ಗಾಂಧೀಜಿ ಎಂಬ ಹೆಸರು ಕೇಳಿದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಉದ್ದುದ್ದ ಭಾಷಣಗಳು, ಅವರ ನೀತಿಗಳನ್ನು ತಿಳಿಸುವ ಪರೋಪದೇಶ ಪಾಂಡಿತ್ಯದ ಒಣಮಾತುಗಳು. ನನ್ನ ಅನಿಸಿಕೆ ಪ್ರಕಾರ ‘ಮಹಾತ್ಮಗಾಂಧಿ’ ಎಂಬ ಪವಿತ್ರವಾದ ಹೆಸರನ್ನು ಹೇಳಲು ಯೋಗ್ಯತೆಯನ್ನು ಪಡೆಯಬೇಕಾದರೆ ನಾವು ಕನ್ನಡಿ ಮುಂದೆ ನಿಂತು ಅವರ ಆದರ್ಶಗಳನ್ನು ಎಷ್ಟರಮಟ್ಟಕ್ಕೆ ಪಾಲಿಸುತ್ತಿದ್ದೇವೆ ಎಂಬ ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕು. ನಾಲ್ಕು ದಶಕಗಳಿಂದ ವೈದ್ಯ ವೃತ್ತಿಯಲ್ಲಿರುವ ನಾನು ಪಾಲಿಸುತ್ತಿರುವ ‘ಗಾಂಧಿ ತತ್ವ’ಗಳು ಹೀಗಿವೆ.
ಗಾಂಧೀಜಿ ತಿಳಿಸಿದಂತೆ ಸರಳವಾದ ಉಡುಪು ಮತ್ತು ಜೀವನವನ್ನು ನಡೆಸುತ್ತಿರುವುದು. ಹೆಚ್ಚಿನ ಪ್ರಮಾಣದಲ್ಲಿ ಖಾದಿ ಉತ್ಪನ್ನಗಳನ್ನು ಖರೀದಿಸುವುದು. ಉಡುಪುಗಳನ್ನು ಖರೀದಿಸುವಾಗ ಅಷ್ಟೇ ಪ್ರಮಾಣದಲ್ಲಿ ನಿರ್ಗತಿಕರಿಗೆ ದಾನ ಮಾಡುವುದು. ಇದರಿಂದ ‘ಕೊಳ್ಳುಬಾಕತನ’ವು ತಹಬಂದಿಗೆ ಬರುವುದರೊಂದಿಗೆ ಸರಳತೆಯ ಜೀವನ ನಡೆಸಿದ ಖುಷಿ ನನಗಿದೆ. ದೇಶದ ಆಸ್ತಿಯಾದ ನೀರು, ವಿದ್ಯುತ್ ಮತ್ತು ಇಂಧನವನ್ನು ಅತ್ಯಂತ ಮಿತವಾಗಿ ಬಳಸುವುದೂ ನನ್ನ ಅಭ್ಯಾಸದಲ್ಲಿ ಒಂದು. ನಮ್ಮಲ್ಲಿ ಬರುವ ಅನೇಕ ರೋಗಿಗಳಿಗೆ ದುಶ್ಚಟಗಳ ಬಗ್ಗೆ, ವಿಶೇಷವಾಗಿ ಮದ್ಯಪಾನದ ತೊಂದರೆಗಳನ್ನು ವಿವರಿಸಿ ಅವರನ್ನು ಸರಿದಾರಿಗೆ ಬರಲು ಮಾರ್ಗದರ್ಶನ ಮಾಡುವುದರಲ್ಲಿ ಸಂತಸ ಕಾಣುತ್ತಿದ್ದೇನೆ.
ಸತ್ಯ ಮತ್ತು ಪ್ರಾಮಾಣಿಕತೆಗಳು ಗಾಂಧೀಜಿಯವರ ಶಕ್ತಿಯಾಗಿತ್ತು. ನಮ್ಮ ವೈದ್ಯ ವೃತ್ತಿಯು ಅನೇಕ ಕಡೆ ವ್ಯಾಪಾರೀಕರಣವಾಗಿ ಬದಲಾಗಿದ್ದರೂ ಸೇವಾ ವೃತ್ತಿಯಾಗಿ ಮುಂದುವರೆಸುವ ಕಾಯಕದಲ್ಲಿ ತೊಡಗಿಕೊಂಡಿದ್ದೇನೆ. ಬೇರೆ ಆಧುನಿಕ ವೈದ್ಯ ಪದ್ಧತಿಗಳು ವ್ಯಾಪಕವಾಗಿ ಬೆಳೆದಿದ್ದರೂ, ‘ಸ್ವದೇಶಿ’ ವೈದ್ಯ ಪದ್ಧತಿಯಾದ ‘ಆಯುರ್ವೇದ’ವನ್ನು ಸಮಾಜಕ್ಕೆ ತಲುಪಿಸುವಲ್ಲಿ ನಿರತನಾಗಿದ್ದೇನೆ. ವೈದ್ಯವೃತ್ತಿ, ಲೇಖನಗಳು, ಉಪನ್ಯಾಸಗಳು ಮತ್ತು ಪುಸ್ತಕ ರಚನೆಯ ಮೂಲಕ ‘ಸ್ವದೇಶಿ’ಯಾದ ಆಯುರ್ವೇದದ ಉತ್ಥಾನಕ್ಕಾಗಿ ಶ್ರಮಿಸುತ್ತಿದ್ದೇನೆ. ಈ ರೀತಿ ನಾವೆಲ್ಲರೂ ಪ್ರಯತ್ನಿಸಿದರೆ ಗಾಂಧೀಜಿಯನ್ನು ಹೊರಗೆ ಹುಡುಕಬೇಕಾಗಿಲ್ಲ, ಅವರು ನಮ್ಮ ಹೃದಯದ ಒಳಗೆ ಇರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.