ADVERTISEMENT

ಆಪ್ತಸಖಿಯೂ ವಿಷಕನ್ಯೆಯೂ

​ಪ್ರಜಾವಾಣಿ ವಾರ್ತೆ
Published 30 ಜುಲೈ 2014, 19:30 IST
Last Updated 30 ಜುಲೈ 2014, 19:30 IST

ಬೆಳಿಗ್ಗೆ ಏಳುತ್ತಲೇ ಜಾಲತಾಣಗಳ ಮೂಲಕ ಮಾತು ಆರಂಭಿಸುವ ಯುವಜನರು ಒಂದೆಡೆಯಾದರೆ, ಇವುಗಳನ್ನು ಹಳಿಯುತ್ತಲೇ ಅದರ ಬಗ್ಗೆ ಕುತೂಹಲ ಕಾದಿರಿಸಿಕೊಂಡವರು ಇನ್ನೊಂದೆಡೆ. ಜಾಲತಾಣಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರಕ್ಕೆ ಬದಲು ಮಾಡುತ್ತಿವೆ ಎಂಬ ಕೂಗು ಮತ್ತೊಂದೆಡೆ. ಜಾಲತಾಣಗಳಿಂದ ಯುವಜನತೆ ದಿಕ್ಕು ತಪ್ಪುತ್ತಿದೆಯೇ? ಇವು ಚಿಂತನಾಶಕ್ತಿ, ಏಕಾಗ್ರತೆಯನ್ನು ಕಸಿದುಕೊಳ್ಳುತ್ತಿವೆಯೇ? ಅಭಿವ್ಯಕ್ತಿ ಸ್ವಾತಂತ್ರ್ಯ ದುರ್ಬಳಕೆಯಾಗುತ್ತಿದೆಯೇ? ಇಂಥವೇ ಹಲವು ಪ್ರಶ್ನೆಗಳನ್ನು ‘ಕಾಮನಬಿಲ್ಲು’ ಓದುಗರ ಮುಂದಿಟ್ಟಿತ್ತು. ಅದರಲ್ಲಿ ಜಾಲತಾಣಗಳ ಬಗ್ಗೆ ಹೆಚ್ಚು ಕಾಣಿಸಿಕೊಂಡಿದ್ದು ನಕಾರಾತ್ಮಕ ಪ್ರತಿಕ್ರಿಯೆಗಳೇ...  

ಸಂಕುಚಿತ ತಾಣವೀ ಅಂತರ್ಜಾಲ
ಇಂದಿನ ಸೂಪರ್‌ಫಾಸ್ಟ್ ಯುಗದಲ್ಲಿ ನಾವು ಸಾಮಾಜಿಕ ಜಾಲತಾಣಗಳನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿಸಿ ಕೊಂಡಿದ್ದೇವೆ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಗೂಗಲ್‌ ಪ್ಲಸ್‌,  ಟ್ವಿಟ್ವರ್‌ ಇಂದಿನ ಯುವ ಜನತೆಗೆ ಎಷ್ಟೊಂದು ಅನಿವಾರ್ಯವಾಗಿದೆ ಅಂದ್ರೆ; ಅವರು ಬೆಳಿಗ್ಗೆ ಏಳುವಾಗಲೇ ಅವೂ ತೆರೆದುಕೊಳ್ಳುತ್ತವೆ. ಮೊಬೈಲ್‌, ಅಪ್ಪ – ಅಮ್ಮ ಕೂಗಿ, ಕಿರುಚಿದರೂ ಮೊಬೈಲಿನಿಂದ ಮುಖ ತಿರುಗಿಸುವುದೇ ಇಲ್ಲ. ಇಂದು ಸಾಮಾಜಿಕ ಜಾಲತಾಣಗಳು ಪ್ರಪಂಚವನ್ನು ತುಂಬಾ ತುಂಬಾ ಸಂಕುಚಿತಗೊಳಿಸುತ್ತಿವೆ. ಹಾಗೆಯೇ ಜನಸಾಮಾನ್ಯರ ಬದುಕನ್ನೂ ಸಂಕುಚಿತಗೊಳಿಸುತ್ತಿದೆ. ಸಂಕೀರ್ಣಗೊಳಿಸುತ್ತಿರುವುದು ತುಂಬಾ ವಿಪರ್ಯಾಸದ ಸಂಗತಿಯೇ ಸರಿ. ಪ್ರಸ್ತುತ ಯುವ ಮನಸ್ಸುಗಳ ಸ್ಥಿತಿ ಎಲ್ಲಿಗೆ ತಲುಪಿದೆ ಅಂದ್ರೆ ಫೇಸ್‌ಬುಕ್‌, ಟ್ವಿಟ್ವರ್‌ಗಳಲ್ಲಿ ಖಾತೆ ಹೊಂದಿಲ್ಲದೇ ಇರುವವರನ್ನು ಅನಕ್ಷರಸ್ಥರು! ಅನಾಗರೀಕರೆಂಬ ಸುಲಭ ತೀರ್ಮಾನಗಳಿಗೆ ನುಗ್ಗುವ ಮಟ್ಟಿಗೆ ಬದಲಾಯಿಸಿವೆ.

ಇಂದಿನ ಶಾಲಾ – ಕಾಲೇಜು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ತುಂಬಾ ಪ್ರಭಾವಿತರಾಗಿದ್ದಾರೆ. ಅದರಿಂದ ಅವರ ಕನಸುಗಳು, ಹೊರಗಿನ ಪ್ರಪಂಚದ ಬಗೆಗಿರುವ ಯೋಜನೆಗಳೆಲ್ಲ ತುಂಬಾ ಸಂಕುಚಿತವಾಗಿವೆ. ಅವರ ಕ್ರಿಯಾತ್ಮಕತೆ, ಸೃಜನಶೀಲತೆಯನ್ನು ಕೊಲ್ಲುತ್ತಿದೆ ಎಂದೂ ಹೇಳಬಹುದು. ಸಾಮಾಜಿಕ ಜಾಲತಾಣಗಳ ಅನಾಮಧೇಯ ಪ್ರಭಾವದಿಂದ ಸಂಬಂಧಗಳ ಮಹತ್ವವನ್ನು ಮತ್ತು ನಮ್ಮ ಸಂಸ್ಕೃತಿ, ಕಲೆ, ಸಂಪ್ರದಾಯ, ಪರಂಪರೆ, ಇತಿಹಾಸಗಳ ಶ್ರೀಮಂತಿಕೆಯ  ಬಗೆಗಿನ ತಿಳಿವಳಿಕೆಯನ್ನು ಕಳೆದುಕೊಳ್ಳುತ್ತಿರುವುದು ಆಧುನಿಕ ಜೀವನದ ದುರಂತವೇ ಸರಿ. ಇವುಗಳಿಂದ ನೂರಾರು ಉಪ ಯುಕ್ತ ಮಾಹಿತಿಗಳು ದೊರೆಯುತ್ತವೆ ಎನ್ನುವುದು ಪ್ರತಿಯೊಬ್ಬರೂ ಒಪ್ಪಲೇಬೇಕಾದ ಸತ್ಯ. ಆದರೆ ಅದರಾಚೆ ಒಳಿತಿಗಿಂತ ಹೆಚ್ಚಾಗಿ ಕೆಡುಕಿರುವುದೂ ಸುಳ್ಳಿಲ್ಲ. ನಾವು ಸಾಮಾಜಿಕ ಜಾಲತಾಣಗಳನ್ನು ಬಳಸುವುದರಲ್ಲಿ ಅದರ ಉಪಯೋಗ ಅನುಪಯೋಗ ಗಳ ಬಗೆಗೆ ತಿಳಿಹೇಳಿ ಅವರನ್ನು ಆದಷ್ಟು ಜಾಗೃತಗೊಳಿಸುವುದು ನಮ್ಮ ಮುಂದಿರುವ ಕರ್ತವ್ಯ ವಷ್ಟೆ. ಒಟ್ಟಾರೆ ಸಾಮಾಜಿಕ ಜಾಲತಾಣಗಳು ಒಳ್ಳೆಯ ಉದ್ದೇಶಕ್ಕಾಗಿ ಉಪಯೋಗವಾದರೆ, ಜ್ಞಾನವೃದ್ಧಿಗೆ ಮತ್ತು ಸಂವಹನಕ್ಕೆ ಸೀಮಿತವಾದರೆ ಒಳಿತು.
– ನಾಗರಾಜ ಕೊವೆ, ಶೃಂಗೇರಿ

ADVERTISEMENT

ಬದುಕಿನ ಐಡೆಂಟಿಟಿ ಹುಡುಕುತ್ತಾ...
‘ಅಂತರ್ಜಾಲ’ ಮನುಕುಲದ ಬಹುಬೇಡಿಕೆಯ ಮಾರುಕಟ್ಟೆ; ಸಾಮಾಜಿಕ ತಾಣಗಳು ಪರಸ್ಪರ ಸಂವಹನ ಸರ(ಕು)ದಾರ! ಮೂಲತಃ ‘ಸಾಮಾಜಿಕ’ ಪದವೇ ಅರ್ಥಪೂರ್ಣವಾದದ್ದು! ಸಾಮಾಜಿಕತೆಯಲ್ಲಿ ಆಧುನಿಕತೆಯ ಮುಖಾ–ಮುಖಿತನ ಪರಂಪರೆಯ ಅಸ್ಥಿತ್ವವನ್ನೇ ಪ್ರಶ್ನಿಸುತ್ತದೆ! ಸಂವಹನ ಜಾಡಿಡಿದು ಸಾಕ್ಷಾತ್ಕಾರಗೊಂಡ ಜಾಗತೀಕ ಕೂಸುಗಳು–ಗೂಗಲ್‌ಪ್ಲಸ್‌, ಟ್ವಿಟ್ಟರ್‌, ಫೇಸ್‌ಬುಕ್‌ ... ಇತ್ಯಾದಿಗಳು. ಸಾಂಸ್ಕೃತಿಕ ವಲಯದಲ್ಲಿ ತನ್ನ ಕೆನ್ನಾಲಿಗೆ ಚಾಚಿದ ಮೇಲೆ ಕಂಡ ಬದಲಾವಣೆ ಹಲವಾರು. ಇವು ಪಾದ ಬೆಳಸಿದ ತರುವಾಯ ಯುವಕರಲ್ಲಿ ಹೊಸ ನಿರೀಕ್ಷೆ, ಸಂತಸ, ಗೊಂದಲ, ಭಯ, ಆತಂಕ, ತವಕ–ತಲ್ಲಣಗಳು, ಬಿಡುಗಡೆಯ ನಿರಾಳಭಾವ. ಆಕಾಂಕ್ಷೆ, ಗಡಿ–ಬಿಡಿ, ಹಿಂಜರಿಕೆ, ಸಂಕೋಚ, ಭರವಸೆ, ಆಶಾಭಾವನೆ, ಕನಸು,  ವಿಕೃತಿ, ವಿಕಾರ, ಅಭದ್ರತೆ ಹೀಗೆ ವಿವಿಧ ಬಗೆಯ ಹತ್ತು ಹಲವು ಪ್ರತಿಕ್ರಿಯೆಗಳನ್ನು ಹುಟ್ಟಿಸಿರಬಹುದು! ಬದುಕಿನಲ್ಲಿ ಗಣನೀಯ ಸ್ಥಿತ್ಯಂತರಗಳನ್ನು ಸೃಷ್ಟಿಸಿರಬಹುದು! ಆದರೂ ಹೊಸ ಸಾಧ್ಯತೆಯ ಬೆಳಕನ್ನು ನೀಡಿರುವುದರಲ್ಲಿ ಉಪೇಕ್ಷೆಯೂ ಇಲ್ಲ!

   ವಿಜ್ಞಾನಕ್ಕೆ ಎರಡು ಮುಖಗಳು ಒಂದು–ವಿಕಾಸಶೀಲ: ಮತ್ತೊಂದು, ವಿನಾಶಮೂಲ: ಈ ದ್ವಿಮುಖಗಳಲ್ಲಿಯೇ ಬದುಕಿನ ಐಡೆಂಟಿಟಿ ಮತ್ತು ಅಳಿವು–ಉಳಿವಿನ ಪ್ರಶ್ನೆಯಿದೆ! ಉತ್ತರವಿದೆ! ಈ ಸಾಮಾಜಿಕ ತಾಣಗಳನ್ನು ಜ್ಞಾನಶಿಸ್ತು, ಅಭಿವ್ಯಕ್ತಿ ಶಿಸ್ತು, ಸಂವಹನ ಶಿಸ್ತಿನಡಿಯಲ್ಲಿ ನೋಡುವುದಾದರೆ, ಸುಂದರ ಅನಾವರಣವಿದೆ. ಅಭಿವ್ಯಕ್ತಿಗೆ ಭರಪೂರ ಅವಕಾಶ ಕೊಡಮಾಡಿದೆ. ಭಾಷಾಭಿವೃದ್ಧಿ, ವಿಷಯ–ವಿಚಾರ ತಿಳಿವಳಿಕೆ, ವಾದ, ಸಂವಾದ ಸರಣಿ, ಭಾವ ಸಮ್ಮಿಲನ... ಹೀಗೆ ಮನುಷ್ಯನಿಗೆ ಬಹುರೂಪಿ ದಾರಿದೀಪದಂತಾಗಿವೆ! ಎಲ್ಲ ಎಲ್ಲೆಗಳಿಗೂ ಮೀರಿ ಸ್ಪಂದನೆ ರೂಪಿಸಿದೆ. ಇಡೀ ‘ವಿಶ್ವವೇ ಕಿರಿ ಕುಟುಂಬ’ವಾಗಿಸಿ ಏಕತಾನತೆ ಸಾಧಿಸುವಲ್ಲಿ ಸಂಪರ್ಕ ಮತ್ತು ಅಭಿವ್ಯಕ್ತಿಯ ವಿಪ್ಲವದ ಪಾತ್ರ ತುಂಬಾ ಹಿರಿದು!

   ಈ ಮಾಧ್ಯಮಗಳು ಮೊದಮೊದಲು ವಸ್ತುವಾಗಿಯೂ ಕ್ರಮೇಣ ಮೌಲ್ಯ ಪರಿವರ್ತನೆಯ ಪ್ರಕ್ರಿಯಾತ್ಮಕ ಅಂತಃಕ್ರಿಯೆಯ ಗುಪ್ತಗಾಮಿನಿಗಳೆ! ಆದರೆ ನಿದ್ರೆ, ಹಸಿವು, ನೀರಡಿಕೆಗಳಿಲ್ಲದೆ ಸದಾ ಕೈಯಲ್ಲೊಂದು ಸ್ಮಾರ್ಟ್‌ಫೋನ್‌ಗಳಿಡಿದ ಯುವಕರು ಚಾಟಿಂಗ್‌ನಲ್ಲೇ ಕಾಲಹರಣ ಮಾಡುತ್ತಾ ಅಮೂಲ್ಯ ಸಮಯದ ಬುಡಕ್ಕೆ ಕೊಳ್ಳಿ ಇಟ್ಟು ಕೊಂಡಂತಿದೆ! ಪುರುಸೊತ್ತಿಲ್ಲ! ಟ್ವಿಟ್‌ ಸುನಾಮಿಯೇ! ಚಿಂತನೆ, ಆಲೋಚನೆ, ತಾರ್ಕಿಕತೆ, ವಿಮರ್ಶಾನ ಶಕ್ತಿಗಳು ದಿನದಿಂದ ದಿನಕ್ಕೆ ಕಳೆಗುಂದುತ್ತಿರುವುದು ಮೇಲ್ನೋಟಕ್ಕೆ ಪ್ರಾಯಶಃ ಸತ್ಯ! ನಿರ್ದಿಷ್ಟ ಗೊತ್ತುಗುರಿಗಳಿಲ್ಲದ ಹಾಯಿದೋಣಿಗೆ ಭವಿಷ್ಯವೆಲ್ಲಿ? ಅನಾರೋಗ್ಯಕರವಾದ ಹವ್ಯಾಸಗಳಾಗಬಾರದು! ಅವು ವೈಯಕ್ತಿಕ ಏಳಿಗೆಗೆ ಪೂರಕವಾಗಬೇಕು! ನವ ಮನಸ್ಸುಗಳಿಗೆ ಈ ತಾಣಗಳು ಕಾಮಧೇನು...! ತಪ್ಪಲ್ಲ! ಬೇಡಿದ್ದನ್ನು, ಕೇಳಿದ್ದನ್ನು ಕೊಡುತ್ತವೆ!

ಸ್ನೇಹ–ಪರಿಚಯ ಭಾವ–ಪರಸ್ಪರ ವಿಚಾರ ವಿನಿಮಯದಿಂದಿಡಿದು ಕಲೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಚರಿತ್ರೆ ಇತ್ಯಾದಿಯಾಗಿ ಮಾನವಿಕ ಶಾಸ್ತ್ರಗಳ ಅಧ್ಯಯನದವರೆಗೂ ನೆರವು ನೀಡುತ್ತವೆ. ಹಿಡಿ ಬೊಗಸೆಯಲ್ಲಿ! ನಿಜ, ಆದರೆ ವ್ಯಕ್ತಿಯ ಶ್ರೇಯೋಭಿವೃದ್ಧಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವ ರೀತಿ–ನೀತಿಗಳ ಮೇಲೆ ಅವುಗಳ ಗಟ್ಟಿತನ ಕುಂತಿದೆ! ಆದರೆ ಮಿತಿಗಳಿರಿಯದೆ ಅನೇಕ ಆವಾಂತರಗಳ ಸೃಷ್ಟಿಸಿಕೊಂಡು ಜೀವಕ್ಕೆ ಸಂಚಕಾರವೂ ತಂದೊಡ್ಡಿಕೊಂಡಿದ್ದಾರೆ ಯುವಕರು. ಈ ಹೊಸ ಹುರುಪುತನಗಳ ಬೆನ್ನಹಿಂದೆಯೇ ಸೂಕ್ಷ್ಮವರಿಯದ ಮಸೆದ ಚೂರಿಗಳಿವೆ! ಅದೆಷ್ಟೋ ದಾಂಪತ್ಯಗಳಲ್ಲಿ ಹುಳಿ ಹಿಂಡಿ ಬದುಕು ಅಪಥ್ಯವಾಗಿ ವಿಚ್ಛೇದಿತ ಶೋಕಗೀತೆಗಳಾಗಿವೆ! ಇವು ನಾಗರಿಕ ಕ್ರೌರ್ಯದ ಮುಖವಾಡದಂತೆ ಕಾಣುತ್ತಲಿವೆ! ಹಾಗಂತ ಟ್ವಿಟ್‌ ಮಾಡಬೇಡಿ ಅಂಥಲ್ಲ! ಎಚ್ಚರವಿರಲಿ! ನಾಗರಿಕ ವಸ್ತುಗಳು ದುರಂತವೆನಿಸಿದರೂ ವಿಕಾಸಕ್ಕೆ ಅನಿವಾರ್ಯದಂತಾಗಿವೆ! ಆದುದರಿಂದ ಸ್ವಯಂ ಕಡೆಗೀಲು ಮತ್ತು ಸ್ವಯಂ ಕಡಿವಾಣಗಳು ಅವಶ್ಯ! ಅಗತ್ಯ!!
–ಜಿ. ಎಲ್ಲಪ್ಪ ವೆಂಕಟಾಪುರ್‌, ಚಿತ್ರದುರ್ಗ

ಜಾಲದಲ್ಲಿ ಸಿಕ್ಕಿಸುವ ತಾಣಗಳು
ಒಮ್ಮೆ ‘ಫೇಸ್‌ಬುಕ್‌’ಗೆ ಲಾಗಿನ್ ಆಗಿ ಒಂದು ಹೆಸರನ್ನು ಕೊಟ್ಟು ನೋಡಿ (ಉದಾ: ಸೀಮಾ) ನಿಮಗೆ ಸಾಕಾಗುವಷ್ಟು ಬರಿಯ ಅಶ್ಲೀಲ ಚಿತ್ರಗಳು ಸಿಗುತ್ತವೆ. ನಮಗೆ ಬೇಕಾದ ‘ಸೀಮಾ’ಳನ್ನು ಹುಡುಕುವಷ್ಟರಲ್ಲಿ ನಾವು ನೂರಾರು ಭಂಗಿಗಳು, ನಗ್ನ ಚಿತ್ರಗಳನ್ನು ಹಾದು ಹೋಗಿರುತ್ತೇವೆ. ಈ ಚಿತ್ರಗಳು ಮಹಿಳೆಯರಿಗೆ, ಮಹಿಳೆಯರ ಬಗ್ಗೆ ಗೌರವವುಳ್ಳವರಿಗೆ ಹೇಸಿಗೆ ಹುಟ್ಟಿಸುತ್ತವೆ. ವಿಕೃತ ಮನಸ್ಸಿನವರಿಗೆ ಮನಸ್ಸಿನ ಹತೋಟಿ ತಪ್ಪುವಂತೆ ಮಾಡುತ್ತವೆ.

ಮಕ್ಕಳು, ಯುವಜನತೆ ಇಷ್ಟೇ ಯಾಕೆ ದೊಡ್ಡವರೂ ಈ ಚಿತ್ರಗಳ ಬಲೆಗೆ ಬೀಳುತ್ತಲೇ ಹೋಗುತ್ತಾರೆ. ಎಷ್ಟೇ ನೋಡಬಾರದೆಂದು ನಿಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡರೂ ಒಂದು ಕ್ಷಣವಾದರೂ ಈ ಚಿತ್ರಗಳ ಕಡೆ ಕಣ್ಣು ಹಾಯಿಸುವಂತೆ ಮಾಡುತ್ತವೆ. ಮೊದಲು ಬರೀ ಯುವಜನತೆ, ದೊಡ್ಡವರು ಇಂತಹ ಚಿತ್ರಗಳನ್ನು ಕದ್ದು ಮುಚ್ಚಿ ನೋಡುತ್ತಿದ್ದರು. ಸಿಕ್ಕಿಹಾಕಿಕೊಳ್ಳುವ ಹೆದರಿಕೆಯೂ ಅವರಿಗೆ ಇತ್ತು. ಈಗ ಆ ಸಮಸ್ಯೆಯೇ ಇಲ್ಲ. ಸಾರ್ವಜನಿಕವಾಗಿ, ರಾಜಾರೋಷವಾಗಿ ಬೇಕಾಗಿಲ್ಲದವರಿಗೂ, ಬೇಕಾದವರಿಗೂ ಈ ಚಿತ್ರಗಳು ಕಾಣಸಿಗುತ್ತವೆ. ಅದರಲ್ಲೂ ಮಕ್ಕಳು ಈ ತಾಣಕ್ಕೆ ಸದಸ್ಯರಾಗಿರುತ್ತಾರೆ (ಸುಳ್ಳು ಜನ್ಮದಿನಾಂಕ ಕೊಟ್ಟು) ಈ ಸಮಯದಲ್ಲಿ ಈ ಅಶ್ಲೀಲ ಚಿತ್ರಗಳನ್ನು ನೋಡುತ್ತಾ ಕೆಟ್ಟ ಕುತೂಹಲವನ್ನೂ ಬೆಳೆಸಿಕೊಳ್ಳುತ್ತಾರೆ. ಇನ್ನು ಇದರ ಇನ್ನೊಂದು ಮುಖ ಸೇಡಿನದ್ದು. ಸೇಡಿನಿಂದ ಎಷ್ಟೋ ಹೆಣ್ಣುಮಕ್ಕಳ ಮಾನ ಹರಾಜು ಹಾಕಿ ಅವರನ್ನು ಆತ್ಮಹತ್ಯೆಗೆ ಪ್ರಚೋದಿಸುವ ಮನೋಭಾವ ಯುವಕರಲ್ಲಿ ಹೆಚ್ಚಾಗುತ್ತಿದೆ.

ಸಂಜೆ ಹೊತ್ತು ವಾಯುವಿಹಾರಕ್ಕೆ ಹೋದಾಗ ಗಮನಿಸಿ. ರೈಲ್ವೆ ಟ್ರ್ಯಾಕ್‌ ಮೇಲೆ, ಉದ್ಯಾನವನದಲ್ಲಿ, ಎಲ್ಲಿ ನೋಡಿದರೂ ಹತ್ತಾರು ಹುಡುಗರು ಗುಂಪು ಕಟ್ಟಿಕೊಂಡು ಫೇಸ್‌ಬುಕ್‌ನಲ್ಲಿನ ಫೋಟೊಗಳನ್ನು ನೋಡುತ್ತಿರುತ್ತಾರೆ. ಈಗ ಸ್ಮಾರ್ಟ್‌ಫೋನ್‌ಗಳು ಎಲ್ಲರ ಕೈಗೆಟುಕುವಂತಾದ ಮೇಲೆ ಬಡವರಿರಲಿ, ಶ್ರೀಮಂತರಿರಲಿ ಎಲ್ಲರೂ ಫೇಸ್‌ಬುಕ್‌ನ ಸದಸ್ಯರಾಗಿಬಿಟ್ಟಿದ್ದಾರೆ. ಈಗ ಮಕ್ಕಳು, ಯುವಕರು ಹೀಗೆ ಎಲ್ಲೆಂದರಲ್ಲಿ ಅದರ ಮೇಲೆ ಬೆರಳಾಡಿಸುತ್ತ ಕುಳಿತಿರುವುದು ಸಾಮಾನ್ಯವಾಗಿಬಿಟ್ಟಿದೆ. ಅವರ ಮುಂದೆ ಓಡಾಡುವ ಹೆಣ್ಣುಮಕ್ಕಳ ಬಗ್ಗೆ ಯಾವ ಭಾವನೆ ಮೂಡಬಹುದು ಎಂದು ಯೋಚಿಸುವಂತಾಗಿದೆ. ಈ ಆತಂಕಕ್ಕೆ ಈ ಜಾಲತಾಣಗಳು ಎಡೆಮಾಡಿಕೊಟ್ಟಿದೆ. ಹೀಗಿರುವಾಗ ಒಂಟಿ ಮಹಿಳೆ ಮತ್ತು ಮಕ್ಕಳು ವಿಕೃತ ಮನಸ್ಸಿನವರಿಗೆ ಆಹುತಿಯಾಗುವ ಸಾಧ್ಯತೆ ಹೆಚ್ಚು. ಸರಿಯಾದ ದಿಸೆಯಲ್ಲಿ ಬಳಸಿದರೆ ಈ ಜಾಲತಾಣಗಳಿಂದ ಯಶಸ್ಸನ್ನು ಪಡೆಯಬಹುದು. ಇದರಿಂದಾಗುವ ಸಮಸ್ಯೆ ಬೃಹದಾಕಾರವಾಗಿ ಬೆಳೆಯುವ ಮೊದಲು ಇವುಗಳಿಗೆ ಕಡಿವಾಣ ಹಾಕುವುದು ಹೇಗೆ ಎಂಬುದರ ಬಗ್ಗೆ ಯೋಚಿಸಬೇಕು.
–ನಳಿನಿ ಟಿ, ಧಾರವಾಡ

ಅಪರಿಚಿತ ಲೋಕದಲ್ಲಿ ನಮ್ಮ ತನದ ಜಂಜಾಟ 
‘ವಿಷ’ ಸಣ್ಣ ಪ್ರಮಾಣದಲ್ಲಿ ಔಷಧಿಯಾಗಿಯೂ, ‘ಅಮೃತ’ ಬೃಹತ್‌ ಪ್ರಮಾಣದಲ್ಲಿ ವಿಷವಾಗಿಯೂ ಪರಿಣಮಿಸುತ್ತದೆ ಎಂದು ನಮ್ಮ ಪ್ರಾಚೀನ ಆರ್ಯುವೇದ ಶಾಸ್ತ್ರ ಘಂಟಾಘೋಷವಾಗಿ ಸಾರುತ್ತದೆ. ಹಾಗೆಯೇ ನಮ್ಮ ದಿನನಿತ್ಯದ ಜೀವನದಲ್ಲಿ ನಾವು ಏನನ್ನಾದರೂ ನೋಡಬಹುದು, ಅನುಭವಿಸಬಹುದು. ಇತಿ, ಮಿತಿಯಲ್ಲಿ ಏನನ್ನು ಜೀವನದಲ್ಲಿ ನಾವು ಅನುಭೋಗಿಸಿದರೂ ಆರೋಗ್ಯದಾಯಕವೇ. ಯಾವಾಗ ‘ವಿವೇಕಯುಕ್ತ’ನಾಗಬೇಕಾಗಿರುವ ಮಾನವಪ್ರಾಣಿ ಬಹುತೇಕ ಸಲ ಗೊತ್ತಿದ್ದೂ ಹಾಗೂ ಕೆಲವು ಸಲ ಗೊತ್ತಿಲ್ಲದೆಯೋ ತಾನು ಮಾಡಬೇಕಾದದ್ದನ್ನು ಎಲ್ಲೆ ಮೀರುತ್ತಾನೋ, ಆಗ ಅನಾಹುತಗಳು ಕಟ್ಟಿಟ್ಟ ಬುತ್ತಿ.

‘ಸ್ವಾತಂತ್ರ್ಯ’ ಇದು ಎಲ್ಲ ಜೀವರಾಶಿಗಳಿಗೂ ಬಹುಮುಖ್ಯ. ಒಂದೇ ಕಡೆ ಕೂಡಿಸಿಕೊಂಡು ತನ್ನ ಸ್ವಾತಂತ್ರ್ಯಹರಣಕ್ಕೆ ಒಳಗಾಗುವುದು ಯಾವ ಜೀವಿಗೂ ಕಿಂಚಿತ್‌ ಇಷ್ಟ ಇರುವುದಿಲ್ಲ. ಅದರಲ್ಲೂ ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಅನುಭವಿಸುವುದರಲ್ಲಿ ಅಗ್ರಶ್ರೇಣಿಯಲ್ಲಿರುವ ಮನುಷ್ಯನು ಹಿಂದಿನಿಂದ ಇವತ್ತಿನವರೆಗೆ ಅಭಿವ್ಯಕ್ತಿಯ ಪರಾಕಾಷ್ಠೆಯನ್ನು ತಲುಪಿದ್ದಾನೆ. ಹಿಂದೊಂದು ಕಾಲದಲ್ಲಿ ಒಂದು ನಿರ್ದಿಷ್ಟ ಪ್ರದೇಶದಲ್ಲಿರುವ ಒಂದು ವ್ಯಕ್ತಿಯು ಬೇರೊಂದು ನಗರದಲ್ಲೋ, ವಿದೇಶದಲ್ಲೋ ನೆಲೆಸಿರುವ ವ್ಯಕ್ತಿಯೊಡನೆ ಸಂವಹಿಸಬೇಕಾದ ಪಕ್ಷದಲ್ಲಿ ‘ಟ್ರಂಕ್‌ಕಾಲ್‌ಗಳ’ ಮೊರೆ ಹೋಗಬೇಕಿತ್ತು. ಆದರೆ ಈಗ ನಾವು ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಯಾರನ್ನಾದರೂ ಅಂತರ್ಜಾಲವಿದ್ದಲ್ಲಿ ಕ್ಷಣಮಾತ್ರದಲ್ಲಿ ಸಂಪರ್ಕಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳು ಇನ್ನೂ ಒಂದು ಹೆಜ್ಜೆ ಮುಂದೋಗಿ ಕಳೆದುಹೋದಂತಹ ನಮ್ಮ ಮಿತ್ರರನ್ನೋ ಅಥವಾ ಯಾವುದೇ ಹೊಸ ವ್ಯಕ್ತಿಯ ಸ್ನೇಹವನ್ನೋ ಸಾಮಾಜಿಕ ಜಾಲತಾಣಗಳಿಂದ ಕಣ್ಣಿಗೆ ಕಾಣಿಸಿಕೊಳ್ಳದೆಯೇ (ವರ್ಚುಯಲ್‌) ಕೆಲವೇ ನಿಮಿಷಗಳಲ್ಲಿ ಮಾಡಿಸಬಲ್ಲವು.

ಗಣಕಯಂತ್ರ ತಂತ್ರಜ್ಞಾನವು ಮಾನವನ ‘ಜ್ಞಾನಾರ್ಜನೆ’ಯನ್ನು ಪರಾಕಾಷ್ಠೆಗೆ ತಲುಪಿಸಿವೆ ಎಂದರೆ ನಿಜಕ್ಕೂ ಅದಕ್ಕಿಂತ ಸೋಜಿಗದ ವಿಷಯ ಬೇರೆ ಏನೂ ಇಲ್ಲ. ಇಂದು ನಾವು ಕೇವಲ ಮೊಬೈಲ್‌ನ ಗುಂಡಿ ಒತ್ತುವುದರಿಂದ ಒಂದು ಫೋಟೊವನ್ನು ಕ್ಲಿಕ್ಕಿಸಬಹುದು. ಘಟಾನಾವಳಿಗಳನ್ನು ಚಿತ್ರಿಸಿಕೊಳ್ಳಬಹುದು. ಪ್ರಪಂಚದಲ್ಲಿ ಎಲ್ಲೇ ಇದ್ದರೂ ಅವರಿಗೆ ಕಿರುಸಂದೇಶವನ್ನೋ (ಎಸ್‌.ಎಂ.ಎಸ್‌.) ಅಥವಾ ದೀರ್ಘಾವಧಿಯಾಗಿ ಇ–ಮೇಲ್ ಅನ್ನೋ ಕಳುಹಿಸಬಹುದು. ‘ವಿಜ್ಞಾನವು’ ಯಶಸ್ಸಿನ ದಾಪುಗಾಲು ಇಡುತ್ತಿರುವುದಲ್ಲಿ ಸಂಶಯವೇ ಇಲ್ಲ. ಆದರೆ ‘ಮಾನವನ ಜ್ಞಾನ’ ಅಥವಾ ‘ವಿವೇಕ’, ವಿಜ್ಞಾನದ ಜೊತೆಗೆ ಕಾಲಿರಿಸಿಕೊಂಡು ಹೋಗುತ್ತಿದೆಯೇ ಎನ್ನುವುದೇ ಇಂದಿನ ಯಜ್ಞಪ್ರಶ್ನೆಯಾಗಿದೆ.

ಕಾಣರಿಯದ (ವರ್ಚುಯಲ್‌) ಪ್ರಪಂಚದ ಮೋಡಿಯಲ್ಲಿ ಅಪರಿಚಿತರು ಪರಿಚಿತರಾಗುತ್ತಿದ್ದಾರೆ. ಮೊದಲು ಮಿತ್ರರಾಗಿ ಕೊನೆಗೆ ಪ್ರೇಮಿಗಳಾಗುತ್ತಿದ್ದಾರೆ. ತಮ್ಮ ಮುಖಚರ್ಯೆಯನ್ನು ಮರೆಮಾಚಿ, ಬೇರೆಲ್ಲ ತಮ್ಮ ವ್ಯಕ್ತಿತ್ವ ವಿಶೇಷಣಗಳನ್ನು ಅತಿರಂಜಿತವಾಗಿ ಅಂತರ್ಜಾಲದಲ್ಲಿ ಬಿಂಬಿಸಿ ತಾವೇ ಅತ್ಯಾಕರ್ಷಕ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ‘ನಿಜವಾಗಿಯೂ’ ಈ ಸಂಬಂಧಪಟ್ಟ ವ್ಯಕ್ತಿಗಳು ಮುಖಾಮುಖಿ ಭೇಟಿಯಾದಾಗ ತಮ್ಮ ನಿರೀಕ್ಷೆಗಳೆಲ್ಲ ಹುಸಿ ಎಂದೆನಿಸಿ, ಭ್ರಮನಿರಸನಕ್ಕೆ ಒಳಗಾಗುತ್ತಾರೆ. ಕೆಲವರು ಭೇಟಿಯಾಗದೆಯೂ ಮೋಸಕ್ಕೆ ಒಳಗಾಗಬಹುದು ಹಾಗೂ ಹೀಗೆ ‘ತ್ಯಜಿಸಲ್ಪಟ್ಟ ವ್ಯಕ್ತಿ’ಗಳು ಆತ್ಮಹತ್ಯೆಗೂ ಶರಣಾಗುವುದು ಮಾಮೂಲಿನ ವಿಷಯ ಆಗುತ್ತಲಿದೆ. ಇನ್ನೂ ಪ್ರೌಢಾವಸ್ಥೆಯನ್ನು ತಲುಪಿರದ ಮಕ್ಕಳೂ ಅಂತರ್ಜಾಲದಲ್ಲಿ ಅನಪೇಕ್ಷಿತ ಲೈಂಗಿಕ ವಿಷಯಗಳನ್ನು ನೋಡಬಹುದಾಗಿದೆ. ದೀರ್ಘ, ಅನಗತ್ಯ ಅಂತರ್ಜಾಲ ಬಳಕೆಯಿಂದ ತಮ್ಮ ಹೊರಗಿನ ‘ನಿಜ’ ಪ್ರಪಂಚದ ಸಂಪರ್ಕ ಕಳೆದುಕೊಳ್ಳುತ್ತಿದ್ದಾರೋ ಏನೋ ಅನಿಸುತ್ತಿದೆ.

ಒಂದು ಸಲ ಅಂತರ್ಜಾಲಕ್ಕೋ, ಮೊಬೈಲ್‌ಗೋ ಅವರು ಅಂಟಿಕೊಂಡರೆ ಊಟ, ತಿಂಡಿ, ಅಪ್ಪ, ಅಮ್ಮ, ಅಣ್ಣ, ತಂಗಿ, ತಮ್ಮ ಇನ್ಯಾರು ಅವರಿಗೆ ಬೇಡವೆನಿಸುತ್ತದೆ. ಹೊರಾಂಗಣದ ಕ್ರೀಡೆಗಳಿಗೆ ಪೂರ್ಣವಿರಾಮ ಹಾಗೂ ಒಂದೇ ಕಡೆ ಮೊಬೈಲ್‌ಗೋ, ಗಣಕ ಯಂತ್ರಕ್ಕೊ ನೆಟ್ಟ ನ್ಯೂನತೆಗಳನ್ನು ಸಹ ಎದುರಿಸಬೇಕಾದ ಸಂದರ್ಭ ಒದಗಿಬಂದಿದೆ. ಸಿವಿಲ್‌ ಇಂಜಿನಿಯರ್‌ ಆದ ನನ್ನ ಮಿತ್ರನೊಬ್ಬ ಮೊನ್ನೆ ಮಾತನ್ನಾಡುತ್ತ ನನಗೆ ಹೇಳಿದ. ಅವನು ರಾತ್ರಿ ಹತ್ತಕ್ಕೊ, ಹನ್ನೊಂದಕ್ಕೊ ಮನೆಗೆ ಹೋದರೂ, ಅವನ ಮಗ ಕಾಯುತ್ತಾ ಕೂರುತ್ತಾನಂತೆ. ಅವನಿಗಲ್ಲ, ‘ಅವನ ಮೊಬೈಲ್‌ಗಾಗಿ’, ಅದರಲ್ಲಿ ಆಟ ಆಡಲಿಕ್ಕೆ. ಒಂದು ಅರ್ಧ ಗಂಟೆಯಾದರೂ ಅದರಲ್ಲಿ ಆಟವಾಡಿದ ಮೇಲೆ ಅವನ ಮಗನು ನಿದ್ದೆಗೆ ಜಾರುತ್ತಾನಂತೆ. ಈಗ ನೀವೇ ಹೇಳಿ ‘ಜನ ಮರುಳೋ, ತಂತ್ರಜ್ಞಾನ ಮರುಳೋ?’ ಒಂದೇ ಮನೆಯಲ್ಲಿದ್ದುಕೊಂಡು ಒಬ್ಬರಿಗೊಬ್ಬರು ಕಿರುಸಂದೇಶವನ್ನೋ, ಕರೆಯನ್ನೋ ಮಾಡಿ ಒಬ್ಬರಿಗೊಬ್ಬರು ಸಂಪರ್ಕಿಸುತ್ತಿರುವುದನ್ನು ನಾವಿಂದು ಕಾಣುತ್ತಿದ್ದೇವೆ. ಇನ್ನೂ ಮುಂದೆ ಹೇಗೋ, ಏನೋ? ‘ಕಾಲಾಯ ತಸ್ಮೈ ನಮಃ’
 –ಡಾ. ಕೆ. ಎಚ್‌. ನಾಗಾರ್ಜುನ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.