ಸೆನ್ ನೊ ರಿಕ್ಯು ಎಂಬ ‘ಟೀ ಮಾಸ್ಟರ್’ನ ಬದುಕಿನಲ್ಲಿ ನಡೆದ ಘಟನೆ ಇದು. ಗುರು ಇದ್ದ ವಸತಿಯ ಕಂಬವೊಂದರ ಮೇಲೆ ಹೂದಾನಿ ಇಡುವುದಕ್ಕೊಂದು ಸ್ಟ್ಯಾಂಡ್ ಬೇಕಿತ್ತು. ಅದನ್ನು ಅಳವಡಿಸುವ ಬಡಗಿ ಬಂದ ಮೇಲೆ ಸರಿಯಾದ ಸ್ಥಳವನ್ನು ಗುರುತಿಸುವ ಪ್ರಕ್ರಿಯೆ ಬಹಳ ಹೊತ್ತು ನಡೆಯಿತು. ಸ್ವಲ್ಪ ಮೇಲೆ, ಸ್ವಲ್ಪ ಕೆಳಗೆ, ಎಡಕ್ಕೆ ಬಲಕ್ಕೆ ಎಂದೆಲ್ಲಾ ಆಚೀಚೆ ಸರಿಸಿ ಮಾಸ್ಟರ್ ಒಂದು ಸ್ಥಳವನ್ನು ಆಯ್ಕೆ ಮಾಡಿಕೊಂಡರು.
ಬಡಗಿ ಅಲ್ಲಿ ಸಣ್ಣದಾಗಿ ಗುರುತು ಮಾಡಿಕೊಂಡ. ಸ್ಟ್ಯಾಂಡ್ ಅಳವಡಿಸುವ ಹೊತ್ತಿಗೆ ಆ ಸ್ಥಳ ಮರೆತಂತೆ ನಟಿಸಿ ಗುರುವನ್ನು ಪರೀಕ್ಷಿಸುವ ತುಂಟತನ ತೋರಿದ. ಮತ್ತೆ ಹಿಂದೆ ನಡೆದ ಸರ್ಕಸ್ ನಡೆಯಿತು. ಮೇಲೆ, ಕೆಳಗೆ, ಎಡ, ಬಲ ಎಲ್ಲವೂ ಆಗಿ ಮೊದಲು ಗುರುತಿಸಿದ್ದ ಸ್ಥಳವನ್ನೇ ಮಾಸ್ಟರ್ ಒಪ್ಪಿಕೊಂಡರು.
ಈ ಕಥೆಯೇನು ಹೇಳುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಆಲೋಚಿಸಿ ನೋಡಿ. ಬಡಗಿಯ ತುಂಟ ಪರೀಕ್ಷೆಯಲ್ಲಿ ಗುರು ಹೇಗೆ ಗೆದ್ದರು? ಅವರಿಗೆ ಅದು ಅಷ್ಟು ಸ್ಪಷ್ಟವಾಗಿದ್ದದ್ದು ಹೇಗೆ? ಈ ಪ್ರಶ್ನೆಗಳಿಗೆ ಇರುವ ಉತ್ತರ ಸರಳ. ಪ್ರತಿಯೊಂದಕ್ಕೂ ಒಂದು ಅನುಪಾತವಿರುತ್ತದೆ.
ನಿರ್ದಿಷ್ಟ ವಸ್ತು ಇಂತಲ್ಲಿ ಇಟ್ಟರೆ ಸರಿ ಎಂಬುದನ್ನು ಗುರು ಕಂಡುಕೊಂಡದ್ದೂ ಇದರ ಮೂಲಕವೇ. ಯಾವುದು ಎಷ್ಟು ಪ್ರಮಾಣದಲ್ಲಿ ಎಲ್ಲಿರಬೇಕು ಎಂಬುದರ ಅರಿವೇ ಕಳೆದು ಹೋಗಿರುವ ಕಾಲವಿದು. ಎಲ್ಲವೂ ಅತಿಯಲ್ಲೇ ಕಾಣಿಸುವ ಈ ಕಾಲಘಟ್ಟದಲ್ಲಿ ಸರಿಯಾದ ಪ್ರಮಾಣದ ಅರಿವು ಎಂಬುದೇ ಇಲ್ಲವಾಗಿಬಿಟ್ಟಿದೆ.
ಒಬ್ಬ ಪ್ರಾಮಾಣಿಕನಾಗಿರುವುದು ಒಂದು ಅಪವಾದವಾಗಿಬಿಡುವ ಈ ಕಾಲದಲ್ಲಿ ಪ್ರಮಾಣವೆಂಬುದು ಮರೆತು ಹೋಗಿದ್ದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ. ಬದುಕಿಗೆ ಮತ್ತೆ ಪ್ರಮಾಣವನ್ನು ತಂದುಕೊಳ್ಳುವ ಕ್ರಿಯೆಯನ್ನು ಟೀ ಮಾಸ್ಟರ್ ದೃಷ್ಟಾಂತ ಹೇಳುತ್ತಿದೆ. ಇದರಲ್ಲಿ ಬಹಳ ಆಶ್ಚರ್ಯಕರವಾದುದೇನೂ ಇಲ್ಲ. ರುಚಿಗೆ ತಕ್ಕಷ್ಟು ಉಪ್ಪು ಹಾಕುವುದಕ್ಕೆ ಯಾವ ಅಮ್ಮಂದಿರೂ ಯಾವುದೇ ಮಾಪಕವನ್ನು ಬಳಸುವುದಿಲ್ಲ. ಅವರ ಕೈಯಳತೆಯೇ ಅವರಿಗೆ ಸಾಕಾಗುತ್ತದೆ. ಆದರೆ ಇದು ಬಂದಿರುವುದು ಅವರ ಅನುಭವದಿಂದ.
ಅಡುಗೆಯನ್ನು ಕೀಳಾಗಿ ಕಾಣುವ ಮನೋಭಾವ ಬೆಳೆಸಿಕೊಂಡ ನಮಗೆ ಕೊನೆಗೆ ದೊರೆತದ್ದು ದಿಢೀರ್ ಆಹಾರ ಪದಾರ್ಥಗಳು ಮತ್ತು ಅದರ ಮೂಲಕ ಒದಗಿರುವ ರೋಗಗಳು ಮಾತ್ರ. ಪ್ರಮಾಣ ಬದ್ಧವಾದ ಅಥವಾ ನಮ್ಮ ದೇಹ ಮತ್ತು ವಾತಾವರಣಕ್ಕೆ ಅನುಗುಣವಾದ ಅನುಪಾತವನ್ನು ನಾವು ಗ್ರಹಿಸಿದ್ದರೆ ಈ ಬಲೆಯಲ್ಲಿ ನಾವು ಬೀಳುತ್ತಿರಲಿಲ್ಲ.
ಸಮಯದ ಬಳಕೆ, ಅಥವಾ ಅಪಬಳಕೆಯ ಬಗ್ಗೆ ಇರುವ ನಮ್ಮ ಕಲ್ಪನೆಗಳೂ ಇಂಥವೇ. ಯಾವುದು ಹೆಚ್ಚು ಅಥವಾ ಯಾವುದು ಕಡಿಮೆ ಎಂಬುದನ್ನು ಟೀ ಮಾಸ್ಟರ್ ನಿರ್ಧರಿಸಿದಂತೆ ನಮಗೆ ಸ್ಪಷ್ಟವಾಗಿ ಕಂಡುಕೊಳ್ಳಲು ಸಾಧ್ಯವೇ ಇಲ್ಲದಂತ ಸ್ಥಿತಿ ತಲುಪಿದ್ದೇವೆ.
ಇದನ್ನು ಹೇಗೆ ನಿವಾರಿಸಿಕೊಳ್ಳುವುದು? ಇದಕ್ಕೆ ಇರುವ ಮಾರ್ಗ ಒಂದೇ. ನಮ್ಮನ್ನೇ ನಾವು ನೋಡಿಕೊಳ್ಳುವುದು. ನಮಗೆ ಬೇಕಿರುವ ಪ್ರಮಾಣ ಯಾವುದು ಎಂಬುದನ್ನು ಸೆನ್ ನೊ ರಿಕ್ಯೂ ಕಂಡುಕೊಂಡಂತೆ ನಮಗೂ ಕಂಡುಕೊಳ್ಳಲು ಸಾಧ್ಯವೇ ಎಂದು ಶೋಧಿಸುವುದು.
ಹೂದಾನಿ ಎಲ್ಲಿರಬೇಕು ಎಂಬುದನ್ನು ಆ ಗುರು ಕ್ಷಣಾರ್ಧದಲ್ಲಿ ನಿರ್ಧರಿಸಲಿಲ್ಲ. ಆದರೆ ನಿರ್ಧರಿಸಿದ ನಂತರ ಅದನ್ನು ಬದಲಾಯಿಸುವ ಅಗತ್ಯವೇ ಇರಲಿಲ್ಲ. ಅದು ಮರೆತೇ ಹೋಗಿದ್ದರು ಮತ್ತೆ ಕಂಡುಕೊಳ್ಳುವಷ್ಟು ಸ್ಪಷ್ಟ ಅರಿವು ಅದಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.