ಪ್ರಾಚೀನ ಕಾಲದಿಂದಲೂ ನಮ್ಮ ಭೂಮಿ ಚಪ್ಪಟೆ ಆಕಾರದಲ್ಲೇ ಇದೆ ಎಂದು ಭಾವಿಸಿದ್ದರು. ಮೇಲ್ನೋಟಕ್ಕೆ ಭೂಮಿ ಚಪ್ಪಟೆಯಾಗಿಯೇ ಇದೆ. ಸಾಗರದ ನಡುವೆ ಹಡಗಿನಲ್ಲಿ ಕುಳಿತು ಎಲ್ಲಾ ಕಡೆ ಕಣ್ಣು ಹಾಯಿಸಿದಾಗ ಸುತ್ತಲೂ ಹರಡಿರುವ ನೀರು, ಹರಡಿರುವ ಹರವೂ ಸಹಾ ಚಪ್ಪಟೆಯಾಗಿಯೇ ಕಂಡುಬರುತ್ತದೆ. ಆಗಸವು ಬೋರಲು ಹಾಕಿದ ಬೋಗುಣಿಯಂತೆ ತೋರುತ್ತದೆ. ಹರಡಿರುವ ನೀರಿನ ಅಂಚಿಗೆ ತಾಕಿದಂತೆ ಆಗಸವು ಬಾಗಿರುತ್ತದೆ. ಇದನ್ನೇ ನಾವು ‘ದಿಗಂತ’ ಎನ್ನುವುದು. ಈ ರೀತಿಯ ದಿಗಂತವು ನಮ್ಮ ಸುತ್ತಲೂ ಆವರಿಸಿರುವ ವೃತ್ತದಂತೆ ತೋರುತ್ತದೆ.
ನಾವು ನೆಲದ ಮೇಲೆ ನಿಂತಿರುವಾಗ ಅಥವಾ ನಿಂತು ನೋಡಿದಾಗ, ಭೂಮಿಯು ದಿಗಂತದವರೆಗೆ ಚಾಚಿರುವಂತೆ ತೋರುತ್ತದೆ. ಭೂಮಿಗೆ ಅಂಟಿಕೊಂಡಿರುವ ದಿಗಂತವೂ ಸಹಾ ಸಮನಾಗಿಲ್ಲ. ಭೂಮಿಯ ಮೇಲಿರುವ ಮನೆಗಳು, ಗುಡ್ಡ-ಬೆಟ್ಟಗಳು, ಗಿಡ-ಮರಗಳು ತಗ್ಗು-ದಿನ್ನೆಗಳಿಂದಾಗಿ ದಿಗಂತವು ಸಮನಾಗಿಲ್ಲ. ನಾವೆಲ್ಲಾ ತಿಳಿದಿದ್ದ ಹಾಗೆ, ಭೂಮಿಯು ಅನಂತದವರೆಗೆ ಚಾಚಿದೆ ಎಂಬ ಭಾವನೆ ಇತ್ತು. ಭೂಮಿ ಮತ್ತು ಸಮುದ್ರಗಳಿಗೆ ಅನಂತ ವ್ಯಾಪ್ತಿ ಇದೆ ಎಂದು ತಿಳಿಯಲಾಗಿತ್ತು.
ಹೀಗೆಯೇ ಇವೆಲ್ಲವೂ ಇದ್ದಿದ್ದೇ ಆಗಿದ್ದರೆ, ಸೂರ್ಯ ಎಲ್ಲಿರಬಹುದು? ಬೆಳಿಗ್ಗೆ ಪೂರ್ವದಲ್ಲಿ ಹುಟ್ಟಿ, ಪಶ್ಚಿಮದಲ್ಲಿ ಮುಳುಗುತ್ತಾನೆ. ಮರುದಿನವೇ ಮತ್ತೆ ಪೂರ್ವದಲ್ಲಿ ಉದಯಿಸುತ್ತಾನೆ. ಪುರಾತನ ಕಾಲದಲ್ಲಿ ಜನ ಅಂದುಕೊಂಡಿದ್ದೇ ಬೇರೆ. ಹೊಸ ಸೂರ್ಯ ಹುಟ್ಟುತ್ತಾನೆ, ಮುಳುಗಿ ಹಳಬನಾಗುತ್ತಾನೆ ಎಂದು ತಿಳಿದಿದ್ದರು. ಕೆಲವರು ತಿಳಿದಿದ್ದ ಹಾಗೆ ಸೂರ್ಯನು ಮುಳುಗಿದಾಗ ಹಡಗೊಂದು ಪೂರ್ವಕ್ಕೆ ರಾತ್ರಿಯಲ್ಲಿ ತಂದು ಬಿಡುತ್ತದೆ. ಮರುದಿನವೇ ಅದೇ ಸೂರ್ಯ ಹುಟ್ಟುವಂತೆ ಮಾಡುತ್ತದೆ.
(ಸಾಗರ)
ಧೃವನಕ್ಷತ್ರದಿಂದ ದೂರವಿರುವ ನಕ್ಷತ್ರಗಳು ವೃತ್ತಾಕಾರದಲ್ಲಿ ಭೂಮಿಯನ್ನು ಸುತ್ತುತ್ತಿರುವಂತೆ ಕಾಣಿಸಿದರೂ, ಉಳಿದ ನಕ್ಷತ್ರಗಳು ಪೂರ್ವದಲ್ಲಿ ಹುಟ್ಟಿ, ಪಶ್ಚಿಮದಲ್ಲಿ ಮುಳುಗುವಾಗಿನ ಅರ್ಧವೃತ್ತದಷ್ಟೇ ಕಣ್ಣಿಗೆ ಕಾಣುತ್ತದೆ. ನಾವು ನಿಂತಿರುವ ಭೂಮಿಯು ಒಂದು ಮೈಲಿ ಅಥವಾ 10 ಕಿ.ಮೀ. ದಪ್ಪವಿರಬಹುದೇ? ಹೀಗೆ ಅದೊಂದು ಚಪ್ಪಡಿಯಾಗಿದ್ದರೆ, ಕೆಳಗೆ ಬೀಳದಂತೆ ಹಿಡಿದ ಶಕ್ತಿ ಯಾವುದು? ಒಂದೋ ವೇಳೆ ಭೂಮಿ ಚಪ್ಪಟೆಯಾಗಿದೆ ಎಂದು ನಾವೆಲ್ಲಾ ಒಪ್ಪುವುದಾದರೆ, ಅನೇಕ ಸಮಸ್ಯೆಗಳಿಗೆ ಉತ್ತರವೇ ಇಲ್ಲ ಎಂದು ತಿಳಿಯುತ್ತದೆ.
ಭೂಮಿ ಚಪ್ಪಟೆ ಎಂಬುದರ ಬಗ್ಗೆ ಮೊದಲು ಅನುಮಾನ ವ್ಯಕ್ತಪಡಿಸಿದವರು ಗ್ರೀಕರು. ಗ್ರೀಕ್‌ನ ಅನಾಕ್ಸಿಮಾಂಡರ್ ಎಂಬುವನು ರಾತ್ರಿ ಆಕಾಶದ ಬಗ್ಗೆ ತನ್ನಲ್ಲಿಯೇ ಅನೇಕ ಪ್ರಶ್ನೆಗಳನ್ನು ಹಾಕಿಕೊಂಡನು. ಮೋಡವಿಲ್ಲದ ದಿನಗಳ ಶುಭ್ರ ರಾತ್ರಿಯ ಆಗಸದಲ್ಲಿ ನಕ್ಷತ್ರಗಳು ಪೂರ್ವದಿಂದ ಪಶ್ಚಿಮದ ಕಡೆ ಚಲಿಸುತ್ತಿದ್ದವು. ಅವುಗಳಲ್ಲಿ ಒಂದು ನಕ್ಷತ್ರ ಮಾತ್ರ ಚಲಿಸುತ್ತಿರಲಿಲ್ಲ. ಅದುವೇ ಧ್ರುವ ನಕ್ಷತ್ರ. ರಾತ್ರಿಯಲ್ಲಾ ನಿಶ್ಚಲವಾಗಿ ನಿಂತಿರುತ್ತಿತ್ತು. ಎಲ್ಲಾ ನಕ್ಷತ್ರಗಳೂ ಈ ಅಚಲ ನಕ್ಷತ್ರದ ಸುತ್ತ ಚಲಿಸುತ್ತಿದ್ದವು.ಇನ್ನೂ ಅನೇಕ ಪ್ರಶ್ನೆಗಳಿಗೆ ಅವನಿಗೆ ಉತ್ತರವೇ ದೊರೆಯಲಿಲ್ಲ.
ಆಕಾಶ ಒಂದು ಗೋಳವೇ ಹೌದು. ಆದರೆ ಭೂಮಿ ಮಾತ್ರ ಚಪ್ಪಟೆಯಾಗಿದೆ. ಎಂದು ವಿವರಣೆ ನೀಡಿದವನೇ ಅನಾಕ್ಸಿಮಾಂಡರ್. ಆದರೂ ಅನಾಕ್ಸಿಮಾಂಡರ್‌ಗೆ ಭೂಮಿಯ ಚಪ್ಪಟೆ ಬಗ್ಗೆ ತೃಪ್ತಿ ಆಗಲೇ ಇಲ್ಲ. ಅವನು ಮತ್ತೆ ಮತ್ತೆ ಯೋಚಿಸತೊಡಗಿದ. ಕೊನೆಗೂ ನಿಖರವಾದ ಉತ್ತರ ದೊರೆಯಲೇ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.