿ ನಮ್ಮ ಹಿಂದಿನವರ ಜಾಣತನ!
ಅಕ್ಕಮ್ಮನವರ ಜಾತ್ರೆಗೆ ಬನ್ನಿ
ಈ ವಿವರಣೆ ಎಲ್ಲ ಓದಿದ ಮೇಲೆ ಉಟ್ಲುಮರ ಏರಿ, ಉಟ್ಲು ಕಾಯಿ ಹೊಡೆಯುವುದನ್ನು ನೋಡಬೇಕೆನಿಸಿತೇ? ಹಾಗಿದ್ದರೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವಳ್ಳೂರಿನ ಅಕ್ಕಮ್ಮನವರ ಜಾತ್ರೆಗೆ ಬನ್ನಿ. ಈ ಯುಗಾದಿ ಹಬ್ಬ ಕಳೆದ ಒಂಭತ್ತು ದಿನಗಳಿಗೆ, ಅಂದರೆ ಶ್ರೀರಾಮನವಮಿಯ ಮಾರನೇ ದಿನ ಜಾತ್ರೆ ನಡೆಯುತ್ತದೆ. ಜಾತ್ರೆಗೆ ಬಂದರೆ ಉಟ್ಲು ಮರ ಏರುವುದನ್ನು ನೋಡಬಹುದು. ಈ ಜಾತ್ರೆಗೆ ಪಾವಗಡದ ಅಕ್ಕಪಕ್ಕದ ಹಳ್ಳಿಗಳಷ್ಟೇ ಅಲ್ಲದೇ, ಆಂಧ್ರದ ಹಳ್ಳಿಗಳಿಂದಲೂ ಜನ ಸೇರುತ್ತಾರೆ.
ಚಿತ್ರಗಳು: ತಿಮ್ಮಾರೆಡ್ಡಿ ಮಹೇಶ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.