ಬೆಂಗಳೂರು: ‘ಗಾಂಜಾ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಮಕ್ಕಳ ಕೈಗೂ ಗಾಂಜಾ ಸಿಗುತ್ತಿದೆ. ಜೂಜು ಅಡ್ಡೆಗಳಂತೂ ವಿಪರೀತ ಹೆಚ್ಚಾಗಿವೆ, ಬೈಕ್ ವ್ಹೀಲಿಂಗ್, ಡ್ರ್ಯಾಗ್ ರೇಸ್ ಹಾವಳಿಯಿಂದಾಗಿ ವೃದ್ಧರು, ಮಕ್ಕಳು, ಮಹಿಳೆಯರು ಓಡಾಡುವುದೇ ಕಷ್ಟವಾಗಿದೆ. ಸರಗಳ್ಳತನ ಪದೇಪದೇ ನಡೆಯುತ್ತಿದೆ...’
ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವ ಬಗ್ಗೆ ಸ್ಥಳೀಯರು ದೂರುಗಳ ಸುರಿಮಳೆಯನ್ನೇ ಸುರಿಸಿದರು.
ನಾಗರಿಕರ ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳಲು ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳ ಆಶ್ರಯದಲ್ಲಿ ಆರ್.ಟಿ.ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಜನಸ್ಪಂದನ– ಸಿಟಿಜನ್ಸ್ ಫಾರ್ ಚೇಂಜ್’ ಕಾರ್ಯಕ್ರಮ ಇದಕ್ಕೆ ವೇದಿಕೆ ಒದಗಿಸಿತು.
ದೂರುಗಳನ್ನು ಆಲಿಸಿದ ಸ್ಥಳೀಯ ಶಾಸಕ ವೈ.ಎ.ನಾರಾಯಣಸ್ವಾಮಿ ಹಾಗೂ ಕ್ಷೇತ್ರದ ಎಂಟು ವಾರ್ಡ್‌ಗಳ ಬಿಬಿಎಂಪಿ ಸದಸ್ಯರು ಸಮಸ್ಯೆಗಳನ್ನು ಕಾಲಮಿತಿಯೊಳಗೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
‘ಗಂಗೇನಹಳ್ಳಿ ವಾರ್ಡ್‌ನ ಗಲ್ಲಿಗಲ್ಲಿಯಲ್ಲೂ ಗಾಂಜಾ ಮಾರಾಟ ನಡೆಯುತ್ತಿದೆ. ಸರ್ಕಾರಿ ಉರ್ದು ಶಾಲೆ ಬಳಿ ಜೂಜು ಕ್ಲಬ್ ಇದೆ. ಕ್ಲಬ್‌ನಲ್ಲಿ ನಡೆಯುವ ಚಟುವಟಿಕೆಗಳನ್ನು ಶಾಲಾ ಕಟ್ಟಡದ ಕಿಟಕಿಗಳ ಮೂಲಕವೂ ವೀಕ್ಷಿಸಬಹುದು. ಮಕ್ಕಳು ಓದುವುದನ್ನು ಬಿಟ್ಟು ಜೂಜಾಟದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಶ್ರೀಗಂಧ ಒತ್ತಾಯಿಸಿದರು.
ಉತ್ತರಿಸಿದ ಪಾಲಿಕೆ ಸದಸ್ಯ ಎಂ.ನಾಗರಾಜ, ‘ಕ್ಲಬ್‌ನಿಂದಾಗಿ ತೊಂದರೆ ಆಗುತ್ತಿರುವ ಬಗ್ಗೆ ಶಾಲೆಯವರು ಅಥವಾ ನಿವಾಸಿಗಳು ದೂರು ನೀಡಿಲ್ಲ. ಶಬ್ದಮಾಲಿನ್ಯ ಮಾಡದಂತೆ ಕ್ಲಬ್‌ನವರಿಗೆ ಸೂಚನೆ ನೀಡುತ್ತೇನೆ’ ಎಂದರು.
ಇದರಿಂದ ಸಮಾಧಾನಗೊಳ್ಳದ ಶ್ರೀಗಂಧ, ‘ಶಾಲೆಯ 100 ಮೀಟರ್ ಅಂತರದಲ್ಲಿ ಯಾವುದೇ ಜೂಜು ಕ್ಲಬ್‌ಗಳು ಇರಬಾರದು ಎಂಬ ನಿಯಮ ಇದೆ’ ಎಂದು ಗಮನ ಸೆಳೆದರು.
ಜೆ.ಸಿ.ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಗಿರೀಶ್ ನಾಯಕ್, ‘ಗಾಂಜಾ ಮಾರಾಟ ಎಲ್ಲ ಕಡೆಗಳಲ್ಲಿ ನಡೆಯುತ್ತಿದೆ. ಆರ್.ಟಿ.ನಗರದಲ್ಲಿ ಎರಡು ಪ್ರಕರಣಗಳನ್ನು ದಾಖಲಾಗಿದೆ. ಗಾಂಜಾ ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಠಾಣೆಗೆ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ’ ಎಂದರು.
ಪೊಲೀಸ್ ಅಧಿಕಾರಿಯ ಮಾತಿನಿಂದ ಕೆರಳಿದ ವೈ.ಎ.ನಾರಾಯಣಸ್ವಾಮಿ, ‘ಎಲ್ಲೆಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ, ರೌಡಿಗಳು ಎಷ್ಟು ಇದ್ದಾರೆ, ಜೂಜು ಅಡ್ಡೆಗಳು ಎಷ್ಟಿವೆ, ಡ್ರ್ಯಾಗ್ ರೇಸ್, ಬೈಕ್ ವ್ಹೀಲಿಂಗ್ ಎಲ್ಲೆಲ್ಲಿ ನಡೆಯುತ್ತಿದೆ ಎಂಬ ಮಾಹಿತಿ ಪೊಲೀಸರ ಬಳಿ ಇರುತ್ತದೆ. ಶಾಲೆ, ಮಸೀದಿ ಬಳಿ ಗಾಂಜಾ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ, ಗಾಂಜಾ ಮಾರಾಟ ಮಾಡುವವರ ಹೆಸರೇನು ಎಂದು ನನ್ನನ್ನೇ ಕೇಳುತ್ತಾರೆ. ಮಕ್ಕಳು ಮಾದಕ ವ್ಯಸನಿಗಳಾಗುವುದನ್ನು ತಪ್ಪಿಸಬೇಕು. ಈ ಬಗ್ಗೆ ಆಂದೋಲನ ಮಾಡಬೇಕು’ ಎಂದರು.
‘ಆರು ತಿಂಗಳ ಹಿಂದೆ ಎಲ್ಲ ಜೂಜು ಕ್ಲಬ್‌ಗಳನ್ನು ನಿಷೇಧಿಸಲಾಗಿತ್ತು. ಆದರೆ, ಮಾಲೀಕರು ಕೋರ್ಟ್‌ನಿಂದ ಆದೇಶ ತಂದಿದ್ದಾರೆ. ಪ್ರಭಾವಿಗಳಿಂದ ಒತ್ತಡ ಹಾಕಿ, ಕ್ಲಬ್‌ಗಳನ್ನು ಆರಂಭಿಸುತ್ತಿದ್ದಾರೆ. ಗಂಗೇನಹಳ್ಳಿ ಸರ್ಕಾರಿ ಉರ್ದು ಶಾಲೆ ಬಳಿ ಇರುವ ಕ್ಲಬ್ ಮುಚ್ಚಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದರು.
ಗಂಗಾನಗರ ವಾರ್ಡ್‌ನ ಕೇಶವಮೂರ್ತಿ, ‘ರಾತ್ರಿ ವೇಳೆ ಕೆಲ ಯುವಕರು ಡ್ರ್ಯಾಗ್ ರೇಸ್ ಮಾಡುತ್ತಾರೆ. ಕರ್ಕಶ ಶಬ್ದ ಹಾಗೂ ಅತಿ ವೇಗದ ಚಾಲನೆಯಿಂದಾಗಿ ತೀವ್ರ ತೊಂದರೆ ಉಂಟಾಗಿದೆ’ ಎಂದು ದೂರಿದರು.
ಆರ್.ಟಿ.ನಗರ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್ ಫಿರೋಜ್ ಖಾನ್, ‘1,500 ಡ್ರ್ಯಾಗ್ ರೇಸ್ ಪ್ರಕರಣಗಳು ಹಾಗೂ 10 ಬೈಕ್ ವ್ಹೀಲಿಂಗ್ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇವೆ. ವಿಶೇಷ ಕಾರ್ಯಾಚರಣೆ ನಡೆಸಿ ಇದಕ್ಕೆ ಕಡಿವಾಣ ಹಾಕಲು ಪ್ರಯತ್ನಿಸುತ್ತೇವೆ’ ಎಂದರು.
‘ಬಡಾವಣೆಯಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಅಕ್ರಮ ಚಟುವಟಿಕೆ ತಡೆಗಟ್ಟಲು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು’ ಎಂದು ಗಂಗಾನಗರದ ಅನ್ವರ್ ಪಾಷಾ ಅವರು ಒತ್ತಾಯಿಸಿದರು.
300 ಸಿಸಿಟಿವಿ ಕ್ಯಾಮೆರಾ ಅಳವಡಿಕೆ:
‘ಹೆಬ್ಬಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು 150 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನೂ 150 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಜೂಜಾಟ, ಸರಗಳ್ಳತನ, ಬೈಕ್ ವ್ಹೀಲಿಂಗ್‌ಗೆ ಕಡಿವಾಣ ಹಾಕಬೇಕು. ಸಂಚಾರ ದಟ್ಟಣೆಯನ್ನು ತಡೆಗಟ್ಟಬೇಕು’ ಎಂದು ನಾರಾಯಣಸ್ವಾಮಿ ಸೂಚಿಸಿದರು.
‘ಮನೋರಾಯನಪಾಳ್ಯ ವಾರ್ಡ್‌ನಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಅಕ್ಟೋಬರ್ 7ರಂದು ಉದ್ಘಾಟಿಸಲಾಗುತ್ತದೆ. ಹೆಬ್ಬಾಳ ಕ್ಷೇತ್ರವನ್ನು ಸ್ವಚ್ಛ, ಸುಂದರ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.
ಉದ್ಯಾನ ನಿರ್ವಹಣೆ ಸರಿಯಿಲ್ಲ: ದೂರು
ಹೆಬ್ಬಾಳ ಕ್ಷೇತ್ರದಲ್ಲಿ ಉದ್ಯಾನಗಳ ನಿರ್ವಹಣೆ ಸಮರ್ಪವಾಗಿ ಇಲ್ಲದ ಬಗ್ಗೆ ಅನೇಕ ಮಂದಿ ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ಹೆಬ್ಬಾಳ ವಾರ್ಡ್‌ನ ಸದಸ್ಯ ಆನಂದ ಕುಮಾರ್, ‘ಉದ್ಯಾನಗಳ ನಿರ್ವಹಣೆ ಮಾಡದೆಯೇ ಗುತ್ತಿಗೆದಾರರು ಬಿಲ್‌ಗಳನ್ನು ನೀಡುತ್ತಿದ್ದಾರೆ. ಸಿಬ್ಬಂದಿಗೆ ಸರಿಯಾದ ಸಂಬಳ ನೀಡುತ್ತಿಲ್ಲ. ಪೌರಕಾರ್ಮಿಕರನ್ನು ಬಳಸಿಕೊಂಡು ಸ್ವಚ್ಛಗೊಳಿಸುವಂತಹ ಪರಿಸ್ಥಿತಿ ಬಂದಿದೆ’ ಎಂದು ದೂರಿದರು.
ನಾರಾಯಣಸ್ವಾಮಿ, ‘ಕ್ಷೇತ್ರದಲ್ಲಿ 59 ಉದ್ಯಾನಗಳಿದ್ದು, ಇದರಲ್ಲಿ 3 ಉದ್ಯಾನಗಳನ್ನು ಕಾರ್ಪೊರೇಟ್ ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್) ಅಭಿವೃದ್ಧಿ ಪಡಿಸಲಾಗುತ್ತಿದೆ. ಉಳಿದ ಉದ್ಯಾನಗಳ ನಿರ್ವಹಣೆ ಬಗ್ಗೆ ಪಾಲಿಕೆ ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಸೂಚಿಸಿದರು.
ಇದಕ್ಕೆ ಉತ್ತರಿಸಿದ ಡಾ.ಅಶೋಕ್, ‘ಉದ್ಯಾನಗಳ ಸ್ವಚ್ಛತೆ, ನೀರಿನ ಸೌಲಭ್ಯ, ಭದ್ರತೆಯನ್ನು ನೋಡಿಯೇ ಗುತ್ತಿಗೆದಾರರ ಹಣ ಬಿಡುಗಡೆ ಮಾಡುತ್ತೇವೆ. ಉದ್ಯಾನದ ನಿರ್ವಹಣೆಗೆ ಸಂಬಂಧಿಸಿದಂತೆ ವಾರ್ಡ್‌ವಾರು ಗುತ್ತಿಗೆದಾರರ ಸಭೆ ಕರೆಯುತ್ತೇನೆ’ ಎಂದರು.
ಮೈದಾನದಲ್ಲಿ ಕ್ಯಾಂಟೀನ್ ಬೇಡ:
‘ಸಂಜಯನಗರದ ನಾಗಶೆಟ್ಟಿಹಳ್ಳಿಯ ಬಸ್ ನಿಲ್ದಾಣದ ಬಳಿ ಇರುವ ಆಟದ ಮೈದಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ. ಈ ಮೈದಾನದಲ್ಲಿ ವಾಲಿಬಾಲ್ ಪಂದ್ಯಾವಳಿಗಳು ನಡೆಯುತ್ತಿರುತ್ತವೆ. ಕ್ಯಾಂಟೀನ್ ನಿರ್ಮಾಣದಿಂದ ನಮಗೆ ತೊಂದರೆ ಉಂಟಾಗಲಿದೆ’ ಎಂದು ಮುನಿಗೌಡ ಹೇಳಿದರು.
ಇದಕ್ಕೆ ಧ್ವನಿಗೂಡಿಸಿದ ವಿನಾಯಕನಗರದ ನಿವಾಸಿಯೊಬ್ಬರು, ‘ಆಟದ ಮೈದಾನಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸುವುದು ಸರಿಯಲ್ಲ. ಬೇರೆ ಜಾಗದಲ್ಲಿ ಕ್ಯಾಂಟೀನ್ ನಿರ್ಮಿಸಲಿ’ ಎಂದು ಒತ್ತಾಯಿಸಿದರು. ಪೂರ್ವ ವಲಯದ ಜಂಟಿ ಆಯುಕ್ತ ಡಾ.ಅಶೋಕ್, ‘ಈ ವಿಷಯದಲ್ಲಿ ನಾನು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಪಾಲಿಕೆ ಆಯುಕ್ತರೇ ತೀರ್ಮಾನಿಸುತ್ತಾರೆ’ ಎಂದರು.
ನಾರಾಯಣಸ್ವಾಮಿ, ‘ಈ ಆಟದ ಮೈದಾನದ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ₹7 ಲಕ್ಷ ನೀಡಿದ್ದೇನೆ. ಇಂದಿರಾ ಕ್ಯಾಂಟೀನ್‌ಗೆ ನನ್ನ ವಿರೋಧ ಇಲ್ಲ. ಆಟದ ಮೈದಾನದ ಪಕ್ಕದಲ್ಲೇ ಬಿಡಿಎಗೆ ಸೇರಿದ ಜಾಗ ಇದೆ. ಅಲ್ಲಿ ಕ್ಯಾಂಟೀನ್ ನಿರ್ಮಿಸಲಿ’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.