ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (Council of Scientific & Industrial Research (CSIR)), ಪ್ರತಿ ವರ್ಷ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯನ್ನು ನೀಡುತ್ತದೆ. ಈ ಮಂಡಳಿಯ ಪ್ರಥಮ ಡೈರೆಕ್ಟರ್ ಜನರಲ್ ಆಗಿದ್ದ ಡಾ. ಶಾಂತಿ ಸ್ವರೂಪ್ ಭಟ್ನಾಗರ್(CSIR :Founder Director) ಅವರ ಗೌರವಾರ್ಥ ಈ ಪ್ರಶಸ್ತಿ ಸ್ಥಾಪಿಸಲಾಗಿದೆ. ಈ ಪ್ರಶಸ್ತಿಯನ್ನು 1958ರಲ್ಲಿ ಆರಂಭಿಸಲಾಯಿತು. ಭೌತವಿಜ್ಞಾನ, ರಸಾಯನ ವಿಜ್ಞಾನ, ಜೀವವಿಜ್ಞಾನ, ಎಂಜಿನಿಯರಿಂಗ್, ವೈದ್ಯ ವಿಜ್ಞಾನ, ಮತ್ತು ಗಣಿತಶಾಸ್ತ್ರ ಮೊದಲಾದ ವಿಭಾಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಈ ಪ್ರಶಸ್ತಿಗಳನ್ನು ಕೊಡಲಾಗುತ್ತದೆ. ಪ್ರತಿಯೊಂದು ಪ್ರಶಸ್ತಿಯು ನಗದು ಬಹುಮಾನವನ್ನು ಮತ್ತು ಒಂದು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.
ಭಾರತೀಯ ರಸಾಯನ ಶಾಸ್ತ್ರಜ್ಞ ಸ್ವರೂಪ್ ಭಟ್ನಾಗರ್, ಪಂಜಾಬ್‌ನಲ್ಲಿ 1894ರ ಫೆಬ್ರುವರಿ 21ರಂದು ಜನಿಸಿದರು. 1919ರಲ್ಲಿ ಅವರು ಪಂಜಾಬ್ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ ಪದವಿ ಪಡೆದರು. ನಂತರ ಲಂಡನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು. ಬಳಿಕ ಬರ್ಲಿನ್‌ನಲ್ಲಿರುವ ಕೈಸರ್ ವಿಲ್‌ಹೆಲ್ಮ್ ಸಂಸ್ಥೆಯಲ್ಲಿ (Kaisar Wilhelm Institute) ಪ್ರೊಫೆಸರ್ ಹೇಬರ್ ಅವರ ಅಧೀನದಲ್ಲಿ ಕೆಲಸ ಮಾಡಿದರು. ನಂತರ ಕೊಲಾಯಿಡ್ಸ್ (colloids) ಪರಿಣಿತ ಫ್ರೆಯಂಡ್‌ಲಿಕ್ (Freundlich) ಅವರ ಜೊತೆ ಕೆಲಸ ಮಾಡುವ ಅವಕಾಶ ದೊರೆಯಿತು.
ಶಾಂತಿ ಸ್ವರೂಪ್ ಭಟ್ನಾಗರ್ 1921 ರಿಂದ 1924ರ ವರೆಗೆ ಬನಾರಸ್ ಹಿಂದೂ ವಿಶ್ವ ವಿದ್ಯಾಲಯದಲ್ಲಿ ರಸಾಯನ ವಿಜ್ಞಾನ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. 1924 ರಿಂದ 1940ರ ವರೆಗೆ ಅವರು ಲಾಹೋರ್ ವಿಶ್ವವಿದ್ಯಾಲಯದ ರಸಾಯನ ವಿಜ್ಞಾನ ಪ್ರಯೋಗಾಲಯದ ಡೈರೆಕ್ಟರಾಗಿ ಕೆಲಸ ಮಾಡಿದರು.
ಇವರು ವಿಶೇಷವಾಗಿ ರಾಸಾಯನಿಕ–ಆಯಸ್ಕಾಂತೀಯ ಕ್ಷೇತ್ರಕ್ಕೆ (Magneto- chemistry) ಅಮೋಘ ಕೊಡುಗೆ ಸಲ್ಲಿಸಿದರು. 1940ರಲ್ಲಿ ಶಾಂತಿ ಸ್ವರೂಪ್ ಭಟ್ನಾಗರ್ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ಮೊದಲ ಡೈರೆಕ್ಟರ್ ಆದರು. ತಮ್ಮ ಬದುಕಿನ ಕಡೆಯವರೆಗೂ ಅವರು ಆ ಸ್ಥಾನದಲ್ಲಿ ಕೆಲಸ ಮಾಡಿದರು. 1943ರಲ್ಲಿ ಅವರನ್ನು ಲಂಡನ್ನಿನ್ ರಾಯಲ್ ಸೊಸೈಟಿಯ ‘ಫೆಲೊ’ ಆಗಿ ಆಯ್ಕೆ ಮಾಡಿ ಸನ್ಮಾನಿಸಲಾಗಿತ್ತು. 1954ರಲ್ಲಿ ಪದ್ಮವಿಭೂಷಣ ನೀಡಿ ಗೌರವಿಸಲಾಗಿತ್ತು.
ಇವರನ್ನು ಸಂಶೋಧನಾ ಪ್ರಯೋಗಾಲಯಗಳ ಪಿತಾಮಹ ಎಂದು ಕರೆಯಲಾಗಿದೆ (father of research laboratories in India). ಸಂಶೋಧನಾ ಪ್ರಯೋಗಾಲಯಗಳ ನಿರ್ಮಾಣ ಕ್ಕಾಗಿ ಡಾ ಭಟ್ನಾಗರ್ ಅವರು ಕೈಗಾರಿಕೋದ್ಯಮಿಗಳಿಂದ ಅಪಾರ ಹಣವನ್ನು ಸಂಗ್ರಹಿಸಿದರು. ಈ ಹಣವನ್ನು ಬಳಸಿ, ಅವರು ಭಾರತದಲ್ಲಿ ಅನೇಕ ರಾಷ್ಟ್ರೀಯ ಸಂಶೋಧನಾ ಪ್ರಯೋಗಾಲಯಗಳನ್ನು ಸ್ಥಾಪಿಸಿದರು. ವಿಶ್ವವಿದ್ಯಾಲಯ ಧನಸಹಾಯ ಆಯೋಗದ(UGC) ಮೊದಲ ಅಧ್ಯಕ್ಷರಾಗಿದ್ದರು. ಇಂತಹ ಮಹಾನ್ ವಿಜ್ಞಾನಿ 1955ರ ಜನವರಿ 1 ರಂದು ನಿಧನರಾದರು. ನಂತರ ಅವರ ನೆನಪಿಗಾಗಿ, ಭಟ್ನಾಗರ್ ಸ್ಮಾರಕ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.