‘1893’ –ಭಾರತೀಯರಿಗೆ ಮಹತ್ವದ ವರ್ಷ. ಸ್ವಾಮಿ ವಿವೇಕಾನಂದರು ಅಮೆರಿಕಗೆ ಮತ್ತು ಗಾಂಧೀಜಿ ದಕ್ಷಿಣ ಆಫ್ರಿಕಾಗೆ ತೆರಳಿದ ವರ್ಷ ಇದು. ಅರವಿಂದರು ಇಂಗ್ಲೆಂಡಿನಿಂದ ಭಾರತಕ್ಕೆ ಮರಳಿದ ಇಸವಿ ಕೂಡಾ. ಈ ಇಸವಿಯ ಎರಡು ದಿನಾಂಕಗಳು ನಮಗೆ ಮುಖ್ಯವಾಗಬೇಕು. ಅವುಗಳಲ್ಲಿ ಒಂದನ್ನು– ಸೆಪ್ಟಂಬರ್ 11ನ್ನು ನಾವು ನೆನಪು ಮಾಡಿಕೊಳ್ಳುತ್ತೇವೆ. ಈ ದಿನದಂದು ವಿವೇಕಾನಂದರು ಷಿಕಾಗೊದಲ್ಲಿ ಐತಿಹಾಸಿಕವಾದ ಮಾತುಗಳನ್ನಾಡಿ ವಿಶ್ವದ ಗಮನ ಸೆಳೆದರು.
ಇನ್ನೊಂದು ದಿನಾಂಕ ಜೂನ್ 6, 1893. ಇದು ಮರೆಯಬಾರದ ದಿನ. ಆದರೆ ಇದನ್ನು ನಾವು ಪೂರ್ತಿ ಮರೆತೇ ಬಿಟ್ಟಿದ್ದೇವೆ. ಈ ದಿನ ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ತೀವ್ರ ಅವಮಾನವನ್ನು ಅನುಭವಿಸಿದ ದಿನ. ಗಾಂಧೀಜಿ ರೈಲಿನಲ್ಲಿ ಹೊರಟಿದ್ದರು. ಮೊದಲ ದರ್ಜೆಯ ಟಿಕೆಟ್ ಅವರ ಬಳಿ ಇತ್ತು. ಅವರು ಬ್ಯಾರಿಸ್ಟರ್ ಆಗಿದ್ದರು. ಶ್ವೇತವರ್ಣೀಯರಿಗೆ ಸಹಜವಾದ ಸೂಟುಬೂಟುಗಳ ಉಡುಪಿನಲ್ಲಿಯೇ ಅವರು ಅಲಂಕೃತರಾಗಿದ್ದರು. ಆದರೆ ಈ ಯಾವುದೂ, ಗಾಂಧೀಜಿ ಮೊದಲ ದರ್ಜೆಯಲ್ಲಿಯೇ ಪ್ರಯಾಣಿಸುವಂತೆ ಮಾಡಲಾಗಲಿಲ್ಲ! ಏಕೆಂದರೆ ಗಾಂಧೀಜಿ ಕಪ್ಪುಬಣ್ಣದ ಭಾರತೀಯರಾಗಿದ್ದರು. ಶ್ವೇತವರ್ಣೀಯರೊಡನೆ ಅವರು ಸಹ ಪಯಣಿಗರಾಗುವಂತಿರಲಿಲ್ಲ. ತಮ್ಮ ಮೊದಲ ದರ್ಜೆಯ ಟಿಕೆಟ್ ಸಮೇತ, ಉಡುಪಿನ ಸಮೇತ, ಗಾಂಧೀಜಿ ರೈಲಿನಿಂದ ತಳ್ಳಲ್ಪಟ್ಟರು.
ಅವಮಾನದ ಈ ನೋವನ್ನು ತೀವ್ರವಾಗಿ ಅನುಭವಿಸಿದ ಕಾರಣವಾಗಿಯೇ ಮೋಹನದಾಸ ಗಾಂಧೀಜಿ ಒಳಗಿನಿಂದ ಮಹಾತ್ಮನೊಬ್ಬ– ಮೊದಲ ದರ್ಜೆ, ಎರಡನೆಯ ದರ್ಜೆ ಇತ್ಯಾದಿ ನಾಗರಿಕ ಮನುಷ್ಯರು ಕಲ್ಪಿಸುವ ದರ್ಜೆಗಳನ್ನೆಲ್ಲ ಮೀರಿದ ಮಹಾತ್ಮನೊಬ್ಬ– ಪ್ರಕಟವಾಗಲು ಕಾರಣವಾಯಿತು.
ವಿವೇಕಾನಂದರದು ಧರ್ಮದ ಕುರಿತಾದ ಉತ್ಕಟ ಅಭಿಮಾನದ ಮಾತುಗಳು. ನೂರಾರು ವರ್ಷಗಳಿಂದ ದಟ್ಟವಾಗಿ ನಮ್ಮ ಮನಸ್ಸನ್ನು ಆವರಿಸಿದ ಕೀಳರಿಮೆಯನ್ನೆಲ್ಲ ತೊಡೆದುಹಾಕಬಲ್ಲ ಮಿಂಚುಬಲದ ಮಾತುಗಳು. ನಿಜವೇ. ಅಗತ್ಯವೇ. ಆದರೆ ಗಾಂಧೀಜಿಯದು ಕೀಳರಿಮೆಯನ್ನು ಬಲಾತ್ಕಾರವಾಗಿ ಅನುಭವಿಸುವಂತೆ ಮಾಡಲಾದ ವ್ಯವಸ್ಥೆಯೇ ಒಳಗಿನಿಂದಲೇ ನೇರವಾಗಿ ಮೂಡಿಬಂದ ಚಿಂತನೆಗಳು, ಕ್ರಿಯೆಗಳು. ಅವಮಾನವನ್ನು ಅನುಭವಿಸುವುದು ಕೂಡ ಮನುಷ್ಯರನ್ನು ಎಷ್ಟು ಎತ್ತರಕ್ಕೆ ಬೆಳೆಸಬಲ್ಲುದೆಂದು ತೋರಿಸುವ ಸಾಧನೆಗಳು. ಜೀವನದ ಕಾರಂಜಿಯನ್ನು ಯಾರೂ ಹತ್ತಿಕ್ಕಲಾಗುವುದಿಲ್ಲ, ಅದು ಎಂಥ ವಿಷಮ ಒತ್ತಡವನ್ನೂ ಒಡೆದು ಚಿಮ್ಮಬಲ್ಲುದು, ಹತ್ತಿಕ್ಕಿದ ಶಕ್ತಿಯನ್ನೇ ಬಳಸಿಕೊಂಡು ಅದು ಪುಟಿದೇಳಬಲ್ಲುದು ಎಂದು ತೋರಿಸಿದ ಮಾದರಿ ಗಾಂಧೀಜಿಯದು. ಇದು ನಾವು ನೆನಪು ಮಾಡಿಕೊಳ್ಳಬೇಕಾದದ್ದು. ಧ್ಯಾನಿಸಬೇಕಾದದ್ದು.
ಗಾಂಧೀಜಿಗೆ ಅವಮಾನವಾಯಿತು, ದುಃಖವಾಯಿತು. ಆದರೆ, ಸುಲಭ ಪರಿಹಾರದ ದಾರಿಯನ್ನು ಅವರು ಹುಡುಕಲಿಲ್ಲ. ಓರ್ವ ವಿಜ್ಞಾನಿಯಂತೆ ಮೂಲಭೂತವಾದ ಚಿಂತನೆ ಅವರಲ್ಲಿ ತೊಡಗಿಕೊಂಡಿತು. ಏಕೆಂದರೆ ಅವರು ಅವಮಾನಿಸಲ್ಪಟ್ಟ ಪ್ರಕರಣದಲ್ಲಿ ಅವರ ತಪ್ಪು ಲವಲೇಶವೂ ಇರಲಿಲ್ಲ. ಈ ಅಂಶವೇ ತುಂಬಾ ಮುಖ್ಯವಾದದ್ದು. ಅಂದರೆ, ತನ್ನ ತಪ್ಪಿಲ್ಲದೇ ತಾನು ಅವಮಾನಿತನಾಗುವುದಾದರೆ ಈ ನಾಗರಿಕತೆಯನ್ನು ಅರ್ಥಮಾಡಿಕೊಳ್ಳುವುದಕ್ಕಾಗಲೀ, ಇದರೊಡನೆ ವ್ಯವಹರಿಸುವುದಕ್ಕಾಗಲಿ ಬೇರೆಯೇ ಒಂದು ದಾರಿಯನ್ನು ಕಂಡುಕೊಳ್ಳಬೇಕಾಗಿದೆ ಎಂಬ ಚಿಂತನೆ.
ಪರ– ವಿರೋಧಗಳೆಂಬ ಎರಡು ಪಕ್ಷಗಳಾಗಿ ನಿಂತು ವಾಗ್ವಾದ– ಹೋರಾಟ ನಡೆಸುವ ಲಾಗಾಯ್ತಿನ ದಾರಿಗಿಂತ ಭಿನ್ನವಾದ ಹಾದಿಯೊಂದು ಬೇಕಿದೆ. ಆ ಹಾದಿಯನ್ನು ಹುಡುಕುವ ಹೊಣೆ– ನೈತಿಕ ಹೊಣೆ ತನ್ನದೇ ಆಗಿದೆ. ಏಕೆಂದರೆ ತಾನು ತಪ್ಪು ಮಾಡಿಲ್ಲ. ಆದುದರಿಂದಲೇ ನಡೆದುದೆಲ್ಲವನ್ನೂ ನಿಚ್ಚಳವಾಗಿ ತನಗೆ ನೋಡುವುದು ಸಾಧ್ಯ. ತನಗಾದ ನೋವನ್ನು ಮರೆತು ನೋಡುವುದು ಸಾಧ್ಯ. ಯಾರು ನಿಚ್ಚಳವಾಗಿ ನೋಡಬಲ್ಲ, ಅವನು ಹಾಗೆ ನೋಡಲಾಗದವರ ಕುರಿತೇ ಚಿಂತಿಸಬೇಕಾಗುತ್ತದೆ. ಇದು ಆ ನಿಚ್ಚಳತೆಯೇ ಉಂಟು ಮಾಡುವ ಒಂದು ನೈತಿಕ ಕಲಾಪ. ನಿಚ್ಚಳತೆ ಎಂದರೆ– Clarity. ಅದು ಅಹಂಕಾರವಲ್ಲ. ಗಾಂಧೀಜಿ ಇವೆಲ್ಲವನ್ನೂ ಪರಿಭಾವಿಸುತ್ತ ಬೆಳೆದರು. ಆ ಪರಿಭಾವನೆಯ ಅಂಶಗಳಿವು.
ತಾನು ಮಾಡಿದ ಕಾನೂನನ್ನು ತಾನೇ ಉಲ್ಲಂಘಿಸುತ್ತಾನಾದರೆ ಕಾನೂನುಗಳಿಂದ ಮನುಷ್ಯ ಒಳ್ಳೆಯವನಾಗುತ್ತಾನೆ ಎಂದು ತಿಳಿಯುವುದಾದರೂ ಹೇಗೆ?
ತನ್ನನ್ನು ನೋಡಿದ ಕೂಡಲೇ ಯಾಕೆ ಅವನು ರಾಕ್ಷಸನಂತಾದ?
ತನ್ನ ಸಮಾನನೆಂದು ಮತ್ತೊಬ್ಬನನ್ನು ಪರಿಗಣಿಸುವುದು ಅಷ್ಟು ಕಷ್ಟವೇ? ಯಾಕೆ ಕಷ್ಟ?
ತನ್ನಂತೆಯೇ ಮತ್ತೊಬ್ಬನಿದ್ದರೂ ಕಾದಾಟವೇ ಖಚಿತವೆ? ಹಾಗಾದರೆ ಏನು ಗತಿ?
ತನ್ನ ಮನೆಗೇ ಆದರೂ ತಾನು ಆಕ್ರಮ ಪ್ರವೇಶ ಮಾಡಬಹುದೆ?
ತಾನು ಯಂತ್ರನಾಗರಿಕತೆಗೆ ಸೇರಿದವನು ಎಂಬ ದರ್ಪವಿದೆ ಅವನಲ್ಲಿ; ಉಗಿಬಂಡಿಯನ್ನು ಏರಿದ್ದಾನೆ. ನಿಜ. ಆದರೆ ಯಂತ್ರ ನಾಗರಿಕತೆ ಇವನನ್ನು ಬದಲಿಸಲಿಲ್ಲ. ಅವನ ಆಳದಲ್ಲಿರುವ ದರ್ಪವು ಕಾಣಿಸಿಕೊಳ್ಳುವುದಕ್ಕೆ ಇದೇ ಕಾರಣವಾಯಿತು. ಯಂತ್ರ ನಾಗರಿಕತೆಯು ಮನುಷ್ಯ ನಾಗರಿಕತೆಯನ್ನು ಮೆಟ್ಟಿನಿಂತಿತು. ಈ ಇಕ್ಕಟ್ಟಿನಿಂದ ಹೊರಬರುವುದು ಹೇಗೆ?
ಇವನ ಶಿಕ್ಷಣ ಇವನನ್ನು ಬದಲಿಸಲಿಲ್ಲ. ಇವನ ಧರ್ಮ ಇವನನ್ನು ಬದಲಿಸಲಿಲ್ಲ. ಇವನ ಬೌದ್ಧಿಕ ಸಾಹಸಗಳು ಇವನನ್ನು ಬದಲಿಸಲಿಲ್ಲ. ಇವನನ್ನು ಬದಲಿಸುವುದು ಹೇಗೆ? ಬದಲಿಸಲೇಬೇಕಾಗಿದೆ. ತನ್ನ ತಪ್ಪನ್ನು ತಾನೇ ಮನಗಾಣುವಂತೆ ಮಾಡಬೇಕಾಗಿದೆ. ಈ ಹೊಣೆಯನ್ನು, ಇವನ ತಪ್ಪಿನಿಂದ ನೊಂದ ಜೀವದ ಮನದಾಳದಲ್ಲಿ ಪ್ರಕೃತಿಯೇ ಉಂಟು ಮಾಡುತ್ತದೆ.
ಈ ನೈತಿಕ ಹೊಣೆಯನ್ನು ನಿರ್ವಹಿಸಬೇಕಾದರೆ– ತನಗಾಗಿ ಅಲ್ಲ– ಅದಕ್ಕಿಂತ ಹೆಚ್ಚಾಗಿ ತನಗೆ ಅನ್ಯಾಯ ಎಸಗಿದವನಿಗಾಗಿ ತಾನು ನೋಯಬೇಕು. ತಾನು ‘ಶತ್ರು’ ಎಂದು ಇವನನ್ನು ಎಂದೂ ಭಾವಿಸದಿದ್ದರೂ ಸಾಮಾಜಿಕ ಸಂದರ್ಭಗಳಿಂದಾಗಿ ತನ್ನನ್ನು ಶತ್ರು ಎಂದು ಭಾವಿಸಿ ಅದರಂತೆ ನಡೆಸಿಕೊಳ್ಳುವವರಿಗಾಗಿ ನೋಯುವುದೇ ನಿಜವಾದ ನೋವು. ತನಗಾದ ನೋವನ್ನು ಮೀರಿದಾಗಲೇ ನಿಜವಾದ ನೋವೆಂದರೇನೆಂದು ಗೊತ್ತಾಗುವುದು.
ತನ್ನಂತೆ ನೊಂದವರಿಗಾಗಿ ಸರಿ, ನೋವನ್ನು ಉಂಟು ಮಾಡುವವರಿಗಾಗಿಯೂ ನೋಯುವುದು ಕೂಡ– ಇದು ಗಾಂಧೀಜಿ. ಇದು ಜೀಸಸ್, ಇದು ಬಹುಮಂದಿ ಸಂತರ ನಡವಳಿಕೆ. ಪ್ರಾಯಃ ನಮ್ಮೊಳಗೆ ಇರುವ ದೇವರು ನಮಗಾಗಿ ಹೀಗೇ ನೋಯುತ್ತಿರಬಹುದು.
ಈ ಚಿಂತನೆ ಆವರಿಸಿಕೊಂಡಾಗ ಗಾಂಧೀಜಿಯ ನುಡಿಗಟ್ಟೇ ಬದಲಾಗಿ ಬಿಟ್ಟಿತು. ಅದು ವಾದ–ಪ್ರತಿವಾದಗಳ ಖಂಡನೆ– ಮಂಡನೆಗಳ ನುಡಿಗಟ್ಟಿನಿಂದ ಮೇಲೇರಿ ಸತ್ಯ– ಶೋಧನೆಯ ನುಡಿಗಟ್ಟಾಗಿ ಬಿಟ್ಟಿತು. ಅದು ಉಪನಿಷತ್ ಪರಂಪರೆಗೆ ಸೇರಿದ ನುಡಿಗಟ್ಟಾಗಿ ಬಿಟ್ಟಿತು.
ಕಠೋಪನಿಷತ್ತಿನ ಸಂದರ್ಭವನ್ನು ನೋಡಿ. ತಂದೆಯಾದ ವಾಜಶ್ರವಸ, ಒಂದು ಯಜ್ಞದಲ್ಲಿ ತೊಡಗಿಕೊಂಡು, ದಾನಾರ್ಹವಲ್ಲದ ಗೋವುಗಳನ್ನು ದಾನ ನೀಡುತ್ತಿದ್ದಾನೆ. ತಿಳಿದೂ ತಪ್ಪು ಮಾಡುತ್ತಿದ್ದಾನೆ! ಈ ತಪ್ಪನ್ನೆಲ್ಲ ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದ ಹುಡುಗ ನಚಿಕೇತ, ಎದ್ದು ನಿಂತು, ‘ನನ್ನನ್ನು ಯಾರಿಗೆ ದಾನ ಕೊಡುತ್ತೀಯೆ?’ – ಎಂದು ಕೇಳಿದನಂತೆ, ಮತ್ತೆ ಮತ್ತೆ ಕೇಳಿದನಂತೆ.
ಗಮನಿಸಿ: ಈ ನುಡಿಗಟ್ಟು ನೇರವಾಗಿ ಏನನ್ನೂ ಹೇಳುತ್ತಿಲ್ಲ. ನೀನು ತಪ್ಪು ಮಾಡುತ್ತಿರುವೆ ಎಂದು ಹೇಳುತ್ತಿಲ್ಲ. ಯೋಚಿಸಿ ನೋಡು ಎಂದು ಕೂಡ ಹೇಳುತ್ತಿಲ್ಲ. ನೀನು ಮಾಡುತ್ತಿರುವುದಕ್ಕೆ ಎಲ್ಲರ ಸಮ್ಮತಿ ಇದೆಯೆ ಎಂದು ಕೇಳುತ್ತಿಲ್ಲ. ಮತ್ತೇನೆಂದರೆ– ತನ್ನ ಕಣ್ಣೆದುರು ನಡೆಯುತ್ತಿರುವ ವಿಪರ್ಯಾಸಕ್ಕೆ ತನ್ನ ಮೈಮನಗಳನ್ನು ಇಡಿಯಾಗಿ ಒಡ್ಡಿ ಪ್ರತಿಸ್ಪಂದಿಸುತ್ತಿದೆ. ಯಾವುದೋ ಪ್ರಯೋಗಕ್ಕೆ ಸಿದ್ಧವಾದಂತಿದೆ. ತನ್ನನ್ನು ಆ ಗೋವುಗಳ ಜೊತೆ ಸಮೀಕರಿಸಿಕೊಳ್ಳುತ್ತಿದೆ. ನನ್ನ ಮೇಲಿನ ನಿನ್ನ ಅಧಿಕಾರವನ್ನು ನಾನು ಪ್ರಜ್ಞಾಪೂರ್ವಕವಾಗಿ ಒಪ್ಪಿಕೊಳ್ಳುವೆ ಎನ್ನುತ್ತಿದೆ. ನನ್ನನ್ನೇನು ಮಾಡುವೆಯೋ ಮಾಡು ಎಂದು ತನ್ನನ್ನು ಒಪ್ಪಿಸಿಕೊಂಡಿದೆ. ಹಾಗೆ ಒಪ್ಪಿಸಿಕೊಳ್ಳುವ ಮೂಲಕ ಅವನ ತಪ್ಪು ಅವನಿಗೇ ಅರಿವಾಗುವುದಕ್ಕೆ ಇರುವ ಅಡ್ಡಿಗಳನ್ನು ನಿವಾರಿಸುತ್ತಿದೆ. ತಪ್ಪುಗಾರನಲ್ಲಿಯೇ ಒಳನೋಟವೊಂದು ಮೂಡುವಂತೆ ಈ ನುಡಿಗಟ್ಟು ಒಳಗಿನಿಂದಲೇ ನುಲಿಯುತ್ತಿದೆ.
ಆಧುನಿಕಯುಗದಲ್ಲಿ ಇದು ಗಾಂಧೀ ನುಡಿಗಟ್ಟು! ಇದು ‘ಅಂತರ್ವಾಣಿ’ಯ ನುಡಿಗಟ್ಟು. ಆದುದರಿಂದಲೇ ಗಾಂಧೀಜಿ ‘ಅಂತರ್ವಾಣಿ’ ಎಂದು ಮತ್ತೆ ಮತ್ತೆ ಹೇಳುತ್ತಿದ್ದುದು– ಆಪ್ತರೇ ಕೆಲವರು ‘ಅಂತರ್ವಾಣಿ’ಗೆ ಆಕ್ಷೇಪಿಸುತ್ತಿದ್ದರೂ. ವಾದ– ಪ್ರತಿವಾದಗಳನ್ನು ಕೇಳುವ ಕಿವಿಯ ಸೂಕ್ಷ್ಮತೆಯೇ ಬೇರೆ,ಅಂತರ್ವಾಣಿಯನ್ನು ಕೇಳುವ ಕಿವಿಯ ಸೂಕ್ಷ್ಮತೆಯೇ ಬೇರೆ. ಈ ‘ಬೇರೆ’ ಗಾಂಧೀಜಿಯ ಹಾದಿಯಾಗಿದೆ.
ಗಾಂಧೀಜಿ – ತಮ್ಮ ಜೀವನವನ್ನು ‘ಸತ್ಯದ ಜೊತೆಗೆ ಪ್ರಯೋಗ’ ಎಂದು ಕರೆದುಕೊಂಡದ್ದು ಮಾರ್ಮಿಕವಾಗಿದೆ. ‘ಸತ್ಯ’ವು ಸಿದ್ಧಸತ್ಯವಲ್ಲ. ಸಿದ್ಧವಾಗಬೇಕಾದ, ಸಿದ್ಧಗೊಳ್ಳುತ್ತಿರುವ ಸತ್ಯ. ಅದು ಮೈ ಮನಗಳ ನಿಜದಲ್ಲಿ ಜೀವಂತವಾಗಿ ಪ್ರಕಟಗೊಳ್ಳಬೇಕಾದ ಸತ್ಯ. ಸತ್ಯವು ಅನುಭವದ ಸತ್ಯವಾಗದಿದ್ದರೆ, ಅದು ‘ಜಡ’ವಾಗಿ ಬಿಡುತ್ತದೆ. ಜಡಸತ್ಯವು ಸುಳ್ಳಿಗೆ ಸಮಾನ. ಆದುದರಿಂದಲೇ ಗಾಂಧೀಜಿ, ತಮ್ಮ ದೇಹ– ಮನಗಳ ಮೇಲೆ ನಿರಂತರವಾಗಿ ಪ್ರಯೋಗಗಳನ್ನು ನಡೆಸುತ್ತ, ಸತ್ಯವು ತಮ್ಮ ಮೈ ಮನಗಳಲ್ಲಿ ನೆಲೆಸುವುದಕ್ಕೆ ಇವುಗಳನ್ನು ಹದಗೊಳಿಸುತ್ತ ನಡೆದರು. ಈ ಪ್ರಯೋಗಗಳ ಮೂಲಕವೇ ‘ಆಹಾರ’ವು ದೇಹಕ್ಕೆ ‘ಬಲ’ವಾಗಿರುವಂತೆ ನಿರಾಹಾರವು ಮನಸ್ಸಿಗೆ ಬಲ ಎಂದು ಅರಿತರು. ಮಾತಿನಂತೆ ಮೌನವೂ ಬಲ ಎಂದರಿತರು.
ಸಹಜ ಸಂತೋಷವೂ ದೇಹಕ್ಕೆ ಬೇಕಾಗಿರುವಂತೆ, ಇನ್ನೊಬ್ಬರಿಗಾಗಿ ತೀವ್ರವಾಗಿ ನೋಯುವುದೂ ಮನಸ್ಸಿಗೆ ಅಪಾರವಾದ ಬಲವನ್ನು ತಂದುಕೊಡಬಲ್ಲುದು ಎಂದರಿತರು.
ಮನಸ್ಸಿನ ಬಲವೆಂದು ಕಾಣಿಸುವ ಪೂರ್ವಾಗ್ರಹಗಳು ನಿಜಕ್ಕೂ ದುರ್ಬಲ ಎಂದರಿತರು. ಮುಕ್ತ ಮನಸ್ಸೇ ದೊಡ್ಡ ಬಲ ಎಂದರಿತರು.
ಪ್ರೀತಿಯ ಬಲದ ಮುಂದೆ ಯಾತರ ಬಲವೂ ಇಲ್ಲ ಎಂದರಿತರು.
ಈ ಎಲ್ಲವನ್ನೂ ಮೈ–ಮನಗಳ ಸ್ಥಳೀಯ ನಿಜದಲ್ಲಿ ಅನುಭವಿಸಿ ಕಂಡುಕೊಂಡುದರಿಂದ, ಜಗದ್ ವ್ಯಾಪಿಯಾಗುವ ಹಂಬಲಕ್ಕೆ ಸ್ಥಳೀಯವಾಗುವುದೇ ಯೋಗ್ಯ ಚಿಕಿತ್ಸೆ ಎಂದು ಕಂಡುಕೊಂಡರು. ಕೊನೆಯದಾಗಿ, ಬದುಕಿನ ಪ್ರಯೋಗಗಳ ಸಾರ್ಥಕತೆಯ ಕ್ಷಣ ಸಾವಿನಲ್ಲಿ– ಸಾವಿನ ಕ್ಷಣದಲ್ಲಿ ಪ್ರತಿಫಲಿಸುತ್ತದೆ ಎಂದು ತನ್ನೊಳಗೇ ಅರಿತರು.
Man who dies rich dies disgraceful ಎಂದಿದ್ದ ಡೇಲ್ ಕಾರ್ನೆಗಿ. ಮುಪ್ಪಾಗಿ, ರೋಗಪೀಡಿತನಾಗಿ, ಮನೆಯಲ್ಲಿ ಸಾಯುವುದು ಕ್ಷತ್ರಿಯನಿಗೆ ಅಧರ್ಮ, ಕ್ಷತ್ರಿಯನು ರಣರಂಗದಲ್ಲೇ ತನ್ನ ಮರಣವನ್ನು ಸಂಧಿಸಬೇಕು– ಎಂದಿದ್ದ ಭೀಷ್ಮ; ಮಹಾಭಾರತದಲ್ಲಿ.
ಇನ್ನೊಂದು ರೀತಿಯಲ್ಲಿ ಅಂಬೇಡ್ಕರ್ ಹೇಳಿದ್ದರು: ಹಿಂದೂ ಆಗಿ ಹುಟ್ಟಿದ್ದೇನೆ. ಆದರೆ ಹಿಂದೂ ಆಗಿ ಸಾಯಲಾರೆ ಎಂದು. ಇಚ್ಛಾಮರಣದ ಇನ್ನೊಂದು ರೂಪವಿದು. ಗಾಂಧೀಜಿ 1948 ಜನವರಿ ತಿಂಗಳ ಒಂದು ದಿನ, ಮನು, ಆಭಾ ಗಾಂಧಿ ಜೊತೆ ಮಾತನಾಡುತ್ತಾ ತಾನು ಮುಪ್ಪಿನಿಂದ, ರೋಗಾರ್ತನಾಗಿ ಸತ್ತರೆ ಗಾಂಧೀ ಖಂಡಿತಕ್ಕೂ ಮಹಾತ್ಮನಲ್ಲ ಎಂದು ಭಾವಿಸು. ಬದಲಾಗಿ, ಗುಂಡಿಗೆ ಎದೆಯೊಡ್ಡಿ, ಗುಂಡೆಸೆದವನ ಮೇಲೆ ಕಿಂಚಿತ್ತೂ ದ್ವೇಷವಿಲ್ಲದೆ– ರಾಮನಾಮವನ್ನು ಉಚ್ಚರಿಸುತ್ತ, ತಾನು ಸಾವಿಗೆ ನಡೆದರೆ ಆಗ– ಆಗ ಮಾತ್ರ– ತನ್ನನ್ನು ಮಹಾತ್ಮನೆಂದು ತಿಳಿದುಕೊಳ್ಳಬಹುದು ಎಂದಿದ್ದರು. ರೈಲಿನಿಂದ ತಳ್ಳಿದ ಕ್ಷಣದಿಂದ, ಗಾಂಧಿ ಎಂಥ ದೊಡ್ಡ ಪ್ರಯಾಣಕ್ಕೆ ಸಜ್ಜುಗೊಂಡರೆಂಬುದೇ 19–20ನೆಯ ಶತಮಾನದ ಇತಿಹಾಸದ ಜೀವಂತ ವಸ್ತುವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.