ADVERTISEMENT

ಮೊದಲ ರೈಲಿನ ಪಯಣ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 19:30 IST
Last Updated 16 ನವೆಂಬರ್ 2019, 19:30 IST
ಮೊದಲ ರೈಲು ಪಯಣ
ಮೊದಲ ರೈಲು ಪಯಣ   

1853ರ ಏಪ್ರಿಲ್‌ 16ನೆಯ ತಾರೀಕಿನಂದು ಬಾಂಬೆಯಲ್ಲಿ (ಇಂದಿನ ಮುಂಬೈ) ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿತ್ತು. ಅಂದು ಶನಿವಾರ. ಜನ ಭಾರಿ ಸಂಖ್ಯೆಯಲ್ಲಿ ಬೋರಿ ಬಂದರ್‌ ಕಡೆ ಬರುತ್ತಿದ್ದರು. ಬೋರಿ ಬಂದರ್‌ನಲ್ಲಿ ಒಂದು ರೈಲು ನಿಲ್ದಾಣ ನಿರ್ಮಾಣ ಆಗಿತ್ತು. ‘ಗ್ರೇಟ್ ಇಂಡಿಯನ್ ಪೆನಿನ್ಸುಲಾರ್‌ ರೈಲ್ವೆ’ ಕಂಪನಿಯ ಮೊದಲ ರೈಲು ಬಂಡಿ ಅಂದು ತನ್ನ ಮೊದಲ ಪ್ರಯಾಣಿಕ ರೈಲು ಸೇವೆ ಒದಗಿಸುವುದಿತ್ತು.

ಆ ಮೊದಲ ಯಾನದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದ್ದು ಕೆಲವು ಮಂದಿ ಅದೃಷ್ಟವಂತರಿಗೆ ಮಾತ್ರ. ಅವರಲ್ಲಿ ಭಾರತೀಯರೂ ಇದ್ದರು ಯುರೋಪಿಯನ್ನರೂ ಇದ್ದರು. ಪುರುಷರೂ ಇದ್ದರು, ಮಹಿಳೆಯರೂ ಇದ್ದರು. ಮಧ್ಯಾಹ್ನ 3.30ರ ಸುಮಾರಿಗೆ ಅವರೆಲ್ಲ ತಮ್ಮ ಆಸನಗಳಲ್ಲಿ ಕುಳಿತಿದ್ದರು. ಹಸಿರು ನಿಶಾನೆ ಸಿಕ್ಕ ತಕ್ಷಣ, 14 ಬೋಗಿಗಳ ಈ ಬಂಡಿ ಚುಕ್ಕು ಬುಕ್ಕು ಎನ್ನುತ್ತ ಪ್ರಯಾಣ ಆರಂಭಿಸಿತು. ಈ ರೈಲು ಬಂಡಿಯನ್ನು ಮೂರು ಉಗಿಬಂಡಿಗಳು ಎಳೆಯುತ್ತಿದ್ದವು. ರೈಲು, ನಿಲ್ದಾಣದಿಂದ ಹೊರಟಿದ್ದನ್ನು ಅಲ್ಲಿದ್ದ ಜನ ಆಶ್ಚರ್ಯದಿಂದ ನೋಡಿದರು.

ಆ ರೈಲು ಬೋರಿ ಬಂದರ್‌ನಿಂದ ಥಾಣೆವರೆಗೆ ಸಾಗಿತು. ಇದು ಒಟ್ಟು 34 ಕಿ.ಮೀ ಉದ್ದದ ದಾರಿ. ರೈಲು ಹಳಿಯ ಮೇಲೆ ಸಾಗುತ್ತಿದ್ದಾಗ ಜನ ಕಿಟಕಿಯಿಂದ, ಮನೆಗಳ ಮಹಡಿಯಿಂದ, ಮರದ ಮೇಲಿನಿಂದ ಆ ರೈಲಿಗೆ ಟಾಟಾ ಹೇಳುತ್ತಿದ್ದರು. ರೈಲು ಠೀವಿಯಿಂದ ಶಿಳ್ಳೆ ಹಾಕುತ್ತ, ಹೊಗೆ ಉಗುಳುತ್ತ, ಚುಕ್ಕುಬುಕ್ಕು ಎನ್ನುತ್ತ ಸಾಗಿತು.

ADVERTISEMENT

ಈ ಪ್ರಯಾಣದ ಅವಧಿ ಸರಿಸುಮಾರು ಒಂದು ಗಂಟೆಯದ್ದು. ರೈಲು ಪ್ರಯಾಣಕ್ಕೆ ಸಾಕ್ಷಿಯಾದ ನಂತರ ಕೆಲವು ವಾರಗಳವರೆಗೆ ಬಾಂಬೆಯ ಜನ ರೈಲನ್ನು ಹೊರತುಪಡಿಸಿ ಬೇರೆ ಯಾವುದರ ಬಗ್ಗೆಯೂ ಮಾತನಾಡುತ್ತಿರಲಿಲ್ಲ! ಮೊದಲ ರೈಲಿನಲ್ಲಿ 500 ಜನ ಪ್ರಯಾಣಿಕರಿದ್ದರು. ಈಗ ಭಾರತೀಯ ರೈಲು ಪ್ರತಿದಿನ 2.3 ಕೋಟಿ ಜನರನ್ನು ಒಂದೂರಿನಿಂದ ಇನ್ನೊಂದೂರಿಗೆ ಕರೆದೊಯ್ಯುತ್ತದೆ. ವಿಶ್ವದ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದನ್ನು ಹೊಂದಿರುವ ಹಿರಿಮೆಗೂ ಭಾರತೀಯ ರೈಲು ಪಾತ್ರವಾಗಿದೆ.

ಸುಬಾಹು

ಸುಬಾಹು ಒಬ್ಬ ರಾಕ್ಷಸ, ತಾಟಕಿಯ ಮಗ. ಮಾರೀಚನ ಸಹೋದರ. ಮಾಯಾ ವಿದ್ಯೆ ಸಂಪಾದಿಸಿದ್ದ ಸುಬಾಹು ರಾಮ ವನವಾಸದಲ್ಲಿ ಇದ್ದಾಗ ನಡೆದ ಯುದ್ಧದಲ್ಲಿ ರಾಮನ ಕೈಯಲ್ಲಿ ಹತನಾದ.

ಯೂಜಿನ್ ಶೂಮ್ಯಾಕರ್

ಶೂಮ್ಯಾಕರ್‌ ಲೆವಿ 9 ಧೂಮಕೇತುವನ್ನು ಮೊದಲು ಗುರುತಿಸಿದ್ದು ಖಗೋಳಶಾಸ್ತ್ರಜ್ಞ ಯೂಜಿನ್‌ ಶೂಮ್ಯಾಕರ್‌ ಅವರು. ಯೂಜಿನ್‌ ಅವರಿಗೆ ತಾವು ಚಂದ್ರನ ಅಂಗಳಕ್ಕೆ ಹೋಗಬೇಕು ಎಂಬ ಆಸೆ ಯಾವತ್ತಿಗೂ ಇತ್ತು. ಆದರೆ, ಆ ಆಸೆ ಪೂರ್ಣಗೊಂಡಿದ್ದು ಅವರು ಮೃತಪಟ್ಟ ನಂತರ.

ಅವರ ಚಿತಾಭಸ್ಮವನ್ನು ಚಿಕ್ಕದೊಂದು ಪಾತ್ರೆಯಲ್ಲಿ ಇಟ್ಟು ಚಂದ್ರನಲ್ಲಿಗೆ ಒಯ್ಯಲಾಯಿತು. ಭೂಮಿಯ ಆಚೆಗೆ ಯಾವುದೇ ಆಕಾಶಕಾಯದಲ್ಲಿ ಚಿತಾಭಸ್ಮವನ್ನು ವಿಸರ್ಜಿಸಿದ ನಿದರ್ಶನವೇನಾದರೂ ಇದ್ದರೆ ಅದು ಯೂಜಿನ್ ಅವರದ್ದು ಮಾತ್ರ.

ಜೇಡನ ತಾಕತ್ತು

ಪಾಪ್ವಾ ನ್ಯೂಗಿನಿಯಾ ದ್ವೀಪದಲ್ಲಿ ಒಂದು ಜಾತಿಯ ಜೇಡ ವಾಸಿಸುತ್ತದೆ. ಇದರದ್ದು ಒಂದು ವೈಶಿಷ್ಟ್ಯ ಇದೆ. ಅದು ಏನು ಅಂದರೆ, ಅತ್ಯಂತ ದೊಡ್ಡದಾದ ಹಾಗೂ ಅತ್ಯಂತ ಬಲಿಷ್ಠವಾದ ಬಲೆ ನೇಯುವುದು.

ಅಡ್ಡಡ್ಡವಾಗಿ ಅದು ಹೆಣೆಯುವ ನೂಲು ಆರು ಮೀಟರ್‌ಗಳಷ್ಟು ಉದ್ದ ಇರುತ್ತದೆ. ಉದ್ದಕ್ಕೆ ಹೆಣೆಯುವ ನೂಲು ಒಂದೂವರೆ ಮೀಟರ್‌ನಷ್ಟು ದೀರ್ಘವಾಗಿ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.