ADVERTISEMENT

ಸಾಕು ಸುಮ್ನಿರಿ, ಇನ್ನೆಷ್ಟು ಬೈತೀರಿ...

ಘನಶ್ಯಾಮ ಡಿ.ಎಂ.
Published 10 ಅಕ್ಟೋಬರ್ 2018, 19:45 IST
Last Updated 10 ಅಕ್ಟೋಬರ್ 2018, 19:45 IST
ಮಗುವಿನ ಕಣ್ಣೀರಿಗೆ ಬೆಲೆಕೊಡಿ
ಮಗುವಿನ ಕಣ್ಣೀರಿಗೆ ಬೆಲೆಕೊಡಿ   

‘ಏಯ್, ಬಾಯ್ಮುಚ್ಕೊಂಡ್ ಇರೊ. ಎಷ್ಟು ಗಲಾಟೆ ಮಾಡ್ತ್ಯಾ. ನಿನ್ನ ಜೊತೆಗೆ ಏಗಿಏಗಿ ಸಾಕಾಗಿ ಹೋಗಿದೆ...’

ತಾಯಿ ಹೀಗೆ ಊರಡ್ಡಗಲ ಕಿರುಚಿದಾಗ ಮಗು ಥಟ್ ಅಂತ ಸುಮ್ಮನಾಯಿತು, ಜೋಲುಮೋರೆ ಮಾಡಿಕೊಂಡು, ರೂಮ್ ಒಳಗೆ ಓಡಿ ಹೋಯಿತು. ರಾಜು ಪಾಲಿಗೆ ಇದು ಒಂದು ದಿನದ ಕಥೆಯಾಗಿರಲಿಲ್ಲ. ಅಪ್ಪ–ಅಮ್ಮನಿಂದ ಹೀಗೆ ಗದರಿಸಿಕೊಂಡು ಮಾನಸಿಕವಾಗಿ ಕುಗ್ಗುತ್ತಲೇ ಬೆಳೆದ ಹುಡುಗ ಹರೆಯ ಮುಗಿದು ಯೌವ್ವನಕ್ಕೆ ಹೆಜ್ಜೆಯಿಟ್ಟಾಗ ಮನೋರೋಗಿಯೇ ಆಗಿಬಿಟ್ಟಿದ್ದ.

‘ನಾನು ಏನು ಮಾಡಿದ್ರೂ ತಪ್ಪಾಗುತ್ತೆ’ ಎನ್ನುವ ಹಿಂಜರಿಕೆ ಅವನ ಜೀವನದ ಮೇಲೆ ಅಳಿಸಲಾಗದ ಪರಿಣಾಮ ಬೀರಿತ್ತು.

ADVERTISEMENT

‘ಮಕ್ಕಳು ಗಲಾಟೆ ಮಾಡದೆ ದೊಡ್ಡೋರು ಗಲಾಟೆ ಮಾಡೋಕೆ ಆಗುತ್ತಾ. ನೀನು ಸುಮ್ನಿರು ಸಾಕು. ನೀನೆಷ್ಟು ಗಲಾಟೆ ಮಾಡ್ತಿದ್ದೆ ಅಂತ ನನಗೆ ಗೊತ್ತಿಲ್ವಾ’ ಎಂದು ಗದರಿಕೊಳ್ಳುವ ದೊಡ್ಡವರು ಇಲ್ಲದ ಮನೆಗಳಲ್ಲಿ ಮಕ್ಕಳ ಮೇಲೆ ಅಪ್ಪ–ಅಮ್ಮನ ಹಾರಾಟ ಹೆಚ್ಚು.

ಹೆತ್ತವರು ಮಾಡುವ ತಪ್ಪಿನಿಂದ ಮಕ್ಕಳ ಮನಸಿನ ಮೇಲೆ ಏನೆಲ್ಲಾ ಪರಿಣಾಮ ಆಗುತ್ತೆ ಅಂತ ‘ಜರ್ನಲ್ ಆಫ್ ಚೈಲ್ಡ್ ಡೆವಲಪ್‌ಮೆಂಟ್’ ನಿಯತಕಾಲಿಕೆಯಲ್ಲಿ ಒಂದು ಸಂಶೋಧನಾ ಪ್ರಬಂಧ ಪ್ರಕಟವಾಗಿದೆ. ಅದು ಏನು ಹೇಳುತ್ತೆ ಗೊತ್ತಾ...?

ಇದನ್ನು ಓದಿ, ಮುಂದೆ ಮಗುವನ್ನು ಬೈಯ್ಯಬೇಕು ಎನಿಸಿದಾಗ ನೆನಪಿಸಿಕೊಳ್ಳಿ

* ಸಿಕ್ಕಾಪಟ್ಟೆ ಬೈಸಿಕೊಳ್ಳುವ ಮಗು ವ್ಯಗ್ರವಾಗಿ ಬೆಳೆಯುತ್ತೆ. ಸದಾ ಉದ್ವಿಗ್ನವಾಗಿರುತ್ತೆ. ಅದನ್ನು ಖಿನ್ನತೆ ಬಾಧಿಸುತ್ತೆ.

* ಏನು ಹೇಳಿದರೂ ವಿರೋಧಿಸಬೇಕು, ಕೇಳಬಾರದು ಎನ್ನುವ ಮನಃಸ್ಥಿತಿ ಬೆಳೆಸಿಕೊಳ್ಳುತ್ತೆ.

* ಜೋರಾಗಿ ಗದರಿದಾಗ ಮಕ್ಕಳು ಪೆಟ್ಟು ತಿಂದಷ್ಟೇ ಗಾಬರಿಯಾಗುತ್ತವೆ.

* ಮಕ್ಕಳು ತಮ್ಮ ಕಣ್ಣಿಗೆ ಬೀಳುವ ದೊಡ್ಡವರಿಂದ ತಾವು ದೊಡ್ಡವರಾದಾಗ ಹೇಗೆ ವರ್ತಿಸಬೇಕು ಎನ್ನುವ ಪಾಠ ಕಲಿಯುತ್ತವೆ.

* ‘ಮೂರು ಹೊತ್ತೂ ತಟ್ಟೆ ತುಂಬಾ ತಿಂತೀಯಾಲ್ಲಾ...’ ಎಂದು ನೀವು ಹಂಗಿಸಿದರೆ ಅದಕ್ಕೆ ಆಹಾರದ ಮೇಲೆಯೇ ಅಸಹ್ಯ ಬಂದುಬಿಡುತ್ತೆ. ಆಮೇಲೆ ನೀವು ಎಷ್ಟು ಮುದ್ದು ಮಾಡಿದರೂ ಅದರ ಮನಸಿನಿಂದ ಈ ಭಾವನೆ ಹೋಗುವುದಿಲ್ಲ.

* ಸದಾ ಬೈಗುಳ ಕೇಳಿಸಿಕೊಳ್ಳುವ ಮಗುವಿನ ಮಿದುಳಿನಲ್ಲಿ ರಾಸಾಯನಿಕ ಪ್ರಕ್ರಿಯೆ ಏರುಪೇರಾಗುತ್ತೆ. ‘ನಾನು ಅಪಾಯದಲ್ಲಿದ್ದೇನೆ, ನನಗೆ ಯಾರಾದರೂ ಹೋಡೀತಾರೆ, ನನಗೆ ರಕ್ಷಣೆಯಿಲ್ಲ’ ಎನ್ನುವ ಭಾವನೆಗಳಿಂದ ಅದು ಕಂಗಾಲಾಗುತ್ತೆ.

* ನೀವು ಬೈದಷ್ಟೂ ‘ಅಯ್ಯೋ ಇವರದ್ದು ಇದ್ದದ್ದೇ, ಇವರ ಮಾತು ಕೇಳಬೇಕಾಗಿಲ್ಲ’ ಎನ್ನುವ ಭಾವನೆ ಮಕ್ಕಳ ಮನದಲ್ಲಿ ಬಲಿಯುವುದು ಹೆಚ್ಚು.

* ಆಫೀಸಿನ ಒತ್ತಡ, ಗಂಡನ ಮೇಲಿದ್ದ ಸಿಟ್ಟನ್ನು ಮಕ್ಕಳ ಮೇಲೆ ತೋರಬೇಡಿ. ಅದರ ಮಗುಸಹಜ ಸ್ವಭಾವವನ್ನು ಹಾಳುಮಾಡಬೇಡಿ, ಒಮ್ಮೆ ಅದರ ಸ್ವಭಾವ ಹಾಳಾದರೆ ಮತ್ತೆಂದೂ ಸರಿಪಡಿಸಲು ಅಗದು ಎಂದು ಮಕ್ಕಳ ಮನಃಶಾಸ್ತ್ರಜ್ಞ ಡಾ.ಅಲಾನ್ ಕಸ್ದಿನ್ಹೇಳುತ್ತಾರೆ.

* ‘ಮುದ್ದು ಮಾಡಿದರೆ ಹೆಚ್ಚಿಕೊಳ್ತಾರೆ’ ಎಂಬ ಭಾವನೆಯಿಂದ ಹೊರಗೆ ಬನ್ನಿ. ಸಮಾಧಾನವಾಗಿ ತಿಳಿಹೇಳಿದರೆ ಮಾತ್ರ ಮಕ್ಕಳು ಅರ್ಥಮಾಡಿಕೊಳ್ಳುತ್ತಾರೆ. ಕಿರುಚಾಡಿದರೆ ಹೇಳುವವರ ಬಗ್ಗೆ ಮಾತ್ರವಲ್ಲ, ಅವರು ಹೇಳುವ ವಿಚಾರಗಳ ಬಗ್ಗೆಯೂ ದ್ವೇಷ ಬೆಳೆಸಿಕೊಳ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.