‘ಭೇಷಾಗಿ ಹೊಡಿರಿ’
ನಮ್ಮದು ಸೋಮಲಾಪುರ ಎಂಬ ಕುಗ್ರಾಮ. ನಾನು ಓದಿದ್ದು ಏಕಮೇವಾದ್ವಿತೀಯ ಗಿಡ್ಡ ವೀರಯ್ಯ ಮಾಸ್ತರ ಕೈಯಲ್ಲಿ. ಗಿಡ್ಡಗೆ ಇದ್ದ ವೀರಯ್ಯ ಮಾಸ್ತರರದು ‘ಉರಿಗೈ’. ಭಾರಿ ಮುಂಗೋಪಿ. ಕನ್ನಡ, ಭೂಗೋಲ ಮತ್ತು ಗಣಿತ ವಿಷಯಗಳನ್ನು ಮನೋಜ್ಞವಾಗಿ ಕಲಿಸುತ್ತಿದ್ದರು. ಕಲಿಸಿದರೂ ನಾಲಿಗೆ ಹೊರಳದ, ದಡ್ಡ ಶಿಖಾಮಣಿಗಳಾಗಿದ್ದ ನಮಗೆ 4 ಉಪಾಯಗಳಲ್ಲಿ ಮೂರು ಫೇಲಾದಾಗ, ಕೊನೆಯ ಉಪಾಯ ‘ದಂಡಂ ದಶಗುಣ’ವನ್ನು ಪ್ರಯೋಗಿಸುತ್ತಿದ್ದರು. ಆಗ, ನಮ್ಮೂರಿನ ಹಳ್ಳಗಳಲ್ಲಿ ಬೇಸಿಗೆಯಲ್ಲೂ ನೀರು ಹರಿಯುವಷ್ಟು ಮಳೆಗಾಲ ಅನುಗ್ರಹಿಸಿರುತ್ತಿತ್ತು. ಹಾಗಾಗಿ ಮುದುಗಲ್ ಹಳ್ಳದಲ್ಲಿ ‘ಲೆಕ್ಕಿ ಬರ್ಲು’ ಹೇರಳವಾಗಿ ಬೆಳೆದಿರುತ್ತಿತ್ತು. ಸಪೂರವಾಗಿ ಪೊಳ್ಳಾಗಿರುತ್ತಿದ್ದ ಅವುಗಳನ್ನು ತರಿಸುತ್ತಿದ್ದರು. ಪಾಠ ಹೇಳಿದರೂ ಅದು ತಲೆಗೆ ಹೋಗದಿದ್ದ ಶಿಷ್ಯರಿಗೆ ಅಂಗೈ ಮುಂದೆ ಮಾಡಿಸಿ ಹೊಡೆದರೆ, ಒಂದೊಂದು ಏಟಿಗೆ ಆ ಬರ್ಲು/ಜರ್ಲು ನಾಲ್ಕಾರು ತುಂಡುಗಳಾಗುತ್ತಿದ್ದವು! ಆ ಹೊಡೆತಕ್ಕೆ ಥರ್ಡ್ ಡಿಗ್ರಿಯಲ್ಲಿ ಅರಚುವ ಕೈದಿಗಳಂತೆ ನಾವು ಅರಚುತ್ತಿದ್ದೆವು. ಒದೆ ತಿಂದ ಜಿರಲೆ ಒದ್ದಾಡುವಂತೆ ಕೈ-ಕಾಲು ಕುಣಿಸುತ್ತಿದ್ದೆವು.
ಕಣ್ಣೀರು, ಸಿಂಬಳ ಸುರಿಸುತ್ತಿದ್ದೆವು. ಕೈ ಕೆಂಪಗೆ ಕೆಂಡವಾದರೂ ಬಿಡುತ್ತಿರಲಿಲ್ಲ. ಅದು ಹಸಿರು/ನೀಲಿಗಟ್ಟಿದರೂ ಬಿಡುತ್ತಿರಲಿಲ್ಲ. ಜರ್ಲುಗಳ ಸ್ಟಾಕ್ ಖಾಲಿಯಾದರೆ, ಹತ್ತಿರದಲ್ಲಿದ್ದ ಹಾಳು ‘ಉಡೇವು’ದಲ್ಲಿರುತ್ತಿದ್ದ ‘ಗ್ವಾಂದ’ ಗಿಡದ ಬರಲುಗಳನ್ನು ತರಿಸುತ್ತಿದ್ದರು. ಅವೂ ಮುರಿದು ಪುಡಿ ಪುಡಿಯಾದರೆ, ಅವುಗಳಿಗಿಂತ ಬಿರುಸಾಗಿರುತ್ತಿದ್ದ ಕೈಗಳಿಂದ ಕಪಾಳ ಮೋಕ್ಷ ಮಾಡುತ್ತಿದ್ದರು. ಆ ಹೊಡೆತಕ್ಕೆ ಕಣ್ಣುಗಳಲ್ಲಿ ಬೆಂಕಿ ಹಚ್ಚಿದಂತಾಗುತ್ತಿತ್ತು. ಊರಿನವರು ಹೊಲದಲ್ಲಿ ಕೆಲಸ ಮಾಡಿ ಸಾಯಂಕಾಲಕ್ಕೆ ಹಿಂದಿರುಗುತ್ತಿದ್ದ ವೇಳೆ ಅವರು ನಮ್ಮನ್ನೆಲ್ಲ ಸಾಲಾಗಿ ಕೈ ಕಟ್ಟಿ ನಿಲ್ಲಿಸಿ ‘ಮಗ್ಗಿ’, ‘ಬಾಯಿ ಲೆಕ್ಕ’ಕ್ಕೆ ಮೀಸಲಾಗಿಸುತ್ತಿದ್ದರು.
ಮಗ್ಗಿ, ಬಾಯಿ ಲೆಕ್ಕ ಬಾರದೇ ಇದ್ದವರಿಗೆ, ಅವರ ಪಾಲಕರ ಸಮ್ಮುಖದಲ್ಲಿಯೇ ‘ದಂಡಂ’ ಪ್ರಯೋಗಿಸುತ್ತಿದ್ದರು. ತಂತಮ್ಮ ಮಕ್ಕಳ ಬೈಲಾಟ ನೋಡಿಯೂ ಯಾವೊಬ್ಬ ಪಾಲಕ ದೂರದೇ, ‘ಭೇಷಾಗಿ ಹೊಡಿರಿ’ ಎಂದು ಉತ್ತೇಜಿಸುತ್ತಿದ್ದರು. ಅಂತೂ, ಆ ಮಾಸ್ತರು ಹಾಕಿದ ಮಾರ್ಗದಲ್ಲಿ ಲೆಕ್ಕವನ್ನು ಬಿಟ್ಟು, ಉಳಿದೆಲ್ಲದರಲ್ಲಿ ನಾನು ಮುಂದೆ ಇದ್ದೆ. ಈಗಲೂ ನನ್ನ ಅಕ್ಷರಗಳು ದುಂಡಗೆ ಇರುವುದಕ್ಕೆ ನಮ್ಮ ವೀರಯ್ಯ ಮಾಸ್ತರರ ಕಠಿಣ ಪರಿಶ್ರಮದ ‘ಛಡಿ ಏಟು ಚಂಚಂ’ ಕಾರಣ.
⇒-ಶರಣಗೌಡ ಎರಡೆತ್ತಿನ ಚಿತ್ರದುರ್ಗ
***
ನಮ್ಮೂರಿನ ಬುಡ್ಡಯ್ಯನ ಸ್ಕೂಲಿನಲ್ಲಿ ನನ್ನ ಓದು ಆರಂಭವಾಯಿತು. ನಾನು ಮೊದಲನೇ ತರಗತಿಯಲ್ಲಿ ಇದ್ದಾಗಲೇ ಒಮ್ಮೆ ಶಾಲೆಗೆ ಚಕ್ಕರ್ ಹೊಡೆದಿದ್ದೆ. ಈ ವಿಷಯದಲ್ಲಿ ಆ ಅಲ್ಪ ಅವಧಿಯಲ್ಲೇ ತುಂಬ ಪರಿಣತನಾಗಿದ್ದ ನನ್ನ ಮನೆಯ ಹತ್ತಿರದ ಸಹಪಾಠಿ ಗೆಳೆಯ ಆ ಚಕ್ಕರಿನ ರೂವಾರಿಯಾಗಿದ್ದ. ಎಂದಿನಂತೆ, ಎಲ್ಲರಂತೆ ಮನೆಯಿಂದ ಶಾಲೆಗೆ ಹೊರಟ ನಾವಿಬ್ಬರೂ ಶಾಲೆ ಸಮೀಪದ ಒಂದು ಮನೆಯ ಪಡಸಾಲೆಯಲ್ಲಿ ಅವಿತು ಕುಳಿತಿದ್ದು, ಎಲ್ಲ ವಿದ್ಯಾರ್ಥಿಗಳೂ ಶಾಲೆಯ ಒಳಗೆ ಹೋಗಿ, ಬೀದಿ ನಿರ್ಜನವಾದ ಮೇಲೆ ಊರಿನ ಒಂದು ಬದಿಯಲ್ಲಿ ಇದ್ದ ಕೆರೆ ಬಳಿಗೆ ಹೋಗಿ, ಅಲ್ಲಿ-ಇಲ್ಲಿ ಯಾರದ್ದೋ ಮನೆಯ ಅಂಗಳದಲ್ಲಿ ಆಟವಾಡಿ, ಸಮಯ ಕಳೆದು, ಶಾಲೆ ಬಿಡುವ ವೇಳೆಗೆ ಸರಿಯಾಗಿ ಅವಿತಿದ್ದ ಪಡಸಾಲೆಗೇ ಬಂದು, ಶಾಲೆಯಿಂದ ಮನೆಗೆ ಹೊರಟ ವಿದ್ಯಾರ್ಥಿಗಳ ಜೊತೆ ಮನೆ ಸೇರಿ ಎಂದಿನಂತೆಯೇ ಉಳಿದುಬಿಟ್ಟೆವು.
ಹಿಂದಿನ ದಿನ ಚಕ್ಕರ್ ಹೊಡೆದು ರುಚಿ ಕಂಡಿದ್ದ ನಾನು ಮರುದಿನವೂ ಅವನ ಜೊತೆ ಸೇರಿ ಅದೇ ಯೋಜನೆಯಂತೆ ಅದೇ ಪಡಸಾಲೆಯಲ್ಲಿ ಅವಿತು ಕುಳಿತಿದ್ದೆವು. ವಿದ್ಯಾರ್ಥಿಗಳೆಲ್ಲ ಶಾಲೆ ಒಳಗೆ ಹೋಗಿ, ಬೀದಿ ನಿರ್ಜನವಾಗುವುದನ್ನು ಕಾಯುತ್ತಾ ಕುಳಿತಿದ್ದ ನಮ್ಮ ಬಳಿಗೆ ಸುಳಿವನ್ನೇ ಕೊಡದೆ ಬಂದ ನಮ್ಮ ಮನೆಯವರು ಇಬ್ಬರ ತಲೆಯ ಕೂದಲುಗಳನ್ನೂ ಬಲವಾಗಿ ಹಿಡಿದು ಶಾಲೆಗೆ ದುಶ್ಯಾಸನನ ಅವತಾರದಲ್ಲಿ ಎಳೆದುಕೊಂಡು ಹೋಗಿ, ಯಶೋದಾ ಮೇಡಂಗೆ ನಮ್ಮ ಕಳ್ಳತನವನ್ನು ತಿಳಿಸಿ, ನಮ್ಮನ್ನು ಒಪ್ಪಿಸಿ ಹೊರಟುಹೋದರು.
ಮೇಡಂ ಕಡ್ಡಿ ತೆಗೆದುಕೊಂಡು ನನಗೆ ತಾರಾಮಾರಾ ಹೊಡೆಯಲು ಶುರು ಮಾಡಿದರು. ಕುಣಿದಾಡುತ್ತಾ ತಪ್ಪಿಸಿಕೊಳ್ಳಲು ಹೆಣಗುತ್ತಿದ್ದ ನನ್ನನ್ನು ಅವರು ಬುದ್ಧಿ ಕಲಿಸುವ ಛಲದಲ್ಲಿ ತಮ್ಮ ಎರಡೂ ಕಾಲುಗಳ ನಡುವೆ ಸಿಕ್ಕಿಸಿಕೊಂಡು ಬಾರಿಸತೊಡಗಿದರು. ತಾಯಿಯಂತೆ ಇದ್ದ ಅವರ ಆ ಅವತಾರವನ್ನು, ನನ್ನ ನರ್ತನವನ್ನು ಬಾಗಿಲ ಬಳಿ ನಿಂತು ನೋಡುತ್ತಾ ಮುಂದಿನ ತನ್ನ ಸರದಿಯನ್ನು ಕಲ್ಪಿಸಿಕೊಂಡು ಒಳಗೊಳಗೇ ಚಡಪಡಿಸುತ್ತಿದ್ದ ನನ್ನ ಚಕ್ಕರ್ ಗೆಳೆಯ ಸಮಯ ಸಾಧಿಸಿ, ಹೊಂಚು ಹಾಕಿ ಚಂಗನೆ ಬಾಗಿಲಿನಿಂದ ಹಾರಿ ಓಡಿಬಿಟ್ಟ. ಅವನನ್ನು ಹಿಡಿದು ತರಲು ಆಟದಲ್ಲಿ, ಓಟದಲ್ಲಿ ಚುರುಕಾಗಿದ್ದ ನನ್ನ ಇಬ್ಬರು ಸಹಪಾಠಿಗಳಿಗೆ ಮೇಡಂ ಆದೇಶಿಸಿದರು.
ಬೇಟೆ ನಾಯಿಗಳ ಹಾಗೆ ಅವನನ್ನು ಅಟ್ಟಿಸಿಕೊಂಡು ಹೋದ ಅವರಿಗೆ ಅವನು ಸಿಗದೆ ಬರಿಗೈಯಲಿ ಮರಳಿದರು. ನಾನು ಮರುದಿನದಿಂದ ತಪ್ಪಿಸಿಕೊಳ್ಳದೆ ಶಾಲೆಗೆ ಹೋಗಲು ಪ್ರಾರಂಭಿಸಿದೆ.
-ಮಧುವನ ಶಂಕರ
***
ಪಾಠ ಕಲಿಸಿದ ದೊಣ್ಣೆ ಪೆಟ್ಟು
ನಮ್ದು ವಾನರ ಸೈನ್ಯ. ನಾವು ಚಿಕ್ಕವರಿದ್ದಾಗ ಶಾಲೆಯಲ್ಲಿ ಓದೋದಕ್ಕಿಂತ ಗಲಾಟೆ ಮಾಡಿದ್ದೆ ಜಾಸ್ತಿ ಆಗಿತ್ತು. ಒಂದೊಂದು ದಿನ ಹೋಮ್ ವರ್ಕ್ ಕೂಡ ಮಾಡದೆ ಒದೆ ತಿಂದಿದ್ದು ಉಂಟು. ಅದೇ ದ್ವೇಷಕ್ಕೆ ಅವರನ್ನು ಮಾಸ್ತರ್ ಸರಿ ಇಲ್ಲ ಎಂದು ಚಾಡಿ ಹೇಳ್ತಿದ್ವಿ. ಗುರುಗಳು ಪಾಠ ಹೇಳಿ ನಮ್ಮನ ಉದ್ಧಾರ ಮಾಡೋ ಶತ ಪ್ರಯತ್ನದಲ್ಲಿದ್ರು. ಆದರೆ ನಾವು ನಾಯಿ ಬಾಲ ಇದ್ದ ಹಾಗೆ.
ನನಗೆ ಹಿಂದಿ ಓದಲು ಬರುತ್ತಿರಲಿಲ್ಲ. ಹಿಂದಿ ಶಿಕ್ಷಕರಾದ ಹಾಲಪ್ಪ ಸರ್ ನಾಳೆ ಯಾವ ಪಾಠ ಓದಬೇಕು ಅಂತ ಹೇಳ್ತಾರೋ ಆ ಪಾಠವನ್ನು ನಾನು ಹಿಂದಿ ಶಬ್ದಗಳನ್ನು ಕನ್ನಡದಲ್ಲಿ ಬರೆದುಕೊಂಡು ಓದುತ್ತಿದ್ದೆ. ಅವರಿವರ ಕೈ ಕಾಲು ಬಿದ್ದು ಬರೆದುಕೊಂಡು ಮಾರನೇ ದಿನ ಶಾಲೆಗೆ ಹೋಗಿ ಪಠ್ಯ ಪುಸ್ತಕದಲ್ಲಿ ಕನ್ನಡದಲ್ಲಿ ಬರೆದ ಪೇಜ್ ಇಟ್ಟು ಓದಿ ಗುಡ್ ಅನ್ನಿಸಿಕೊಳ್ತಿದ್ದೆ.
ಆದರೆ ಇದು ಬಹಳ ದಿನಗಳವರೆಗೆ ನಡಿಯಲಿಲ್ಲ. ನಮಗಾಗದೆ ಇರುವ ಇನ್ನೊಂದು ಗುಂಪಿನವರು ಹೋಗಿ ಸರ್‌ಗೆ ಹೇಳಿಯೇಬಿಟ್ಟರು. ಅದನ್ನು ತಿಳಿದ ಅವರು ಕಾದು ಕೆಂಡಾಗಿ ಕ್ಲಾಸಿಗೆ ಬಂದು ಎಲ್ಲರಿಗೂ ಇದ್ದಕ್ಕಿದ್ದ ಹಾಗೇ ಹಿಂದಿ ಓದಿ ಎಂದು ಹೇಳಿದರು.
ನನಗಂತೂ ದಿಕ್ಕೇ ತೋಚಲಿಲ್ಲ. ಹಿಂದೆ ಮುಂದೆ ಇರೋರನ್ನೆಲ್ಲ ಕನ್ನಡ ಅಕ್ಷರಗಳಲ್ಲಿ ಬರೆದು ಕೊಡಿ ಎಂದು ಕೇಳ್ದೆ ಯಾರು ಹೇಳ್ಲಿಲ್ಲ. ಎದೆ ಬಡಿತ ಹೆಚ್ಚಾಯಿತು. ಮೂರ್ಛೆ ಹೋದ ಹಾಗೆ ನಾಟಕ ಮಾಡಬೇಕು ಅನ್ನುವಷ್ಟರಲ್ಲಿ ನನ್ನ ಸರದಿ ಬಂದೇ ಬಿಟ್ಟಿತು. ಯಾವಾಗಲೂ ಕನ್ನಡದಲ್ಲಿ ಬರೆದುಕೊಂಡು ಸರಾಗವಾಗಿ ಹಿಂದಿ ಓದೋ ನನಗೆ ಪೀಕಲಾಟ ಶುರುವಾಯಿತು.
ಸರ್ ಬಂದು ಓದು ಎಂದು ಸಿಂಹ ಘರ್ಜನೆ ಮಾಡಿದರು. ನಡುಕ ಶುರುವಾಯಿತು. ಸರ್ ಓದಕ್ಕೆ ಬರ್ತಿಲ್ಲ ಅಂದೆ. ನೀನು ಜಾಣೆ ನಿನಗ ಬರಲ್ಲ ಅಂದ್ರೆ ಹೇಗ್ ಪುಟ್ಟಾ ಓದು ಅಂದ್ರು. ನನ್ನ ತಪ್ಪಿನ ಅರಿವಾಯಿತು. ಅಳಲು ಶುರು ಮಾಡಿದೆ. ಅತ್ರೆ ಕೇಳೋರಾದ್ರೂ ಯಾರು? ಸರ್, ಮುಂದೆ ಕೈ ಮಾಡು ಎಂದು ನಾಲ್ಕೇಟು ಬಾರಿಸಿಯೇ ಬಿಟ್ಟರು. ನನಗೆ ಅವಮಾನವಾಯಿತು.
ಆ ಅವಮಾನದಿಂದ ನಾನು ಹಿಂದಿ ಓದಲು ಕಲಿಯಲೇಬೇಕು ಎಂದು ಪಣ ತೊಟ್ಟು ಕೆಲವೇ ತಿಂಗಳಲ್ಲಿ ಓದಲು ಕಲಿತು ಸರ್ ಕಡೆಯಿಂದ ಗುಡ್ ಅನಿಸಿಕೊಂಡಿದ್ದು ತುಂಬಾ ಖುಷಿಯಾಯಿತು. ಏನೇ ಆಗಲಿ ಆವತ್ತು ಅವರ ದೊಣ್ಣೆ ಪೆಟ್ಟಿನಿಂದ ಇವತ್ತು ಸರಾಗವಾಗಿ ಹಿಂದಿ ಮಾತಾಡಬಲ್ಲೆ, ಬರೆಯಬಲ್ಲೆ, ಓದಬಲ್ಲೆ.
–ಸುಧಾ. ಡಿ. ಪಾಟೀಲ ಬೆಳಗಾವಿ
***
ಟಿಯರ್ಸ್ ಎಂದರೆ ಏನು?
ನಾನು ಮಾಧ್ಯಮಿಕ ಶಾಲೆಯ 2ನೇ ವರ್ಷದಲ್ಲಿ ಕಲಿಯುತ್ತಿದ್ದಾಗ ಆಂಗ್ಲ ಭಾಷೆಯ ಆಯಾಯ ದಿನ ಮಾಡಿದ ಪಾಠದಲ್ಲಿ ಬರುವ ಕಷ್ಟ ಪದಗಳ ಸ್ಪೆಲ್ಲಿಂಗ್ ಮತ್ತು ಅರ್ಥವನ್ನು ಕಲಿತು ಮಾರನೆಯ ದಿನ ಕಲಿತದ್ದನ್ನು ಕಡ್ಡಾಯವಾಗಿ ಒಪ್ಪಿಸಬೇಕು ಎಂದು ಗುರುಗಳ ಕಟ್ಟಪ್ಪಣೆಯಿತ್ತು.
ಎಂದಿನಂತೆ ಆಂಗ್ಲಭಾಷೆ ಬೋಧಿಸುತ್ತಿದ್ದ ಗುರುಗಳು ಒಂದೊಂದು ಪದವನ್ನು ಒಬ್ಬರಾದ ಮೇಲೆ ಒಬ್ಬರಿಗೆ ಕೇಳುತ್ತಾ ಬಂದರು. ನನ್ನ ಸರದಿ ಬಂದಾಗ ಟಿಯರ‍್ಸ್ (TEARS) ಪದ ಬಂತು. ಅರ್ಥ ಹೇಳು ಎಂದರು. ನಾನು ಕಲಿತಿರಲಿಲ್ಲ. ಸುಮ್ಮನೆ ನಿಂತುಕೊಂಡೆ. ಹೇಳು ಎಂದು ಗದರಿಸಿದರು, ಗೊತ್ತಿಲ್ಲ ಎಂದೆ. ಈಚೆ ಬಾ ಎಂದರು. ಮೇಜಿನ ಬಳಿ ಹೋಗಿ ನಿಂತೆ. ಕತ್ತೆಬಡವ ಓದೋಕೆ ಬರ್ತಿಯೋ ಕತ್ತೆಕಾಯೋಕೆ ಬರ‍್ತಿಯೋ, ಹಿಡಿಕೈ ಎಂದರು. ಎರಡೂ ಕೈಯನ್ನೂ ಚಾಚಿದೆ ಬೆತ್ತದಿಂದ ಎರಡೂ ಕೈಗಳಿಗೆ ಬಲವಾಗಿ ಎರಡೆರಡು ಹೊಡೆತ ಕೊಟ್ಟರು. ನೋವನ್ನು ತಾಳಲಾರದೆ ಎರಡೂ ಕೈಯನ್ನು ಬಗಲಲ್ಲಿ ಅವುಚಿಕೊಂಡೆ.
ಅರ್ಥ ಹೇಳು ಎಂದು ಕೋಪದಿಂದ ಗದರಿಸಿದರು. ಗೊತ್ತಿಲ್ಲ ಎಂದೆ. ಚಾಚು ಕೈ ಎಂದರು. ಕೈ ಚಾಚಿ ನಿಂತೆ. ಬೆತ್ತವನ್ನು ಎತ್ತಿ ಬಲವಾಗಿ ಹೊಡೆಯುವಾಗ ಚಾಚಿದ ಕೈಯನ್ನು ಸರಕ್ಕನೆ ಹಿಂದಕ್ಕೆ ಎಳೆದುಕೊಂಡೆ.
ಆ ಬೆತ್ತದ ಏಟು ಅವರ ಕಾಲಿಗೆ ಬಿತ್ತು. ಅವರಿಗೆ ಬ್ರಹ್ಮಾಂಡ ಕೋಪ ಬಂದು ನನ್ನ ಬೆನ್ನಿಗೆ, ಕಾಲಿಗೆ, ತೋಳಿಗೆ ಹಿಗ್ಗಾಮುಗ್ಗ ದನಕ್ಕೆ ಹೊಡೆದ ಹಾಗೆ ಹೊಡೆದರು. ಅಸಾಧ್ಯ ನೋವು, ಕಣ್ಣೀರು ಕೆನ್ನೆಯ ಮೇಲೆ ಬಳ ಬಳ ಸುರಿಯುತ್ತಿತ್ತು. ಕೆನ್ನೆಯ ಮೇಲೆ ಹರಿಯುತ್ತಿದ್ದ ಕಣ್ಣೀರನ್ನು ಬೆತ್ತದ ತುದಿಯಿಂದ ಸವರಿ ಇದೇನು ಎಂದರು. ಅರ್ಥವಾಗದೆ ಸುಮ್ಮನೆ ಅಳುತ್ತಾ ನಿಂತೆ. ಮತ್ತೆ ಬೆತ್ತದ ತುದಿಯಿಂದ ಕಣ್ಣೀರನ್ನು ಸವರಿ, ಕಣ್ಣಿನಿಂದ ಬರ‍್ತಾ ಇದೆಯಲ್ಲ ಇದೇನು ಎಂದರು, ಕಣ್ಣೀರು ಎಂದೆ. ಈಗ ಹೇಳು ಟಿಯರ‍್ಸ್ ಅಂದರೆ ಏನು? ಗೊತ್ತಿಲ್ಲ ಸಾರ್ ಎಂದೆ.
ಮತ್ತೆ ಬೆನ್ನಿಗೆ ಬೆತ್ತದಿಂದ ಏಟು ಕೊಟ್ಟರು, ಕಣ್ಣೀರು ಧಾರಾಕಾರವಾಗಿ ಸುರಿಯುತ್ತಿತ್ತು. ಭಯ, ನೋವಿನಿಂದಾಗಿ ಕಕ್ಕಾಬಿಕ್ಕಿಯಾಗಿದ್ದೆ. ಪುನಃ ಪುನಃ ಬೆತ್ತದ ತುದಿಯಿಂದ ಕಣ್ಣೀರನ್ನು ಸವರುತ್ತಾ ಟಿಯರ‍್ಸ್ ಅಂದ್ರೆ ನಿನ್ನ ಕಣ್ಣಿಂದ ಬರ‍್ತಾ ಇದೆಯೆಲ್ಲಾ ಕಣ್ಣೀರು ಅದೇ ಎಂದು ಮತ್ತೆ ಎರಡು ಏಟು ಬಿಗಿದರು. ಟಿಯರ‍್ಸ್ ಅಂದರೆ ಕಣ್ಣೀರು ಎಂದು ಗೊತ್ತಾಗುವಷ್ಟರಲ್ಲಿ ನನ್ನ ಅಂಗಿ ಕಣ್ಣೀರಿನಿಂದ ಒದ್ದೆಯಾಗಿತ್ತು. ಅಂದು ಇಡೀ ದಿನ ಮಂಕಾಗಿದ್ದೆ ಶಾಲೆಯಿಂದ ಆರು ಕಿಲೋಮೀಟರ್ ನಡೆದುಕೊಂಡು ಹೋಗಿ ಮನೆಯಲ್ಲಿ ಯಾರಿಗೂ ಹೇಳದೆ ಊಟದ ಶಾಸ್ತ್ರ ಮುಗಿಸಿ ಮಲಗಿದೆ. ಶಾಲೆಯಲ್ಲಿ ನಡೆದ ಘಟನೆಯಿಂದ ನಿದ್ರೆ ಬರಲಿಲ್ಲ. ಬೆತ್ತದ ಏಟುಗಳನ್ನು ತಪ್ಪಿಸಿಕೊಳ್ಳಬೇಕೆಂದು ನಿರ್ಧರಿಸಿದೆ. ಆ ದಿನದ ನಂತರ ಶಾಲೆ ಬಿಡುವ ತನಕ (ಅಂದರೆ 3 ವರ್ಷ) ಒಂದೂ ಏಟನ್ನು ತಿನ್ನಲಿಲ್ಲ. ಎಲ್ಲಾ ಪಾಠಗಳನ್ನು ಚೆನ್ನಾಗಿ ಕಲಿಯಲು ಪ್ರಾರಂಭಿಸಿದೆ.
ಮಾಧ್ಯಮಿಕ ಶಾಲೆಯ 4ನೇ ವರ್ಷದ ಜಿಲ್ಲಾ ಮಟ್ಟದ ಪಬ್ಲಿಕ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಮೆರಿಟ್ ವಿದ್ಯಾರ್ಥಿವೇತನ ಪಡೆದೆ. ವಿದ್ಯಾಭ್ಯಾಸವನ್ನು ಮುಂದುವರಿಸಿ ಸ್ನಾತಕೋತ್ತರ ಪದವಿ ಪಡೆದೆ.
ಹೀಗೆ ಉನ್ನತ ಶಿಕ್ಷಣ ಪಡೆದು ಪ್ರಬುದ್ಧ ಬದುಕನ್ನು ಕಂಡುಕೊಳ್ಳಲು ಕಾರಣರಾದವರು ‘ಟಿಯರ್ಸ್’ ಪದದ ಅರ್ಥವನ್ನು ಬೆತ್ತದ ಛಡಿ ಏಟಿನ ಮೂಲಕ ತಿಳಿಸಿ ನನ್ನ ಬದುಕಿನ ಭಾಷ್ಯ ಬರೆದವರು ಶಿಸ್ತಿನ ಸಿಪಾಯಿ ನನ್ನ ಗುರು.
–ಕರಗುಂದ ರಾಮಣ್ಣ ಚಿಕ್ಕಮಗಳೂರು
***
ನನ್ನೂರು ಒಂದು ಹಳ್ಳಿ. ಚಿಕ್ಕಾಲಗಟ್ಟ ಎಂದು (ಚಿತ್ರದುರ್ಗ ಜಿಲ್ಲೆ). ನಾನು ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಮುಗಿಸಿದ್ದು. ಆಗ ನಮಗೆ ಶಾಲಾ ಕಟ್ಟಡ ಇಲ್ಲದ ಕಾರಣ ಊರ ದೇವಸ್ಥಾನದಲ್ಲಿ ಮೇಷ್ಟ್ರು ಪಾಠ ಹೇಳಿಕೊಡುತ್ತಿದ್ದರು. ಆಗೆಲ್ಲಾ ಎಲ್ಲರಿಗೂ ಒಬ್ಬರೇ ಶಿಕ್ಷಕರಿರುತ್ತಿದ್ದರು. ನಮ್ಮೂರಲ್ಲಿಯೂ ನಮಗೆಲ್ಲಾ ಒಬ್ಬರೇ ಗುರುಗಳಿದ್ದರು. ಬುಕ್ಕಪ್ಪ ಎಂಬುದು ಅವರ ನಾಮಧೇಯ. ಆ ಹೆಸರಿನ ಮುಂದೆ ಮೇಷ್ಟ್ರು ಎಂಬ ವಿಶೇಷಣ ಸೇರಿಕೊಂಡು `ಬುಕ್ಕಪ್ಪ ಮೇಷ್ಟ್ರು` ಎಂದೇ ಊರಲ್ಲಿ ಪ್ರಸಿದ್ಧರು. ಶಿಸ್ತಿನ ಗುರುಗಳವರು. ದೇವಸ್ಥಾನದ ಒಳಗಡೆ ಒಂದು ಕಂಬಕ್ಕೆ ಬೋರ್ಡನ್ನು ನಿಲ್ಲಿಸಿಕೊಂಡು ಅದರ ಮೇಲೆ ವರ್ಣಮಾಲೆ, ಕಾಗುಣಿತ, ಮಗ್ಗಿಯನ್ನು ಬರೆದು ನಮಗೆ ಹೇಳಿಕೊಡುತ್ತಿದ್ದ ಅವರ ಶೈಲಿ ನನ್ನ ಮನದಲ್ಲಿ ಇನ್ನೂ ಅಚ್ಚಯಳಿಯದೇ ಇದೆ.
ನನಗಾಗ ಶಾಲೆಗೆ ಹೋಗುವುದೆಂದರೆ ಧರ್ಮಸಂಕಟ. ಯಾರಪ್ಪ ಈ ಶಾಲೆ ಎಂಬ ಜೈಲನ್ನು ಮಾಡಿದ್ದು ಎಂದು ಬೈದುಕೊಳ್ಳುತ್ತಿದ್ದೆ. ನಾನು ಎಷ್ಟೇ ಹಠ ಮಾಡಿದರೂ, ಅತ್ತರೂ, ಚೀರಿದರೂ ಯಾವುದಕ್ಕೂ ಜಗ್ಗದ ನನ್ನಮ್ಮ ನನ್ನನ್ನು ಎಳೆದುಕೊಂಡು ಹೋಗಿ ಶಾಲೆಗೆ ಬಿಟ್ಟು ಬರುತ್ತಿದ್ದಳು. ದಾರಿಯಲ್ಲೆಲ್ಲಾ ಹಾರಾಡಿ, ಚೀರಾಡಿ ಜನ ನೋಡುವ ಹಾಗೆ ಮಾಡಿದರೂ ಪ್ರಯೋಜನವಾಗುತ್ತಿರಲಿಲ್ಲ. ಅಷ್ಟೆಲ್ಲಾ ಗಲಾಟೆ ಮಾಡಿ ದೇವಸ್ಥಾನ(ಶಾಲೆ) ಬಂದಾಕ್ಷಣ ಗಪ್‌ಚಿಪ್. ಏಕೆಂದರೆ ಮೇಷ್ಟ್ರು ಹೊಡೆತ ಅಂದರೆ ಅದು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಅಷ್ಟು ರುಚಿಯಾದ ಸವಿಯಾದ ಬಿಸಿ ಬಿಸಿ ಹೊಡೆತ. ಶಾಲೆಗೆ ಬರಲು ಅತ್ತಿದ್ದಕ್ಕೆ ಹೊಡೆತ, ತಡವಾಗಿ ಬಂದಿದ್ದಕ್ಕೆ ಹೊಡೆತ, ಅವರು ಹೇಳಿದ್ದನ್ನು ಕಲಿಯದೇ ಬಂದದ್ದಕ್ಕೆ ಹೊಡೆತ. ಕಿವಿ ಹಿಂಡಿಸಿಕೊಳ್ಳಬೇಕು, ಜೊತೆಗೆ ಕೈಯನ್ನು ಕಾಲೊಳಗಿನಿಂದ ತಂದು ಬಗ್ಗಿ ಕಿವಿಯನ್ನು ಹಿಡಿದುಕೊಳ್ಳಬೇಕು. ಆಗ ಹೊಟ್ಟೆಯಲ್ಲಿನ ಕರುಗಳು ಬಾಯಿಗೇ ಬಂದಂತಾಗುತ್ತಿತ್ತು. ಏನು ಬಾಯಿಗೆ ಬಂದರೂ ಮೌನವೇ ಗತಿ. ಎಲ್ಲದಕ್ಕೂ ಮೀರಿದ ಶಿಕ್ಷೆ ಎಂದರೆ ಎರಡೂ ಕೈ ಬೆರಳುಗಳನ್ನು ಜೋಡಿಸಿ ಮಡಿಚಿ ತಿರುಗಿಸಿ ಹಿಡಿಯಬೇಕು.
ಅದರ ಮೇಲೆ ಗುರುಗಳು ಬೆತ್ತದಿಂದ ಹೊಡೆದರೆ ಆ ಆನಂದ ಹೇಳಲಸಾಧ್ಯ, ವರ್ಣಿಸಲಸದಳ!
ಇಷ್ಟೆಲ್ಲಾ ಮುಗಿಸಿ ಮನೆಗೆ ಹೋಗಿ ಅಲ್ಲಿಯೇನಾದರೂ ತರಲೆ ಮಾಡಿದರೆ `ತಾಳು ಬುಕ್ಕಪ್ಪ ಮೇಷ್ಟ್ರಿಗೆ ಹೇಳುತಿನಿ` ಎನ್ನುವ ಬೆದರಿಕೆ. ಆಗ ಆ ಗುರುಗಳ ಮೇಲೆ ಕೆಂಡಕಾರುವಂತಹ ಕೋಪ ಬರುತ್ತಿತ್ತು. ಆದರೆ ಈಗ ಅವರು ನನ್ನ ಮನದಲ್ಲಿ ಪ್ರತಿದಿನ ದಿನ ನೆನೆಯುವ ದೇವರಾಗಿದ್ದಾರೆ. ನಾನು ಓದನ್ನು ಮುಂದವರಿಸಿ ಅವರ ತರುವಾಯ ಎಷ್ಟೊಂದು ಗುರುಗಳನ್ನು ಕಂಡರೂ ಅವರಷ್ಟು ನನ್ನ ಮನದಲ್ಲಿ ಉಳಿದದವರು ಯಾರೂ ಇಲ್ಲ. ಕಡಕ್ ಶಿಸ್ತಿನ ಸಿಪಾಯಿ ಎಂದೇ ಹೆಸರಾಗಿದ್ದ ನನ್ನ ಗುರುಗಳನ್ನು ತದ ನಂತರದ ದಿನಗಳಲ್ಲಿ ನೋಡಿದ್ದೇ ಕಡಿಮೆ.
ಅವರು `ಹೋದರು` ಎನ್ನುವ ಮಾತು ಕಿವಿಗೆ ಬಿದ್ದಾಕ್ಷಣ ನನಗೇ ಅರಿವಿಲ್ಲದಂತೆ ಕಣ್ಣಲ್ಲಿ ನೀರು. ಇಂದಿಗೂ ಆ ದೇವಸ್ಥಾನ, ನನ್ನ ಗುರುಗಳು, ಆ ಪಾಠ, ಆ ಶಿಕ್ಷೆ ಎಲ್ಲವೂ ನನ್ನ ಮನದಲ್ಲಿ ಹಚ್ಚಹಸಿರಾಗಿಯೇ ಇವೆ.
–ಪ್ರೇಮಪಲ್ಲವಿ ಸಿ.ಬಿ. ಚಿತ್ರದುರ್ಗ
***
ಸ್ಲೇಟಿನ ಫ್ರೇಮು ಹಾರವಾದಾಗ...
ನಾನೊಬ್ಬ ಎಂಬತ್ತರ ದಶಕದಾಂತ್ಯದ ಸರ್ಕಾರಿ ಶಾಲಾ ನರ್ಸರಿ ವಿದ್ಯಾರ್ಥಿ. ನರ್ಸರಿಯ ಅರ್ಥವೇ ಗೊತ್ತಿಲ್ಲದ ನನ್ನನ್ನು ಹೊಟೇಲ್ ಸಪ್ಲೈಯರ್ ಆದ ನಮ್ಮ ತಂದೆಯವರು ತಮ್ಮ ಹೆಮ್ಮೆಯ ಅಟ್ಲಾಸ್ ಸೈಕಲ್ಲಿನಲ್ಲಿ ಕರೆದೊಯ್ಯುತ್ತಿದ್ದರು.
ನನ್ನ ಜೀವನದ ಮೊದಲ ಟೀಚರ್ ಡಿಸೋಜ ಮಿಸ್ ಅದೊಂದು ದಿನ ‘ಅ ಆ’ ಸ್ವರಾಕ್ಷರಗಳನ್ನು ಬರೆಯುವುದನ್ನು ಕಲಿಸುವುದಕ್ಕಾಗಿ ನನ್ನ ಸ್ಲೇಟಿನಲ್ಲಿ ಬರೆದು ಅದರ ಮೇಲೆಯೇ ತಿದ್ದಲು ತಿಳಿಸಿದರು. ತಾವು ಕೂತಿದ್ದ ಹಸಿರು ಬಣ್ಣದ ತಗಡಿನ ಚೇರಿನ ಬಲ ಭಾಗದಲ್ಲೇ ನನ್ನನ್ನು ಕೂರಲು ಹೇಳಿದರು.
ಮಿಸ್ ಅವರ ಆದೇಶವೋ ಅಥವಾ ಶಾಲೆಯೆಂಬ ಭಯದಲ್ಲೋ ಆ ಎರಡೂ ಅಕ್ಷರಗಳ ಮೇಲೆ ತಿದ್ದಲು ಪ್ರಾರಂಭಿಸಿದೆ. ನಾಲ್ಕೈದು ಸಲ ತಿದ್ದಿದರೂ ಸರಿಯಾಗಿ ಬರದ ಕಾರಣ ಮತ್ತೊಮ್ಮೆ ಮಗದೊಮ್ಮೆ ಬರೆಯಲು ಕಲಿಯಬೇಕೆಂದು ಮಿಸ್ ತುಸು ಕೋಪದಿಂದಲೇ ಗದರಿಸಿದರು. ನಂತರ ನಾನು ಸ್ವಲ್ಪ ಹೆಚ್ಚಿನ ಸಮಯವನ್ನು ತೆಗೆದುಕೊಂಡು ಸ್ಲೇಟನ್ನು ಮಿಸ್ ಕೈಗಿತ್ತೆ. ಆದರೆ ಅದರಲ್ಲಿ ಅ ಸ್ವರವಾಗಲೀ ಆ ಆಗಲೀ ಗುರುತಿಸದ ಮಟ್ಟಿಗೆ ಮಿಶ್ರವಾಗಿದ್ದರಿಂದ ಮಿಸ್‌ಗೆ ಕೋಪ ನೆತ್ತಿಗೇರಿ ಅದೇ ಸ್ಲೇಟಿನಲ್ಲೇ ನನ್ನ ತಲೆಗೆ ಹೊಡೆದಾಗ ಆ ಸ್ಲೇಟಿನ ಫ್ರೇಮು ನನ್ನ ಕೊರಳ ಸರವಾಗಿ ಉಳಿದ ಸ್ಲೇಟಿನ ಭಾಗ ನನ್ನ ಟೋಪಿಯಾದದ್ದು ನೆನಪಿಸಿಕೊಂಡರೆ ಈಗಲೂ ಆ ಏಟಿನ ಸದ್ದು ನೆನಪಗಾಗುತ್ತದೆ.
ಆ ಏಟಿನಿಂದಲೇ ನಾನು ಈ ಬರಹ ಬರೆಯುವವನಾಗಿದ್ದು ನಮ್ಮ ಮಿಸ್ ಅವರನ್ನು ಸದಾ ನೆನೆಯಲೇಬೇಕು.
–ಫಯಾಜ್ ವಿ. ಮೈಸೂರು
***
ಫಲಿಸದ ಎಣ್ಣೆಯ ಉಪಾಯ
ನಾನು ಚಿಕ್ಕಮಗಳೂರಿನ ಶಾಲೆಯೊಂದರಲ್ಲಿ ಓದುತ್ತಿದ್ದ ಸಮಯ. ಓದಿನಲ್ಲಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಮುಂದಿರುತ್ತಿದ್ದ ನಾನು, ಶಾಲೆಯ ಎಲ್ಲಾ ಅಧ್ಯಾಪಕರಿಗೂ ಅಚ್ಚುಮೆಚ್ಚಿನ ವಿದ್ಯಾರ್ಥಿನಿಯಾಗಿದ್ದೆ. ಯಾವ ಉಪಾಧ್ಯಾಯರು ನನ್ನನ್ನು ಬೈಯುತ್ತಿರಲಿಲ್ಲ.
ಆದರೆ, ಸದಾ ಕೋಪದಲ್ಲಿರುತ್ತಿದ್ದ, ಮುಖ್ಯೋಪಾಧ್ಯಾಯ ಶಂಕರಯ್ಯ ಮಾಸ್ತರರೆಂದರೆ ಮಾತ್ರ ಭಯ. ಅವರಿಗಿಂತಲೂ ಅವರ ಕೈಯಲ್ಲಿದ್ದ ಬೆತ್ತವನ್ನು ಕಂಡರಂತೂ ವಿದ್ಯಾರ್ಥಿಗಳೆಲ್ಲಾ ಹೆದರುತ್ತಿದ್ದರು. ಅವರು ಹೊಡೆಯುವ ಶೈಲಿಯೇ ವಿಚಿತ್ರವಾಗಿರುತ್ತಿತ್ತು! ಬೆತ್ತವನ್ನು ತಿರುಗಿಸುತ್ತಾ, ನಮ್ಮ ಹತ್ತಿರ ಬಂದು, ನಮ್ಮ ಕೈಯನ್ನು ಹಿಡಿದುಕೊಂಡು, ಅಂಗೈಯನ್ನು ಬಿಡಿಸಿ, ‘ಯಾಕಮ್ಮಾ, ಪಾಠ ಕೇಳಿಸಿಕೊಳ್ಳಲಿಲ್ಲವಾ?’, ‘ಹೋಂವರ್ಕ್ ಮಾಡಿಲ್ವಾ?’ ಎನ್ನುತ್ತಲೇ, ಅದು ಯಾವ ಮಾಯದಲ್ಲಿ ಹೊಡೆಯುತ್ತಿದ್ದರೋ, ಗೊತ್ತಾಗುತ್ತಲೇ ಇರಲಿಲ್ಲ! ಆ ಬೆತ್ತ ಕೈಮೇಲೆ ಬಂದು ಬಿದ್ದಾಗಲೇ ನಮಗೆ ಏಟಿನ ಅರಿವಾಗುತ್ತಿದ್ದುದು. ಅಬ್ಬಾ! ಬಾಸುಂಡೆ ಬಂದ ಕೈಯನ್ನು ಹಿಡಿದುಕೊಂಡು ಅಳುತ್ತಾ ಕೂತು ಬಿಡುತ್ತಿದ್ದೆವು.
ಒಮ್ಮೆ, ನನಗೂ ಇದರ ಅನುಭವ ಆಯಿತು. ಅವರು ವಿಜ್ಞಾನ ಪಾಠ ಮಾಡುತ್ತಾ, ಹೋಂವರ್ಕ್ ಪರಿಶೀಲಿಸುತ್ತಿದ್ದರು, ನನ್ನ ದುರಾದೃಷ್ಟಕ್ಕೆ ಆ ದಿನ ನಾನು ಹೋಂವರ್ಕ್ ಪುಸ್ತಕವನ್ನು ಮನೆಯಲ್ಲೇ ಮರೆತು ಬಂದಿದ್ದೆ. ಮುಂದಿನ ಬೆಂಚಿನಿಂದ ನೋಟ್ಸ್ ಪರಿಶೀಲಿಸುತ್ತಾ, ಹೋಂವರ್ಕ್ ಬರೆಯದ ವಿದ್ಯಾರ್ಥಿಗಳಿಗೆ ಬೆತ್ತದ ರುಚಿಯನ್ನು ತೋರಿಸುತ್ತಿದ್ದ ಮೇಷ್ಟ್ರನ್ನು ಕಂಡು, ನನಗೆ ಅಳುವೇ ಬಂದಿತ್ತು. ನನ್ನ ಪಕ್ಕದಲ್ಲಿ ಕುಳಿತಿದ್ದ ನನ್ನ ಸ್ನೇಹಿತೆ, ‘ಅದಕ್ಯಾಕೆ ಅಳ್ತೀಯಾ? ಕೈಗೆ ಎಣ್ಣೆ ಹಚ್ಕೊ. ಆಗ ಏಟು ತಾಗಲ್ಲ, ಕೈ ಉರಿಯಲ್ಲ’ ಎಂದು ಸಲಹೆ ನೀಡಿದಳು. ‘ಸರಿ’ ಎಂದು ನನ್ನ ತಲೆಯಲ್ಲಿರುವ ಎಣ್ಣೆಯನ್ನಲ್ಲದೇ, ಅಕ್ಕಪಕ್ಕದಲ್ಲಿರುವ ನನ್ನ ಸ್ನೇಹಿತೆಯರ ತಲೆಯಲ್ಲಿದ್ದ ಎಣ್ಣೆಯನ್ನೂ ಕೈಗೆ ಉಜ್ಜಿಕೊಂಡೆ. ನನ್ನ ಸರದಿ ಬಂತು. ಬುಕ್ ತಂದಿಲ್ಲ ಎನ್ನುವಂತೆ, ಕೈಮುಂದೆ ಮಾಡಿದೆ. ನನ್ನ ಕೈ ಹಿಡಿದುಕೊಂಡು ನಾಲ್ಕೈದು ಏಟು ಹೊಡೆದರು. ಕೈತುಂಬಾ ಬಾಸುಂಡೆಗಳು. ಆ ನೋವು ನೆನೆಸಿಕೊಂಡರೆ ಈಗಲೂ ಮೈ ಜುಮ್ ಎನ್ನುತ್ತದೆ. ನನ್ನ ಸ್ನೇಹಿತೆ ಹೇಳಿದ ‘ಎಣ್ಣೆಯ ಉಪಾಯ’ ಯಾವುದೇ ಕೆಲಸ ಮಾಡಿರಲಿಲ್ಲ.
ಅಂದು, ನಮಗೆ ಉಪಾಧ್ಯಾಯರು ನೀಡುತ್ತಿದ್ದ ಶಿಕ್ಷೆಯ ಬಗ್ಗೆ ಏನೂ ಅನ್ನಿಸುತ್ತಿರಲಿಲ್ಲ. ‘ನಾವು ತಪ್ಪು ಮಾಡಿದ್ದೇವೆ ಅದಕ್ಕೆ ಅವರು ಶಿಕ್ಷೆ ಕೊಡುತ್ತಾರೆ’ ಎನ್ನುವುದಷ್ಟೇ ನಮ್ಮ ಮನದಲ್ಲಿದ್ದದ್ದು. ಆದರೆ, ಅಂತಹ ಶಿಕ್ಷೆಗಳಿಂದ ನಾವು ವಿದ್ಯೆಯನ್ನು ಚೆನ್ನಾಗಿ ಕಲಿಯುತ್ತಿದ್ದೆವು. ಕಲಿತ ವಿದ್ಯೆಯನ್ನು ಚಾಚೂ ತಪ್ಪದೇ ಒಪ್ಪಿಸಿದ್ದಲ್ಲಿ, ಉಪಾಧ್ಯಾಯರಿಂದ ಸಿಗುತ್ತಿದ್ದ ‘ಬಹುಮಾನ’ದಿಂದ ಅವರು ಕೊಟ್ಟ ಶಿಕ್ಷೆಯೆಲ್ಲಾ ಮರೆತು, ನಮಗೆ ಅವರ ಮೇಲೆ ಗೌರವ ಮೂಡುತ್ತಿತ್ತು. ಇನ್ನೂ ಚೆನ್ನಾಗಿ ಕಲಿಯಬೇಕೆನ್ನುವ ಛಲ ಮೂಡುತ್ತಿತ್ತು.
ಅಂದು ಅವರು ಕಲಿಸಿದ ಕಟ್ಟುನಿಟ್ಟಿನ ವಿದ್ಯೆಯಿಂದ ಇಂದಿಗೂ ವ್ಯಾಕರಣ, ಒತ್ತಕ್ಷರ, ಕೆಲವು ಪಠ್ಯಗಳು, ಪದ್ಯಗಳು, ವಾಕ್ಯರಚನೆ... ಎಲ್ಲವೂ ನನ್ನ ಮನಃಪಟಲದಲ್ಲಿ ಅಚ್ಚಳಿಯದೇ ಉಳಿದಿದೆ. ಅದರಿಂದ ಲೇಖನ, ಕಥೆ, ಕಾದಂಬರಿ, ಕವನಗಳನ್ನು ಬರೆಯಲು ಸಾಧ್ಯವಾಗಿದೆ.
ಮನೆಯಲ್ಲಿ ಒಂದೆರಡು ಮಕ್ಕಳನ್ನು ನೋಡಿಕೊಳ್ಳುವುದೇ ಕಷ್ಟ ಎನ್ನುವಾಗ, ಶಾಲೆಯಲ್ಲಿ ನೂರಾರು ಮಕ್ಕಳಿಗೆ ವಿದ್ಯೆ ಕಲಿಸಿ, ಅವರ ತುಂಟತನಗಳಿಗೆಲ್ಲಾ ಕಡಿವಾಣ ಹಾಕಿ, ಒಬ್ಬ ನಿಷ್ಠಾವಂತ ವಿದ್ಯಾರ್ಥಿಯನ್ನಾಗಿ ಮಾಡಿ, ಸಮಾಜದಲ್ಲಿ ಆತನಿಗೂ ಒಂದು ಸ್ಥಾನಮಾನ ಸಿಗುವಂತೆ ಮಾಡುವವರೇ ಶಿಕ್ಷಕರು ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ.
–ಶರ್ಮಿಳಾ ರಮೇಶ್, ಸೋಮವಾರಪೇಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.