ಬಾಲನಟನಾಗಿ ‘ಚಿನ್ನಾರಿಮುತ್ತ ’ ಚಿತ್ರದಲ್ಲಿ ಅಭಿನಯಿಸಿದ್ದ ವಿಜಯ್ ರಾಘವೇಂದ್ರ ಅವರಿಗೆ ಈ ಬಾರಿ ‘ಶಿವಯೋಗಿ ಶ್ರೀ ಪುಟ್ಟಯ್ಯಜ್ಜ’ ಚಿತ್ರದ ನಟನೆಗೆ ಶ್ರೇಷ್ಠ ನಟ ಪ್ರಶಸ್ತಿ ಬಂದಿದೆ. ವಿಜಯ್ ಈವರೆಗೆ 43 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
‘ಬಿಗ್ ಬಾಸ್‘ ರಿಯಾಲಿಟಿ ಷೋ ವಿಜೇತರಾಗಿರುವ ಅವರು ಸದ್ಯ ‘ಜಿ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಡ್ರಾಮಾ ಜೂನಿಯರ್’ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದಾರೆ. ಚಲನಚಿತ್ರ ಮತ್ತು ಕಿರುತೆರೆ ಜತೆಗಿನ ನಂಟು, ಅನುಭವ ಮತ್ತಿತರರ ಸಂಗತಿಗಳನ್ನು ಇಲ್ಲಿ ‘ಕಿರುಮಾತಿ’ಗೆ ಹಂಚಿಕೊಂಡಿದ್ದಾರೆ.
*ರಾಜ್ಯ ಚಲನಚಿತ್ರ ಪ್ರಶಸ್ತಿ ಬಂದಿದೆ. ಏನು ಅನಿಸುತ್ತಿದೆ?
ಖುಷಿಯಾಗಿದೆ. ಸಮಾಧಾನವಾಗಿದೆ. ಪ್ರಶಸ್ತಿ ಬರಬಹುದು ಎಂಬ ಯಾವ ನಿರೀಕ್ಷೆಯೂ ಇರಲಿಲ್ಲ. ಆದರೆ ಇದೊಂದು ಸಂಕಿರ್ಣವಾದ ಪಾತ್ರ, ಸರಳವಲ್ಲ ಅಂತ ಹೇಳಿದ್ದರು. ಆದರೂ ಪ್ರಶಸ್ತಿ ನಿರೀಕ್ಷೆ ಮಾಡದಿದ್ದರೆ ಹೇಗೆ ಅಂದಿದ್ದರು. ಆ ಪಾತ್ರ ಮಾಡಲು ಒಪ್ಪಿಕೊಂಡಿದ್ದೆ ನನಗೆ ತುಂಬಾ ಇಷ್ಟವಿದ್ದರಿಂದ. ಇದೊಂದು ವಿಭಿನ್ನ ಪಾತ್ರ
ಅನ್ನೊ ಕಾರಣಕ್ಕೆ ಆಯ್ಕೆ ಮಾಡಿದ್ದೆ. ಜನಕ್ಕೆಲ್ಲ ಇಷ್ಟವಾಗಬೇಕು ಎಂಬ ಒಂದೇ ಒಂದು ಕಾರಣದಿಂದ ಮಾಡಿದೆ. ಈಗ ಸರ್ಕಾರಕ್ಕೂ ಇಷ್ಟವಾಗಿದೆ. ಅದಕ್ಕೆ ಪ್ರಶಸ್ತಿ ಕೊಟ್ಟದ್ದಾರೆ. ಇದು ನನ್ನ ಖುಷಿಯನ್ನು ಇನ್ನಷ್ಟು ಹೆಚ್ಚಿಸಿದೆ.
*ಈ ಪಾತ್ರದ ನಟನೆಯ ಸವಾಲುಗಳೇನಿದ್ದವು?
ಕಣ್ಣಿದ್ದೂ ಪಾತ್ರ ಮಾಡುವುದು ಹಲವು ಬಾರಿ ಕಷ್ಟ. ಅಂತಹುದರಲ್ಲಿ ಕಣ್ಣು ಕಾಣಿಸಿದ ಪಾತ್ರ ಇದು. ಒಬ್ಬ ನಟನಿಗೆ ಒಳ್ಳೆ ಪಾತ್ರ ಮಾಡಬೇಕು ಎಂಬ ಆಸೆ ಇರುತ್ತೆ. ಸಾಲದಕ್ಕೆ ಬೇರೆ ಯಾರದೋ ಪಾತ್ರವನ್ನು ನಾನು ನನ್ನ ಕಲ್ಪನೆಯಲ್ಲಿ, ಚೌಕಟ್ಟು ಹಾಕಿಕೊಂಡು ಮಾಡಬೇಕಿತ್ತು.
ಇದು ಎಲ್ಲರೂ ನೋಡಿದ ಪಾತ್ರ, ಜನಕ್ಕೆ ಹತ್ತಿರವಾಗಿದ್ದ ಪಾತ್ರ. ದೇವರಿಗಿಂತ ಹೆಚ್ಚು ಪೂಜಿಸಿದ ಪಾತ್ರ. ಶಿವಯೋಗಿ ಪುಟ್ಟಯ್ಯಜ್ಜ ‘ನಡೆದಾಡುವ ದೇವ’ರೆಂದೇ ಜನ ಭಾವಿಸಿದ್ದರು. ಹಾಗಾಗಿ ಇಂತಹ ಪಾತ್ರ ಮಾಡುವಾಗ ಭಯ ಇತ್ತು. ಭಯ, ನಂಬಿಕೆ, ಶ್ರದ್ಧೆ ಇತ್ತು. ನನ್ನ ತಂದೆ ಸಹ ಹೇಳಿದ್ದರು. ಈ ಪಾತ್ರವನ್ನು ನೀನು ಶ್ರದ್ಧೆಯಿಂದ ಮಾಡಬೇಕು ಎಂದು.
*ಈ ಪಾತ್ರದ ನಟನೆಗೆ ಯಾವ ಸಿದ್ಧತೆಗಳನ್ನು ಮಾಡಿಕೊಂಡಿದ್ರಿ?
ಆ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರು ನನಗೆ ಅಜ್ಜಯ್ಯ ಅವರ ಜೀವನಕ್ಕೆ ಸಂಬಂಧಿಸಿದ ಡಿವಿಡಿ ಕೊಟ್ಟಿದ್ರು. ನೋಡಿಕೊಳ್ಳಿ ಆಗ ನಿಮಗೆ ಅವರನ್ನು ಅನುಸರಿಸಲು ಸರಳವಾಗುತ್ತೆ ಅಂತ ಹೇಳಿದ್ರು. ಆದರೆ ಡಿವಿಡಿ ಸರಿ ಇರಲಿಲ್ಲ.
ಆಗ ಏನು ಮಾಡಬೇಕು ಅನ್ನೊ ಸಮಸ್ಯೆ ಎದುರಾಗಿತ್ತು. ಅವರ ಫೋಟೊ ನೋಡಿದ್ದೆ. ಅವರ ಮುಖ ನೋಡಿ ಅಣಕು ಮಾಡಲು ಆರಂಭಿಸಿದ್ದೆ. ನನ್ನ ಪಾಡಿಗೆ ತಾಲೀಮು ಮಾಡಿಕೊಂಡಿದ್ದೆ. ಶೂಟಿಂಗ್ ವೇಳೆ ಚಿತ್ರ ನೋಡಿಕೊಳ್ತಾ ಇದ್ದೆ.
*ಪುಟ್ಟಯ್ಯಜ್ಜ ತುಂಬ ವಯಸ್ಸಾದ ಪಾತ್ರ. ಆದರೆ ನೀವು ಆ ಪಾತ್ರಕ್ಕೆ ತುಂಬ ಕಿರಿಯವರು ಅಂತ ಅನಿಸಲಿಲ್ಲವೆ?
ಇಲ್ಲ. ಅದು ಸಮಸ್ಯೆ ಆಗಲಿಲ್ಲ. ನನಗೀಗ ಪ್ರಶಸ್ತಿ ಬಂದಿದ್ದರೆ ಅದಕ್ಕೆ ಕಾರಣ, ನಿರ್ದೇಶಕರು, ಅವರ ತಂಡ, ಪ್ರಸಾಧನ ಕಲಾವಿದರು, ವೇಷಭೂಷಣ ಒದಗಿಸಿದವರು. ಜತೆಗೆ ನನ್ನೊಂದಿಗೆ ಇದ್ದು ಅಜ್ಜವರು ಹೀಗಿದ್ದರು, ಹಾಗೆ ಮಾಡ್ತಾ ಇದ್ದರು ಅಂತ ಹೇಳಿಕೊಡುತ್ತಿದ್ದರು. 2010ನೇ ಇಸವಿವರೆಗೆ ಅಜ್ಜ ಅವರ ಹತ್ತಿರವಿದ್ದ ಹಲವರು ನಮ್ಮೊಂದಿಗೆ ಇದ್ದರು.
*ಡ್ರಾಮಾ ಜೂನಿಯರ್ ಹೇಗೆ ಬರ್ತಾ ಇದೆ?
ಆ ಕಾರ್ಯಕ್ರಮ ಆರಂಭಿಸುವ ಮೊದಲು ಒಂದು ಸಣ್ಣ ಭಯ ಇತ್ತು. ಮಕ್ಕಳನ್ನು ಹಾಕಿಕೊಂಡು ಕಾರ್ಯಕ್ರಮ ಮಾಡ್ತಿದ್ದೀರಿ. ಮಕ್ಕಳಿಗೆ ಕಾರ್ಯಕ್ರಮಕ್ಕೆ ಬರೋವರರ್ಗೂ ಒಂದು ಮುಗ್ಧತೆ ಇರುತ್ತೆ. ಆದರೆ ಕಾರ್ಯಕ್ರಮ ಮುಗಿದ ಮೇಲೆ ಇರಲ್ಲ ಅಂತ ಹೇಳೋರು.
ಅದನ್ನು ನಾವೆಲ್ಲೊ ಒಂದು ಕಡೆ ಶೋಷಣೆ ಮಾಡ್ತೀವೇನೊ ಅನ್ನೊ ಭಯ ಇತ್ತು. ಆದರೆ ಡ್ರಾಮಾ ಜೂನಿಯರ್‌ನ ಯಶಸ್ಸಿನ ಕಾರಣ ಅದರ ಹಿಂದಿರುವ ತಂಡ. ಆ ಮಕ್ಕಳನ್ನು ನೋಡಿಕೊಳ್ಳುವ ತರಬೇತುದಾರರು. ತಂದೆ–ತಾಯಿ. ಮತ್ತೆ ಆ ಮಕ್ಕಳಿಗಿರುವ ಪ್ರತಿಭೆ.
*ಸ್ಪರ್ಧಿಗಳ ಬಗ್ಗೆ ಏನು ಹೇಳುತ್ತೀರಿ?
ತುಂಬಾ ಪ್ರತಿಭಾವಂತರು ಇದ್ದಾರೆ. ನಮ್ಮ ರಾಜ್ಯದಲ್ಲಿ ಇಷ್ಟೊಂದು ಪ್ರತಿಭೆ ಇರೋ ಮಕ್ಕಳು ಇದ್ದಾರಲ್ಲ ಅಂತ ಆಶ್ಚರ್ಯ ಆಗುತ್ತೆ. ಮುಂದಿನ ದಿನ ಬಾರಿ ಚೆನ್ನಾಗಿ ತಯಾರಿ ಮಾಡಬಹುದು ಅನಿಸುತ್ತೆ.
*ಇದು ಯಾವ ರೀತಿ ಕಾರ್ಯಕ್ರಮ?
ಬರೀ ನಟನೆ. ಕೇವಲ ನಾಟಕ, ಮಕ್ಕಳಿಗೆ ಏನು ಬರುತ್ತೊ ಅದನ್ನು ನಟಿಸಿ ತೋರಿಸುತ್ತಾರೆ. ಚಿಕ್ಕಮಕ್ಕಳಿಂದ ಹಿಡಿದು ಎಲ್ಲ ವಯಸ್ಸಿನ ಜನ ಈ ಕಾರ್ಯಕ್ರಮ ನೋಡಿ ನನಗೆ ಕರೆ ಮಾಡಿ ಹೇಳ್ತಾರೆ.
*ಈ ಹಿಂದೆಯೂ ನೀವು ತೀರ್ಪುಗಾರರಾಗಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ರಿ. ಆ ಬಗ್ಗೆ ಹೇಳಿ
ಇದಕ್ಕೆ ಮೊದಲು ನಾನು ಎರಡು ಬಾರಿ ತೀರ್ಪುಗಾರನಾಗಿ ಕಾಣಿಸಿಕೊಂಡಿದ್ದೆ. ‘ಗ್ರೇಟ್ ಕರ್ನಾಟಕ ಡಾನ್ಸ್ ಲೀಗ್’ ಅನ್ನೊ ಶೋನಲ್ಲಿ ನಾನು ಅನು ಪ್ರಭಾಕರ್ ಮತ್ತಿತರರು ಇದ್ವಿ. ಆ ಮೇಲೆ ಈಟಿವಿಗೆ ‘ಸೂಪರ್’ ಅನ್ನೊ ಶೋ ಮಾಡಿದ್ವಿ. ಚಿನ್ನಿ ಪ್ರಕಾಶ್ ಮತ್ತೆ ಶುಭಾ ಪೂಂಜಾ ಸಹ ಇದ್ರು.
*ಆಗಿನ ಅನುಭವಕ್ಕೂ ಈಗಿನದ್ದಕ್ಕೂ ತುಂಬಾ ವ್ಯತ್ಯಾಸ ಇದೆ
ಹೌದು. ಅವರೆಡೂ ನೃತ್ಯ ಕಾರ್ಯಕ್ರಮಗಳು. ಆದರೆ ಈಗಿನದ್ದು ಬೇರೆ.
*ಮಕ್ಕಳಿಗೆ ತೀರ್ಪು ನೀಡೋದು ತುಂಬಾ ಕಷ್ಟವಲ್ಲವೇ?
ಇದರಲ್ಲಿ ಅಂಕವಿದೆ. ಆದರೆ ಅವರಿಗೆ ಹೇಳೊದಿಲ್ಲ. ಮಕ್ಕಳಿಗೆ ನಾವು ಕೆಲವು ಸಲಹೆ ನೀಡುತ್ತೇವೆ. ನಾವು ಹಾಕಿಕೊಂಡಿರೊ ಮೊದಲನೇ ನಿಯಮವೇ ಅದು. ಮಕ್ಕಳಿಗೆ ‘ನೀನು ಷೋನಿಂದ ಹೊರ ಹೋಗುತ್ತಿದ್ದೀಯಾ, ಕಡಿಮೆ ಅಂಕ ಬಂದಿದೆ’ ಎಂದು ಹೇಳಲ್ಲ. ಏನೇ ಆದರೂ ನೀನು ಚೆನ್ನಾಗಿ ಮಾಡಿದ್ದೀಯಾ, ಇನ್ನೂ ಚೆನ್ನಾಗಿ ಮಾಡಬೇಕು ಎಂಬ ಸಲಹೆ ನೀಡುತ್ತೀವಿ. ಮಕ್ಕಳಿಗೆ ನೋವಾಗದ ಹಾಗೆ ಅವರ ಪೋಷಕರಿಗೆ ಅರ್ಥ ಆಗೋ ಹಾಗೆ ಹೇಳುತ್ತೀವಿ.
*ಕಿರುತೆರೆ ಜತೆಗಿನ ನಂಟಿನ ಬಗ್ಗೆ ಹೇಳಿ
ನಾನು ಮೊದಲು ಅಭಿನಯಿಸಿದ್ದು ಧಾರಾವಾಹಿಗೆ. ಅದು ಉದಯ ವಾಹಿನಿಗೆ. 1999–2000ರಲ್ಲಿ. ಅದಾದ ಮೇಲೆ ಪದವಿ ಮುಗಿಸಿ, ನಟನಾ ಕೋರ್ಸ್ ಮಾಡಿದೆ. ಕಿರುತೆರೆ ಜತೆಗೆ ಪ್ರತಿವರ್ಷದ ನಂಟು ಅನ್ನುವುದಕ್ಕಿಂತ, ಎರಡು ವರ್ಷಕ್ಕೊಮ್ಮೆ, ಮೂರು ವರ್ಷಕ್ಕೊಮ್ಮೆ ಸಂಪರ್ಕ. ಕಿರುತೆರೆಗೂ ನನಗೂ ಒಂದು ಬಿಡಿಸಲಾಗದ ನಂಟು.
*ಮುಂದಿನ ಸಿನಿಮಾ, ಇತರೆ ಯೋಜನೆ ಏನಿವೆ?
ಸದ್ಯ ‘ಮಿಸ್ಟರ್ ಜಾನಿ’ ಅನ್ನೊ ಚಿತ್ರ ಶೂಟಿಂಗ್ ಆಗ್ತಾ ಇದೆ. ಶಿವಣ್ಣ ಅವರ ಜತೆ ‘ಶ್ರೀಕಂಠ’ ಇದೆ. ಇನ್ನೊಂದು ಚಿತ್ರವಿದೆ. ‘ಎರಡು ಕನಸು’ ಮತ್ತು ‘ನನ್ನ ನಿನ್ನ ಪ್ರೇಮಕಥೆ’ ಸಿದ್ಧವಾಗಿದೆ. ಇದರ ಜತೆಗೆ ನನ್ನ ಹೋಂ ಪ್ರೊಡಕ್ಷನ್‌ನ ‘ಕಿಸ್ಮತ್’ ಜೂನ್‌ನಲ್ಲಿ ಬಿಡುಗಡೆ ಆಗ್ತಾ ಇದೆ.
*ಇಷ್ಟು ಕೆಲಸಗಳ ನಡುವೆ ಸಮಯ ಹೊಂದಾಣಿಕೆ ಹೇಗೆ?
ಏನೋ ದೇವರು ಸಮಯ ಕೊಡ್ತಾ ಇದ್ದಾನೆ. ಕೆಲಸವೂ ಕೊಟ್ಟು ಕುಟುಂಬದ ಜತೆ ಇರಲು ಅವಕಾಶವನ್ನೂ ನೀಡಿದ್ದಾನೆ. ಒಟ್ಟಿನಲ್ಲಿ ಜನ ನನ್ನನ್ನು ಪರದೆ ಮೇಲೆ ಸಹಿಸಿಕೊಳ್ತಾ ಇದ್ದಾರೆ. ಅದು ನನ್ನ ಅದೃಷ್ಟ.
*ನೀವು ಬಿಗ್ ಬಾಸ್ ಶೋ ವಿಜೇತರು . ಅಲ್ಲಿನ ಅನುಭವ ಹೇಗಿತ್ತು?
ನಾನು ವಿಜೇತನಾಗ್ತೀನಿ ಅನ್ನೊ ಯಾವ ನಿರೀಕ್ಷೆ ಇರಲಿಲ್ಲ. ಶೋ ಭಾರಿ ಚೆನ್ನಾಗಿತ್ತು. 100 ದಿನ ಯಾವ ಸಂಪರ್ಕ ಇಲ್ಲದೆ. ಒಂದೇ ಕಡೆ ಇರೊದರಲ್ಲಿ ಖುಷಿ, ನೆಮ್ಮದಿ, ಬೇಸರಗಳು ಇದ್ದವು. ಅವನ್ನೆಲ್ಲ ಮುಗಿಸಿ ಹೊರ ಬರುವ ಕ್ಷಣ ಇದೆಯೆಲ್ಲ ಅದು ವಿಶಿಷ್ಟವಾದುದು. ಎಷ್ಟೊ ವರ್ಷ ನಮ್ಮವರ ಜತೆ ಇರಲಿಲ್ವಾ ಅನ್ನೊ ಹಾಗೆ ಭಾವನೆ ಬಂದಿತ್ತು.
*ಕಿರುತೆರೆ ಮತ್ತು ಸಿನಿಮಾ ಎರಡರಲ್ಲೂ ನೀವು ಸಕ್ರಿಯವಾಗಿದ್ದೀರಿ. ಎರಡೂ ಕಡೆಯ ವೀಕ್ಷಕರ ಪ್ರತಿಕ್ರಿಯೆಯನ್ನು ಯಾವ ರೀತಿ ಪರಿಭಾವಿಸುತ್ತೀರಿ?
ಎಲ್ಲ ವೀಕ್ಷಕರು ಒಂದೇ. ಅವರನ್ನು ತಲುಪುವ ಮಾಧ್ಯಮ ಬೇರೆ. ಕಿರುತೆರೆ ನೋಡೋರೂ ಸಹ ಸಿನಿಮಾ ನೋಡ್ತಾರೆ. ಬಿಗ್ ಬಾಸ್‌ಗೆ ಬಂದಾಗ ನನ್ನನ್ನು ಇವನು ಚಿನ್ನಾರಿ ಮುತ್ತದಲ್ಲಿದ್ದವನು ಅಂತ ಗುರುತಿಸಿದ್ದಾರೆ.
*ತುಂಬಾ ಖುಷಿ ಕೊಟ್ಟ ಚಿತ್ರಗಳು ಯಾವು?
‘ನಿನಗಾಗಿ’, ‘ಪ್ರೇಮಕೈದಿ’, ‘ಖುಷಿ’, ‘ರಿಷಿ’, ‘ಸೇವಂತಿ ಸೇವಂತಿ’, ‘ಕಲ್ಲರಳಿ ಹೂವಾಗಿ’, ‘ಕಾಮಿಡಿ ಆದರೆ ಕಲ್ಲಮಳ್ಳ ಸುಳ್ಳ’, ‘ಸ್ನೇಹಿತರು’. ಈವರೆಗೆ ಒಟ್ಟು 43 ಚಿತ್ರಗಳಲ್ಲಿ ಅಭಿನಯಿಸಿದ್ದೀನಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.