ADVERTISEMENT

ಹಾಲು ಜೇನು

​ಪ್ರಜಾವಾಣಿ ವಾರ್ತೆ
Published 10 ಮೇ 2017, 19:30 IST
Last Updated 10 ಮೇ 2017, 19:30 IST
ಹಾಲು ಜೇನು
ಹಾಲು ಜೇನು   

ರಾಜಕುಮಾರ್‌ ಅವರು ತಮ್ಮ ಸಿನಿಮಾ ಜೀವನದ ಪ್ರಯಾಣದಲ್ಲಿ ಹಲವು ಭಿನ್ನ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ತಮ್ಮ ಬಣ್ಣದ ಬದುಕಿನ ಉಚ್ಛ್ರಾಯ ಸ್ಥಿತಿಯಲ್ಲಿರುವಾಗ ಯಾವುದೇ ನಟ ಭಿನ್ನ ರೀತಿಯ ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಳ್ಳಲು ಹಿಂಜರಿಯುತ್ತಾನೆ. ಆದರೆ ರಾಜಕುಮಾರ್‌ ಬಣ್ಣದ ಬದುಕಿನ ಗ್ರಾಫ್‌ ನೋಡಿದರೆ ಒಂದಕ್ಕಿಂತ ಒಂದು ಭಿನ್ನ ಸಿನಿಮಾಗಳಿಂದ ವರ್ಣಮಯವಾಗಿದೆ.

1982ರಲ್ಲಿ ಬಿಡುಗಡೆಯಾದ ‘ಹಾಲು ಜೇನು’ ಸಿನಿಮಾ ರಾಜಕುಮಾರ್‌ ಅವರ ಪ್ರಯೋಗಶೀಲತೆಗೆ ಒಂದು ಉದಾಹರಣೆ. ಆದರೆ ಪ್ರಯೋಗಶೀಲತೆಯೊಂದೇ ಅಲ್ಲ, ಸಿನಿಮಾ ಆಸಕ್ತರು ಈ ಚಿತ್ರವನ್ನು ನೋಡಲೇಬೇಕು ಎನ್ನಲು ಇನ್ನೂ ಹಲವು ಕಾರಣಗಳಿವೆ.

‘ಚಲಿಸುವ ಮೋಡಗಳು’, ‘ಶ್ರಾವಣ ಬಂತು’, ‘ಆನಂದ್‌’, ‘ದೇವತಾ ಮನುಷ್ಯ’ದಂಥ ಉಜ್ವಲ ಸಿನಿಮಾಗಳನ್ನು ನೀಡಿದ ಸಿಂಗೀತಂ ಶ್ರೀನಿವಾಸ್‌ ರಾವ್‌ ಅವರ ನಿರ್ದೇಶನದ ಮೊದಲ ಕನ್ನಡ ಸಿನಿಮಾ ‘ಹಾಲು ಜೇನು’. ಈ ಚಿತ್ರದಲ್ಲಿ ರಾಜ್‌ ಪಾತ್ರವೇ ವಿಶಿಷ್ಟವಾಗಿದೆ. ತಮ್ಮೆಲ್ಲ ಸ್ಟಾರ್‌ ಪ್ರಭಾವಳಿಯನ್ನು ಪಕ್ಕಕ್ಕೊತ್ತಿ ಪಾತ್ರಕ್ಕೆ ತಮ್ಮನ್ನು ತಾವು ಕೊಟ್ಟುಕೊಂಡಿದ್ದಾರೆ.

ಮಾಧವಿ ಈ ಚಿತ್ರದ ನಾಯಕಿ. ಅವರಿಗೆ ಆಗಲೇ ಪ್ರಸಿದ್ಧ ನಟಿಯಾಗಿದ್ದ ಸರಿತಾ ಕಂಠದಾನ ಮಾಡಿರುವುದು ಇನ್ನೊಂದು ವಿಶೇಷ. ದ್ವಿತೀಯ ನಾಯಕಿಯಾಗಿ ರೂಪಾದೇವಿ ನಟಿಸಿದ್ದಾರೆ.

ಒಂದಕ್ಕಿಂತ ಒಂದು ಅದ್ಭುತ ಎನಿಸುವ ಹಾಡುಗಳು ‘ಹಾಲು ಜೇನು’ ಸಿನಿಮಾದ ಸ್ವಾದ ಹೆಚ್ಚಿಸಿವೆ. ‘ಬಾಳು ಬೆಳಕಾಯಿತು’, ‘ಆನೆಯ ಮೇಲೆ ಅಂಬಾರಿ ಕಂಡೆ...’ ಮುಂತಾದ ಹಾಡಗಳು ಇಂದಿಗೂ ಜನರ ಬಾಯಿಯಲ್ಲಿ ನಲಿಯುತ್ತಿವೆ. ಇದರಲ್ಲಿ ಜಿ.ಕೆ. ವೆಂಕಟೇಶ್‌ ಸಂಗೀತ ಸಂಯೋಜನೆಯ ಪಾತ್ರವೂ ಹಿರಿದು.

ಕ್ಯಾನ್ಸರ್‌ ರೋಗಕ್ಕೆ ಒಳಗಾದ ಹೆಂಡತಿಯನ್ನು ಗುಣಪಡಿಸಲು ಒದ್ದಾಡುವ ಕೆಳ ಮಧ್ಯಮವರ್ಗದ ವ್ಯಕ್ತಿಯೊಬ್ಬನ ಪಡಿಪಾಡಲುಗಳೇ ಈ ಸಿನಿಮಾದ ಕಥನ ಕೇಂದ್ರ. ಮಡದಿಯ ಆರೋಗ್ಯದ ಬಗ್ಗೆ ಅಪಾರ ಕಾಳಜಿ ವಹಿಸುವ, ಎದೆಯೊಳಗೆ ನೋವಿನ ಅಗ್ನಿಕುಂಡವನ್ನು ಬಚ್ಚಿಟ್ಟುಕೊಂಡು ಸದಾ ನಗುನಗುತ್ತಾ, ತನ್ನ ಸುತ್ತಲಿನವರನ್ನೂ ನಗಿಸುತ್ತಾ ಇರುವ ಮನುಷ್ಯ ರಂಗ.

ADVERTISEMENT

ಅವನಿಗೆ ಹೆಂಡತಿ ಕಮಲಾಳೇ ಪ್ರಾಣ. ಅವಳಿಗಾಗಿ ಏನಾದರೂ ಮಾಡಲು ಸಿದ್ಧ. ಈ ಮಧ್ಯ ಮೀನಾ ಎಂಬ ಹುಡುಗಿಯ ಪರಿಚಯವಾಗುತ್ತದೆ. ರಂಗನಿಗೆ ಮದುವೆಯಾಗಿದೆ ಎಂದು ತಿಳಿಯದೇ ಅವನನ್ನು ಪ್ರೇಮಿಸುತ್ತಾಳೆ. ಹೀಗೆ ತ್ರಿಕೋನ ಎಳೆಯಲ್ಲಿ ಕಟ್ಟಿರುವ ‘ಹಾಲು ಜೇನು’ ಕಮರ್ಷಿಯಲ್‌ ಚೌಕಟ್ಟಿನೊಳಗೇ ಅಮೂಲ್ಯ ಜೀವನಮೌಲ್ಯಗಳನ್ನು ಕಾಣಿಸುವ ಕಾರಣಕ್ಕೆ ಮಹತ್ವದ ಪ್ರಯತ್ನವಾಗಿ ಕಾಣುತ್ತದೆ. 

ಸಾವಿನ ಹರಿತ ಕೋರೆ ಮತ್ತು ಅವುಗಳ ನಡುವೆಯೇ ನಲಿಯುತ್ತ ಚಿಗುರುವ ಜೀವನ ಪ್ರೀತಿ ಎರಡನ್ನೂ ಈ ಸಿನಿಮಾದಲ್ಲಿ ಮುಖಾಮುಖಿಯಾಗಿಸಲಾಗಿದೆ. ಈ ಚಿತ್ರದ ‘ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ’ ಹಾಡು ಆ ಕಾಲದ  ತರುಣಿಯರು ತಮ್ಮ ಗಂಡನಾಗುವವನಿಗೆ ಇರಬೇಕಾದ ಗುಣಗಳ ಅಮೂರ್ತ ಕನಸಿನ ಚೌಕಟ್ಟಿನೊಳಗೆ ರಾಜ್‌ ಅವರ ಚಿತ್ರವನ್ನು ಸ್ಥಾಪಿಸಿಬಿಟ್ಟಿತ್ತು. 

ಆ ಕಾಲದ ಸಿನಿಮಾಗಳಲ್ಲಿ ಕಂಡುಬರುತ್ತಿದ್ದ ನಾಯಕನಟನ ಸ್ಥಾಪಿತ ಮಾದರಿಯ ಚರ್ಯೆಗಳನ್ನು ನೆನಪಿಸಿಕೊಂಡರೆ ಹೆಂಡತಿಯನ್ನು ಕೂಡ್ರಿಸಿ ಅಡುಗೆ ಮಾಡುವ, ಕಸ ಗುಡಿಸುವ ರಂಗನ ಪಾತ್ರದ ಮೂಲಕ ನಿರ್ದೇಶಕರು ಮಾಡಿರುವ ಉಲ್ಲಂಘನೆಯ ಅರಿವಾಗುತ್ತದೆ.

ರಾಜಕುಮಾರ್‌ ಮತ್ತು ಮಾಧವಿ ಅವರ ಪೈಟೋಟಿಯ ಅಭಿನಯ, ರೂಪಾದೇವಿ ಅವರ ಮುಗ್ಧ ಮುಖ, ಗುನುಗಿಕೊಳ್ಳುವಂಥ ಹಾಡುಗಳು, ಗಟ್ಟಿಯಾದ ಕಥೆ ಎಲ್ಲವೂ ಇರುವ ‘ಹಾಲು ಜೇನು’ ಸಿನಿಮಾವನ್ನು ಯುಟ್ಯೂಬ್‌ನಲ್ಲಿ goo.gl/L2Z9Un ಕೊಂಡಿ ಬಳಸಿ ವೀಕ್ಷಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.