ಪ್ರತಿಯೊಬ್ಬರ ಬದುಕಿನಲ್ಲಿ ಮದುವೆ ಎನ್ನುವುದು ಮಧುರ ಕ್ಷಣ. ಫೆಬ್ರುವರಿ 18ರ 2002ರಲ್ಲಿ ದಾವಣಗೆರೆಯ ಕಲ್ಯಾಣ ಮಂಟಪದಲ್ಲಿ ನಾನು ಸುನೀತಾ ಬಾಳಸಂಗಾತಿಯಾದೆವು.
ಇಲ್ಲಿ ನಡೆದ ಒಂದು ಪ್ರಸಂಗ ಈಗಲೂ ನನ್ನ ಮನಸಿನಲ್ಲಿ ಹಚ್ಚ ಹಸಿರಾಗಿ ಉಳಿದಿದೆ. ನೆನಪಿಸಿಕೊಂಡರೆ ನಗು ಬರುತ್ತದೆ. ಯಾವಾಗಲೂ ಪಂಚೆ ಧರಿಸದ ನಾನು ಬಿಳಿ ಪಂಚೆ
ಸುತ್ತಿಕೊಂಡಿದ್ದೆ. ಸಪ್ತಪದಿ ತುಳಿಯುವಾಗ ಪಂಚೆ ಕಳಚಿಬಿತ್ತು.
ಮದುವೆ ಸಂಪ್ರದಾಯದ ಪದ್ಧತಿಗಳನ್ನು ಮರೆಯಲು ಸಾಧ್ಯವಿಲ್ಲ. ಈಗ ನಮ್ಮ ಮದುವೆಯಾಗಿ 16 ವರ್ಷಗಳು ಕಳೆದಿವೆ. ನಗರ ಪ್ರದೇಶದ ಹೆಣ್ಣು ಮಕ್ಕಳು ಹಳ್ಳಿಯ ಗಂಡನ ಮನೆ ಹೊಂದಿಕೊಳ್ಳುವದು ಬಹಳ ಕಷ್ಟ. ಆದರೆ ನನ್ನ ಸಂಗಾತಿ ನನ್ನ ಮನೆ ಸೇರಿದ ಕೆಲವೇ ದಿನಗಳಲ್ಲಿ ಜೋಳದ ರೊಟ್ಟಿ ತಟ್ಟುವುದನ್ನು ಕಲಿತು ಎಲ್ಲಾ ಮನೆ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವುದನ್ನು ಕಲಿತುಕೊಂಡಳು. ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಎರಡು ಹೆಣ್ಣು ಮಕ್ಕಳೊಂದಿಗೆ ಸುಖವಾಗಿದ್ದೇವೆ. ಮದುವೆಯ ಮಧುರ ಕ್ಷಣಗಳನ್ನು ಈಗಲೂ ನೆನಪು ಮಾಡಿಕೊಳ್ಳುತ್ತೇವೆ.
-ಶ್ರೀಧರ.ಕೆ. ಅಂಗಡಿ, ಚಳಗೇರಿ
*****
ನಂಟು ಬೆಸೆದ ಮದುವೆ
ನಾನೂ, ಸನಾ ಮದುವೆ ಆಗಿ ಎರಡು ವರ್ಷ ಆಯಿತು. ಅವಳು ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲೆಯವಳು.ನಾನು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನವನು. ನಮ್ಮ ಮನೆಯಲ್ಲಿ ನನ್ನ ಸೋದರ ಮಾವನ ಮಗಳನ್ನು ಮದುವೆಯಾಗಬೇಕು ಎಂದು ಪಟ್ಟು ಹಿಡಿದಿದ್ದರು. ಹಾಗಾಗಿ ನಾನು ಸನಾಳನ್ನು ಮದುವೆಯಾಗುವುದು ಅವರಿಗೆ ಇಷ್ಟವಿರಲಿಲ್ಲ. ನನಗೆ ಮತ್ತು ಹುಡುಗಿ ತಂದೆ ಅಂದರೆ ನನ್ನ ಮಾವನಿಗೆ ಬಿಟ್ಟರೆ, ಉಳಿದಂತೆ ಯಾರಿಗೂ ಈ ಮದುವೆ ಇಷ್ಟವಿರಲಿಲ್ಲ. ಇನ್ನು ಹುಡುಗಿ ಮನೆಯಲ್ಲಿ ‘ತುಂಬಾ ದೂರ ಆಗುತ್ತೆ, ಆಚಾರ ವಿಚಾರಗಳಲ್ಲಿ ವ್ಯತ್ಯಾಸವಿರುತ್ತದೆ. ನಮ್ಮ ಹುಡುಗಿ ಆ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟ ಆಗುತ್ತೆ’ ಎನ್ನುವುದು ಅವರ ಯೋಚನೆ.
ಮದುವೆ ದಿನ ಎಲ್ಲರೂ ಸಪ್ಪೆ ಮೋರೆ ಹಾಕಿಕೊಂಡು ಮದುವೆ ಮಾಡಿ ಮುಗಿಸಿದರು. ಆವತ್ತು ನಾನು ಮಾತ್ರ ನನ್ನ ಇಷ್ಟದ ಹುಡುಗಿ ಜೊತೆ ಮದುವೆ ಆಯಿತೆಂದು ಸಂತೋಷವಾಗಿದ್ದೆ. ಆದರೆ ಅನಂತರ ತಿಳಿಯಿತು ಸನಾಗೂ ಈ ಮದುವೆ ಇಷ್ಟವಿರಲಿಲ್ಲ ಎಂದು. ಹೀಗೆ ಶುರುವಾದ ನಮ್ಮ ವೈವಾಹಿಕ ಜೀವನ ನಮ್ಮಿಬ್ಬರ ಹೊಂದಾಣಿಕೆ, ಪರಸ್ಪರ ಸ್ನೇಹ, ಪ್ರೀತಿಯಾಗಿ ಬದಲಾಯಿತು. ಈಗ ಅವಳು ಮತ್ತು ನನ್ನ ಕುಟುಂಬದವರೆಲ್ಲರೂ ಸಂತೋಷವಾಗಿದ್ದೇವೆ. ಈ ಸಂತೋಷಕ್ಕೆ ಸಾಕ್ಷಿಯಾಗಿ ನಮಗೆ ಒಂದು ಗಂಡು ಮಗು ಇದೆ, ಅವನ ಹೆಸರು ಸಾಹಿಲ್.
–ಅಜೀಜ್ ಬಳೂತಿ, ಬೀಳಗಿ
***
ಆಡಂಬರದ ಮದುವೆ ಬೇಡ
ಎರಡು ಮನಸ್ಸುಗಳು ಅರಿತು – ಬೆರೆತು ಹೊಸಬಾಳಲ್ಲಿ ಒಂದಾಗಲು ಸಾಕ್ಷಿಯಾಗುವ ವೇದಿಕೆಯೇ ಮದುವೆ. ಹೂಗಳಿಂದ ಸಿಂಗರಿಸಿಕೊಂಡ ತಳಿರು ತೋರಣಗಳು, ವಸ್ತ್ರಾಭರಣಗಳಿಂದ ಅಲಂಕೃತವಾದ ವಧು– ವರರು ಹಾಗೂ ಅವರೊಡನೆ ಅವರ ಬಂಧುಗಳು ಸಹ. ಈ ಸುಸಂಧರ್ಭವನ್ನು ನೋಡಿ ಮನ ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದು ಹಾಗೆಯೇ ಅದು ಎಂದಿಗೂ ಅಳಿಸಲಾಗದ ಸವಿ ನೆನಪಾಗಿಯೂ ಎಲ್ಲರ ಬಾಳಲ್ಲಿ ಉಳಿಯುವಂಥದ್ದು.
ಹೀಗೆಯೇ ನನ್ನ ಮದುವೆ ಕೂಡ ಒಂದು ಸುಂದರ ನೆನಪಾಗಿ ಉಳಿದಿದೆ. ಅಚ್ಚುಕಟ್ಟಾಗಿ ಹಳ್ಳಿಯ ಮನೆಯಲ್ಲಿಯೇ ನನ್ನ ಮದುವೆ ಆಯಿತು. ನನ್ನ ಮದುವೆಯಲ್ಲಿ ನನ್ನವರು ಅತಿಥಿಗಳಿಗೆ ಮೊದಲ ಆದ್ಯತೆ ನೀಡಿದ್ದರು. ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಮುಖ್ಯವಾಗಿ ಪ್ಲಾಸ್ಟಿಕ್ ಲೋಟಗಳನ್ನು ಬಳಸದಂತೆ ಎಚ್ಚರಿಕೆ ವಹಿಸಲಾಗಿತ್ತು.
ಮದುವೆ ಎಂಬುದು ಬೇರೆಯವರು ನೋಡುವ ಆಡಂಬರವಾಗದೆ ಮನಸ್ಸುಗಳು ಒಪ್ಪುವ ಅವರವರ ಮನಸ್ಥಿತಿಗೆ ತಕ್ಕಂತೆ ಇರಬೇಕು. ನೋಡುಗರು ಏನನ್ನುತ್ತಾರೋ ಎಂದುಅನಗತ್ಯ ವೆಚ್ಚ ಮಾಡಬಾರದು. ಸಾಮೂಹಿಕ ವಿವಾಹಗಳಿಗೆ ಹೆಚ್ಚಿನ ಒಲವು ತೋರಬೇಕು. ಆಡಂಬರದಿಂದ ಮದುವೆ ಆಗುವುದು ಮುಖ್ಯವಲ್ಲ, ಗಂಡು– ಹೆಣ್ಣು ಇಬ್ಬರು ಹೊಸ ಸಂಬಂಧಗಳನ್ನು ಅರಿತು, ವ್ಯವಸ್ಥಿತವಾದಜೀವನ ರೂಪಿಸಿಕೊಳ್ಳುವುದೇ ಮುಖ್ಯವಾಗಬೇಕು.
–ಶೋಭ ಡಿ.ಆರ್. ಗೋವಿನ ಕೋವಿ. ತಾ. ಹೊನ್ನಾಳಿ. ದಾವಣಗೇರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.