ADVERTISEMENT

ಶ್ರೀಮುರಳಿ ಗಾನ ಬಜಾನ

ಪ್ರಜಾವಾಣಿ ವಿಶೇಷ
Published 1 ಡಿಸೆಂಬರ್ 2015, 19:30 IST
Last Updated 1 ಡಿಸೆಂಬರ್ 2015, 19:30 IST

‘ಉಗ್ರಂ’ ಚಿತ್ರದ ನಂತರ ಶ್ರೀಮುರಳಿ ಅಭಿನಯದ ಬಹು ನಿರೀಕ್ಷೆ ಹುಟ್ಟಿಸಿರುವ ‘ರಥಾವರ’ ಸಿನಿಮಾ ಡಿಸೆಂಬರ್‌ 4 ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಮತ್ತೊಂದು ವಿಶೇಷ ಅವರೇ ಮೊದಲ ಬಾರಿ ಗೀತೆಯೊಂದನ್ನು ಹಾಡಿರುವುದು. ಚಿತ್ರ ಬಿಡುಗಡೆಯ ಈ ಸಂದರ್ಭದಲ್ಲಿ ಶ್ರೀಮುರಳಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

* ‘ರಥಾವರ’ ಚಿತ್ರದ ಬಗ್ಗೆ ಹೇಳಿ?
‘ರಥಾವರ’ ಒಂದು ಭಾವಾವೇಶದ ಸಿನಿಮಾ. ಥ್ರಿಲ್‌, ಆ್ಯಕ್ಷನ್‌ ಇರುವ ಹಾಗೂ ನೀತಿಪಾಠವನ್ನು ಹೇಳುವಂತದ್ದು. ಪಾಪ–ಪುಣ್ಯ ಮತ್ತು ಧರ್ಮ–ಅಧರ್ಮದ ನಡುವೆ ನಾಯಕ ಏನೇನು ಕಷ್ಟಗಳನ್ನು ಅನುಭವಿಸುತ್ತಾನೆ ಎಂಬುದನ್ನು ತೋರಿಸಲಾಗಿದೆ. ಕೆಲವೊಂದು ಸಲ ಇಷ್ಟವಿಲ್ಲದಿದ್ದರೂ ಪಾಪದ ಕೂಪಕ್ಕೆ ಸಿಲುಕಬೇಕಾಗುತ್ತದೆ, ಅದರಿಂದ ಹೊರಬರುವುದು ಹೇಗೆ? ಒಟ್ಟಾರೆ ಲಾಜಿಕಲ್‌ ಆಗಿದೆ. ಈ ಸ್ಕ್ರಿಪ್ಟ್‌ ನನಗೆ ಸಿಕ್ಕಿದ್ದು ಅದೃಷ್ಟವೆಂದೇ ಹೇಳಬಹುದು. ನಾನು ಒಪ್ಪಿಕೊಳ್ಳದಿದ್ದರೂ ಬೇರೆಯವರು ನಟಿಸಲು ಮುಂದೆ ಬರುತ್ತಿದ್ದರು. ಹಾಗಾಗಿ ಬಂದ ಅವಕಾಶವನ್ನು ಬಿಡಬಾರದು ಎಂದು ಬಹಳ ಇಷ್ಟಪಟ್ಟು ಮಾಡಿದೆ.

* ‘ರಥಾವರ’ ಸಿನಿಮಾ ಹಾಡುಗಳು ಈಗಾಗಲೇ ಜನಪ್ರಿಯವಾಗಿವೆ, ನಿಮಗೆ ಇಷ್ಟವಾಗುವ ಹಾಡು?
ನನ್ನ ಹಾಡೇ ಇಷ್ಟ. ಮೊದಲ ಬಾರಿ ಹಾಡಿದ್ದೇನೆ ಆದ್ದರಿಂದ ‘ಹುಡುಗಿ ಕಣ್ಣು ಲೋಡೆಡ್‌ ಗನ್ನು’ ಹಾಡು ಇಷ್ಟವಾಗುತ್ತದೆ. ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿದೆ.  ಯೂಟ್ಯೂಬ್‌ನಲ್ಲಿ 1ಲಕ್ಷಕ್ಕೂ ಹೆಚ್ಚು ಮಂದಿ ಈ ಹಾಡನ್ನು ವೀಕ್ಷಿಸಿದ್ದಾರೆ. ಅದೇ ಖುಷಿಯಾದ ಸಂಗತಿ. ಈ ಹಾಡು ಅಂತಿಮಗೊಳ್ಳಲು ಮೂರು ಪ್ರಯತ್ನಗಳು ಬೇಕಾಯಿತು. ಮೊದಲ ಎರಡು ಸಲ ಹಾಡಿದ ಹಾಡು ಯಾಕೋ ನನಗೇ ಇಷ್ಟವಾಗಲಿಲ್ಲ, ಆದ್ದರಿಂದ ಮೂರನೇ ಪ್ರಯತ್ನ ಮಾಡಬೇಕಾಯಿತು.

* ನಿಮ್ಮ ಜೀವನದಲ್ಲಿ ನಿಮ್ಮನ್ನು ತುಂಬಾ ಕಾಡುವ ಹಾಡು ಯಾವುದು?
ಜೀವನ ಪರ್ಯಂತ ಕಾಡುವ ಹಾಡು ಯಾವುದು ಇಲ್ಲ. ಆದರೆ ಯಾವುದೇ ಗೀತೆ ಚೆನ್ನಾಗಿದ್ದರೂ, ಯಾರೇ ಹಾಡಿದ್ದರೂ ಇಷ್ಟವಾಗುತ್ತವೆ.

* ಚಿತ್ರೀಕರಣದ ಸಮಯದಲ್ಲಿ ನಿಮಗೆ ಕಷ್ಟವಾಗುವ ಸನ್ನಿವೇಶ ಯಾವುದು?
‘ರಥಾವರ’ದಲ್ಲಿ ಹೊಡೆದಾಟ, ನೃತ್ಯದ ದೃಶ್ಯಾವಳಿ ಚಿತ್ರೀಕರಣದ ಸಂದರ್ಭಗಳಲ್ಲಿ ಕಷ್ಟವಾಯಿತು. ಉಳಿದಂತೆ ಎಲ್ಲಾ ಸಿನಿಮಾಗಳು ಹೊಸ ಸಿನಿಮಾ ಎಂದುಕೊಂಡೇ ಅಭಿನಯಿಸುತ್ತೇನೆ. ಕಠಿಣ ಪರಿಶ್ರಮ ಮುಖ್ಯ. ಆಗ ಮಾತ್ರ ಅದೃಷ್ಟ ಎಂಬುದು ಕೈಹಿಡಿಯುತ್ತದೆ. ಸುಮ್ಮನೇ ಅದೃಷ್ಟ ಒಲಿಯುವುದಿಲ್ಲ.

* ನಿಮಗೆ ಬಹಳ ಕೋಪ ಆದ್ರೆ ಏನು ಮಾಡ್ತೀರಾ?
ಸುತ್ತಮುತ್ತ ಯಾರೂ ಕಾಣಿಸದ ಜಾಗದಲ್ಲಿ ಒಬ್ಬನೇ ಇರುತ್ತೇನೆ. ಸುಮಧುರ ಹಾಡುಗಳನ್ನು ಕೇಳುತ್ತೇನೆ, ಧ್ಯಾನ ಮಾಡುತ್ತೇನೆ, ಮನಸ್ಸನ್ನು ಹತೋಟಿಗೆ ತರುತ್ತೇನೆ.

* ಬಿಡುವಿನ ವೇಳೆಯಲ್ಲಿ ಏನು ಮಾಡ್ತೀರಾ?
ಒಂದೂವರೆ ವರ್ಷದ ಮಗಳು ಅಥೀವಾ ಜೊತೆ ಕಾಲ ಕಳೆಯುತ್ತೇನೆ.

* ನಿಮಗೆ ಬಹಳ ಸಂತೋಷವಾದ ಗಳಿಗೆ ಯಾವುದು?
ಬೆಳಿಗ್ಗೆ ಎದ್ದ ತಕ್ಷಣ ಅಮ್ಮನ ಕಾಲಿಗೆ ಬೀಳುವಾಗ ಸಂತೋಷವಾಗುತ್ತದೆ, ಅಭಿಮಾನಿಗಳೊಂದಿಗೆ ಸಂವಾದ ನಡೆಸುವಾಗ, ಮಗಳು ಬೆನ್ನಿನ ಮೇಲೆ ಕುಳಿತಾಗ, ಕೆನ್ನೆ ಕಚ್ಚಿದಾಗ, ಮಗ ಬೈದಾಗ... ಈ ಎಲ್ಲಾ ಸನ್ನಿವೇಶವೂ ಸಡಗರದ ಕ್ಷಣಗಳೇ.

* ಬೈಕ್‌, ಕಾರು ಯಾವುದಿಷ್ಟ?
ಬೈಕ್‌ ಬಹಳ ಇಷ್ಟ, ಮೂರು ಬಾರಿ ಅಪಘಾತ ಆದಾಗಿನಿಂದ ಮನೆಯಲ್ಲಿ ಬೈಕ್‌ ಓಡಿಸಲು ಬಿಡೋದಿಲ್ಲ. ಜೊತೆಗೆ ಕಾರು ಇಷ್ಟವಾಗುತ್ತದೆ.

* ನಿಮ್ಮ ಮುಂದಿನ ಸಿನಿಮಾ?
ನನ್ನ ಹುಟ್ಟುಹಬ್ಬದ ಸಮಯದಲ್ಲಿ ಪ್ರಕಟಿಸಬೇಕು ಅಂದುಕೊಂಡಿದ್ದೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT