ADVERTISEMENT

3ಡಿ ಕೈ ಕಾಲು

ಮನು ಎಚ್‌.ಎಸ್‌.ಹೆಗ್ಗೋಡು
Published 10 ಆಗಸ್ಟ್ 2015, 19:30 IST
Last Updated 10 ಆಗಸ್ಟ್ 2015, 19:30 IST

ಅದೊಂದು ಕಾಲವಿತ್ತು. ಮೊದಲೇ ಅಪಾಯಿಂಟ್‌ಮೆಂಟ್‌ ತಗೊಂಡು ಫೋಟೊ ಸ್ಟುಡಿಯೊಗೆ ಹೋಗಿ ಒಂದಷ್ಟು ನಿಮಿಷ ಕಾದೂ ಕೂತು ಫೋಟೊಗ್ರಾಫರ್ ಹೇಳಿದ ಭಂಗಿಯಲ್ಲಿ ಫೋಟೊ ತೆಗ್ಸಿ ಬಂದ್ರೆ ಆ ಫೋಟೊ  ಡೆವಲಪ್ ಆಗಿ, ಪ್ರಿಂಟ್ ಆಗಿ, ಡ್ರೈ ಆಗಿ ಆಮೇಲೆ ಫ್ರೇಮ್ ಮಾಡಿ ಕೈ ಸೇರೋಷ್ಟರಲ್ಲಿ ಕನಿಷ್ಠ ಒಂದು ವಾರ ಆಗೋಗ್ತಾ ಇತ್ತು. ಹಾಗೆ ತಯಾರಾದ ಕಪ್ಪುಬಿಳುಪಿನ ಫೋಟೊ ವರ್ಷಾನುಗಟ್ಟಲೆ ನಮ್ಮ ಮನೆಯ ಗೋಡೆಯ ಮೇಲೆ ನೆನಪನ್ನು ಹಸಿರಾಗಿ ಇಟ್ಟಿರುತ್ತಿತ್ತು. ಆದರೆ ಈಗ ಫೋಟೊ ಇತಿಹಾಸ ಬದಲಾಗಿದೆ.

  ಕಪ್ಪು-ಬಿಳುಪು ಜಾಗದಲ್ಲಿ ಕಲರ್‌ ಕಲರ್‌ ಫೋಟೊ, ಡಿಜಿಟಲ್‌ ಫೋಟೊ... ಹೀಗೆ ಏನೆನೋ ಬಂದು ಹಲ ವರ್ಷಗಳೇ ಆಗಿಬಿಟ್ಟಿವೆ. ಆದರೆ ಗೋಡೆಗಳನ್ನು ಅಲಂಕರಿಸಿರೋ ಈ ಫೋಟೊ ಜಾಗಕ್ಕೆ ಈಗ 3ಡಿ ಅಂಗಾಂಗಗಳು ಬಂದು ಕುಳಿತುಕೊಳ್ತಾ ಇವೆ! ಇದೇ ‘3ಡಿ ಕ್ಯಾಸ್ಟಿಂಗ್’.

ಕೆಲವು ವರ್ಷಗಳಿಂದ ‘ತ್ರೀಡಿ ಕ್ಯಾಸ್ಟಿಂಗ್’ ಅಲ್ಲಲ್ಲಿ ಬಳಕೆಯಲ್ಲಿತ್ತು. ಹವ್ಯಾಸಿಗಳು, ಕೆಲವರು ತಮ್ಮ ಮುದ್ದು ಮಕ್ಕಳ ಕೈ-ಕಾಲನ್ನೋ, ಸಂಗಾತಿಯ ಕೈ-ಕಾಲನ್ನೋ ಯಥಾವತ್ತಾಗಿ 3ಡಿ ನಕಲು ಮಾಡಿ ಶಾಶ್ವತ ನೆನಪಿನ ವಸ್ತುವಾಗಿ ಇಟ್ಟು ಕೊಳ್ಳುತ್ತಿದ್ದಾರೆ.

ಇದನ್ನೇ ಈಗ ಉದ್ಯೋಗ ಆಗಿಸಿಕೊಂಡಿದ್ದಾರೆ ಬೆಂಗಳೂರಿನ ಶಾಶ್ವತ ನಾಡ್ಗಂಟಿ. ಕಂದಮ್ಮಗಳ ಮುದ್ದು ಮುದ್ದಾದ ಕೈ ಕಾಲುಗಳ ಪಡಿಯಚ್ಚು ಮಾಡಿಸಿಕೊಂಡು ಅದನ್ನು ಗೋಡೆಗೆ ನೇತು ಹಾಕುವ ಹಾಗೆ ಫ್ರೇಮ್‌ಗಳನ್ನು ಮಾಡಿಸಿಕೊಳ್ಳಲು ಶಾಶ್ವತ ಅವರನ್ನು ಹುಡುಕಿ ಬರೋರ ಸಂಖ್ಯೆ ಹೆಚ್ಚುತ್ತಿದೆ.

ಈ ಕೈ-ಕಾಲುಗಳನ್ನು ನೋಡಿದಾಕ್ಷಣ ಇದೊಂದು ಸುಲಭದ ವಿದ್ಯೆಯ ಹಾಗೆ ಕಾಣಿಸುತ್ತದೆ. ಆದ್ರೆ ತುಂಬಾ ನಾಜೂಕಾದ ಕೈಚಳಕ ಇದಕ್ಕೆ ಬೇಕು. ಮೊದಲಿಗೆ ಮೈದಾ ಹಿಟ್ಟಿನಂಥ ಒಂದು ಪುಡಿಯ ಪೇಸ್ಟ್ ರೆಡಿ ಮಾಡಿ ಅದನ್ನು ಯಾರ ಅಚ್ಚು ಬೇಕೋ ಅವರ ಕೈ ಅಥವಾ ಕಾಲಿಗೆ ಮೆತ್ತುತ್ತಾರೆ. ಕೆಲವೇ ಕ್ಷಣಗಳಲ್ಲಿ ಅದು ಘನ ಪದಾರ್ಥವಾಗಿ ಮಾರ್ಪಡುತ್ತದೆ. ಹೀಗಾದಾಗ ಅದನ್ನು ನಾಜೂಕಾಗಿ ಕೈ-ಕಾಲಿನಿಂದ ಬೇರ್ಪಡಿಸುತ್ತಾರೆ. ಇದನ್ನೇ ಮೋಲ್ಡ್ ಅಥವಾ ಅಚ್ಚು ಅಂತ ಕರಿಯೋದು. ಇಂಥ ಮೋಲ್ಡ್ ತಯಾರಾದ ಬಳಿಕ ಪಿ.ಒ.ಪಿ ಅಥವಾ ಸಾಧ್ಯವಿರುವ ಬೇರೆ ದ್ರಾವಣವನ್ನು ಅದರಲ್ಲಿ ಸುರಿದು, ಅಂದರೆ ಎರಕ ಹೊಯ್ದು (ಕ್ಯಾಸ್ಟಿಂಗ್) ಸ್ವಲ್ಪಕಾಲ ಹಾಗೆಯೇ ಆರಲು ಬಿಡುತ್ತಾರೆ. ಆದರೆ ಅದು ಸಂಪೂರ್ಣ ಒಣಗಿ ಗಟ್ಟಿಯಾಗಲು ಕೆಲವು ದಿನಗಳು ಬೇಕು.

ಹುಟ್ಟಿದ ದಿನವೇ ಮಕ್ಕಳ ಪುಟ್ಟ ಕೈ-ಕಾಲುಗಳ ಅಚ್ಚನ್ನು ಕೆಲವರು ಆಸೆಪಟ್ಟರೆ ಇನ್ನು ಕೆಲವರು ಕೆಲವೇ ದಿನಗಳಲ್ಲಿ ತಮ್ಮನ್ನು ಅಗಲಿರುವ ತಮ್ಮ ಹೆತ್ತವರ ನೆನಪಿಗಾಗಿ ಆಶೀರ್ವಾದ ರೂಪದ ಅವರ  ಕೈ ಅಚ್ಚನ್ನು ಮಾಡಿಸಿಕೊಂಡವರು ಇದ್ದಾರೆ. ಶಾಶ್ವತ ನಾಡ್ಗಂಟಿ, ‘ನನಗಿನ್ನೂ ಯಾವ ಸೆಲೆಬ್ರಿಟಿಗಳ ಅಥವಾ ಸ್ವಾಮೀಜಿಗಳ ಕೈಕಾಲುಗಳನ್ನು ಅಚ್ಚು ಮಾಡುವ ಅವಕಾಶ ಸಿಕ್ಕಿಲ್ಲ, ಅವಕಾಶ ಸಿಕ್ಕರೆ ಕೆಲವು ಮಹನೀಯರ ಕೈಗಳ ಅಚ್ಚನ್ನಾದರೂ ಮಾಡುವ ಆಸೆ ಇದೆ’ ಎನ್ನುತ್ತಾರೆ. ಹೀಗೆ ತಯಾರಾದ ಕೈ- ಕಾಲುಗಳ ಪಡಿಯಚ್ಚನ್ನು ಗಾಜಿನ ಬಾಕ್ಸ್‌ಗಳಲ್ಲಿ ಇಲ್ಲವೇ ಇತರ ಅನುಕೂಲಕರ ಫ್ರೇಮ್ ಒಳಗೆ ಜೋಡಿಸಿ, ಮಗುವಿನ ಹೆಸರು, ಹುಟ್ಟಿದ ತಾರೀಖು... ಹೀಗೆ ಅಗತ್ಯ ವಿವರ ಸೇರಿಸಿ ಅಲಂಕರಿಸಿ ಇಟ್ಟುಕೊಳ್ಳಬಹುದು.

ಶಾಶ್ವತ ನಾಡ್ಗಂಟಿ ಕೆಲವು ವರ್ಷಗಳಿಂದ ಕ್ಯಾಸ್ಟಿಂಗ್ ಅನ್ನೇ ಸ್ವಂತ ಉದ್ಯೋಗವಾಗಿ ನಡೆಸುತ್ತಾ ಹಲವು ವಿಧವಾದ ಪ್ರಯೋಗ ಮಾಡುತ್ತಿದ್ದಾರೆ. ಅಂದರೆ  ಬೇರೆ ಬೇರೆ ವಸ್ತುಗಳನ್ನು ಬಳಸಿ ಪಡಿಯಚ್ಚುಗಳನ್ನು ತಯಾರಿಸುವುದಲ್ಲದೇ, ಮಕ್ಕಳನ್ನೂ ಸುಮ್ಮನೆ ಕುಳ್ಳರಿಸಿ ನಿಧಾನವಾಗಿ ಮೋಲ್ಡ್ ಸಿದ್ಧಮಾಡುವಲ್ಲಿ ಪಳಗಿದ್ದಾರೆ. ಈ ವಿದ್ಯೆ ಅವರ ಅಕ್ಕನಿಂದ ಬಳುವಳಿಯಾಗಿ ಬಂದಿದ್ದು. ಬೆಲ್ಜಿಯಂನಲ್ಲಿದ್ದ ಇವರ ಅಕ್ಕ, ನೆರೆಹೊರೆಯವರಿಂದ ಇದನ್ನು ಕಲಿತು ತಮ್ಮ ಮನೆಯ ಮಕ್ಕಳು ಹಾಗೂ ಸಂಬಂಧಿಕರ ಕೈ-ಕಾಲುಗಳ ಪಡಿಯಚ್ಚು ತಯಾರಿಸಿದ್ದರು. ಇದು ನೋಡುಗರಲ್ಲಿ ಕುತೂಹಲ ಮೂಡಿಸಿದ ಕಾರಣ ಶಾಶ್ವತ ಅವರೂ ಇದನ್ನು ಕಲಿತು ಈಗ ಉದ್ಯೋಗ ಆಗಿಸಿಕೊಂಡಿದ್ದಾರೆ.
ಇವರ ಸಂಪರ್ಕಕ್ಕೆ: 9481934565.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.