ಹೆಣ್ಣಿನ ಸೌಂದರ್ಯವರ್ಧನೆಯಲ್ಲಿ ಲಿಪ್‌ಸ್ಟಿಕ್ ಪಾತ್ರ ಮಹತ್ವದ್ದು. ವಯೋ ಭೇದವಿಲ್ಲದೆ ಮಹಿಳೆಯರ ತುಟಿಯ ಸೌಂದರ್ಯ ಇಮ್ಮಡಿಗೊಳಿಸುವ ಲಿಪ್‌ಸ್ಟಿಕ್‌ಗಳಿಗೆ ಸೌಂದರ್ಯ ಪ್ರಸಾಧನಗಳ ಮಾರುಕಟ್ಟೆಯಲ್ಲಿ ಮುಂಚೂಣಿಯ ಸ್ಥಾನ.
ಮೇಕಪ್‌ನ ಅವಿಭಾಜ್ಯ ಅಂಗವೇ ಆಗಿರುವ ಲಿಪ್‌ಸ್ಟಿಕ್ ತನ್ನ ರಂಗುರಂಗಿನ ಬಣ್ಣಗಳೊಂದಿಗೆ ಭಾವಗಳನ್ನೂ ದಾಟಿಸುತ್ತದೆ. ಕನಿಷ್ಠ ₹ 100ರಿಂದ ಆರಂಭವಾಗುವ ಲಿಪ್‌ಸ್ಟಿಕ್‌ಗಳು ಲಕ್ಷದ ತನಕ ಬೆಲೆ ಹೊಂದಿವೆ.
ಲಿಪ್‌ಸ್ಟಿಕ್‌ಗೆ ಹೆಸರು ಒಂದೇ ಆದರೂ ಅದರಲ್ಲಿರುವ ಬಗೆಗಳು ಹಲವು. ವಿವಿಧ ಬಗೆಗಳ ಲಿಪ್‌ಸ್ಟಿಕ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.
ಸ್ಯಾಟಿನ್ ಲಿಪ್‌ಸ್ಟಿಕ್
ಈ ಮಾದರಿ ಲಿಪ್‌ಸ್ಟಿಕ್‌ಗಳಲ್ಲಿ ಹೆಚ್ಚಿನ ತೇವಾಂಶ ಮಿಶ್ರಿತವಾಗಿರುತ್ತದೆ. ಅತ್ಯಂತ ತೆಳುವಾಗಿ ತುಟಿಗೆ ಮೆತ್ತಿಕೊಳ್ಳುತ್ತದೆ. ಒಣ ತುಟಿ (ಡ್ರೈ ಲಿಪ್ಸ್) ಹೊಂದಿರುವವರಿಗೆ ಈ ಮಾದರಿ ಅನುಕೂಲಕರವಾಗಿದೆ. ತುಟಿಯನ್ನು ಬಹು ಸಮಯದವರೆಗೆ ತೇವವಾಗಿರಿಸುತ್ತದೆ.
ಮ್ಯಾಟ್ ಲಿಪ್‌ಸ್ಟಿಕ್
ಈ ಮಾದರಿಯು ತುಟಿಪೂರ್ತಿ ಕವರ್ ಮಾಡುತ್ತದೆ. ದೀರ್ಘ ಸಮಯದವರೆಗೆ ತುಟಿಯಂಚಿನಲ್ಲಿ ಉಳಿಯುವ ಲಿಪ್‌ಸ್ಟಿಕ್ ಇದು.
ತುಟಿಗಳಿಗೆ ಲೈನಿಂಗ್ ಮಾಡುವಾಗ ಈ ಮ್ಯಾಟ್ ಲಿಪ್‌ಸ್ಟಿಕ್ ಬಳಕೆ ಮಾಡುತ್ತಾರೆ. ಹಲವು ಮಹಿಳೆಯರ ಮೇಕಪ್ ಕಿಟ್‌ನಲ್ಲಿ ಈ ಲಿಪ್‌ಸ್ಟಿಕ್‌ನದ್ದು ಕಾಯಂ ಸ್ಥಾನ. ಉದ್ಯೋಗಸ್ಥ ಮಹಿಳೆಯರ ಪಾಲಿಗೆ ಮ್ಯಾಟ್ ಲಿಪ್‌ಸ್ಟಿಕ್ ಫೇವರಿಟ್.
ಲಿಕ್ವಿಡ್ ಲಿಪ್‌ಸ್ಟಿಕ್
ದ್ರವರೂಪದ ಗ್ಲಾಸಿ ಲಿಪ್‌ಸ್ಟಿಕ್ ಇದಾಗಿದೆ. ಹೆಸರೇ ಸೂಚಿಸುವಂತೆ ಹೆಚ್ಚಿನ ತೇವಾಂಶ ಹೊಂದಿರುವ ಈ ಮಾದರಿಯಿಂದ ತುಟಿಗಳನ್ನು ತಮಗೆ ಇಷ್ಟವಿರುವ ಆಕಾರಕ್ಕೆ ತಕ್ಕಂತೆ ರೂಪಿಸಿಕೊಳ್ಳಬಹುದು. ರೂಪದರ್ಶಿಗಳಿಗೆ, ಮದುವೆಗೆ ಸಜ್ಜಾದ ವಧುವಿಗೆ ಹೆಚ್ಚು ಬಳಕೆ ಮಾಡುತ್ತಾರೆ.
ಮಾಯಿಶ್ಚರೈಸರ್ ಲಿಪ್‌ಸ್ಟಿಕ್
ವಿಟಮಿನ್ ‘ಇ’ ಮತ್ತು ಜೊಜೊಬಾ ಆಯಿಲ್ ಅಡಕವಾಗಿರುವ ಈ ಲಿಪ್‌ಸ್ಟಿಕ್‌ಗಳನ್ನು ಚಳಿಗಾಲದಲ್ಲಿ ಮಹಿಳೆಯರು ಬಳಕೆ ಮಾಡುತ್ತಾರೆ. ತುಟಿ ಒಡೆಯುವುದನ್ನು ತಪ್ಪಿಸಲು ಬಳಕೆಯಾಗುತ್ತದೆ. ಆದರೆ ಇವುಗಳು ತುಟಿಯ ಮೇಲೆ ಹೆಚ್ಚು ಹೊತ್ತು ಉಳಿಯುವುದಿಲ್ಲ.
ಕ್ರೀಮ್ ಮ್ಯಾಟ್ ಲಿಪ್‌ಸ್ಟಿಕ್
ಅತ್ಯಂತ ಮೃದುವಾಗಿರುವಂತೆ ಸಿದ್ಧಪಡಿಸಲಾಗಿರುವ ಲಿಪ್‌ಸ್ಟಿಕ್‌ಗಳು. ತುಟಿಗೆ ಹಚ್ಚುತ್ತಿದ್ದಂತೆ ಒಂದು ಹಂತದ ಪರದೆ ನಿರ್ಮಿಸುತ್ತದೆ. ದೀರ್ಘಕಾಲದ ಪಾರ್ಟಿಗಳಲ್ಲಿ ಈ ಲಿಪ್‌ಸ್ಟಿಕ್‌ಗಳ ಬಳಕೆ ಹೆಚ್ಚಾಗಿ ಕಂಡುಬರುತ್ತದೆ.
ಫ್ರಾಸ್ಟೆಡ್ ಲಿಪ್‌ಸ್ಟಿಕ್
ಮುತ್ತಿನ ಲಿಪ್‌ಸ್ಟಿಕ್ ಎಂದು ಹೆಚ್ಚು ಪ್ರಚಲಿತ. 90ರ ದಶಕದಲ್ಲಿ ಚಿತ್ರತಾರೆಯರು ಇವುಗಳನ್ನು ನಿತ್ಯ ಬಳಸುತ್ತಿದ್ದರು. ರಾತ್ರಿ ವೇಳೆ ತುಟಿಗೆ ಹಚ್ಚುವ ಲಿಪ್‌ಸ್ಟಿಕ್‌ಗಳು ಎಂದು ಖ್ಯಾತಿ. ತುಟಿಗಳನ್ನು ಮಂಜಿನಂತೆ ಗೋಚರಿಸುವ ರೀತಿ ಮೆತ್ತಿಕೊಳ್ಳುತ್ತದೆ. ತುಟಿಗಳನ್ನು ಒಣದಾಗಿ ಇರಿಸುತ್ತವೆ.
ಈ ಮಾದರಿಯ ಲಿಪ್‌ಸ್ಟಿಕ್‌ಗಳ ಜೊತೆಗೆ ಇನ್ನೂ ನಾನಾ ಬಗೆಯ ಲಿಪ್‌ಸ್ಟಿಕ್‌ಗಳು ಮಾರುಕಟ್ಟೆಯಲ್ಲಿ ದೊರಕುತ್ತವೆ. ಆದರೆ ತುಟಿಗಳ ರಕ್ಷಣೆ ಮತ್ತು ಉತ್ತಮ ಲುಕ್‌ಗಳಿಗಾಗಿ ಮೇಲ್ಕಾಣಿಸಿದ ಮಾದರಿಗಳನ್ನು ಬಳಕೆ ಮಾಡಿದರೆ ಒಳ್ಳೆಯದು. ಅಗ್ಗದ ಬೆಲೆಯ, ಬ್ರ್ಯಾಂಡ್ ಅಲ್ಲದ ಲಿಪ್‌ಸ್ಟಿಕ್‌ಗಳು ಅನೇಕ ಚರ್ಮ ಸಂಬಂಧಿ ಕಿರಿಕಿರಿಗೆ ಕಾರಣವಾಗುತ್ತವೆ ಎಂಬುದು ನೆನಪಿಡಬೇಕಾದ ಸಂಗತಿ.