ಗಾಂಧೀಜಿಯವರ ಜೀವನ ವಾಸ್ತವಾದರ್ಶಗಳ ಮಂಥನ; ಮಹಾದರ್ಶನ. ಎಲ್ಲಕ್ಕಿಂತ ಮಿಗಿಲಾಗಿ ರಕ್ತ ಮಾಂಸಗಳಿಂದ ರೂಪಿಸ್ಪಟ್ಟ ಅದ್ಭುತ ಮಹಾಕಾವ್ಯ. ಗಾಂಧೀಜಿಯವರ ಬದುಕೇ ಮಹಾಕಾವ್ಯವೆಂದ ಮೇಲೆ ಯಾವ ಭಾಷಾ ಸಾಹಿತ್ಯ ಪ್ರಕಾರಗಳು ತಾನೇ ಈ ಮಹಾಕಾವ್ಯದ ಪ್ರಭಾವದಿಂದ ಹೊರಗುಳಿಯಲು ಸಾಧ್ಯ? ಅಂತೆಯೇ ಕನ್ನಡ ಸಾಹಿತ್ಯಲೋಕವೂ ಕೂಡ. ತನ್ನ ಸಣ್ಣಕತೆ, ಕಾದಂಬರಿ, ನಾಟಕಗಳಿಂದ ಹಿಡಿದು ಕಾವ್ಯ–ಮಹಾಕಾವ್ಯದವರೆಗೆ ಎಲ್ಲ ಪ್ರಕಾರಗಳಲ್ಲೂ ‘ಗಾಂಧೀಜಿ’ ಎಂಬ ಮಹಾಕಾವ್ಯದಿಂದ ಬೇಕು ಬೇಕಾದ ರೀತಿಯಲ್ಲಿ ‘ದ್ರವ್ಯ’ವನ್ನು ಪಡೆದು ಬಳಸಿಕೊಂಡಿರುವ ಕನ್ನಡ ಸಾಹಿತ್ಯಲೋಕ ಗಾಂಧೀಜಿಯನ್ನು ಆರಾಧನಾ ಭಾವದಿಂದ ಆರೋಗ್ಯಕರ ವಿಮರ್ಶೆಯವರೆಗೆ ಅನುಸಂಧಾನಕ್ಕೆ ಒಳಪಡಿಸಿದೆ. ಹಾಗಾಗಿ ಕನ್ನಡ ಸಾಹಿತ್ಯದ ಮೇಲೆ ಮಹಾತ್ಮನ ಪ್ರಭಾವಮುದ್ರೆ ಸ್ಪಷ್ಟವಾಗಿ ಗೋಚರಿಸುತ್ತದೆ. ಜೊತೆಗೆ ಗಾಂಧೀಜಿಯ ವ್ಯಕ್ತಿತ್ವ ಮತ್ತು ಹೋರಾಟವನ್ನು ಸಾಹಿತ್ಯಕ್ಕೆ ಗ್ರಾಸವಾಗಿಸಿಕೊಂಡು ಕನ್ನಡ ಸಾಹಿತಿಗಳು ಸಾಮಾಜಿಕ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ ಎನ್ನಬೇಕು.
ಕನ್ನಡ ಕಾವ್ಯಲೋಕ ಮಹಾತ್ಮನಿಗೆ ಪ್ರತಿಕ್ರಿಯಿಸಿದ ರೀತಿಗೆ ಮಾತ್ರ ನನ್ನ ಈ ವಿಶ್ಲೇಷಣೆಯನ್ನು ಸೀಮಿತಗೊಳಿಸಿಕೊಂಡಿದ್ದೇನೆ. ಇದರಲ್ಲೂ ಸ್ಥೂಲವಾಗಿ ಮೂರು ಹಂತಗಳನ್ನು ಗುರುತಿಸಿಕೊಂಡಿದ್ದೇನೆ. ಮೊದಲನೆಯ ಹಂತ ಗಾಂಧೀಜಿ ಈ ನೆಲದಲ್ಲಿ ರಕ್ತಮಾಂಸಗಳಿಂದ ದಂತಕತೆಯಾಗುವ ಮೊದಲು ನಡೆದಾಡಿದ ಸಂದರ್ಭದಲ್ಲಿ ಅವರ ದರ್ಶನ–ಸಾಮೀಪ್ಯಗಳಿಂದಾಗಿ, ಪ್ರಭಾವಿತಗೊಂಡು ಪ್ರತಿಕ್ರಿಯಿಸಿದ್ದು. ಎರಡನೆಯದು ತಾವೇ ಕಂಡ ತಮ್ಮ ಮಹಾತ್ಮ ತಮ್ಮ ಕಣ್ಣೆದುರೇ ಹತ್ಯೆಗೊಳಗಾದಾಗ ಕನ್ನಡ ಕಾವ್ಯಲೋಕ ತೋರಿದ ಪ್ರತಿಕ್ರಿಯೆ. ಮೂರನೆಯದು ಭೌತಿಕವಾಗಿ ಗಾಂಧಿ ಹತ್ಯೆಯಾದ ಮೇಲೆ ಗಾಂಧೀಜಿಯನ್ನು ಅಂಗುಲಂಗುಲ ತಾತ್ವಿಕವಾಗಿ ಕೊಲ್ಲುತ್ತಿರುವ ಈ ಕಾಲಘಟ್ಟದ ಬಗ್ಗೆ ಕನ್ನಡ ಕಾವ್ಯ ಲೋಕದ ಸಿಟ್ಟು ಮತ್ತು ವಿಡಂಬನಾತ್ಮಕ ಪ್ರತಿಕ್ರಿಯೆ.
ನವೋದಯಕಾಲ: ಆರಾಧನಾಭಾವ
ನವೋದಯ ಕಾಲಘಟ್ಟ ಹೇಳಿ ಕೇಳಿ ಐನ್‌ಸ್ಟಿನ್ ಹೇಳಿದಂತಹ ದಂತಕತೆಯಾಗಬಲ್ಲ ಜೀವಂತ ರಕ್ತಮಾಂಸಮಯ ಮನುಷ್ಯ ಜೀವಿಸಿದ್ದನ್ನೂ ಈ ನೆಲದಲ್ಲಿ ನಡೆದಾಡಿದ್ದನ್ನೂ ಸ್ವಯಂ ಕಂಡ ಕಾಲವದು. ಭಾರತದ ಸ್ವಾತಂತ್ರ್ಯ ಹೋರಾಟ ತನ್ನ ಪ್ರಖರ ಉನ್ಮಾದದಲ್ಲಿದ್ದ ಕಾಲ ಅದು. ‘ಗಾಂಧೀಜಿ ಒಂದು ವ್ಯಕ್ತಿಯಲ್ಲ; ಅದು ಒಂದು ಪಂಥ’ ಎಂದು ಭಾವಿಸುತ್ತಲೇ ವ್ಯಕ್ತಿಯನ್ನು ಆರಾಧನಾ ಭಾವದಿಂದ ಕಾಣದಿದ್ದಲ್ಲಿ ಪಂಥ ಎಲ್ಲಿ ಕೈ ಜಾರಿ ಹೋದೀತೋ ಎಂಬ ಎಚ್ಚರ–ಚಚ್ಚರದೊಂದಿಗೆ ನವೋದಯ ಕಾವ್ಯ ಪ್ರತಿಕ್ರಿಯಿಸಿತು.
ಈ ಬಗೆಯ ‘ಆರಾಧನಾಭಾವ’ದ ಪ್ರತಿಕ್ರಿಯೆಗಳಿಗೆ ಒಂದೆರೆಡು ಉದಾಹರಣೆಗಳನ್ನು ನೀಡಬಹುದಾಗಿದೆ. ‘ಗಾಂಧೀಜಿಯ ಬದುಕು ಸರಳ; ಆದರೆ ಅವರ ವ್ಯಕ್ತಿತ್ವ ಭವ್ಯ’ ಎಂಬುದನ್ನು ಹೇಳುತ್ತಲೇ ಗಾಂಧೀಜಿ ಜಗತ್ತಿಗೆ ತಾರಕಮಂತ್ರ ಎಂದವರು ಕೈಲಾಸಂ ಅವರು. ಅವರ ಇಂಗ್ಲಿಷ್ ಕವನದ ಕನ್ನಡ ರೂಪಾಂತರ ಜಿ.ಪಿ. ರಾಜರತ್ನಂ ಅವರ ಲೇಖನಿಯನ್ನು ಹೀಗೆ ಹರಿದುಬಂದಿದೆ:
‘ಒಂದೆ ಹಿಡಿಮೂಳೆ ಚಕ್ಕಳ ಅಷ್ಟೆ; ಅದಕೆ ಸುರಿ
ಮೂರೋ ನಾಲ್ಕು ಚಮಚ ರಕ್ತ, ಮಾಂಸ
ಜೊತೆಗಿರಿಸು ನೆರೆಕೊರೆದ ಕಡಲಿನಾಳದ ಮನಸ
ಒಳಗಿರಿಸು ಹಿಮಗಿರಿಯ ಮೀರಿ ನಿಮಿರ್ದ ಹಿರಿಯಾತ್ಮವ
ಹಚ್ಚು ಮೊರಕಿವಿಯೆರಡ, ಎರಡು ಪಿಳಿಪಿಳಿ ಕಣ್ಣ
ನೆರೆಬಂದ ಕಡಲಿನೊಳ್ ಪ್ರೇಮವಂ ತುಂಬಿದೆದೆಯ.
.... ಚಿಂದಿಯಲಿ ಸುತ್ತಿ, ಸೆಳೆ ಬೊಂಬಿನಾ
ಲಂಬವನಿತ್ತು ಬಡಿಸುತ್ತಾ! ಅವನೆ ಕಾಣ್! ಲೋಕತಾರಕ ಬಾಪೂ!’
ಕೈಲಾಸಂಗೆ ಬಾಪೂ ಹೀಗೆ ಲೋಕತಾರಕರಾಗಿ ಕಂಡರೆ ಡಿವಿಜಿ ಅವರಿಗೆ ಗೀತೆಯ ಸ್ಥಿತಪ್ರಜ್ಞನಂತೆ ಕಾಣುತ್ತಾರೆ:
‘ಇಂದ್ರಿಯಂಗಳ ಜಹಿಸಿ ಚಿತ್ತಶುದ್ಧಿಯ ಬಯಸಿ
ಲೋಭಮಂ ತ್ಯಜಿಸಿ, ರೋಷವ ವರ್ಜಿಸಿ, ಸರ್ವಸಖ್ಯವ
ಭಜಿಸಿ, ತೃಪ್ತತಿಯನಭ್ಯಸಿಸಿ ಸತ್ಯಪಾಲನೆಯೊಂದ
ಮನದೊಳರಿಸಿ, ಕಾಯಕಷ್ಟವ ಸಹಿಸಿ, ವೈರಿಗನಾಮಂ ಕ್ಷಮಿಸಿ
ಸರ್ವಸಮತೆಯ ಗಳಿಸಿ, ಶಮವನರಿಸಿ, ಸ್ವಾತ್ಮ ಶಿಕ್ಷಣವೇ
ಸ್ವರಾಜ್ಯವೆನ್ನುತ ವಚಿಸಿ... ದೈವ ಸಂಪನ್ಮಾರ್ಗದರ್ಶಕಂ
ಗಾಂಧಿಯಲ್ತೆ’
ಎನ್ನುತ್ತಾರೆ.ದೈವ ಸಂಪನ್ಮಾರ್ಗದರ್ಶಕನಾದ ಗಾಂಧೀಜಿ, ಪು.ತಿ.ನ. ಅವರಿಗೆ ದೇವರ ಅವತಾರವೋ ಅಥವಾ ಹರಿಯ ರಾಯಭಾರಿ ಆಗಿಯೋ ಕಾಣುತ್ತಾರೆ. ಅವರ ‘ನೆರಳು’ ಎಂಬ ಕವನ ಹೀಗಿದೆ:
‘ಮೇಲೊಂದು ಗರುಡ ಹಾರುತಿಹುದು
ಕೆಳಗದರ ನೆರಳು ಓಡುತಿಹುದು
ಅದಕೋ ಅದರಿಚ್ಛೆ ಹಾದಿ
ಇದಕೋ ಅದು ಹರಿದತ್ತ ಬೀದಿ
ಕೆರೆಬಾವಿ ಕೊಳ ಕಂಡೂ ಕಾಣದೊಲೆ
ಗಿಡಗುಲ್ಮ ತೆವರು ತಿಟ್ಟು;
ಎನ್ನದಿದಕೊಂದು ನಿಟ್ಟು
ಹರಿದತ್ತ ಹರಿಯ ಚಿತ್ತ
ಈ ಧೀರ ನಡೆವನತ್ತ.
ಇದ ನೋಡಿ ನಾನು ನೆನೆವನಿಂದು
ಇಂಥ ನೆಳಲೇ ಗಾಂಧಿಯೆಂದು.’
ಪು.ತಿ.ನ. ಅವರು ಗಾಂಧೀಜಿಯನ್ನು ದೇವರ ಪ್ರತಿರೂಪವೆಂದು ಭಾವಿಸಿದರೆ, ವಿ.ಸೀ. ಅವರು ಗಾಂಧೀಜಿಯನ್ನು ಪ್ರವಾದಿಗಳ ಸಾಲಿನಲ್ಲಿ ನಿಲ್ಲಿಸುತ್ತಾರೆ. ಅಷ್ಟೇ ಅಲ್ಲ; ಇಂತಹ ಪ್ರವಾದಿಯನ್ನು ಮತ್ತೊಮ್ಮೆ ಕಾಣಲು ಇನ್ನೆಷ್ಟು ಶತಮಾನಗಳು ಬೇಕೋ ಎಂದು ಮರಗುತ್ತಾರೆ.
‘ನೂರಾರು ವರ್ಷಕ್ಕೆ ಸಾವಿರಕ್ಕೆ ಎರಡಕ್ಕೆ
ಅಲ್ಲಿ ಯೇಸ ಕ್ರಿಸ್ತ, ಇಲ್ಲೆಮ್ಮ ಸಿದ್ಧಾರ್ಥ
ಆದಿಜಿನಪುತ್ರ, ಸುಭ್ರಾತೃ ಬಾಹುಬಲಿಯಂತೆ
ಭೂಮಿಗತಿಶಯದಂತೆ
ಸಗ್ಗದಿದರೆಂಬಂತೆ
ಒಲವನೊಲವಿಗೆ ನೀವು ತಿರುಗಿಸಿದಿರಿ
ಕ್ಷಮೆಗೆ ಹಿರಿತ್ಯಾಗಕ್ಕೆ ತೇದಿರೊಡಲ’
ಎನ್ನುತ್ತಾರೆ. ಚೆನ್ನವೀರ ಕಣವಿಯವರಂತೂ ಮತ್ತೂ ಮುಂದೆ ಹೋಗಿ ಗಾಂಧಿಯನ್ನು ಬಸವಣ್ಣನ ಸಾಲಿನಲ್ಲಿ ನಿಲ್ಲಿಸುತ್ತಾರೆ.
‘ಯೇಸುಕ್ರಿಸ್ತನುತ್ಪ್ರೇಮಹಸ್ತಸ್ತೇಜವಾಂತು ಬಂತು
ಬುದ್ಧನೆದೆಯ ಉದ್ಭುದ್ಧನೀತಿ ಹಿಂಸೆಯನು ತಳ್ಳಿನಿಂತು
ಗಾಂಧೀರೂಪ ಅಪರೂಪ ದೀಪ ಭಾರತವ ಬೆಳಗಿತಿಂತು’
ಹೀಗೆ ಡಿ.ವಿ.ಜಿ., ಪು.ತಿ.ನ., ವಿ.ಸೀ., ಕಣವಿ ಅವರಿಗೆ ಗಾಂಧೀಜಿ ಒಬ್ಬ ಅವತಾರಪುರುಷ, ಪ್ರವಾದಿಯಾಗಿ ಕಂಡರೆ ಕುವೆಂಪುಗೆ ಗಾಂಧಿ ಕಾಣುವುದೇ ಬೇರೆ. ಸಾಮಾನ್ಯನೊಬ್ಬ ಅಸಾಮಾನ್ಯನಾಗಿ ಬೆಳೆದ ಪವಾಡವನ್ನು ಅವರನ್ನು ಕಾಣುತ್ತಾರೆ. 1934ರಲ್ಲಿ ಗಾಂಧೀಜಿಯವರು ಮೈಸೂರಿಗೆ ಬಂದಾಗ ನೆರೆದ ಜನಸ್ತೋಮವನ್ನು ಕಂಡು ಬೆರಗಾದ ಕುವೆಂಪುರವರು ಉದ್ಗರಿಸಿದ್ದು ಹೀಗೆ:
‘ಇವನು ಕಲ್ಲಿನಲಿ ರೊಟ್ಟಿ ಮಾಡಿಲ್ಲ, ಹುಲ್ಲಿನಲಿ
ನಿಶಿತಾಸ್ತ್ರವನು ಮಂತ್ರದಿಂದ ರಚಿಸಿ ದಾನವನ
ಕೊಂದಿಲ್ಲ; ಅರ್ಧನರ ಅರ್ಧಮೃಗ ರೂಪದಲಿ
ಕಂಭವನೊಡೆದು ಗುಡುಗುಡಿಸಿ ಮೂಡಿದವಲ್ಲ!
ದಶಶಿರನ ಕೊಂದಿಲ್ಲ; ಚಕ್ರಧರನೂ ಅಲ್ಲ
ಅದ್ಭುತ ಪವಾಡಗಳ, ಅಘಟಿತ ವಿಚಿತ್ರಗಳ
ಗೋಜಿಗವನೆಂದಿಗೂ ಹೋಗುವಾತನೇ ಅಲ್ಲ!
ಮತ್ತಾವ ದೇವತ್ವ ವೀಕ್ಷಣೆಗೆ ನೆರೆದಿಹರ್ ಇನಿತು
ಮನುವಂಶಜರ್?’
ಎಂದು ಆಶ್ಚರ್ಯಚಕಿತರಾಗುತ್ತಾರೆ ಕುವೆಂಪು. ಮಾನವನ ಅಭ್ಯುದಯವನು ಸಾರುವ ಮನುಜರಾಗಿ ಮನುಜರಂತೆಯೇ ಬಾಳುವವರೇ ದೇವತೆಗಳಾಗುವ ಕಾಲ ಬಂದಿದೆ ಎಂದೂ ಅವರು ಹೇಳುತ್ತಾರೆ.
ದೈವತ್ವಕ್ಕೆ ಏರುವ ಮಣ್ಣಿನ ಮಗನ ಈ ಕಲ್ಪನೆ (ಈಗಿನ ನಮ್ಮಂತಹ ಮಣ್ಣಿನಮಕ್ಕಳಲ್ಲ!) ಅಡಿಗರ ಕವನದಲ್ಲಿ ಹೀಗೆ ಬರುತ್ತದೆ.
‘ಯಾವ ಬಿತ್ತೋ ನಾನು ಅದೇ
ಇದೇ ನೆಲದ ಬಸಿರಲಿ
ಬಾನೆತ್ತರ ಬೆಳೆವಂದವ
ಆ ಚೆಂದವ, ಬಿಸವಂದವ
ನಿನ್ನೊಳಣ್ಣ ಕಂಡೆನು’
ಇನ್ನು, ಗಾಂಧೀಜಿಯ ನಗುವಾದರೂ ಎಂತಹುದು? ದ.ರಾ. ಬೇಂದ್ರೆ ಜ್ಞಾಪಿಸಿಕೊಳ್ಳುತ್ತಾರೆ.
‘ನೆನಸೇವು ನಿನ್ನ ನಗೀ
ನೆನಸೇವು ನಿನ್ನ ಈ ನಗೀ
ಒಳಗೆ ಎಲ್ಲ ಧಗೀ
ಬರೇ ಬೆಳಕು ಬರೇ ಬೆಳಕು
ನಿಂ ಮಾತು ಮಿಂಚಿನಗರಿ
ನಿಮ್ಮ ಹೃದಯದಾಗೆ ಇಲ್ಲ ಪಾಪ’
ಎನ್ನುತ್ತಾರೆ. ಜಿ.ಎಸ್. ಶಿವರುದ್ರಪ್ಪನವರು ಗಾಂಧೀಜಿಯವರ ಜೀವನದ ಅಸಂಗತಗಳನ್ನು ಹೀಗೆ ಹೇಳುತ್ತಾರೆ:
‘ಕಾವಿಯುಡಲಿಲ್ಲ; ಹೆಣ್ಣು ಬಿಡಲಿಲ್ಲ
ಎಲ್ಲೋ ಮರದೊಳಗೆ ಕೂತು ರಹಸ್ಯವಾಗಿ
ಜಪಮಣಿ ಎಣಿಸಿ ಸಮಾಧಿಸ್ಥನಾಗಲಿಲ್ಲ
ತೆರೆದ ಬಯಲಿನ ಕೆಳಗೆ ಎಲ್ಲರ ಜೊತೆಗೆ ಕೂತು
ಭಜನೆ ಮಾಡಿದೆ
ಸಬಕೋ ಸನ್ಮತಿ ದೇ ಭಗವಾನ್
ಪವಾಡಗಳನ್ನು ತೋರಿಸಿ ಯಾರನ್ನೂ ಮರಳು ಮಾಡಲಿಲ್ಲ,
ಮಾಡಿದ್ದೇ ಪವಾಡದ ತಲೆ ಮೆಟ್ಟಿತು
ಕತ್ತಿಕೋವಿ ಹಿಡಿಯಲಿಲ್ಲ
ಆದರೂ ಯದ್ಧ ಮಾಡಿದೆ
ಎಲ್ಲವನ್ನೂ ಕಟ್ಟಿಕೊಂಡೆ
ಆದರೂ ಏಕಾಂಗಿಯಾಗಿಯೇ ತೋರಿದೆ
ನೋಡುವುದಕ್ಕೆ ಏಕಾಂಗಿಯಾದರೂ ಜನಗಣಮನ ಅಧಿನಾಯಕನಾಗಿ ನಡೆದೆ’
ಬಹುಶಃ ಈ ಕವನದ ಸಾಲುಗಳು ಗಾಂಧೀಜಿಯುವ ಭವ್ಯ ದಿವ್ಯ ವ್ಯಕ್ತಿತ್ವವನ್ನು ಕಣ್ಣಿಗೆ ಕಟ್ಟಿ ಕೊಡುತ್ತಲೇ ಇಂದಿನ ಮಠ ಮಾನ್ಯಗಳು ಮತ್ತು ಕಾವಿಧಾರಿಗಳ ಬಗ್ಗೆ ನಮ್ಮನ್ನು ಮರುಚಿಂತನೆಗೆ ಹಚ್ಚುತ್ತವೆ.
ಗಾಂಧೀಹತ್ಯೆ: ಬರಸಿಡಲು
ಜನವರಿ 30, 1948. ಗಾಂಧೀ ಹತ್ಯೆ ನಡೆದೇ ಹೋಯಿತು. ಮಹಾತ್ಮನ ಬಲಿದಾನಕ್ಕೆ ಕನ್ನಡ ಕಾವ್ಯಲೋಕ ಮಿಡಿದದ್ದು; ನುಡಿನಮನ ಸಲ್ಲಿಸಿದ್ದು ಹೀಗೆ.
ಅಡಿಗರ ಉದ್ಗಾರ:
ಬರಸಿಡಿಲೆಂತೆರಗಿತು ಹಾ! ಕೊಲೆಗಡುಕನ ಕೈ
ಜರಾಜೀರ್ಣ, ತ್ಯಾಗಶೀರ್ಣ ಎಲುಬುಗೂಡು ಮೈ
ಬಿತ್ತು ಕೆಳಗೆ, ಬಿದ್ದಹಾಗೆ
ನ್ಯಾಯ ಸತ್ಯದಯಾ ಧರ್ಮವೊಂದೆ ಆಧಾರವು
ನಮ್ಮ ತಲೆಯ ಮೇಲೆ ಬಿತ್ತು
ನಮ್ಮ ಪಾಪಭಾರವು’
ಬೇಂದ್ರೆಯವರ ಉದ್ಗಾರ:
‘ಸಾಕ್ರಟೀಸ್ ಆತ್ಮವೀರ
ಕುಡಿದನಲ್ಲಿ ವಿಷದ ನೀರ
ಧೀರ ಕ್ರೈಸ್ತ ಇದ್ದನೆಲ್ಲಿ?
ಅವನ ದೇಹ ಸಿಲುಬೆಯಲ್ಲಿ
ನ್ಯಾಯದೊಂದು ನೆನಪ ಮಾಡಿ
ವಿಚಾರಣೆಯ ಆಟ ಆಡಿ
ಕೊಂದರಾಗ ಧೂರ್ತರು.
ಅದೂ ಬೇಡವಾಯ್ತೆ ಇಲ್ಲಿ?
ಮುಗಿಸಿದರೋ ಮೂರ್ಖರು’
ಎಂದು ಹೇಳುವ ಬೇಂದ್ರೆ ‘ಹಿಂಸೆ ಕೊನೆಗೆ ಅಹಿಂಸೆಯನ್ನು ಗುಂಡುಹಾಕಿ ಕೊಂದಿತೋ!’ ಎನ್ನುತ್ತಾರೆ.
ಮಾಸ್ತಿ ಹೇಳುತ್ತಾರೆ:
ಸೋತವನ ಮೆಯ್ಯೆ ಇದು?
ಅಲಸಿದನೆ ಇವನು?
ಈತ ಸೋತಿಹನೆನಲು
ಗೆಲಿದವರು ಎಲ್ಲಿ?’
ಆಗ ಭೌತಿಕ ಹತ್ಯೆ: ಈಗ...?
ಭೌತಿಕವಾಗಿ ಗಾಂಧಿಹತ್ಯೆಗಿಂತಲೂ ಕ್ರೂರ ಮತ್ತು ಘೋರವಾದದ್ದು ಅವರ ತತ್ವಾದರ್ಶಗಳ ಹತ್ಯೆ. ‘ಗಾಂಧಿ’ ಹೆಸರನ್ನೇ ಬಂಡವಾಳ ಮಾಡಿಕೊಂಡು ಬಂದಿರುವ ಗಾಂಧೀ ನಂತರದ ರಾಜಕೀಯ, ಸಾಮಾಜಿಕ, ಆರ್ಥಿಕ, ಅನೈತಿಕ ವ್ಯವಸ್ಥೆಯ ಬಗ್ಗೆ ಕನ್ನಡ ಕಾವ್ಯಲೋಕ ವ್ಯಾಗ್ರವಾಗಿದೆ. ಕಟುಕಿದೆ. ವ್ಯಂಗ್ಯವಾಗಿ ಅಣಕಿಸಿದೆ. ಚಾಟಿ ಬೀಸಿದೆ. ಥೂ... ಛೀ... ಎಂದು ಧಿಕ್ಕಾರ ಕೂಗಿದೆ. ಅದರ ಸ್ಯಾಂಪಲ್ಲೂ ಇಲ್ಲಿದೆ ನೋಡಿ.
ಗೋಪಾಲಕೃಷ್ಣ ಅಡಿಗರು ತಮ್ಮದೇ ಅನನುಕರಣೀಯ ಶೈಲಿಯಲ್ಲಿ ಕಟ್ಟಿಕೊಡುವ ಛದ್ಮವೇಷಿ, ಗಾಂಧಿ ಪುಢಾರಿಯೊಬ್ಬನವಿಡಂಬನಾತ್ಮಕ ಚಿತ್ರವನ್ನು ನೋಡಿ:
‘ಗಾಂಧಿ ಬಂದ, ಅವನ ಹಿಂದೆ ಮೊದಲು ಬಂದ ಭೂಪನು ನಾನೆ.
ಅವನ ಕೊರಳಿಗೇರಿದಂಥ ಮೊದಲ ಹಾರವೂ ನನ್ನದೇ.
ಖಾದಿಯುಡಿರಿ ಎಂದನೋ ಇಲ್ಲವೋ, ಖಾದಿತೊಟ್ಟ ಧೀರ ನಾನು
................
ಈಗ ಹೋದವನು, ನಾನು ಮಾಡಲೇನೋ ತಿಳಿಯದು.
ಅವನು ಒಂದು ಸಲವೋ ಏನೋ ಮಾಂಸ ತಿಂದು ಅತ್ತನು.
ದಿನದಿನವೂ ಅದನೆ ತಿಂದು ಅನುಗಾಲವೂ ಅಳುವೆ ನಾನು.
ಒಂದು ಸಲವೋ ಏನೋ ಅವನು ಸುಳ್ಳು ಹೇಳಿ ಅಳಲಿದ.
ನನಗೋ ದಿನಾ ಅದೇ ಕೆಲಸ; ಅದೇ ಅಳಲು ಪ್ರತಿದಿನ‘
ಸಿದ್ಧಲಿಂಗ ಪಟ್ಟಣ ಶೆಟ್ಟಿ ಅವರ ‘ಗಾಂಧಿ ಜಯಂತಿ’ ಕವನದಲ್ಲಿ ಅವರು ವಿಡಂಬಿಸುವುದು ಹೀಗೆ,
‘ನಿನ್ನ ತ್ಯಾಗ, ಬಲಿದಾನಕ್ಕೆ
ನಾವಿತ್ತ ಬೆಲೆಗೊತ್ತೇ?
ನಿನ್ನ ಜಯಂತಿ ನೆನೆಸಿ
ಊರಿಗೊಂದು ‘ಗಾಂಧಿಭವನ’ ನಿಲಿಸಲಿದ್ದೇವೆ
ಸ್ಮಾರಕನಿಧಿ–ವಾಚನಾಲಯದಲ್ಲಿ
ನಿನ್ನ ಬಗೆಗನೇಕ ಪುಸ್ತಕಗಳನ್ನೊಟ್ಟಿದ್ದೇವೆ.
ಅಲ್ಲೊಂದು ಇಲ್ಲೊಂದು ಪ್ರತಿಮೆ ಹುಗಿರು
ನಿನ್ನನ್ನ ಅಮರಗೊಳಿಸಿದ್ದೇವೆ’
ಇಂತಹ ವಿಡಂಬನೆ ಬಹುಮಂದಿ ಕವಿಗಳ, ಅದರಲ್ಲೂ ವಿಶೇಷವಾಗಿ ಸ್ವಾತಂತ್ರ್ಯೋತ್ತರ ಯುಗದಲ್ಲಿ ಗಾಂಧಿತತ್ವಗಳ ಬಗ್ಗೆ ತೋರಿಬಂದಿರುವ ಅನಾದರದ ಬಗ್ಗೆ ಕೋಪೋದ್ರಿಕ್ತ ತರುಣರ ಮನಃಪ್ರವೃತ್ತಿಯೇ ಆಗಿದೆ.
ಮಹಾತ್ಮನಿಗೆ ಕನ್ನಡ ಕಾವ್ಯಲೋಕ ಸಲ್ಲಿಸಿದ ನುಡಿನಮನವನ್ನು ಕುವೆಂಪುರವರ ಸಾಲುಗಳೊಂದಿಗೆ ಮುಗಿಸಬಹುದಾಗಿದೆ. ಇದು 1948, ಜನವರಿ 31ರಂದು ಅಂದರೆ ಗಾಂಧಿ ಹತ್ಯೆಯಾದ ಮರುದಿನ ಮೈಸೂರಿನ ಬಾನುಲಿ ಭಾಷಣದಲ್ಲಿ ಕುವೆಂಪು ಹೇಳಿದ ಸಾಲುಗಳು.
ರಾಷ್ಟ್ರಪಿತ ದಿವಂಗತ
ಉನ್ಮತ್ತ ಹಸ್ತಹತ
ನರಹೃದಯದ ವಿಷವಾರಿಧಿಗೆ
ಜೀವಾಮೃತ ಸಮರ್ಪಿತ
ಕ್ಷಮಿಸು, ಓ, ಜಗತ್‌ಪಿತ
ಅದೃಷ್ಟಹೀನ ಭಾರತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.