ADVERTISEMENT

ವಿಶ್ವವಿದ್ಯಾಲಯಗಳ ಕರ್ಮಕಾಂಡ: ಮೇಯೋಕೆ ಹಸನಾದ ಹುಲ್ಲುಗಾವಲು

ಒಳನೋಟ : ವಿ.ವಿ ಕರ್ಮಕಾಂಡ 2008ರಿಂದ 2018ರವರೆಗೆ

ಪ್ರವೀಣ ಕುಲಕರ್ಣಿ
Published 28 ಅಕ್ಟೋಬರ್ 2018, 2:45 IST
Last Updated 28 ಅಕ್ಟೋಬರ್ 2018, 2:45 IST
   

ಬೆಂಗಳೂರು: ‘ಹಸುಗಳು ಮೇಯೋದಕ್ಕೆ ಹಸನಾದ ಹುಲ್ಲುಗಾವಲನ್ನು ಹುಡುಕಿಕೊಂಡು ಹೋಗೋದಿಲ್ವೆ? ಹಾಗೆಯೇ ವಿಶ್ವವಿದ್ಯಾಲಯಗಳ ಪ್ರಮುಖ ಹುದ್ದೆಗಳಿಗೆ ಜನ ಬೇಟೆ ಆಡಿಕೊಂಡು ಬರ್ತಾರೆ’

– ಇದು ವಿಶ್ವವಿದ್ಯಾಲಯಗಳ ಕುಲಪತಿಗಳಿಂದ ಬರುತ್ತಿದ್ದ ಪ್ರಸ್ತಾವಗಳನ್ನು ಪರಿಶೀಲಿಸುವಂತಹ ದೊಡ್ಡ ಹುದ್ದೆಯಲ್ಲಿದ್ದ ಉನ್ನತ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ಹೇಳುವ ಮಾತು.

ಕುಲಪತಿಗಳು ಹಾಗೂ ಸಿಂಡಿಕೇಟ್‌ ಸದಸ್ಯರಂತಹ ಪ್ರಮುಖ ಹುದ್ದೆಗಳಿಗೆ ದೊಡ್ಡ ಪ್ರಮಾಣದ ‘ಬಂಡವಾಳ’ ಹೂಡುವವರಿಗೆಲ್ಲ ಆ ಹುದ್ದೆಗಳು ಅಷ್ಟೊಂದು ಆಕರ್ಷಕವಾಗಿ ಕಾಣಲು ಏನು ಕಾರಣ? ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ನೇಮಕಾತಿ, ನಿರ್ಮಾಣ, ನವೀಕರಣ, ಖರೀದಿ, ಪ್ರವಾಸ, ವಿಶೇಷ ಪದವಿಗಳ ಪ್ರದಾನ, ಕಾಲೇಜುಗಳಿಗೆ ಮಾನ್ಯತೆ ನೀಡುವಿಕೆ, ಹೊರಗುತ್ತಿಗೆ, ಸೆಮಿನಾರ್‌, ವರ್ಕ್‌ಶಾಪ್‌ಗಳ ಸಂಘಟನೆ – ಇಂತಹ ಹಲವು ‘ಹುಲ್ಲುಗಾವಲು’ಗಳು ಕಣ್ಣಿಗೆ ಬೀಳುತ್ತವೆ.

ADVERTISEMENT

ವಿವಿಧ ವಿಶ್ವವಿದ್ಯಾಲಯಗಳಲ್ಲಿ ಇದುವರೆಗೆ ನಡೆದ ಭ್ರಷ್ಟಾಚಾರ ಪ್ರಕರಣಗಳ ಮಾಹಿತಿ ಮೇಲೆ ಕಣ್ಣಾಡಿಸಿದರೆ ಎದ್ದು ಕಾಣುವುದು ಕಾಮಗಾರಿ ಹಗರಣಗಳ ಅಟ್ಟಹಾಸ. ಕ್ಯಾಂಪಸ್ಸಿನಲ್ಲಿರುವ ಹಸಿರನ್ನೇ ಮಂಗಮಾಯ ಮಾಡಲು ಪಣ ತೊಟ್ಟವರಂತೆ ಹಲವು ಕುಲಪತಿಗಳು ಕಟ್ಟಡಗಳ ನಿರ್ಮಾಣಕ್ಕೆ ವಿಪರೀತ ಆಸಕ್ತಿ ತೋರಿರುವುದು ಸ್ಪಷ್ಟ. ಅನೇಕ ಕಟ್ಟಡಗಳು ಭೂತ ಬಂಗಲೆಗಳಾಗಿ ಮಾರ್ಪಟ್ಟರೂ ‘ಬಂಡವಾಳ ವಾಪಸಾತಿ’ಗಾಗಿ ಆ ಯೋಜನೆಗಳು ಅವರಿಗೆ ಬೇಕೇಬೇಕು.

ಕಟ್ಟಡಗಳ –ಅದರಲ್ಲೂ ಅತಿಥಿಗೃಹಗಳ– ನವೀಕರಣ ಎಂಬುದು ಒಂದು ರೀತಿಯಲ್ಲಿ ಒರತೆಯೊಳಗಿನ ಸೆಲೆ ಇದ್ದಂತೆ. ವರ್ಷದುದ್ದಕ್ಕೂ ಒಂದಿಲ್ಲೊಂದು ಭಾಗದಲ್ಲಿ ನಡೆಯುವ ತೇಪೆ ಕೆಲಸದ ಕಾಮಗಾರಿಗಳು ನಿರಂತರ ಆದಾಯದ ಮೂಲಗಳು. ಪ್ರತಿ ಕಾಮಗಾರಿಗೂ ಒಂದು ರಾಮನ ಲೆಕ್ಕವಾದರೆ, ಮತ್ತೊಂದು ಕೃಷ್ಣನ ಲೆಕ್ಕ!

ವಿ.ವಿಗಳ ನೇಮಕಾತಿಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಗಳು ನ್ಯಾಯಾಂಗ ತನಿಖೆಯನ್ನೂ ಎದುರಿಸಿವೆ. ಅನಗತ್ಯ ಹುದ್ದೆಗಳನ್ನು ಸೃಷ್ಟಿಸಿ, ಭರ್ತಿ ಮಾಡಿಕೊಳ್ಳುವುದು ಒಂದು ವ್ಯಾಧಿಯಾಗಿ ಬೆಳೆದಿದೆ. ಪ್ರತಿ ಹುದ್ದೆಗೆ ಆರಂಕಿ ಮೊತ್ತದಲ್ಲಿ ಹಣದ ವಿನಿಮಯವಾದ ಆರೋಪಗಳಿವೆ. ಲಂಚ ಪಡೆದು ನೇಮಕ ಮಾಡುವಾಗಲೂ ಸ್ವಜಾತಿ ಪ್ರೀತಿ ಹಲವರನ್ನು ಕಾಡಿದೆ. ತಮ್ಮ ಕುಲಬಾಂಧವರನ್ನೇ ಅಂಥವರು ಹೆಚ್ಚಾಗಿ ನೇಮಕ ಮಾಡಿಕೊಂಡಿದ್ದಾರೆ.

ಸೆಮಿನಾರ್‌ಗಳು ಹಾಗೂ ವರ್ಕ್‌ಶಾಪ್‌ಗಳು ಸಹ ವಿ.ವಿ ಆಡಳಿತಗಾರರ ಪಾಲಿಗೆ ಹಾಲು ಕರೆಯುವ ಕಾಮಧೇನುಗಳಾಗಿವೆ. ಸಂಸ್ಥೆಯ ಸಭಾಂಗಣಗಳಿದ್ದರೂ ಹಲವರು ಸಮಾವೇಶ ನಡೆಸಿರುವುದು ಹೋಟೆಲ್‌ಗಳಲ್ಲೇ. ಊಟೋಪಚಾರ, ಅತಿಥಿ ಸತ್ಕಾರ ಹಾಗೂ ಪ್ರತಿನಿಧಿಗಳಿಗೆ ಕೊಡುವ ಕಿಟ್‌ ಹೆಸರಿನಲ್ಲಿ ವ್ಯಯಿಸುವ ಹಣದ ಹರಿವಿನ ಒಳಮಾರ್ಗಗಳು ವಿ.ವಿ ಅಂಗಳದಲ್ಲೇ ಇರುವ ಬಂಗಲೆಗಳನ್ನು ತಲುಪುತ್ತವಂತೆ!

ವಿ.ವಿಗಳಲ್ಲಿ ನಡೆಯುವ ಸಾಮಗ್ರಿಗಳ ಖರೀದಿ ಅವ್ಯವಹಾರಗಳದ್ದು ಮತ್ತೊಂದು ಕಥೆ. ಆ ಕಥೆಯನ್ನು ವಿಧಾನಸಭೆಯಲ್ಲಿ ಸೊಗಸಾಗಿ ಬಿಚ್ಚಿಟ್ಟಿದ್ದ ಆಗಿನ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ‘ಕೆಲವು ಕುಲಪತಿಗಳು ₹1 ಲಕ್ಷ ಮೌಲ್ಯದ ಮೊಬ್ಲಾ ಕಂಪನಿಯ ಪೆನ್‌ ಖರೀದಿಸಿದ್ದಾರೆ. ಜತೆಗೆ ಡೈನಿಂಗ್‌ ಟೇಬಲ್‌ ಮತ್ತು ಮಂಚಗಳನ್ನು ಖರೀದಿಸಲು ಅತಿ ಹೆಚ್ಚು ಆಸಕ್ತಿ ತೋರಿಸುತ್ತಾರೆ. ಇವುಗಳೆಲ್ಲವನ್ನೂ ಕಾವೇರಿ ಎಂಪೋರಿಯಂನಿಂದಲೇ ಖರೀದಿಸುತ್ತಾರೆ’ ಎಂದಿದ್ದರು.

ಸೆನೆಟ್‌, ಸಿಂಡಿಕೇಟ್‌ನಿಂದ ಕೊಡಮಾಡುವ ‘ವ್ಯವಧಾನದ ಅಧಿಕಾರ’ವನ್ನು ದುರ್ಬಳಕೆ ಮಾಡಿಕೊಂಡು, ಕಟ್ಟಳೆಗಳ ನೆಪವನ್ನೂ ಮುಂದೆ ಮಾಡಿ, ಖರೀದಿ ವ್ಯವಹಾರ ನಡೆಸುವುದು ಎಲ್ಲ ವಿ.ವಿಗಳಲ್ಲಿ ಮಾಮೂಲಿ. ಪೀಠೋಪಕರಣಗಳು, ಬೋಧನಾ ಉಪಕರಣಗಳು, ಯಂತ್ರೋಕಪರಣಗಳು, ಸ್ಟೇಷನರಿ ಸಾಮಗ್ರಿಗಳು ಹಾಗೂ ರಾಸಾಯನಿಕಗಳ ಖರೀದಿಯಲ್ಲಿ ನಡೆದ ಅವ್ಯವಹಾರಗಳಿಗೆ ಸಂಬಂಧಿಸಿದ ಆರೋಪ ಪಟ್ಟಿಯಂತೂ ರಿಮ್‌ಗಳಷ್ಟು ದೊಡ್ಡದಿದೆ.

ವಾಹನಗಳ ಖರೀದಿ ಮತ್ತು ನಿರ್ವಹಣೆಯಲ್ಲೂ ಭ್ರಷ್ಟಾಚಾರದ ದುರ್ವಾಸನೆ ಹೊಡೆಯುತ್ತದೆ. ಹತ್ತು ವಾಹನಗಳನ್ನು ಖರೀದಿಸಿದರೆ ಒಂದು ಉಚಿತದ ಆಮಿಷ ಇಲ್ಲಿಯೂ ಕೆಲಸ ಮಾಡಿದೆ. ವಿ.ವಿ ವಾಹನಗಳ ಹೆಸರಿನಲ್ಲಿ ಬಿಲ್‌ ಹರಿಯಲಾದರೂ ಬಹುಪಾಲು ಡೀಸೆಲ್‌ ಮಾತ್ರ ಖಾಸಗಿ ವಾಹನಗಳ ಟ್ಯಾಂಕ್‌ ತುಂಬುತ್ತದೆ. ಹಾಸ್ಟೆಲ್‌ಗಳು, ಕ್ರೀಡಾಂಗಣಗಳು ಹಾಗೂ ತೋಟಗಳ ನಿರ್ವಹಣೆ ಹೆಸರಿನಲ್ಲೂ ಹಣದ ಹೊಳೆ ಹರಿಯುತ್ತದೆ.

ಯುಜಿಸಿಗೆ ಒಂದು ಇ–ಮೇಲ್‌ ಮೂಲಕ ನೀಡಬಹುದಾದ ಮಾಹಿತಿಯನ್ನು 3–4 ಸಹಾಯಕರ ಪಡೆ ಕಟ್ಟಿಕೊಂಡು, ವಿಮಾನದಲ್ಲಿ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಹೋಗಿ, ಸ್ಟಾರ್‌ ಹೋಟೆಲ್‌ಗಳಲ್ಲಿಯೇ ತಂಗಿ, ಮಾಹಿತಿ ಕೊಟ್ಟು ಬರುವ ಕುಲಪತಿಗಳ ಸಂಖ್ಯೆಗೇನೂ ಕಡಿಮೆ ಇಲ್ಲ. ಅಕಸ್ಮಾತ್‌ ವಿ.ವಿ ‘ಜುಬಿಲಿ’ಗಳು ಏನಾದರೂ ಬಂದುಬಿಟ್ಟರೆ ಅದರ ಆಡಳಿತಗಾರರಿಗೆ ಸುಗ್ಗಿ.

ಬೆಂಗಳೂರು ನಗರವೊಂದರಲ್ಲೇ ವಿ.ವಿಗಳಿಂದ ಮಾನ್ಯತೆ ಪಡೆದ 600ಕ್ಕೂ ಹೆಚ್ಚು ಪದವಿ ಕಾಲೇಜುಗಳಿವೆ. ಯುಜಿಸಿ ಮಾನದಂಡ ಪ್ರಯೋಗಿಸಿದರೆ ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಮಾನ್ಯತೆ ಕಳೆದುಕೊಳ್ಳುತ್ತವೆ. ಹೀಗೆ ಮಾನ್ಯತೆ ನೀಡಲು ಎಲ್ಲ ವಿ.ವಿಗಳ ಸಿಂಡಿಕೇಟ್‌ ಸದಸ್ಯರು ಉದಾರವಾಗಿ ನಡೆದುಕೊಂಡಿರುವ ಹಿಂದಿನ ಮರ್ಮವನ್ನು ಬಿಡಿಸಿಹೇಳಬೇಕಿಲ್ಲ. ವಿಶೇಷ ಪದವಿಗಳಿಗೆ ಇರುವ ‘ಮೌಲ್ಯ’ ಎಂತಹದ್ದು ಎಂಬುದು ಕೂಡ ದೊಡ್ಡ ಕಿಮ್ಮತ್ತಿನ ಪ್ರಶ್ನೆ.

* ಸಿಎಜಿ ಕಚೇರಿಯಿಂದ ಬಂದ ಆಕ್ಷೇಪಗಳನ್ನಷ್ಟೇ ಅವಲೋಕಿಸಿದರೆ ಸಾಕು, ವಿ.ವಿ ಅಂಗಳದ ‘ಹುಲ್ಲುಗಾವಲು’ಗಳನ್ನು ಹುಡುಕಿಕೊಂಡು ಬಂದ ‘ಹಸು’ಗಳು ಯಾವುವು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

–ನಿವೃತ್ತ ಅಧಿಕಾರಿ, ಉನ್ನತ ಶಿಕ್ಷಣ ಇಲಾಖೆ

***

ವಿ.ವಿ. ಕರ್ಮಕಾಂಡ 2008ರಿಂದ 2018ರವರೆಗೆ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ

ಕೆ.ಎಸ್‌.ರಂಗಪ್ಪ ಕುಲಪತಿ ಆಗಿದ್ದಾಗ ಖಾಸಗಿ ಸಂಸ್ಥೆಗಳೊಂದಿಗೆ ಅಕ್ರಮ ಒಪ್ಪಂದ ಆರೋಪ, ಕಟ್ಟಡ ಕಾಮಗಾರಿ ಮತ್ತು ಅಕ್ರಮ ನೇಮಕಾತಿ ಹಗರಣ.

ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲುದಾರಿಕೆಯಲ್ಲಿ ವಿವಿಧ ಕೋರ್ಸ್‌ಗಳನ್ನು ಅಕ್ರಮವಾಗಿ ಆರಂಭಿಸಿದ ಆರೋಪ.

ಇಂತಹದೇ ಆರೋಪಗಳು ಕುಲಪತಿ ಆಗಿದ್ದ ಪ್ರೊ.ಎಂ.ಜಿ.ಕೃಷ್ಣನ್ ಅವರ ಮೇಲೂ ಇದೆ. 230ಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳ ಜತೆ ಕೆಎಸ್‌ಒಯು ಒಡಂಬಡಿಕೆ ಮಾಡಿಕೊಂಡಿತ್ತು. ಈ ಸಂಸ್ಥೆಗಳು ದೇಶದಾದ್ಯಂತ 5 ಸಾವಿರಕ್ಕೂ ಹೆಚ್ಚು ಅಧ್ಯಯನ ಕೇಂದ್ರಗಳನ್ನು ತೆರೆದಿದ್ದವು. ಈ ಹಿನ್ನೆಲೆಯಲ್ಲಿ ಯುಜಿಸಿ ಮುಕ್ತ ವಿ.ವಿ.ಯ ಮಾನ್ಯತೆ ರದ್ದುಪಡಿಸಿತ್ತು.

ಒಟ್ಟು 14 ಆರೋಪಗಳ ಬಗ್ಗೆ ತನಿಖೆಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಡಾ.ಕೆ ಭಕ್ತವತ್ಸಲ ಸಮಿತಿ ರಚಿಸಿದ್ದರು. ಈ ಸಮಿತಿಯು 2 ಸಂಪುಟಗಳಲ್ಲಿ, 612 ಪುಟಗಳನ್ನು ಒಳಗೊಂಡ ವರದಿ ಸಲ್ಲಿಸಿದೆ. ಈವರೆಗೂ ಕ್ರಮ ಕೈಗೊಂಡಿಲ್ಲ.

ಪ್ರೊ.ಕೆ.ಎಸ್.ರಂಗಪ್ಪ ಅವರು ಕುಲಪತಿಯಾಗಿದ್ದಾಗ ಕಂಪ್ಯೂಟರ್‌ ಮತ್ತಿತರ ಉಪಕರಣಗಳ ಖರೀದಿಗಾಗಿ ಮುಂಬೈ ಮೂಲದ ಕಂಪನಿ ಜತೆ ಅಕ್ರಮ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ಆರೋಪವಿತ್ತು.ಈ ಆರೋಪದ ತನಿಖೆಗೆ ರಾಜ್ಯಪಾಲರು ಪ್ರತ್ಯೇಕ ಸಮಿತಿ ರಚಿಸಿದ್ದರು. ಈ ಸಮಿತಿಯು ವಿಚಾರಣೆ ನಡೆಸಿ ₹ 54 ಲಕ್ಷದ ಅಕ್ರಮ ನಡೆದಿರುವುದಾಗಿ ಹೇಳಿತ್ತು.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ

ಡಾ. ಕೆ.ಎಸ್‌.ರವೀಂದ್ರನಾಥ್‌ ಕುಲಪತಿ ಆಗಿದ್ದಾಗ ವೈದ್ಯ, ದಂತ ವೈದ್ಯ, ಆಯುಷ್ ಸ್ನಾತಕೋತ್ತರ ಕೋರ್ಸ್‌ಗಳ ಉತ್ತರ ಪತ್ರಿಕೆಗಳನ್ನು ಅದಲುಬದಲು ಮಾಡಿದ ಪ್ರಕರಣ ಬಯಲು. ಈ ಅಕ್ರಮಕ್ಕೆ ಪ್ರತಿ ವಿದ್ಯಾರ್ಥಿಯಿಂದ ₹ 2 ಲಕ್ಷ ಪಡೆಯಲಾಗಿತ್ತು ಎಂಬ ಆರೋಪ.ಆಗಿನ ಕುಲಸಚಿವರ (ಮೌಲ್ಯಮಾಪನ) ಹೆಸರು ಹಗರಣದಲ್ಲಿ ಕೇಳಿ ಬಂದಿತ್ತು.

ಕ್ರಮ: ಕುಲಪತಿ ನೇಮಿಸಿದ್ದ ಮೂವರು ಸಿಂಡಿಕೇಟ್ ಸದಸ್ಯರ ಸಮಿತಿ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ದೃಢಪಡಿಸಿದೆ. ಸಿಐಡಿ ಹಾಗೂ ಸಿಸಿಬಿ ತನಿಖೆ ನಡೆದಿದೆ. ವಿವಿಯ ಕೆಲವು ಸಿಬ್ಬಂದಿ ಹಾಗೂ ಉತ್ತರ ಪತ್ರಿಕೆ ಅದಲು ಬದಲು ಮಾಡಿದ ಆರೋಪದಲ್ಲಿ 10ಕ್ಕೂ ಹೆಚ್ಚು ವೈದ್ಯರ ಬಂಧನವೂ ಆಗಿತ್ತು.

**

ಕರ್ನಾಟಕ ವಿಶ್ವವಿದ್ಯಾಲಯ

ಡಾ. ಎಚ್‌.ಬಿ.ವಾಲಿಕಾರ ಕುಲಪತಿ ಆಗಿದ್ದಾಗ ನೇಮಕಾತಿ, ಗುತ್ತಿಗೆ, ಖರೀದಿ ಹಗರಣ. ರಾಜ್ಯಪಾಲರಿಗೆ ದೂರು. ನ್ಯಾ. ಪದ್ಮರಾಜ ಆಯೋಗ ರಚನೆ.

ಕ್ರಮ: ಮೇಲ್ನೋಟಕ್ಕೆ ಆರೋಪ ಸಾಬೀತು. ಕ್ರಿಮಿನಲ್ ಮೊಕದ್ದಮೆ ಹೂಡಲು ‌ರಾಜ್ಯಪಾಲರ ಸೂಚನೆ. ಲೋಕಾಯುಕ್ತದಲ್ಲೂ ಪ್ರಕರಣ ದಾಖಲು. ವಾಲಿಕಾರ, ಮೌಲ್ಯಮಾಪನ ಕುಲಸಚಿವ, ಹಣಕಾಸು ಅಧಿಕಾರಿ ಮತ್ತು ಕುಲಪತಿ ಆಪ್ತ ಕಾರ್ಯದರ್ಶಿ ಅವರನ್ನು ಬಂಧಿಸಿದ್ದ ಲೋಕಾಯುಕ್ತ ಪೊಲೀಸರು. ಪ್ರಕರಣ ಸದ್ಯ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ.

**

ಅಕ್ಕಮಹಾದೇವಿ ಮಹಿಳಾ ವಿ.ವಿ, ವಿಜಯಪುರ

ಸಯೀದಾ ಅಖ್ತರ್‌ ಕುಲಪತಿ ಆಗಿದ್ದಾಗ ಅಕ್ರಮ ನೇಮಕಾತಿ ಮತ್ತುಪ್ರೊ.ಮೀನಾ ಚಂದಾವರಕರ ಕುಲಪತಿ ಆಗಿದ್ದಾಗ ಕಳಪೆ ಕಾಮಗಾರಿ ಆರೋಪ.

ಕ್ರಮ: ನೇಮಕಾತಿ ಹಗರಣ ಕುರಿತು ನ್ಯಾ.ಚಿನ್ನಪ್ಪ ಆಯೋಗದ ತನಿಖೆ. ಕಟ್ಟಡ ಕಾಮಗಾರಿ ಹಗರಣ ಕುರಿತು ಲೋಕಾಯುಕ್ತಕ್ಕೆ ದೂರು

**

ತೋಟಗಾರಿಕೆ ವಿಶ್ವವಿದ್ಯಾಲಯ, ಬಾಗಲಕೋಟೆ

ಪ್ರೊ.ಡಿ.ಎಲ್.ಮಹೇಶ್ವರ್ ಕುಲಪತಿ ಆಗಿದ್ದಾಗ ಅಕ್ರಮ ನೇಮಕಾತಿ ಆರೋಪ.

ಕ್ರಮ: ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು. ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಎಸಿಬಿ ವರದಿ.

**

ಕೃಷಿ ವಿಶ್ವವಿದ್ಯಾಲಯ, ಧಾರವಾಡ

ಡಾ. ಡಿ.ಪಿ.ಬಿರಾದಾರ ಕುಲಪತಿ ಆಗಿದ್ದಾಗ ಅಕ್ರಮ ನೇಮಕಾತಿ ಮತ್ತು ಪದೋನ್ನತಿ ಆರೋಪ.

ಕ್ರಮ: ನಿವೃತ್ತ ನ್ಯಾಯಾಧೀಶ ಎಚ್‌.ಆರ್.ದೇಶಪಾಂಡೆ ಅಧ್ಯಕ್ಷತೆಯಲ್ಲಿ ಸತ್ಯಶೋಧನಾ ಸಮಿತಿ ರಚನೆ. ಇನ್ನೂ ಕಾರ್ಯೋನ್ಮುಖವಾಗದ ಸಮಿತಿ

**

ಶ್ರೀಕೃಷ್ಣದೇವರಾಯ ವಿ.ವಿ, ವಿಜಯನಗರ

ಪ್ರೊ.ಮಂಜಪ್ಪ ಡಿ.ಹೊಸಮನೆ ಕುಲಪತಿ ಆಗಿದ್ದಾಗ 55 ಬೋಧಕರ ನೇಮಕಾತಿ ಹಾಗೂ ಕಟ್ಟಡಗಳ ಕಾಮಗಾರಿ ಅಕ್ರಮ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ

ಪ್ರೊ.ಬಿ.ಆರ್. ಅನಂತನ್ ಕುಲಪತಿ ಆಗಿದ್ದಾಗ ನೇಮಕಾತಿ ಹಗರಣ ಆರೋಪ

ಕ್ರಮ: ಪರಿಶೀಲನೆಗೆ ಸಮಿತಿ ರಚನೆ. ಸಮಿತಿ ವಿಚಾರಣೆಗೆ ಹೈಕೋರ್ಟ್‌ ತಡೆಯಾಜ್ಞೆ.

**

ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ, ಬೆಳಗಾವಿ

ಡಾ.ಎಚ್‌.ಮಹೇಶ್ವರಪ್ಪ ಕುಲಪತಿ ಆಗಿದ್ದಾಗಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕಾತಿ ಹಗರಣ,ಕಂಪ್ಯೂಟರ್‌– ಪ್ರಯೋಗಾಲಯ ಉಪಕರಣಗಳ ಖರೀದಿ ಅವ್ಯವಹಾರ ಆರೋಪ.

ಕ್ರಮ: ನೇಮಕಾತಿ ಹಗರಣ ವಿಚಾರಣೆಗೆ ನ್ಯಾಯಮೂರ್ತಿ ಕೇಶವ ನಾರಾಯಣ ಸಮಿತಿ ರಚನೆ. ಆರೋಪ ಹೊತ್ತ 64 ಜನರಿಗೆ ಮೂಲ ದಾಖಲೆ ಸಲ್ಲಿಸುವಂತೆ ಸಮಿತಿ ನೋಟಿಸ್‌ ನೀಡಿದೆ.

ಖರೀದಿ ಅವ್ಯವಹಾರದ ಬಗ್ಗೆ ಸಿಸಿಬಿ ಪೊಲೀಸರು ತನಿಖೆ. ಏರೋಸ್ಪೇಸ್‌ ಎಂಜಿನಿಯರಿಂಗ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ಯೋಗಾನಂದ್‌ ಅವರ ಬಂಧನ.

**

ಕನ್ನಡ ವಿಶ್ವವಿದ್ಯಾಲಯ ಹಂಪಿ

ಈಗಿನ ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ವಿರುದ್ಧ ಕಟ್ಟಡ ಕಾಮಗಾರಿ ಅವ್ಯವಹಾರ ಕುರಿತು ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ದಳ ಹಾಗೂ ರಾಜ್ಯಪಾಲರಿಗೆ ದೂರು.

ಕ್ರಮ: 2016ರ ಅಕ್ಟೋಬರ್‌ 24ರಂದು ವಿ.ವಿ. ಮೇಲೆ ಎಸಿಬಿ ದಾಳಿ, ಕಾಮಗಾರಿ ಹಾಗೂ ಕಡತಗಳ ಪರಿಶೀಲನೆ.

**

ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ

ಎಸ್‌.ಎ. ಬಾರಿ ಕುಲಪತಿ ಆಗಿದ್ದಾಗ ನಕಲಿ ಅಂಕಪಟ್ಟಿ ಹಗರಣ.

ಕ್ರಮ: 9 ಜನರ ವಿರುದ್ಧ ಪ್ರಕರಣ ದಾಖಲು. ವಿ.ವಿ ಆಂತರಿಕ ಸಮಿತಿ ಹಾಗೂ ಪೊಲೀಸ್‌ ತನಿಖೆಯಲ್ಲಿ ಆರೋಪ ಸಾಬೀತು. ಕುಲಸಚಿವ ಭೋಜ್ಯಾನಾಯ್ಕ, ಕಿರಿಯ ಸಹಾಯಕರಾದ ಶಿವಕುಮಾರ್, ಸಿದ್ದಾಚಾರ್ಯ, ರಮೇಶ್, ಎಲ್. ರಾಮು. ಅವರನ್ನು ಕೆಲಸದಿಂದ ವಜಾ. ಸಹಾಯಕ ಕುಲಸಚಿವ ಎಂ.ಜೆ. ಫಾಲಾಕ್ಷಿನಾಯ್ಕ, ಕಿರಿಯ ಸಹಾಯಕ ಪೀರ್ಯಾ ನಾಯ್ಕ, ಎಚ್. ತಿಮ್ಮಯ್ಯ ಮತ್ತು ಮದನ್‌ ಅವರಿಗೆ ಹಿಂಬಡ್ತಿ.

**

ತುಮಕೂರು ವಿಶ್ವವಿದ್ಯಾಲಯ

ಡಾ.ಎ.ಎಚ್.ರಾಜಾಸಾಬ್ ಕುಲಪತಿ ಆಗಿದ್ದಾಗ,ವಿಶ್ವವಿದ್ಯಾಲಯ ಹಣಕಾಸು ಅಧಿಕಾರಿ ಬಿ.ಕೆ.ಸುರೇಶ್ ಅವರಿಂದ ₹ 44 ಲಕ್ಷ ದುರುಪಯೋಗಪಡಿಸಿಕೊಂಡ ಆರೋಪ. ಹೊಸ ಬಡಾವಣೆ ಪೊಲೀಸ್ ಠಾಣೆಗೆ ದೂರು.

ಕ್ರಮ: ಜಿಲ್ಲಾ ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸುರೇಶ್ ಅವರಿಂದ ಹಣ ಮರು ವಸೂಲಾತಿ. ಮೂರು ವೇತನ ಬಡ್ತಿಗೆ ಕತ್ತರಿ.

**

ಮೈಸೂರು ವಿಶ್ವವಿದ್ಯಾಲಯ

ಕೆ.ಎಸ್‌.ರಂಗಪ್ಪ ಕುಲಪತಿ ಆಗಿದ್ದಾಗ 124 ಬೋಧಕೇತರ ಸಿಬ್ಬಂದಿ ಅಕ್ರಮ ನೇಮಕಾತಿ ಆರೋಪ.

ಕ್ರಮ: ತನಿಖಾ ಸಮಿತಿ ರಚನೆ. ಕುಲಸಚಿವ ಪ್ರೊ.ಆರ್.ರಾಜಣ್ಣ ಅವರೂ ಹಗರಣದಲ್ಲಿ ಆರೋಪಿ. ತನಿಖಾ ಸಮಿತಿ ವಿಚಾರಣೆಗೆ ರಂಗಪ್ಪ ಗೈರು. 124 ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಸಮಿತಿ ಶಿಫಾರಸು. ಕೆಲಸ ಕಳೆದುಕೊಂಡ ಬೋಧಕೇತರ ಸಿಬ್ಬಂದಿ. ಆರೋಪಿಗಳ ವಿರುದ್ಧ ಇನ್ನೂ ಕ್ರಮ ಇಲ್ಲ.

**

ಮಂಗಳೂರು ವಿಶ್ವವಿದ್ಯಾಲಯ

ಪ್ರೊ.ಟಿ.ಸಿ. ಶಿವಶಂಕರಮೂರ್ತಿ ಕುಲಪತಿ ಆಗಿದ್ದಾಗನೇಮಕಾತಿ ಹಗರಣ. ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮ ಕುರಿತು ಕೆಲವು ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಪ್ರೊ.ಕೆ. ಭೈರಪ್ಪ ಅವರ ಅವಧಿಯಲ್ಲಿ ಸೋಲಾರ್‌ ದೀಪ ಖರೀದಿ ಮತ್ತು ಎಸ್‌ಸಿಎಸ್ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಖರೀದಿ ಅವ್ಯವಹಾರ ಆರೋಪ.

**

ಕೃಷಿ ವಿಶ್ವವಿದ್ಯಾಲಯ, ರಾಯಚೂರು

ಡಾ. ಬಿ.ವಿ. ಪಾಟೀಲ ಕುಲಪತಿ ಆಗಿದ್ದಾಗ ಖೊಟ್ಟಿ ದಾಖಲಾತಿ ಆಧರಿಸಿ ತಮ್ಮ ಪುತ್ರ ಹಾಗೂ ಇತರೆ ನಾಲ್ಕು ವಿದ್ಯಾರ್ಥಿಗಳಿಗೆ ಕೃಷಿಕರ ಕೋಟಾದಡಿ ಅಕ್ರಮವಾಗಿ ಬಿಎಸ್‌ಸಿ (ಅಗ್ರಿ) ಪ್ರವೇಶ ನೀಡಿದ ಆರೋಪ.

ಕ್ರಮ: ಈ ಬಗ್ಗೆ ವಿಚಾರಣೆಗೆ ಸಮಿತಿರಚಿಸಲಾಗಿತ್ತು. ಸಮಿತಿ ಈಚೆಗೆ ವರದಿ ನೀಡಿದ್ದು, ಪ್ರವೇಶವು ಸಂಶಯಾಸ್ಪದವಾಗಿದೆ ಎಂದು ತಿಳಿಸಿದೆ.

**

ಬೆಂಗಳೂರು ವಿಶ್ವವಿದ್ಯಾಲಯ

ಡಾ.ಎನ್‌.ಪ್ರಭುದೇವ್‌ ಕುಲಪತಿ ಆಗಿದ್ದಾಗ ದೂರ ಶಿಕ್ಷಣ ಕೇಂದ್ರಗಳಲ್ಲಿ ಆಯೋಜಿಸಲಾದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ.

ಕ್ರಮ: ನಿವೃತ್ತ ನ್ಯಾಯಮೂರ್ತಿ ಶಿವಶಂಕರ ಭಟ್‌ ಆಯೋಗ ರಚನೆ.

ಪ್ರೊ.ಬಿ.ತಿಮ್ಮೇಗೌಡ ಕುಲಪತಿ ಆಗಿದ್ದಾಗ ದೂರಶಿಕ್ಷಣ ಕೋರ್ಸ್‌ಗಳಲ್ಲಿ ಅಧಿಕ ಅಂಕ ನೀಡಲು ಹಣ ಪಡೆದ ಆರೋಪ. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಅಂಕಪಟ್ಟಿ ತಿದ್ದಲಾಗಿದೆಎಂಬ ದೂರು ದಾಖಲಾಗಿತ್ತು.

ಕ್ರಮ: ಪೊಲೀಸರು ಸಿಂಡಿಕೇಟ್‌ನ ಮಾಜಿ ಸದಸ್ಯ ಮತ್ತು ಅಧ್ಯಾಪಕರೊಬ್ಬರನ್ನು ಬಂಧಿಸಿದ್ದರು. ವಿವಿಯ ಆಂತರಿಕ ತನಿಖೆ ಬಳಿಕ 8 ಸಾವಿರ ಉತ್ತರ ಪತ್ರಿಕೆಗಳನ್ನು ಮರುಮೌಲ್ಯಮಾಪನ ಮಾಡಲು ನಿರ್ಧರಿಸಲಾಗಿತ್ತು.

**

ಮಾಜಿ ಸಚಿವರು ತಜ್ಞರು ಏನನ್ನುತ್ತಾರೆ?

1990ರ ದಶಕದವರೆಗೆ ವಿಶ್ವವಿದ್ಯಾಲಯಗಳಿಗೆ ಅರ್ಹರೇ ಕುಲಪತಿಗಳಾಗಿ ಆಯ್ಕೆಯಾಗುತ್ತಿದ್ದರು. ವಿಶ್ವವಿದ್ಯಾಲಯಗಳ ಕಡೆಗೆ ರಾಜಕಾರಣಿಗಳು ತಲೆ ಹಾಕುತ್ತಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಯೋಗ್ಯತೆ ಬದಿಗೆ ಸರಿಯಿತು. ಆ ಜಾಗಕ್ಕೆ ಜಾತಿ ಬಂತು. ಹಣದ ಥೈಲಿ ಸೇರ್ಪಡೆಯಾಯಿತು. ವಿಶ್ವವಿದ್ಯಾಲಯ ಹಗರಣಗಳ ಕೇಂದ್ರವಾಯಿತು. ಬೆರಳೆಣಿಕೆಯ ಕುಲಪತಿಗಳಷ್ಟೇ ಹಗರಣಮುಕ್ತರಾಗಿ ನಿವೃತ್ತರಾದರು ಅಷ್ಟೇ. ಕದ್ದು ಮುಚ್ಚಿ ನಡೆಯುತ್ತಿದ್ದ ವ್ಯವಹಾರ ಇತ್ತೀಚೆಗೆ ಬೀದಿಗೆ ಬಂದಿದೆ. ವ್ಯಕ್ತಿಯೊಬ್ಬರು ಹರಾಜು ಕೂಗುವ ವ್ಯವಸ್ಥೆಯನ್ನೂ ಜಾರಿಗೆ ತಂದರು. ಪಾರದರ್ಶಕ ವ್ಯವಸ್ಥೆ ಜಾರಿಗೆ ತಂದು ಈ ಕಳಂಕವನ್ನು ತೊಡೆದು ಹಾಕಬೇಕು. ವ್ಯವಸ್ಥೆ ಸುಧಾರಣೆ ಆಗಲೇಬೇಕು.

ಸಿ.ಟಿ.ರವಿ,ಬಿಜೆಪಿ

**

ಕುಲಪತಿಗಳು ಇತ್ತೀಚಿನ ವರ್ಷಗಳಲ್ಲಿ ಮೆರಿಟ್‌ ಆಧಾರದಲ್ಲಿ ನೇಮಕ ಆಗುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಕಾಂಗ್ರೆಸ್‌ ಸರ್ಕಾರ ಮಸೂದೆಯೊಂದನ್ನು ಮಂಡಿಸಿತು. ಅದಕ್ಕೆ ಉಭಯ ಸದನಗಳ ಒಪ್ಪಿಗೆ ಸಿಕ್ಕಿತು. ಅದು ಕಾಯ್ದೆಯಾಗಿ ಜಾರಿಗೆ ಬಂದರೆ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಆಗಲಿದೆ.

–ಟಿ.ಬಿ.ಜಯಚಂದ್ರ,ಕಾಂಗ್ರೆಸ್

**

ಕುಲಪತಿಗಳ ನೇಮಕದಲ್ಲಿ ಭ್ರಷ್ಟಾಚಾರ ನಡೆಯುತ್ತದೆ ಎಂಬ ಆರೋಪ ಎಷ್ಟು ಸುಳ್ಳು, ಎಷ್ಟು ಸತ್ಯ ನನಗೆ ಗೊತ್ತಿಲ್ಲ. ಅದನ್ನು ವಿಶ್ಲೇಷಿಸುವ ಗೋಜಿಗೆ ನಾನು ಹೋಗಲಾರೆ. ಆದರೆ, ಇಂತಹ ಉನ್ನತ ಹುದ್ದೆಗೆ ಶೈಕ್ಷಣಿಕವಾಗಿ ಅರ್ಹರಾದ, ವೃತ್ತಿಪರರಾದ ಹಾಗೂ ಕಳಂಕರಹಿತರಾದ ವ್ಯಕ್ತಿಗಳೇ ನೇಮಕ ಆಗಬೇಕಿರುವುದು ಇಂದಿನ ತುರ್ತು.

ಕುಲಪತಿಗಳು ಎಂಥವರಾಗಬೇಕು ಎಂಬ ವಿಷಯವಾಗಿ ಯಶ್‌ಪಾಲ್‌ ಸಮಿತಿ ಅರ್ಹತೆಗಳನ್ನು ಪಟ್ಟಿ ಮಾಡಿದೆ. ನೇಮಕಾತಿ ನಿಯಮಾವಳಿಯಲ್ಲಿ ಯಾವ ಲೋಪಗಳೂ ಇಲ್ಲ. ಕಾನೂನು ಪರಿಪಾಲನೆ ಮಾಡಿದಂತೆ ಮಾಡಿ, ಅದರ ಹಿಂದಿನ ಉದ್ದೇಶ ಮರೆತರೆ ತೊಂದರೆ. ಕಾನೂನಿನ ದೃಷ್ಟಿಯಲ್ಲಿ ಮಾತ್ರವಲ್ಲ; ನೈಜ ಅರ್ಥದಲ್ಲಿ ನಿಯಮಾವಳಿ ಪರಿಪಾಲನೆ ಆಗಬೇಕು ಎಂದಷ್ಟೇ ಹೇಳಬಲ್ಲೆ.

–ಪ್ರೊ.ಎಚ್‌.ಪಿ. ಖಿಂಚಾ,ವಿಶ್ರಾಂತ ಕುಲಪತಿ

**

ಯುಜಿಸಿ ನಿಯಮಾವಳಿ ಪ್ರಕಾರವೇ ಕುಲಪತಿಗಳ ನೇಮಕ ಪ್ರಕ್ರಿಯೆ ನಡೆಯಬೇಕು. ಕುಲಪತಿ ಆಗುವವರು ಗರಿಷ್ಠ ವಿದ್ಯಾರ್ಹತೆ, ಪ್ರಾಮಾಣಿಕತೆ ಮತ್ತು ನಿಷ್ಕಳಂಕ ವ್ಯಕ್ತಿತ್ವ ಹೊಂದಿರಬೇಕು. ಸತ್ಯಶೋಧನಾ ಸಮಿತಿಯಲ್ಲಿ ಐದು ಜನ ಇರಬೇಕು.

–ಪ್ರೊ.ಎ.ಎಂ.ಪಠಾಣ,ಕುಲಪತಿ, ಖಾಜಾ ಬಂದೇನವಾಜ್ ವಿ.ವಿ, ಕಲಬುರ್ಗಿ

**

ಕುಲಪತಿ ನೇಮಕ:ತಜ್ಞರು ಹೇಳುವುದೇನು?

* ಕುಲಪತಿ ಹಾಗೂ ಸಿಂಡಿಕೇಟ್‌ ಸದಸ್ಯರ ಹುದ್ದೆಗಳಿಗೆ ಕೌನ್ಸೆಲಿಂಗ್ ಮಾದರಿಯಲ್ಲೇ ಆಯ್ಕೆ ಮಾಡಬೇಕು

* ಶೋಧನಾ ಸಮಿತಿಗೆ ಬಂದ ಅರ್ಜಿಗಳನ್ನು ಒಂದೇ ದಿನ ವಿಲೇವಾರಿ ಮಾಡಿ, ಅರ್ಹರ ಸಂದರ್ಶನ ನಡೆಸಿ, ಪಾರದರ್ಶಕವಾಗಿಯೇ ಹೆಸರುಗಳನ್ನು ಅಂತಿಮಗೊಳಿಸಬೇಕು. ಇಡೀ ಪ್ರಕ್ರಿಯೆಯನ್ನು ವಿಡಿಯೊ ಮಾಡಬೇಕು

* ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಆಡಳಿತ ಕುಲಸಚಿವರು, ಮೌಲ್ಯಮಾಪನ ಕುಲಸಚಿವರು ಹಾಗೂ ಲೆಕ್ಕ ಪರಿಶೋಧಕರ ಹುದ್ದೆಗಳಿಗೆ ಕ್ರಮವಾಗಿ ಐಎಎಸ್‌, ಕೆಎಎಸ್‌ ಅಧಿಕಾರಿಗಳು ಮತ್ತು ಚಾರ್ಟರ್ಡ್‌ ಅಕೌಂಟೆಂಟ್‌ಗಳನ್ನು ನೇಮಕ ಮಾಡಬೇಕು

* ಸಿಂಡಿಕೇಟ್‌ ಸದಸ್ಯರ ನೇಮಕಕ್ಕೆ ಈಗಿರುವ ನಾಮನಿರ್ದೇಶನ ವ್ಯವಸ್ಥೆ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಮಾಡಿಕೊಟ್ಟಿದೆ. ಯಾವುದೇ ಹಸ್ತಕ್ಷೇಪಕ್ಕೆ ಆಸ್ಪದವಿಲ್ಲದಂತೆ ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತರಬೇಕು

* ಸಾಂಪ್ರದಾಯಿಕ ವಿ.ವಿಗಳಿಗೆ ಅದೇ ನಿಕಾಯಕ್ಕೆ ಸೇರಿದ ತಜ್ಞರನ್ನೇ ಕುಲಪತಿಗಳನ್ನಾಗಿ ನೇಮಕ ಮಾಡಬೇಕು

* ಕುಲಪತಿಗಳ ಅಧಿಕಾರದ ಅವಧಿಯನ್ನು ಮೂರು ವರ್ಷಗಳಿಗೆ ಸೀಮಿತಗೊಳಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.