ADVERTISEMENT

ಯಥಾ ಪ್ರಜಾ, ತಥಾ ರಾಜ!

ಮನು ಎಚ್‌.ಎಸ್‌.ಹೆಗ್ಗೋಡು
Published 27 ಜುಲೈ 2015, 19:30 IST
Last Updated 27 ಜುಲೈ 2015, 19:30 IST

ಹುಟ್ಟಿದಾರಬ್ಯ ಒಂದೇ ಒಂದು ದಿನ ಆಹಾರವಿಲ್ಲದಿದ್ದರೆ ಮನುಷ್ಯ ಸಹಿಸಲಾರ. ಹೊಟ್ಟೆ ತುಂಬುತ್ತಿರುವ ಯಾವತ್ತೂ ಆಹಾರಗಳ ಉತ್ಪಾದನೆ, ರೈತರೆಂದು ಕರೆಸಿಕೊಳ್ಳುವ ವರ್ಗದ ಜವಾಬ್ದಾರಿಯೆ ಎಂಬುದು  ಈ ‘ನಾಗರಿಕ’ ಮನುಷ್ಯನ ತಿಳಿವಳಿಕೆ. ಹಾಲಿನ ಬೆಲೆಯೋ ಅಥವಾ ಮತ್ತೊಂದರ ಬೆಲೆಯೋ ಸ್ವಲ್ಪವೇ ಸ್ವಲ್ಪ ಜಾಸ್ತಿ ಆದರೆ ಸಾಕು, ಮಾಧ್ಯಮಗಳೂ ಸೇರಿದಂತೆ ಎಲ್ಲರೂ ಒಂದೇ ಸ್ವರದಲ್ಲಿ ಗೋಳಿಡುವುದು ಸಾಮಾನ್ಯ. ‘ಮಧ್ಯಮ ವರ್ಗಕ್ಕೆ ಕೊಡಲಿ ಏಟು’, ‘ಮಧ್ಯಮ ವರ್ಗಕ್ಕೆ ಆರ್ಥಿಕ ಹೊಡೆತ’ ಮುಂತಾದ ತಲೆ ಬರಹಗಳು ಕಾಣಿಸಿಕೊಳ್ಳುತ್ತವೆ.  ಜೊತೆಗೆ ಸರ್ಕಾರಕ್ಕೆ ಇನ್ನಿಲ್ಲದ ಬೈಗುಳಗಳು!

ಹಿಂದೊಮ್ಮೆ ಹಾಲಿನ ದರ ಹೆಚ್ಚಾದಾಗ ಹೀಗೆ ಮಾತಿನ ಮಧ್ಯೆ ‘ಹಾಲು ದರ ಕನಿಷ್ಠ 50 ರೂಪಾಯಿ ಆದರೂ ಆಗಬೇಕು, ಆಗ ಮಾತ್ರ ರೈತನ ಶ್ರಮಕ್ಕೆ ಸಮನಾದ ಪ್ರತಿಫಲ’ ಎಂಬ ನನ್ನ ಮಾತಿಗೆ ಸ್ನೇಹಿತರೊಬ್ಬರ ತಕ್ಷ ಣದ ಪ್ರತಿಕ್ರಿಯೆ: ‘ಇದ್ದವರು ಕೊಡ್ಬೋದು ಪಾಪ ಬಡವರು ಹೇಗೆ ಅಷ್ಟು ದುಡ್ಡು ಕೊಟ್ಟು ಕೊಳ್ಳೋಕೆ ಆಗತ್ತೆ’? ಈ ಮಾತಿನಲ್ಲಿ ಬಡವರ ಕಾಳಜಿ ವ್ಯಕ್ತವಾಗಿದ್ದು ಸಹಜ ಅಂತಲೇ ಅನ್ನಿಸಬಹುದು.

ಆದರೆ ಅವರ ದೃಷ್ಟಿಯಲ್ಲಿ ಬಡವರೆಂದರೆ, ಅವರ ಮನೆಗೆಲಸದ ಹೆಂಗಸು, ಕಾರಿನ ಚಾಲಕ ಹೀಗೆ ಮುಂತಾಗಿ ತಮ್ಮ ಅಗತ್ಯಕ್ಕೆ ಅಗ್ಗದಲ್ಲಿ ಸಿಕ್ಕುವ ಜೀವಿಗಳು! ಅಂಥವರ ಬಗ್ಗೆ ನಿಜವಾಗಿಯೂ ಇರುವ ಕಾಳಜಿಗೆ ಮುಖ್ಯ ಕಾರಣ ತಮ್ಮ ಜೇಬಿಗೆ ಬೀಳಬಹುದಾದ ಹೊರೆ ಅಷ್ಟೆ!ನಾಗರಿಕರ ಮಿತಿಮೀರಿದ ಐಷಾರಾಮಿ ಬೇಡಿಕೆಗಳೇ ಶ್ರಮಜೀವಿಗಳನ್ನು ನಗರದೆಡೆಗೆ ಸೆಳೆದು ಅನುತ್ಪಾದಕರನ್ನಾಗಿ ಮಾಡಿದ್ದು.
 
ದಿನನಿತ್ಯ ಎಂಬಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ವಿಷಯ ಬಂದಾಗ ಎಲ್ಲರೂ ಸರ್ಕಾರವನ್ನು, ಅದರ ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಆದರೆ ಮುಖ್ಯಮಂತ್ರಿ ಜನರ ಪ್ರತಿನಿಧಿಯಷ್ಟೆ. ನಾಗರಿಕ ಜನರು ರೈತರಿಗೆ ಎಷ್ಟು ಮಹತ್ವ ಕೊಡುತ್ತಿದ್ದಾರೊ, ಅಷ್ಟೇ ಮಹತ್ವವನ್ನು ಜನರ ಪ್ರತಿನಿಧಿಯಾದ ಸರ್ಕಾರ ಕೊಟ್ಟೀತು! ಜನ ಬದಲಾಗದೆ ಸರ್ಕಾರವನ್ನು ಹಳಿದೇನು ಪ್ರಯೋಜನ?

ಸಾಮಾಜಿಕ ತಾಣ ಒಂದರಲ್ಲಿ ಹರಿದಾಡಿದ ಪೋಸ್ಟರ್ ಒಂದರ ಸಂದೇಶ ಹೀಗಿತ್ತು; ‘ಕಾಲಿಗೆ ಹಾಕುವ ಚಪ್ಪಲಿ ಏಸಿ ರೂಮ್‌ನಲ್ಲಿ, ಹೊಟ್ಟೆಗೆ ತಿನ್ನುವ ಆಹಾರ ಕೊಳಚೆಯಲ್ಲಿ’. ನಮ್ಮ ಹೆಚ್ಚಿನ ತರಕಾರಿ ಮಾರಾಟದ ಜಾಗಗಳು ಗಬ್ಬು ನಾರುತ್ತಿರುವ ಜಾಗಗಳೇ ಆಗಿವೆ. ನೀವಲ್ಲಿ ತರಕಾರಿ ಮಾರುವವರನ್ನೆ ಆಕ್ಷೇಪಿಸಬಹುದು, ಹಾಗೆಯೇ ಚಪ್ಪಲಿ ಶೋರೂಂ ಒಂದರ ಸೊಬಗನ್ನು ನೋಡಿ ಶ್ಲಾಘಿಸಬಹುದು! ಆದರೆ ಆ ಚಪ್ಪಲಿ ಶೋರೂಂ ದಿನದಿನಕ್ಕೂ  ತನ್ನ ಸೊಬಗನ್ನು ಹೆಚ್ಚಿಸಿಕೊಳ್ಳಲು ಕಾರಣವಾಗಿದ್ದು ನಿಮ್ಮ ಧಾರಾಳತೆ ಅಷ್ಟೆ.

ಹೇಗೆ ಚಪ್ಪಲಿ ಮೊಬೈಲ್ ಮುಂತಾದ ಕ್ಷೇತ್ರಗಳಲ್ಲಾದ ಬೆಳವಣಿಗೆಗೆ ಜನರ ಧಾರಾಳತನ ಕಾರಣವಾಗಿದೆಯೊ, ಅದು ಬಡ ರೈತರು ಬೆಳೆದು ಪೂರೈಸುತ್ತಿರುವ ಆಹಾರಗಳಿಗೆ ಸಿಗುತ್ತಿಲ್ಲ. ಇಲ್ಲಿ ಸರ್ಕಾರವನ್ನು ಟೀಕಿಸುವ ಮೊದಲು ನಾವೇನು ಮಾಡುತ್ತಿದ್ದೇವೆ ಎಂಬುದು ಬಹು ಮುಖ್ಯವಲ್ಲವೆ? ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ರಾಜರು ಎಂಬರ್ಥದಲ್ಲಲ್ಲವೆ? ಅಂದ ಮೇಲೆ ಪ್ರಜೆ ಸದಾ ಜಾಗರೂಕನಾಗಿರಬೇಡವೆ?

ಅಂದರೆ ಹೆಚ್ಚಿನ ಎಲ್ಲೆಡೆ ಆಗುತ್ತಿರುವ ಅನ್ಯಾಯಗಳಲ್ಲಿ ಪ್ರಜೆಗಳ ಜವಾಬ್ದಾರಿಯ ಕೊರತೆ ಮುಖ್ಯ ಕಾರಣ. ತಾನು ಮಾಡದ್ದನ್ನು ಸರ್ಕಾರ ಮಾಡಬೇಕೆಂದು ಬಯಸುವುದರಲ್ಲಿ ಅರ್ಥವೇನಿದೆ? ಪ್ರಜೆಗಳ ಪ್ರತಿನಿಧಿಯಾದ ಸರ್ಕಾರದ ನಡವಳಿಕೆಯನ್ನು ಬದಲಾಯಿಸುವ ಮೊದಲು ತನ್ನ ನಡವಳಿಕೆಯನ್ನು ನಾಗರಿಕ ಬದಲಾಯಿಸಿಕೊಳ್ಳುವ ಜರೂರತ್ತಿದೆ. ನಾನಿಲ್ಲಿ ಉದ್ದೇಶಪೂರ್ವಕವಾಗಿಯೇ ನಾಗರಿಕನೆಂದು ಸಂಭೋದಿಸುತ್ತಿರುವುದು ನಗರದ ಪ್ರಜೆಗಳನ್ನು ಕುರಿತು. ದೇಶದ ಅರ್ಧದಷ್ಟು ಜನಸಂಖ್ಯೆ ನಗರದಲ್ಲೇ ನೆಲೆಸಿರುವುದಲ್ಲದೆ, ಸರ್ಕಾರಿ ಯಂತ್ರದ ಬಹುಭಾಗವು ಬೀಡುಬಿಟ್ಟಿರುವುದು ನಗರ ಪ್ರದೇಶದಲ್ಲೇ. ಬಹುಶಃ ಈ ಕಾರಣದಿಂದಾಗಿಯೇ ಹಳ್ಳಿಗರನ್ನು, ಹಳ್ಳಿಯಿಂದ ಬರುವ ಅಗತ್ಯ ಉತ್ಪನ್ನಗಳ ಬಗ್ಗೆ ನಾಗರಿಕರು ಅತೀ ಅಸಡ್ಡೆ ತೋರುತ್ತಿರುವುದು.

ಸರ್ಕಾರಗಳನ್ನು ಟೀಕಿಸುವ ಮೊದಲು ನಮ್ಮನ್ನು ನಾವೇ ವಿಮರ್ಶಿಸಿಕೊಳ್ಳಬೇಕಿದೆ. ನಮ್ಮ ಪರಿಧಿಯಲ್ಲಿ ನಾವು ಮಾಡಬೇಕಾದ ಅಥವಾ ಮಾಡಬಹುದಾದ ಕರ್ತವ್ಯಗಳು ಬಹಳಷ್ಟಿವೆ. ಸದಾ ಜಾಗರೂಕ ಸಮಾಜವೇ ಪ್ರಜಾಪ್ರಭುತ್ವದ ಯಶಸ್ಸಿಗೆ ಅಗತ್ಯವಾಗಿಬೇಕಾದ್ದು. ಜವಾಬ್ದಾರ ಸರ್ಕಾರವನ್ನು ಅಪೇಕ್ಷಿಸುವ ಮೊದಲು ಜವಾಬ್ದಾರ ಪ್ರಜೆ ನಾವಾಗಬೇಕು. ಶೋರೂಂಗಳಲ್ಲಿ, ಕಾಫಿ ಡೇಗಳಲ್ಲಿ ಧಾರಾಳವಾಗಿ ವರ್ತಿಸುವ ನಾವು, ತರಕಾರಿ, ಹಣ್ಣು, ಹಾಲು ದವಸ ಮುಂತಾದವುಗಳ ಮೇಲೂ ಅಂತದ್ದೇ  ಧಾರಾಳತೆಯನ್ನು ತೋರಬೇಕು.

ಇದೇ ಮಾತನ್ನು ಕೆಲವೊಮ್ಮೆ ಸ್ನೇಹಿತರನೇಕರಲ್ಲಿ ಹೇಳಿದಾಗಲೆಲ್ಲಾ ಹೆಚ್ಚಿನವರ ಪ್ರತಿಕ್ರಿಯೆ ‘ನಾವೇನೇ ಮಾಡಿದರೂ ರೈತರಿಗೇನು ಸಿಗತ್ತೆ ಪಾಪ. ಎಲ್ಲಾ ಮಧ್ಯವರ್ತಿಗಳ ಪಾಲಾಗತ್ತೆ ಅಷ್ಟೇ’. ಇಲ್ಲಿಯೂ ಕಾಣುವುದು ರೈತ ಪರ ಕಾಳಜಿಯೆಂಬಂತೆ ಇದ್ದರೂ, ಇಲ್ಲೂ ನಮ್ಮ ಜೇಬನ್ನು ಕಾಪಾಡಿಕೊಳ್ಳುವ ಒಂದು ಪಿಳ್ಳೆ ನೆವವಷ್ಟೇ!. ಅನಾದಿ ಕಾಲದಿಂದಲೂ ರೈತವರ್ಗದ ಋಣವನ್ನು ಹೊತ್ತಿರುವ ನಾಗರಿಕ ಸಮಾಜ ಇನ್ನಾದರೂ ತನ್ನ ನಡವಳಿಕೆಯನ್ನು ಬದಲಿಸಿಕೊಳ್ಳಬೇಕಿದೆ.

ಸರ್ಕಾರಗಳು ರೂಪಿಸುವ ಕಾನೂನುಗಳೋ, ನೀತಿನಿಯಮಗಳೋ ಸಾಮಾಜಿಕ ಬದಲಾವಣೆಗಳನ್ನು ತರಲಾರವು. ಸಾಮಾಜಿಕ ಎಂಬ ಶಬ್ದವೇ  ಸೂಚಿಸುವಂತೆ ಸಾಮಾಜಿಕರೇ ಸಮಾಜದ ಉನ್ನತಿಗೆ, ಅವನತಿಗೆ ಕಾರಣೀಕರ್ತರು. ಉದಾಹರಣೆಗೆ ನೋಡಿ. ನಮ್ಮ ಕ್ರಿಕೆಟ್ ಮಂಡಳಿ ಸುಖದ ತುತ್ತತುದಿಯಲ್ಲಿ ತೇಲಾಡಲು ಕಾರಣವಾಗಿದ್ದು ಕೇವಲ ಸರ್ಕಾರದ ಆಡಳಿತವಲ್ಲ, ಕ್ರಿಕೆಟಿಗೆ  ನಾಗರಿಕರು ತೋರಿದ ಆ ಮಟ್ಟದ ಆಸ್ಥೆ. ಹಾಗೆಯೇ ನಮ್ಮ ರೈತರು ಸಾಲ ಮಾಡಿ ಬೆಳೆ ಬೆಳೆದು ಸೋತು ಸಾಯುವ ಮಟ್ಟ ತಲುಪುವುದಕ್ಕೆ ಕಾರಣವಾಗಿದ್ದು ಇದೇ ನಾಗರಿಕರ ಅನಾಸ್ಥೆಯಲ್ಲವೆ? ಆತ್ಮಹತ್ಯೆ ಆಯ್ಕೆ ಮಾಡಿಕೊಂಡ ಕೆಲವು ರೈತರಲ್ಲಿ ಕುಡಿಯುವ ಅಭ್ಯಾಸವಿತ್ತು... ಮತ್ತೊಂದಿತ್ತು... ಅಂತೆಲ್ಲಾ ಸಂಶೋಧಿಸುವ ಬದಲು ರೈತರೆಡೆಗಿನ ನಮ್ಮ ನಡವಳಿಕೆಗಳನ್ನು ಅವಶ್ಯವಾಗಿ ಬದಲಿಕೊಳ್ಳಬೇಕಿದೆ.

ಇತ್ತೀಚೆಗೆ ರೈತರು, ಕೃಷಿಕರು ಅಥವಾ ಸಂಬಂಧಪಟ್ಟ ಹಲವಾರು ಸಂಘಟನೆಗಳು ನಡೆಸುತ್ತಿರುವ ‘ರೈತ ಗ್ರಾಹಕ ಮಿಲನ’ ದಂತಹ ನೂರಾರು ಪ್ರಯೋಗಗಳಿಗೆ ನಗರವಾಸಿಗಳು ವಿಶೇಷವಾಗಿ ಸ್ಪಂದಿಸಬೇಕಿದೆ. ಸಾವಯವ ಮಳಿಗೆಗಳಲ್ಲೋ ಅಥವಾ ರಸ್ತೆ ಬದಿಯೋ ಮಾರುತ್ತಿರುವ ನಾಟಿ ತರಕಾರಿಗಳೋ ಮತ್ತೊಂದೋ ಕೊಳ್ಳುವಾಗ ಅನವಶ್ಯಕವಾಗಿ ಚೌಕಾಸಿಗಿಳಿಯದೆ ಸಾಧ್ಯವಾದ ಸಂದರ್ಭಗಳಲ್ಲಿ ಧಾರಾಳವಾಗಿ ನಾವು ವರ್ತಿಸಲು ಆರಂಭಿಸಿದರೆ, ನಿಧಾನವಾಗಿ ರೈತವರ್ಗ ಅದರ ಪ್ರಯೋಜನ ಪಡೆದುಕೊಂಡೀತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.