ADVERTISEMENT

ಕನ್ನಡ ಪ್ರೀತಿ ನೂರು ರೀತಿ

ಪದ್ಮನಾಭ ಭಟ್ಟ‌
Published 29 ಅಕ್ಟೋಬರ್ 2014, 19:30 IST
Last Updated 29 ಅಕ್ಟೋಬರ್ 2014, 19:30 IST

‘ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು’ – ಅಪ್ಪಟ ಕನ್ನಡ ಪ್ರೀತಿಯನ್ನು ಸಾರುವ ಕುವೆಂಪು ಅವರ ಈ ಸಾಲುಗಳು ಕನ್ನಡ ‘ಸೇನೆ’ಗಳೇ ವಿಜೃಂಭಿಸುತ್ತಿರುವ ಈ ಕಾಲದಲ್ಲಿ ಬೇರೆಯದೇ ರೀತಿಯ ಅರ್ಥಸಾಧ್ಯತೆಗಳನ್ನು ಪಡೆದುಕೊಂಡಿದೆ. ಬಾವುಟವೆತ್ತಿ, ಘೋಷಣೆ, ಪ್ರತಿಭಟನೆ, ಧರಣಿಗಳಷ್ಟೇ ‘ಕನ್ನಡದ ಕಟ್ಟಾಳು’ವಿನ ಅರ್ಹತೆಗಳು ಎಂಬ ನಿರ್ಣಯಗಳು ಮುಖ್ಯವಾಹಿನಿಯಲ್ಲಿ ಪ್ರತಿಬಿಂಬಿತವಾಗುತ್ತಿರುವ ಸಂದರ್ಭವಿದು. ಆದರೆ ಕಟ್ಟಾಳುತನದಾಚೆಯ ನುಡಿಪ್ರೀತಿಯಿಂದ ಕಿರುದಾರಿಗಳಲ್ಲಿಯೇ ವಿಶ್ವಾಸದಿಂದ ಕನ್ನಡ ಕಟ್ಟುವ ಕೆಲಸದಲ್ಲಿ ನಿರತರಾದವರ ಸಂಖ್ಯೆಯೂ ಸಣ್ಣದಿಲ್ಲ. ಇಂತಹ ಕೆಲವು ಕನ್ನಡದ ಕಥನಗಳನ್ನು ಸ್ಮರಿಸಿಕೊಳ್ಳಲು ರಾಜ್ಯೋತ್ಸವ ಒಂದು ನೆಪವಷ್ಟೇ.

ಟಿ ಷರ್ಟ್‌ನಲ್ಲಿ ಕನ್ನಡ
ಆರ್‌ವಿ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಓದುತ್ತಿದ್ದ ಕಾರ್ತಿಕೇಯ, ಸುಧೀಂದ್ರ ಮತ್ತು ಗೋಕುಲ್‌ ಸ್ನೇಹಕ್ಕೆ ನಾಂದಿಯಾದದ್ದು ಅವರ ಕನ್ನಡ ಪ್ರೀತಿಯೇ. ಇದೇ ಪ್ರೀತಿಯಲ್ಲಿ  ಕನ್ನಡದ್ದೇ ಬರಹಗಳುಳ್ಳ ಒಂದು ಟಿ ಷರ್ಟ್‌ ಅನ್ನು ಆರ್ಡರ್‌ ಕೊಟ್ಟು ತಯಾರಿಸಿ ಅದನ್ನು ಕಾಲೇಜಿನ ಕನ್ನಡ ಸಂಘದ ಕಾರ್ಯಕ್ರಮದಲ್ಲಿ ಸಮವಸ್ತ್ರದಂತೆ ಧರಿಸತೊಡಗಿದರು. ಎಂಜಿನಿಯರಿಂಗ್‌ ಮುಗಿದು ವೃತ್ತಿಗೆ ಸೇರಿದ ಮೇಲೆ ಕಚೇರಿಗೂ ಇದೇ ಕನ್ನಡದ ಟಿ ಷರ್ಟ್‌ ಧರಿಸಿಕೊಂಡು ಹೋದಾಗ ಸಹೋದ್ಯೋಗಿಗಳಿಂದ ಮೆಚ್ಚುಗೆಯಷ್ಟೇ ಅಲ್ಲದೇ ಬೇಡಿಕೆಯೂ ಬಂತು.

ಕನ್ನಡಕ್ಕಾಗಿ ಹೊಸ ರೀತಿಯಲ್ಲಿ ಏನನ್ನಾದರೂ ಮಾಡಬೇಕು ಎಂಬ ಈ ಹುಡುಗರ ಹಂಬಲಕ್ಕೆ ಇದರಿಂದ ಒಂದು ಗುರಿ ಸಿಕ್ಕಂತಾಯಿತು. ಮೂವರೂ ಸೇರಿಕೊಂಡು ಕನ್ನಡದ ಸಾಲುಗಳುಳ್ಳ ಟಿ ಷರ್ಟ್‌ ತಯಾರಿಕೆಯನ್ನೇ ಒಂದು ಹವ್ಯಾಸವನ್ನಾಗಿ ಬೆಳೆಸಿಕೊಂಡರು. ಬೇಡಿಕೆ ಹೆಚ್ಚಿದಂತೆಲ್ಲ www.aziteez.com ಎಂಬ ಜಾಲತಾಣ ಆರಂಭಿಸಿ ಅಂತರ್ಜಾಲ ಮಾರಾಟ ಶುರು ಮಾಡಿದ್ದಾರೆ. ಕಾರ್ತಿಕೇಯ
ಟಿ ಷರ್ಟ್‌ಗಳ ವಿನ್ಯಾಸ ನೋಡಿಕೊಂಡರೆ, ಸುಧೀಂದ್ರ ಮತ್ತು ಗೋಕುಲ್‌ ಶೇಖರಣೆ, ಬಟವಾಡೆ ಕೆಲಸವನ್ನು ನಿರ್ವಹಿಸುತ್ತಾರೆ.
‘ಯಾವುದೇ ಭಾಷೆ ಬೆಳೆಯಬೇಕಾದರೆ, ಉಳಿಯಬೇಕಾದರೆ ಅದಕ್ಕೆ ‘ಆರ್ಥಿಕ ಮೌಲ್ಯ’ ದೊರಕಿಸಬೇಕಾಗುತ್ತದೆ. ಕನ್ನಡವನ್ನು ಕಲಿಯುವುದು ವೃತ್ತಿಯ ಪ್ರಶ್ನೆಯಾಗಬೇಕು. ಬದುಕಿನ ಪ್ರಶ್ನೆಯಾಗಬೇಕು. ಆಗ ಮಾತ್ರ ಕನ್ನಡದ ನಾಳೆಗಳು ಉಜ್ವಲವಾಗಬಲ್ಲವು.’ ಎನ್ನುವ ಈ ಹುಡುಗರು ತಮ್ಮದೇ ಆದ ರೀತಿಯಲ್ಲಿ ನಂಬಿಕೆಯನ್ನು ಖಚಿತಗೊಳಿಸುತ್ತಿದ್ದಾರೆ.

ತಮ್ಮ ಪ್ರಯತ್ನದ ಇನ್ನೊಂದು ಹೆಜ್ಜೆಯಾಗಿ ಕುಮಾರಸ್ವಾಮಿ ಲೇಔಟ್‌ನಲ್ಲಿ ಕನ್ನಡ ಟಿ ಷರ್ಟ್‌ಗಳ ಒಂದು ಮಳಿಗೆಯನ್ನೂ ತೆರೆದಿದ್ದಾರೆ. ವಿವಿಧ ಕವಿಗಳ ಕನ್ನಡ ಸಾಲುಗಳುಳ್ಳ ಟಿ ಷರ್ಟ್‌ಗಳು ಇಲ್ಲಿ ದೊರೆಯುತ್ತವೆ. ಈ ಮಳಿಗೆ  ನೋಡಿಕೊಳ್ಳಲು ಒಬ್ಬ ತಮಿಳು ಹುಡುಗನನ್ನು ನೇಮಿಸಿಕೊಳ್ಳಲಾಗಿದೆ. ಈ ಯೋಜನೆಯ ಹಿಂದಿನ ಮರ್ಮವನ್ನು ಕಾರ್ತಿಕೇಯ ವಿವರಿಸುವುದು ಹೀಗೆ– ‘ಉದ್ದೇಶಪೂರ್ವಕವಾಗಿಯೇ ನಮ್ಮ ಕನ್ನಡ ಟಿ ಷರ್ಟ್‌ ಮಳಿಗೆ ಉಸ್ತುವಾರಿಗೆ ತಮಿಳಿಗನನ್ನು ನೇಮಿಸಿಕೊಂಡಿದ್ದೇವೆ. ಗ್ರಾಹಕರ ಕರೆಯನ್ನೂ ಅವನೇ ನಿರ್ವಹಿಸಬೇಕಾಗುತ್ತದೆ. ಈಗ ಕನ್ನಡ ಅವನಿಗೆ ವೃತ್ತಿಯ ಅವಶ್ಯಕತೆ. ಅನ್ನದ ಅನಿವಾರ್ಯತೆ. ಆದ್ದರಿಂದ ಅವನು ಅನಿವಾರ್ಯವಾಗಿ ಕನ್ನಡ ಕಲಿಯುತ್ತಿದ್ದಾನೆ. ಕನ್ನಡಕ್ಕೆ ಆರ್ಥಿಕ ಮೌಲ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಇದು ನಮ್ಮ ಪುಟ್ಟ ಪ್ರಯತ್ನವಷ್ಟೇ’.

ಮುಂದೆ ಇದೇ ಮಳಿಗೆಯನ್ನು ‘ಕನ್ನಡ ಕೊಠಡಿ’ಯನ್ನಾಗಿ ಪರಿವರ್ತಿಸಿ ನಿರಂತರವಾಗಿ ಕನ್ನಡದ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುವ ಯೋಜನೆಯೂ ಅವರಿಗಿದೆ.

‘ನಮ್ಮ ಜಾಲತಾಣಕ್ಕೆ ಕನ್ನಡದ್ದೇ ಹೆಸರಿಟ್ಟರೆ ಅದು ‘ಸ್ಥಳೀಯ’ ಎಂದು ಬೇರೆ ಭಾಷಿಕರು ನಿರ್ಲಕ್ಷಿಸುವ ಅಪಾಯವಿತ್ತು. ಆದ್ದರಿಂದ ಬೇರೆ ರಾಜ್ಯ–ಭಾಷೆಯ ಜನರನ್ನೂ ತಲುಪಬೇಕು ಎಂಬ ಉದ್ದೇಶದಿಂದಲೇ ಆಂಗ್ಲ ಹೆಸರನ್ನು ಇಟ್ಟಿದ್ದೇವೆ’ ಎನ್ನುತ್ತಾರೆ ಇವರು.
ತಮ್ಮ ವೃತ್ತಿ ಮಧ್ಯದ ಬಿಡುವಿನ ಅವಧಿಯಲ್ಲಿ ಹೀಗೆ ಕನ್ನಡದ ಕೆಲಸವನ್ನು ಮಾಡುತ್ತಿರುವ www.aziteez.com ತಂಡ ಈ ಸಲದ ಕನ್ನಡ ರಾಜ್ಯೋತ್ಸವಕ್ಕಾಗಿ ‘ನಡೆ ಕನ್ನಡ ನುಡಿ ಕನ್ನಡ’, ‘ಕಂಡೆ ಕನ್ನಡ ಕನಸೊಂದನು’, ‘ಧರಿಸು ಕನ್ನಡ ಆದರಿಸು ಕನ್ನಡವ’ ಎಂಬ ಘೋಷವಾಕ್ಯಗಳಡಿಯಲ್ಲಿ ವಿಶೇಷ ವಿನ್ಯಾಸಗಳ ಟಿ ಷರ್ಟ್‌ಗಳನ್ನು ಬಿಡುಗಡೆ ಮಾಡಿದೆ. ಯುವ ಕಲಾವಿದರಾದ ವಾಗೀಶ ಹೆಗಡೆ ಮತ್ತು ವೆಂಕಟ್ರಮಣ ಭಟ್‌ ಅವರ ಚಿತ್ರಗಳು ನುಡಿಯ ಸೊಬಗಿಗೆ ರೇಖೆಯ ಮೆರುಗು ನೀಡಿವೆ. ಜಾಲತಾಣಕ್ಕೆ ಭೇಟಿ ನೀಡಿ ನೀವೂ ಕನ್ನಡಧಾರಿಗಳಾಗಬಹುದು.

ಗಾಂಚಾಲಿ ಬಿಡಿ ಕನ್ನಡ ಮಾತಾಡಿ
ಪವನ್‌ ಹುಟ್ಟಿ ಬೆಳೆದದ್ದೆಲ್ಲ ಮೈಸೂರಿನಲ್ಲಿ. ತಾವು ಬೆಳೆದ ವಾತಾವರಣದಲ್ಲಿ ವ್ಯವಹಾರವೆಲ್ಲ ಕನ್ನಡದಲ್ಲಿಯೇ ಘಟಿಸುತ್ತಿದ್ದುದರಿಂದ ‘ಕನ್ನಡ ಉಳಿಸಬೇಕು’ ಎಂಬುದು ಅಷ್ಟು ಗಂಭೀರವಾದ ಸಮಸ್ಯೆ ಎಂದು ಅವರಿಗೆ ಅನಿಸಿರಲೇ ಇಲ್ಲ. ಆದರೆ 2008ರಲ್ಲಿ ಎಂಜಿನಿಯರಿಂಗ್‌ ಮುಗಿಸಿ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಾಗ ಬಹಳ ಜನರು ಕನ್ನಡ ಬಂದರೂ ಕನ್ನಡದಲ್ಲಿ ಮಾತನಾಡುವುದಿಲ್ಲ, ಅದು ತಮ್ಮ ಪ್ರತಿಷ್ಠೆಗೆ ಕುಂದು ಎಂದು ಭಾವಿಸುತ್ತಾರೆ ಎಂಬ ಅಂಶ ಪವನ್‌ ಅವರನ್ನು ಬಾಧಿಸತೊಡಗಿತು.

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಆಗಷ್ಟೇ ಪ್ರವರ್ಧಮಾನಕ್ಕೆ ಬರತೊಡಗಿತ್ತು. ಕನ್ನಡದ ಜಾಗೃತಿಗೆ ಇದನ್ನೇ ಯಾಕೆ ಬಳಸಿಕೊಳ್ಳಬಾರದು ಎಂಬ ಯೋಚನೆ ಮನಸ್ಸಿಗೆ ಬಂದದ್ದೇ 2009ರಲ್ಲಿ ಅವರು ‘ಗಾಂಚಾಲಿ ಬಿಡಿ ಕನ್ನಡ ಮಾತಾಡಿ’ ಎಂಬ ವಿಚಿತ್ರ ಹೆಸರಿನ ಪುಟವನ್ನು ಫೇಸ್‌ಬುಕ್‌ನಲ್ಲಿ ಆರಂಭಿಸಿಯೇ ಬಿಟ್ಟರು. ಇದಕ್ಕೆ ಅವರ ನಿರೀಕ್ಷೆಯನ್ನೂ ಮೀರಿ ಮೆಚ್ಚುಗೆ (ಲೈಕ್ಸ್‌)ಗಳು ದೊರಕಿದವು. ಈ ಪುಟ ಆರಂಭವಾದ ಆರೇ ತಿಂಗಳಲ್ಲಿ ಸುಮಾರು 15 ಸಾವಿರ ಜನರು ಮೆಚ್ಚುಗೆಯ ಮೂಲಕ ಬೆಂಬಲ ವ್ಯಕ್ತಪಡಿಸಿದರು.

ಇದೇ ನವೆಂಬರ್‌ 22ಕ್ಕೆ ‘ಗಾಂಚಾಲಿ ಬಿಡಿ ಕನ್ನಡ ಮಾತಾಡಿ’ ಪುಟ 5 ವರ್ಷಗಳನ್ನು ಪೂರೈಸುತ್ತಿದೆ. ಈಗಾಗಲೇ 1. 61 ಲಕ್ಷಕ್ಕೂ ಅಧಿಕ ಜನರು ಸೇರಿಕೊಂಡಿದ್ದಾರೆ. ಇದು ಫೇಸ್‌ಬುಕ್‌ ಜಾಲತಾಣದಲ್ಲಿರುವ ಕನ್ನಡದ ಅತ್ಯಂತ ದೊಡ್ಡ ಸಮುದಾಯ.

‘‘ಗಾಂಚಾಲಿ’ ಎಂಬುದು ಪರಮಾಪ್ತ ವಲಯದಲ್ಲಿ ಸಲುಗೆಯಲ್ಲಿ ಬಳಕೆಯಾಗುವ ಪದ. ಸುಲಭವಾಗಿ ಎಲ್ಲರಿಗೂ ಹತ್ತಿರವೆನಿಸುತ್ತದೆ. ಅಲ್ಲದೇ ಗಾಂಚಾಲಿ ಬಿಡಿ ಕನ್ನಡ ಮಾತಾಡಿ ಎಂಬುದರಲ್ಲಿಯೇ ಒಂದು ರಿದಂ ಇದೆ ನೋಡಿ. ಈ ಪುಟ ಅಷ್ಟು ಜನಪ್ರಿಯವಾಗಲು ಕಾರಣವೇ ಅದರ ಹೆಸರು’’ ಎನ್ನುತ್ತಾರೆ ಪವನ್‌.

ಸಾಮಾಜಿಕ ಜಾಲತಾಣದಲ್ಲಿ ‘ಗಾಂಚಾಲಿ ಬಿಡಿ..’ ಪುಟ ಮುಖ್ಯವಾಗಿ ಮೂರು ವಿಧದಲ್ಲಿ ಕನ್ನಡದ ಕೆಲಸ ಮಾಡುತ್ತಿದೆ. ಮೊದಲನೆಯದು ಕನ್ನಡದ ಸಾಂಸ್ಕೃತಿಕ ಐತಿಹಾಸಿಕ ಮಾಹಿತಿಗಳನ್ನು ಪ್ರಸಾರ ಮಾಡುವುದು. ಜಾನಪದ, ಸಾಹಿತ್ಯಿಕ, ವ್ಯಕ್ತಿ–ಘಟನೆಗಳ ಬಗ್ಗೆ ಈ ಪುಟದಲ್ಲಿ ನಿರಂತರವಾಗಿ ಮಾಹಿತಿಗಳನ್ನು ಪ್ರಸಾರ ಮಾಡಲಾಗುತ್ತದೆ. ಎರಡನೆಯದಾಗಿ ಸಮಕಾಲೀನ ಕನ್ನಡ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು. ಅಂದರೆ ಕನ್ನಡದ ನಾಟಕಗಳು, ಕಿರುಚಿತ್ರಗಳು, ಹೊಸ ಬಗೆಯ ಸಂಗೀತ ಹೀಗೆ ಕನ್ನಡದ ಸಮಕಾಲೀನ ಚಟುವಟಿಕೆಗಳ ಬಗ್ಗೆ ಪ್ರಚಾರ ನೀಡುವುದು. ಮೂರನೆಯದಾಗಿ, ಗ್ರಾಹಕ ಜಗತ್ತಿನಲ್ಲಿ ಕನ್ನಡ ಬಳಕೆಯ ಬಗ್ಗೆ ಅರಿವು ಮೂಡಿಸುವುದು. ಸಾಮಾನ್ಯವಾಗಿ ದೈನಂದಿನ ವ್ಯಾಪಾರ ನಡೆಸುವ ಮಾಲ್‌ಗಳು, ಹೋಟೆಲ್‌ಗಳಲ್ಲಿ ಕನ್ನಡ ಬಂದರೂ ಇಂಗ್ಲಿಷಿನಲ್ಲಿಯೇ ಮಾತನಾಡುತ್ತಿರುತ್ತಾರೆ. ಅದನ್ನು ನಿಲ್ಲಿಸಿ ದಿನನಿತ್ಯದ ವ್ಯವಹಾರದಲ್ಲಿ ಕನ್ನಡವನ್ನು ಬಳಸಬೇಕು ಎಂಬುದರ ಬಗ್ಗೆ ಅರಿವು ಮೂಡಿಸುವುದು.

ಇದಲ್ಲದೇ ಕನ್ನಡದ ನಾಳೆಗಾಗಿಯೂ ಪವನ್‌ ಅವರು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಅಂತರ್ಜಾಲದಲ್ಲಿ ಹರಿದು ಹಂಚಿ ಹೋಗಿರುವ ಕನ್ನಡದ ಬ್ಲಾಗ್‌ಗಳು, ಮಾಹಿತಿ, ಚಿತ್ರಗಳು ಎಲ್ಲವೂ ಒಂದೇ ಕಡೆ ಸಂಗ್ರಹಿಸುವ ಜಾಲತಾಣವೊಂದನ್ನು ಅಭಿವೃದ್ಧಿಪಡಿಸಬೇಕು. ಕನ್ನಡದ ಕಿರುಚಿತ್ರಗಳನ್ನೆಲ್ಲ ಒಟ್ಟಿಗೇ ಸೇರಿಸಬೇಕು. ಅಲ್ಲದೇ ಕರ್ನಾಟಕದಲ್ಲಿನ ಅಷ್ಟಾಗಿ ಪರಿಚಿತವಲ್ಲದ ಪ್ರವಾಸಿ ಸ್ಥಳಗಳ ಬಗ್ಗೆಯೂ ಒಂದೇ ಕಡೆ ಸಕಲ ಮಾಹಿತಿ ದೊರಕಿಸುವಂತಹ ಓದುಗರೂ ಪಾಲ್ಗೊಳ್ಳಲು ಸಾಧ್ಯವಿರುವ ಜಾಲತಾಣವನ್ನು ಅಭಿವೃದ್ಧಿಪಡಿಸಬೇಕು... ಹೀಗೆ ತಮ್ಮ ಕನ್ನಡಪ್ರೀತಿ ವಿಸ್ತರಿಸಿಕೊಳ್ಳುವ ಹಂಬಲವನ್ನು ಹೊಂದಿದ್ದಾರೆ ಪವನ್‌.

ADVERTISEMENT

ಅಂಗಡಿಯಲ್ಲಿ ಕನ್ನಡ ನುಡಿ
‘ತನ್ನ ಮಾತೃಭಾಷೆಯಲ್ಲಿ ಮಾರುಕಟ್ಟೆ ಸೇವೆಗಳನ್ನು ಪಡೆಯುವುದು ಪ್ರತಿ ಗ್ರಾಹಕನ ಹಕ್ಕು. ಇದಕ್ಕೆ ಪ್ರಬಲ ಕಾನೂನಿನ ಬೆಂಬಲ ದೊರಕದಿದ್ದಾಗ ಗ್ರಾಹಕರೇ ತಮ್ಮ ಧ್ವನಿಯನ್ನು ಎತ್ತಬೇಕಾಗುತ್ತದೆ. ‘ಗ್ರಾಹಕನೇ ಪ್ರಭು’ ಎಂಬ ವ್ಯಾಪಾರಿ ನೀತಿಯೇ ಮುಖ್ಯವಾಗುತ್ತಿರುವ ಇಂದಿನ ದಿನಗಳಲ್ಲಿ ಅವನಿಗೆ ತನ್ನ ಹಕ್ಕುಗಳನ್ನು ಪಡೆದುಕೊಳ್ಳುವುದು ಅಸಾಧ್ಯವೇನೂ ಅಲ್ಲ. ಆದರೆ ತನ್ನ ಅವಶ್ಯಕತೆಯನ್ನು ಸೇವಾಪೂರೈಕೆದಾರರಿಗೆ ಸರಿಯಾಗಿ ಮನವರಿಕೆ ಮಾಡಿಕೊಡಬೇಕು ಅಷ್ಟೆ’ – ‘ಅಂಗಡಿಯಲ್ಲಿ ಕನ್ನಡ ನುಡಿ’ ಹುಟ್ಟಿಕೊಂಡ ಕಾರಣ, ಕಾರ್ಯಚಟುವಟಿಕೆಯ ಉದ್ದೇಶಗಳು ಇವೇ ಆಗಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಇಂಥದ್ದೇ ವಿಷಯದ ಕುರಿತು ಚರ್ಚೆ ನಡೆಸುತ್ತಿದ್ದ ಜಯಂತ್ ಸಿದ್ಮಲ್ಲಪ್ಪ, ರವಿ ಸಾವ್ಕಾರ್‌, ವಸಂತ್‌ ಶೆಟ್ಟಿ, ಅರುಣ್‌ ಜಾವಗಲ್‌, ಅಮರನಾಥ್‌, ಶಿವಶಂಕರ್‌, ಗಣೇಶ್‌ ಚೇತನ್‌ ಇನ್ನೂ ಕೆಲವು ಗೆಳೆಯರು ಸೇರಿಕೊಂಡು ಮೊದಲಿಗೆ ‘ಅಂಗಡಿಯಲ್ಲಿ ಕನ್ನಡ ನುಡಿ’ ಎಂಬ ಕೈಪಿಡಿಯನ್ನು ಮುದ್ರಿಸಿ ಸುಮಾರು 12 ಸಾವಿರ ಜನರಿಗೆ ಹಂಚಿದ್ದಾರೆ. 2004ರಲ್ಲಿ ಮಾರುಕಟ್ಟೆಯಲ್ಲಿ ಕನ್ನಡ ಜಾರಿಗೊಳಿಸುವ ಚಟುವಟಿಕೆಯಲ್ಲಿ ತೊಡಗಿದ ‘ಅಂಗಡಿಯಲ್ಲಿ ಕನ್ನಡ ನುಡಿ’ ತಂಡ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿಯೂ ಖಾತೆ ಹೊಂದಿದೆ. ಅಲ್ಲಿ 5000ಕ್ಕೂ ಅಧಿಕ ಜನರು ಈ ಗುಂಪಿನ ಸದಸ್ಯರಾಗಿದ್ದಾರೆ. ದಿನದಿನವೂ ನವೀಕರಣಗೊಳ್ಳುತ್ತಿರುವ ಆಧುನಿಕ ಜಗತ್ತನ್ನು ಒಳಗೊಳ್ಳದೇ ಕನ್ನಡ ಉಳಿಯಲಾರದು ಎಂಬ ಎಚ್ಚರದಲ್ಲಿ ಈ ತಂಡ ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ.

‘ಆರಂಭದಲ್ಲಿ ಬೆಂಗಳೂರಿನಲ್ಲಿ ಕೆಲವೇ ಕೆಲವು ಎಫ್‌ಎಂ ಚಾನೆಲ್‌ಗಳಿದ್ದವು. ಆಗ ವಾರಕ್ಕೆ ಎರಡು ಗಂಟೆಗಳ ಕಾಲ ಮಾತ್ರ ಕನ್ನಡದ ಹಾಡುಗಳನ್ನು ಪ್ರಸಾರ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಕನ್ನಡ ಹಾಡುಗಳಿಗೆ ಮಾರುಕಟ್ಟೆಯಿದೆ ಎಂಬ ಸಂಗತಿಯೇ ಅವುಗಳಿಗೆ ಗೊತ್ತಿರಲಿಲ್ಲ. ಆಗ ನಾವು ಪ್ರತೀ ಎಫ್‌ಎಂ ಚಾನೆಲ್‌ ಕಚೇರಿಗೆ ತೆರಳಿ ಕನ್ನಡ ಹಾಡುಗಳನ್ನು ಪ್ರಸಾರ ಮಾಡಿಯೂ ಮಾರುಕಟ್ಟೆಯಲ್ಲಿ ಯಶಸ್ವಿಯಾಗಬಹುದು ಎಂಬುದನ್ನು ಮನವರಿಕೆ ಮಾಡಿಕೊಟ್ಟೆವು. ಇಂದು ಶೇ 75ರಷ್ಟು ಎಫ್ಎಂಗಳು ಕನ್ನಡ ಹಾಡುಗಳನ್ನು ಪ್ರಕಟ ಮಾಡುತ್ತಿವೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ‘ಅಂಗಡಿಯಲ್ಲಿ ಕನ್ನಡ ನುಡಿ’ ತಂಡದ ಸದಸ್ಯ ಜಯಂತ್‌.

ಆಂಡ್ರಾಯಿಡ್್‌ ಆಪ್‌ನಲ್ಲಿ ಕನ್ನಡ, ಏರ್‌ಪೋರ್ಟ್‌ನಲ್ಲಿ ಕನ್ನಡದಲ್ಲಿ ಸೂಚನೆಗಳು ಮತ್ತು ಕನ್ನಡ ಪತ್ರಿಕೆಗಳ ಲಭ್ಯತೆ, ಸರ್ಕಾರಿ ಜಾಲತಾಣಗಳಲ್ಲಿ ಕನ್ನಡ ಮಾಹಿತಿ, ಎಟಿಎಂಗಳಲ್ಲಿ ಬ್ಯಾಂಕ್‌ಗಳಲ್ಲಿ ಕನ್ನಡ, ಹೋಟೆಲ್‌ಗಳಲ್ಲಿ ಕನ್ನಡ ಮೆನು, ಮಾಲ್‌ಗಳಲ್ಲಿ ಕನ್ನಡದ ಹಾಡುಗಳ ಪ್ರಸಾರ, ಪಿವಿಆರ್‌ಗಳಲ್ಲಿ ಕನ್ನಡ ಸಿನಿಮಾಗಳ ಮಾಹಿತಿ ಹೀಗೆ ಕಳೆದ 10 ವರ್ಷಗಳಲ್ಲಿ ಈ ತಂಡ ಯಶಸ್ವಿಯಾಗಿ ನಿರ್ವಹಿಸಿದ ಕನ್ನಡ ಜಾರಿ ಕತೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಈ ತಂಡ ಗ್ರಾಹಕ ಜಗತ್ತಿನಲ್ಲಿ ಕನ್ನಡ ಜಾರಿಯನ್ನು ಒಂದು ಅಭಿಯಾನದಂತೆಯೇ ನಡೆಸುತ್ತದೆ. ಮೊದಲನೇ ಹಂತದಲ್ಲಿ ಗ್ರಾಹಕರಿಂದಲೇ ಸೇವಾ ಪೂರೈಕೆದಾರ ಕಂಪೆನಿಗೆ ಪತ್ರವನ್ನು ಬರೆಸುತ್ತದೆ. ಅದಕ್ಕೆ ಆ ಸಂಸ್ಥೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸದಿದ್ದರೆ ಸಮೂಹ ಸಹಿ ಅಭಿಯಾನವನ್ನು ನಡೆಸಿ ಆ ಮನವಿಯನ್ನು ಸಂಸ್ಥೆಗೆ ತಲುಪಿಸುತ್ತದೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿನ ಖಾತೆಗಳ ಮೂಲಕವೂ ಮನವಿ ಸಲ್ಲಿಸಲಾಗುತ್ತದೆ.

ತನ್ನ ಕಾರ್ಯವ್ಯಾಪ್ತಿಯನ್ನು ಇನ್ನಷ್ಟು ಬಲಪಡಿಸಲು ‘ಅಂಗಡಿಯಲ್ಲಿ ಕನ್ನಡ ನುಡಿ ತಂಡ’ ಈ ರಾಜ್ಯೋತ್ಸವದ ಸಂದರ್ಭದಲ್ಲಿ ‘ಕನ್ನಡ ಗ್ರಾಹಕರ ಕೂಟ’ ಎಂಬ ಜಾಲತಾಣವನ್ನು ಆರಂಭಿಸಲು ಸಿದ್ಧಗೊಂಡಿದೆ. www.kannadagrahakarakoota.org ಈ ಮೂಲಕ ಎಲ್ಲ ಗ್ರಾಹಕರೂ ಭಾಷೆಗೆ ಸಂಬಂಧಿಸಿದ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡು ಚರ್ಚಿಸಲು ಒಂದು ಪ್ರಬಲ ವೇದಿಕೆ ಸಿದ್ಧಪಡಿಸುವುದು ಇದರ ಉದ್ದೇಶ.

ಅಲ್ಲದೇ ಔಷಧಗಳ ಜತೆಯಲ್ಲಿನ ಸೂಚನೆಗಳನ್ನು ಕನ್ನಡದಲ್ಲಿಯೇ ನೀಡಬೇಕು ಎಂಬ ಕುರಿತು ಕಾನೂನಿನ ರೀತಿ ಹೋರಾಟ ನಡೆಸುವ ಉದ್ದೇಶವೂ ಈ ತಂಡಕ್ಕಿದೆ. ಇದಕ್ಕಾಗಿಯೇ ಈ ತಂಡದ ಜಯಂತ್‌ ಮತ್ತು ರವಿ ಸಾವ್ಕಾರ್‌ ಒಂದು ವರ್ಷದ ‘ಗ್ರಾಹಕ ಕಾನೂನು’ ಕೋರ್ಸ್‌ ಅನ್ನು ಮುಗಿಸಿದ್ದಾರೆ.

‘ಹೊನಲು’ ಮಿಂಬಾಗಿಲು
ಕನ್ನಡದಲ್ಲಿ ವಿಜ್ಞಾನದ ಬರವಣಿಗೆ ತೀರಾ ಕಡಿಮೆ. ಒಂದೊಮ್ಮೆ ಅದನ್ನು ಬರೆಯಲು ಹೋದರೂ ವಿಜ್ಞಾನದ ಪಾರಿಭಾಷಿಕ ಶಬ್ದಗಳು ಕಬ್ಬಿಣದ ಕಡಲೆಯಂತೆ ಕಾಡುತ್ತವೆ. ಕೆಲವು ಶಬ್ದಗಳು ಕ್ಲಿಷ್ಟಕರವಾಗಿ ಓದಲೂ ಬರೆಯಲೂ ಕಷ್ಟವೆನ್ನಿಸುತ್ತದೆ. ಇದರಿಂದ ಆ ಬರಹಗಳು ಯಾರನ್ನು ತಲುಪಬೇಕೊ ಅವರನ್ನು ತಲುಪುತ್ತಿಲ್ಲ. ಭಾಷೆಯಲ್ಲಿನ ಈ ಕಂದರ ಮತ್ತು ಕನ್ನಡವನ್ನು ಇನ್ನಷ್ಟು ಸರಳಗೊಳಿಸಿ ಮರುಕಟ್ಟುವ ಉದ್ದೇಶದಿಂದ ಹುಟ್ಟಿಕೊಂಡ ವೆಬ್‌ಸೈಟ್‌ ‘ಹೊನಲು’. ಅಂದಹಾಗೆ ಹೊನಲು ತಂಡ ತನ್ನ ತಾನು ಕರೆದುಕೊಳ್ಳುವುದು ‘ಮಿಂಬಾಗಿಲು’ ಎಂದು.

ಕನ್ನಡವನ್ನು ವಿಭಿನ್ನವಾಗಿ ಕಟ್ಟುವ ಈ ಪ್ರಯತ್ನದ ಹಿಂದಿರುವವರೆಲ್ಲ ಎಂಜಿನಿಯರಿಂಗ್ ವೃತ್ತಿಯಲ್ಲಿರುವವರು ಎಂಬುದು ಇನ್ನೊಂದು ವಿಶೇಷ.

ಬರತ್ ಕುಮಾರ್‌, ಕಿರಣ್ ಬಾಟ್ನಿ, ಪ್ರಶಾಂತ ಸೊರಟೂರ, ಪ್ರಿಯಾಂಕ್ ಕತ್ತಲಗಿರಿ, ರತೀಶ ರತ್ನಾಕರ, ಸಂದೀಪ್ ಕಂಬಿ, ವಿವೇಕ್ ಶಂಕರ್, ಅನ್ನದಾನೇಶ್ ಸಂಕದಾಳ– ಇವರೇ ಹೊನಲು ತಂಡದ ಹಿಂದಿನ ಕೈಗಳು. ಈ ಮಿಂಬಾಗಿಲಲ್ಲಿ ಪ್ರಕಟಿಸುವ ಬರಹಗಳನ್ನು ಅರಿಮೆ, ನಡೆನುಡಿ, ನಲ್ಬರಹ, ನಾಡು ಹೀಗೆ ನಾಲ್ಕು ಪ್ರಕಾರದ ಬರಹಗಳಾಗಿ ವಿಂಗಡಿಸಲಾಗಿದೆ. ಅರಿಮೆ ವಿಜ್ಞಾನ ಬರಹಗಳಿಗೆ ಮೀಸಲು. ನಡೆನುಡಿಯಲ್ಲಿ ಸಂಸ್ಕೃತಿ, ಜೀವನಶೈಲಿ ಕುರಿತ ಬರಹಗಳು, ನಲ್ಬರಹದಲ್ಲಿ ಸಾಹಿತ್ಯ ಮತ್ತು ನಾಡು ವಿಭಾಗದಲ್ಲಿ ರಾಜಕೀಯ ವಿಷಯಗಳ ಕುರಿತಾದ ಬರಹಗಳನ್ನು ಪ್ರಕಟಿಸಲಾಗುತ್ತದೆ.

ಕನ್ನಡವನ್ನು ಸರಳಗೊಳಿಸುವ ಡಿ.ಎನ್.ಶಂಕರಬಟ್ಟ ಅವರ ಕನ್ನಡವನ್ನೇ ಬಳಸಲಾಗಿದೆ. ಇದರಲ್ಲಿ ಮಹಾಪ್ರಾಣದ ಬಳಕೆ ಇರುವುದಿಲ್ಲ. ನಾವು ಮಾತನಾಡುವಾಗ ಶೇ 98 ಮಹಾಪ್ರಾಣ ಬಳಕೆ ಮಾಡುವುದಿಲ್ಲ. ಮಾತಿನಲ್ಲಿ ಇಲ್ಲದೆ ಇರುವುದು ಬರವಣಿಗೆಯಲ್ಲಿ ಏಕೆ? ಮಹಾಪ್ರಾಣಗಳನ್ನು ತೆಗೆಯುವುದರಿಂದ ಕನ್ನಡ ಇನ್ನಷ್ಟು ಸರಳವಾಗುತ್ತದೆ ಎಂಬುದು ಸಮರ್ಥನೆ.

ಅಲ್ಲದೇ ಕನ್ನಡದಲ್ಲಿನ ಸಂಸ್ಕೃತ ಮತ್ತು ಕಷ್ಟಕರ ಪದಗಳಿಗೆ ಪರ್ಯಾಯವಾಗಿ ಸರಳ ಕನ್ನಡ ಪದಗಳ ಬಳಕೆಯನ್ನು ‘ಹೊನಲು’ ತಂಡ ಒಂದು ವ್ರತದಂತೆ ಪಾಲಿಸಿಕೊಂಡು ಬರುತ್ತಿದೆ. ಆಸ್ಟ್ರಾನಮಿಗೆ ಸಂಸ್ಕೃತದ ಖಗೋಳಶಾಸ್ತ್ರದ ಬದಲಾಗಿ ಬಾನರಿಮೆ, ಸ್ಪೇಸ್‌ಕ್ರಾಫ್ಟ್‌ಗೆ ವ್ಯೋಮನೌಕೆ ಬದಲಾಗಿ ಬಾನಬಂಡಿ, ಅಪ್‌ವಾರ್ಡ್‌ಗೆ ಊರ್ಧ್ವಮುಖ ಬದಲಾಗಿ ಮೆಲ್ಗಡೆಗೆ, ರೊಟೆಶನಲ್‌ ಆಕ್ಸಿಸ್‌ಗೆ ಪರಿಭ್ರಮಣಾಕ್ಷದ ಬದಲಾಗಿ ಸುತ್ತುಗೆರೆ ಹೀಗೆ ಇವರು ಕಟ್ಟಿದ ಅಪ್ಪಟ ಕನ್ನಡ ಪದಗಳಿಗೆ ಲೆಕ್ಕವೇ ಇಲ್ಲ.

‘ಹೊನಲು’ ಭಾಷಾ ಪ್ರಯೋಗವನ್ನು ಒಪ್ಪಿಕೊಂಡು ಬರೆಯುವ ಲೇಖಕರ ಸಂಖ್ಯೆಯೂ ಕಡಿಮೆಯೇನಿಲ್ಲ. ‘ಈಗಾಗಲೇ ನೂರಕ್ಕೂ ಹೆಚ್ಚು ಲೇಖಕರು ಹೊನಲು ಜಾಲತಾಣಕ್ಕೆ ಬರೆಯುತ್ತಿದ್ದಾರೆ. ಅದರಲ್ಲಿಯೂ ಅರಿಮೆ (ವಿಜ್ಞಾನ) ವಿಭಾಗದಲ್ಲಿ ಬರುತ್ತಿರುವಷ್ಟು ಹೊಸ ರೀತಿಯ ಮತ್ತು ಒಳ್ಳೆಯ ಬರವಣಿಗೆಗಳು ಬೇರೆಯಲ್ಲಿಯೂ ದೊರಕುವುದಿಲ್ಲ’ ಎಂದು ವಿಶ್ವಾಸದಿಂದ ಹೇಳುತ್ತಾರೆ ‘ಹೊನಲು’ ಅಣಿಗಾರ (ಸಂಪಾದಕ) ಪ್ರಶಾಂತ ಸೊರಟೂರ.

ಎಲ್ಲ ರೀತಿಯ ವಿಜ್ಞಾನ ಉನ್ನತ ಶಿಕ್ಷಣವನ್ನೂ ಸರಳ ಕನ್ನಡದಲ್ಲಿ ಕಲಿಯುವಂತಾಗಬೇಕು ಎಂಬುದು ಇವರ ಆಶಯ. www.honalu.net ಭೇಟಿ ನೀಡಿದರೆ ಹೊನಲಿನ ತಂಪನ್ನು ನೀವೂ ಸವಿಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.